Tag: ಭಾರತ

  • 13 ವರ್ಷದ ಹಿಂದೆ ಸೆಹ್ವಾಗ್ ಮುಲ್ತಾನ್ ಸುಲ್ತಾನ್ ಆದ ಕಥೆ ಓದಿ

    13 ವರ್ಷದ ಹಿಂದೆ ಸೆಹ್ವಾಗ್ ಮುಲ್ತಾನ್ ಸುಲ್ತಾನ್ ಆದ ಕಥೆ ಓದಿ

    ಬೆಂಗಳೂರು:  13 ವರ್ಷಗಳ ಹಿಂದೆ ಈ ಅವಧಿಯಲ್ಲಿ ಭಾರತದ ಟೆಸ್ಟ್ ಕ್ರಿಕೆಟ್‍ನಲ್ಲಿ ಯಾರು ನಿರ್ಮಿಸದ ಹೊಸ ದಾಖಲೆಯನ್ನು ಸೆಹ್ವಾಗ್ ಬರೆದಿದ್ದರು. ಮೊದಲ ಬಾರಿಗೆ ಕ್ರಿಕೆಟ್‍ನಲ್ಲಿ ಬದ್ಧ ವೈರಿ ಎಂದೇ ಪರಿಗಣಿಸಲಾಗಿರುವ ಪಾಕ್ ವಿರುದ್ಧ ತ್ರಿಶತಕ ಸಿಡಿಸಿ ಮುಲ್ತಾನಿನ ಸುಲ್ತಾನ ಎಂಬ ಗೌರವಕ್ಕೆ ವೀರೂ ಪಾತ್ರರಾಗಿದ್ದರು.

    ಮೊದಲ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಪಾಕಿನ ಬೌಲರ್‍ಗಳನ್ನು ಬೆವರಿಳಿಸಿಬಿಟ್ಟಿದ್ದರು ಸೆಹ್ವಾಗ್. 531 ನಿಮಿಷಗಳ ಕಾಲ ಕ್ರಿಸ್‍ನಲ್ಲಿ ಸೆಹ್ವಾಗ್ ಎದುರಿಸಿದ್ದು 375 ಎಸೆತ. ಬಾರಿಸಿದ್ದು 39 ಬೌಂಡರಿ, 6 ಸಿಕ್ಸರ್, ಒಟ್ಟು ಹೊಡೆದದ್ದು 309 ರನ್.

    ಟಾಸ್ ಗೆದ್ದ ದ್ರಾವಿಡ್ ಬ್ಯಾಟಿಂಗ್ ಆರಿಸಿಕೊಂಡರು. ಬ್ಯಾಟಿಂಗ್ ಆರಂಭಿಸಿದ ಸೆಹ್ವಾಗ್ ಆರಂಭದಲ್ಲಿ ನಿಧನವಾಗಿ ಆಡಲು ಆರಂಭಿಸಿ ನಂತರ ಎಂದಿನ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಲು ಆರಂಭಿಸಿದರು. ಪರಿಣಾಮ ಮೊದಲ ವಿಕೆಟ್‍ಗೆ ಅಕಾಶ್ ಚೋಪ್ರಾ ಜೊತೆಗೂಡಿ 39.4 ಓವರ್‍ಗಳಲ್ಲಿ 160 ರನ್ ಬಂತು.

    ನಂತರ ಬಂದ ದ್ರಾವಿಡ್ 6ರನ್ ಗಳಿಸಿ ಬೇಗನೇ ಔಟಾದರೂ ಸಚಿನ್ ಬಂದ ಮೇಲೆ ಇಬ್ಬರ ಜುಗಲ್‍ಬಂದಿ ಜೋರಾಯಿತು. ಪಾಕ್ ಬೌಲರ್‍ಗಳ ಮೇಲೆ ಬೌಂಡರಿಗಳ ಮಳೆಯನ್ನೇ ಸುರಿಸಿದ ಸೆಹ್ವಾಗ್ 107 ಎಸೆತಗಳಲ್ಲಿ ಶತಕ ಸಿಡಿಸಿ, 222 ಎಸೆತಗಳಲ್ಲಿ 200 ರನ್ ಹೊಡೆದರು. ಸೆಹ್ವಾಗ್, ಸಚಿನ್ ಭರ್ಜರಿ ಆಟದಿಂದಾಗಿ ಮೊದಲ ದಿನದ ಅಂತ್ಯಕ್ಕೆ ಭಾರತದ ಸ್ಕೋರ್ 90 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್. ಸೆಹ್ವಾಗ್ 228 ರನ್ ಗಳಿಸಿದ್ದರೆ, ಸಚಿನ್ 60 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು.

    ದ್ವಿಶತಕ ಸಿಡಿಸಿದ ಸೆಹ್ವಾಗ್ ತ್ರಿಶತಕ ಸಿಡಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಯಾಕೆಂದರೆ ಸೆಹ್ವಾಗ್ ಶತಕದ ಬಳಿಕ ಏಕದಿನ ಪಂದ್ಯದಂತೆ ಬ್ಯಾಟ್ ಬೀಸುತ್ತಿದ್ದರು. ಹೀಗಾಗಿ ತ್ರಿಶತಕ ಸಿಡಿಸುವುದು ಕಷ್ಟ ಎನ್ನುವ ಭಾವನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಸೆಹ್ವಾಗ್ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಮಾರ್ಚ್ 29 ರಂದು ಸ್ಪಿನ್ನರ್ ಮುಷ್ತಾಕ್ ಎಸೆದ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಮೊದಲ ತ್ರಿಶತಕ ಸಿಡಿಸಿದರು. ಈ ಮೂಲಕ ಭಾರತದ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಗೆ ಪಾತ್ರರಾದರು.

    ಅಂತಿಮವಾಗಿ 309 ರನ್‍ಗಳಿಸಿದ್ದಾಗ ಸಮಿ ಎಸೆತದಲ್ಲಿ ತೌಫಿಕ್ ಉಮರ್‍ಗೆ ಕ್ಯಾಚ್ ನೀಡಿ ಸೆಹ್ವಾಗ್ ಔಟಾದರು. 375 ಎಸೆತಗಳನ್ನು ಎದುರಿಸಿದ ಈ ಅಮೋಘ ಇನ್ನಿಂಗ್ಸ್ ನಲ್ಲಿ 39 ಬೌಂಡರಿ, 6 ಸಿಕ್ಸರ್ ಗಳು ಸಿಡಿಯಲ್ಪಟ್ಟಿತ್ತು. ಮೂರನೇ ವಿಕೆಟ್‍ಗೆ ಸೆಹ್ವಾಗ್ ಮತ್ತು ಸಚಿನ್ 83.5 ಓವರ್‍ಗಳಲ್ಲಿ 336 ರನ್‍ಗಳ ಜೊತೆಯಾಟವನ್ನು ಆಡುವ ಮೂಲಕ ಭಾರತದ ಇನ್ನಿಂಗ್ಸ್ 500 ರನ್‍ಗಳ ಗಡಿಯನ್ನು ದಾಟಿಸಿದ್ದರು.

    ಈ ಟೆಸ್ಟ್‍ನಲ್ಲಿ ಸಚಿನ್ ಔಟಾಗದೇ 194 ರನ್, ಯುವರಾಜ್ 59 ರನ್ ಹೊಡೆದರು. ಅಂತಿಮವಾಗಿ ಭಾರತ 161.5 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 675 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಒಟ್ಟು 675 ರನ್‍ಗಳಲ್ಲಿ ಸೆಹ್ವಾಗ್ 509 ರನ್‍ಗಳವರೆಗೂ ಕ್ರೀಸ್‍ನಲ್ಲಿದ್ದು ವಿಶೇಷ.

    ನಂತರ ಬ್ಯಾಟ್ ಮಾಡಿದ ಪಾಕಿಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ 407 ರನ್‍ಗಳಿಗೆ ಆಲೌಟ್ ಆಗಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ 206 ರನ್‍ಗಳಿಗೆ ಆಲೌಟ್ ಆಯ್ತು. ಪರಿಣಾಮ ಭಾರತ ಒಂದು ಇನ್ನಿಂಗ್ಸ್ ಮತ್ತು 52 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

    5 ವರ್ಷಗಳ ಬಳಿಕ ಸರಣಿ: 1999ರ ಕಾರ್ಗಿಲ್ ಯುದ್ಧದ ಬಳಿಕ ಭಾರತ ಮತ್ತು ಪಾಕ್ ನಡುವೆ ಯಾವುದೇ ಸರಣಿ ನಡೆಯಲಿಲ್ಲ. ಆದರೆ 2004ರಲ್ಲಿ ಎರಡೂ ಕಡೆ ಮಾತುಕತೆಗಳು ಫಲಪ್ರದವಾಗಿ 5 ವರ್ಷಗಳ ಬಳಿಕ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಸರಣಿ ಆಡಲು ಬಂದಿಳಿತ್ತು. ಮೂರು ಟೆಸ್ಟ್ ಸರಣಿಯನ್ನು ಭಾರತ 2-1 ಅಂತರಗಳಿಂದ ಗೆದ್ದುಕೊಂಡಿತ್ತು.

    ಸೆಹ್ವಾಗ್ ಇನ್ನಿಂಗ್ಸ್ ಹೀಗಿತ್ತು:
    50 ರನ್ – 60 ಎಸೆತ, 9 ಬೌಂಡರಿ, 1 ಸಿಕ್ಸರ್
    100 ರನ್ – 107 ಎಸೆತ, 14 ಬೌಂಡರಿ, 4 ಸಿಕ್ಸರ್
    150 ರನ್ – 150 ಎಸೆತ, 20 ಬೌಂಡರಿ, 5 ಸಿಕ್ಸರ್
    200 ರನ್ – 222 ಎಸೆತ, 26 ಬೌಂಡರಿ, 5 ಸಿಕ್ಸರ್
    250 ರನ್ – 299 ಎಸೆತ, 32 ಬೌಂಡರಿ, 5 ಸಿಕ್ಸರ್
    300 ರನ್ – 364 ಎಸೆತ, 38 ಬೌಂಡರಿ, 6 ಸಿಕ್ಸರ್
    309 ರನ್ – 375 ಎಸೆತ, 39 ಬೌಂಡರಿ, 6 ಸಿಕ್ಸರ್

  • ಮತ್ತೆ ಭಾರತ, ಪಾಕ್ ಕ್ರಿಕೆಟ್ ಆರಂಭ: ದುಬೈನಲ್ಲಿ ಸರಣಿ?

    ಮತ್ತೆ ಭಾರತ, ಪಾಕ್ ಕ್ರಿಕೆಟ್ ಆರಂಭ: ದುಬೈನಲ್ಲಿ ಸರಣಿ?

    ಮುಂಬೈ: ಪಂಜಾಬ್‍ನ ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ, ಕಾಶ್ಮೀರ ಉರಿ ಸೇನಾ ಕಚೇರಿ ಮೇಲೆ ಉಗ್ರರ ದಾಳಿ ಆ ಬಳಿಕ ಸೇನೆಯ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಹದೆಗೆಟ್ಟಿದ್ದ ಭಾರತ ಪಾಕಿಸ್ತಾನದ ಸಂಬಂಧ ಈಗ ಕ್ರಿಕೆಟ್ ಮೂಲಕ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.

    ಬಿಸಿಸಿಐ ಕೇಂದ್ರ ಗೃಹ ಸಚಿವಾಲಯಕ್ಕೆ ಅನುಮತಿ ಕೋರಿ ಬರೆದ ಪತ್ರದಿಂದಾಗಿ ಹಳಸಿದ ಸಂಬಂಧ ಮತ್ತೆ ಆರಂಭಗೊಳ್ಳುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕು. ಆದರೆ ಉಗ್ರರ ದಾಳಿ ಮತ್ತು ಗಡಿಯಲ್ಲಿನ ಅಪ್ರಚೋದಿತ ದಾಳಿಯಿಂದ ಭಾರತ ಸರ್ಕಾರ ಸರಣಿ ಆಡಲು ಬಿಸಿಸಿಐಗೆ ಅನುಮತಿ ನೀಡಿರಲಿಲ್ಲ. ಆದರೆ ಈಗ ದುಬೈನಲ್ಲಿ ಸರಣಿ ಆಡಲು ಬಿಸಿಸಿಐ ಉತ್ಸುಕವಾಗಿದ್ದು ಈ ಸಂಬಂಧ ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

    2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.

    ಇದನ್ನೂ ಓದಿ: ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!

    “ಸೆಪ್ಟೆಂಬರ್ ನವೆಂಬರ್‍ನಲ್ಲಿ ಕ್ರಿಕೆಟ್ ಸರಣಿ ಆಡಲು ಬಿಸಿಸಿಐ ಮಂದಾಗಿದೆ. ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಹದೆಗೆಟ್ಟ ಕಾರಣ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಈ ಬಾರಿ ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಗೊತ್ತಿಲ್ಲ. ಎಫ್‍ಟಿಪಿ ಅನ್ವಯ ಸರಣಿ ಆಡಲೇಬೇಕಿದೆ. ಹೀಗಾಗಿ ಪಾಕ್ ವಿರುದ್ಧ ದುಬೈಗೆ ಟೀಂ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಮುಂದಾಗಿದೆ. ಸರ್ಕಾರದಿಂದ ಅನುಮತಿ ಸಿಗದೇ ಇದ್ದರೆ ಬಿಸಿಸಿಐ ಏನು ಮಾಡಲು ಸಾಧ್ಯವಿಲ್ಲ” ಎಂದು ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.

