Tag: ಭಾರತ ಬಂದ್

  • ನಾಳೆ ಕರ್ನಾಟಕ ಬಂದ್‌ – ಏನಿರುತ್ತೆ? ಏನು ಇರಲ್ಲ?

    ನಾಳೆ ಕರ್ನಾಟಕ ಬಂದ್‌ – ಏನಿರುತ್ತೆ? ಏನು ಇರಲ್ಲ?

    ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಾಳೆ ಭಾರತ್ ಬಂದ್ ನಡೆಸಲಾಗುತ್ತಿದೆ. ಇದರ ಭಾಗವಾಗಿ ಕರ್ನಾಟಕ ಬಂದ್‌ಗೂ ಕರೆ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಹೋರಾಟಗಾರರು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು, ಸಂಘಟನೆಗಳು ನೈತಿಕ ಬೆಂಬಲ ನೀಡಿವೆ. ಹೀಗಾಗಿ ಕರ್ನಾಟಕದಲ್ಲಿ ಬಂದ್‌ ಬಿಸಿ ನಾಳೆ ಇರಲ್ಲ.

    ಬಂದ್‌ ಯಾಕೆ?
    ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುಂತೆ ಒತ್ತಾಯಿಸಿ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನಾಳೆಗೆ ನಾಲ್ಕು ತಿಂಗಳು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಬಂದ್ ಯಶಸ್ವಿಗೊಳಿಸಲು, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ಮನವಿ ಮಾಡಲಾಗಿದೆ.

    ಕರ್ನಾಟಕದಲ್ಲೂ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ. ರಾಜ್ಯದ ಎಲ್ಲ ನಾಗರೀಕರು ಬಂದ್‌ಗೆ  ಬೆಂಬಲ ಸೂಚಿಸುವಂತೆ ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕ ಮತ್ತು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

    ಬಂದ್‌ ಇರಲ್ಲ:  ಕಳೆದ ಆರು ತಿಂಗಳಿಂದ ಕರ್ನಾಟಕದಲ್ಲಿ 3- 4 ಬಾರಿ ಬಂದ್ ಆಚರಣೆ ಮಾಡಲಾಗಿದೆ. ಇದಕ್ಕೆ ರಾಜ್ಯದ ಜನರು ರೈತರು ಅಂದು ಅಭೂತಪೂರ್ವ ಬೆಂಬಲ ನೀಡಿದ್ದಾರೆ ಆದರೆ ಈ ಬಾರಿಯ ಬಂದ್ ಬಗ್ಗೆ ಪೂರ್ವಯೋಜಿತವಾಗಿ ರಾಜ್ಯದ ಎಲ್ಲ ರೈತ, ಜನಪರ ಸಂಘಟನೆಗಳು ಚರ್ಚಿಸಿದೆ ಇರುವ ಕಾರಣ ಯಶಸ್ವಿ ಬಂದ್ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ನಾವು ರಾಜ್ಯದಲ್ಲಿ ಬಂದ್ ಕಾರ್ಯಕ್ರಮದ ಬದಲು ಎಲ್ಲಾ ಜಿಲ್ಲೆಯಲ್ಲಿ ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ರಾಷ್ಟ್ರೀಯ ಕಿಸಾನ್ ಸಂಯುಕ್ತ ಮೋರ್ಚಾ ಕರೆಯನ್ನು ಈ ರೀತಿಯಲ್ಲಿ ಕರ್ನಾಟಕದ ರೈತರು ಬೆಂಬಲಿಸಲಿದ್ದೇವೆ ಅಂತ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

    ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಜನಪರ ಸಂಘಟನೆಗಳ ಜೊತೆ ಚರ್ಚಿಸದೇ ಭಾರತ್ ಬಂದ್ ಗೆ ಕರೆ ನೀಡಿದೆ. ಹೀಗಾಗಿ ನಾಳೆ ರಾಜ್ಯದಲ್ಲಿ ಬಂದ್ ನಡಸದಿರಲು ರಾಜ್ಯ ರೈತ ಸಂಘಟನೆಗಳು ತೀರ್ಮಾನ ಮಾಡಲಾಗಿದೆ. ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಬೆಂಬಲ ನೀಡಿದವರು ಯಾರು?
    ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ನಾಳೆ ಬೆಳಿಗ್ಗೆ 11.30ಕ್ಕೆ ಮೆಜೆಸ್ಟಿಕ್ ನಲ್ಲಿ ಪ್ರತಿಭಟನೆ ಮಾಡಲಿದೆ. ನಮ್ಮ ಚಾಲಕರ ಟ್ರೇಡ್ ಯೂನಿಯನ್, ಅದರ್ಶ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ರಾಷ್ಟ್ರೀಯ ವಾಹನ ಚಾಲಕರ ಒಕ್ಕೂಟ, ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘ, ಕರವೇ ಪ್ರವೀಣ್ ಶೆಟ್ಟಿ ಬಣ, ಆಟೋ ಚಾಲಕರ ಸಂಘ, ಪೀಸ್ ಆಟೋ ಚಾಲಕ ಸಂಘ, ಹೋಟೆಲ್ ಮಾಲೀಕರು ನೈತಿಕ ಬೆಂಬಲ ಸೂಚಿಸಿದ್ದಾರೆ.

    ನಾಳೆ ಏನಿರತ್ತೆ?
    ಎಂದಿನಂತೆ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್ ಸಂಚಾರ ಇರಲಿದೆ. ಮೆಟ್ರೋ, ಆಟೋ ಸಂಚಾರ ಕೂಡ ಎಂದಿನಂತೆ ಇರಲಿದೆ. ಓಲಾ-ಊಬರ್, ಖಾಸಗಿ ಬಸ್, ರೈಲ್ವೇ ಸಂಚಾರದಲ್ಲಿ ವ್ಯತ್ಯಯ ಇಲ್ಲ . ಶಾಲೆ, ಕಾಲೇಜುಗಳಿಗೆ ರಜೆ ನೀಡಿಲ್ಲ.

    ಮಾರುಕಟ್ಟೆ ವ್ಯಾಪಾರ ವಹಿವಾಟಿಗೆ ಯಾವುದೇ ಅಡ್ಡಿ ಇಲ್ಲ. ಮೆಡಿಕಲ್ ಅಂಗಡಿ ಮತ್ತು ಹಾಲಿನ‌ ಮಳಿಗೆಗಳು ಎಂದಿಂತೆ ತೆರಿದಿರುತ್ತವೆ. ಲಾರಿ ಮಾಲೀಕರಿಂದ ಬೆಂಬಲ ನೀಡದ ಕಾರಣ ಎಂದಿನಂತೆ ಲಾರಿಗಳು ಸಂಚರಿಸಲಿವೆ.

    ನಾಳೆ ಏನಿರಲ್ಲ?
    ರಾಷ್ಟ್ರೀಯ ಚಾಲಕರ ವೇದಿಕೆ ಮತ್ತು ನಮ್ಮ ಚಾಲಕರ ಟ್ರೇಡ್ ಯೂನಿಯನ್ (ಟ್ಯಾಕ್ಸಿ) ಬಂದ್‌ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಕಡೆ ಹೋಗುವ ಟ್ಯಾಕ್ಸಿಗಳ ಜೊತೆ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಲು ವಾಹನಗಳು ಸಿಗುವುದು ಅನುಮಾನ.

  • ದೆಹಲಿಯ ಆಂದೋಲನದ ಕಿಚ್ಚು ದೇಶವ್ಯಾಪಿ ಹರಡಬೇಕು: ಅಣ್ಣಾ ಹಜಾರೆ

    ದೆಹಲಿಯ ಆಂದೋಲನದ ಕಿಚ್ಚು ದೇಶವ್ಯಾಪಿ ಹರಡಬೇಕು: ಅಣ್ಣಾ ಹಜಾರೆ

    ಮುಂಬೈ: ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಅಂದೋಲನ ದೇಶದ ಪ್ರತಿಭಾಗಕ್ಕೂ ವಿಸ್ತರಣೆ ಆಗಬೇಕು. ಹಾಗಾದ್ರೆ ಮಾತ್ರ ಸರ್ಕಾರದ ಮೇಲೆ ಒತ್ತಡ ಬೀಳುತ್ತೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ನೀಡಿರುವ ಅಣ್ಣಾ ಹಜಾರೆ ಒಂದು ದಿನದ ಉಪವಾಸ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

