Tag: ಭಾರತ

  • ಏನಿದು ವನ್ನಾಕ್ರೈ ಸೈಬರ್ ದಾಳಿ? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ?  ಯಾವ ದೇಶದಲ್ಲಿ ಏನಾಗಿದೆ?

    ಏನಿದು ವನ್ನಾಕ್ರೈ ಸೈಬರ್ ದಾಳಿ? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ? ಯಾವ ದೇಶದಲ್ಲಿ ಏನಾಗಿದೆ?

    ಮೇ13ರಂದು ಮೂರನೇ ಮಹಾಯುದ್ಧ ಆರಂಭವಾಗಲಿದೆ. ಬಹುತೇಕ ರಾಷ್ಟ್ರಗಳು ಈ ಯುದ್ಧದ ಪರಿಣಾಮದಿಂದ ತತ್ತರಿಸಲಿದೆ ಎಂದು ದಾರ್ಶನಿಕನೊಬ್ಬ ಭವಿಷ್ಯ ನುಡಿದಿದ್ದ. ಆದರೆ ಈ ಯುದ್ಧ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಈಗ ಸೈಬರ್ ಯುದ್ಧ ಆರಂಭವಾಗಿದ್ದು, ಭಾರತ, ಅಮೆರಿಕ, ಇಂಗ್ಲೆಂಡ್, ರಷ್ಯಾ, ಜರ್ಮನಿ ಒಳಗೊಂಡಂತೆ 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಹ್ಯಾಕರ್ಸ್ ಗಳು ದಾಳಿ ನಡೆಸಿದ್ದಾರೆ. ಹ್ಯಾಕರ್ಸ್‍ಗಳ ಈ ಭಯಾನಕ ದಾಳಿಗೆ ವಿಶ್ವವೇ ಬೆಚ್ಚಿ ಬಿದ್ದಿದೆ. ಹೀಗಾಗಿ ಏನಿದು ಸೈಬರ್ ದಾಳಿ? ಯಾವ ದೇಶದಲ್ಲಿ ಏನು ಸಮಸ್ಯೆಯಾಗಿದೆ ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ದಾಳಿಯಾಗಿದ್ದು ಯಾವಾಗ?
    ಸೈಬರ್ ದಾಳಿ ಹೊಸದೆನಲ್ಲ. ಆದರೆ ಈ ದಾಳಿ ಭಯಾನಕವಾಗಿದ್ದು, ‘ವನ್ನಾ ಕ್ರೈ’ ಎನ್ನುವ ಮಾಲ್‍ವೇರ್‍ನ 100ಕ್ಕೂ ಹೆಚ್ಚು ರಾಷ್ಟ್ರಗಳ ಲಕ್ಷಕ್ಕೂ ಅಧಿಕ ಕಂಪ್ಯೂಟರ್‍ಗಳು ಮೇಲೆ ದಾಳಿ ನಡೆಸಿವೆ. ಶುಕ್ರವಾರ ರಾತ್ರಿಯಿಂದ ಈ ದಾಳಿ ಆರಂಭವಾಗಿದ್ದು, ಬಹುತೇಕ ರಾಷ್ಟ್ರಗಳು ತಲ್ಲಣಗೊಂಡಿವೆ.

    ಏನಿದು wannacry ransomware?
    ಇಲ್ಲಿಯವರೆಗೆ ಹ್ಯಾಕರ್‍ಗಳು ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ನಿಮ್ಮ ಸಿಸ್ಟಂನಲ್ಲಿರುವ ಮಾಹಿತಿ, ಇತ್ಯಾದಿಗಳನ್ನು ಕದಿಯುತ್ತಿದ್ದರು. ಆದರೆ ಇದು ಸ್ವಲ್ಪ ಭಿನ್ನ ಮತ್ತು ಅಪಾಯಕಾರಿ. ಈ ಮಾಲ್ವೇರ್ ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ನಡೆಸಿದರೆ ಮಾಹಿತಿಯನ್ನು ಕದಿಯುವುದು ಮಾತ್ರ ಅಲ್ಲ ನಿಮ್ಮ ಸಿಸ್ಟಂನಲ್ಲಿರುವ ದಾಖಲೆಗಳನ್ನು ಲಾಕ್ ಮಾಡಿ ಬಿಡುತ್ತದೆ. ಹ್ಯಾಕರ್ ಗಳು ತಾವು ಹೇಳಿದ ಸಮಯದೊಳಗೆ, ಕೇಳಿದಷ್ಟು ಹಣವನ್ನು ಪಾವತಿಸದೇ ಇದ್ದರೆ ಈ ದಾಖಲೆಗಳನ್ನೆಲ್ಲ ಡಿಲೀಟ್ ಮಾಡಿಬಿಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಹೀಗಾಗಿ ಇದು ಈಗ ದೊಡ್ಡ ಸಮಸ್ಯೆಯಾಗಿದೆ.

    ದಾಳಿ ನಡೆಸಿದವರು ಯಾರು?
    ಈ ಮಾಲ್ವೇರ್ ದಾಳಿ ನಡೆಸಿದವರು ಯಾರು ಎನ್ನುವುದು ತಿಳಿದುಬಂದಿಲ್ಲ. ಆದರೆ ದಾಳಿ ನಡೆಸಿದ ವ್ಯಕ್ತಿಗಳು ರಾನ್ಸ್‍ಂವೇರ್ ಸಾಫ್ಟ್ ವೇರ್ ಬಳಸಿ ಫೈಲ್‍ಗಳನ್ನು ಲಾಕ್ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಎಲ್ಲಿ ಏನು ಸಮಸ್ಯೆಯಾಗಿದೆ?
    ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‍ಎಚ್‍ಎಸ್) ಸೇರಿದ 37ಕ್ಕೂ ಆಸ್ಪತ್ರೆಗಳಿಗೆ  ಭಾರಿ ಹೊಡೆತ ಬಿದ್ದಿದ್ದು, ವೈದ್ಯರು ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಜಪಾನಿನ ಅಟೋಮೊಬೈಲ್ ಕಂಪೆನಿ ನಿಸ್ಸಾನ್, ಅಮೆರಿಕದ ಅಂಚೆ ಮತ್ತು ಸರಕು ಸಾಗಣೆಯ ಫೆಡ್‍ಎಕ್ಸ್ ಕಂಪೆನಿ, ರಷ್ಯಾದ ಕೇಂದ್ರಿಯ ಬ್ಯಾಂಕ್ ಮತ್ತು ದೂರ ಸಂಪರ್ಕಗಳು, ಸ್ಪೇನಿನ `ಟೆಲಿಫೋನಿಕಾ’ ಸೇರಿದಂತೆ ಪ್ರಮುಖ ಕಂಪೆನಿಗಳ ಕಂಪ್ಯೂಟರ್ ಗಳ ಮೇಲೆ ಈ ದಾಳಿ ನಡೆದಿದೆ.

    ಭಾರತದದಲ್ಲಿ ಎಲ್ಲಿ ದಾಳಿಯಾಗಿದೆ?
    ಆಂಧ್ರದ ಪೊಲೀಸ್ ಇಲಾಖೆಯ ಮೇಲೆ ವನ್ನಾ ಕ್ರೈ ಸೈಬರ್ ದಾಳಿ ನಡೆದಿದೆ. ಸುಮಾರು 25 ಪ್ರತಿಶತ ಕಂಪ್ಯೂಟರ್‍ಗಳು ಈ ಮಾಲ್‍ವೇರ್ ದಾಳಿಯಾಗಿದೆ ಎಂದು ಐಜಿಪಿ ಇ. ದಾಮೋದರ್ ತಿಳಿಸಿದ್ದಾರೆ.

    ಯಾವ ಓಎಸ್ ಮೇಲೆ ದಾಳಿ?
    ಹೆಚ್ಚಾಗಿ ವಿಂಡೋಸ್ ಎಕ್ಸ್ ಪಿ ಆಪರೇಟಿಂಗ್ ಸಿಸ್ಟಮ್ ಬಳಸುವ ಕಂಪ್ಯೂಟರ್‍ಗಳು ತೊಂದರೆಗೀಡಾಗಿದೆ. ದಾಳಿಯ ಬಳಿಕ ಮೈಕ್ರೋಸಾಫ್ಟ್ ವಿಂಡೋಸ್ ಎಕ್ಸ್ ಪಿ,ವಿಂಡೋಸ್ ವಿಸ್ತಾ, ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಸೆಕ್ಯೂರಿಟಿ ಅಪ್‍ಡೇಟ್ ನೀಡಿದೆ.

    ಹ್ಯಾಕರ್ಸ್ ಬೇಡಿಕೆ ಏನು?
    ಬಿಟ್‍ಕಾಯಿನ್ ರೂಪದಲ್ಲಿ ತಾವು ತಿಳಿಸಿದ ನಂಬರ್‍ಗೆ 300 ಡಾಲರ್ (ಸುಮಾರು 19,000 ರೂ.) 3 ದಿನಗಳೊಳಗೆ ಒಳಗಡೆ ನೀಡಬೇಕು. ಈ ಡೆಡ್‍ಲೈನ್ ಮೀರಿದರೆ 6 ದಿನಗಳ ಒಳಗಡೆ 600 ಡಾಲರ್(ಸುಮಾರು 38,500 ರೂಪಾಯಿ) ನೀಡಬೇಕಾಗುತ್ತದೆ. ಒಂದು ವೇಳೆ ಇಷ್ಟು ಮೊತ್ತದ ಹಣವನ್ನು ಪಾವತಿ ಮಾಡದೇ ಇದ್ದರೆ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

    ಬಿಟ್‍ಕಾಯಿನ್ ನಲ್ಲಿ ಪಾವತಿಸಲು ಹೇಳಿದ್ದೇಕೆ?
    ಭಾರತದಲ್ಲಿ ಹೇಗೆ ರೂಪಾಯಿ, ಅಮೆರಿಕದಲ್ಲಿ ಡಾಲರ್ ಇದೆಯೋ ಅದೇ ರೀತಿಯಾಗಿ ಇಂಟರ್‍ನೆಟ್‍ನಲ್ಲಿ ಬಳಕೆಯಾಗುತ್ತಿರುವ ವರ್ಚುಯಲ್ ಹಣವೇ ಬಿಟ್‍ಕಾಯಿನ್. ಈ ಹಣ ಕಣ್ಣಿಗೆ ಕಾಣುವುದಿಲ್ಲ ಮತ್ತು ಮನೆಗೆ ತರಲಾಗುವುದಿಲ್ಲ. ಈ ಬಿಟ್ ಕಾಯಿನ್ ಪರಿಚಯಿಸಿದ ವ್ಯಕ್ತಿ ಯಾರು ಎನ್ನುವ ಬಗ್ಗೆ ಇನ್ನು ಗೊಂದಲವಿದೆ. ಈ ಬಿಟ್ ಕಾಯಿನ್‍ಗಳನ್ನು ಸರ್ಕಾರ ಅಥವಾ ಯಾವುದೇ ಬ್ಯಾಂಕ್ ನಿಯಂತ್ರಿಸುವುದಿಲ್ಲ. ಸಮೂಹವೊಂದು ಬಿಟ್ ಕಾಯಿನ್ ಅನ್ನು ನಿಯಂತ್ರಿಸುತ್ತಿದೆ. ಆದರೆ ಬಿಟ್ ಕಾಯಿನ್ ಮೂಲಕ ವ್ಯವಹಾರ ನಡೆಸಿದವರು ಯಾರು ಎನ್ನುವ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಬಿಟ್ ಕಾಯಿನ್ ಮೂಲಕ ಈ ಹ್ಯಾಕರ್ಸ್ ಗಳು ಹಣಗಳಿಸುವ ದಂಧೆಗೆ ಇಳಿದಿದ್ದಾರೆ.

    ದಾಳಿಯಾಗಿದೆ ಎಂದು ತಿಳಿಯುವುದು ಹೇಗೆ?
    ಯಾವುದೋ ಇಮೇಲ್‍ಗೆ ಅಟ್ಯಾಚ್ ಆಗಿ ಈ ಮಾಲ್ವೇರ್ ಅನ್ನು ಹ್ಯಾಕರ್ಸ್ ಹರಿಯಬಿಡುತ್ತಾರೆ. ಈ ಮೇಲ್ ಓಪನ್ ಮಾಡಿದ ತಕ್ಷಣ ನಿಮ್ಮ ಕಂಪ್ಯೂಟರ್ ಮಾತ್ರ ಅಲ್ಲದೇ ಕಂಪ್ಯೂಟರ್ ಜೊತೆಗೆ ಸಂಪೂರ್ಣ ಡಿನ್‍ಎಸ್(ಡೊಮೈನ್ ನೇಮ್ ಸಿಸ್ಟಂಗೆ) ಮೇಲೆ ದಾಳಿ ಮಾಡುತ್ತದೆ. ದಾಳಿಯಾದ ಬಳಿಕ ಕಂಪ್ಯೂಟರ್ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಹ್ಯಾಕರ್ಸ್‍ಗಳು ನಾವು ನಿಮ್ಮ ಕಂಪ್ಯೂಟರ್ ಲಾಕ್ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೆಸೇಜ್ ಸ್ಕ್ರೀನ್ ನಲ್ಲಿ ಕಾಣುತ್ತದೆ.

    ಅಮೆರಿಕದ ಎಡವಟ್ಟಿನಿಂದ ದಾಳಿ?
    ವಿಂಡೋಸ್ ಎಕ್ಸ್‍ಪಿ ಸಾಫ್ಟ್ ವೇರ್‍ನಲ್ಲಿದ್ದ ದೋಷವೊಂದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‍ಎಸ್‍ಎ) ಪತ್ತೆ ಹಚ್ಚಿತ್ತು. ಎನ್‍ಎಸ್‍ಎ ಪತ್ತೆಹಚ್ಚಿದ್ದ ಈ ಕೋಡ್‍ಗಳನ್ನು ಶ್ಯಾಡೋಬ್ರೋಕರ್ಸ್ ಎನ್ನುವ ಗುಂಪೊಂದು ಕದ್ದು ಏಪ್ರಿಲ್‍ನಲ್ಲಿ ಇಂಟರ್‍ನೆಟ್ ನಲ್ಲಿ ಹರಿಯಬಿಟ್ಟಿತ್ತು. ಈ ಕೋಡ್ ಬಳಸಿಕೊಂಡು ಈಗ ರಾನ್ಸಂವೇರ್ ಮಾಲ್ವೇರನ್ನು ಹ್ಯಾಕರ್ ಗಳು ಹರಿಯಬಿಟ್ಟಿದ್ದಾರೆ ಎಂದು ಸೈಬರ್ ಭದ್ರತಾ ಸಂಸ್ಥೆಗಳ ಆರೋಪ. ಆದರೆ ಈ ಆರೋಪವನ್ನು ಅಮೆರಿಕ ಎನ್‍ಎಸ್‍ಎ ನಿರಾಕರಿಸಿದೆ.

    ದಾಳಿಯಾದ್ರೆ ಮುಂದೇನು ಮಾಡಬೇಕು?
    ವನ್ನಾಕ್ರೈ ಸಾಫ್ಟ್ ವೇರ್ ಮೂಲಕ ಕಂಪ್ಯೂಟರ್‍ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‍ಗಳು ಮಾರ್ಪಡಿಸಿದ್ದರಿಂದ ದಾಳಿಗೆ ಒಳಗಾಗಿರುವ ಕಂಪ್ಯೂಟರ್‍ಗಳಲ್ಲಿ ಫೈಲ್ ಓಪನ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಂದೋ ನೀವು ಅವರು ಬೇಡಿಕೆ ಇಟ್ಟಷ್ಟು ಹಣವನ್ನು ನೀಡಬೇಕು ಇಲ್ಲದಿದ್ದರೆ, ನಿಮ್ಮ ದಾಖಲೆಗಳನ್ನು ಕಳೆದುಕೊಳ್ಳಲು ಸಿದ್ಧರಾರಾಗಬೇಕು.

    ದಾಳಿಯಾಗದಂತೆ ತಡೆಯುವುದು ಹೇಗೆ?
    ಇಮೇಲ್ ಓಪನ್ ಮಾಡುವಾಗ ಜಾಗೃತೆ ವಹಿಸಿ. ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ಆಗಾಗ ಅಪ್‍ಡೇಟ್ ಮಾಡಿಕೊಳ್ಳಿ. ಆಂಟಿ ವೈರಸ್ ಸಾಫ್ಟ್ ವೇರ್ ಇನ್ ಸ್ಟಾಲ್ ಮಾಡಿ.

    ದಾಳಿಯ ಎಚ್ಚರಿಕೆ ನೀಡಿದ್ದ ಭಾರತೀಯ ವೈದ್ಯ:
    ಭಾರತೀಯ ಮೂಲದ ವೈದ್ಯ ಲಂಡನ್ ನ್ಯಾಷನಲ್ ಹಾಸ್ಪಿಟಲ್ ಫಾರ್ ನ್ಯೂರಾಲಜಿಯ ನರ ವಿಜ್ಞಾನ ತಜ್ಞ ಡಾ. ಕೃಷ್ಣ ಚಿಂತಾಪ ಅವರು ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ ಮೇಲೆ ಸೈಬರ್ ದಾಳಿಯ ಎಚ್ಚರಿಕೆಯನ್ನು ಬುಧವಾರ ನೀಡಿದ್ದರು. ಮೆಡಿಕಲ್ ಜರ್ನಲ್ ಗೆ ಬರೆದ ಲೇಖನದಲ್ಲಿ, ಕೇಂಬ್ರಿಡ್ಜ್ ಆಸ್ಪತೆಯ ನರ್ಸ್ ಒಬ್ಬರು ಇಮೇಲ್ ತೆರದ ಬಳಿಕ ಆಸ್ಪತ್ರೆಯ ಕಂಪ್ಯೂಟರ್‍ಗಳು ಮೇಲೆ ಹೇಗೆ ದಾಳಿ ಆಯ್ತು ಎನ್ನುವುದನ್ನು ವಿವರಿಸಿದ್ದರು. ಇವರು ಬರೆದ ಲೇಖನ ಪ್ರಕಟಗೊಂಡ ಎರಡೇ ದಿನದಲ್ಲಿ ಸೈಬರ್ ದಾಳಿಯಾಗಿದೆ.

    ವಿಪ್ರೋ ಮೇಲೆ ದಾಳಿ ಬೆದರಿಕೆ ಹಾಕಿದ್ದು ಇವರೇನಾ?
    ಮೇ ಮೊದಲ ವಾರದಲ್ಲಿ ಬೆಂಗಳೂರಿನ ವಿಪ್ರೋ ಕಚೇರಿಗೆ ಬೆದರಿಕೆ ಇಮೇಲ್ ಬಂದಿತ್ತು. ಈ ಮೇಲ್‍ನಲ್ಲಿ ಬಿಟ್ ಕಾಯಿನ್ ಮೂಲಕ 500 ಕೋಟಿ ಡಿಜಿಟಲ್ ಕರೆನ್ಸಿ ನೀಡುವಂತೆ ಬೇಡಿಕೆ ಇಟ್ಟಿದ್ದ ಸಂದೇಶವಿತ್ತು. ಒಂದು ವೇಳೆ ಮೆ 25ರ ಒಳಗಡೆ ಈ ಬೇಡಿಕೆಯನ್ನು ಈಡೇರಿಸಿದೇ ಇದ್ದರೆ ಸಂಸ್ಥೆಯ ರಾಸಾಯನಿಕ ದಾಳಿ ನಡೆಸಲಾಗುವುದು ಎನ್ನುವ ಬೆದರಿಕೆ ಇಮೇಲ್‍ನಲ್ಲಿತ್ತು. ಈಗ ಈ ಸೈಬರ್ ದಾಳಿ ನಡೆದ ಬಳಿಕ ವಿಪ್ರೋದ ಮೇಲೆ ದಾಳಿ ಬೆದರಿಕೆ ನಡೆಸಿದವರು ಇವರೇನಾ ಎನ್ನುವ ಶಂಕೆ ಮೂಡಿದೆ.

    ಇದನ್ನೂ ಓದಿ:ಬಿಟ್‍ಕಾಯಿನ್ ಮೂಲಕ 500 ಕೋಟಿ ಕೊಡಿ, ಇಲ್ಲವಾದ್ರೆ ರಿಸಿನ್ ವಿಷ ಹಾಕಿ ಕೊಲ್ತೀವಿ – ವಿಪ್ರೋ ಸಂಸ್ಥೆಗೆ ಬೆದರಿಕೆ

     

  • ಸಿದ್ದು ಸರ್ಕಾರಕ್ಕೆ 4 ವರ್ಷ, ಮೋದಿ ಸರ್ಕಾರಕ್ಕೆ 3 ವರ್ಷ ಬೆಸ್ಟ್ ಯಾರು?

    ಸಿದ್ದು ಸರ್ಕಾರಕ್ಕೆ 4 ವರ್ಷ, ಮೋದಿ ಸರ್ಕಾರಕ್ಕೆ 3 ವರ್ಷ ಬೆಸ್ಟ್ ಯಾರು?

    ಸಿದ್ದರಾಮಯ್ಯ ಸರ್ಕಾರ ಬೆಸ್ಟೋ? ಮೋದಿ ಸರ್ಕಾರ ಬೆಸ್ಟೋ? ಈ ಚರ್ಚೆಗಳು ಜೋರಾಗಿಯೇ ನಡೀತಾ ಇವೆ. ರಾಜ್ಯ ಸರ್ಕಾರಕ್ಕೆ ನಾಲ್ಕು, ಮೋದಿ ಸರ್ಕಾರಕ್ಕೆ ಮೂರು ವರ್ಷದ ಹೊಸ್ತಿಲು. ಈ ಅವಧಿಯಲ್ಲಿ ಯಾರು ಏನು ಮಾಡಿದ್ರು..? ಯಾರಿಗೆಷ್ಟು ಲಾಭ, ನಷ್ಟ? ಡಿಟೇಲ್ ಸ್ಟೋರಿ ಇಲ್ಲಿದೆ.

    ಎದ್ದೇಳ್ತಾರೆ.. ಬಿದ್ದೋಗ್ತಾರೆ.. ಎದ್ದೇಳ್ತಾರೆ.. ಬಿದ್ದೋಗ್ತಾರೆ.. ಇದು ಕೈ ಸರ್ಕಾರದಲ್ಲಿ ನಡೆದ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಎದ್ದು ಬಿದ್ದೇಳುವ ಪ್ರಸಂಗ. ಈ ಪ್ರಸಂಗವನ್ನು ಸುಳ್ಳಾಗಿಸಿ ಐದನೇ ವರ್ಷಕ್ಕೆ ಕಾಲಿಡ್ತಿದ್ದಾರೆ ಸಿದ್ದರಾಮಯ್ಯ. ಯೆಸ್, ಮೇ 13ಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ 4 ವರ್ಷ.

    ಭಾಗ್ಯಗಳ ಸರದಾರ, ಅಹಿಂದ ಪರ ಎನ್ನಿಸಿಕೊಂಡ ಸಿದ್ದು ಸರ್ಕಾರ ಕೂಡ ಅನೇಕ ಟೀಕೆಗಳು, ಆರೋಪಗಳಿಂದ ಹೊರತಾಗಿರಲಿಲ್ಲ. ಸಮಾಜವಾದಿ ನೆಲೆಗಟ್ಟಿನಲ್ಲೇ ಬೆಳೆದ ನಾಯಕ ಮಜಾವಾದಿತನ ಪ್ರದರ್ಶಿಸಿದ ಟೀಕೆಗೂ ಗುರಿಯಾಗಿ ದೇಶದ ಗಮನ ಸೆಳೆದಿದ್ದು ಕೂಡ ವಿಪರ್ಯಾಸವೇ ಸರಿ. ಸ್ವಪಕ್ಷೀಯರ ಮೇಲಾಟ, ವಿಪಕ್ಷಗಳ ಕಾದಾಟದ ನಡುವೆಯೇ ಸಿದ್ದರಾಮಯ್ಯ ಚದುರಾಂಗದಾಟ ಸಕ್ಸಸ್ ಆಯ್ತಾ ಅನ್ನೋ ಚರ್ಚೆಗಳು ಕೂಡ ಜೋರಾಗಿಯೇ ನಡೀತಾ ಇವೆ.ಸಿದ್ದರಾಮಯ್ಯ ವೈಯುಕ್ತಿಕವಾಗಿ ಸಕ್ಸಸ್ ಆದ್ರೆ, ಪಕ್ಷಕ್ಕೆ ಸಕ್ಸಸ್ ತರುವ ವಿಚಾರದಲ್ಲಿ ಸೋತಿದ್ದಾರೆ ಅನ್ನೋ ಲೆಕ್ಕಚಾರಗಳು ನಡೆದಿವೆ. ಹಾಗಾದ್ರೆ ಸಿದ್ದು ಸರ್ಕಾರದ ಕಳಂಕಗಳು, ಸಾಧನೆಗಳು, ಸಂಕಷ್ಟಗಳು ಏನು ಅನ್ನೋದ್ರ ಹೈಲೈಟ್ಸ್ ಇಲ್ಲಿದೆ.

    4 ವರ್ಷದ 4 ಕಳಂಕಗಳು
    1. ಹೈಕಮಾಂಡ್‍ಗೆ ಕಪ್ಪ ಡೈರಿ
    2. ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್ ಯೋಜನೆ
    3. ಹ್ಯುಬ್ಲೋಟ್ ವಾಚು ಹಗರಣ
    4. ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣ ಆರೋಪ

    4 ಕೇಸು, 4 ರಾಜೀನಾಮೆ
    1. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಂತೋಷ್ ಲಾಡ್ ರಾಜೀನಾಮೆ
    2. ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ- ಪಿ.ಟಿ. ಪರಮೇಶ್ವರ ನಾಯಕ್ ತಲೆದಂಡ
    3. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ
    4. ರಾಸಲೀಲೆ ಪ್ರಕರಣದಲ್ಲಿ ಸಚಿವ ಎಚ್.ವೈ. ಮೇಟಿ ರಾಜೀನಾಮೆ

     4 ವರ್ಷದ 4 ಪ್ರಮುಖ ಸಾಧನೆಗಳು
    1. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ ಯೋಜನೆ
    2. ರಾಜ್ಯಾದ್ಯಂತ ಶುದ್ಧ ನೀರಿನ ಘಟಕಗಳ ಆರಂಭ
    3. ಬುಡಕಟ್ಟು, ತಾಂಡಾದಲ್ಲಿ ವಾಸಿಸುವವರೇ ಮನೆ ಒಡೆಯ ಹಕ್ಕು
    4. ತಮಿಳುನಾಡು ಮಾದರಿಯಲ್ಲೇ ಇಂದಿರಾ ಕ್ಯಾಂಟೀನ್

    ಮೋದಿ ಸಾಧನೆ, ವೈಫಲ್ಯ:
    ಈ ನಡುವೆ ಮೂರು ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ, ವೈಫಲ್ಯಗಳ ಲೆಕ್ಕಚಾರ ಕೂಡ ನಡೆಯುತ್ತಿದೆ. ಮೇ 23ಕ್ಕೆ ಮೋದಿ ಸರ್ಕಾರಕ್ಕೆ 3 ವರ್ಷ ತುಂಬಲಿದೆ. ಈ ಮೂರು ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ್ದು, ಇಡೀ ಪ್ರಪಂಚವೇ ದೇಶದತ್ತ ತಿರುಗಿ ನೋಡಿದ್ದು ನೋಟ್‍ಬ್ಯಾನ್‍ನಿಂದಾಗಿ.

    ಯೆಸ್, ನೋಟ್‍ಬ್ಯಾನ್ ಮೋದಿ ಸರ್ಕಾರದ ಸಾಧನೆ ಅಂತಾ ಕಮಲ ಪಡೆ ಬಣ್ಣಿಸುತ್ತಿದೆ. ಆದರ ಜತೆಗೆ ಸರ್ಜಿಕಲ್ ಸ್ಟ್ರೈಕ್ ಕೂಡ ಮೋದಿ ಸರ್ಕಾರ ಉತ್ತಮ ಕಾರ್ಯ ಅಂತಾ ಶ್ಲಾಘಿಸಲಾಗ್ತಿದೆ. ಆದ್ರೆ ಈ ಎರಡು ನಿರ್ಧಾರಗಳೇ ಅಷ್ಟೇ ಟೀಕೆಗಳಿಗೂ ಕಾರಣವಾಗಿದ್ವು ಎನ್ನುವುದನ್ನ ಮರೆಯುವಂತಿಲ್ಲ. ಈ ನಡುವೆ ಸ್ವಚ್ಛ ಭಾರತ್, ಡಿಜಿಟಲ್ ಇಂಡಿಯಾ, ಜನಾಧನ್‍ಯೋಜನೆಗಳು ಹೆಚ್ಚು ಜನಪ್ರಿಯವಾಗಿವೆ. ಆದ್ರೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತಾ ವಿವಾದ ಸೃಷ್ಟಿಯಾಗಿದ್ದೇ ದೊಡ್ಡ ಸುದ್ದಿ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತಾ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳೇ ನಡೆದವು.

    ಒಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ 4 ವರ್ಷ, ಮೋದಿ ಸರ್ಕಾರಕ್ಕೆ 3 ವರ್ಷ. ಈ ಎರಡು ಸರ್ಕಾರಗಳ ಸಾಧನೆ, ವೈಫಲ್ಯಗಳನ್ನ ರಾಜ್ಯದ ಜನರು ಅಳೆದು ತೂಗುತ್ತಿದ್ದು, 2018ರ ಚುನಾವಣೆಯಲ್ಲಿ ಈ ಮೋದಿಯ ಸಕ್ಸಸ್ ಜಾತ್ರೆ, ಸಿದ್ದರಾಮಯ್ಯ ಗೆಲುವಿನ ಯಾತ್ರೆಗೆ ತೊಡಕಾಗುತ್ತಾ…? ಮೋದಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡ್ತಾರಾ..? ಯಾರು ಯಾರನ್ನ ಕೆಡವಲು ಮುಂದಾಗ್ತಾರೆ ಅನ್ನೋದು ಸದ್ಯದ ಕುತೂಹಲ.

  • ಈ ನಗರಗಳಲ್ಲಿ ಆಗ್ತಿದೆ ಜಿಯೋ ಫೈಬರ್ ಬ್ರಾಂಡ್‍ಬ್ಯಾಂಡ್ ಟೆಸ್ಟಿಂಗ್: ನಿಮ್ಮ ನಗರ ಇದ್ಯಾ?

    ಈ ನಗರಗಳಲ್ಲಿ ಆಗ್ತಿದೆ ಜಿಯೋ ಫೈಬರ್ ಬ್ರಾಂಡ್‍ಬ್ಯಾಂಡ್ ಟೆಸ್ಟಿಂಗ್: ನಿಮ್ಮ ನಗರ ಇದ್ಯಾ?

    ಮುಂಬೈ: ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಡೇಟಾ ನೀಡಿ ಕಮಾಲ್ ಮಾಡಿದ್ದ ಜಿಯೋ ಈಗ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲು ಮುಂದಾಗುತ್ತಿದ್ದು ಕೆಲ ನಗರಗಳಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ.

    ವ್ಯಕ್ತಿಯೊಬ್ಬರು ಜಿಯೋ ಫೈಬರ್ ಸೇವೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಕೇಳಿದ್ದಕ್ಕೆ ಜಿಯೋ ಕೇರ್ ಮುಂಬೈ, ದೆಹಲಿ ಎನ್‍ಸಿಆರ್, ಅಹಮದಾಬಾದ್, ಜಾಮ್‍ನಗರ, ಸೂರತ್ ಮತ್ತು ವಡೋದರಾದಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಉತ್ತರಿಸಿದೆ.

    ಈ ವೇಳೆ ದೇಶದ ಮತ್ತಷ್ಟು ನಗರಗಳಲ್ಲಿ ಈ ಸೇವೆಯನ್ನು ಪರಿಚಯಿಸಲಾಗುತ್ತದೆ ಎಂದು ತಿಳಿಸಿದ್ದು, ಪಟ್ಟಿಯಲ್ಲಿ ಯಾವೆಲ್ಲ ನಗರಗಳಿವೆ ಎನ್ನುವ ಮಾಹಿತಿಯನ್ನು ತಿಳಿಸಿಲ್ಲ.

    ಈಗಾಗಲೇ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಪಡೆಯುವ ಕೆಲ ಗ್ರಾಹಕರು ಈ ಹಿಂದೆ ಟ್ವೀಟ್ ಮಾಡಿದ್ದು, 1 ಜಿಬಿಪಿಎಸ್ ಸಂಪರ್ಕದಲ್ಲಿ 70 ಎಂಬಿಪಿಎಸ್ 100 ಎಂಬಿಪಿಎಸ್ ಡೇಟಾ ಸ್ಪೀಡ್ ಸಿಕ್ಕಿದೆ ಎಂದು ಹೇಳಿದ್ದರು. ಪುಣೆಯಲ್ಲಿ 743.28 ಎಂಬಿಪಿಎಸ್ ಡೇಟಾ ಸ್ಪೀಡ್ ದಾಖಲಾಗಿತ್ತು.

    ಈ ಫೈಬರ್ ಸೇವೆಯನ್ನು ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಜಿಯೋ ಇನ್ನು ಅಧಿಕೃತವಾಗಿ ತಿಳಿಸಿಲ್ಲ. ಜಿಯೋ ಫೈಬರ್ ರೂಟರ್ ಬೆಲೆ 4 ಸಾವಿರ- 4,500 ರೂ. ಇರಲಿದೆ ಎಂದು ಹೇಳಲಾಗುತ್ತಿದ್ದು, ಖರೀದಿಸಿದ ಮೊದಲ 90 ದಿನ ಈ ಸೇವೆ ಜಿಯೋದಂತೆ ಉಚಿತವಾಗಿ ಸಿಗಲಿದೆ

    2016ರ ಸೆಪ್ಟೆಂಬರ್ ನಲ್ಲಿ ನಡೆದ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಮಲ್ಟಿ ಗಿಗಾಬೈಟ್ ಸೇವೆಯನ್ನು ದೇಶದ 100 ನಗರಗಳಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದ್ದರು.

    ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

  • ದ್ವಿಚಕ್ರ ವಾಹನ ಮಾರಾಟದಲ್ಲಿ ಚೀನಾ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ ಭಾರತ

    ದ್ವಿಚಕ್ರ ವಾಹನ ಮಾರಾಟದಲ್ಲಿ ಚೀನಾ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ ಭಾರತ

    ನವದೆಹಲಿ: ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರತ ಈಗ ಚೀನಾವನ್ನು ಹಿಂದಿಕ್ಕಿದ್ದು, ಕಳೆದ ವರ್ಷ ಒಟ್ಟು 1.77 ಕೋಟಿ ದ್ವಿಚಕ್ರ ವಾಹನ ದೇಶದಲ್ಲಿ ಮಾರಾಟವಾಗಿದೆ. ದಿನದ ಲೆಕ್ಕಾಚಾರರ ಹಾಕಿದರೆ ಪ್ರತಿದಿನ ಅಂದಾಜು 48 ಸಾವಿರ ದ್ವಿಚಕ್ರ ವಾಹನಗಳು ಮಾರಾಟವಾಗಿದೆ.

    ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನ್ಯುಫ್ಯಾಕ್ಚರ್ಸ್ ನ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವನ್ನು ತಿಳಿಸಿದ್ದು, ಭಾರತದಲ್ಲಿ 1.77 ಕೋಟಿ ಮಾರಾಟವಾಗಿದ್ದರೆ, ಚೀನಾದಲ್ಲಿ 1.68 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದೆ ಎಂದು ಅವರು ಹೇಳಿದ್ದಾರೆ.

    ಮಾರಾಟ ಹೆಚ್ಚಾಗಿದ್ದು ಹೇಗೆ?
    ಗ್ರಾಮೀಣ ಭಾಗದ ಜನರ ಆದಾಯ ಹೆಚ್ಚಾಗುತ್ತಿರುವ ಜೊತೆ ರಸ್ತೆಗಳು ಈಗ ಅಭಿವೃದ್ಧಿಯಾಗುತ್ತಿರುವುದಿಂದ ಗಣನೀಯವಾಗಿ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ. ಇದರ ಜೊತೆಗೆ ಮಹಿಳಾ ಸವಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಾರಾಟದಲ್ಲಿ ಏರಿಕೆಯಾಗಿದೆ.

    ಸರ್ಕಾರ ಈಗ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ವಿಶೇಷವಾಗಿ ಭಾರೀ ಪ್ರಮಾಣದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ಸುಲಭವಾದ ಹಣಕಾಸು ಆಯ್ಕೆಗಳು, ಆನ್‍ಲೈನ್ ವ್ಯವಹಾರಗಳಿಗೆ ಉತ್ತೇಜನದಂತಹ ಕಾರಣಗಳಿಂದಾಗಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಹೆಸರನ್ನು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಚೀನಾದಲ್ಲಿ ಇಳಿಕೆಯಾಗಿದ್ದು ಯಾಕೆ?
    ಕಳೆದ ಕೆಲ ವರ್ಷಗಳಿಂದ ಚೀನಾದ ಮಾರುಕಟ್ಟೆ ಇಳಿಕೆಯಾಗುತ್ತಿದೆ. ಇದರ ಜೊತೆಯಲ್ಲಿ ಈಗ ಅಲ್ಲಿ ಪೆಟ್ರೋಲ್ ಗಿಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿರುವುದರಿಂದ ಕಳೆದ ವರ್ಷ 1.68 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದೆ.

    ಇಂಡೋನೇಷ್ಯಾಕ್ಕೆ ಮೂರನೇ ಸ್ಥಾನ ಸಿಕ್ಕಿದ್ದು, 2015ಕ್ಕೆ ಹೋಲಿಸಿದರೆ ಮಾರಾಟ ಕಡಿಮೆಯಾಗಿದ್ದು ಕಳೆದ ವರ್ಷ 60 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2015ರಲ್ಲಿ 65 ಲಕ್ಷ ದ್ವಿಚಕ್ರ ವಾಹನಗಳು ಅಲ್ಲಿ ಮಾರಾಟವಾಗಿತ್ತು.

    ಆಟೋಮೊಬೈಲ್ ಕ್ಷೇತ್ರದ ಪರಿಣಿತರು ಮುಂದಿನ ವರ್ಷ ಶೇ.9 ರಿಂದ 11ರಷ್ಟು ಈ ಕ್ಷೇತ್ರ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದ್ದಾರೆ. ಕಡಿಮೆ ಬೆಲೆಯ ದ್ವಿಚಕ್ರ ವಾಹನದ ಜೊತೆ ಜನರು 1 ಲಕ್ಷಕ್ಕೂ ಅಧಿಕ ಬೆಲೆಯ ವಾಹನವನ್ನು ಖರೀದಿಸುತ್ತಿದ್ದು, ರಾಯಲ್ ಎನ್‍ಫೀಲ್ಡ್ ಬೈಕ್‍ಗಳ ಮಾರಾಟ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.30ರಷ್ಟು ಏರಿಕೆಯಾಗಿದೆ.

    ಇದನ್ನೂ ಓದಿ: ಏನಿದು ಬಿಎಸ್ -3? ಈಗ ಇರೋ ವಾಹನಗಳು ಏನಾಗುತ್ತೆ?

    5 ಲಕ್ಷ ರೂ.ಗಿಂತಲೂ ಹೆಚ್ಚಿನ ಬೆಲೆ ಇರುವ ಇಂಗ್ಲೆಂಡಿನ ಟ್ರಯಂಪ್ ಮತ್ತು ಅಮೆರಿಕ ಹಾರ್ಲೆ ಡೇವಿಡ್‍ಸನ್ ಕಂಪೆನಿಯ ದುಬಾರಿ ಬೈಕ್‍ಗಳನ್ನೂ ಜನರು ಖರೀದಿಸುತ್ತಿದ್ದಾರೆ. ಟ್ರಯಂಪ್ 2013ರಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಇದೂವರೆಗೆ 4 ಸಾವಿರಕ್ಕೂ ಹೆಚ್ಚು ಬೈಕ್ ಗಳನ್ನು ಮಾರಾಟ ಮಾಡಿದೆ.

    ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ? 

  • ಭಾರತದಲ್ಲಿ ಐಫೋನ್‍ಗೆ 58 ಸಾವಿರ ರೂ. ಇದ್ದರೆ, 32 ದೇಶಗಳಲ್ಲಿ ಎಷ್ಟು ಬೆಲೆಗೆ ಮಾರಾಟವಾಗುತ್ತಿದೆ?

    ಭಾರತದಲ್ಲಿ ಐಫೋನ್‍ಗೆ 58 ಸಾವಿರ ರೂ. ಇದ್ದರೆ, 32 ದೇಶಗಳಲ್ಲಿ ಎಷ್ಟು ಬೆಲೆಗೆ ಮಾರಾಟವಾಗುತ್ತಿದೆ?

    ನವದೆಹಲಿ: ಕಡಿಮೆ ಬೆಲೆಯಲ್ಲಿ ಐಫೋನ್ 7 ಮಾರಾಟವಾಗುವ 33 ದೇಶಗಳ ಪೈಕಿ ಭಾರತಕ್ಕೆ 11ನೇ ಸ್ಥಾನ ಸಿಕ್ಕಿದೆ.

    ಅಮೆರಿಕದಲ್ಲಿ 128 ಜಿಬಿ ಆಂತರಿಕ ಮೆಮೊರಿಯ ಐಫೋನಿಗೆ 815 ಡಾಲರ್(ಅಂದಾಜು 52,400 ರೂ.) ಇದ್ದರೆ, ಭಾರತದಲ್ಲಿ 902 ಡಾಲರ್(ಅಂದಾಜು 58,000 ರೂ.) ಇದೆ.

    ಜಪಾನ್ ನಲ್ಲಿ ಅಮೆರಿಕದ ದರದಲ್ಲೇ ಐಫೋನ್ ಸಿಗುತ್ತಿದ್ದು, ಹಾಂಕಾಂಗ್ ನಲ್ಲಿ 821 ಡಾಲರ್ ಇದೆ. ಚೀನಾದಲ್ಲಿ 899 ಡಾಲರ್, ಆಸ್ಟ್ರೇಲಿಯಾದಲ್ಲಿ 926 ಡಾಲರ್, ಫ್ರಾನ್ಸ್ ನಲ್ಲಿ 962 ಡಾಲರ್, ಇಟಲಿಯಲ್ಲಿ 995 ಡಾಲರ್ ಇದೆ.

    ಅತಿ ಹೆಚ್ಚು ದರ ದರ: ಪೋಲಂಡ್ ನಲ್ಲಿ 1,005 ಡಾಲರ್, ಗ್ರೀಸ್ ನಲ್ಲಿ 1,028 ಡಾಲರ್, ರಷ್ಯಾದಲ್ಲಿ 1,086 ಡಾಲರ್, ಬ್ರೆಜಿಲ್ 1,115 ಡಾಲರ್, ಟರ್ಕಿ ಯಲ್ಲಿ 1,200 ಡಾಲರ್ ಬೆಲೆಗೆ ಐಫೋನ್7 ಮಾರಾಟವಾಗುತ್ತಿದೆ.

    Deutsche  ಬ್ಯಾಂಕ್  ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಡಾಲರ್ ಮುಂದೆ ಆಯಾ ದೇಶಗಳ ಕರೆನ್ಸಿ ದರ ಮತ್ತು ತೆರಿಗೆಯಿಂದ ಐಫೋನ್ ದರ ಬದಲಾಗಿದೆ ಎಂದು ತಿಳಿಸಿದೆ.

    ಆಪಲ್ ಐಫೋನ್ 7 ಗುಣ ವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಪ್ಲೇ: ಸಿಂಗಲ್ ನ್ಯಾನೋ ಸಿಮ್, 138.3*67.1*7.1 ಮಿ.ಮೀ ಗಾತ್ರ, 138 ಗ್ರಾಂ ತೂಕ, 707 ಇಂಚಿನ ಎಲ್‍ಇಡಿ ಬ್ಯಾಕ್‍ಲಿಟ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(750*1334 ಪಿಕ್ಸೆಲ್,326 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ: ಐಓಎಸ್ 10, ಆಪಲ್ ಎ10 ಕ್ವಾಡ್ ಕೋರ್ 2.34 GHz ಪ್ರೊಸೆಸರ್, ಪವರ್‍ವಿಆರ್ ಸಿರೀಸ್ 7ಎಕ್ಸ್‍ಟಿ ಪ್ಲಸ್ ಗ್ರಾಫಿಕ್ ಪ್ರೊಸೆಸರ್

    ಮೆಮೊರಿ ಮತ್ತು ಕ್ಯಾಮೆರಾ: ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ, 32/128/256 ಜಿಬಿ ಆಂತರಿಕ ಮೆಮೊರಿ, 2ಜಿಬಿ ರಾಮ್ 12 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 7 ಎಂಪಿ ಕ್ಯಾಮೆರಾ

    ಇತರೇ: ಫಿಂಗರ್ ಪ್ರಿಂಟ್ ಸೆನ್ಸರ್, 1960 ಎಂಎಚ್ ತೆಗೆಯಲು ಅಸಾಧ್ಯವಾದ ಲಿಯಾನ್ ಬ್ಯಾಟರಿ

     

  • ಸೌತ್ ಏಷ್ಯಾ ಸ್ಯಾಟಲೈಟ್ ಉಡಾವಣೆಗೆ ಇಸ್ರೋದಿಂದ ಕೌಂಟ್‍ಡೌನ್ ಶುರು

    ಸೌತ್ ಏಷ್ಯಾ ಸ್ಯಾಟಲೈಟ್ ಉಡಾವಣೆಗೆ ಇಸ್ರೋದಿಂದ ಕೌಂಟ್‍ಡೌನ್ ಶುರು

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಎರಡು ವರ್ಷದ ಹಿಂದಿನ ಕನಸಿನ ಕೂಸು, ದಕ್ಷಿಣ ಏಷ್ಯಾ ಬಾಂಧವ್ಯದ ಪ್ರತೀಕ ‘ಸೌತ್ ಏಷ್ಯಾ ಕಮ್ಯುನಿಕೇಷನ್ ಸ್ಯಾಟಲೈಟ್’ ಆದ ಜಿಸ್ಯಾಟ್-9(ಜಿಯೋಸ್ಟೇಷನರಿ ಕಮ್ಯುನಿಕೇಷನ್ ಸ್ಯಾಟಲೈಟ್) ಇಂದು ನಭಕ್ಕೆ ಚಿಮ್ಮಲಿದೆ.

    ಇಂದು ಸಂಜೆ 4.57ಕ್ಕೆ ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಲಿದೆ. ಪಾಕಿಸ್ತಾನ ಹೊರತುಪಡಿಸಿ ಸಾರ್ಕ್ ರಾಷ್ಟ್ರಗಳಾದ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಈ ಯೋಜನೆಯ ಭಾಗವಾಗಿವೆ. ಉಪಗ್ರಹ ಉಡಾವಣೆಗೆ 28 ಗಂಟೆಗಳ ಕೌಂಟ್‍ಡೌನ್ ಗುರುವಾರ ರಾತ್ರಿ 12:57 ಗಂಟೆಯಿಂದಲೇ ಶುರುವಾಗಿದೆ ಎಂದು ಇಸ್ರೋ ತಿಳಿಸಿದೆ.

    2014ರ ಮೇನಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ, ಮಿತ್ರರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಸಾರ್ಕ್ ಸ್ಯಾಟಲೈಟ್ ಅಭಿವೃದ್ಧಿಪಡಿಸಲು ಇಸ್ರೋ ವಿಜ್ಞಾನಿಗಳಿಗೆ ಕೇಳಿದ್ದರು. ಈ ಬಗ್ಗೆ ಭಾನುವಾರದ ಮನ್ ಕೀ ಬಾತ್‍ನಲ್ಲಿ ಮಾತನಾಡಿದ್ದ ಮೋದಿ, ಮೇ 5 ರಂದು ಸೌತ್ ಏಷ್ಯಾ ಉಪಗ್ರಹ ಉಡಾವಣೆಯಾಗಲಿದೆ. ಈ ಯೋಜನೆಯಲ್ಲಿ ಭಾಗಿಯಾಗಿರುವ ರಾಷ್ಟ್ರಗಳಿಗೆ ಇದರಿಂದ ಬಹಳಷ್ಟು ಉಪಯೋಗವಾಗಲಿದೆ ಎಂದು ಹೇಳಿದ್ದರು.

    ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರದಲ್ಲಿ ಈ ಉಪಗ್ರಹ ನೆರವಿಗೆ ಬರಲಿದೆ. ಅಷ್ಟೇ ಅಲ್ಲ, ಭೂಕಂಪ, ಪ್ರವಾಹ, ಚಂಡಮಾರುತ, ಸುನಾಮಿಗಳು ಹೀಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕದ ಮೂಲಕ ಪರಿಹಾರ ಕಾರ್ಯಾಚರಣೆಗೆ ನೆರವಾಗಲಿದೆ. ಈ ಉಪಗ್ರಹ 12 ವರ್ಷಗಳಿಗೂ ಹೆಚ್ಚು ಕಾರ್ಯಾವಧಿ ಹೊಂದಿದೆ. ಉಪಗ್ರಹ ನಿರ್ಮಾಣಕ್ಕಾಗಿ 235 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ. ಯೋಜನೆಯ ಒಟ್ಟು ವೆಚ್ಚ 450 ಕೋಟಿ ರೂ. 2,230 ಕೆ.ಜಿ ತೂಕವುಳ್ಳ ಈ ಉಪಗ್ರಹವನ್ನು ಜಿಎಸ್‍ಎಲ್‍ವಿ-ಎಫ್‍ಒ9 ರಾಕೆಟ್ ಹೊತ್ತು ಸಾಗಲಿದೆ.

    ಮುಂದಿನ ವರ್ಷದ ಆರಂಭದಲ್ಲಿ ಇಸ್ರೋ ಚಂದ್ರಯಾನ-2 ಉಡಾವಣೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷರಾದ ಎಎಸ್ ಕಿರಣ್ ಕಿಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

  • ಅಪ್ಪನ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು: ಪಾ(ಪಿ)ಕಿಗಳಿಂದ ಶಿರಚ್ಛೇದನಗೊಂಡ ಯೋಧನ ಮಗಳ ಮಾತು

    ಅಪ್ಪನ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು: ಪಾ(ಪಿ)ಕಿಗಳಿಂದ ಶಿರಚ್ಛೇದನಗೊಂಡ ಯೋಧನ ಮಗಳ ಮಾತು

    ನವದೆಹಲಿ: ನನ್ನ ತಂದೆಯ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು ಎಂದು ಪಾಕಿಸ್ತಾನದ ಸೈನಿಕರ ಪೈಶಾಚಿಕ ಕೃತ್ಯದಿಂದ ಹುತಾತ್ಮರಾದ ಯೋಧರೊಬ್ಬರ ಮಗಳು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.

    ಸೋಮವಾರದಂದು ಪಾಕಿಸ್ತಾನದ ಸೈನಿಕರು ಕಾಶ್ಮೀರದಲ್ಲಿ ಭಾರತದೊಳಗೆ ನುಗ್ಗಿ ಇಬ್ಬರು ಯೋಧರನ್ನು ಕೊಂದು ಅವರ ಶಿರಚ್ಛೇದನ ಮಾಡಿದ್ದರು. ಮೃತರಲ್ಲಿ ಬಿಎಸ್‍ಎಫ್ ಯೋಧ ಪ್ರೇಮ್ ಸಾಗರ ಕೂಡ ಒಬ್ಬರಾಗಿದ್ದು, ಅವರ ಮಗಳು ತನ್ನ ತಂದೆಯ ಬಲಿದಾನಕ್ಕೆ ಭಾರತ ಹೇಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬುದನ್ನ ಈ ಮಾತುಗಳ ಮೂಲಕ ಹೇಳಿದ್ದಾರೆ.

    ಪಾಕಿಸ್ತಾನಿ ಸೈನಿಕರ ಈ ಅಮಾನವೀಯ ಕೃತ್ಯಕ್ಕೆ ಹುತಾತ್ಮರಾದ ಮತ್ತೊಬ್ಬ ಯೋಧ ಪರಮ್‍ಜೀತ್ ಸಿಂಗ್ ಅವರ ಮೃತದೇಹವನ್ನು ಇಂದು ಪಂಜಾಬ್‍ನ ಸ್ವಗ್ರಾಮ ಟಾರ್ನ್ ಟರಾನ್‍ಗೆ ಕೊಂಡೊಯ್ಯಲಾಯ್ತು. ಆಕ್ರೋಶಗೊಂಡ ಪರಮ್‍ಜೀತ್ ಅವರ ಸಂಬಂಧಿಕರು, ನಾವು ಅವರ ಮುಖವನ್ನು ನೋಡುವವರೆಗೂ ದೇಹವನ್ನು ಅಂತ್ಯಕ್ರಿಯೆ ಮಾಡುವುದಿಲ್ಲ. ಯಾರ ದೇಹ ಇದು? ಬಾಕ್ಸ್‍ನೊಳಗೆ ಮುಚ್ಚಲಾಗಿದೆ ಎಂದು ರಾಷ್ಟ್ರಧ್ವಜವನ್ನು ಹೊದಿಸಿದ್ದ ಶವಪೆಟ್ಟಿಗೆಯನ್ನು ತೋರಿಸುತ್ತಾ ಹೇಳಿ ದುಃಖಿತರಾದ್ರು. ನಮಗೆ ದೇಹವನ್ನು ತೋರುಸುತ್ತಿಲ್ಲವಲ್ಲ ಯಾಕೆ? ಎಂದು ಪ್ರಶ್ನಿಸಿದ್ರು.

    ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ಪೂಂಚ್ ಸೆಕ್ಟರ್‍ನ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಯೋಧರು ಎರಡು ಪೋಸ್ಟ್‍ಗಳ ನಡುವೆ ಗಸ್ತು ತಿರುಗುತ್ತಿದ್ದ ವೇಳೆ ಅವರ ಮೇಲೆ ಪಾಕಿಸ್ತಾನಿಗಳು ಮಾರ್ಟರ್ ಬಾಂಬ್‍ಗಳಿಂದ ದಾಳಿ ನೆಡೆಸಿದ್ದರು. ಈ ವೇಳೆ ಇಬ್ಬರು ಯೋಧರು ರಕ್ಷಣೆಗಾಗಿ ಓಡಿದ್ರು. ಇನ್ನುಳಿದ ಇಬ್ಬರ ಮೇಲೆ ಪಾಕಿಸ್ತಾನಿಗಳು ದಾಳಿ ಮಾಡಿ ಶಿರಚ್ಛೇದನ ಮಾಡಿದ್ದರು.

  • ಪಾಕ್ ಸೇನೆಯಿಂದ ಪೈಶಾಚಿಕ ಕೃತ್ಯ – ಇಬ್ಬರು ಭಾರತೀಯ ಯೋಧರ ಶಿರಚ್ಛೇದ

    ಪಾಕ್ ಸೇನೆಯಿಂದ ಪೈಶಾಚಿಕ ಕೃತ್ಯ – ಇಬ್ಬರು ಭಾರತೀಯ ಯೋಧರ ಶಿರಚ್ಛೇದ

    ನವದೆಹಲಿ: ಭಾರತೀಯ ಯೋಧರ ಸಹನೆ ಪರೀಕ್ಷಿಸಿ ಕಾಲ್ಕೆರದು ಪದೇ ಪದೇ ಕದನವಿರಾಮ ಉಲ್ಲಂಘಿಸುವ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿಸೆಪ್ಟೆಂಬರ್ 29, 2016ರಲ್ಲಿ `ಸರ್ಜಿಕಲ್ ಸ್ಟ್ರೈಕ್’ ಮಾಡಿದ್ರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ. ಸೋಮವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ಸೇನೆಯ ಇಬ್ಬರು ಯೋಧರನ್ನು ಬರ್ಬರ, ಅಮಾನುಷವಾಗಿ ಕೊಂದಿದೆ.

    ಯೋಧರ ಶಿರಚ್ಛೇದನ ಮಾಡಿ ದೇಹವನ್ನು ತುಂಡರಿಸಿ ಪೈಶಾಚಿಕವಾಗಿ ನಡೆದುಕೊಂಡಿದೆ. ಮಧ್ಯಾಹ್ನ ಗಸ್ತಿನಲ್ಲಿ ಯೋಧರಿಗೆ ಕೃಷ್ಣಘಾಟ್ ಬಳಿ ಶಿರಚ್ಛೇದನವಾಗಿ ಬಿದ್ದಿದ್ದ ಸೇನಾ ಕಿರಿಯ ಕಮಾಂಡೆಂಟ್ ಪರಮ್‍ಜಿತ್ ಸಿಂಗ್ ಹಾಗೂ ಬಿಎಸ್‍ಎಫ್‍ನ ಹೆಡ್ ಕಾನ್ಸಟೇಬಲ್ ಪರಮ್ ಸಾಗರ್ ಎಂಬ ಇಬ್ಬರು ಯೋಧರ ಶವ ಪತ್ತೆಯಾಗಿದೆ.

    ಈ ಇಬ್ಬರು ನೆಲ ಬಾಂಬ್ ನಿಷ್ಕ್ರಿಯಗೊಳಿಸಲು ಎಲ್‍ಒಸಿಯಲ್ಲಿ ಪಹರೆ ನಡೆಸ್ತಿದ್ರು. ಇನ್ನು, ಪಾಕಿಸ್ತಾನದ ಕೃತ್ಯವನ್ನು ಅತ್ಯುಘ್ರವಾಗಿ ಖಂಡಿಸಿರೋ ಸೇನೆ, ಶೀಘ್ರದಲ್ಲೇ ತಕ್ಕ ಉತ್ತರ ಕೊಡೋದಾಗಿ ಎಚ್ಚರಿಕೆ ರವಾನಿಸಿದೆ.

    ಅಂದಹಾಗೆ, ನಿನ್ನೆ ತಾನೇ ಎಲ್‍ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಖಮರ್ ಭಜ್ವಾ ಭೇಟಿ ನೀಡಿ ತಮ್ಮ ಜಾಗವನ್ನು ಉಳಿಸಿಕೊಳ್ಳೋಣ. ನೀವು ಹೋರಾಡಿ ಅಂತಾ ಅವರ ಸೈನಿಕರಿಗೆ ಹುರಿದುಂಬಿಸಿದ್ರು. ಈ ಭೇಟಿಯ ಬೆನ್ನಲ್ಲೇ ಪಾಕ್ ಸೈನಿಕರು ನಮ್ಮ ಭಾರತೀಯ ಸೈನಿಕರ ಶಿರಚ್ಛೇದನ ಮಾಡಿದ್ದಾರೆ.

    ಘಟನೆ ಬಗ್ಗೆ ಪ್ರಧಾನಿ ಮೋದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮಾಹಿತಿ ನೀಡಿದ್ದಾರೆ. ಪಾಕಿಸ್ಥಾನಕ್ಕೆ ತಿರುಗೇಟು ನೀಡಲು ಚಿಂತನೆ ನಡೆಸಿದ್ದಾರೆ. ಇನ್ನು, ಪಾಕಿಸ್ತಾನ ತನ್ನ ಅವಸಾನವನ್ನ ಆಹ್ವಾನಿಸಿಕೊಳ್ತಿದೆ ಅಂತ ರಾಜಕೀಯ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

  • ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಕ್ಯಾಲಿಫೋರ್ನಿಯಾ: ಗೂಗಲ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ 44 ವರ್ಷದ ಸುಂದರ್ ಪಿಚೈ ಅವರಿಗೆ 200 ದಶಲಕ್ಷ ಡಾಲರ್(ಅಂದಾಜು 1,285 ಕೋಟಿ ರೂ.) ಸಂಭಾವನೆ ನೀಡಿದೆ.

    2015ರ ಸಂಬಳಕ್ಕೆ ಹೋಲಿಸಿದರೆ ಸಂಬಳ ಡಬಲ್ ಆಗಿದೆ. 2015ರಲ್ಲಿ ವಾರ್ಷಿಕ ಪರಿಹಾರ ಮೊತ್ತ ಸೇರಿದಂತೆ 6,50,000 ಡಾಲರ್ ಸಂಬಳ ಸಿಕ್ಕಿತ್ತು. 2015ರಲ್ಲಿ ಷೇರು ರೂಪದಲ್ಲಿ 99.8 ದಶಲಕ್ಷ ಡಾಲರ್ ಪಡೆದಿದ್ದ ಸುಂದರ್ ಪಿಚೈ ಅವರು 2016ರಲ್ಲಿ 198.7 ದಶಲಕ್ಷ ಡಾಲರ್ ಹಣವನ್ನು ಪಡೆದಿದ್ದಾರೆ.

    ಕಂಪೆನಿಯ ಪರವಾಗಿ ಉತ್ತಮ ಉತ್ಪನ್ನವನ್ನು ಹೊರ ತಂದಿದ್ದಕ್ಕೆ ಗೂಗಲ್ ಸಂಬಳವನ್ನು ಏರಿಕೆ ಮಾಡಿದೆ ಎಂದು ಸಿಎನ್‍ಎನ್ ವರದಿ ಮಾಡಿದೆ.

    2016ರಲ್ಲಿ ಗೂಗಲ್ ಹೊಸ ಸ್ಮಾರ್ಟ್ ಫೋನ್, ವರ್ಚುವಲ್ ರಿಯಾಲಿಟಿ ಹೆಡ್ ಸೆಟ್, ರೂಟರ್, ವಾಯ್ಸ್ ಆಧಾರಿತ ಸ್ಪೀಕರ್ ಬಿಡುಗಡೆ ಮಾಡಿತ್ತು. ಈ ಎಲ್ಲ ಕೆಲಸಕ್ಕೆ ಗೂಗಲ್ ಪಿಚೈ ಸಂಬಳವನ್ನು ಭಾರೀ ಏರಿಕೆ ಮಾಡಿದೆ.

    ಯಾರು ಸುಂದರ್ ಪಿಚೈ:
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಮೂಲತಃ ಚೆನ್ನೈರವರಾದ ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್,ಆಂಡ್ರಾಯ್ಡ್ ಅಪ್ಲಿಕೇಶನ್, ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ,ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು.

  • ಕ್ಯೂ ಮರೆತು ಬಿಡಿ, ಇನ್ನು ಮುಂದೆ ಮನೆ ಬಾಗಿಲಿಗೆ ಬರುತ್ತೆ ಪೆಟ್ರೋಲ್, ಡೀಸೆಲ್!

    ಕ್ಯೂ ಮರೆತು ಬಿಡಿ, ಇನ್ನು ಮುಂದೆ ಮನೆ ಬಾಗಿಲಿಗೆ ಬರುತ್ತೆ ಪೆಟ್ರೋಲ್, ಡೀಸೆಲ್!

    ನವದೆಹಲಿ: ಆನ್‍ಲೈನಲ್ಲಿ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಪಡೆದುಕೊಳ್ಳುವಂತೆ ಇನ್ನು ಮುಂದೆ ದೇಶದಲ್ಲಿ ಜನ ಪೆಟ್ರೋಲ್, ಡೀಸೆಲ್ ಬುಕ್ ಮಾಡಿ ಮನೆಯಲ್ಲೇ ತೈಲವನ್ನು ತಮ್ಮ ವಾಹನಗಳಿಗೆ ತುಂಬಿಸಬಹುದು.

    ಹೌದು. ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಬಂಕ್‍ಗಳಲ್ಲಿ ಗ್ರಾಹಕರ ಕ್ಯೂ ನಿಲ್ಲುವುದನ್ನು ತಪ್ಪಿಸಲು ಮನೆ ಬಾಗಿಲಿಗೆ ಪೆಟ್ರೋಲ್, ಡೀಸೆಲ್ ವಿತರಣೆ ಮಾಡಲು ಚಿಂತನೆ ನಡೆಸಿದೆ.

    ಈ ಸಂಬಂಧ ಸಚಿವಾಲಯ ಟ್ವೀಟ್ ಮಾಡಿದ್ದು, ಕ್ಯೂ ನಿಂತುಕೊಂಡು ಗ್ರಾಹಕರ ಸಮಯ ಹಾಳಾಗುವುದನ್ನು ತಪ್ಪಿಸಲು, ಪ್ರೀ  ಬುಕ್ಕಿಂಗ್ ಮಾಡಿದ ಗ್ರಾಹಕರ ಮನೆ ಬಾಗಿಲಿಗೆ ಪೆಟ್ರೋ ಉತ್ಪನ್ನಗಳನ್ನು ತಲುಪಿಸಲು ಮುಂದಾಗಿದ್ದೇವೆ ಎಂದು ತಿಳಿಸಿದೆ.

    ಇದೇ ವೇಳೆ ಮತ್ತೊಂದು ಟ್ವೀಟ್ ನಲ್ಲಿ ಈ ಹಿಂದೆ ಪ್ರತಿದಿನ 150 ಕೋಟಿ ರೂ. ಆನ್‍ಲೈನ್ ವ್ಯವಹಾರ ನಡೆಯುತ್ತಿದ್ದರೆ ಈಗ ಈ ವ್ಯವಹಾರ 450 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

    ಪ್ರತಿ ವರ್ಷ 3.5 ಕೋಟಿ ಜನ ಬಂಕ್‍ಗಳಿಗೆ ಬರುತ್ತಾರೆ. ವಾರ್ಷಿಕವಾಗಿ 2,500 ಕೋಟಿ ರೂ. ವ್ಯವಹಾರ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

    15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದ್ದು, ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಲ್ಲಿ ಜಾರಿಗೆ ಬರಲಿದೆ. ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ಮುಂದಿನ ಹಂತದಲ್ಲಿ ದೇಶಾದ್ಯಂತ ಜಾರಿ ಮಾಡಲು ಭಾರತೀಯ ತೈಲ ಕಂಪೆನಿಗಳು ತೀರ್ಮಾನಿಸಿದೆ.

    ಮುಂದಿನ ತಿಂಗಳ 14ರಿಂದ ಪ್ರತಿ ಭಾನುವಾರ ಪೆಟ್ರೋಲ್ ಪಂಪ್ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್ ಬಂಕ್ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಅಲ್ಪ ಸಂಖ್ಯೆಯ ಪಂಪ್‍ಗಳ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ತೈಲ ಸಚಿವಾಲಯ ಅಭಿಪ್ರಾಯಪಟ್ಟಿದೆ.