    ಭಾರತ ಪಾಕಿಸ್ತಾನ ನಡುವೆ 2017-08ರಲ್ಲಿ ಕೊನೆಯ ಟೆಸ್ಟ್ ಸರಣಿ ನಡೆದಿದ್ದರೆ, 2012-13ರಲ್ಲಿ ಕೊನೆಯ ಏಕದಿನ ಸರಣಿ ನಡೆದಿತ್ತು. ಎರಡೂ ತಂಡಗಳು 2016ರ ಮಾರ್ಚ್ ನಲ್ಲಿ ಕೊನೆಯ ಪಂದ್ಯವನ್ನು ಆಡಿತ್ತು. ಕೋಲ್ಕತ್ತಾದಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ಭಾರತ 6 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

    ಇದನ್ನೂ ಓದಿ:  ವಿಶ್ವದ ವೇಗದ ಕಾರಿನಲ್ಲಿ ದುಬೈ ಪೊಲೀಸರ ಪ್ಯಾಟ್ರೋಲಿಂಗ್!

  • ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!

    ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!

    ನವದೆಹಲಿ: ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಸೋತಿದ್ದು ಮಾತ್ರವಲ್ಲ ಆಸ್ಟ್ರೇಲಿಯಾ ಈಗ ಐಸಿಸಿ ನೀಡುವ 3.25 ಕೋಟಿ ರೂ. ಬಹುಮಾನವನ್ನೂ ಕಳೆದುಕೊಂಡಿದೆ.

    ಹೌದು. ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಕಾರಣ ಆಸ್ಟ್ರೇಲಿಯಾ ಐಸಿಸಿ ಬಹುಮಾನವನ್ನು ಕಳೆದುಕೊಂಡಿದೆ.

    ಮಂಗಳವಾರ ಭಾರತ ವಿರುದ್ಧ 8 ವಿಕೆಟ್‍ಗಳಿಂದ ಸೋತಿದ್ದ ಆಸ್ಟ್ರೇಲಿಯಾ 108 ರೇಟಿಂಗ್ ಸಂಪಾದಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 107 ರೇಟಿಂಗ್‍ನೊಂದಿಗೆ ಮೂರನೇ ಸ್ಥಾನದಲ್ಲಿದಲ್ಲಿತ್ತು. ಆದರೆ ಬುಧವಾರ ದಕ್ಷಿಣ ಆಫ್ರಿಕಾ ಪಂದ್ಯವನ್ನು ಡ್ರಾ ಮಾಡಿಕೊಂಡ ಪರಿಣಾಮ ಅಂಕ ಪಟ್ಟಿಯಲ್ಲಿ ಏರಡನೇ ಸ್ಥಾನಕ್ಕೆ ಏರಿದೆ.

    ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡಿ ಪುರಸ್ಕರಿಸುತ್ತದೆ. ಹೀಗಾಗಿ ಈ ಬಾರಿ ದಕ್ಷಿಣ ಆಫ್ರಿಕಾಗೆ 5ಲಕ್ಷ ಡಾಲರ್(ಅಂದಾಜು 3.25 ಕೋಟಿ ರೂ.) ಬಹುಮಾನ ಸಿಕ್ಕಿದರೆ, ಆಸ್ಟ್ರೇಲಿಯಾಗೆ 2 ಲಕ್ಷ ಡಾಲರ್(ಅಂದಾಜು 1.3 ಕೋಟಿ ರೂ.) ಬಹುಮಾನ ಸಿಕ್ಕಿದೆ. 101 ರೇಟಿಂಗ್‍ನೊಂದಿಗೆ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ಗೆ 1 ಲಕ್ಷ ಡಾಲರ್(65 ಲಕ್ಷ ರೂ.) ಬಹುಮಾನ ಸಿಕ್ಕಿದೆ.

    ನ್ಯೂಜಿಲೆಂಡ್ ಒಂದು ವೇಳೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದರೆ ಆಸ್ಟ್ರೇಲಿಯಾಗೆ ಎರಡನೇ ಶ್ರೇಯಾಂಕ ಸಿಗುತಿತ್ತು. ಮೂರು ಟೆಸ್ಟ್ ಸರಣಿಯ ಮೊದಲ ಮತ್ತು ಕೊನೆಯ ಟೆಸ್ಟ್ ಡ್ರಾ ಕಂಡಿದ್ದರೆ, ಎರಡನೇ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 8 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು.

    ಟೀಂ ಇಂಡಿಯಾಗೆ ಎಷ್ಟು ಬಹುಮಾನ?
    122 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿರುವ ಭಾರತಕ್ಕೆ 10 ಲಕ್ಷ ಡಾಲರ್(ಅಂದಾಜು 6.51 ಕೋಟಿ ರೂ) ಬಹುಮಾನ ಸಿಕ್ಕಿದೆ. ಐಸಿಸಿ ಈ ಬಹುಮಾನದ ಜೊತೆ ತವರಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಟೀಂ ಇಂಡಿಯಾಗೆ ಬಿಸಿಸಿಐನಿಂದಲೂ ಬಹುಮಾನ ಸಿಕ್ಕಿದೆ.

    ತಂಡದ ಪ್ರತಿ ಸದಸ್ಯರಿಗೆ 50 ಲಕ್ಷ ರೂ. ಮುಖ್ಯ ಕೋಚ್ ಅನಿಲ್ ಕುಂಬ್ಳೆಗೆ 25 ಲಕ್ಷ ರೂ. ಸಹಾಯಕ ಸಿಬ್ಬಂದಿಗೆ 15 ಲಕ್ಷ ರೂ. ನೀಡುವುದಾಗಿ ಬಿಸಿಸಿಐ ಪ್ರಕಟಿಸಿದೆ.

    ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಐಸಿಸಿಯ ಗಾರ್ಫೀಲ್ಡ್ ಸೋಬಾರ್ಸ್ ಪ್ರಶಸ್ತಿ ಆರ್ ಅಶ್ವಿನ್‍ಗೆ ಸಿಕ್ಕಿದೆ.

    ಇದನ್ನೂ ಓದಿ: ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

     

  • ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

    ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

    ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇಯ ಟೆಸ್ಟ್ ಪಂದ್ಯವನ್ನು 8 ವಿಕೆಟ್‍ಗಳಿಂದ ಜಯಗಳಿಸುವ ಮೂಲಕ ಭಾರತ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು, ಟೆಸ್ಟ್ ಗದೆಯನ್ನು ಸ್ವೀಕರಿಸಿದೆ. ಇದರ ಜೊತೆಗೆ ಐಸಿಸಿಯ 10 ಲಕ್ಷ ಡಾಲರ್(ಅಂದಾಜು 6.51 ಕೋಟಿ ರೂ) ಬಹುಮಾನವನ್ನು ಗೆದ್ದುಕೊಂಡಿದೆ.

    ಪ್ರತಿ ವರ್ಷ ಏಪ್ರಿಲ್ 1ರ ಒಳಗಡೆ ಟಾಪ್ ಸ್ಥಾನಗಳಲ್ಲಿರುವ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡುತ್ತಾ ಬಂದಿದೆ. ಟೀಂ ಇಂಡಿಯಾ 122 ರೇಟಿಂಗ್  ಪಡೆಯುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದರೆ, 108 ರೇಟಿಂಗ್ ನೊಂದಿಗೆ ಆಸ್ಟ್ರೇಲಿಯಾ ನಂಬರ್ 2 ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 107 ರೇಟಿಂಗ್ ಗಳಿಸಿರುವ ದಕ್ಷಿಣ ಆಫ್ರಿಕಾ ಇದ್ದರೆ, 101 ರೇಟಿಂಗ್ ನೊಂದಿಗೆ ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.

    ದ್ವಿತೀಯ ಸ್ಥಾನ ಪಡೆದಿರುವ ಆಸ್ಟ್ರೇಲಿಯಾಗೆ 5ಲಕ್ಷ ಡಾಲರ್(ಅಂದಾಜು 3.25 ಕೋಟಿ ರೂ.), ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಗೆ 2 ಲಕ್ಷ ಡಾಲರ್(ಅಂದಾಜು 1.3 ಕೋಟಿ ರೂ.) ಬಹುಮಾನ ಸಿಕ್ಕಿದೆ. 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ಗೆ 1 ಲಕ್ಷ ಡಾಲರ್(65 ಲಕ್ಷ ರೂ.) ಬಹುಮಾನ ಸಿಕ್ಕಿದೆ.

    ಟೀಂ ಇಂಡಿಯಾಗೆ ಬಹುಮಾನ ಸಿಕ್ಕಿದ ಹಿನ್ನೆಲೆಯಲ್ಲಿ ಭಾರತ 2016-17ರ ಅವಧಿಯಲ್ಲಿ ಗೆದ್ದಿರುವ ಟೆಸ್ಟ್ ಸರಣಿಯ ವಿವರವನ್ನು ಇಲ್ಲಿ ನೀಡಲಾಗಿದೆ

    ನ್ಯೂಜಿಲೆಂಡ್ ವಿರುದ್ಧ 3-0 ಗೆಲುವು
    ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ 197 ರನ್‍ಗಳಿಂದ ಗೆದ್ದುಕೊಂಡಿದ್ದರೆ, ಕೋಲ್ಕತ್ತಾದಲ್ಲಿ ನಡೆದ ಎರಡನೇ ಪಂದ್ಯವನ್ನು 178 ರನ್‍ಗಳಿಂದ ಗೆದ್ದುಕೊಂಡಿತ್ತು. ಇಂದೋರ್‍ನಲ್ಲಿ ನಡೆದ ಮೂರನೇ ಪಂದ್ಯವನ್ನು 321 ರನ್‍ಗಳಿಂದ ಗೆಲ್ಲುವ ಮೂಲಕ ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಅಶ್ವಿನ್‍ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

    ಇಂಗ್ಲೆಂಡ್ ವಿರುದ್ಧ 4-0 ಗೆಲುವು
    ರಾಜ್‍ಕೋಟ್‍ನಲ್ಲಿ ನಡೆದ ಮೊದಲ ಪಂದ್ಯ ಡ್ರಾ ಆಗಿದ್ದರೆ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 246 ರನ್‍ಗಳಿಂದ ಗೆದ್ದುಕೊಂಡಿತ್ತು. ಮೊಹಾಲಿಯಲ್ಲಿ ನಡೆದ ಮೂರನೇ ಪಂದ್ಯವನ್ನು 8ವಿಕೆಟ್‍ಗಳಿಂದ ಗೆದ್ದುಕೊಂಡಿದ್ದರೆ, ಮುಂಬೈ ನಲ್ಲಿ ನಡೆದ ನಾಲ್ಕನೇಯ ಪಂದ್ಯವನ್ನು ಇನ್ನಿಂಗ್ಸ್ ಮತ್ತು 36 ರನ್‍ಗಳಿಂದ ಗೆದ್ದುಕೊಂಡಿತ್ತು. ಚೆನ್ನೈನಲ್ಲಿ ನಡೆದ 5 ಪಂದ್ಯವನ್ನು ಭಾರತ 1 ಇನ್ನಿಂಗ್ಸ್ ಮತ್ತು 75 ರನ್‍ಗಳಿಂದ ಗೆದ್ದುಕೊಂಡಿತ್ತು. ಸರಣಿಯಲ್ಲಿನ ಅತ್ಯುತ್ತಮ ಆಟಕ್ಕಾಗಿ ವಿರಾಟ್ ಕೊಹ್ಲಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

    ಬಾಂಗ್ಲಾ ವಿರುದ್ಧ ಏಕೈಕ ಸರಣಿ ಜಯ
    ಹೈದರಾಬಾದ್‍ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ 208 ರನ್‍ಗಳಿಂದ ಗೆದ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 204 ರನ್, ಎರಡನೇ ಇನ್ನಿಂಗ್ಸ್ ನಲ್ಲಿ 38 ರನ್ ಹೊಡೆದ ವಿರಾಟ್ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

    ಆಸ್ಟ್ರೇಲಿಯಾ ವಿರುದ್ಧ 2-1 ಸರಣಿ ಜಯ
    ಪುಣೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿದ್ದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯ ಡ್ರಾ ಕಂಡಿತ್ತು. ಹಿಮಾಚಲ ಪ್ರದೇಶ ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಬಾರ್ಡರ್ ಗಾವಸ್ಕರ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿದೆ.

    ಟೆಸ್ಟ್ ನಲ್ಲಿ ನಮ್ಮವರೇ ಮಿಂಚಿಂಗ್:
    ಬ್ಯಾಟ್ಸ್ ಮನ್‍ಗಳ ಪೈಕಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ 941 ರೇಟಿಂಗ್ ಪಡೆಯುವ ಮೂಲಕ ಮೊದಲನೇಯ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ 861  ರೇಟಿಂಗ್  ನೊಂದಿಗೆ  ದ್ವಿತೀಯ ಶ್ರೇಯಾಂಕ ಪಡೆದಿದ್ದಾರೆ. ಬೌಲಿಂಗ್‍ನಲ್ಲಿ ರವೀಂದ್ರ ಜಡೇಜಾ 899 ರೇಟಿಂಗ್ ಪಡೆಯುವ  ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಆರ್ ಅಶ್ವಿನ್ 862 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

    ಇನ್ನು ಅಲ್‍ರೌಂಡರ್ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 431 ರೇಟಿಂಗ್ ಗಳಿಸಿ ಮೊದಲ ಸ್ಥಾನಗಳಿಸಿದ್ದರೆ, ಆರ್ ಅಶ್ವಿನ್ 407 ರೇಟಿಂಗ್ ಗಳಿಸಿ  ಎರಡನೇ ಶ್ರೇಯಾಂಕ, ಜಡೇಜಾ 387 ರೇಟಿಂಗ್ ಗಳಿಸಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ.

     

  • ಯುಗಾದಿ ಗಿಫ್ಟ್: 2-1 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಭಾರತ

    ಯುಗಾದಿ ಗಿಫ್ಟ್: 2-1 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಭಾರತ

    ಧರ್ಮಶಾಲಾ: 4ನೇ ಟೆಸ್ಟ್ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 19 ರನ್‍ಗಳಿಸಿದ್ದ ಭಾರತ ಇಂದು 23.5 ಓವರ್‍ಗಳಲ್ಲಿ 106 ಗಳಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು.

    ಕೆಎಲ್ ರಾಹುಲ್ ಔಟಾಗದೇ 51 ರನ್(76 ಎಸೆತ, 4 ಬೌಂಡರಿ) ಹಂಗಾಮಿ ನಾಯಕ ಅಜಿಂಕ್ಯಾ ರೆಹಾನೆ ಔಟಾಗದೇ 38 ರನ್(27 ಎಸೆತ,4 ಬೌಂಡರಿ, 2 ಸಿಕ್ಸರ್) ಹೊಡೆಯುವ ಮೂಲಕ ಭಾರತ ಗೆಲುವಿಗೆ ಕಾರಣರಾದರು.

    ಮೊದಲ ಇನ್ನಿಂಗ್ಸ್ ನಲ್ಲಿ 63 ರನ್(95 ಎಸೆತ, 4 ಬೌಂಡರಿ, 4 ಸಿಕ್ಸರ್) ಸಿಡಿಸಿ ಎರಡೂ ಇನ್ನಿಂಗ್ಸ್ ನಲ್ಲಿ ಒಟ್ಟು 4 ವಿಕೆಟ್ ಪಡೆದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಷ್ಟೇ ಅಲ್ಲದೇ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕೆ ಜಡೇಜಾಗೆ ಸರಣಿಶ್ರೇಷ್ಠ ಪ್ರಶಸ್ತಿ ಸಿಕ್ಕಿತು.

    ಪುಣೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿದ್ದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯ ಡ್ರಾ ಕಂಡಿತ್ತು.

    4ನೇ ಟೆಸ್ಟ್ ಸಂಕ್ಷೀಪ್ತ ಸ್ಕೋರ್:
    ಆಸ್ಟ್ರೇಲಿಯಾ 300 ಮತ್ತು 137
    ಭಾರತ 332 ಮತ್ತು 106/2

  • ಆಸೀಸ್‍ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?

    ಆಸೀಸ್‍ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?

    ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೆಯ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ.

    ಆಸ್ಟ್ರೇಲಿಯಾದ 300 ರನ್ ಗಳಿಗೆ ಜವಾಬು ನೀಡಲು ಆರಂಭಿಸಿದ ಭಾರತ 90 ಓವರ್‍ಗಳಲ್ಲಿ 248 ರನ್‍ಗಳಿಸಿದೆ. ಮುರಳಿ ವಿಜಯ್ ಇಂದು 21 ರನ್‍ಗಳಿಸಿ ಆರಂಭದಲ್ಲೇ ಔಟಾದರೂ, ಕೆಎಲ್ ರಾಹುಲ್ 60 ರನ್(124 ಎಸೆತ, 9 ಬೌಂಡರಿ, 1 ಸಿಕ್ಸರ್), ಚೇತೇಶ್ವರ ಪೂಜಾರ 57 ರನ್(151 ಎಸೆತ, 6 ಬೌಂಡರಿ) ನಾಯಕ ಅಜಿಂಕ್ಯಾ ರೆಹಾನೆ 46 ರನ್(104 ಎಸೆತ, 7 ಬೌಂಡರಿ, 1 ಸಿಕ್ಸರ್), ಆರ್ ಅಶ್ವಿನ್ 30 ರನ್( 49 ಎಸೆತ, 4 ಬೌಂಡರಿ) ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಕ್ರೀಸ್‍ನಲ್ಲಿ ಈಗ ಕೀಪರ್ ವೃದ್ಧಿಮಾನ್ ಸಹಾ 10 ರನ್(43 ಎಸೆತ,1 ಬೌಂಡರಿ) ರವೀಂದ್ರ ಜಡೇಜಾ 16 ರನ್(23 ಎಸೆತ, 2 ಸಿಕ್ಸರ್) ಗಳಿಸಿ ಆಟವಾಡುತ್ತಿದ್ದು, ಸೋಮವಾರ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

    ಸ್ಪಿನ್ನರ್ ನಥನ್ ಲಿಯಾನ್ 4 ವಿಕೆಟ್ ಕಿತ್ತರೆ, ಜೋಷ್ ಹ್ಯಾಜಲ್‍ವುಡ್, ಪ್ಯಾಟ್ ಕುಮ್ಮಿಸ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

    ಈ ಸೀರಿಸ್ ಟಾಪ್ ರನ್ ಸ್ಕೋರರ್?
    ನಾಯಕ ಸ್ಮಿತ್ 7 ಇನ್ನಿಂಗ್ಸ್ ಗಳಿಂದ 482 ರನ್ ಗಳಿಸಿದ್ದರೆ, ಚೇತೇಶ್ವರ ಪೂಜಾರ 6 ಇನ್ನಿಂಗ್ಸ್ ಗಳಿಂದ 405 ರನ್ ಗಳಿಸಿದ್ದಾರೆ. 6 ಇನ್ನಿಂಗ್ಸ್ ಗಳಿಂದ 342 ರನ್‍ಗಳಿಸುವ ಮೂಲಕ ಕೆಎಲ್ ರಾಹುಲ್ ಮೂರನೇ ಸ್ವಾನದಲ್ಲಿದ್ದಾರೆ.

    ವಿರಾಟ್ ಕೊಹ್ಲಿ 2011ರಿಂದ ಇಲ್ಲಿಯವರೆಗೆ ಸತತ 54 ಪಂದ್ಯಗಳನ್ನು ಆಡುತ್ತಾ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಗಾಯದ ಸಮಸ್ಯೆಯಿಂದಾಗಿ ಈ ಟೆಸ್ಟ್ ಪಂದ್ಯದಿಂದ ಹೊರಗಡೆ ಉಳಿದಿದ್ದಾರೆ.

  • 63 ರನ್‍ಗಳಿಗೆ 4 ವಿಕೆಟ್ ಹೋಗಿದ್ದಾಗ 373 ಎಸೆತಗಳಲ್ಲಿ 124 ರನ್ ಜೊತೆಯಾಟವಾಡಿ ಪಂದ್ಯವನ್ನು ಉಳಿಸಿಕೊಟ್ರು!

    63 ರನ್‍ಗಳಿಗೆ 4 ವಿಕೆಟ್ ಹೋಗಿದ್ದಾಗ 373 ಎಸೆತಗಳಲ್ಲಿ 124 ರನ್ ಜೊತೆಯಾಟವಾಡಿ ಪಂದ್ಯವನ್ನು ಉಳಿಸಿಕೊಟ್ರು!

    ರಾಂಚಿ: ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಶೇನ್ ಮಾರ್ಷ್ ಅವರ ಉಪಯುಕ್ತ ಆಟದಿಂದಾಗಿ ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

    63 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಪಂದ್ಯ ಭಾರತದತ್ತ ವಾಲಿತ್ತು. ಆದರೆ 5 ವಿಕೆಟ್‍ಗೆ ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಶೇನ್ ಮಾರ್ಷ್ 373 ಎಸೆತಗಳಲ್ಲಿ 124 ರನ್ ಜೊತೆಯಾಟವಾಡುವ ಮೂಲಕ ಸೋಲುವ ಭೀತಿಯಿಂದ ತಂಡವನ್ನು ಪಾರು ಮಾಡಿದರು. ಅಂತಿಮವಾಗಿ ಆಸ್ಟ್ರೇಲಿಯಾ 100 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 204 ಗಳಿಸಿತು.

    ಭಾನುವಾರ 7.2 ಓವರ್‍ಗಳಲ್ಲಿ 23 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇಂದು 4 ವಿಕೆಟ್‍ಗಳ ಸಹಾಯದಿಂದ 93.4 ಓವರ್‍ಗಳಲ್ಲಿ ಬಾರಿಸಿದ್ದು 181 ರನ್ ಮಾತ್ರ. ಇದರಲ್ಲಿ ಬೈ 9, ಲೆಗ್‍ಬೈ 4, ನೋಬಾಲ್ 3 ಎಸೆಯುವ ಮೂಲಕ ಇತರೇ ರೂಪದಲ್ಲಿ ಭಾರತ 16 ರನ್‍ಗಳ ಕಾಣಿಕೆಯನ್ನು ನೀಡಿತ್ತು.

    ನಾಯಕ ಸ್ವೀವ್ ಸ್ಮಿತ್ 21 ರನ್‍ಗಳಿಸಿ ಔಟಾದರೆ, ಶೇನ್ ಮಾರ್ಷ್ 53 ರನ್(197 ಎಸೆತ, 7 ಬೌಂಡರಿ), ಪೀಟರ್ ಹ್ಯಾಂಡ್ಸ್ ಕಾಂಬ್ ಔಟಾಗದೇ 72 ರನ್(200 ಎಸೆತ, 7 ಬೌಂಡರಿ) ಹೊಡೆಯುವ ಮೂಲಕ ಆಸ್ಟ್ರೇಲಿಯಾವನ್ನು ಪಾರು ಮಾಡಿದರು.

    ಜಡೇಜಾ 44 ಓವರ್ ಎಸೆದು 18 ಓವರ್‍ಗಳನ್ನು ಮೇಡನ್ ಮಾಡಿ, 54 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಆರ್ ಅಶ್ವಿನ್ 30 ಓವರ್ ಎಸೆದು 10 ಓವರ್ ಮೇಡನ್ ಮಾಡಿ 71 ರನ್ ನೀಡಿ 1 ವಿಕೆಟ್ ಪಡೆದರು. ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು.

    ಈ ಟೆಸ್ಟ್ ನಲ್ಲಿ ದ್ರಾವಿಡ್ ದಾಖಲೆಯನ್ನು ಮುರಿದು 202 ರನ್ ಹೊಡೆದಿದ್ದ ಚೇತೇಶ್ವರ ಪೂಜಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲದಲ್ಲಿ ಸಾಧಿಸಿದ್ದು, ಕೊನೆಯ ಟೆಸ್ಟ್ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಾರ್ಚ್ 25ರಿಂದ ನಡೆಯಲಿದೆ. ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದು ಕೊಂಡಿತ್ತು.

    ಸಂಕ್ಷಿಪ್ತ ಸ್ಕೋರ್
    ಆಸ್ಟ್ರೇಲಿಯಾ 451 ಮತ್ತು 204/6
    ಭಾರತ 603/ 9 ಡಿಕ್ಲೇರ್

    ಇದನ್ನೂ ಓದಿ: 13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ

  • ಕ್ಸಿಯೋಮಿಯಿಂದ ದೇಶೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಎಲ್‍ಟಿಇ ಫೋನ್ ಬಿಡುಗಡೆ

    ಕ್ಸಿಯೋಮಿಯಿಂದ ದೇಶೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಎಲ್‍ಟಿಇ ಫೋನ್ ಬಿಡುಗಡೆ

    ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಕ್ಸಿಯೋಮಿ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಹೈ ಬ್ರಿಡ್ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ.

    ರೆಡ್‍ಮಿ 4ಎ ಬಿಡುಗಡೆ ಮಾಡಿದ್ದು, 5,999 ರೂ. ನಿಗದಿ ಮಾಡಿದೆ. ಈ ಫೋನ್ ಆನ್‍ಲೈನ್ ಶಾಪಿಂಗ್ ತಾಣ ಅಮೇಜಾನ್ ಮತ್ತು ಎಂಐ.ಕಾಂ ನಲ್ಲಿ ಮಾತ್ರ ಲಭ್ಯವಿರಲಿದೆ. ಮಾರ್ಚ್ 23ರಿಂದ ಈ ಫೋನ್ ಮಾರಾಟ ಆರಂಭವಾಗಲಿದೆ.

    ಈ ಫೋನ್ ಚೀನಾದಲ್ಲಿ ಕಳೆದ ವರ್ಷ 599 ಯುವಾನ್(ಅಂದಾಜು 5600 ರೂ.) ಬಿಡುಗಡೆಯಾಗಿದ್ದ ಈ ಫೋನ್ ಈಗ ಭಾರತದಲ್ಲಿ ಬಿಡುಗಡೆಯಾಗಿದೆ. ಹೈ ಬ್ರಿಡ್ ಸಿಮ್‍ಸ್ಲಾಟ್ ನೀಡಿರುವ ಕಾರಣ ಎರಡು ಸಿಮ್ ಸ್ಲಾಟ್ ಅಥವಾ ಒಂದು ನ್ಯಾನೋ ಸಿಮ್ ಕಾರ್ಡ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು.

    ಎಲ್‍ಟಿಇ ತಂತ್ರಜ್ಞಾನಕ್ಕೆ ಈ ಫೋನ್ ಸಪೋರ್ಟ್ ಮಾಡುವ ಕಾರಣ ಇದರಲ್ಲಿ ಜಿಯೋ ಸಿಮ್ ಹಾಕಬಹುದು. ಬೆಲೆ ಕಡಿಮೆ ಇರುವುದರಿಂದ ಇದಕ್ಕೆ ಫಿಂಗರ್‍ಪ್ರಿಂಟ್ ಸೆನ್ಸರ್ ಅನ್ನು ಕ್ಸಿಯೋಮಿ ನೀಡಿಲ್ಲ. ಪ್ರಸ್ತತ ದೇಶದ ಆನ್‍ಲೈನ್ ಸ್ಮಾರ್ಟ್ ಫೋನ್ ವ್ಯಾಪಾರದಲ್ಲಿ ಶೇ.30ರಷ್ಟು ಪಾಲನ್ನು ಕ್ಸಿಯೋಮಿ ಪಡೆದುಕೊಂಡಿದೆ.

    ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    139.5*70.4*8.5. ಮಿ.ಮೀ ಗಾತ್ರ, 131.5 ಗ್ರಾಂ ತೂಕ, ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(720*1280 ಪಿಕ್ಸೆಲ್,294 ಪಿಪಿಐ ಹೊಂದಿದೆ.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 6.0.1 ಮಾರ್ಶ್‍ಮೆಲೋ ಓಎಸ್, 1.4 GHz ಕ್ವಾಲಕಂ ಸ್ನಾಪ್‍ಡ್ರಾಗನ್ ಕ್ವಾಡ್‍ಕೋರ್ ಪ್ರೊಸೆಸರ್, 16 ಜಿಬಿ ಆಂತರಿಕ ಮೆಮೊರಿ, 2 ಜಿಬಿ ರಾಮ್,2ನೇ ಸಿಮ್ ಸ್ಲಾಟ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೆರಿ ಹಾಕಬಹುದು.

    ಇತರೇ:
    ಹಿಂದುಗಡೆ 13 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾ, ತೆಗೆಯಲು ಅಸಾಧ್ಯವಾದ ಲಿಯಾನ್ 3120 ಎಂಎಎಚ್ ಬ್ಯಾಟರಿ

  • 13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ

    13 ವರ್ಷಗಳ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆ ಮುರಿದ ಪೂಜಾರ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರು 502 ಬಾಲ್‍ಗಳನ್ನು ಎದುರಿಸಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮರಿಯುವ ಮೂಲಕ ಟೀಂ ಇಂಡಿಯಾ ಪರ ಅತ್ಯಧಿಕ ಬಾಲನ್ನು ಎದುರಿಸಿದ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಚೇತೇಶ್ವರ ಪೂಜಾರ 4ನೇ ದಿನದಾಟದಲ್ಲಿ 502 ಎಸೆತಗಳನ್ನು ಎದುರಿಸಿ 202 ರನ್(21 ಬೌಂಡರಿ) ಬಾರಿಸುವ ಮೂಲಕ ಪಾಕ್ ವಿರುದ್ಧ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

    2004ರ ಏಪ್ರಿಲ್‍ನಲ್ಲಿ ರಾಹುಲ್ ದ್ರಾವಿಡ್ ಪಾಕಿಸ್ತಾನ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಮೂರನೇ ಟೆಸ್ಟ್ ನ ಮೊದಲನೇ ಇನ್ನಿಂಗ್ಸ್ ನಲ್ಲಿ 270 ರನ್(495 ಎಸೆತ, 34 ಬೌಂಡರಿ, 1 ಸಿಕ್ಸರ್) ಬಾರಿಸಿದ್ದರು. ಈಗ ಪೂಜಾರ 502 ಬಾಲ್‍ಗಳನ್ನು ಫೇಸ್ ಮಾಡುವ ಮೂಲಕ 13 ವರ್ಷದ ಹಿಂದೆ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ದ್ರಾವಿಡ್ ದ್ವಿಶತಕ ಸಾಧನೆಯಿಂದಾಗಿ ಭಾರತ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 131 ರನ್‍ಗಳಿಂದ ಗೆದ್ದುಕೊಂಡಿತ್ತು. ವಿಶೇಷ ಏನೆಂದರೆ ಇವರಿಬ್ಬರು ಆರಂಭಿಕ ಆಟಗಾರು ಔಟಾದ ಬಳಿಕ ಬಂದು ಈ ಸಾಧನೆ ಮಾಡಿದ್ದಾರೆ.

    ಇಂಗ್ಲೆಂಡಿನ ಆಟಗಾರನಿಗೆ ವಿಶ್ವದಾಖಲೆಯ ಪಟ್ಟ:
    ಅತಿ ಹೆಚ್ಚು ಬಾಲನ್ನು ಎದುರಿಸಿದ ವಿಶ್ವ ದಾಖಲೆ ಇಂಗ್ಲೆಂಡಿನ ಸರ್ ಲಿನೋನಾರ್ಡ್ ಹಟ್ಟನ್ ಹೆಸರಿನಲ್ಲಿದೆ. 1938ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 847 ಬಾಲಿಗೆ ಹಟ್ಟನ್ 364 ರನ್ ಹೊಡೆದಿದ್ದರು.

    ಮೂರನೇ ಅತ್ಯಧಿಕ ಸ್ಕೋರ್: ಚೇತೇಶ್ವರ ಪೂಜಾರ ಅವು ಈ ಸಾಧನೆಯ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಎರಡು ದ್ವಿಶತಕ ಹೊಡೆದ ಸಚಿನ್, ಲಕ್ಷ್ಮಣ್ ಅವರ ಕ್ಲಬ್ ಸೇರಿದ್ದಾರೆ. ಪೂಜಾರ ಈ ಹಿಂದೆ 2013ರಲ್ಲಿ ಹೈದರಬಾದ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ನಲ್ಲಿ 202 ರನ್ ಗಳಿಸಿದ್ದರು. ಪೂಜಾರ ಇಂಗ್ಲೆಂಡ್ ವಿರುದ್ಧದ ಅಹಮದಾಬಾದ್‍ನಲ್ಲಿ ನಡೆದ ಟೆಸ್ಟ್ ನಲ್ಲಿ ವೈಯಕ್ತಿಕ ಗರಿಷ್ಠ 206 ರನ್ ಬಾರಿಸಿದ್ದರು.

    ಭಾರತದ ಭಾರೀ ಮೊತ್ತ: ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 360 ರನ್‍ಗಳಿಸಿದ್ದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 210 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 603 ರನ್‍ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ. ನಿನ್ನೆ 130 ರನ್‍ಗಳಿಸಿದ್ದ ಪೂಜಾರ ಇಂದು ದ್ವಿಶತಕ ಹೊಡೆದರೆ, 18 ರನ್‍ಗಳಿಸಿದ್ದ ವೃದ್ಧಿಮಾನ್ ಸಹಾ ಇಂದು 117 ರನ್(233 ಎಸೆತ, 8 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟಾದರು.

    ಇವರಿಬ್ಬರು ಏಳನೇ ವಿಕೆಟ್‍ಗೆ 466 ಎಸೆತಗಳಲ್ಲಿ 199 ರನ್ ಜೊತೆಯಾಟವಾಡುವ ಮೂಲಕ ಭಾರತ ಭಾರೀ ಮೊತ್ತವನ್ನು ಪೇರಿಸಿದೆ. ಜಡೇಜಾ ಔಟಾಗದೇ 54 ರನ್(55 ಎಸೆತ, 5 ಬೌಂಡರಿ, 2 ಸಿಕ್ಸರ್) ಬಾರಿಸಿದರೆ, ಉಮೇಶ್ ಯಾದವ್ 16 ರನ್ ಹೊಡೆದರು.

    ಬೈ 14, ಲೆಗ್ ಬೈ 5 ರನ್ ನೀಡಿ ಇತರೇ ರೂಪದಲ್ಲಿ 19 ರನ್ ಬಿಟ್ಟುಕೊಟ್ಟ ಕಾರಣ ಭಾರತ 600 ರನ್‍ಗಳ ಗಡಿಯನ್ನು ದಾಟಿತ್ತು.

    ಕುತೂಹಲ ಘಟ್ಟದಲ್ಲಿ ಟೆಸ್ಟ್: ನಾಲ್ಕನೇಯ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 7.2 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 23 ರನ್ ಗಳಿಸಿದೆ. ಡೇವಿಡ್ ವಾರ್ನರ್ ಮತ್ತು ನಥನ್ ಲಿಯಾನ್ ಔಟಾಗಿದ್ದು, ಕ್ರೀಸ್‍ನಲ್ಲಿ ಮ್ಯಾಟ್ ರೇನ್ ಷಾ ಇದ್ದಾರೆ. ಎರಡು ವಿಕೆಟ್‍ಗಳನ್ನು ಜಡೇಜಾ ಕಬಳಿಸಿದ್ದಾರೆ. ನಾಳೆ ಕೊನೆಯ ದಿನವಾಗಿದ್ದು ಪಂದ್ಯ ಏನಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಲಿದೆ.

    77 ಓವರ್ ಎಸೆದ ಕೀಫ್: ಸ್ಪಿನ್ನರ್ ಸ್ಟೀವ್ ಓ ಕೀಫ್ ಮೊದಲ ಇನ್ನಿಂಗ್ಸ್ ನಲ್ಲಿ 77 ಓವರ್ ಎಸೆಯುವ ಮೂಲಕ ಆಸ್ಟ್ರೇಲಿಯಾ ಪರವಾಗಿ ಭಾರತದ ವಿರುದ್ಧ ಅತಿ ಹೆಚ್ಚು ಓವರ್ ಎಸೆದ ಬೌಲರ್ ಆಗಿದ್ದಾರೆ. ಕೀಫ್ 77 ಓವರ್‍ನಲ್ಲಿ 17 ಓವರ್ ಮೇಡನ್ ಮಾಡಿ 199 ರನ್ 3 ವಿಕೆಟ್ ಕಿತ್ತಿದ್ದಾರೆ.

  • ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಟೀಂ ಇಂಡಿಯಾದಿಂದ ದಿಟ್ಟ ಹೋರಾಟದ ಮುನ್ಸೂಚನೆ

    ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಟೀಂ ಇಂಡಿಯಾದಿಂದ ದಿಟ್ಟ ಹೋರಾಟದ ಮುನ್ಸೂಚನೆ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 451 ರನ್‍ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ದಿಟ್ಟ ಹೋರಾಟ ನೀಡುವ ಮುನ್ಸೂಚನೆ ನೀಡಿದೆ.

    ಮೊದಲ ದಿನ 4 ವಿಕೆಟ್ ಕಳೆದುಕೊಂಡು 299 ರನ್‍ಗಳಿಸಿದ್ದ ಆಸ್ಟ್ರೇಲಿಯಾ ಇಂದು 6 ವಿಕೆಟ್‍ಗಳ ಸಹಾಯದಿಂದ 152 ರನ್ ಗಳಿಸಿ 137.3 ಓವರ್‍ಗಳಲ್ಲಿ 451 ರನ್‍ಗಳಿಗೆ ಆಲೌಟ್ ಆಯ್ತು. ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಜವಾಬು ನೀಡಲು ಆರಂಭಿಸಿದ ಭಾರತ ಎರಡನೇ ದಿನದ ಆಟದ ಆಂತ್ಯಕ್ಕೆ 40 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 120 ರನ್‍ಗಳಿಸಿದೆ.

    ಗುರುವಾರ 82 ರನ್‍ಗಳಿಸಿ ಅಜೇಯರಾಗಿದ್ದ ಮ್ಯಾಕ್ಸ್ ವೆಲ್ ಇಂದು ಟೆಸ್ಟ್ ಕ್ರಿಕೆಟ್ ಬಾಳ್ವೆಯ ಮೊದಲ ಶತಕ ಹೊಡೆದರು. 180 ಎಸೆತಗಳಲ್ಲಿ ಶತಕ ಹೊಡೆದ ಮ್ಯಾಕ್ಸ್ ವೆಲ್ ಅಂತಿಮವಾಗಿ 104 ರನ್(185 ಎಸೆತ, 9 ಬೌಂಡರಿ, 2 ಸಿಕ್ಸರ್)ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಮತ್ತು ಮ್ಯಾಕ್ಸ್ ವೆಲ್  354 ಎಸೆತಗಳಲ್ಲಿ 5ನೇ ವಿಕೆಟ್‍ಗೆ 191 ರನ್‍ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು.

    ಮ್ಯಾಥ್ಯು ವೇಡ್ 37 ರನ್, ಸ್ವೀವ್ ಓ ಕೀಫ್ 25 ರನ್‍ಗಳಿಸಿ ಔಟಾದರು. ಆರಂಭಿಕ ಆಟಗಾರ ವಾರ್ನರ್ ಔಟಾದ ಬಳಿಕ ಕ್ರೀಸ್‍ಗೆ ಬಂದ ನಾಯಕ ಸ್ವೀವ್ ಸ್ಮಿತ್ ಅಜೇಯ 178 ರನ್(361 ಎಸೆತ, 17 ಬೌಂಡರಿ) ಹೊಡೆಯುವ ಮೂಲಕ ತಂಡದ ರನ್ ಬೆಟ್ಟವನ್ನು ಕಟ್ಟಿದರು.

    ರವೀಂದ್ರ ಜಡೇಜಾ 124 ರನ್ ನೀಡಿ 5 ವಿಕೆಟ್ ಪಡೆದರೆ, ಉಮೇಶ್ ಯಾದವ್ 106 ರನ್ ನೀಡಿ 3 ವಿಕೆಟ್ ಪಡೆದರು. ಅಶ್ವಿನ್ 114 ರನ್ ನೀಡಿ 1 ವಿಕೆಟ್ ಕಿತ್ತರು. 9 ಬೈ, 11 ಲೆಗ್ ಬೈ, 2 ನೋಬಾಲ್ ಎಸೆಯುವ ಮೂಲಕ ಭಾರತದ ಬೌಲರ್‍ಗಳು ಇತರೇ ರೂಪದಲ್ಲಿ 22 ರನ್ ಬಿಟ್ಟುಕೊಟ್ಟಿದ್ದಾರೆ.

    ದಿಟ್ಟ ಹೋರಾಟ: ಪ್ರತಿ ಹೋರಾಟ ಆರಂಭಿಸಿದ ಭಾರತ 40 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. ಕೆಎಲ್ ರಾಹುಲ್ 67 ರನ್( 102 ಎಸೆತ, 9 ಬೌಂಡರಿ) ಗಳಿಸಿ ಔಟಾದರು. ಮುರಳಿ ವಿಜಯ್ ಅಜೇಯ 42 ರನ್(112 ಎಸೆತ, 6 ಬೌಂಡರಿ) ಚೇತೇಶ್ವರ ಪೂಜಾರ 10 ರನ್‍ಗಳಿಸಿ ಕ್ರೀಸ್‍ನಲ್ಲಿ ಆಡುತ್ತಿದ್ದಾರೆ. ರಾಹುಲ್ ಮತ್ತು ವಿಜಯ್ 31.2 ಓವರ್‍ಗಳಲ್ಲಿ ಮೊದಲ ವಿಕೆಟ್‍ಗೆ 91 ರನ್‍ಗಳ ಜೊತೆಯಾಟವಾಡುವ ಮೂಲಕ ಭಾರತದ ಇನ್ನಿಂಗ್ಸ್  ಗೆ ಗಟ್ಟಿ ಆಡಿಪಾಯ ಹಾಕಿದ್ದಾರೆ.