    ಕಳೆದ 10 ದಿನಗಳಿಂದ ದೆಹಲಿ ಗಡಿಭಾಗದಲ್ಲಿ ಚಳಿಯನ್ನ ಲೆಕ್ಕಿಸದೇ ರೈತರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಆಂದೋಲನ ದೇಶವ್ಯಾಪಿ ವಿಸ್ತರಣೆ ಆಗಬೇಕು. ಸರ್ಕಾರದ ಒತ್ತಡ ಹೇರಲು ದೇಶದ ಎಲ್ಲ ರೈತರು ರಸ್ತೆಗಿಳಿದಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತೆ. ಹಾಗಾಗಿ ಈ ಆಂದೋಲನದಲ್ಲಿ ದೇಶದ ಜನತೆ ಭಾಗಿಯಾಗಬೇಕು ಎಂದು ಅಣ್ಣಾ ಹಜಾರೆ ಮನವಿ ಮಾಡಿಕೊಂಡಿದ್ದಾರೆ.

    ಈ ಹೋರಾಟದಲ್ಲಿ ಯಾರು ಅಹಿಂಸ ಮಾರ್ಗದತ್ತ ಹೆಜ್ಜೆ ಹಾಕಬಾರದು ಎಂಬುವುದು ನನ್ನ ಮನವಿ. ಕೃಷಿ ವಲಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದುವೇ ಸೂಕ್ತ ಸಮಯ. ಈ ಮೊದಲು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಅವರ ಜೊತೆಯಲ್ಲಿರುತ್ತೇನೆ. ಕೇಂದ್ರ ಸರ್ಕಾರ ರೈತರಿಗೆ ಆಶ್ವಾಸನೆ ನೀಡುವ ಬದಲು ಸಮಸ್ಯೆಗಳ ಪರಿಹರಿಸಲು ಮುಂದಾಗಬೇಕೆಂದು ಅಣ್ಣಾ ಹಜಾರೆ ಆಗ್ರಹಿಸಿದ್ದಾರೆ.

  • ರೈತ ಕಾಯ್ದೆಗೆ ವಿರೋಧ – ಉಡುಪಿಯಲ್ಲಿ ಬೃಹತ್ ಹೋರಾಟಕ್ಕೆ ಎಡಪಕ್ಷ ಸಿದ್ಧತೆ

    ರೈತ ಕಾಯ್ದೆಗೆ ವಿರೋಧ – ಉಡುಪಿಯಲ್ಲಿ ಬೃಹತ್ ಹೋರಾಟಕ್ಕೆ ಎಡಪಕ್ಷ ಸಿದ್ಧತೆ

    ಉಡುಪಿ: ದೇಶದ ಸುಮಾರು ಮುನ್ನೂರು ರೈತ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8ರ ಭಾರತ ಬಂದ್‍ಗೆ ಉಡುಪಿ ಜಿಲ್ಲೆಯಲ್ಲಿ ಎಡಪಕ್ಷಗಳು ಬೆಂಬಲ ಘೋಷಿಸಿದೆ. ಉಡುಪಿಯಲ್ಲಿ ಸಭೆ ಸೇರಿದ ಸಿಐಟಿಯು ಸಂಘಟನೆಯ ಸದಸ್ಯರು, ರೈತರ ಹೋರಾಟಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ರೈತರ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದೆ. ಕಾರ್ಪೊರೇಟ್ ಕಂಪೆನಿಗಳ ಪರವಾಗಿರುವ ಈ ತಿದ್ದುಪಡಿಯನ್ನು ನಾವು ವಿರೋಧಿಸುತ್ತೇವೆ ಎಂದು ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

    ಉಡುಪಿಯಲ್ಲಿ ಮಾತನಾಡದ ಅವರು, ಅದಾನಿ, ಅಂಬಾನಿಗೆ ಬೆಂಬಲ ನೀಡುವ ಇಂತಹ ಕಾಯ್ದೆಗಳಿಗೆ ನಮ್ಮ ಬೆಂಬಲವಿಲ್ಲ. ಕೇಂದ್ರ ಸರ್ಕಾರದ ಜೊತೆ ಆರು ಸುತ್ತುಗಳ ಮಾತುಕತೆ ನಡೆದರೂ ಫಲ ನೀಡದ ಕಾರಣ ಭಾರತ ಬಂದ್ ನಡೆಸುವುದು ಅನಿವಾರ್ಯವಾಗಿದೆ. ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರವು ರೈತ ವಿರೋಧಿ ಕಾಯಿದೆಗಳನ್ನು ವಾಪಸ್ ಪಡೆಯಲು ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ ಕಳೆದ 11 ದಿನಗಳಿಂದ ದೆಹಲಿಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ. ರೈತರ ಮುಂದಿನ ಹೋರಾಟದ ಭಾಗವಾಗಿ 300 ರೈತ ಸಂಘಟನೆಗಳು ರೈತರ ಬೇಡಿಕೆಗಳಿಗಾಗಿ ಡಿ.8 ರಂದು ಜನತಾ ಕಫ್ರ್ಯೂ- ಅಖಿಲಭಾರತ ಬಂದ್ ಗೆ ಕರೆ ನೀಡಿರುವುದನ್ನು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ. ಈ ಕಾಯಿದೆಗಳು ಜಾರಿಯಾದಲ್ಲಿ ಈಗಾಗಲೇ ಸಂಕಷ್ಟಕ್ಕೆ ಒಳಗಾಗಿರುವ ರೈತರು, ದವಸ ಧಾನ್ಯಗಳ ಉತ್ಪಾದನೆ ತೀವ್ರವಾಗಿ ಕುಂಠಿತಗೊಳ್ಳುತ್ತದೆ. ಡಿ.8ರಂದು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲಿದೆ ಎಂದು ಸಿಐಟಿಯು ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.

  • ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಸ್ತ್ರ – ಡಿಸೆಂಬರ್ 8ರ ಬಂದ್‍ಗೆ ಬೆಂಬಲ

    ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಸ್ತ್ರ – ಡಿಸೆಂಬರ್ 8ರ ಬಂದ್‍ಗೆ ಬೆಂಬಲ

    ಬೆಂಗಳೂರು: ನಾಳೆಯಿಂದ ನಡೆಯುವ ಅಧಿವೇಶನದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರವನ್ನ ಕಟ್ಟಿ ಹಾಕಲು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಸಿತು. ಇದೇ ವೇಳೆ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಡಿಸೆಂಬರ್ 8ರಂದು ರೈತರು ಕರೆ ನೀಡಿರುವ ಬಂದ್ ಗೆ ಬೆಂಬಲ ನೀಡುವದಾಗಿ ಘೋಷಿಸಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಲೂಸ್ ಟಾಕ್ ಅವರ ಮಾತನ್ನ ಕಡೆಗಣಿಸಬೇಕು ಎಂಬ ತೀರ್ಮಾನವನ್ನ ಕಾಂಗ್ರೆಸ್ ಸಭೆಯಲ್ಲಿ ಮಾಡಲಾಗಿದೆ. ಕುಮಾರಸ್ವಾಮಿ ಲೂಸ್ ಟಾಕ್ ಅಂತಲೇ ಪರಿಗಣಿಸಿ ನಿರ್ಲಕ್ಷ್ಯ ಮಾಡೋಣ. ಹಿರಿಯ ನಾಯಕರು ಯಾರೂ ಕೂಡ ಕುಮಾರಸ್ವಾಮಿಗೆ ಪ್ರತಿಕ್ರಿಯೆ ಕೊಡೋದು ಬೇಡ. ಕೇವಲ ಎರಡನೇ ಹಂತದ ನಾಯಕರುಗಳು ಮಾತ್ರ ಕುಮಾರಸ್ವಾಮಿಗೆ ಉತ್ತರ ಕೊಟ್ಟರೆ ಸಾಕು ಎಂಬ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಪರಿಷತ್ ನಲ್ಲಿ ಜೆಡಿಎಸ್ ಕೈ ಕೊಡುವುದು ಬಹುತೇಕ ಖಚಿತ. ಜೆಡಿಎಸ್ ಮೋಸ ಮಾಡಿದೆ ಎಂಬುದನ್ನೇ ನಾವು ಪ್ರಚಾರ ಮಾಡಿದರೆ ಸಾಕು. ಯಾವುದೇ ಕಾರಣಕ್ಕೂ ಮತ್ತೆ ಜೆಡಿಎಸ್ ಬೆಂಬಲ ಪಡೆಯೋ ಅಗತ್ಯವಿಲ್ಲ. ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸದ ನಿರ್ಣಯವನ್ನು ಏಕಾಂಗಿಯಾಗಿ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹಿರಿಯ ಶಾಸಕರ ಸಭೆಯಲ್ಲಿ ಹೆಚ್‍ಡಿಕೆ ಅಸ್ತ್ರಕ್ಕೆ ಕಾಂಗ್ರೆಸ್ ನಾಯಕರ ಕಡೆಗಣನೆಯ ಪ್ರತ್ಯಾಸ್ತ್ರ ಹೂಡಲಿದ್ದಾರೆ ಎನ್ನಲಾಗಿದೆ.

    ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರುಗಳ ಸಭೆಯನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಾಯ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರುಗಳು ಭಾಗವಹಿಸಿದ್ದರು. ಗ್ರಾಮ ಪಂಚಾಯ್ತಿ ಚುನಾವಣೆಗೆ ಪ್ರತಿ ಕ್ಷೇತ್ರಕ್ಕೆ ವೀಕ್ಷಕರನ್ನ ನೇಮಕ ಮಾಡಲಾಗಿದ್ದು ಎಲ್ಲಾ ವೀಕ್ಷಕರಿಗೆ ಪಂಚಾಯತಿ ಚುನಾವಣಾ ಸಿದ್ಧತೆ ಬಗ್ಗೆ ಸಭೆಯಲ್ಲಿ ಸಲಹೆ ಸೂಚನೆ ನೀಡಲಾಯ್ತು.

    ಇದೆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಡಿಸೆಂಬರ್ 8 ಕ್ಕೆ ರೈತರು ಕರೆದಿರುವ ಬಂದ್ ಗೆ ಬೆಂಬಲ ಘೋಷಿಸಿದರು. ದೇಶಾದ್ಯಂತ ಕಾಂಗ್ರೆಸ್ ಸಂಪೂರ್ಣ ಬಂದ್ ಗೆ ಬೆಂಬಲ ನೀಡಲಿದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್ ಶಾಸಕರು, ನಾಯಕರು ರಸ್ತೆಗಿಳಿದು ಪ್ರತಿಭಟನೆ ಮಾಡುವಂತೆ ಸೂಚಿಸಲಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.

  • ಭಾರತ್ ಬಂದ್: ಕರ್ನಾಟಕದಲ್ಲಿ ಮೂರುವರೆ ಸಾವಿರ ಕೋಟಿ ನಷ್ಟ

    ಭಾರತ್ ಬಂದ್: ಕರ್ನಾಟಕದಲ್ಲಿ ಮೂರುವರೆ ಸಾವಿರ ಕೋಟಿ ನಷ್ಟ

    ಬೆಂಗಳೂರು: ಸೋಮವಾರ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ನಿಂದ ಕರ್ನಾಟಕ ರಾಜ್ಯದಲ್ಲಿ ಮೂರುವರೆ ಸಾವಿರ ಕೋಟಿ ರೂ. ವ್ಯಾಪಾರ ನಷ್ಟವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಹೇಳಿದೆ.

    ಇನ್ನೂರು ಕೋಟಿ ರೂ. ನೇರವಾಗಿ ಲಾಸ್ ಆಗಿದ್ದರೆ, ಮೂವತ್ತು ಕೋಟಿ ರೂ. ಬರೀ ಪೆಟ್ರೋಲ್ ಬಂಕ್ ಗಳಿಂದ ಬರುವ ಆದಾಯ ನಷ್ಟವಾಗಿದೆ. ಕೈಗಾರಿಕೆಗಳಿಂದ ಬರುವ ನಿತ್ಯದ 160 ಕೋಟಿ ರೂ. ನಷ್ಟವಾಗಿದೆ ಎಫ್‍ಕೆಸಿಸಿಐ ಅಧ್ಯಕ್ಷರಾಗಿ ಸುಧಾಕರ್ ಎಸ್.ಶೆಟ್ಟಿ ಹೇಳಿದ್ದಾರೆ.

    ಬಂದ್ ನಿಂದ ಯಾವ ಪ್ರಯೋಜನವೂ ಇಲ್ಲ. ರಾಜ್ಯ ಸರ್ಕಾರ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಇಳಿಸಲೇಬೇಕು. ಸೆಸ್ ಇಳಿಸಲು ಮೀನಾಮೇಷ ಎಣಿಸುವುದು ಬೇಡ. ಕೈಗಾರಿಕೆಗಳಿಗೆ ಸೇರಿದಂತೆ ಇಡೀ ವ್ಯಾಪಾರಿ ಸಮೂಹಕ್ಕೆ ಬಂದ್ ನಿಂದ ಭಾರೀ ನಷ್ಟವಾಗಿದೆ ಎಂದು ಅವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗಳೂರಿನ ಹಲವೆಡೆ ಬಸ್ಸುಗಳ ಮೇಲೆ ಕಲ್ಲು ತೂರಾಟ

    ಮಂಗಳೂರಿನ ಹಲವೆಡೆ ಬಸ್ಸುಗಳ ಮೇಲೆ ಕಲ್ಲು ತೂರಾಟ

    ಮಂಗಳೂರು: ಭಾರತ್ ಬಂದ್ ನಡುವೆಯೂ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ದಾಂದಲೆ ನಡೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ವರದಿಯಾಗಿದೆ.

    ಭಾರತ್ ಬಂದ್ ನಡುವೆಯೂ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳಿಗೆ ಕದ್ರಿ ಠಾಣೆಯ ಮುಂಭಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ದಾಂದಲೆ ನಡೆಸಿ, ಜ್ಯೋತಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹೊತ್ತಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಇದಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಕೋಡಾಜೆಯಲ್ಲಿನ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಹಂಚಿ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ.

    ಮಂಗಳೂರಿನ ಕದ್ರಿ ಶಿವಭಾಗ್ ನಲ್ಲಿ ಬಂದ್ ನಡುವೆಯೂ ಸೇವೆ ನೀಡುತ್ತಿದ್ದ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆದಿದ್ದು, ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಯೋರ್ವ ಮುಖಕ್ಕೆ ಹೆಲ್ಮೆಟ್ ಧರಿಸಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾನೆ. ಕಲ್ಲು ತೂರಾಟ ನಡೆಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಭಾರತ್ ಬಂದ್‍ಗೆ ವರ್ತಕರು ಹಾಗೂ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಸೋಮವಾರದ ಬಂದ್ ದಿನ ಎಲ್ಲಾ ಅಂಗಡಿಗಳು 1 ಗಂಟೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವುದರ ಬಗ್ಗೆ ಪೋಸ್ಟರ್ ಗಳನ್ನು ಹಾಕಿಕೊಂಡಿದ್ದರು. ಹೀಗಾಗಿ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದರು.

    ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಬಂದೋಬಸ್ತ್ ಕಲ್ಪಿಸಿಕೊಡಲಾಗಿದೆ. ಅಲ್ಲದೇ ಖಾಸಗಿ ಸೇರಿದಂತೆ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕಲ್ಲಡ್ಕದಲ್ಲಿ ಟೈರ್ ಹೊತ್ತಿಸಿ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದವರನ್ನು ಚದುರಿಸಿ, ಉರಿಯುತ್ತಿದ್ದ ಟೈರ್ ಬೆಂಕಿಯನ್ನು ಪೋಲಿಸರು ನಂದಿಸಿದ್ದಾರೆ. ಕುಲಶೇಖರ್ ಬಳಿಯು ಟೈರ್ ಗೆ ಬೆಂಕಿ ಹತ್ತಿಸುವ ಯತ್ನವನ್ನು ವಿಫಲಗೊಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿ ಉದ್ದಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv