Tag: ಭಾರತ ರತ್ನ

  • ಅನಿವಾರ್ಯವಾಗಿ ಶರಣಾಗಿದ್ದೇವೆ, ಕಳೆದ 20 ವರ್ಷಗಳಲ್ಲಿ ದಿ ಬೆಸ್ಟ್ ಸಿಎಂ ಅಂದ್ರೆ ಸಿದ್ದರಾಮಯ್ಯ: ರಾಯರೆಡ್ಡಿ

    ಅನಿವಾರ್ಯವಾಗಿ ಶರಣಾಗಿದ್ದೇವೆ, ಕಳೆದ 20 ವರ್ಷಗಳಲ್ಲಿ ದಿ ಬೆಸ್ಟ್ ಸಿಎಂ ಅಂದ್ರೆ ಸಿದ್ದರಾಮಯ್ಯ: ರಾಯರೆಡ್ಡಿ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರನ್ನು ಬಿಟ್ಟರೆ ಕಳೆದ 20 ವರ್ಷಗಳಲ್ಲಿ ಸಿದ್ದರಾಮಯ್ಯ ಅವರೇ ದಿ ಬೆಸ್ಟ್ ಸಿಎಂ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಿವಾರ್ಯತೆಯಿಂದ ಜೆಡಿಎಸ್‍ಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ. ನಮ್ಮ ಪಕ್ಷದ ಔದಾರ್ಯವನ್ನ ಸಿಎಂ ಕುಮಾರಸ್ವಾಮಿಯವರು ಅರ್ಥ ಮಾಡಿಕೊಳ್ಳಬೇಕು. ಚಿಕ್ಕಪುಟ್ಟ ವಿಷಯಗಳಿಗೆ ರಾಜೀನಾಮೆ ನೀಡುತ್ತೇನೆ ಅನ್ನೋದು ತಪ್ಪು. ಕಾಂಗ್ರೆಸ್ ಶಾಸಕರನ್ನ ಕಂಟ್ರೋಲ್ ಮಾಡಿ ಅಂತ ಹೇಳಿದ್ದು ಸರಿಯಲ್ಲ. ಸಿದ್ದರಾಮಯ್ಯ ಅವರನ್ನ ಹೊಗಳಿದರೆ ತಪ್ಪೇನು? ಸಮ್ಮಿಶ್ರ ಸರ್ಕಾರಕ್ಕಾಗಿ ಸಿದ್ದರಾಮಯ್ಯ ಅವರು ತ್ಯಾಗ ಮಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಸಿದ್ದರಾಮಯ್ಯ ದಿ ಬೆಸ್ಟ್ ಸಿಎಂ. ಕುಮಾರಸ್ವಾಮಿ ಅವರಿಗೆ ಇನ್ನಷ್ಟು ಮೆಚ್ಯೂರಿಟಿ ಬರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೈ ಶಾಸಕರು ಸಿದ್ದರಾಮಯ್ಯನವರನ್ನು ಹೊಗಳಿದರೆ ತಪ್ಪೇನು: ಪರಮೇಶ್ವರ್ ಪ್ರಶ್ನೆ

    ಸಿದ್ದರಾಮಯ್ಯ ಒಬ್ಬ ಪ್ರಶ್ನಾತೀತ, ವರ್ಣರಂಜಿತ ಸಿಎಂ. ಅವರೇ ಮತ್ತೆ ಸಿಎಂ ಆಗಲಿ ಅಂತ ನಾನು ಕೂಡ ಬಯಸುತ್ತೇನೆ. ನಾನು ನೋಡಿರುವ ಪ್ರಕಾರ ದೇವೇಗೌಡರನ್ನ ಬಿಟ್ಟರೆ ಸಿದ್ದರಾಮಯ್ಯ ಅವರೇ ಬೆಸ್ಟ್ ಸಿಎಂ. ಅನಿವಾರ್ಯವಾಗಿ ನಾವು ಜೆಡಿಎಸ್‍ಗೆ ಶರಣಾಗಿದ್ದೇವೆ ಎಂದು ಬಸವರಾಜ ರಾಯರೆಡ್ಡಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಸಿಎಂ ರಾಜೀನಾಮೆ ಹೇಳಿಕೆಗೆ ಕಾರಣವಾದ ಸಿದ್ದು ಶಿಷ್ಯರು ಹೇಳಿದ 5 ಹೇಳಿಕೆಗಳು – ವಿಡಿಯೋ ನೋಡಿ

    ಕೇಂದ್ರ ಸರ್ಕಾರ ಆರ್‍ಎಸ್‍ಎಸ್ ಹಾಗೂ ಬಿಜೆಪಿಯ ನಾಯಕರಿಗೆ ಮಾತ್ರ ಭಾರತ ರತ್ನ ನೀಡಿದೆ. ಸಚಿನ್ ತೆಂಡೂಲ್ಕರ್ ಹಾಗೂ ಪ್ರಣಬ್ ಮುಖರ್ಜಿ ಬಿಟ್ಟರೆ ಎಲ್ಲರೂ ಆರ್‍ಎಸ್‍ಎಸ್ ಗೆ ಸೇರಿದವರು. ಮೇಲ್ವರ್ಗದ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕವಾರು ತಾರತಮ್ಯ ಮಾಡಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ನಾಲ್ಕನೇ ಭಾರತರತ್ನ ಪ್ರಶಸ್ತಿಯನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನೀಡಬೇಕು. ಮೋದಿ ಅವರು ಶ್ರೀಗಳನ್ನು ಹೊಗಳಿದ್ದಾರೆ. ಆದ್ರೆ ಭಾರತ ರತ್ನ ನೀಡಿ ಗೌರವಿಸಿಲ್ಲ. ಪ್ರಧಾನಿ ಅವರಿಗೆ ಶ್ರೀಗಳ ಮೇಲೆ ನಿಜವಾದ ಗೌರವ ಇದ್ದರೆ ಭಾರತ ರತ್ನ ನೀಡಲಿ ಎಂದು ಬಸವರಾಜ ರಾಯರೆಡ್ಡಿ ಆಗ್ರಹಿಸಿದರು.

    https://www.youtube.com/watch?v=OflAzK4wALY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 70 ವರ್ಷದಲ್ಲಿ ಯಾವ ಸನ್ಯಾಸಿಗೂ ಸರ್ಕಾರ ಭಾರತ ರತ್ನ ಕೊಟ್ಟಿಲ್ಲ: ಬಾಬಾ ರಾಮ್‍ದೇವ್

    70 ವರ್ಷದಲ್ಲಿ ಯಾವ ಸನ್ಯಾಸಿಗೂ ಸರ್ಕಾರ ಭಾರತ ರತ್ನ ಕೊಟ್ಟಿಲ್ಲ: ಬಾಬಾ ರಾಮ್‍ದೇವ್

    ನವದೆಹಲಿ: ಕಳೆದ 70 ವರ್ಷದಲ್ಲಿ ಯಾವುದೇ ಸನ್ಯಾಸಿಗೂ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿಲ್ಲ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಎಲ್ಲಾ ವಿಭಾಗದಲ್ಲೂ ಸಾಧನೆ ಮಾಡಿದ ಗಣ್ಯರಿಗೆ ಸರ್ಕಾರ ಭಾರತದ ಶ್ರೇಷ್ಠ ಪ್ರಶಸ್ತಿ ಭಾರತ ರತ್ನವನ್ನು ನೀಡಿ ಗೌರವಿಸುತ್ತೆ. ಆದರೇ ಕಳೆದ 70 ವರ್ಷದಲ್ಲಿ ಯಾವುದೇ ಸನ್ಯಾಸಿಗಳಿಗೆ ಅಥವಾ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು ಎಂದಿದ್ದಾರೆ. ಇದನ್ನೂ ಓದಿ:ಶ್ರೀಗಳಿಗೆ ಭಾರತರತ್ನ ಕೊಡದಿರುವುದು ಎಲ್ಲರಿಗಿಂತ ನನಗೆ ಹೆಚ್ಚು ನೋವು ತಂದಿದೆ – ಬಿಎಸ್‍ವೈ

    ವಿಪರ್ಯಾಸವೆಂದರೆ ಸಾಮಾಜಕ್ಕಾಗಿ ದುಡಿದು, ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡಿರುವ ಮಹಾಋಷಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದರಿಂದ ಹಿಡಿದು ಶ್ರೀ ಶಿವಕುಮಾರ ಸ್ವಾಮೀಜಿಗಳ ವರೆಗೂ ಯಾವ ಸನ್ಯಾಸಿಗೂ ಸರ್ಕಾರ ಭಾರತ ರತ್ನ ನೀಡಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದರು. ಇದನ್ನೂ ಓದಿ:ಭಾರತ ರತ್ನ – ಲತಾಗಿಲ್ಲದ ನಿಯಮಾವಳಿ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಯಾಕೆ?

    ಮುಂದಿನ ಬಾರಿಯಾದರೂ ಸಾಧು ಸನ್ಯಾಸಿಗಳು ಮಾಡಿರುವ ಸೇವೆಯನ್ನು ಗುರುತಿಸಿ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಕೇಂದ್ರ ಸರ್ಕಾರವನ್ನು ರಾಮ್‍ದೇವ್ ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳಿಗೆ ಭಾರತ ರತ್ನ ಕೊಡದಿದ್ರೆ ಪ್ರತಿಭಟನೆ ಮಾಡ್ತೀವಿ: ಬಸನಗೌಡ ಪಾಟೀಲ್ ಯತ್ನಾಳ್

    ಶ್ರೀಗಳಿಗೆ ಭಾರತ ರತ್ನ ಕೊಡದಿದ್ರೆ ಪ್ರತಿಭಟನೆ ಮಾಡ್ತೀವಿ: ಬಸನಗೌಡ ಪಾಟೀಲ್ ಯತ್ನಾಳ್

    ವಿಜಯಪುರ: ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳು ವಿಶ್ವದಲ್ಲೇ ಶ್ರೇಷ್ಠ ವ್ಯಕ್ತಿ. ಅವರು ಮಾಡಿರುವ ಕಾಯಕಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಇಲ್ಲವಾದರೆ ಪ್ರತಿಭಟನೆ ಮೂಲಕ ಅನ್ಯಾಯವನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಎಲ್ಲೆಡೆಯಿಂದ ಜನರು ಆಗ್ರಹಿಸುತ್ತಿದ್ದಾರೆ. ಭಾರತ ರತ್ನ ನೀಡದಿದ್ದರೂ ಶ್ರೇಷ್ಠ ಸಂತರಾಗಿ ಎಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಅವರ ಹೆಸರನ್ನು ಕೇಂದ್ರ ಸರ್ಕಾರ ಈ ಬಾರಿ ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕಾಗಿತ್ತು. ಶ್ರೀಗಳಿಗೆ ಭಾರತ ರತ್ನ ಕೊಡಿಸುವಲ್ಲಿ ಲೋಕಸಭಾ ಹಾಗು ರಾಜ್ಯ ಸಭಾ ಸದಸ್ಯರು ಪ್ರಯತ್ನ ಮಾಡಬೇಕು. ಅನ್ಯಾಯವಾದಾಗ ಪ್ರತಿಭಟನೆ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಈ ಹಿಂದೆ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಬೇಕಾದರೆ ಆಂಧ್ರಪ್ರದೇಶದ ಸರ್ಕಾರ ವಿರೋಧ ಮಾಡಿತ್ತು. ಆಗ ವಾಜಪೇಯಿ ಪ್ರಧಾನಿಯಾಗಿದ್ದಾಗ ನಾನು ಕೇಂದ್ರ ಸಚಿವನಿದ್ದೆ. ಜಲಾಶಯದ ಎತ್ತರಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾಗಿದ್ದೆವು. ಅದೇ ಮಾದರಿಯಲ್ಲಿ ಈಗ ಹೋರಾಡಬೇಕಿದೆ. ತ್ರಿವಿಧ ದಾಸೋಹಿಗೆ ಭಾರತ ರತ್ನ ಕೊಡಬೇಕೆಂದು ನಾನು ಪ್ರಧಾನಿಗಳಿಗೆ ಒತ್ತಾಯ ಮಾಡುತ್ತೇನೆ. ಭಾರತ ರತ್ನ ಕೊಡದಿದ್ದರೆ ಪ್ರತಿಭಟನೆ ಮಾಡಿ ನಮ್ಮ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಕಾಂಗ್ರೆಸ್ ಶಾಸಕರ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, ಗಣಿ ರಾಜಕೀಯದ ಪರಿಣಾಮದಿಂದಾಗಿ ಬಿಯರ್ ಬಾಟಲಿಗಳಿಂದ ಹೊಡೆದಾಟ ಶುರುವಾಗಿದೆ. ಗಣಿ ರಾಜಕೀಯ ಕರ್ನಾಟಕಕ್ಕೆ ಶಾಪವಾಗಿ ಪರಿಣಮಿಸಿದೆ. ಬಾಟಲಿಯಿಂದ ಹೊಡೆದಾಡುವ ಅಯೋಗ್ಯರೆಲ್ಲಾ ಶಾಸಕರಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕರನ್ನು ಟೀಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ ರತ್ನ ನೀಡಿ ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕ್ಕಾಗಲ್ಲ: ಜಯಮಾಲಾ

