Tag: ಭಾರತ

  • 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    ನವದೆಹಲಿ:2016-17ರ ಅವಧಿಯಲ್ಲಿ ದೇಶದಲ್ಲಿ ಮಾರುತಿ ಕಂಪೆನಿಯ ಕಾರುಗಳು ಅತಿ ಹೆಚ್ಚು ಮಾರಾಟವಾಗಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಅತಿಹೆಚ್ಚು ಮಾರಾಟದವಾದ ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿ ಕಂಪೆನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ವರದಿಯನ್ನು ಬಿಡುಗಡೆ ಮಾಡಿದೆ. 2015-16 ಅವಧಿಯಲ್ಲಿ ಮಾರಾಟವಾದ ಅತಿ ಹೆಚ್ಚು ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿಯ ಕಂಪೆನಿಯ 6 ಕಾರುಗಳು ಸ್ಥಾನ ಪಡೆದಿದ್ದರೆ ಈ ಬಾರಿ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.

    2016-17ರಲ್ಲಿ ಭಾರತದಲ್ಲಿ ಒಟ್ಟು 30,46,727 ಕಾರುಗಳು ಮಾರಾಟವಾಗಿದೆ. ಈ ಹಿಂದಿನ ಅವಧಿಯಲ್ಲಿ 27,89,208 ಕಾರುಗಳು ಮಾರಾಟವಾಗಿದ್ದು, ಶೇ.9.23 ಪ್ರಗತಿ ದರ ಸಾಧಿಸಿದೆ.

    ಒಟ್ಟು ಮಾರಾಟವಾದ ಕಾರುಗಳು ಪೈಕಿ ಶೇ.35ರಷ್ಟು ಪಾಲನ್ನು ಮಾರುತಿ ಕಂಪೆನಿಯ ಕಾರುಗಳು ಪಡೆದುಕೊಂಡಿದ್ದು, ಟ್ಟು 14,43,641 ಕಾರುಗಳು ಮಾರಾಟವಾಗಿದೆ.

    ಯಾವ ಕಾರು ಎಷ್ಟು ಮಾರಾಟವಾಗಿದೆ?
    #1 ಮಾರುತಿ ಆಲ್ಟೋ


    ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 2,41,635 ಅಲ್ಟೋ ಕಾರುಗಳು ಮಾರಾಟವಾಗಿದೆ. ಸತತ 13 ವರ್ಷಗಳಿಂದ ಈ ಪಟ್ಟಿಯಲ್ಲಿ ಅಲ್ಟೋ ನಂಬರ್ ಒನ್ ಸ್ಥಾನಗಳಿಸಿದರೂ ಈ ಹಿಂದಿನ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ.8.27 ಕುಸಿತ ಕಂಡಿದೆ. ಈ ಹಿಂದಿನ ಹಣಕಾಸು ಅವಧಿಯಲ್ಲಿ 2,63,422 ಕಾರುಗಳು ಮಾರಾಟಗೊಂಡಿತ್ತು.

    #2 ವ್ಯಾಗನ್ ಆರ್:


    ಎರಡನೇ ಸ್ಥಾನದಲ್ಲಿ ಮಾರುತಿಯ ವ್ಯಾಗನ್ ಆರ್ ಕಾರು ಇದ್ದು, 1,72,346 ಕಾರುಗಳು ಮಾರಾಟವಾಗಿವೆ. 2015-16ರಲ್ಲಿ 1,69,555 ವಾಗನ್ ಆರ್ ಮಾರಾಟ ಕಂಡಿತ್ತು.

    #3 ಸ್ವಿಫ್ಟ್ ಡಿಸೈರ್:


    ಕಳೆದ ವರ್ಷ 1,67,266ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,939 ಸ್ವಿಫ್ಟ್ ಡಿಸೈರ್ ಮಾರಾಟವಾಗಿತ್ತು.

    #4 ಸ್ವಿಫ್ಟ್:


    1,66,885 ಸ್ವಿಫ್ಟ್ ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,043 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಪ್ 3 ಸ್ಥಾನವನ್ನು ಪಡೆದುಕೊಂಡಿತ್ತು.

    #5. ಗ್ರಾಂಡ್ ಐ10:


    ಹುಂಡೈ ಕಂಪೆನಿಯ ಐ10 5ನೇ ಸ್ಥಾನ ಪಡೆದುಕೊಂಡಿದೆ. ಹಣಕಾಸು ವರ್ಷದಲ್ಲಿ 1,46,228 ಕಾರುಗಳು ಮಾರಾಟವಾಗಿವೆ.

    #6 ಎಲೈಟ್ ಐ20:


    ಹುಂಡೈ ಎಲೈಟ್ ಐ20ಗೆ 6ನೇ ಸ್ಥಾನ ಸಿಕ್ಕಿದ್ದು, 1,26,304 ಕಾರುಗಳು ಮಾರಾಟ ಕಂಡಿದೆ.

    #7 ಬಲೆನೊ:


    ಮಾರುತಿ ಸುಜುಕಿ ಕಂಪೆನಿ ಬಲೆನೊ 1,20,804 ಕಾರುಗಳು ಮಾರಾಟವಾಗಿದೆ.

    #8 ಕ್ವಿಡ್:


    ರೆನಾಲ್ಟ್ ಕಂಪೆನಿಯ ಕ್ವಿಡ್ 8ನೇ ಸ್ಥಾನಗಳಿಸಿದ್ದು, 1,09,341 ಕಾರುಗಳು ಮಾರಾಟ ಕಂಡಿವೆ.

    #9 ವಿಟಾರಾ ಬ್ರೆಜಾ:


    ಮಾರುತಿ ಕಂಪೆನಿಯ ವಿಟಾರಾ ಬ್ರೆಜಾ 1,08,640 ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿದೆ.

    #10 ಸೆಲರಿಯೋ


    ಮಾರುತಿಯ ಸೆಲರಿಯೋ 2016-17ರ ಹಣಕಾಸು ವರ್ಷದಲ್ಲಿ ಒಟ್ಟು 97,361 ಮಾರಾಟ ಕಂಡಿದೆ.

  • 36 ಸಾವಿರ ಡಿಗ್ರಿ ಕಾಲೇಜುಗಳಿದ್ರೂ ಒಬ್ಬ ಸಿವಿ ರಾಮನ್‍ರನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲ: ಪ್ರಣಬ್ ಮುಖರ್ಜಿ ಬೇಸರ

    36 ಸಾವಿರ ಡಿಗ್ರಿ ಕಾಲೇಜುಗಳಿದ್ರೂ ಒಬ್ಬ ಸಿವಿ ರಾಮನ್‍ರನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲ: ಪ್ರಣಬ್ ಮುಖರ್ಜಿ ಬೇಸರ

    ಬೆಂಗಳೂರು: ಭಾರತದಲ್ಲಿ 640 ವಿವಿಗಳಿವೆ, 36 ಸಾವಿರ ಡಿಗ್ರಿ ಕಾಲೇಜುಗಳಿವೆ. ಆದರೆ ಇಲ್ಲಿವರೆಗೂ ಒಬ್ಬ ಸಿವಿ ರಾಮನ್‍ರನ್ನು ಹುಟ್ಟುಹಾಕಲು ಸಾಧ್ಯವಾಗಿಲ್ಲ. ನೋಬೆಲ್ ಪ್ರಶಸ್ತಿ ಪಡೆಯುವ ವ್ಯಕ್ತಿಯನ್ನು ಹುಟ್ಟುಹಾಕಿಲ್ಲ ಅಂತಾ ದೇಶದ ವಿಶ್ವವಿದ್ಯಾಲಯಗಳ ಕಾರ್ಯದ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಸಾಕಷ್ಟು ವಿದ್ಯಾರ್ಥಿಗಳು ಬೇರೆ ದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗ್ತಾರೆ. ನಮ್ಮ ದೇಶದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗ್ತಾ ಇದ್ದಾರೆ ಅಂದ್ರೆ ನಮ್ಮಲ್ಲಿ ಉತ್ತಮ ಶಿಕ್ಷಣ, ಶಿಕ್ಷಕರು ಇಲ್ಲ ಅಂತ ಅಲ್ಲ. ಹೆಚ್ಚಿನ ಜ್ಞಾನಾರ್ಜನೆಗೆ ಹೋಗ್ತಾ ಇರೋದು. ನಮ್ಮಲ್ಲೂ ಸಾಕಷ್ಟು ಉತ್ತಮ ಶಿಕ್ಷಕರು ಇದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಿ. ಜ್ಞಾನ ನಮ್ಮ ವ್ಯಕ್ತಿತ್ವ ಅಭಿವೃದ್ಧಿಯ ಭದ್ರ ಬುನಾದಿಯಾಗಿದೆ ಅಂದ್ರು.

    ನಮ್ಮ ಭಾರತದ ಐಐಟಿಗಳು ವಿಶ್ವದ ಯಾವುದೇ ಶಿಕ್ಷಣ ಸಂಸ್ಥೆಯೊಂದಿಗೆ ಸ್ಪರ್ಧಿಸುವಷ್ಟು ಗುಣಮಟ್ಟ ಹೊಂದಿವೆ. ಸರ್.ಸಿ.ವಿ.ರಾಮನ್, ಅಮರ್ತ್ಯ ಸೇನ್ ಅವರಂತಹ ನೋಬೆಲ್ ಪ್ರಶಸ್ತಿ ವಿಜೇತರೆಲ್ಲಾ ಅಧ್ಯಯನ ಮಾಡಿದ್ದು ಭಾರತೀಯ ವಿಶ್ವವಿದ್ಯಾಲಯಗಳಲ್ಲೇ. ಆದರೆ ಸ್ವಾತಂತ್ರ್ಯಾನಂತರ ಯಾವುದೇ ವಿವಿಯಿಂದ ನೋಬೆಲ್ ಪಡೆಯಲು ಅರ್ಹರಾದವರು ಬರಲೇ ಇಲ್ಲ. ಈಗ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅಂತಹಾ ಗುಣಮಟ್ಟದ ಶಿಕ್ಷಣ ಕೊಡಬೇಕು. ಇಡೀ ವಿಶ್ವದ ವಿದ್ಯಾರ್ಥಿಗಳನ್ನು ಭಾರತೀಯ ವಿವಿಗಳು ಆಕರ್ಷಿಸುವಂತೆ ಆಗಬೇಕು ಅಂತಾ ಹೇಳಿದ್ರು.

    ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಉನ್ನತ ಶಿಕ್ಷಣಕ್ಕಾಗಿ ವಿಶ್ವ ದರ್ಜೆಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರ್ಕಾರದಿಂದ ಈ ಸ್ಕೂಲ್ ಆರಂಭಿಸಲಾಗುತ್ತದೆ. ಆರ್ಥಿಕ ವಿಷಯಗಳ ಅಧ್ಯಯನ ಮತ್ತು ತರಬೇತಿಯನ್ನು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನೀಡಲಿದೆ. ವಿಶ್ವದರ್ಜೆಯ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನ ನೀಡಲಾಗುವುದು. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಕಂಡ ಶಿಕ್ಷಣ ಮತ್ತು ಆರ್ಥಿಕ ಸಮಾನತೆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸ್ಕೂಲ್ ಹೆಜ್ಜೆ ಇಡಲಿದೆ ಅಂತಾ ಹೇಳಿದ್ರು.

    ಇದೇ ವೇಳೆ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡ ಸಿಎಂ, ಅನ್ನಭಾಗ್ಯ ಯೋಜನೆಯನ್ನು ರಾಷ್ಟ್ರೀಯ ಮಾಧ್ಯಮಗಳು ಇದು ಆರ್ಥಿಕ ಹೊರೆಯ ಯೋಜನೆ ಎಂದು ಹೇಳುತ್ತಿವೆ. ಈ ರೀತಿಯ ಟೀಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಸಿವಿನ ತೀವ್ರತೆ ಗೊತ್ತಾಗದವರಿಗೆ ಇದು ಅರ್ಥವಾಗುವುದಿಲ್ಲ ಅಂದ್ರು.

  • ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ನವದೆಹಲಿ: ರಿಲಯನ್ಸ್ ಜಿಯೋ ಆಫರ್‍ಗಳಿಂದಾಗಿ 7 ವರ್ಷದಲ್ಲಿ ಮೊದಲ ಬಾರಿಗೆ 9 ಟೆಲಿಕಾಂ ಕಂಪೆನಿಗಳ ಆದಾಯ 2016-17ರಲ್ಲಿ 18.8 ಲಕ್ಷ ಕೋಟಿ ರೂ.ಗೆ ಕುಸಿತವಾಗಿದೆ ಎಂದು ಹೂಡಿಕೆ ಮಧ್ಯಸ್ಥಿಕೆ ಸಂಸ್ಥೆ ಸಿಎಲ್‍ಎಸ್‍ಎ ಅಂಕಿಅಂಶಗಳನ್ನು ಆಧಾರಿಸಿ ಲೈವ್‍ಮಿಂಟ್ ವರದಿ ಮಾಡಿದೆ.

    ಟೆಲಿಕಾಂ ಕಂಪೆನಿಗಳು 2015- 16ನೇ ಸಾಲಿನಲ್ಲಿ 19.3 ಲಕ್ಷ ಕೋಟಿ ರೂ. ಆದಾಯಗಳಿಸಿದ್ದರೆ, ಮುಂದಿನ ವರ್ಷಗಳಲ್ಲಿ ಈ ಆದಾಯ ಮತ್ತಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    2017-18ನೇ ಸಾಲಿನಲ್ಲಿ 1.84 ಲಕ್ಷ ಕೋಟಿ ರೂ. 2018-19ನೇ ಸಾಲಿನಲ್ಲಿ 18.7 ಲಕ್ಷ ಕೋಟಿ ರೂ. ಆದಾಯ ಬರಬಹುದೆಂದು ಈ ಹಿಂದೆ ಲೆಕ್ಕಾಚಾರ ಹಾಕಲಾಗಿತ್ತಾದರೂ ಅದೂ ಸಹ ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಮುಕ್ತಾಯವಾದ ತ್ರೈಮಾಸಿಕ ಅವಧಿಯಲ್ಲಿ 9 ದೂರಸಂಪರ್ಕ ಕಂಪೆನಿಗಳ ಆದಾಯ ಶೇ. 1.1ರಷ್ಟು ಕುಸಿತವಾಗಿತ್ತು. ಇದು ಕಳೆದ 6 ತ್ರೈಮಾಸಿಕಗಳಲ್ಲೇ ದಾಖಲಾಗಿರುವ ಕಡಿಮೆ ಲಾಭದ ಪ್ರಮಾಣ ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಏರ್‍ಟೆಲ್ ಆದಾಯದಲ್ಲಿ ಶೇ. 10.4ರ ಕುಸಿತವಾಗಿದ್ದರೆ, ಐಡಿಯಾದ ಆದಾಯದಲ್ಲಿ ಶೇ. 10.8ರಷ್ಟು ಇಳಿಕೆಯಾಗಿತ್ತು ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಮೆಸೇಜ್, ಕರೆ, ಆಪ್ ಗಳನ್ನು ಉಚಿತವಾಗಿ ನೀಡಿ, ಡೇಟಾಗೆ ಮಾತ್ರ ಜಿಯೋ ದರ ನಿಗದಿ ಪಡಿಸಿದ ಕಾರಣ ಟೆಲಿಕಾಂ ಕಂಪೆನಿಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಜಿಯೋಗೆ ಸ್ಪರ್ಧೆ ನೀಡಲು ಫೆಬ್ರವರಿಯಲ್ಲಿ ಏರ್‍ಟೆಲ್ ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿತ್ತು. ಮಾರ್ಚ್‍ನಲ್ಲಿ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಂ ಸಂಸ್ಥೆ ವೊಡಾಫೋನ್ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಘೋಷಿಸಿತ್ತು. ಐಡಿಯಾ ಹಾಗೂ ವೊಡಾಫೋನ್  ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ಹೊರಹೊಮ್ಮಲಿದೆ.

    ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿದ್ದ ಜಿಯೋ ಆರಂಭದಲ್ಲಿ ಡಿಸೆಂಬರ್ ವರೆಗೆ ಗ್ರಾಹಕರಿಗೆ ವೆಲಕಂ ಆಫರ್ ನೀಡಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಪ್ಲಾನ್ ಬಿಡುಗಡೆ ಮಾಡಿತ್ತು. ಇದಾದ ಬಳಿಕ 99 ರೂ. ನೀಡಿ ಪ್ರೈಮ್ ಸದಸ್ಯರಾದವರಿಗೆ ಸಮ್ಮರ್ ಸರ್‍ಪ್ರೈಸ್ ಆಫರನ್ನು ಪ್ರಕಟಿಸಿ ಬಳಿಕ ಟ್ರಾಯ್ ನಿರ್ದೇಶನ ಮೇಲೆ ಈ ಆಫರ್‍ಗಳನ್ನು ಜಿಯೋ ಹಿಂದಕ್ಕೆ ಪಡೆದುಕೊಂಡಿದೆ. ಇದಾದ ಬಳಿಕ ಏಪ್ರಿಲ್ 11 ರಂದು ಧನ್ ಧನ ಧನ್ ಹೆಸರಿನಲ್ಲಿ ಮೂರು ತಿಂಗಳು ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್‍ಗಳನ್ನು ಪರಿಚಯಿಸಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಪ್ರಸ್ತುತ ಜಿಯೋಗೆ 10 ಕೋಟಿ ಗ್ರಾಹಕರಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ಸಂಪಾದಿಸುವ ಮೂಲಕ ಜಿಯೋ ವಿಶ್ವದಾಖಲೆ ನಿರ್ಮಿಸಿದೆ.

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

    ಇದನ್ನೂ ಓದಿ: ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್

  • ಭಾರತದ ನಿವೃತ್ತ ನೌಕಾ ಸೇನೆಯ ಅಧಿಕಾರಿಗೆ ಪಾಕ್‍ನಲ್ಲಿ ಗಲ್ಲು ಶಿಕ್ಷೆ

    ಭಾರತದ ನಿವೃತ್ತ ನೌಕಾ ಸೇನೆಯ ಅಧಿಕಾರಿಗೆ ಪಾಕ್‍ನಲ್ಲಿ ಗಲ್ಲು ಶಿಕ್ಷೆ

    ನವದೆಹಲಿ: ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.

    ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿದೆ.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಕೂಲಭೂಷಣ್ ಯಾದವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ಇದನ್ನೂ ಓದಿ: 13 ವರ್ಷದ ಹಿಂದೆ ಸೆಹ್ವಾಗ್ ಮುಲ್ತಾನ್ ಸುಲ್ತಾನ್ ಆದ ಕಥೆ ಓದಿ

  • ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದೆ ಪೆಟ್ರೋಲ್, ಡೀಸೆಲ್ ದರ! ಗ್ರಾಹಕರಿಗೆ ಲಾಭವೇ?

    ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದೆ ಪೆಟ್ರೋಲ್, ಡೀಸೆಲ್ ದರ! ಗ್ರಾಹಕರಿಗೆ ಲಾಭವೇ?

    ನವದೆಹಲಿ: ಇಲ್ಲಿಯವರೆಗೆ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

    ಹೌದು. ಭಾರತೀಯ ತೈಲ ಕಂಪೆನಿಗಳು ಪ್ರತಿದಿನ ತೈಲದರವನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದೆ.

    ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು ಇವರೆಲ್ಲರೂ ಒಟ್ಟಾಗಿ ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಮುಂದಿಟ್ಟಿವೆ. ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಬುಧವಾರ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದಾರೆ.

    ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಈಗ ಇದನ್ನು ಕಾರ್ಯರೂಪಕ್ಕೆ ತರಲು ನಾವು ಸಿದ್ಧರಾಗಿದ್ದೇವೆ. ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಪ್ರತಿದಿನ ದರ ಬದಲಾದರೆ ಗ್ರಾಹಕರಿಗೆ ಮತ್ತು ವಿತರಕರಿಗೆ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.

    ಪ್ರತಿದಿನ ದರವನ್ನು ಪರಿಷ್ಕರಿಸುವ ಹೊಸ ವ್ಯವಸ್ಥೆ ಭಾರತದಲ್ಲಿ ಎಂದಿನಿಂದ ಕಾರ್ಯರೂಪಕ್ಕೆ ಬರುತ್ತದೆ ಎನ್ನುವ ಪ್ರಶ್ನೆಗೆ ಅಧಿಕಾರಿ ಉತ್ತರ ನೀಡಿಲ್ಲ.

    ಗ್ರಾಹಕರಿಗೆ ಲಾಭವೇ?
    ಪ್ರಸ್ತುತ ಈಗ ಪ್ರತಿ 15ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಭಾರೀ ಬೆಲೆ ಏರಿಕೆಯಾದರೆ, ಕೆಲವೊಮ್ಮೆ ಭಾರೀ ಇಳಿಕೆಯಾಗುತ್ತದೆ. ಏರಿಕೆಯಾದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ದಿನ ದರವನ್ನು ಪರಿಷ್ಕರಿಸಿದರೆ ಪ್ರತಿದಿನ ಕೆಲ ಪೈಸೆ ಏರಿಕೆಯಾಗಬಹುದು ಇಲ್ಲವೇ ಕೆಲ ದಿನ ಕೆಲ ಪೈಸೆ ಇಳಿಕೆಯಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಅಷ್ಟೇನು ಹೊರೆ ಬೀಳುವುದಿಲ್ಲ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಅಥವಾ ಏರಿಕೆಯಾದರೂ ವಿಶೇಷವಾಗಿ ಚುನಾವಣೆಯ ಸಂದರ್ಭದಲ್ಲಿ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ತೈಲ ಕಂಪೆನಿಗಳು ಈ ಅವಧಿಯಲ್ಲಿ ದರ ಪರಿಷ್ಕರಣೆಗೆ ಮುಂದಾಗುವುದಿಲ್ಲ. ಒಂದು ವೇಳೆ ಪ್ರತಿದಿನ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಬಂದರೆ ಚುನಾವಣೆಯ ಅವಧಿಯಲ್ಲೂ ದರವನ್ನು ಏರಿಕೆ, ಇಳಿಕೆ ಮಾಡುವ ಸ್ವಾಂತಂತ್ರ್ಯ ಇವುಗಳಿಗೆ ಸಿಗಲಿದೆ.

    ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮಾರ್ಚ್ 31ರಂದು ಭಾರೀ ಇಳಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.77 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 2.91 ರೂ. ಇಳಿಕೆಯಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ದರವನ್ನು ಪರಿಷ್ಕರಿಸುತ್ತಿದ್ದ ತೈಲ ಕಂಪೆನಿಗಳು ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಮಾತ್ರ ಪರಿಷ್ಕರಿಸಲಾಗಿತ್ತು.

    ಭಾರತ ಸರ್ಕಾರ 2010 ರಲ್ಲಿ ಪೆಟ್ರೋಲ್ ನಿಯಂತ್ರಣ ಮುಕ್ತಗೊಳಿಸಿದರೆ, 2014ರಲ್ಲಿ ಡೀಸೆಲ್ ಅನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತ್ತು.

     

  • ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

    ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

    ಬೋಸ್ಟನ್: ಇದೆ ಮೊದಲ ಬಾರಿಗೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾದ ಕ್ಸಿಯೋಮಿ ಕಂಪೆನಿ ನಂಬರ್ ಒನ್ ಬ್ರಾಂಡ್ ಪಟ್ಟಕ್ಕೆ ಏರಿದೆ. ಗ್ರಾಹಕರು ಇಷ್ಟಪಡುವ ಸ್ಮಾರ್ಟ್ ಫೋನ್‍ ಬ್ರಾಂಡ್ ಕಂಪೆನಿಗಳ ಪಟ್ಟಿಯಲ್ಲಿ ಕ್ಸಿಯೋಮಿ ಸ್ಯಾಮ್‍ಸಂಗ್ ಕಂಪೆನಿಯನ್ನು ಸೋಲಿಸಿ ಮೊದಲ ಸ್ಥಾನವನ್ನುಗಳಿಸಿದೆ.

    ಅಮೆರಿಕದ ಸ್ಟ್ರಾಟೆಜಿ ಅನಾಲಿಟಿಕ್ಸ್ ಅಧ್ಯಯನ ನಡೆಸಿ ಭಾರತದ ಟಾಪ್ ಬ್ರಾಂಡ್ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶೇ.26 ರಷ್ಟು ಜನ ಕ್ಸಿಯೋಮಿಯನ್ನು ಇಷ್ಟಪಟ್ಟಿದ್ದರೆ, ಶೇ.12ರಷ್ಟು ಜನ ಸ್ಯಾಮ್‍ಸಂಗ್ ಫೋನ್ ಇಷ್ಟಪಟ್ಟಿದ್ದಾರೆ.

    ಅಧ್ಯಯನದಲ್ಲಿ ಕ್ಯಾಮೆರಾ ಗುಣಮಟ್ಟ, ಮೆಗಾಪಿಕ್ಸೆಲ್, ಸ್ಕ್ರೀನ್ ಗಾತ್ರಗಳನ್ನು ಆಧಾರಿಸಿ ಈ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

    ಭಾರತದಲ್ಲಿ ಶೇ.6 ರಷ್ಟು ಜನ ಮಾತ್ರ 35 ಸಾವಿರ ರೂ. ಗಿಂತಲೂ ಹೆಚ್ಚಿನ ಸ್ಮಾರ್ಟ್ ಫೋನನ್ನು ಖರೀದಿಸುತ್ತಾರೆ. ಸ್ಮಾರ್ಟ್ ಫೋನ್ ಖರೀದಿ ಮಾಡುವ ಜನಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನ 10 ಸಾವಿರ ಮತ್ತು 20 ಸಾವಿರ ರೂ. ಒಳಗಿನ ಫೋನ್‍ಗಳನ್ನು ಖರೀದಿ ಮಾಡುತ್ತಾರೆ ಎಂದು ಅಧ್ಯಯನ ತಿಳಿಸಿದೆ.

    ಸ್ಟ್ರಾಟೆಜಿ ಅನಾಲಿಸ್ಟ್ ಸಂಸ್ಥೆಯ ಉಪಾಧ್ಯಕ್ಷ ಡೇವಿಡ್ ಕೇರ್ ಪ್ರತಿಕ್ರಿಯಿಸಿ, ಭಾರತದಲ್ಲಿ ನೋಕಿಯಾ ಫೋನ್‍ಗಳು ಮಾರುಕಟ್ಟೆಗೆ ಬಿಡುಗಡೆಯಾದರೆ ಆಂಡ್ರಾಯ್ಡ್ ಬ್ರಾಂಡ್‍ಗಳ ನಡುವೆ ಮತ್ತಷ್ಟು ಪೈಪೋಟಿ ಆಗಲಿದೆ ಎಂದಿದ್ದಾರೆ.

    ಸ್ಟ್ರಾಟೆಜಿ ಅನಾಲಿಸ್ಟ್ ಸಂಸ್ಥೆಯ ಹಿರಿಯ ಅನಾಲಿಸ್ಟ್ ರಾಜೀವ್ ನಾಯರ್ ಪ್ರತಿಕ್ರಿಯಿಸಿ, ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ 2016ರ ನಾಲ್ಕನೇಯ ತ್ರೈಮಾಸಿಕದಲ್ಲಿ ಕ್ಸಿಯೋಮಿ ಟಾಪ್ 3 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಅವಧಿಯಲ್ಲಿ ಕ್ಸಿಯೋಮಿ ಶೇ.10 ರಷ್ಟು ಮಾರುಕಟ್ಟೆ ಪಾಲನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.

    ಯಾವುದಕ್ಕೆ ಎಷ್ಟನೇ ಸ್ಥಾನ?:
    ಲೆನೊವೊ ಶೇ.6, ಮೊಟರೊಲಾ ಶೇ.7,ಮೈಕ್ರೋಮ್ಯಾಕ್ಸ್ ಶೇ.2, ಆಪಲ್ ಶೇ.12, ಒನ್ ಪ್ಲಸ್ ಶೇ.6 ರಷ್ಟು ಜನ ಇಷ್ಟಪಡುತ್ತಾರೆ ಎಂದು ಸ್ಟ್ರಟೆಜಿ ಅನಾಲಿಸ್ಟ್ ತಿಳಿಸಿದೆ.

    ಕ್ಸಿಯೋಮಿ ಭಾರತದ ಮಾರುಕಟ್ಟೆಗೆ 2014ರಲ್ಲಿ ಪ್ರವೇಶಿಸಿದ್ದು, ಹೊಸ ಫೋನ್ ಬಿಡುಗಡೆಯಾದ ಸಂದರ್ಭದಲ್ಲಿ ಯಾವುದಾದರು ಒಂದು ಆನ್‍ಲೈನ್ ಶಾಪಿಂಗ್ ತಾಣದ ಜೊತೆ ಒಪ್ಪಂದ ಮಾಡಿಕೊಂಡು ಫ್ಲಾಶ್ ಸೇಲ್ ನಲ್ಲಿ ಆ ಫೋನ್‍ಗಳನ್ನು ಮಾರಾಟ ಮಾಡುವ ಮಾರುಕಟ್ಟೆ ತಂತ್ರವನ್ನು ಅನುಸರಿಕೊಂಡು ಬಂದಿದೆ.

    20 ಸಾವಿರ ರೂ. ಒಳಗಿನ ಫೋನ್‍ಗಳನ್ನು ಹೆಚ್ಚಾಗಿ ಕ್ಸಿಯೋಮಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಕಾರಣಕ್ಕಾಗಿ ಕ್ಸಿಯೋಮಿ ಈಗ ದೇಶದ ನಂಬರ್ ಒನ್ ಗ್ರಾಹಕರು ಇಷ್ಟಪಟ್ಟುವ ಸ್ಮಾರ್ಟ್ ಫೋನ್ ಬ್ರಾಂಡ್ ಕಂಪೆನಿಯಾಗಿದೆ.

    ಇದನ್ನೂ ಓದಿ: 2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

    ಮೂರನೇ ಸ್ಥಾನದಲ್ಲಿ ಕ್ಸಿಯೋಮಿ: 2016 ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿನ ದೇಶದ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಕೌಂಟರ್‍ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ಟಾಪ್ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಶೇ.24 ಪಾಲುಗಳನ್ನು ಪಡೆಯುವ ಮೂಲಕ ಸ್ಯಾಮ್‍ಸಂಗ್ ಮೊದಲ ಸ್ಥಾನದಲ್ಲಿದ್ದರೆ, ಶೇ.10ರಷ್ಟು ಪಾಲುಗಳನ್ನು ಪಡೆಯುವ ಮೂಲಕ ವಿವೊ ಎರಡನೇ ಸ್ಥಾನದಲ್ಲಿತ್ತು. ಕ್ಸಿಯೋಮಿ ಮತ್ತು ಲೆನೊವೊ ಶೇ.9 ರಷ್ಟು ಪಾಲನ್ನು ಪಡೆದಿದ್ದರೆ, ಒಪ್ಪೋ ಶೇ.8ರಷ್ಟು ಪಾಲನ್ನು ಪಡೆದಿತ್ತು.

    2016ರಲ್ಲಿ ಮೈಲಿಗಲ್ಲು: ಕ್ಸಿಯೋಮಿ 2016ರ ಮಾರ್ಚ್ ನಲ್ಲಿ ರೆಡ್‍ಮೀ ನೋಟ್ 3 ಬಿಡುಗಡೆ ಮಾಡಿತ್ತು. ಬಿಡುಗಡೆಯಾದ 5 ತಿಂಗಳಿನಲ್ಲಿ 17 ಲಕ್ಷ ಫೋನ್‍ಗಳನ್ನು ಮಾರಾಟ ಮಾಡಿದ್ದರೆ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಒಟ್ಟು 23 ಲಕ್ಷ ಫೋನ್‍ಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲನ್ನು ಬರೆದಿತ್ತು. ಈ ಮೂಲಕ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾದ ಫೋನ್ ಎಂಬ ಹೆಗ್ಗಳಿಕೆಗೆ ಕ್ಸಿಯೋಮಿ ರೆಡ್ ಮೀ ನೋಟ್ 3 ಪಾತ್ರವಾಗಿತ್ತು.

    ಇದನ್ನೂ ಓದಿ:ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

  • ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟಿಗರು ಪೊಲೀಸರ ವಶಕ್ಕೆ

    ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟಿಗರು ಪೊಲೀಸರ ವಶಕ್ಕೆ

    ಶ್ರೀನಗರ: ಪಾಕಿಸ್ತಾನ ಕ್ರಿಕೆಟ್ ತಂಡದ ಸಮವಸ್ತ್ರ ಧರಿಸಿ ಪಾಕಿಸ್ತಾನ ರಾಷ್ಟ್ರಗೀತೆಯನ್ನು ಹಾಡಿದ್ದ ಕಾಶ್ಮೀರದ ಕ್ರಿಕೆಟಿಗರನ್ನು ಗಂದೇರ್‍ಬಾಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕ್ರಿಕೆಟಿಗರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಅವರೀಗ ಪೊಲೀಸ್ ಠಾಣೆಯಲ್ಲಿ ಇದ್ದಾರೆ ಎಂದು ಕೇಂದ್ರ ಕಾಶ್ಮೀರ ಡಿಐಜಿ ಗುಲಾಮ್ ಹಸನ್ ಭಟ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಪೊಲೀಸರು ಕ್ರಿಕೆಟಿಗರನ್ನು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯರು ಪೊಲೀಸ್ ಠಾಣೆ ಎದುರು ಜಮಾಯಿಸಿ ಯುವಕರನ್ನು ಬಿಡುಗಡೆಗೊಳೀಸುವಂತೆ ಒತ್ತಾಯಿಸಿದ್ದಾರೆಂದು ವರದಿಯಾಗಿದೆ.

    ಕಾಶ್ಮೀರದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದ ಆರಂಭಕ್ಕೂ ಮುನ್ನ ಎರಡರಲ್ಲಿ ಒಂದು ತಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಹಸಿರು ಬಣ್ಣದ ಸಮವಸ್ತ್ರ ಧರಿಸಿ ಪಾಕಿಸ್ತಾನ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ವೇಳೆ ಎದೆ ಮೇಲೆ ಕೈ ಇರಿಸಿಕೊಂಡು ರಾಷ್ಟ್ರಗೀತೆಗೆ ಗೌರವ ಸೂಚಿಸಿದ ವೀಡಿಯೋ ಬುಧವಾರದಂದು ವೈರಲ್ ಆಗಿತ್ತು.

    ಪ್ರಧಾನಿ ಮೋದಿ ಏಪ್ರಿಲ್ 2 ರಂದು ಚೆನಾನಿ – ನಶ್ರಿ ರಸ್ತೆ ಸುರಂಗ ಮಾರ್ಗ ಉದ್ಘಾಟಿಸಲು ಕಾಶ್ಮೀರಕ್ಕೆ ಭೇಟಿ ನೀಡಿದ್ದ ದಿನದಂದೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

    https://www.youtube.com/watch?v=lW6nC77lzV4

  • ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್(ಇವಿಎಂ)ಗಳಲ್ಲಿ ಲೋಪವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಲ್ಲೇ ರಷ್ಯಾ ಭಾರತದ ಇವಿಎಂ ತಂತ್ರಜ್ಞಾನವನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲು ಇಚ್ಛಿಸಿದೆ.

    2018ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಷ್ಯಾ, ಇವಿಎಂಗಳ ಮೂಲಕ ಚುನಾವಣೆಯನ್ನು ಅನಾಯಾಸವಾಗಿ ನಡೆಸುವ ಭಾರತದ ಅನುಭವದಿಂದ ಕಲಿಯಲು ಆಸಕ್ತಿ ತೋರಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

    ರಷ್ಯಾದ ಚುನಾವಣಾ ಆಯೋಗದ ಉಪಾಧ್ಯಕ್ಷರಾದ ನಿಕೋಲೈ ಲೆವಿಚೆವ್ ಇವಿಎಂ ಮೂಲಕ ಓಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಫೆಬ್ರವರಿಯಲ್ಲಿ ಉತ್ತರಾಖಂಡ್‍ಗೆ ಭೇಟಿ ನೀಡಿದ್ದರು. ಅಲ್ಲದೆ ಉತ್ತರಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲೂ ಚುನಾವಣಾಯನ್ನ ವೀಕ್ಷಿಸಿದ್ದು, ಇವಿಎಂ ವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಮಾನವನ ಪಾತ್ರ ಕಡಿಮೆ ಇರೋದನ್ನ ನೋಡಿ ಪ್ರಭಾವಿತರಾಗಿದ್ದಾರೆ ಎಂದು ವರದಿಯಾಗಿದೆ.

    ಲೆವಿಚೆವ್ ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿ, ಇವಿಎಂ ತಂತ್ರಜ್ಞಾನ ಹಾಗೂ ಅದರ ಬಳಕೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಮತ ಎಣಿಕೆಗೆ ಆಧುನಿಕ ಟ್ಯಾಬುಲೇಷನ್ ಪದ್ಧತಿಯನ್ನ ಅಭಿವೃದ್ಧಿಪಡಿಸಲು ಭಾರತಕ್ಕೆ ನೆರವಾಗಲಿದೆ ಎಂದು ವರದಿಯಾಗಿದೆ.

    ಮಿತ್ರರಾಷ್ಟ್ರಗಳು ಭಾರತದ ಚುನಾವಣಾ ಆಯೋಗದ ನೆರವು ಕೇಳ್ತಿರೋದು ಇದೇ ಮೊದಲೇನಲ್ಲ. 2014ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಮತದಾರರ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಬ್ಯಾಲೆಟ್ ಪೇಪರ್ ಕೊರತೆ ಉಂಟಾಗಿತ್ತು. ಆಗ ಭಾರತ ಹೆಚ್ಚುವರಿ ಬ್ಯಾಲೆಟ್ ಪೇಪರನ್ನ ಕಾಬುಲ್‍ಗೆ ಪೂರೈಕೆ ಮಾಡಿತ್ತು. ಭಾರತದಲ್ಲಿ 1999ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಎವಿಎಂ ಬಳಕೆ ಮಾಡಲಾಯ್ತು.

    ಮಧ್ಯಪ್ರದೇಶದ ಇವಿಎಂನಲ್ಲಿ ಲೋಪವಾಗಿದೆ ಎಂದು ತೋರಿಸಿ ದೇಶದೆಲ್ಲಡೆ ಸಂಚಲನಕ್ಕೆ ಕಾರಣವಾದ ವಿಡಿಯೋವೊಂದು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ  ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತ ಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

    ಇದನ್ನೂ ಓದಿ: ಇವಿಎಂ ಪರೀಕ್ಷೆ ವೇಳೆ ಎಸ್‍ಪಿಗೆ ಹಾಕಿದ ಮತ ಬಿಜೆಪಿಗೆ: ಕಾಂಗ್ರೆಸ್ ಗಂಭೀರ ಆರೋಪ

  • ಗುಡ್ ನ್ಯೂಸ್: ಭಾರೀ ಇಳಿಕೆ ಆಯ್ತು ಪೆಟ್ರೋಲ್, ಡೀಸೆಲ್ ಬೆಲೆ

    ಗುಡ್ ನ್ಯೂಸ್: ಭಾರೀ ಇಳಿಕೆ ಆಯ್ತು ಪೆಟ್ರೋಲ್, ಡೀಸೆಲ್ ಬೆಲೆ

    ನವದೆಹಲಿ: ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮೊದಲ ಬಾರಿಗೆ ಭಾರೀ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.77 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 2.91 ರೂ. ಇಳಿಕೆಯಾಗಿದೆ. ಪರಿಷ್ಕೃತ ದರ ಏಪ್ರಿಲ್ 1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 56 ಡಾಲರ್‍ನಿಂದ (3,700 ರೂ.) 54 ಡಾಲರ್‍ಗೆ (3,570 ರೂ.) ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲಗಳ ದರ ಇಳಿಕೆಯಾಗಿದೆ.

    ಮಾರ್ಚ್ 15ರಂದು ಭಾರತೀಯ ತೈಲ ಕಂಪೆನಿಗಳು ದರ ಪರಿಷ್ಕರಣೆ ಮಾಡಲಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 2 ರೂ.ನಿಂದ 2.50 ರೂ.ರವರೆಗೆ ಇಳಿಕೆ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಅಂದು ಯಾವುದೇ ದರ ಪರಿಷ್ಕರಣೆ ಆಗಿರಲಿಲ್ಲ.

    ಪ್ರತಿ 15 ದಿನಗಳಿಗೊಮ್ಮೆ ಭಾರತೀಯ ತೈಲ ಕಂಪೆನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವನ್ನು ನೋಡಿಕೊಂಡು ಬೆಲೆಯನ್ನು ಪರಿಷ್ಕರಿಸುತ್ತಿರುತ್ತವೆ. ಆದರೆ ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆಗೆ ಮುಂದಾಗಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿತ್ತು.

    ಜನವರಿ 15ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 1.03 ಪೈಸೆ ಏರಿಕೆಯಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.28 ರೂ. ಇದ್ದರೆ, ಡೀಸೆಲ್ ಬೆಲೆ 63.16 ರೂ. ಇತ್ತು. ಇಳಿಕೆಯಾದ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 72.51 ರೂ.ಆಗಿದ್ದರೆ, ಡೀಸೆಲ್ ಬೆಲೆ 60.25 ರೂ. ಆಗಿದೆ.

  • ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

    ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

    ನವದೆಹಲಿ: ದೇಶದೆಲ್ಲೆಡೆ ಓದುತ್ತಿರುವ ಮತ್ತು ಮುಂದೆ ಓದಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಈ ಶೈಕ್ಷಣಿಕ ವರ್ಷದಿಂದ ನೀವು ಅರ್ಧದಲ್ಲೇ ಕಾಲೇಜನ್ನು ಬಿಟ್ಟರೂ ಶುಲ್ಕ ಮರುಪಾವತಿಯಾಗಲಿದೆ.

    ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಎಲ್ಲಾ ಕಾಲೇಜುಗಳಿಗೆ ಈ ಶುಲ್ಕವನ್ನು ಮರು ಪಾವತಿಸುವಂತೆ ನಿರ್ದೇಶನ ನೀಡಿದೆ. ಶುಲ್ಕ ಮರುಪಾವತಿಯ ಜೊತೆಗೆ ಕಾಲೇಜುಗಳು ವಿದ್ಯಾರ್ಥಿ ಪ್ರವೇಶಾತಿ ಸಂದರ್ಭದಲ್ಲಿ ನೀಡಿರುವ ಎಲ್ಲ ದಾಖಲೆಗಳನ್ನು 7 ದಿನದ ಒಳಗಡೆ ಹಿಂದಿರುಗಿಸಲು ಸೂಚಿಸಿದೆ.

    ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    2017- 18ರ ಎಐಸಿಟಿಇಯ ಕೈಪಿಡಿ ಪ್ರಕಟವಾಗಿದೆ. ಈ ಕೈಪಿಡಿಯಲ್ಲಿ ಕೋರ್ಸ್ ಆರಂಭವಾಗುವ ಮುನ್ನವೇ ಕಾಲೇಜನ್ನು ಬಿಟ್ಟರೆ ಪ್ರವೇಶಾತಿ ಪ್ರಕ್ರಿಯೆಗಳಿಗೆ 1 ಸಾವಿರ ರೂ. ಶುಲ್ಕಗಳನ್ನು ತೆಗೆದುಕೊಂಡು ಉಳಿದ ಎಲ್ಲ ಶುಲ್ಕಗಳನ್ನು ಮರು ಪಾವತಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.

    ಒಂದು ವೇಳೆ ತರಗತಿ ಆರಂಭಗೊಂಡು ಅರ್ಧದಿಂದ ವಿದ್ಯಾರ್ಥಿ ಕೈಬಿಟ್ಟರೆ ಅದುವರೆಗಿನ ಅವಧಿಯ ಶುಲ್ಕವನ್ನು ಮತ್ತು ಹಾಸ್ಟೆಲ್ ಶುಲ್ಕವನ್ನು ತೆಗೆದುಕೊಂಡು ಉಳಿದ ಶುಲ್ಕವನ್ನು ವಾಪಸ್ ಮಾಡಬೇಕೆಂದು ಸೂಚಿಸಿದೆ.

    ಅರ್ಧದಲ್ಲೇ ಕೈ ಬಿಟ್ಟ ವಿದ್ಯಾರ್ಥಿಗಳ ದಾಖಲೆಗಳನ್ನು ಕಾಲೇಜಿನಲ್ಲೇ ಇಟ್ಟುಕೊಳ್ಳುವುದನ್ನು ಎಐಸಿಟಿಇ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     ಇದನ್ನೂ ಓದಿ: 6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್!

    ಒಂದು ವೇಳೆ ಈ ನಿರ್ದೇಶನವನ್ನು ಕಾಲೇಜುಗಳು ಉಲ್ಲಂಘಿಸಿದಲ್ಲಿ ಕಾಲೇಜುಗಳ ಮೇಲೆ ಎಐಸಿಟಿಇ ಕಠಿಣ ಕ್ರಮವನ್ನು ಕೈಗೊಳ್ಳಲಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾದರೆ ಕೊಡಬೇಕಾಗಿರುವ ಶುಲ್ಕದ ದುಪ್ಪಟ್ಟು ಹಣವನ್ನು ವಿದ್ಯಾರ್ಥಿಗೆ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಕಾಲೇಜಿನ ಕೋರ್ಸ್‍ಗಳಿಗೆ ಮಂಜೂರು ಮಾಡಿದ ಅನುಮೋದನೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಎಐಸಿಟಿಇ ತನ್ನ ಹ್ಯಾಂಡ್ ಬುಕ್‍ನಲ್ಲಿ ಹೇಳಿದೆ.

    ಮಾನವ ಸಂಪನ್ಮೂಲ ಸಚಿವಾಲಯಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸಾಕಷ್ಟು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಐಸಿಟಿಇ ಈ ಕ್ರಮವನ್ನು ಕೈಗೊಂಡಿದೆ. ದೇಶದಲ್ಲಿ 3 ಸಾವಿರಕ್ಕೂ ಅಧಿಕ ನೊಂದಾಯಿತ ಎಂಜಿನಿಯರಿಂಗ್ ಕಾಲೇಜುಗಳಿದ್ದು ಪ್ರತಿವರ್ಷ 7 ಲಕ್ಷ ಎಂಜಿನಿಯರ್ ಪದವೀಧರರು ಹೊರ ಬರುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಯುಜಿಸಿ ಎಲ್ಲ ಕಾಲೇಜುಗಳಿಗೆ ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಪಡೆದುಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿತ್ತು.

     ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?