Tag: ಭಾರತ್ ಬಂದ್

  • ಕೈಯಲ್ಲಿ ಹೆಲ್ಮೆಟ್ ಇಟ್ಕೊಂಡು ರೋಡಿಗಿಳಿದ ಬಿಎಂಟಿಸಿ ಬಸ್ ಪ್ರಯಾಣಿಕರು..!

    ಕೈಯಲ್ಲಿ ಹೆಲ್ಮೆಟ್ ಇಟ್ಕೊಂಡು ರೋಡಿಗಿಳಿದ ಬಿಎಂಟಿಸಿ ಬಸ್ ಪ್ರಯಾಣಿಕರು..!

    ಬೆಂಗಳೂರು: ಭಾರತ್ ಬಂದ್ ಇರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ಸನ್ನು ಅವಲಂಬಿಸಿರುವ ಪ್ರಯಾಣಿಕರು ತಮ್ಮ ಕೈಯಲ್ಲಿ ಹೆಲ್ಮೆಟ್ ಹಿಡಿದುಕೊಂಡು ಸಿಲಿಕಾನ್ ಸಿಟಿಯಲ್ಲಿ ರೋಡ್‍ಗಿಳಿದಿದ್ದಾರೆ.

    ಚಾರ್ಟೆಡ್ ಅಕೌಂಟೆಂಟ್‍ವೊಬ್ಬರು ಹೆಲ್ಮೆಟ್ ಹಿಡಿದುಕೊಂಡು ರೋಡಿನಲ್ಲಿ ನಿಂತಿದ್ದಾರೆ. ನಾನು ಬೆಳಗ್ಗೆ ಏಳು ಗಂಟೆಗೆ ಜಾಲಹಳ್ಳಿ ಮನೆಯಿಂದ ಹೊರಟೆ. ಅಲ್ಲದೇ ಬಂದ್ ದಿನ ಬಸ್ ವ್ಯತ್ಯಯವಾಗಬಹುದು ಅಂತಾ ಕೈಯಲ್ಲಿ ಒಂದು ಹೆಲ್ಮೆಟ್ ತೆಗೆದುಕೊಂಡು ಬಂದೆ. ಆದರೆ ಪಾಪ ಅಲ್ಲಲ್ಲಿ ಸಾಕಷ್ಟು ಜನ ದ್ವಿಚಕ್ರ ವಾಹನದವರು ಡ್ರಾಪ್ ಕೊಡುತ್ತಿದ್ದಾರೆ. ಈಗ ನಂಗೆ ಬಸ್ ಸಿಗ್ತಿಲ್ಲ, ದ್ವಿಚಕ್ರ ವಾಹನವೂ ಕೂಡ ಸಿಗ್ತಿಲ್ಲ. ಜಿಎಸ್‍ಟಿ ಕೆಲಸ ಎಲ್ಲಾ ಮುಗಿಸಬೇಕಾಗಿದೆ. ಈ ಬಂದ್ ನಿಂದ ಯಾರಿಗೆ ಲಾಭ ಎಂದು ಕಿಡಿಕಾರಿದ್ದಾರೆ.

    ಮಂಗಳವಾರದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ, ಕೆಎಸ್‍ಆರ್ ಟಿಸಿ ನಿರ್ಧರಿಸಿತ್ತು. ಆದರೆ ಕೆಲ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಹೀಗಾಗಿ ಬಹುತೇಕ ಬಸ್‍ಗಳು ಸಂಚಾರವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳು ಬಸ್‍ಗಳಿಲ್ಲದೆ ಪರದಾಟ ನಡೆಸುತ್ತಿದ್ದಾರೆ.

    ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡದೇ ಇರುವುದರಿಂದ ಬೆಳಗ್ಗೆ ಬಸ್ ಇತ್ತು ಎಂದು ವಿದ್ಯಾರ್ಥಿಗಳು ಕಾಲೇಜ್ ಗೆ ಬಂದಿದ್ದರು. ಆದರೆ ಈಗ ಕಾಲೇಜು ರಜೆ ಘೋಷಣೆ ಮಾಡಿದೆ. ಹಾಗಾಗಿ ವಿದ್ಯಾರ್ಥಿಗಳು ಮನೆಗೆ ವಾಪಾಸ್ ಹೋಗುವುದಕ್ಕೆ ಬಸ್ ಇಲ್ಲದೆನಿಲ್ದಾಣದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

    https://www.youtube.com/watch?v=Boi_fgZKdzI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಂದ್ರ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ..!

    ಕೇಂದ್ರ ಸರ್ಕಾರದ ವಿರುದ್ಧ ಅಣಕು ಶವಯಾತ್ರೆ..!

    ಬಳ್ಳಾರಿ: ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್ ಎರಡನೇಯ ದಿನವಾದ ಇಂದು ಕೂಡ ಬಳ್ಳಾರಿಯಲ್ಲಿ ಮುಂದುವರಿದಿದೆ. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಶವಯಾತ್ರೆಯ ಮೂಲಕ ವಿನೂತನವಾಗಿ ಪ್ರತಿಭಟನೆ ಕೈಗೊಂಡಿದ್ದಾರೆ.

    ಬಂದ್ ಕರೆ ಹಿನ್ನೆಲೆಯಲ್ಲಿ ಇಂದು ಸಹ ಬಳ್ಳಾರಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಬಂದ್ ಪ್ರತಿಭಟನೆ ತೀವ್ರಗೊಂಡಿದೆ. ಬಂದ್ ವೇಳೆ ನಾಲ್ಕು ಸಾರಿಗೆ ಬಸ್ ಗಳಿಗೆ ಕಲ್ಲು ತೂರಿದ ಪರಿಣಾಮ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಇಂದು ಮುಂಜಾನೆ 6-7 ಗಂಟೆಯವರೆಗೆ ಬಸ್ ಸಂಚಾರ ಆರಂಭವಾಗಿತ್ತು. ಆದ್ರೆ ಕಳೆದ ರಾತ್ರಿಯಿಂದ ನಾಲ್ಕು ಬಸ್ ಗಳ ಮೇಲೆ ಕಲ್ಲು ತೂರಿದ ಪರಿಣಾಮ ಸಾರಿಗೆ ಬಸ್ ಚಾಲಕರು ಬಸ್ ಗಳನ್ನು ರೋಡಿಗಿಳಿಸಿಲ್ಲ.

    ಕಾರ್ಮಿಕ ಸಂಘಟನೆಗಳ ಮುಖಂಡರು ಇಂದು ಸಹ ಕೆಲ ಗಂಟೆಗಳ ಕಾಲ ಸಾರಿಗೆ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಡಿಪೋದಿಂದ ರಾಯಲ್ ವೃತ್ತದ ವರಗೆ ಕೇಂದ್ರ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿಗೆ ಬೆಂಕಿ ಹಚ್ಚಿದರು. ಅಲ್ಲದೇ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ನಗರದ ರಾಯಲ್ ವೃತ್ತದಲ್ಲಿ ಅಡುಗೆ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು. ಮಂಗಳವಾರ ಇಡೀ ದಿನ ಬಂದ್ ಆಗಿದ್ದ ಅಂಗಡಿ ಮುಂಗಟ್ಟುಗಳು ಇಂದು ಬಹುತೇಕವಾಗಿ ತೆರೆದಿದ್ದು ಸ್ವಲ್ಪಮಟ್ಟಿಗೆ ಜನಜೀವನ ಯಥಾವತ್ತಾಗಿ ಸಾಗಿದೆ.

    ಇಂದಿನ ಬಂದ್ ವೇಳೆ ಏನೇ ಅನಾಹುತ ಕಾರ್ಯ ನಡೆದ್ರೂ ಅದಕ್ಕೆ ಸರ್ಕಾರವೇ ನೇರ ಹೊಣೆಯೆಂದು ಕೆಎಸ್ ಆರ್ ಟಿಸಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆದಿ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್‍ಗಳಿಲ್ಲದೆ ಅಂತ್ಯಕ್ರಿಯೆಗೆ ಹೊರಟ ಮಹಿಳೆಯರು ಕಂಗಾಲು..!

    ಬಸ್‍ಗಳಿಲ್ಲದೆ ಅಂತ್ಯಕ್ರಿಯೆಗೆ ಹೊರಟ ಮಹಿಳೆಯರು ಕಂಗಾಲು..!

    ಗದಗ: 2ನೇ ದಿನದ ಭಾರತ್ ಬಂದ್ ಹಿನ್ನೆಲೆಯಿಂದಾಗಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಅಂತ್ಯಸಂಸ್ಕಾರಕ್ಕೆ ಹೋಗಬೇಕಿದ್ದ ಮಹಿಳೆಯರು ಕಂಗಾಲಾಗಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾರೆ.

    ಕಾರ್ಮಿಕರ ಮುಷ್ಕರ ಮೊದಲ ದಿನಕ್ಕಿಂತ ಎರಡನೇ ದಿನ ತುಸು ಜೋರಾಗಿದೆ. ಮುಷ್ಕರಕ್ಕೆ ಬೆಂಬಲಿಸುತ್ತಿರುವ ಪ್ರತಿಭಟನಾಕಾರರು ಹಲವು ಕೆಎಸ್‌ಆರ್‌ಟಿಸಿ ಬಸ್‍ಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಗದಗದಲ್ಲಿ ಸಾರಿಗೆ ಮೇಲಾಧಿಕಾರಿಗಳು ಬಸ್ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಮುಳಗುಂದ ಗ್ರಾಮಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ಹೋಗಬೇಕಾದ ಮಹಿಳೆಯರು ಬಸ್‍ಗಳಿಲ್ಲದೆ ಕಂಗೆಟ್ಟು ಬಸ್ ನಿಲ್ದಾಣದಲ್ಲೇ ಕುಳಿತಿದ್ದಾರೆ.

    ಬಸ್ ಓಡಿಸದಿರಲು ಗದಗ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಧಾರ ಮಾಡಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಬಸ್ ಸಂಚಾರ ಇರಬಹುದು ಎಂದು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬೇರೆ ದಾರಿಯಿಲ್ಲದೆ ಹಿಂದಿರುಗುತ್ತಿದ್ದಾರೆ. ಸಾರಿಗೆ ಸಿಬ್ಬಂದಿಗೆ ಈ ಕುರಿತು ಕೇಳಿದರೆ, ಸಾರಿಗೆ ಇಲಾಖೆಯ ಮೇಲಾಧಿಕಾರಿಗಳ ಆದೇಶ ಬರುವವರೆಗೂ ಬಸ್ ಸಂಚಾರ ಆರಂಭಿಸೊಲ್ಲ ಎಂದು ಉತ್ತರಿಸುತ್ತಿದ್ದಾರೆ.

    ಸಾರಿಗೆ ಇಲಾಖೆ ಅವರ ದಿಢೀರ್ ನಿರ್ಧಾರದಿಂದ ಬೇರೆ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮನಗರದಲ್ಲಿ ಆರು ಬಸ್‍ಗಳಿಗೆ ಕಲ್ಲೆಸೆತ

    ರಾಮನಗರದಲ್ಲಿ ಆರು ಬಸ್‍ಗಳಿಗೆ ಕಲ್ಲೆಸೆತ

    -ನಿನ್ನೆ ಬಸ್ ಇದ್ರೂ ಪ್ರಯಾಣಿಕರಿಲಿಲ್ಲ, ಇಂದು ಪ್ರಯಾಣಿಕರಿದ್ರೂ ಬಸ್ ಇಲ್ಲ

    ರಾಮನಗರ/ಬೆಂಗಳೂರು: ಕಾರ್ಮಿಕರ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಮೊದಲ ದಿನ ರಾಜ್ಯದಲ್ಲಿ ಬಂದ್ ಗೆ ತೀವ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಎರಡನೇ ದಿನವೂ ಸಾಧಾರಣ ಪ್ರತಿಭಟನೆ ಎಂದು ಜನರು ಮನೆಯಿಂದ ಹೊರಬಂದ್ರೆ, ಬಸ್ ಗಳ ಸಂಚಾರ ಭಾಗಶಃ ಸ್ತಬ್ಧಗೊಂಡಿದೆ. ಮಧ್ಯರಾತ್ರಿಯಿಂದ ಇದೂವರೆಗೂ ಬೆಂಗಳೂರಿನಲ್ಲಿ 12 ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಇತ್ತ ರಾಮನಗರದಲ್ಲಿ 6 ಬಸ್ ಗಳ ಮೇಲೆ ಕಲ್ಲೆಸಯಲಾಗಿದೆ.

    ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ರಸ್ತೆಗಿಳಿದಿದ್ದ 6 ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹಾಗೂ ಕಡಬಗೆರೆ ಸಮೀಪದಲ್ಲಿ ನಡೆದಿದೆ. ನಾಲ್ಕು ಬಿಎಂಟಿಸಿ, ಎರಡು ಕೆಎಸ್ ಅರ್ ಟಿಸಿ ಬಸ್ ಗಳ ಮೇಲೆ ಕಲ್ಲು ತೂರಿದ್ದು ಬಸ್ ನ ಗಾಜುಗಳು ಹಾನಿಗೊಳಗಾಗಿವೆ.

    ಮಾಗಡಿ- ಬೆಂಗಳೂರು ಮಾರ್ಗದ ಮಾಗಡಿ ಡಿಪೋಗೆ ಸೇರಿದ ಕೆಎ-42 ಎಫ್ -220 ನಂಬರ್ ನ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು ಹಾನಿಗೊಳಗಾದ ಬಸ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ತಾವರೆಕೆರೆ ಸಮೀಪದ ಚನ್ನೇನಹಳ್ಳಿ ಬಳಿ 1 ಕೆಎಸ್‍ಆರ್ ಟಿಸಿ ಬಸ್ ಗೆ, ಸಂಗದಾಸಿಪಾಳ್ಯ 2, ಲಕ್ಕುಪ್ಪನಳ್ಳಿ 2 ಬಿಎಂಟಿಸಿ ಬಸ್ ಗೆ ಕಲ್ಲು ತೂರಿದ್ದು ಹಾನಿಗೊಳಗಾದ ಬಸ್ ಗಳು ತಾವರೆಕೆರೆ ಪೊಲೀಸ್ ಠಾಣೆಗೆ ರವಾನಿಸಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ಬಸ್ ಗಳ ಮೇಲೆ ಕಲ್ಲು ತೂರಿದ್ರಿಂದ ಮಾಗಡಿ- ಬೆಂಗಳೂರು ಮಾರ್ಗದ ಬಸ್ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ

    ಬಂದ್ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಿಐಟಿಯು ಕಾರ್ಯಕರ್ಯರು ಕೆಎಸ್‍ಆರ್ ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಾರವಾರ ನಗರದ ಮುಖ್ಯ ಬಸ್ ನಿಲ್ದಾಣದ ಬಳಿ ಆಗಮಿಸಿದ ಸಿಐಟಿಯು ಕಾರ್ಯಕರ್ತರು ಕಾರವಾರ ನಗರದಿಂದ ಹೊರಡಬೇಕಿದ್ದ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರವಾರದಿಂದ ವಿವಿಧೆಡೆ ತೆರಳಬೇಕಿದ್ದ ಬಸ್ ಗಳು ಬಂದ್ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

    ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಗಾಗಿ ಕಾಯುವಂತಾಗಿದೆ. ಬೆಳಗಿನ ಜಾವ ಬಸ್ ಸಂಚಾರವಿದ್ದ ಹಿನ್ನೆಲೆಯಲ್ಲಿ ಹೊರಬಂದ ಜನರು ತಮ್ಮ ನಿಗದಿತ ಸ್ಥಳಗಳಿಗೆ ತಲುಪಲು ಪರದಾಡುತ್ತಿದ್ದಾರೆ. ಮಂಗಳವಾರ ಬಂದ್ ಇದ್ದರೂ ಸಾರಿಗೆ ಬಸ್ ಗಳು ರಸ್ತೆಗೆ ಇಳಿದಿದ್ದರೂ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದವು. ಇಂದು ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ, ಅಲ್ಲಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಬೆರಳಿಕೆ ಬಸ್ ಗಳು ಮಾತ್ರ ರಸ್ತೆಗೆ ಇಳಿದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಂಟಿಸಿಯ 12 ಬಸ್ ಮೇಲೆ ಕಲ್ಲು

    ಬಿಎಂಟಿಸಿಯ 12 ಬಸ್ ಮೇಲೆ ಕಲ್ಲು

    ಬೆಂಗಳೂರು: ಕಾರ್ಮಿಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬಿಎಂಟಿಸಿ ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ನಾಗರಬಾವಿಯ ಮಾರುತಿ ನಗರದ 235 ಕೆ ಮತ್ತು 401 ನಂಬರಿನ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

    235 ಕೆ ನಂಬರ್ ಬಸ್ ಮೆಜೆಸ್ಟಿಕ್ ನಿಂದ ದೊಡ್ಡ ಬಸ್ತಿ ಕಡೆ ತೆರಳುತ್ತಿತ್ತು. 401 ಯಶವಂತಪುರದಿಂದ ಕೆಂಗೇರಿ ಕಡೆ ತೆರಳುತ್ತಿತ್ತು. ಅಂಜನಾ ನಗರದ ಬಳಿ ಡಿಪೋದಿಂದ ಹೊರಟ 6 ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮಧ್ಯರಾತ್ರಿಯಿಂದ ಇದೂವರೆಗೂ 12 ಬಸ್ ಗಳಿಗೆ ಕಲ್ಲು ಎಸೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಚಂದಾಪುರದ ಸೂರ್ಯಸಿಟಿ ಘಟಕ (32)ರ ಡಿಪೋದಲ್ಲಿ 150 ಕ್ಕೂ ಹೆಚ್ಚು ಬಸ್ಸುಗಳನ್ನು ನಿಲ್ಲಿಸಲಾಗಿದೆ. ಬೆಳ್ಳಂಬೆಳಗ್ಗೆ ಬಸ್ಸುಗಳ ಮೇಲೆ ತೂರಾಟ ನಡೆದಿದ್ದರಿಂದ ಎಲ್ಲ ಡಿಪೋಗಳಿಗೆ ಬಿಎಂಟಿಸಿ ಮೇಲಾಧಿಕಾರಿಗಳು ಸಂದೇಶ ರವಾನಿಸಿದ್ದು, ಸಂಚಾರ ಆರಂಭಿಸದಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಮತ್ತೆ ಅದೇಶ ಬರೋವರೆಗೂ ಬಸ್ಸುಗಳನ್ನು ರಸ್ತೆಗಿಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

    ಕೆಎಸ್ಆರ್ ಟಿಸಿ ಯಲ್ಲಿರುವ 600 ಬಸ್ ಗಳಲ್ಲಿ 450ಕ್ಕೂ ಹೆಚ್ಚು ವಾಹನಗಳು ಸಂಚಾರ ಆರಂಭಿಸಿವೆ. ಪರಿಸ್ಥಿತಿ ನೋಡಿಕೊಂಡು ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಬಂದ್ ಹಿನ್ನೆಲೆಯಲ್ಲಿ ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗನಿಂದ ಸಖತ್ ಕ್ಲಾಸ್!

    ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗನಿಂದ ಸಖತ್ ಕ್ಲಾಸ್!

    – ಅಂಗಡಿ ಮಾಲೀಕನ ಬೈಗುಳದಿಂದ ಕಾಲ್ಕಿತ್ತ ಪ್ರತಿಭಟನಾಕಾರರು

    ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಬಂದ್‍ಗೆ ಕರೆ ಕೊಟ್ಟಿದ್ದು, ಹೀಗಾಗಿ ಮೊದಲ ದಿನವಾದ ಇಂದು ಅಂಗಡಿ ಬಂದ್ ಮಾಡಿಸಲು ಬಂದವರಿಗೆ ಮೋದಿ ಬೆಂಬಲಿಗರೊಬ್ಬರು ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

    ಈ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ತಾಲೂಕು ಗುಜ್ಜಾಡಿಯಲ್ಲಿ ನಡೆದಿದೆ. ಅಂಗಡಿ ಮಾಲೀಕನ ಬೈಗುಳ ಕೇಳಿದ ಪ್ರತಿಭಟನಾಕಾರರು ಸ್ಥಳದಿಂದಲೇ ಕಾಲ್ಕಿತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಂಗಡಿ ಮಾಲೀಕ ಏನ್ ಹೇಳಿದ್ರು..?
    ನಾನು ಮೋದಿ ಬೆಂಬಲಿಗ ಮಾತ್ರವಲ್ಲದೇ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ. ಕಮ್ಯೂನಿಷ್ಟರಿಗೆ ನಾವು ಸಪೋರ್ಟ್ ಮಾಡಲ್ಲ. ನೀವು ಒಳ್ಳೆಯ ಹೋರಾಟಗಳನ್ನು ಮಾಡುತ್ತೀರಾ. ಮಾಡುವುದಿದ್ದರೆ ಶಬರಿಮಲೆಗಾಗಿ ಹೋರಾಟ ಮಾಡಿ. ಸಾವಿರ ವರ್ಷದಿಂದ ಶಬರಿಮಲೆಯಲ್ಲಿ ಪುಣ್ಯದ ಕೆಲಸ ನಡೆಯುತ್ತಿತ್ತು. ಮುಖ್ಯಮಂತ್ರಿಗಳು ಮಾಂಸ ತಿಂದು ದೇವಸ್ಥಾನಕ್ಕೆ ಹೋದಾಗ ಕಮ್ಯುನಿಸ್ಟರು ಬಂದ್ ಮಾಡಲ್ಲ. ಆದ್ರೆ ಒಳ್ಳೆಯ ಪ್ರಧಾನಿ ನಮ್ಮ ದೇಶದಲ್ಲಿದ್ದರೆ ನೀವು ಪ್ರತಿಭಟನೆಗಳನ್ನು ಮಾಡುತ್ತಿದ್ದೀರಾ ಅಂತ ಅಂಗಡಿ ಮಾಲೀಕ ಕೆಂಡಾಮಂಡಲರಾಗಿದ್ದಾರೆ.

    ಈ ವೇಳೆ ಪ್ರತಿಭಟನಾಕಾರರು ನಾವು ಮಾನವೀಯತೆಯ ದೃಷ್ಟಿಯಿಂದ ಅಂಗಡಿ ಬಂದ್ ಮಾಡಲು ಹೇಳುತ್ತಿದ್ದೇವೆ ಅಂತ ಹೇಳಿದ್ರು. ಇದರಿಂದ ಮತ್ತಷ್ಟು ಕೋಪಗೊಂಡ ಅಂಗಡಿ ಮಾಲೀಕ, ಯಾವುದು ಮಾನವೀಯತೆ..? ದೇಶದ ಬಗ್ಗೆ ಚಿಂತೆ ಮಾಡಿ. ಅದು ಮಾನವೀಯತೆ. ನರೇಂದ್ರ ಮೋದಿ ಸರ್ಕಾರ ಇಷ್ಟು ಸವಲತ್ತು ನಿಮಗೆ ಕೊಟ್ಟಿದೆ. ಬೆಲೆಯೇರಿಕೆ 2014ರಲ್ಲಿ ಎಷ್ಟು, 2019ರಲ್ಲಿ ಎಷ್ಟು ಎನ್ನುವುದನ್ನು ತಾಕತ್ತಿದ್ದರೆ ಬಂದು ಟ್ಯಾಲಿ ಮಾಡಿ ತಂದು ತೋರಿಸಿ ಅಂತ ಸವಾಲೆಸೆದರು.

    ನಮ್ಮ ದೇಶಕ್ಕೆ ಇಂತಹ ಪ್ರಧಾನಿ ಸಿಗುವುದೇ ನಮ್ಮ ಪುಣ್ಯ. ಕೇರಳಕ್ಕೆ ಹೋಗಿ ಪ್ರತಿಭಟನೆ ಮಾಡಿ. ಶಬರಿಮಲೆಗೆ ಮಾಂಸ ತಿಂದು ಹೋಗಿದ್ದಾರಲ್ವ ಅವರ ವಿರುದ್ಧ ಪ್ರತಿಭಟನೆ ಮಾಡಲು ಇವರಿಗೆ ಜೀವ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಅಂಗಡಿ ಮಾಲೀಕನ ಬೈಗುಳದಿಂದ ಪ್ರತಿಭಟನಾಕಾರರು ಸ್ಥಳದಿಂದಲೇ ಕಾಲ್ಕಿತ್ತಿದ್ದಾರೆ.

    https://www.youtube.com/watch?v=SS8oTtm00f4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಡುಪಿ ಮಠಕ್ಕೂ ತಟ್ಟಿದೆ ಬಂದ್ ಬಿಸಿ!

    ಉಡುಪಿ ಮಠಕ್ಕೂ ತಟ್ಟಿದೆ ಬಂದ್ ಬಿಸಿ!

    – ಶ್ರೀಕೃಷ್ಣ ಮಠಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಇಳಿಮುಖ

    ಉಡುಪಿ: ಜಿಲ್ಲೆಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೂ ಭಾರತ್ ಬಂದ್ ಎಫೆಕ್ಟ್ ತಟ್ಟಿದೆ. ಪ್ರತಿದಿನ ಮಧ್ಯಾಹ್ನ ತುಂಬಿ ತುಳುಕುವ ಕೃಷ್ಣಮಠದ ಭೋಜನ ಶಾಲೆಗಳು ಇಂದು ಖಾಲಿ ಖಾಲಿಯಾಗಿ ಕಾಣುತ್ತಿದೆ.

    ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಭಾರತ್ ಬಂದ್‍ಗೆ ಹಲವು ಸಂಘಟನೆಗಳು ಕರೆ ಕೊಟ್ಟಿದೆ. ಆದರಿಂದ ದೇಶಾದ್ಯಂತ ಬಹುತೇಕ ಕಾರ್ಮಿಕರು ಈ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಲ್ಲದೆ ಸಾರಿಗೆ ಇಲಾಖೆಯಂತೂ ಕೆಲವೆಡೆ ಸಂಪೂರ್ಣ ಸ್ಥಗಿತಗೊಂಡಿದ್ದು, ರಾಜ್ಯದಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಸಿಗದೆ ರೋಗಿಗಳು, ವಿದ್ಯಾರ್ಥಿಗಳು ಹಾಗೂ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

    ಈ ಬಂದ್ ಬಿಸಿ ಕೊಂಚ ಉಡುಪಿ ಮಠಕ್ಕೂ ತಟ್ಟಿದೆ. ಬಂದ್ ಇರುವ ಹಿನ್ನೆಲೆ ಮಠಕ್ಕೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಅದರಲ್ಲೂ ಮಠದ ಭೋಜನ ಶಾಲೆಯಲ್ಲಿ ಇಂದು ಕೇವಲ ಮೂರು ಸಾವಿರ ಭಕ್ತರು ಮಾತ್ರ ಅನ್ನಪ್ರಸಾದ ಸ್ವೀಕಾರ ಮಾಡಿದ್ದಾರೆ. ಇಲ್ಲವಾದರೆ ಮಠದಲ್ಲಿ ಪ್ರತಿನಿತ್ಯ 8 ರಿಂದ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನ ನಡೆಯುತ್ತಿತು. ರಜೆ ಇದ್ದ ದಿನಗಳಲ್ಲಿ 15 ಸಾವಿರಕ್ಕೂ ಹಚ್ಚು ಜನರು ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ. ಆದ್ರೆ ಇಂದು ಮಠಕ್ಕೆ ಹೊರ ಜಿಲ್ಲೆಯ ಪ್ರವಾಸಿಗರ ಬಸ್ಸುಗಳೂ ಬರಲಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳಂತೂ ಮಠದ ಕಡೆ ಮುಖ ಮಾಡಿಲ್ಲ.

    ಇಂದು ಮತ್ತು ನಾಳೆ ಭಾರತ್ ಬಂದ್ ಇರುವುದರಿಂದ ಮುಂಜಾಗೃತೆ ಕ್ರಮವಾಗಿ ಕಡಿಮೆ ಅಡುಗೆ ತಯಾರಿ ಮಾಡಿದ್ದೇವೆ. ರಾತ್ರಿಯೂ ಕೂಡ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಬರುವ ಸಾಧ್ಯತೆಯಿದೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ್ ಬಂದ್ ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಸಾವು

    ಭಾರತ್ ಬಂದ್ ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಸಾವು

    ಕಾರವಾರ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

    ಮುಂಡಗೋಡು ತಾಲೂಕಿನ ಶಿಡ್ಲಗುಂಡಿ ಗ್ರಾಮದ ಶಾಂತಾ ಬಸವಣ್ಣೆಪ್ಪ ಚಕ್ರಸಾಲಿ (57) ಸಾವನ್ನಪ್ಪಿದ ಅಂಗನವಾಡಿ ಕಾರ್ಯಕರ್ತೆ. ಕಾರ್ಮಿಕ ಸಂಘಟನೆಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕರೆ ನೀಡಿದ್ದ ಭಾರತ ಬಂದ್‍ನಲ್ಲಿ ಶಾಂತಾ ಅವರು ಭಾಗವಹಿಸಿದ್ದರು.

    ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ಕೈಗೊಂಡಿದ್ದರು. ಈ ವೇಳೆ ಮೆರವಣಿಗೆ ತಾಲೂಕು ಪಂಚಾಯತಿ ಸಮೀಪಕ್ಕೆ ಬರುತ್ತಿದ್ದಂತೆ ಶಾಂತಾ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಆಸ್ಪತ್ರೆ ಎದುರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸಿಪಿಐ ಶಿವಾನಂದ ಚಲವಾದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯಲ್ಲಿ ಟಿವಿ ಇಲ್ಲ, ಗೊತ್ತಿಲ್ದೆ ಬಂಡವಾಳ ಹಾಕ್ಬಿಟ್ಟೆ- ಬಂದ್‍ನಿಂದ 200-300 ನಷ್ಟ ಆಯ್ತು: ಹೂ ಮಾರುವ ವೃದ್ಧೆ

    ಮನೆಯಲ್ಲಿ ಟಿವಿ ಇಲ್ಲ, ಗೊತ್ತಿಲ್ದೆ ಬಂಡವಾಳ ಹಾಕ್ಬಿಟ್ಟೆ- ಬಂದ್‍ನಿಂದ 200-300 ನಷ್ಟ ಆಯ್ತು: ಹೂ ಮಾರುವ ವೃದ್ಧೆ

    ತುಮಕೂರು: ಎರಡು ದಿನ ಕಾರ್ಮಿಕ ಮುಷ್ಕರ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಭಾರತ್ ಬಂದ್ ಘೋಷಣೆಯಾಗಿದೆ. ಇದನ್ನು ಅರಿಯದ ಹೂ ಮಾರುವ ವೃದ್ಧೆಯೊಬ್ಬರು ತುಮಕೂರು ಬಸ್ ನಿಲ್ದಾಣಕ್ಕೆ ಬಂದು ಬಂದ್‍ನಿಂದ 200-300 ನಷ್ಟ ಆಯಿತು ಎಂದು ದುಃಖಪಡುತ್ತಿದ್ದಾರೆ.

    ವೃದ್ಧೆ ಭಾಗ್ಯಮ್ಮ ಹೊಟ್ಟೆ ಪಾಡಿಗೆ ತುಮಕೂರು ಬಸ್ ನಿಲ್ದಾಣದಲ್ಲಿ ಕುಳಿತು ಹೂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಬಂದ್ ಬಗ್ಗೆ ಮಾಹಿತಿ ಇಲ್ಲದ ಕಾರಣ ವ್ಯಾಪಾರಕ್ಕೆ ಬಂದಿದ್ದಾರೆ. ಅಲ್ಲದೇ ಬಂದ್ ಹಿನ್ನೆಲೆಯಲ್ಲಿ ಅವರ ವ್ಯಾಪಾರಕ್ಕೆ ಕುತ್ತು ಬಿದ್ದಿದೆ.

    ಬಂದ್ ಬಗ್ಗೆ ಮಾಹಿತಿಯಿಲ್ಲದೇ ಭಾಗ್ಯಮ್ಮ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಯಾಕೋ ಬಸ್ ಸ್ಟ್ಯಾಂಡ್ ನಲ್ಲಿ ಇಂದು ಜನರೇ ಇಲ್ಲ. ಬಸ್ ಗಳು ಸರಿಯಾಗಿ ಬರುತ್ತಿಲ್ಲ ಎಂದು ಸಾರ್ವಜನಿಕರಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಇಂದು ಹಾಗೂ ನಾಳೆ ಬಂದ್ ಎಂದು ಉತ್ತರಿಸಿದ್ದಾರೆ.

    ಆಗ ಭಾಗ್ಯಮ್ಮ ಮನೆಯಲ್ಲಿ ಟಿವಿ ಇಲ್ಲ. ಗೊತ್ತಿಲ್ಲದೇ ಬಂಡವಾಳ ಹಾಕಿಬಿಟ್ಟೆ. ಈ ಬಂದ್ ನಿಂದ 200-300 ನಷ್ಟವಾಯಿತು. ಹೀಗಾದರೆ ಬಡವರ ಬಗ್ಗರು ಏನು ಮಾಡಬೇಕು. ಜನರು ಮಿನಿಸ್ಟ್ರು ಕುಳಿತು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಹೀಗೆ ಜನರಿಗೆ ತೊಂದರೆ ಕೊಟ್ಟರೆ ಹೇಗೆ? ಈಗ ನಾನು ಬೀದಿ ಬೀದಿ ಸುತ್ತಿ ವ್ಯಾಪಾರ ಮಾಡಬೇಕು ಎಂದು ದಃಖಪಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಡುಪಿಯಲ್ಲಿ ಬಂದ್ ವೇಳೆ ಮಾತಿನ ಚಕಮಕಿ- ಪೊಲೀಸರ ಮಧ್ಯಪ್ರವೇಶ

    ಉಡುಪಿಯಲ್ಲಿ ಬಂದ್ ವೇಳೆ ಮಾತಿನ ಚಕಮಕಿ- ಪೊಲೀಸರ ಮಧ್ಯಪ್ರವೇಶ

    ಉಡುಪಿ: ಜಿಲ್ಲೆಯಾದ್ಯಂತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಶಾಂತಿಯುತವಾಗಿದೆ. ಬಿಜೆಪಿ ಭದ್ರಕೋಟೆಯಲ್ಲಿ ಅಂಗಡಿ ಮುಗ್ಗಟ್ಟುಗಳು ತೆರೆದಿವೆ. ಖಾಸಗಿ ಬಸ್ ಗಳು ಕೂಡ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ನಗರದಾದ್ಯಂತ ಜನರ ಸಂಚಾರ ವಿರಳವಾಗಿದೆ.

    ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಸೋಮವಾರವೇ ರಜೆ ಘೋಷಿಸಿತ್ತು. ಬೆಳಗ್ಗೆ ಖಾಸಗಿ ಬಸ್ ಚಾಲಕರು ಬಸ್ ಓಡಿಸದೇ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ರು. ಆಟೋಗಳು ಬಂದ್ ಆಚರಿಸದೆ ಎಂದಿನಂತೆ ಕರ್ತವ್ಯ ನಿರ್ವಹಿಸಲು ಬಂದಾಗ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಆಟೋ ಚಾಲಕರು ಬಂದ್ ನ ಸಂಪೂರ್ಣ ಲಾಭ ಪಡೆಯಲು ಮುಂಜಾನೆಯಿಂದಲೇ ಆಟೋ ಸಂಚಾರ ಪ್ರಾರಂಭಿಸಿದ್ದರು.

    ಬಸ್ ಚಾಲಕರು ಕರ್ತವ್ಯಕ್ಕೆ ಅಣಿಯಾದಾಗ ಕಾರ್ಮಿಕ ಸಂಘಟನೆ ಮುಖಂಡರು ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದ್ರು. ಈ ವೇಳೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಬಸ್ ಚಾಲಕರು, ಆಟೋ ಚಾಲಕರು ಎಂದಿನಂತೆ ಕಾರ್ಯನಿರ್ವಹಿಸ್ತಿದ್ದಾರೆ. ನಾವೂ ಬಸ್ ಓಡಿಸುತ್ತೇವೆ ಎಂದು ಏರುದನಿಯಲ್ಲಿ ಹೇಳಿದ್ರು. ಇದು ಕೆಲಕಾಲ ಮಾತಿನ ಚಕಮಕಿಗೆ ಕಾರಣವಾಯ್ತು.

    ಪೊಲೀಸರು ಹೆಚ್ಚಿನ ಭದ್ರತಾ ಕ್ರಮಕೈಗೊಂಡರು. ಕೆಎಸ್ ಆರ್ ಪಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv