ಚಿಕ್ಕಬಳ್ಳಾಪುರ: ದೇಶವ್ಯಾಪಿ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ ಕರೆ ಹಿನ್ನಲೆಯಲ್ಲಿ ನಾಳೆ(ಬುಧವಾರ) ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ ಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆ ಕರೆ ನೀಡಿದೆ.
ಕನಿಷ್ಠ ವೇತನ, ಖಾತ್ರಿ ಮಾಸಿಕ ಪಿಂಚಣಿ, ಸಮಾನ ಕೆಲಸಕ್ಕೆ ಸಮಾನವೇತನ ಜಾರಿ ಮಾಡಿ ಗುತ್ತಿಗೆ ಪದ್ಧತಿ ರದ್ದತಿ, ಕಾರ್ಮಿಕರ ವಿವಿಧ ಬೇಡಿಕೆಗಳನ್ನ ಈಡೇರಿಕೆಗಾಗಿ ನಾಳೆ ಬಂದ್ ಗೆ ಕರೆ ನೀಡಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಸಿಪಿಐಎಂ ಪಕ್ಷದ ಮುಖಂಡ ಮುನಿವೆಂಕಟಪ್ಪ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಎಲ್ಲಾ ಆರು ತಾಲೂಕುಗಳಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಬಂದ್ ಗೆ ಕರ್ನಾಟಕ ಪ್ರಾಂತ ರೈತ ಸಂಘ, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಭಾರತ ಕಮ್ಯೂನಿಸ್ಟ್ ಪಕ್ಷವಷ್ಟೇ ಬೆಂಬಲ ನೀಡಿರುವುದರಿಂದ ಬಂದ್ ಯಶಸ್ವಿಯಾಗುತ್ತಾ ಇಲ್ವಾ ಎಂಬುದನ್ನು ಕಾದು ನೋಡಬೇಕಿದೆ.
ಮಡಿಕೇರಿ: ದೇಶಾದ್ಯಂತ ನಾಳೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರೊ ಭಾರತ್ ಬಂದ್ ಗೆ ಕೊಡಗು ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ ಸಿಐಟಿಯು, ಎಐಟಿಯುಸಿ ಕಾರ್ಮಿಕ ಸಂಘಟನೆಯಿಂದ ನಾಳೆ ಬೃಹತ್ ಪ್ರತಿಭಟನೆ ಮಡಿಕೇರಿ ನಗರದಲ್ಲಿ ನಡೆಯಲಿದೆ.
ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಅಂಗನವಾಡಿ, ಬಿಸಿಯೂಟ ಸಿಬ್ಬಂದಿ, ಬಿಎಸ್‍ಎನ್‍ಎಲ್ ಗುತ್ತಿಗೆ ನೌಕರರು, ಎಲ್‍ಐಸಿ ಸಿಬ್ಬಂದಿ, ಕಟ್ಟಡ ಕಾರ್ಮಿಕರು, ಕಾಫಿ ತೋಟದ ಕಾರ್ಮಿಕರು, ಅಮಾಲಿ ನೌಕರರ ಸಂಘದಿಂದ ಈಗಾಗಲೇ ಬಂದ್‍ಗೆ ಬೆಂಬಲ ಘೋಷಣೆಯಾಗಿದೆ. ಆದರೆ ನಾಳೆ ಎಂದಿನಂತೆ ಶಾಲಾ ಕಾಲೇಜುಗಳು ಇರಲಿದ್ದು, ಪೆಟ್ರೋಲ್ ಬಂಕ್, ಹಾಲಿನ ಬೂತ್, ಮೆಡಿಕಲ್ ಸ್ಟೋರ್ ಎಲ್ಲವೂ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಖಾಸಗಿ ಬಸ್ ಮಾಲೀಕರ ಸಂಘದವರು ಎಂದಿನಂತೆ ಬಸ್ಸು ಸಂಚಾರ ನಡೆಸಲಿದ್ದಾರೆ. ಆದರೆ ಅಟೋ ಚಾಲಕರು ಪರಿಸ್ಥಿತಿ ನೋಡಿಕೊಂಡು ಆಟೋ ಚಾಲನೆ ಮಾಡುತ್ತೇವೆ ಎಂದಿದ್ದಾರೆ. ಇತ್ತ ವಿರಾಜಪೇಟೆ ತಾಲೂಕಿನಲ್ಲಿ ಕಾರ್ಮಿಕ ವಲಯಗಳು ಜಾಸ್ತಿ ಇರುವ ಕಾರಣ ಗ್ರಾಮೀಣ ಭಾಗಗಳಿಂದ ಸಿದ್ದಾಪುರ ಕರಡಿಗೋಡು, ನೆಲ್ಲಿಹುದಿಕೇರಿ ಕುಟ್ಟ ಭಾಗದಲ್ಲಿ ಅಲ್ಲಿಯ ಪರಿಸ್ಥಿತಿಯನ್ನು ಅರಿತು ಆಟೋ ಚಾಲಕರು ನಿಲ್ಲಸಬಹುದು ಎಂದು ಆಟೋ ಚಾಲಕ ಜಿಲ್ಲಾಧ್ಯಕ್ಷ ಮೇದಪ್ಪ ಅವರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಬುಧವಾರ ದೇಶವ್ಯಾಪಿ ಭಾರತ್ ಬಂದ್ ಸಫಲ ಆಗಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಬುಧವಾರ ಬಂದ್ ಗೆ ಯಾವ ಸಂಘಟನೆಗಳು ಬೆಂಬಲ ಕೊಟ್ಟಿಲ್ಲ. ಬೇಡಿಕೆಗಳ ಈಡೇರಿಕೆಗೆ ಬೇರೆ ಬೇರೆ ದಾರಿಗಳಿವೆ. ಈಗಾಗಲೇ ಎಲ್ಲಾ ಸಂಘಟನೆಗಳು ಬಂದ್ ತಿರಸ್ಕಾರ ಮಾಡಿವೆ. ಹಲವು ಸಂಘಟನೆಗಳು ಬಂದ್ ಮಾಡಲ್ಲ ಪ್ರತಿಭಟನೆಗಳನ್ನು ಮಾಡಲಾಗುವುದು ಎಂದು ಹೇಳಿದೆ. ಹೀಗಾಗಿ ಶಾಂತಿಯುತ ಪ್ರತಿಭಟನೆಗೆ ನಮ್ಮ ಸರ್ಕಾರದಿಂದ ವಿರೋಧವಿಲ್ಲ. ಪ್ರತಿಭಟನೆಗೆ ಬೇಕಾದ ಬಂದೋಬಸ್ತ್ ವ್ಯವಸ್ಥೆಯನ್ನ ನಾವು ಮಾಡ್ತೇವೆ. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಬಂದ್‍ಗೆ ಕರೆ ಕೊಡಲು ಅವಕಾಶವಿಲ್ಲ. ಆ ದೃಷ್ಠಿಯಿಂದ ರಾಜ್ಯ ಸರ್ಕಾರ ನಾಳಿನ ಬಂದ್‍ಗೆ ಬೆಂಬಲ ಕೊಡಲ್ಲ. ಅವರ ಹೋರಾಟ ಪ್ರತಿಭಟನೆಗೆ ಸರ್ಕಾರ ಅನುಮತಿ ನೀಡಿದೆ ಎಂದರು.
ಇದೇ ವೇಳೆ ಜೆಎನ್‍ಯು ವಿಶ್ವವಿದ್ಯಾಲಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೆಲ್ಲಾ ಕಮ್ಯೂನಿಸ್ಟ್ ಪ್ರೇರಿತ ಸಂಘಟನೆಗಳ ಕುತಂತ್ರ. ಜೆಎನ್‍ಯು ವಿವಿಯಲ್ಲಿ ಎಡಪಕ್ಷಗಳ ಸಿದ್ದಾಂತಗಳ ಸಂಘಗಳಿವೆ. ಇದು ಆ ಸಂಘಟನೆಗಳು ಮಾಡುತ್ತಿರುವ ಕೀಟಲೆಗಳು. ಈ ಹಿಂದೆಯೂ ಸಹ ಜೆಎನ್‍ಯು ವಿವಿಯಲ್ಲಿ ದೇಶದ್ರೋಹದ ಹೇಳಿಕೆಗಳು ಸಹ ಕೇಳಿ ಬಂದಿದ್ದವು. ಕನ್ನಯ್ಯ ಕುಮಾರ್ ಸಹ ದೇಶದ್ರೋಹದ ಹೇಳಿಕೆ ನೀಡಿ ಈಗ ಕೇಸು ಎದುರಿಸುತ್ತಿದ್ದಾರೆ. ಹೀಗಾಗಿ ಶಾಲಾ-ಕಾಲೇಜು ಆವರಣಗಳನ್ನು ದೊಂಬಿ ಮಾಡಲು ಬಳಸುವುದು ಸರಿಯಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.
ಎಬಿವಿಬಿಪಿ ಸಂಘಟನೆ ಈ ದಾಳಿ ಮಾಡಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಈ ಘಟನೆಯ ತನಿಖೆ ನಡೆಯುತ್ತಿದೆ. ಇದು ಕಮ್ಯೂನಿಸ್ಟ್ ಪ್ರೇರಿತರ ಹೇಳಿಕೆಗಳು ಎಂದರು. ಕನ್ನಯ್ಯ ದೇಶದ್ರೋಹಿ ಹೇಳಿಕೆ ಕೊಟ್ಟಾಗ ಎಬಿವಿಪಿ ಹೇಳಿಕೊಟ್ಟಿತ್ತಾ? ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿ, ಮಕರ ಸಂಕ್ರಾಂತಿ ಹಬ್ಬದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈಗಾಗಲೇ ಈ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರದ ನಾಯಕರ ಜೊತೆ ಚರ್ಚೆ ಮಾಡಿ ವಿಸ್ತರಣೆ ಮಾಡಲಾಗುವುದು. ನಾವು ಮಾತು ಕೊಟ್ಟಿದ್ದ ಎಲ್ಲರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಅಭಯ ನೀಡಿದರು.
ದಾವಣಗೆರೆ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಖಡತ್ ಎಚ್ಚರಿಕೆ ನೀಡಿದ್ದಾರೆ.
ಮುಷ್ಕರದ ಬಿಗಿ ಭದ್ರತೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪ್ರತಿಭಟನೆ ಸಾಂವಿಧಾನಿಕ ಹಕ್ಕು, ಅದನ್ನು ಶಾಂತಿಯುತವಾಗಿ ನಡೆಸಬೇಕು. ಅದು ಬಿಟ್ಟು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಏನಾದರೂ ನಷ್ಟವಾದರೆ ಹಾಗೂ ಅಹಿತಕರ ಘಟನೆ ನಡೆದರೆ ಅಂಥವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಎಲ್ಲಾ ಕಾರ್ಮಿಕ ಮುಖಂಡರ ಜೊತೆ ಚರ್ಚಿಸಲಾಗಿದೆ. ಜಯದೇವ ಸರ್ಕಲ್ ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ಹಮ್ಮಿಕೊಂಡು ಗಡಿಯಾರ ಕಂಬದ ಬಳಿ ಸಮಾವೇಶ ಹಮ್ಮಿಕೊಂಡಿದ್ದಾರೆ. ಇದೆಲ್ಲ ಶಾಂತಿಯುತವಾಗಿ ನಡೆಸಲು ಸೂಚಿಸಲಾಗಿದೆ. ಪೊಲೀಸ್ ಬಿಗಿ ಭದ್ರತೆಯನ್ನು ನೀಡಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಸಾರಿಗೆಯಲ್ಲಿ ಕೂಡ ಯಥಾಸ್ಥಿತಿ ಇರುತ್ತದೆ ಎಂದು ಡಿಸಿ ಸ್ಪಷ್ಟಪಡಿಸಿದರು.
ಮಂಡ್ಯ: ಬುಧವಾರ ಭಾರತ್ ಬಂದ್ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ AITUC, STPI, CPM, KSRTC, ಗಾರ್ಮೆಂಟ್ಸ್, ರೈತ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚನೆ ನೀಡಿವೆ.
ಬುಧವಾರ ಬಂದ್ ವೇಳೆ ಮಂಡ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ. ಹೀಗಾಗಿ ಆಟೋ, ಗೂಡ್ಸ್ ವಾಹನಗಳು ಎಂದಿನಂತೆ ಸಂಚಾರ ಮಾಡಲಿವೆ. KSRTC ಬಸ್‍ಗಳು ಪರಿಸ್ಥಿತಿಗೆ ಅನುಗುಣವಾಗಿ ರಸ್ತೆ ಇಳಿಯಲಿವೆ. ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಸಂಬಂಧ ಇನ್ನೂ ಸಹ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡಿಲ್ಲ. ಇದನ್ನೂ ಓದಿ: ಬುಧವಾರ ಭಾರತ್ ಬಂದ್ – ಏನು ಇರುತ್ತೆ? ಏನು ಇರಲ್ಲ?
ಇನ್ನೂ ಉಳಿದಂತೆ ಮಂಡ್ಯದಲ್ಲಿ ಎಂದಿನಂತೆ ಜನ ಜೀವನ ಸಂಚಾರ ಮಾಡುವ ಸಾಧ್ಯತೆ ಇದೆ. ಬಂದ್‍ಗೆ ಕರೆ ಕೊಟ್ಟಿರುವ ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಉಳಿದಂತೆ ಯಾರು ಕೂಡ ಬಲವಂತವಾಗಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕುಸುವಂತಿಲ್ಲ ಎಂದು ಮಂಡ್ಯ ಎಸ್‍ಪಿ ಪರಶುರಾಮ್ ಸಂಘಟನೆಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಬಂದ್‍ಗೆ ಕರೆ ನೀಡಿವೆ.
ನಮ್ಮ ಬೇಡಿಕೆ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಪದೇ ಪದೇ ಸಂಘಟನೆಗಳು ದನಿ ಎತ್ತಿದ್ದರೂ, ಸರ್ಕಾರ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಎಂದು ಆರೋಪಿಸಿ ಎಐಟಿಯುಸಿ, ಎಚ್‍ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಸ್‍ಇಡಬ್ಲ್ಯುಎ, ಎಐಸಿಸಿಟಿಯು, ಎಲ್‍ಪಿಎಫ್ ಮತ್ತು ಯುಟಿಯುಸಿ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಆದರೆ ನಾಳೆ ನಡೆಯಲಿರುವ ಬಂದ್ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ. ಯಾವ ಸಂಘಟನೆಗಳು ಕೂಡ ಬಂದ್‍ಗೆ ಬೆಂಬಲಿಸಿಲ್ಲ.
ಎಸ್ಮಾ ಅಸ್ತ್ರ ಪ್ರಯೋಗಿಸುತ್ತಿದ್ದಂತೆ, ಸಾರಿಗೆ ನೌಕರರು ಕೂಡ ಬಂದ್ ಕೈ ಬಿಟ್ಟಿದ್ದಾರೆ. ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪ್ರತಿಭಟನಾ ನಿರತ ಸಂಘಟನೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಜನವರಿ 8ಕ್ಕೆ ಮುಷ್ಕರ ಅಥವಾ ಮೆರವಣಿಗೆಗೆ ಅನುಮತಿ ಇಲ್ಲ. ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸೆಕ್ಷನ್ 107(ಅನುಮತಿ ಪಡೆಯದೇ ಮೆರವಣಿಗೆ ನಡೆಸುವುದು) ಅಡಿ ಕೇಸ್ ದಾಖಲಿಸುತ್ತೇವೆ. ಮೆರವಣಿಗೆ ಬದಲಿಗೆ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಬೇಕೆಂದು ಆದೇಶ ಹೊರಡಿಸಿದ್ದಾರೆ.
ಬಂದ್‍ಗೆ ಯಾವುದೇ ಸಂಘಟನೆಗಳಿಂದ ಬೆಂಬಲ ಸಿಗದಿದ್ದರಿಂದ ಸಿಐಟಿಯು ಅಧ್ಯಕ್ಷ ಅನಂತ ಸುಬ್ಬಾರಾವ್ ಉಲ್ಟಾ ಹೊಡೆದಿದ್ದಾರೆ. ನಾವು ಬಂದ್ ಮಾಡುತ್ತಿಲ್ಲ. 13 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕಾರ್ಖಾನೆಗಳು, ಬ್ಯಾಂಕ್‍ಗಳು ಇರುವುದಿಲ್ಲ. ಸಾರಿಗೆ ನಿಗಮಗಳು ಸ್ಟ್ರೈಕ್ ಮಾಡುತ್ತಿಲ್ಲ. ಡಿಪೋ ಮಟ್ಟದಲ್ಲಿ ಧರಣಿಗಳು ನಡೆಯಲಿವೆ. ಜನ ಇರುವುದಿಲ್ಲ. ಜಾಸ್ತಿ ಬಸ್ ಓಡಿಸಿ ಲಾಸ್ ಮಾಡಿಕೊಳ್ಳಬೇಡಿ ಅಂದಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ಭಾರತ್ ಬಂದ್ ಠುಸ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬುಧವಾರ ಕಾರ್ಮಿಕರ ಪ್ರತಿಭಟನೆ – ಭಾರತ್ ಬಂದ್ ಯಾಕೆ? ಬೇಡಿಕೆ ಏನು?
ಬಸ್ ಇರುತ್ತೆ:
ಮುಷ್ಕರದಲ್ಲಿ ಭಾಗಿಯಾಗದಂತೆ ಸಾರಿಗೆ ನೌಕರರ ಮೇಲೆ ಎಸ್ಮಾ(ಅಗತ್ಯ ಸೇವೆ ನಿರ್ವಹಣಾ ಕಾಯ್ದೆ) ಅಸ್ತ್ರವನ್ನು ಪ್ರಯೋಗಿಸಲು ಸರ್ಕಾರ ಮುಂದಾಗಿದೆ. ಎಸ್ಮಾ ಜಾರಿಗೆ ಹೆದರಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಕೆಲ ನೌಕರರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆಯಿದೆ.
ಶಾಲೆ ಇರುತ್ತೆ:
ಖಾಸಗಿ ಶಾಲಾ-ಕಾಲೇಜುಗಳು ಬಂದ್ ಬೆಂಬಲಿಸದ ಕಾರಣ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ. ಆಯಾ ಶಾಲಾ ಆಡಳಿತ ಮಂಡಳಿಗೆ ರಜೆ ನೀಡುವ ಅಧಿಕಾರವನ್ನು ನೀಡಲಾಗಿದೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ರಿಕ್ಷಾ ಇರುತ್ತೆ:
ಸಿಐಟಿಯು ಅಡಿ ಬರುವ ಆಟೋ ಚಾಲಕರ ಸಂಘಟನೆಗಳ ಮಾತ್ರ ಬೆಂಬಲ ನೀಡಿದ್ದು ಬೆಂಗಳೂರು ನಗರ ಆಟೋ ಚಾಲಕರ ಸಂಘದಿಂದ ಬೆಂಬಲ ಇಲ್ಲ. ಆದರ್ಶ ಆಟೋ ಯೂನಿಯನ್‍ನಿಂದ ಬೆಂಬಲ ನೀಡಿಲ್ಲ. ಎಂದಿನಂತೆ ಆಟೋ, ಊಬರ್, ಟ್ಯಾಕ್ಸಿ ಸಂಚಾರ ಇರಲಿದೆ.
ಖಾಸಗಿ ಪ್ರವಾಸ ವಾಹನಗಳ ಸೇವೆ ಎಂದಿನಂತೆ ಇರಲಿದ್ದು, ಲಾರಿ ಮಾಲೀಕರ ಸಂಘವ ಬೆಂಬಲ ಇಲ್ಲ. ಎಪಿಎಂಸಿ ಮಾರುಕಟ್ಟೆ ವಹಿವಾಟು ಎಂದಿನಂತೆ ನಡೆಸಲಿದೆ. ಕನ್ನಡ ಪರ ಸಂಘಟನೆಗಳಿಗೆ ಭಾರತ್ ಬಂದ್ ಮಾಹಿತಿಯೇ ಇಲ್ಲ. ಸಂಬಂಧಪಟ್ಟವರು ಬೆಂಬಲ ಕೇಳಿದರೆ ನೋಡೋಣ ಎಂದು ಕರವೇ ತಿಳಿಸಿದೆ.
ಭಾರತ್ ಬಂದ್‍ಗೆ ಹೋಟೆಲ್ ಸಂಘ ಬೆಂಬಲ ಇಲ್ಲ. ಮಾಲ್‍ಗಳು ಕೂಡ ನಾಳೆ ತೆರೆದಿರುತ್ತವೆ. ಬಂದ್‍ಗೆ ಟ್ಯಾಕ್ಸಿ ಮಾಲೀಕರ ಬೆಂಬಲ ನೀಡಿಲ್ಲ. ಲಾರಿ ಸಂಚಾರ ಕೂಡ ಇರಲಿದ್ದು ಅಗತ್ಯ ವಸ್ತುಗಳ ಸಾಗಾಣೆ ಎಂದಿನಂತಿರಲಿವೆ.
ಯಾರೆಲ್ಲ ಬೆಂಬಲ?
ಎಸ್‍ಬಿಐ ಹೊರತು ಪಡಿಸಿ ಉಳಿದ ಎಲ್ಲಾ ಬ್ಯಾಂಕ್‍ಗಳ ಸೇವೆ ಸ್ಥಗಿತವಾಗುವ ಸಾಧ್ಯತೆಯಿದೆ. ಉಳಿದ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದೇ ಬ್ಯಾಂಕ್ ಕೆಲಸ ಮಾಡುವುದು ಉತ್ತಮ. ಭಾರತ್ ಬಂದ್‍ಗೆ ರೈತರಿಂದ ಬೆಂಬಲ ವ್ಯಕ್ತವಾಗಿದ್ದು ಬಂದ್ ದಿನ ಯಾವುದೇ ಉತ್ಪನ್ನದ ಮಾರಾಟವೂ ಇಲ್ಲ, ಖರೀದಿಯೂ ಇಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಬಂದ್‍ಗೆ ಕರೆ ನೀಡಿವೆ.
ನಮ್ಮ ಬೇಡಿಕೆ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಪದೇ ಪದೇ ಸಂಘಟನೆಗಳು ದನಿ ಎತ್ತಿದ್ದರೂ, ಸರ್ಕಾರ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಎಂದು ಆರೋಪಿಸಿ ಎಐಟಿಯುಸಿ, ಎಚ್‍ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಸ್‍ಇಡಬ್ಲ್ಯುಎ, ಎಐಸಿಸಿಟಿಯು, ಎಲ್‍ಪಿಎಫ್ ಮತ್ತು ಯುಟಿಯುಸಿ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.
ಪ್ರತಿಭಟನೆಗೆ ಕಾರಣ ಏನು?
1. ಒಟ್ಟು ರಾಷ್ಟ್ರೀಯ ಉತ್ಪನ್ನ ಜಿಡಿಪಿ ಶೇ.9.4 ರಿಂದ 4.5ಕ್ಕೆ ಕುಸಿತ.
2. ಆರ್ಥಿಕ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡವರ ಸಂಖ್ಯೆ 50 ಲಕ್ಷ ಮಂದಿ.
3. ಎಂಜಿನಿಯರಿಂಗ್ ಮುಗಿಸಿದ 100 ಮಂದಿಯಲ್ಲಿ 12 ಜನರಿಗೆ ಮಾತ್ರ ಉದ್ಯೋಗ.
4. ಮಾಲೀಕರ ಲಾಭದ ಪಾಲು 100ರಲ್ಲಿ 45 ರೂ. ಕಾರ್ಮಿಕರ ವೇತದ ಪಾಲು 100 ರಲ್ಲಿ 15 ರೂ.
5. ಜಿಎಸ್‍ಟಿಯಿಂದ ಎಲ್ಲ ಬೆಲೆಗಳು ಶೇ.20 ರಷ್ಟು ಏರಿಕೆ.
6. ಕಾರ್ಮಿಕರು ಪ್ರತಿಭಟನೆ ಮಾಡಿದರೆ 6 ತಿಂಗಳು ಜೈಲು ಶಿಕ್ಷೆ.
7. ಶ್ರೀಮಂತ ಉದ್ಯಮಿಗಳು ಮಾಡಿರುವ ಬ್ಯಾಂಕ್ ಸಾಲ ಮರುಪಾವತಿ ಮಾಡದೇ ಇರಲು ಕಾನೂನು ತರಲಾಗಿದೆ.
ಬೇಡಿಕೆ ಏನು?
1. 21 ಸಾವಿರ ರೂಪಾಯಿ ರಾಷ್ಟ್ರವ್ಯಾಪಿ ಸಮಾನ ಕನಿಷ್ಟ ವೇತನಕ್ಕೆ ಆಗ್ರಹ.
2. ಕೇಂದ್ರ ಸರ್ಕಾರ ದ ಖಾಸಗೀಕರಣ ನೀತಿಗೆ ವಿರೋಧ.
3. ಕಾರ್ಮಿಕ ಕಾನೂನು ಕಟ್ಟುನಿಟ್ಟಿನ ಜಾರಿಗಾಗಿ ಜಿಲ್ಲೆಗಳಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆ.
4. ಮಾಸಿಕ ಪಿಂಚಣಿ 10 ಸಾವಿರ ರೂಪಾಯಿಗಾಗಿ ಬೇಡಿಕೆ.
5. ಬೆಲೆಯೇರಿಕೆ ನಿಯಂತ್ರಣಕ್ಕೆ ಆಗ್ರಹಿಸಿ, ಸಾರ್ವತ್ರಿಕಪಡಿತರ ವ್ಯವಸ್ಥೆಗಾಗಿ.
6. ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ನೀತಿಗಳ ವಿರುದ್ಧ ಉದ್ಯೋಗ ಕಳಕೊಂಡ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು.
7. ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಬೀದಿಬದಿಯ ವ್ಯಾಪಾರಸ್ಥರು, ಮನೆ ಕೆಲಸಗಾರರು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಸ್ಥಾಪನೆ, ಕಲ್ಯಾಣ ಯೋಜನೆಗೆ ಅನುದಾನ ನೀಡಬೇಕು.
8. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಳಿಗಾಗಿ ಡಾ| ಸ್ವಾಮಿನಾಥನ್ ವರದಿ ಜಾರಿಗಾಗಿ, ಸಾಲ ಮನ್ನಾಕ್ಕಾಗಿ, ರೈತರ ಆತ್ಮಹತ್ಯೆ ತಡೆಗಾಗಿ, ಗ್ರಾಮೀಣ ಉದ್ಯೋಗ ಖಾತ್ರಿ ಬಲಪಡಿಸಲು ಆಗ್ರಹ.
9. ಗುತ್ತಿಗೆ ಪದ್ಧತಿ ನಿಯಂತ್ರಣ, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಖಾಯಂ ಖಾತ್ರಿಗೆ ಆಗ್ರಹ.
11. ರಕ್ಷಣಾ ವಲಯ, ರೈಲ್ವೇ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಬಂದ್.
ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ನಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವ ಜೊತೆಗೆ ಕೆಎಸ್‌ಆರ್‌ಟಿಸಿಗೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗಿದೆ.
ಕಾರ್ಮಿಕರ ಮುಷ್ಕರಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಎರಡು ದಿನ ಬಂದ್‍ನಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಒಟ್ಟು ಆರು ಡಿಪೋಗಳಲ್ಲಿ 327 ಬಸ್‍ಗಳು ಬಂದ್ ನಿಯಮಿತವಾಗಿ ಸಂಚರಿಸಿಲ್ಲ. ಇದರಿಂದ ಒಟ್ಟು ಅಂದಾಜು 31 ಲಕ್ಷ ರೂ. ನಷ್ಟ ಸಂಭವಿಸಿದೆ.
ಮಂಗಳವಾರ ಹಾಗೂ ಬುಧವಾರ ಚಿಕ್ಕಮಗಳೂರಿನಲ್ಲಿ 70, ಅರಸೀಕೆರೆಯಲ್ಲಿ 64, ಸಖರಾಯಪಟ್ಟಣದಲ್ಲಿ 53, ಕಡೂರಿನಲ್ಲಿ 63, ಮೂಡಿಗೆರೆಯಲ್ಲಿ 56, ಬೇಲೂರಿನಲ್ಲಿ 21 ಒಟ್ಟು 327 ಬಸ್‍ಗಳು ರಸ್ತೆಗಿಳಿದಿಲ್ಲ. ಕಾರ್ಮಿಕರ ಮುಷ್ಕರದ ಬಿಸಿ ಕೇಂದ್ರ ಸರ್ಕಾರಕ್ಕೆ ತಟ್ಟಿತೋ ಇಲ್ಲವೋ ತಿಳಿದಿಲ್ಲ. ಆದರೆ ಕೆಎಸ್‌ಆರ್‌ಟಿಸಿ ಮಾತ್ರ ಜೋರಾಗಿಯೇ ಬಿಸಿ ಮುಟ್ಟಿಸಿದೆ.
ಗದಗ: ಭಾರತ್ ಬಂದ್ ಹಿನ್ನೆಲೆಯಲ್ಲಿ ವಾಹನಗಳಿಲ್ಲದೆ ಪರದಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಾಹನದಲ್ಲೇ ಕಾಲೇಜಿಗೆ ಕಳುಹಿಸುವ ಮೂಲಕ ಗದಗ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಬಸ್ ಸಂಚಾರ ಇಲ್ಲದೇ ವಿದ್ಯಾರ್ಥಿಗಳು ವಾಹನಗಳಿಲ್ಲದೆ ಬಸ್ ನಿಲ್ದಾಣದಲ್ಲಿಯೇ ನಿಂತು ಪರದಾಡುತ್ತಿದ್ದರು. ಬಳಿಕ ಪೊಲೀಸರು ವಿದ್ಯಾರ್ಥಿಗಳ ಕಷ್ಟವನ್ನು ನೋಡಲಾಗದೇ ತಮ್ಮ ವಾಹನದಲ್ಲಿ ಅವರನ್ನು ಹತ್ತಿಸಿ ಕಳುಹಿಸಿದ್ದಾರೆ. ಈ ಮೂಲಕ ಗದಗ ಶಹರ, ಬೆಟಗೇರಿ, ಬಡಾವಣೆ ಹಾಗೂ ಗ್ರಾಮೀಣ ಪೊಲೀಸರ ಮಾನವೀಯತೆ ಮೆರೆದಿದ್ದಾರೆ. ಪೊಲೀಸರು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಎರಡನೇ ದಿನದ ಭಾರತ್ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನಡುವೆ ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರು ಫುಲ್ ಖುಷಿಯಾಗಿದ್ದಾರೆ. ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ ಹಿರೇಮಠ ಅವರು ಗದಗ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸುವಂತೆ ಆದೇಶ ನೀಡಿದ್ದರು. ಅದರಂತೆಯೇ ಗದಗನಿಂದ ಮುಂಡರಗಿ, ಗಜೇಂದ್ರಗಡ, ಹುಬ್ಬಳ್ಳಿ ಮತ್ತು ಹಾವೇರಿ ಮಾರ್ಗದಲ್ಲಿ ಬಸ್ ಸಂಚಾರ ಆರಂಭಗೊಂಡಿವೆ.
ಬಸ್ ಸಂಚಾರ ಆರಂಭದಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಸ್‍ಗಳಿಗೆ ಪೊಲೀಸ್ ಭದ್ರತೆಯನ್ನು ಒದಗಿಸಿದ್ದಾರೆ. ಮುಂದೆ ಪೊಲೀಸ್ ವಾಹನ ಹೋಗುತ್ತಿದ್ದರೆ ಅದರ ಹಿಂದೆ ಬಸ್ ಸಂಚರಿಸುತ್ತಿದೆ.
ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಕೈಗೊಂಡಿರುವ ಭಾರತ್ ಬಂದ್ ನ ಎರಡನೇ ದಿನ ಉಡುಪಿಯಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆದಿದೆ.
ಜಿಲ್ಲಾ ಕೇಂದ್ರದಲ್ಲಿರುವ ಹೆಡ್ ಪೋಸ್ಟ್ ಆಫೀಸ್ ಆವರಣದಲ್ಲಿ ಅಂಚೆ ಇಲಾಖೆ ಸಿಬ್ಬಂದಿಯೊಬ್ಬರು ಪುಟ್ಗೋಸಿ ಕಟ್ಟಿಕೊಂಡು ಪ್ರತಿಭಟನೆ ಮಾಡಿದ್ದಾರೆ. ಪ್ಯಾಂಟಿನ ಮೇಲೆ ಪುಟ್ಗೋಸಿ ತೊಟ್ಟು ವಿನೂತನ ರೀತಿಯಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದರು. ಅರ್ಧ ಮುಖಕ್ಕೆ ಮಸಿ ಬಳಿದುಕೊಂಡು, ಎರಡೂ ಕಿವಿಗೆ ಹೂವು ಇಟ್ಟು ತಮ್ಮ ಆಕ್ರೋಶ ಹೊರಹಾಕಿದರು.
ಸರ್ಕಾರ ನಮ್ಮನ್ನು ಪುಟ್ಗೋಸಿಯಲ್ಲಿ ನಿಲ್ಲಿಸಿದೆ. ಕಿವಿಗೆ ಹೂವಿಟ್ಟಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಮ್ಮ ಹಿರಿಯ ಅಧಿಕಾರಿಗಳು ಅಂಚೆ ಕಚೇರಿಯೊಳಗೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಮೂಲಕ ಸಂದೇಶ ಸಾರುವುದು ಈ ಪುಟ್ಗೋಸಿ ಪ್ರತಿಭಟನೆಯ ಉದ್ದೇಶವಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಅಲ್ಲದೇ ಪ್ರಧಾನಿ ಮೋದಿಯವರನ್ನು ಕಟು ಮಾತಿನಲ್ಲಿ ಟೀಕಿಸಿದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪ್ರತಿಭಟನಾಕಾರ ರಾಘವೇಂದ್ರ ಬೆಳ್ವೆ, ಅಂಚೆ ಇಲಾಖೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದೇನೆ. 2004ರ ಇಲಾಖಾ ನಿಯಮದನ್ವಯ ಹಳೆಯ ಪಿಂಚಣಿಯನ್ನು ರದ್ದುಗೊಳಿಸಿ ಅದು ಬರೀ ಸಂಸದ ಹಾಗೂ ಶಾಸಕರಿಗೆ ಇನ್ನೂ ಕೂಡ ಅನ್ವಯವಾಗಿದೆ. ನಮಗೆಲ್ಲ ಬಿಕಾರಿಗಳಂತೆ ಹೊಸ ಪಿಂಚಣಿ ಸೇವೆಯನ್ನು ಆರಂಭಿಸಿದ್ದಾರೆ. ನಾವು ನಿವೃತ್ತಿ ಹೊಂದಿದ ಬಳಿಕ ಅದು ಜಾರಿಗೆ ಬರುವಾಗ ಅದರ ಬಿಸಿ ನಮಗೆ ತಟ್ಟಿತ್ತು. ಆಗಲೇ ನಮ್ಮ ಹಾಗೂ ವಿವಿಧ ಸಂಘಟನೆಗಳು ಹಳೆಯ ಪಿಂಚಣಿ ಬೇಕು ಅಂತ ಕೇಂದ್ರ ಸರ್ಕಾರದ ವಿರುದ್ಧ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಕಿವುಡು ಧೋರಣೆ ತೋರುತ್ತಿದೆ ಅಂತ ಕಿಡಿಕಾರಿದ್ದಾರೆ.
ನಾಲ್ಕೂವರೆ ವರ್ಷದಲ್ಲಿ ನಮಗೆ ಕೇಂದ್ರ ಸರ್ಕಾರ ನಮ್ಮ ಎರಡು ಕಿವಿಗೆ ಬಣ್ಣ ಬಣ್ಣದ ಹೂವಿಟ್ಟಿದೆ. ತಿಂಗಳಿಗೆ 500-600 ಪಿಂಚಣಿ ನೀಡಿದ್ರೆ ನಾವು ಹೆಂಡತಿ ಮಕ್ಕಳನ್ನು ಸಾಕುವುದು ಹೇಗೆ? ಅವರಿಗೂ ಜೀವನ ಭದ್ರತೆಯಿಲ್ಲ. ಹೀಗಾಗಿ ಮಿನಿಮಮ್ ಹಳೆಯ ಪಿಂಚಣಿ ಏನಿದೆಯೋ ಅದನ್ನೇ ದಯಪಾಲಿಸಿ ಅಂತ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ರು.