    ಭಾರತ ರತ್ನ ನೀಡಿ ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕ್ಕಾಗಲ್ಲ: ಜಯಮಾಲಾ

    ಉಡುಪಿ: ನಡೆದಾಡುವ ದೇವರಿಗೆ ನೆಪ ಮಾತ್ರಕ್ಕೆ ಭಾರತ ರತ್ನ ಸಿಗಬೇಕು ಅಷ್ಟೆ ಯಾಕೆಂದರೆ ಶ್ರೀಗಳು ಭಾರತ ರತ್ನ ಪ್ರಶಸ್ತಿಗಿಂತಲೂ ಮೀರಿ ಬೆಳೆದವರು. ಹಾಗೆಯೇ ಪ್ರಣಬ್ ಮುಖರ್ಜಿಗೆ ಭಾರತ ರತ್ನ ನೀಡಿ ಅವರನ್ನು ಬಿಜೆಪಿ ಹೈಜಾಕ್ ಮಾಡಕ್ಕಾಗಲ್ಲ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಬಿಜೆಪಿ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ವರ್ಷವಾದರೂ ಶ್ರೀಗಳಿಗೆ ಪ್ರಶಸ್ತಿ ಬರಲಿ ಅಂತ ಆಶಿಸುತ್ತೇನೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬರಬೇಕು ಅನ್ನೋದು ನಮ್ಮ ಆಶಯವಾಗಿತ್ತು, ಬಂದಿದ್ದರೆ ತುಂಬಾ ಸಂತೋಷ ಆಗ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿದ್ದರಲ್ಲಿ ಯಾವುದೇ ರಾಜಕೀಯ ಇಲ್ಲ. ಪ್ರಶಸ್ತಿ ಕೊಟ್ಟು ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕಾಗಲ್ಲ. ಕಾಂಗ್ರೆಸ್ ನಾಯಕರನ್ನು ಯಾವ ಬಿಜೆಪಿಯವರಿಗೂ ಏನೂ ಮಾಡಕಾಗಲ್ಲ. ಪ್ರಣಬ್ ಮುಖರ್ಜಿ ಭಾರತ ರತ್ನಕ್ಕೆ ಅರ್ಹರು, ಅವರಿಗೆ ಪ್ರಶಸ್ತಿ ನೀಡಿರುವುದರಿಂದ ಖುಷಿಯಾಗಿದೆ ಎಂದು ಹೇಳಿದರು.

    ಕರ್ನಾಟಕದ ಸಾಲುಮರದ ತಿಮ್ಮಕ್ಕ, ನೃತ್ಯ ನಿರ್ದೇಶಕ ಪ್ರಭುದೇವಗೆ ಪದ್ಮ ಪ್ರಶಸ್ತಿ ಬಂದಿದೆ. ಕಲಾವಿದರಿಗೆ ಭಾಷೆಯ ಗಡಿಯಿಲ್ಲ, ಚಿತ್ರರಂಗ ಬೆಳೆಸಿದವರು ಪ್ರಭುದೇವ ಕುಟುಂಬದವರು ಹೀಗಾಗಿ ಅವರಿಗೆ ಪ್ರಶಸ್ತಿ ಬಂದದ್ದು ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.

    ಕಾಂಗ್ರೆಸ್ ಶಾಸಕರ ಹೊಡೆದಾಟದ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕ ಗಣೇಶ್ ಸಿಕ್ಕೇ ಸಿಗ್ತಾರೆ. ಅಧಿಕಾರಿಗಳು ಅವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಗಲಾಟೆ ನಡೆದ ವೇಳೆ ನಾನು ರೆಸಾರ್ಟಿನಲ್ಲಿ ಇರ್ಲಿಲ್ಲ. ಈ ಬಗ್ಗೆ ನನ್ನನ್ನು ಏನೂ ಹೆಚ್ಚು ಕೇಳ್ಬೇಡಿ. ಮಾಧ್ಯಮದವರಿಗೆ ಯಾಕೆ ಆತುರ? ಸಿಕ್ತಾರೆ ಬಿಡಿ ಎಂದು ಹೇಳಿ ಜಯಮಾಲಾ ನುಣುಚಿಕೊಂಡರು.

    ರಾಜಕಾರಣಿಗಳ ಕಾಟಾಚಾರದ ಬರಪ್ರವಾಸ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಬರ ಪ್ರವಾಸ ವಿಚಾರ ನನಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ. ಕೃಷ್ಣೆಬೈರೇಗೌಡರ ಬರ ಪ್ರವಾಸ ಸರಿಯಾಗಿಯೆ ಮಾಡಿದ್ದಾರೆ. ಬರ ಪ್ರವಾಸಕ್ಕೆ ಹೋದಾಗ ಅರಣ್ಯ ನೋಡ್ಕೋಂಡು ಬಂದಿರ್ತಾರೆ. ಬರ ಪರಿಹಾರ ಕೆಲಸ ಮಾಡೋಕೆ ವಿಪಕ್ಷ ಏನೂ ಹೇಳ್ಬೇಕಾಗಿಲ್ಲ. ಎಲ್ಲಾ ನಮ್ಮ ಸರ್ಕಾರವೇ ಮಾಡುತ್ತೆ, ನಮಗೆ ಜವಾಬ್ದಾರಿ ಇದೆ ಎಂದು ಕಿಡಿಕಾರಿದರು.

    ಅಷ್ಟೇ ಅಲ್ಲದೆ ಬರ ಪ್ರವಾಸ ಮಾಡದೆ ಮಗನ ಸಿನಿಮಾವನ್ನು ನಾಲ್ಕಾರು ಬಾರಿ ನೋಡಿದ ಸಿಎಂ ನಡೆಯನ್ನೂ ಜಯಮಾಲಾ ಸಮರ್ಥಿಸಿದರು. ನಿಖಿಲ್ ಕುಮಾರಸ್ವಾಮಿ ಕಷ್ಟಪಟ್ಟು ಸಿನೆಮಾ ಮಾಡಿದ್ದಾರೆ. ಸಿನಿಮಾ ನೋಡೋಕೂ ಲೆಕ್ಕಾಚಾರ ಹಾಕ್ಬೇಡಿ. ಅಪ್ಪನಿಗೆ ಮಕ್ಕಳ ಬೆಳವಣಿಗೆ ಬೇಡ್ವ? ಬರ ಅಂತ ಹೇಳಿ ಊಟ ಮಾಡದೆ ಇರೋದಕ್ಕಾಗುತ್ತಾ ಅಂತ ಪ್ರಶ್ನೆ ಮಾಡಿ ಸಿಎಂ ಕುಮಾರಸ್ವಾಮಿಯವರ ಪರವಹಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ

    ನವದೆಹಲಿ: ವಿಶ್ವರತ್ನ, ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕು ಎನ್ನುವ ಕೋಟ್ಯಂತರ ಕನ್ನಡಿಗರ ದನಿ ಕೊನೆಗೂ ಪ್ರಧಾನಿ ಮೋದಿಗೆ ಕೇಳಿಸಲೇ ಇಲ್ಲ. ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಪ್ರಕಟವಾಗಿದ್ದು ಈ ಬಾರಿಗೆ ಮೂವರಿಗೆ ನೀಡಲಾಗಿದೆ.

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಹಿನ್ನೆಲೆ ಗಾಯಕ ಭೂಪೇನ್ ಹಜಾರಿಕ, ಸಮಾಜ ಸೇವಕ ನಾನಾಜಿ ದೇಶ್‍ಮುಖ್ ಅವರಿಗೆ ಈ ಬಾರಿಯ ಭಾರತ ರತ್ನ ಪ್ರಶಸ್ತಿ ಒಲಿದಿದೆ. ಗಣರಾಜ್ಯೋತ್ಸವದ ಅಂಗವಾಗಿ ದೇಶದ ಮೂವರು ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡ ಗೌರವಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ಹೊರಡಿಸಲಾಗಿದೆ.

    ನಾನಾಜಿ ದೇಶ್‍ಮುಖ್ ಮತ್ತು ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಣಬ್ ಮುಖರ್ಜಿ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

    ಸಿದ್ದಗಂಗಾ ಶ್ರೀಗಳಿಗೆ ಇಲ್ಲ:
    ವಿಶ್ವರತ್ನ, ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳಿಗೆ ಈ ಬಾರಿ ಭಾರತ ರತ್ನ ಸಿಗಬೇಕು ಎಂದು ಕನ್ನಡಿಗರು, ರಾಜಕಾರಣಿಗಳು ಬೇಡಿಕೆ ಇಟ್ಟಿದ್ದರು. ಆದರೆ ಈ ಪಟ್ಟಿಯಲ್ಲಿ ಶ್ರೀಗಳ ಹೆಸರು ಇಲ್ಲದೇ ಇರುವುದು ಕನ್ನಡಿಗರಿಗೆ ಬೇಸರ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೂಜ್ಯ ಗದ್ದುಗೆಯಲ್ಲಿ ಐಕ್ಯರಾದ ಶ್ರೀಗಳು

    ಪೂಜ್ಯ ಗದ್ದುಗೆಯಲ್ಲಿ ಐಕ್ಯರಾದ ಶ್ರೀಗಳು

    ತುಮಕೂರು: ವಿಶ್ವಚೇತನ, ವಿಶ್ವರತ್ನ, ಕಾಯಕಯೋಗಿ, ನಡೆದಾಡುವ ದೇವರು ಡಾ. ಶಿವಕುಮಾರಸ್ವಾಮೀಜಿಗಳ ಯುಗಾಂತ್ಯವಾಗಿದೆ. ಸೋಮವಾರ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿಯವರನ್ನು ಗದ್ದುಗೆಯಲ್ಲಿ ಐಕ್ಯ ಮಾಡಲಾಗಿದೆ.

    ಮಧ್ಯಾಹ್ನ 4.30ರ ವೇಳೆಗೆ ಆರಂಭವಾದ ಕ್ರಿಯಾ ವಿಧಾನ, ವಿಧಿ ವಿಧಾನಗಳು ಅಂತಿಮವಾಗಿ 8.30 ಗಂಟೆಗೆ ಪೂರ್ಣಗೊಂಡಿತು. ಶ್ರೀಗಳು ಚೈತನ್ಯ ಅವರ ದೇಹವನ್ನು ಬಿಟ್ಟು ಹೋದ ಬಳಿಕ ಅವರ ದೇಹಕ್ಕೆ ಮತ್ತೆ ಚೈತನ್ಯ ತುಂಬಲು ಕ್ರಿಯಾ ಸಮಾಧಿ ವಿಧಿ ವಿಧಾನ ಮಾಡಲಾಯಿತು. ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ ಅಧ್ಯಾತ್ಮ ಸಾಧಕರಿಗೆ ಮಾತ್ರ ಲಿಂಗಾಯತ ಕ್ರಿಯಾಸಮಾಧಿ ಮಾಡಲಾಗುತ್ತದೆ.

    ಸಂಜೆ 4.30ಕ್ಕೆ ಆರಂಭವಾದ ಈ ಪ್ರಕ್ರಿಯೆಯಲ್ಲಿ ಕಿರಿಯ ಶ್ರೀಗಳು ಮುಂದಿದ್ದು ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದರು. 5 ಗಂಟೆಗೆ ಶ್ರೀಗಳು ಮಹಾ ಮಂಗಳಾರತಿ ಮಾಡಿದ ಬಳಿಕ ಮೆರವಣಿಗೆಗೆ ಆರಂಭ ಮಾಡಲಾಯಿತು. 5.15 ಗಂಟೆಗೆ ಸುಮಾರಿಗೆ ಲಿಂಗೈಕ್ಯ ದೇಹವನ್ನು 1 ಲಕ್ಷದ 1 ರುದ್ರಾಕ್ಷಿ ಹಾಗೂ ಹೂಗಳಿಂದ ಅಲಂಕಾರ ಮಾಡಿದ್ದ ವಿಮಾನಗೋಪುರದ ಮೂಲಕ ಅಂತಿಮ ಯಾತ್ರೆ ಮೆರವಣಿಗೆ ಆರಂಭ ಮಾಡಲಾಯಿತು.

    ಸಂಜೆ 6 ಗಂಟೆ ವೇಳೆಗೆ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ದಿನೇಶ್ ಗುಂಡೂರಾವ್, ವೀರಪ್ಪ ಮೊಯ್ಲಿ, ದೇಶಪಾಂಡೆ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಜನಾರ್ದನ ರೆಡ್ಡಿ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ವಿ.ಸೋಮಣ್ಣ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು, ಸಂಸದರು, ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದು, ಗೌರವ ಸಲ್ಲಿಸಿದರು. ಬಳಿಕ 3 ಸುತ್ತು ಕುಶಾಲುತೋಪು ಹಾರಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಶ್ರೀಗಳ ಲಿಂಗ ದೇಹದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಸಿಎಂ ಕುಮಾರಸ್ವಾಮಿ ಅವರು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದರು. ಈ ಮೂಲಕ ಅಧಿಕೃತವಾಗಿ ಶ್ರೀಗಳ ಲಿಂಗಕಾಯವನ್ನು ಮಠಕ್ಕೆ ಹಸ್ತಾಂತರ ಮಾಡಿದರು. ರಾಷ್ಟ್ರಧ್ವಜ ಹೊದಿಸುವಾಗ “ಶ್ರೀಗಳಿಗೆ ಭಾರತರತ್ನ ನೀಡಿ” ಎನ್ನುವ ಘೋಷ ಕೇಳಿಬಂತು.

    ಪಂಚ ವಾದ್ಯಗಳ ಮೂಲಕ ಶಿವಯೋಗಿಗಳ ಗದ್ದುಗೆವರೆಗೂ ಮೆರವಣಿಗೆ ಮಾಡಲಾಯಿತು. “ಶಿವಕುಮಾರ ಸ್ವಾಮೀಜಿಗಳಿಗೆ, ನಡೆದಾಡುವ ದೇವರಿಗೆ ಜಯವಾಗಲಿ, ಅನ್ನ ದಾಸೋಹಿಗೆ ಜಯವಾಗಲಿ, ಜ್ಞಾನ ದಾಸೋಹಿಗೆ ಜಯವಾಗಲಿ” ಎಂಬ ಘೋಷ ಕೂಗುತ್ತಾ 3 ಪ್ರದಕ್ಷಿಣೆ ಮಾಡಿದ ಬಳಿಕ ಗದ್ದುಗೆಯ ಸಮಾಧಿ ಸ್ಥಳದಲ್ಲಿ ಐವರು ಸ್ವಾಮೀಜಿಗಳು ಈ ವೇಳೆ ಕ್ರಿಯಾ ವಿಧಿ ವಿಧಾನಗಳನ್ನು ಆರಂಭಿಸಿದರು. ಗದ್ದುಗೆ ಪೂಜೆ ಸ್ಥಳದಲ್ಲಿ ಕ್ರಿಯಾ ಸಮಾಧಿ ಶಾಸ್ತ್ರಗಳು, ಮಂತ್ರ ಪಠಣ ಮೂಲಕ ಕಾರ್ಯ ನಡೆಯಿತು. ಅಟವೀ ಶಿವಯೋಗಿಗಳ ಗದ್ದುಗೆಯ ಅರ್ಚಕರೂ ಕೂಡ ಈ ಪೂಜೆಯಲ್ಲಿ ತೊಡಗಿದ್ದರು. ಬೆಳಗ್ಗೆಯಿಂದಲೇ ನಡೆದ ಪೂಜೆ ಶಾಸ್ತ್ರಗಳನ್ನು ಕಿರಿಯ ಸ್ವಾಮೀಜಿಗಳು ಪೂರ್ಣಗೊಳಿಸಿದರು. ಕ್ರಿಯಾ ಸಮಾಧಿ ವೇಳೆ 10 ರಿಂದ 11 ಸಾವಿರ ವಿಭೂತಿ ಗಟ್ಟಿ, 20 ಚೀಲ ಅಂದರೆ 500 ಕೆಜಿ ಉಪ್ಪು, 10 ಚೀಲ ಮರಳು, 1001 ವಿವಿಧ ರೀತಿಯ ಪತ್ರೆಗಳನ್ನು ಬಳಕೆ ಮಾಡಲಾಗಿತ್ತು.

    ಕ್ರಿಯಾ ಸಮಾಧಿ: ವೀರಶೈವ ಲಿಂಗಾಯಿತ ಆಗಮೋಕ್ತ ಕ್ರಿಯಾ ಸಮಾಧಿ ವಿಧಿ ವಿಧಾನಗಳ ಮೂಲಕ ಶ್ರೀಗಳ ಕ್ರಿಯಾ ಸಮಾಧಿಯನ್ನು ಮಾಡಲಾಯಿತು. 9 ಪಾದ ಆಳ, 9 ಪಾದ ಉದ್ದ, 5 ಪಾದ ಅಗಲದಲ್ಲಿ ನಿರ್ಮಾಣವಾಗಿರುವ ಕ್ರಿಯಾ ಸಮಾಧಿಯಲ್ಲಿ 3 ಹಂತಗಳಲ್ಲಿ ಮೆಟ್ಟಿಲು (ಸೋಪನ) ನಿರ್ಮಾಣ ಮಾಡಲಾಗಿರುತ್ತದೆ. ಶ್ರೀಗಳ ಪಾರ್ಥಿವ ಶರೀರವನ್ನು ಕೂರಿಸಲು ಆದರೊಳಗೆ ತ್ರಿಕೋನಾಕೃತಿಯಲ್ಲಿ ಗೂಡು ನಿರ್ಮಿಸಲಾಗಿತ್ತು. ಇದರಲ್ಲಿ ಶ್ರೀಗಳ ಐಕ್ಯವನ್ನಿಟ್ಟು, ವಿಭೂತಿ, ಪತ್ರೆ, ಉಪ್ಪು ಸೇರಿದಂತೆ ವಿವಿಧ ಬಿಲ್ವಪತ್ರೆಗಳನ್ನ ಕ್ರಿಯಾ ಸಮಾಧಿಯನ್ನು ಮುಚ್ಚಲಾಯಿತು.

    ಮೊದಲಿಗೆ ಪಾರ್ಥೀವ ಶರೀರಕ್ಕೆ ನಾಡಿನ ಪುಣ್ಯ ನದಿಗಳಿಂದ ತರಿದ್ದ ಪವಿತ್ರ ತೀರ್ಥದಿಂದ ಅಭಿಷೇಕ ನೆರವೇರಿಸಿ ಹೊಸ ಕಶಾಯ ವಸ್ತ್ರಗಳನ್ನು ಧಾರಣೆ ಮಾಡಲಾಯಿತು. ಈ ವೇಳೆ ಪಂಚಾಮೃತ ಹಾಗೂ ಪತ್ರೆ ಇಟ್ಟು ಪ್ರತಿ ಸೋಪಾನದಲ್ಲೂ ಅಭಿಷೇಕ ನಡೆಸಲಾಯಿತು.

    ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಿ, ಕೈಗೆ ಇಷ್ಟ ಲಿಂಗವನ್ನು ನೀಡಲಾಯಿತು. ನಂತರ ರುದ್ರ ಚಮಕ ಪಠಣ ಮಾಡುತ್ತಾ ಪಾರ್ಥೀವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಈ ವೇಳೆ ಶ್ರೀಗಳಿಗೆ ಮಹಾ ಮಂಗಳಾರತಿ ಹಾಗೂ ತಂಬಿಟ್ಟು, ಚಿಗಲಿ ಹಾಗೂ ಹಸಿ ಕಡಲೆಕಾಳು ನೈವೇದ್ಯ ನೆರವೇರಿಸಲಾಯಿತು. ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಲಿಂಗ ಶರೀರವನ್ನು ಮುಚ್ಚಲಾಯಿತು.

    https://www.youtube.com/watch?v=S5rWpX2kQ2g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯದಿಂದ ಹಿಡಿದು ಕ್ರಿಯಾ ವಿಧಾನವರೆಗೂ ಅಚ್ಚುಕಟ್ಟಾಗಿ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಗೆ ಸಿಎಂ ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ.

    ಶ್ರೀಗಳಿಗೆ ಸರ್ಕಾರದ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಭಕ್ತರು ಶ್ರೀಗಳ ದರ್ಶನ ಹಾಗೂ ಅಂತಿಮ ಕ್ರಿಯಾ ವಿಧಾನವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಶಾಂತಿಯಿಂದ ನಡೆದುಕೊಂಡ ಕಾರಣ ಧನ್ಯವಾದ ತಿಳಿಸಿದರು. ಅಲ್ಲದೇ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿ ಔರಾದ್ಕಾರ್ ವರದಿ ಜಾರಿ ಮಾಡುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

    ರಾತ್ರಿಯೆಲ್ಲಾ ಮಠದ ಎನ್‍ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರು ರಾತ್ರಿ ಇಡೀ ನಿಂತು ಶ್ರಮವಹಿಸಿದ್ದೀರಾ. ರಾಜ್ಯ ಸರ್ಕಾರ ಪೊಲೀಸರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಮಠದ ಆವರಣದಲ್ಲಿ ಈ ಕುರಿತು ಭರವಸೆ ನೀಡುತ್ತಿದ್ದು, ಔರಾದ್ಕಾರ್ ವರದಿ ಜಾರಿ ಮಾಡುವ ಕಾರ್ಯ ಮಾಡಲಾಗುತ್ತದೆ. ಅಲ್ಲದೇ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಖುದ್ದು ಭೇಟಿ ಮಾಡಿ ಶಿಪಾರಸ್ಸು ಮಾಡುತ್ತೇನೆ. ಈ ಬಗ್ಗೆ ಭಕ್ತರಿಗೆ ಭರವಸೆ ನೀಡುತ್ತೇನೆ ಎಂದು ಸಿಎಂ ತಿಳಿಸಿದರು.

    ಮುಂದಿನ ಸಮಯದಲ್ಲೂ ಮಠಕ್ಕೆ ಆಗಮಿಸುವ ಭಕ್ತರಿಗೆ ಸೌಲಭ್ಯ ಕಲ್ಪಿಸಿಕೊಡಲಾವುದು. ನಾಡಿಗೆ ಪೊಲೀಸ್ ಇಲಾಖೆ ಸಲ್ಲಿಸಿರುವ ಸೇವೆಗೆ ರಾಜ್ಯದ ಜನರು ಕೂಡ ಅಭಿನಂದನೆ ಸಲ್ಲಿಸುತ್ತಾರೆ. ನಿಮ್ಮ ಉತ್ತಮ ಸೇವೆ ಹೀಗೇ ಮುಂದುವರಿಯಲಿ ಎಂದು ಮನವಿ ಮಾಡುತ್ತೇನೆ ಎಂದರು.

    https://www.youtube.com/watch?v=nE4fxo3zMMQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರಿಗೆ ಭಾರತ ರತ್ನ ನೀಡಿ ಗೌರವಿಸಿ: ಧ್ವನಿಗೂಡಿಸಿದ ಹಲವು ನಾಯಕರು

    ನಡೆದಾಡುವ ದೇವರಿಗೆ ಭಾರತ ರತ್ನ ನೀಡಿ ಗೌರವಿಸಿ: ಧ್ವನಿಗೂಡಿಸಿದ ಹಲವು ನಾಯಕರು

    ತುಮಕೂರು: ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎನ್ನುವ ಬೇಡಿಕೆಗೆ ಹಲವು ನಾಯಕರು ಧ್ವನಿಗೂಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪತ್ರವನ್ನು ಕಳುಹಿಸಿದ್ದೇನೆ ಎಂದು ತಿಳಿಸಿದರು.

    ಪೂಜ್ಯ ಶ್ರೀಗಳಿಗೆ ಆದಷ್ಟು ಬೇಗ ಭಾರತ ರತ್ನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವುದು ನಮ್ಮೆಲ್ಲರ ಭಾಗ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಇದನ್ನು ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಪತ್ರ- ಮಲ್ಲಿಕಾರ್ಜುನ ಖರ್ಗೆ

    ಯಾವಾಗಲೋ ಭಾರತ ರತ್ನ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಚರ್ಚೆ ನಡೆಸಿ, ಆದಷ್ಟು ಬೇಗ ಶ್ರೀಗಳಿಗೆ ಭಾರತ ರತ್ನ ಸಿಗುವಂತೆ ಶ್ರಮಿಸಬೇಕು. ಶ್ರೀಗಳಿಗೆ ಭಾರತ ರತ್ನ ನೀಡಿದರೆ, ಪುರಸ್ಕರಕ್ಕೆ ಮತ್ತಷ್ಟು ಗೌರವ ಬರುತ್ತದೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಆಗ್ರಹಿಸಿದರು.

    ಸಾರ್ವಜನಿಕರು ಕೂಡ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಕೂಡ ಶಿವಕುಮಾರ ಸ್ವಾಮೀಜಿ ಭಾರತ ರತ್ನ ಗೌರವ ಅಂತ ಆಗ್ರಹಿಸಿ ಅಭಿಯಾನ ಆರಂಭಿಸಿದೆ. ಇದನ್ನು ಓದಿ: ಪವಾಡ ಎಂಬಂತೆ 45 ನಿಮಿಷ ಸ್ವಂತವಾಗಿ ಉಸಿರಾಟ – ನಡೆದಾಡುವ ದೇವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ

    ಶ್ರೀಗಳ ಭಾವಚಿತ್ರ ಅನಾವರಣ: ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವನ್ನು ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಬಿಡಿಸಿದ್ದು, ಅದನ್ನು ಕಿರಿಯ ಶ್ರೀಗಳು ಅನಾವರಣ ಮಾಡಿದರು.

    ಪ್ರಾರ್ಥನೆ ಮುಗಿಸಿದ ಬಳಿಕ ಭಾವಚಿತ್ರವನ್ನು ಅನಾವರಣ ಮಾಡಿದ ಕಿರಿಯ ಶ್ರೀಗಳು, ವಾಸ್ತವಕ್ಕೆ ಹತ್ತಿರ ಇರುವ ಶಿವಕುಮಾರ ಸ್ವಾಮೀಜಿಗಳ ಚಿತ್ರವನ್ನೇ ವಿದ್ಯಾರ್ಥಿ ಬಿಡಿಸಿದ್ದಾನೆ ಎಂದು ಕಿರಿಯ ಶ್ರೀಗಳು ಕೊಂಡಾಡಿದರು. ಈ ವೇಳೆ ಸಾವಿರಾರು ವಿದ್ಯಾರ್ಥಿಗಳು ಸಾಲಾಗಿ ಕುಳಿತು ಶ್ರೀಗಳಿಗೆ ಮತ್ತಷ್ಟು ಆರೋಗ್ಯ ಹಾಗೂ ಆಯಸ್ಸನ್ನು ಕರುಣಿಸಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಪತ್ರ- ಮಲ್ಲಿಕಾರ್ಜುನ ಖರ್ಗೆ

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಪತ್ರ- ಮಲ್ಲಿಕಾರ್ಜುನ ಖರ್ಗೆ

    ತುಮಕೂರು: ನಡೆದಾಡುವ ದೇವರು, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಶ್ರೀಗಳಿಗೆ ಉಸಿರಾಟದ ತೊಂದರೆಯಿದ್ದು ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸ ಇದೆ ಎಂದರು.

    ಪೂಜ್ಯರು ದೇಶಕ್ಕೆ ವಿಶೇಷ ನೀಡಿದ್ದಾರೆ. ಅವರಿಗೆ ಭಾರತ ರತ್ನ ಕೊಡುವಂತೆ ಪಕ್ಷಾತೀತವಾಗಿ ಒತ್ತಾಯ ಮಾಡಬೇಕು. ಈ ಸಂಬಂಧ ನಾನು ಕೂಡ ಕೇಂದ್ರಕ್ಕೆ ಪತ್ರ ಬರೆದು ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

    ವೈದ್ಯ ಡಾ.ಪರಮೇಶ್ ಅವರು ನಿನ್ನೆಯಷ್ಟೇ ಸಿದ್ದಗಂಗಾ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಮತ್ತೆ ಅವರ ಶ್ವಾಸಕೋಶದ ಎರಡೂ ಭಾಗದಲ್ಲಿ ನೀರು ತುಂಬಿಕೊಂಡಿದೆ. ಈಗಾಗಲೇ ದೇಹದಿಂದ ನೀರನ್ನು ಹೊರಕ್ಕೆ ತೆಗೆಯಲಾಗಿದೆ. ಸದ್ಯ ಶ್ರೀಗಳು ಸನ್ನೆ ಮೂಲಕವೇ ಮಾತನಾಡುತ್ತಿದ್ದು, ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಮಲಗಿದಲ್ಲಿಯೇ ಶ್ರೀಗಳು ಅವರ ಕೈಕಾಲುಗಳ ಚಲನವಲನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರ‍್ಯಾಂಕ್ ಬದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ: ಸಿಎನ್‍ಆರ್ ರಾವ್

    ರ‍್ಯಾಂಕ್ ಬದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ: ಸಿಎನ್‍ಆರ್ ರಾವ್

    ಧಾರವಾಡ: ರ‍್ಯಾಂಕಿಂಗ್‌ ಬದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ ಎಂದು ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅಭಿಪ್ರಾಯಪಟ್ಟಿದ್ದಾರೆ.

    ನಗರದಲ್ಲಿ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣ ಅಕಾಡೆಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಜಗತ್ತಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಫಿನ್‍ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ. ಅಮೆರಿಕ ಕೂಡ 25ನೇ ಸ್ಥಾನದಲ್ಲಿದೆ. ಅಲ್ಲಿಯೂ ಕೂಡ ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಆದರೆ ನಮ್ಮ ದುರಾದೃಷ್ಟವೆಂದರೆ ಭಾರತ ಈ ವಿಚಾರದಲ್ಲಿ ನೂರನೇ ಸ್ಥಾನವನ್ನು ದಾಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇಂದಿನ ದಿನಗಳಲ್ಲಿ ಮಕ್ಕಳು ರ‍್ಯಾಂಕ್ ತರುವ ಸ್ಪರ್ಧೆಯಲ್ಲಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ನಾವು ಮೊದಲು ಬಿಎಸ್ಸಿ ಮಾಡಬೇಕು, ನಂತರ ಐಐಟಿ ಮಾಡಬೇಕು, ಇದರ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವ ಯತ್ನದಲ್ಲಿದ್ದಾರೆ. ಇದರಿಂದಾಗಿ ದೇಶದಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆಮ ಇನ್ನು ಕೆಲವರು ಹುಚ್ಚರಾಗುತ್ತಿದ್ದಾರೆ ಎಂದು ಬೇಸರಿಸಿದರು.

    ಎಲ್ಲರೂ ಗಮನದಲ್ಲಿಟ್ಟಿಕೊಳ್ಳಿ, ನಮಗೆ ರ‍್ಯಾಂಕ್ ಬದಲು ಗುಣಮಟ್ಟದ ಶಿಕ್ಷಣದ ಅಗತ್ಯತೆ ಇದೆ. ಈ ಬಗ್ಗೆ ಎಲ್ಲಾ ಕಡೆ ನಾನು ಹೇಳುತ್ತಲೇ ಇರುತ್ತೇನೆ. ನಮ್ಮ ದೇಶದಲ್ಲಿ 50 ಕೋಟಿ ಮಕ್ಕಳು ಗ್ರಾಮೀಣ ಭಾಗಗಳಲ್ಲಿ ಇದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಮಕ್ಕಳು ಬೇರೆ ಕಡೆ ಎಲ್ಲೂ ಇಲ್ಲ. ಅವರಿಗೆ ನಾವು ಸಹಾಯ ಮಾಡಬೇಕು. ಅವರಲ್ಲಿ ಪ್ಯಾರಡೆ, ನ್ಯೂಟನ್‍ರಂತಹ ವ್ಯಕ್ತಿಗಳು ಅಡಗಿದ್ದಾರೆ. ಅದನ್ನು ನಾವು ಹೊರಗೆ ತೆಗೆಯಬೇಕು. ಆಗ ಮಾತ್ರ ನಾವು ಒಳ್ಳೆಯ ಶಿಕ್ಷಕರಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

    ಬಡ ಕೂಲಿ ಮಾಡುವ ಮಕ್ಕಳನ್ನು, ನಾವು ಉನ್ನತ ಮಟ್ಟದ ಶಿಕ್ಷಣ ನೀಡಿ ಅವರನ್ನು ಉನ್ನತ ಮಟ್ಟಕ್ಕೆ ತರುವುದೇ ಗುರಿಯಾಗಿರಬೇಕು. ದೇಶದ ಪ್ರಧಾನಿ ಸೇರಿದಂತೆ ರಾಜಕೀಯ ಪ್ರತಿನಿಧಿಗಳು, ಯಾವೊಬ್ಬ ಅಧಿಕಾರಿಯೂ ಮಾಡದೇ ಇರುವಂತಹ ಕೆಲಸ ಶಿಕ್ಷಕರದ್ದು. ಅದನ್ನು ಎಲ್ಲರೂ ಸರಿಯಾಗಿ ನಿರ್ವಹಿಸಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews