Tag: ಭಾರತ್ ಬಂದ್

  • ಭಾರತ್ ಬಂದ್‍ಗೆ ಬಾಗಲಕೋಟೆಯಲ್ಲಿ ನೀರಸ ಪ್ರತಿಕ್ರಿಯೆ

    ಭಾರತ್ ಬಂದ್‍ಗೆ ಬಾಗಲಕೋಟೆಯಲ್ಲಿ ನೀರಸ ಪ್ರತಿಕ್ರಿಯೆ

    ಬಾಗಲಕೋಟೆ: ಭೂ ಸುಧಾರಣ ಕಾಯ್ದೆ ಹಾಗೂ ಎಪಿಎಂಸಿ ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್‍ಗೆ ಕರೆ ನೀಡಿದ್ದು, ಬಾಗಲಕೋಟೆಯಲ್ಲಿ ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಬಾಗಲಕೋಟೆಯಲ್ಲಿ ಜನಜೀವನ ಯಥಾ ಸ್ಥಿತಿಯಲ್ಲಿದೆ. ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸೇರಿದಂತೆ 10 ಕ್ಕೂ ಹೆಚ್ಚು ಸಂಘಟನೆಗಳಿಂದ ಇಂದಿನ ಬಂದ್‍ಗೆ ಕೇವಲ ನೈತಿಕ ಬೆಂಬಲ ಸೂಚಿಸಲಾಗುತ್ತಿದೆ.

    ಇಳಕಲ್ ಹಾಗೂ ಜಮಖಂಡಿ ರೈತರಿಂದ ಇಂದು 10 ಗಂಟೆಗೆ ಪ್ರತಿಭಟನೆ ನಡೆಸಲಿದ್ದು, ಅಂಗಡಿಮುಂಗಟ್ಟು ತೆರೆದಿದ್ದು, ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. 28ರ ಬಂದ್‍ಗೆ ಜಿಲ್ಲೆಯನ್ನ ಸಂಪೂರ್ಣ ಬಂದ್ ಮಾಡಲು ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ಇಂದು ಕೇಂದ್ರ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ.

    ರಾಜ್ಯದಾದ್ಯಂತ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ಮಾಡಲಿದ್ದು, ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್ ಆಗಲಿದೆ. ತಾಲೂಕು ಕೇಂದ್ರಗಳಲ್ಲೂ ರಸ್ತೆಗಳನ್ನು ಬಂದ್ ಮಾಡಲು ನಿರ್ಧಾರ ಮಾಡಲಿದ್ದು, ಗ್ರಾಮಗಳಲ್ಲೂ ರಸ್ತೆ ತಡೆದು ರೈತರಿಂದ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ತರಲು ಉದ್ದೇಶಿಸಿರುವ ಕೃಷಿ ಮಸೂದೆ ವಿರೋಧಿಸಿ 2000ಕ್ಕೂ ಹೆಚ್ಚು ರೈತ ಸಂಘಟನೆಗಳು ದೇಶದ್ಯಾಂತ ಪ್ರತಿರೋಧ್ ದಿವಸ್ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿಯೂ ಇದರ ಪರಿಣಾಮ ಇರಲಿದೆ.

  • ವಿಪಕ್ಷಗಳ ಪ್ರೇರಣೆಯ ಭಾರತ್ ಬಂದ್ ವಿಫಲವಾಗಿದೆ: ಕೋಟ ಶ್ರೀನಿವಾಸ ಪೂಜಾರಿ

    ವಿಪಕ್ಷಗಳ ಪ್ರೇರಣೆಯ ಭಾರತ್ ಬಂದ್ ವಿಫಲವಾಗಿದೆ: ಕೋಟ ಶ್ರೀನಿವಾಸ ಪೂಜಾರಿ

    ಮಂಗಳೂರು: ವಿಪಕ್ಷಗಳ ಪ್ರೇರಣೆಯಿಂದ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

    ಮಂಗಳೂರಿನಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾರತ್ ಬಂದ್ ಕರೆಗೆ ಬೆಂಬಲ ನೀಡದೆ ಬಂದ್ ಅನ್ನು ವಿಫಲಗೊಳಿಸಿದ್ದಾರೆ. ದೇಶದೆಲ್ಲೆಡೆ ಬಂದ್‍ಗೆ ಕರೆ ಕೊಟ್ಟವರು ನಿರಾಶರಾಗಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಬಂದರೆ ಪ್ರತಿಭಟನೆ ನಡೆಸುತ್ತೇವೆ ಎಂಬ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿಕೆಗೆ ತಿರುಗೇಟು ನೀಡಿದರು. ಹರಿಯುವ ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ? ಕೇಂದ್ರದ ಗೃಹ ಸಚಿವರು ಮಂಗಳೂರಿಗೆ ಬಂದರೆ ಸಂಭ್ರಮ ಪಡಬೇಕು. ಪೌರತ್ವ ತಿದ್ದುಪಡೆ ಕಾಯ್ದೆ ಬಗ್ಗೆ ಜನರಿಗೆ ಮನವರಿಕೆ ಮಾಡಲು ಅಮಿತ್ ಶಾ ಬರುತ್ತಿದ್ದಾರೆ. ಅವರು ಮನೆ ಬಾಗಿಲಿಗೆ ಬರುವಾಗ ಎಲ್ಲರೂ ಸ್ವಾಗತಿಸುತ್ತಾರೆ ಎಂದುಕೊಂಡಿದ್ದೆ. ಹೀಗಾಗಿ ಐವಾನ್ ಡಿಸೋಜ ಅಷ್ಟು ಸಣ್ಣತನ ಪ್ರದರ್ಶಿಸದೆ ಸ್ವಾಗತಿಸಲಿ ಎಂದು ಸಲಹೆ ನೀಡಿದರು.

    ಬಂದ್‍ಗೆ ನೀರಸ ಪ್ರತಿಕ್ರಿಯೆ:
    ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶಾದ್ಯಂತ ಮುಷ್ಕರಕ್ಕೆ ಎಡಪಂಥೀಯ ಸಂಘಟನೆಗಳು ಕರೆ ನೀಡಿದ್ದರೂ ರಾಜ್ಯದ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್ ಸೇರಿದಂತೆ ಎಲ್ಲಾ ವಾಹನಗಳು ಮುಂಜಾನೆಯಿಂದಲೇ ಸಂಚಾರ ಆರಂಭಿಸಿದ್ದು, ಯಾವುದೇ ವಾಹನಗಳು ಬಂದ್‍ಗೆ ಬೆಂಬಲ ನೀಡಿಲ್ಲ. ಜೊತೆಗೆ ಶಾಲಾ, ಕಾಲೇಜುಗಳು, ಸರ್ಕಾರಿ ಖಾಸಗಿ ಕಚೇರಿಗಳು, ತರಕಾರಿ ಹಾಗೂ ಮೀನು ಮಾರುಕಟ್ಟೆ ಎಂದಿನಂತೆ ದಿನಚರಿ ನಡೆಸಿತ್ತು. ಆದರೆ ಕೇರಳದಲ್ಲಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿರುವುದರಿಂದ ಮಂಗಳೂರಿನಿಂದ ಕಾಸರಗೋಡಿಗೆ ತೆರಳಬೇಕಿದ್ದ ಎಲ್ಲಾ ಕೆಎಸ್‍ಆರ್ ಟಿಸಿ ಬಸ್‍ಗಳ ಸಂಚಾವನ್ನು ಸ್ಥಗಿತಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬಂದ್‍ಗೆ ಬೆಂಬಲ ಸಿಗದಿದ್ದು ಬಂದ್ ಸಂಪೂರ್ಣ ವಿಫಲವಾಗಿದೆ.

  • ಭಾರತ್ ಬಂದ್ ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆ ಹೃದಯಾಘಾತದಿಂದ ಸಾವು

    ಭಾರತ್ ಬಂದ್ ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆ ಹೃದಯಾಘಾತದಿಂದ ಸಾವು

    ಶಿವಮೊಗ್ಗ: ಭಾರತ್ ಬಂದ್ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಹಿರಿಯ ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶಿವಮೊಗ್ಗದ ವಿದ್ಯಾನಗರದ ನಿವಾಸಿಯಾಗಿದ್ದ ರವಿಶೇಟ್ (38) ಹೃದಯಾಘಾತದಿಂದ ಸಾವನ್ನಪ್ಪಿದ ಪೇದೆ. ರವಿಶೇಟ್ ಅವರು ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಹಿರಿಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಭಾರತ್ ಬಂದ್‍ನಿಂದಾಗಿ ಅವರನ್ನು ಹೊಳೆಹೊನ್ನೂರಿನಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು.

    ಕರ್ತವ್ಯದಲ್ಲಿದ್ದಾಗ ರವಿಶೇಟ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಶಿವಮೊಗ್ಗ ನಗರದ ಸುಬ್ಬಯ್ಯ ಆಸ್ಪತ್ರೆಗೆ ಕರೆತರುವಾಗ ತೀವ್ರ ಹೃದಯಾಘಾತವಾಗಿ ರವಿಶೇಟ್ ಸಾವನ್ನಪ್ಪಿದ್ದಾರೆ. ರವಿಶೇಟ್ ಅವರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರವಿಶೇಟ್ ಅವರ ನಿಧನಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.

  • ‘ಲೆಕ್ಕ ತನ್ನಿ ಟ್ಯಾಲಿ ಮಾಡೋಣ’- ಸಿದ್ದರಾಮಯ್ಯಗೆ ಅಶೋಕ್ ಸವಾಲು

    ‘ಲೆಕ್ಕ ತನ್ನಿ ಟ್ಯಾಲಿ ಮಾಡೋಣ’- ಸಿದ್ದರಾಮಯ್ಯಗೆ ಅಶೋಕ್ ಸವಾಲು

    ಉಡುಪಿ: ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೋತಿಷ್ಯಾಲಯ ಮುಚ್ಚಿದೆ. ಜನ ಅವರ ಮಾತನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದ ಅನುದಾನದ ಬಗೆಗಿನ ಸಿದ್ದರಾಮಯ್ಯ ಆರೋಪಕ್ಕೆ ಉತ್ತರ ನೀಡಿದರು. ಸಿದ್ದರಾಮಯ್ಯಗೆ ಓಪನ್ ಚಾಲೆಂಜ್ ಕೊಡುತ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿಯ 5 ವರ್ಷದ ಟ್ಯಾಲಿ ಮಾಡೋಣ. ಪ್ರಧಾನಿ ಮೋದಿ ಮತ್ತು ಮನಮೋಹನ್ ಸಿಂಗ್ ಅನುದಾನ ಟ್ಯಾಲಿ ಮಾಡೋಣ ಬನ್ನಿ, ಯಾರು ಎಷ್ಟು ಕೊಟ್ಟಿದ್ದಾರೆ ಲೆಕ್ಕಾ ಹಾಕೋಣ ಎಂದು ಹೇಳಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 10 ವರ್ಷದಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು? ಮೋದಿಯ ಕೊಡುಗೆಯೇನು ಎಂದು ನಾನು ಚರ್ಚೆ ಮಾಡೋದಕ್ಕೆ ಸಿದ್ಧನಿದ್ದೇನೆ. ಸಿದ್ದರಾಮಯ್ಯ ವಿವರ ತಗೊಂಡು ಬರಲಿ. ಅಭಿವೃದ್ಧಿ, ಬರ, ನೆರೆ, ರಸ್ತೆಯ ಅನುದಾದ ಲೆಕ್ಕ ಕೊಡಿ. ದಾಖಲೆ ತಂದು ಮಾತನಾಡಿ. ಉಪಚುನಾವಣೆಯಲ್ಲಿ 12 ಬಿಜೆಪಿ ಶಾಸಕರು ಗೆದ್ದಾಗ ಸಿದ್ದರಾಮಯ್ಯ ಅವರ ಮೇಲಿನ ನಂಬಿಕೆ ಹೋಗಿದೆ. ಅವರ ಜ್ಯೋತಿಷ್ಯಾಲಯ ಮುಚ್ಚಿದೆ, ಅಂಕಿ-ಅಂಶ ನೀಡಿ ಸಿದ್ದರಾಮಯ್ಯ ಅವರು ಮಾತನಾಡಿಲಿ. ಸುಮ್ಮನೆ ಹಾದಿ ಬೀದಿಯಲ್ಲಿ ಮಾತಾಡಿ ಏನೂ ಸಾಧಿಸಲಾಗದು ಎಂದರು.

    ಬಂದ್ ತಿರಸ್ಕರಿಸಿದ್ದಾರೆ: ಭಾರತ್ ಬಂದ್ ಕರೆಯುವ ಅವಶ್ಯಕತೆ ಇರಲಿಲ್ಲ. 50-60 ವರ್ಷದ ಹಿಂದಿನ ಬೇಡಿಕೆಗಳಿಗೆ ಅರ್ಥವಿಲ್ಲ. ಬಂದ್ ಕರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತದೆ. ಬಂದ್‍ಗೆ ಜನಗಳು ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಜನ ಬಂದ್‍ಅನ್ನು ತಿರಸ್ಕಾರ ಮಾಡಿದ್ದಾರೆ. ನಾನಿದನ್ನು ಸ್ವಾಗತ ಮಾಡುತ್ತೇನೆ. ಕಮ್ಯೂನಿಸ್ಟ್ ಪ್ರೇರಿತ ಬಂದ್ ಹೇರಿಕೆ ಸರಿಯಲ್ಲ. ಬಂದ್‍ನಿಂದ ಯಾವುದೇ ಉದ್ದೇಶ ಈಡೇರಲ್ಲ ಎಂದು ಹೇಳಿದರು.

    ಬಂದ್ ಶಾಂತಿಯುತ: ಇತ್ತ ಗೃಹ ಸಚಿವ ಬೊಮ್ಮಾಯಿಯವರು ಮಾತನಾಡಿ, ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆಕೊಟ್ಟಿದ್ದು, ರಾಜ್ಯದಲ್ಲಿ ಎಲ್ಲೂ ಬಂದ್ ಆಗಿಲ್ಲ ಎಂಬ ವರದಿ ಬಂದಿದೆ. ಕೆಲವು ಕಡೆ ಎಡಪಕ್ಷಗಳು ಮುಷ್ಕರ ಮಾಡಿವೆ. ಶಾಂತಿಯುತ ಪ್ರತಿಭಟನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

    ಉಡುಪಿಯಲ್ಲಿ ಬಂದ್ ಕುರಿತಾಗಿ ಮಾತನಾಡಿದ ಸಚಿವ ಬೊಮ್ಮಾಯಿ, ರಾಜ್ಯಾದ್ಯಂತ ಪರಿಸ್ಥಿತಿ ಹತೋಟಿಯಲ್ಲಿದೆ. ಸೂಕ್ತ ಬಂದೋಬಸ್ತ್ ಮಾಡಿದ್ದೆವು. ದಿನನಿತ್ಯದ ಚಟುವಟಿಕೆ ಸಾಮಾನ್ಯವಾಗಿದೆ. ಶಾಲಾ ಕಾಲೇಜು ನಡೆದಿದ್ದು, ವ್ಯಾಪಾರ-ವ್ಯವಹಾರ ಸಹಜವಾಗಿದೆ ಎಂದು ಹೇಳಿದರು.

  • ಮಗು ಅಳದಿದ್ರೆ ತಾಯಿ ಹಾಲು ಕೊಡಲ್ಲ, ಹೋರಾಟ ಮಾಡದಿದ್ರೆ ಸರ್ಕಾರ ಕಣ್ಣು ತೆರೆಯಲ್ಲ: ಬಿಜೆಪಿ ಸಂಸದ

    ಮಗು ಅಳದಿದ್ರೆ ತಾಯಿ ಹಾಲು ಕೊಡಲ್ಲ, ಹೋರಾಟ ಮಾಡದಿದ್ರೆ ಸರ್ಕಾರ ಕಣ್ಣು ತೆರೆಯಲ್ಲ: ಬಿಜೆಪಿ ಸಂಸದ

    ಚಿಕ್ಕಬಳ್ಳಾಪುರ: ಮಗು ಅಳದಿದ್ರೆ ತಾಯಿ ಹಾಲು ಕೊಡಲ್ಲ, ಅದೇ ರೀತಿ ಜನಸಾಮಾನ್ಯರು ಸಹ ತಮ್ಮ ಕಷ್ಟಗಳನ್ನ ಹೇಳಿಕೊಳ್ಳದಿದ್ದರೆ ಸರ್ಕಾರ ಸಹ ಕಣ್ಣು ತೆರೆಯಲ್ಲ ಎಂದು ಭಾರತ್ ಬಂದ್ ಅಂಗವಾಗಿ ಕಾರ್ಮಿಕ ಸಂಘಟನೆಗಳು ಮಾಡಿದ ಹೋರಾಟಕ್ಕೆ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಬೆಂಬಲ ಸೂಚಿಸಿದರು.

    ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಚ್ಚೇಗೌಡರು, ದೇಶದಲ್ಲಿ ಶೇ. 50ರಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರಿಗೆ ದುಡಿಮೆಗೆ ಶ್ರಮಕ್ಕೆ ತಕ್ಕ ಹಾಗೆ ಸರಿಯಾದ ವೇತನ ಸಿಗುತ್ತಿಲ್ಲ. ಗುತ್ತಿಗೆ ಆಧಾರದ ನೌಕರಿಗಳಿದ್ದು ಅವರಿಗೆ ಉದ್ಯೋಗ ಭದ್ರೆತಗಳಿಲ್ಲ. ಇವೆಲ್ಲದರ ನಡುವೆ ಕಾಸ್ಟ್ ಆಫ್ ಲಿವಿಂಗ್ ದಿನೇ ದಿನೇ ಜಾಸ್ತಿ ಆಗುತ್ತಿದೆ. ಕುಟುಂಬ ನಿರ್ವಹಣೆಗೆ ಸಾಕಷ್ಟು ಹಣದ ಅವಶ್ಯಕತೆ ಇದೆ. ಹೀಗಾಗಿ ಕಡಿಮೆ ಸಂಬಳಕ್ಕೆ ದುಡಿಯುವ ಕಾರ್ಮಿಕ ವರ್ಗ ಕಷ್ಟಗಳಿಗೆ ಗುರಿಯಾಗುತ್ತಿದೆ. ಸರ್ಕಾರ ಕಷ್ಟದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ಗಮನಹರಿಸಬೇಕಿದ್ದು ಸರಿಯಾದ ಸಂಬಳ ಕೊಡುವ ಕೆಲಸ ಮಾಡಬೇಕಿದೆ ಎಂದರು.

    ಬಳಿಕ ಮಾತನಾಡಿದ ಅವರು, ಉದಹಾರಣೆಗೆ ಹೇಳೋದಾದ್ರೆ ಸರ್ಕಾರಿ ಬಸ್ ಚಾಲಕರಿಗೆ 8 ಗಂಟೆ ಕೆಲಸ ಎಂದು ಹೇಳುತ್ತಾರೆ. ಆದರೆ ಅವರು ಒಂದು ಗಾಡಿ ಇಳದ ತಕ್ಷಣ ಮತ್ತೊಂದು ಗಾಡಿ ಹತ್ತಿಸಿ ಡ್ಯೂಟಿ ಮಾಡಿಸ್ತಾರೆ. ಹೀಗೆ 8 ಗಂಟೆ ಅಲ್ಲ 12 ರಿಂದ 16 ಗಂಟೆ ಕೆಲಸ ಮಾಡುತ್ತಾರೆ. ಅವರ ಹೆಚ್ಚುವರಿ ಗಂಟೆಗಳ ಕೆಲಸಕ್ಕೆ ಹೆಚ್ಚುವರಿ ಸಂಬಳ ಯಾರು ಕೊಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

    ಕಾರ್ಮಿಕರು ಹೋರಾಟ ಮಾಡಿ ಎಂದು ನಾನು ಹೇಳಲ್ಲ ಅದಕ್ಕೆ ಪ್ರೋತ್ಸಾಹ ಕೊಡಲ್ಲ. ಹೀಗೆ ಕಾರ್ಮಿಕರಿಗೆ ನಾನಾ ರೀತಿಯ ಸಮಸ್ಯೆಗಳಿದ್ದು, ಕಾರ್ಮಿಕರಿಗೆ ಸರಿಯಾದ ವೇತನ, ಆರೋಗ್ಯ ಸೇವೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ, ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೊಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದರು.

  • ಭಾರತ್ ಬಂದ್‍ಗೆ ರಾಮನಗರ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ

    ಭಾರತ್ ಬಂದ್‍ಗೆ ರಾಮನಗರ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ

    ರಾಮನಗರ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಜಿಲ್ಲೆಯಲ್ಲಿನ ಎರಡೂ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

    ರಾಮನಗರದಲ್ಲಿ ಬೆಳಗ್ಗೆ 5:40ಕ್ಕೆ ಸರ್ಕಾರಿ ಬಸ್ಸುಗಳು ಬಸ್ ನಿಲ್ದಾಣಕ್ಕೆ ಆಗಮಿಸಿದ್ದವು. ಅಲ್ಲದೇ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗಲಿಲ್ಲ. ದಿನನಿತ್ಯದಂತೆ ಬಸ್, ಕ್ಯಾಬ್, ಆಟೋಗಳು ರಸ್ತೆಗಿಳಿದು ಸಂಚಾರ ನಡೆಸುತಿತ್ತು.

    ಬಂದ್ ವಿಚಾರವಾಗಿ ಯಾವುದೇ ಸಂಘಟನೆಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ, ರಸ್ತೆತಡೆ, ಮೆರವಣಿಗೆ, ಧರಣಿ ನಡೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ರಾಮನಗರ ಎಸ್‍ಪಿ ಅನೂಪ್ ಎ ಶೆಟ್ಟಿ ಆದೇಶಿಸಿದ್ದರು. ಆದ್ದರಿಂದ ಪ್ರತಿಭಟನಾಕಾರರು ರಸ್ತೆಗೆ ಇಳಿಯುವ ಕೆಲಸ ಮಾಡಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪ್ರತಿಭಟನೆಗಳೇ ನಡೆಯದೇ ಬಂದ್ ನೀರಸವಾಗಿತ್ತು.

    ಜಿಲ್ಲೆಯ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳನ್ನು ಮುಚ್ಚುವಂತೆ ಸಿಐಟಿಯು ಕೈಗಾರಿಕೆಗಳಿಗೆ ಸಂದೇಶ ರವಾನಿಸಿತ್ತು. ಅಲ್ಲದೇ ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿತ್ತು.

    ಆದರೆ ಎರಡೂ ಕೈಗಾರಿಕಾ ಪ್ರದೇಶಗಳು ಸಹ ಸ್ಥಬ್ಧವಾಗಿರಲಿಲ್ಲ. ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 130ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೆ, ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 100ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಆದರೆ ಇಂದು ಭಾರತ್ ಬಂದ್ ಇದ್ದರೂ ಕೆಲವೇ ಕೆಲವು ಕಾರ್ಖಾನೆಗಳು ಬಂದ್ ಆಗಿವೆ. ಬಹುತೇಕ ಕಾರ್ಖಾನೆಗಳು ದಿನನಿತ್ಯದಂತೆ ಕಾರ್ಯನಿರ್ವಹಿಸುತಿತ್ತು. ಕಾರ್ಖಾನೆಗಳು ಬಂದ್ ಮಾಡದಿದ್ದರೂ ಸಹ ಕಾರ್ಮಿಕರು ಕೆಲಸಕ್ಕೆ ಗೈರಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

  • ಯಾವ ಕಾರಣಕ್ಕೂ ನಾನು ಡಿಸಿಎಂ ಆಗಲ್ಲ: ಸಚಿವ ಈಶ್ವರಪ್ಪ

    ಯಾವ ಕಾರಣಕ್ಕೂ ನಾನು ಡಿಸಿಎಂ ಆಗಲ್ಲ: ಸಚಿವ ಈಶ್ವರಪ್ಪ

    ಶಿವಮೊಗ್ಗ: ಸಂಕ್ರಾತಿ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿರುವ ಬೆನ್ನಲ್ಲೇ ನಾಯಕರು ಈ ಕುರಿತು ತಮ್ಮ ಅಭಿಪ್ರಾಯ, ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

    ಈ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಡಿಸಿಎಂ ಆಗುವುದಿಲ್ಲ. ಈಗಾಗಲೇ ಮೂವರು ಡಿಸಿಎಂ ಆಗಿದ್ದಾರೆ. ಡಿಸಿಎಂ ಆಗಬೇಕು ಎನ್ನುವ ಆಕಾಂಕ್ಷಿಗಳು ಇನ್ನೂ ಇದ್ದಾರೆ. ಹೀಗಿರುವಾಗ ಡಿಸಿಎಂ ಆಗಲು ಹೇಗೆ ಸಾಧ್ಯ, ಹೀಗಾಗಿ ನಾನು ಆಕಾಂಕ್ಷಿಯಲ್ಲ. ಈ ಬಗ್ಗೆ ಆಸೆ ಪಡುವುದೇ ತಪ್ಪು ಎಂದು ಸ್ಪಷ್ಟಪಡಿಸಿದರು.

    ಈಗಿರುವ ಡಿಸಿಎಂ ಹುದ್ದೆಯನ್ನು ತೆಗೆಯುತ್ತಾರೆ ಎಂಬ ಚರ್ಚೆ ಸಹ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

    ಭಾರತ್ ಬಂದ್ ರಾಜಕೀಯ ಕುತಂತ್ರ:
    ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿರುವ ಭಾರತ್ ಬಂದ್ ಸಂಪೂರ್ಣ ರಾಜಕೀಯ ಕುತಂತ್ರ. ಒಂದು ಕಡೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ. ಮತ್ತೊಂದೆಡೆ ಸಿಎಎ ಸೇರಿದಂತೆ ಕೇಂದ್ರ ಸರಕಾರದ ಇತರ ಮಸೂದೆ ಹಾಗೂ ಕಾಯ್ದೆಗಳಿಗೆ ವಿರೋಧ ಮಾಡುತ್ತಿದ್ದಾರೆ ಎಂದರು.

    ಈ ಬಂದ್ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕುತಂತ್ರವಾಗಿದೆ ಅಷ್ಟೇ. ದೇಶದ ಜನ ಕುತಂತ್ರವನ್ನು ಒಪ್ಪುವುದಿಲ್ಲ. ಹೀಗಾಗಿ ಇಂದಿನ ಭಾರತ್ ಬಂದ್ ಸಂಪೂರ್ಣ ವಿಫಲವಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

  • ಅಂಬುಲೆನ್ಸ್ ಓಡಾಟಕ್ಕೆ ಅಡಚಣೆ ಮಾಡಿದ ಪ್ರತಿಭಟನಕಾರರು ಖಾಕಿ ವಶಕ್ಕೆ

    ಅಂಬುಲೆನ್ಸ್ ಓಡಾಟಕ್ಕೆ ಅಡಚಣೆ ಮಾಡಿದ ಪ್ರತಿಭಟನಕಾರರು ಖಾಕಿ ವಶಕ್ಕೆ

    ಚಿಕ್ಕಬಳ್ಳಾಪುರ: ಭಾರತ್ ಬಂದ್ ಹಿನ್ನೆಲೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 50ಕ್ಕೂ ಹೆಚ್ಚು ಮಂದಿ ಪ್ರತಿಭಟನಕಾರರನ್ನ ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಭಾರತ್ ಬಂದ್ ಹಿನ್ನೆಲೆ ಸಿಪಿಐಎಂ ಮುಖಂಡರು ಹಾಗೂ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಶಿಡ್ಲಘಟ್ಟ ವೃತ್ತದ ರಸ್ತೆಯಲ್ಲಿ ಕುಳಿತು ಪ್ರತಿಭಟನಾ ಧರಣಿ ಮಾಡಿದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಕುಳಿತು ಪ್ರತಿಭಟನಾ ಧರಣಿ ನಡೆಸಿ ಅಲ್ಲೇ ತಿಂಡಿ ತಿನ್ನುವ ಮೂಲಕ ಹಸಿವು ನೀಗಿಸಿಕೊಂಡರು. ಆದರೆ ಪ್ರತಿಭಟನೆ ಹಿನ್ನಲೆ ಗೌರಿಬಿದನೂರು ಮಾರ್ಗದ ರಸ್ತೆ ಬಂದ್ ಆದ ಪರಿಣಾಮ ಜಿಲ್ಲಾಸ್ಪತ್ರೆಗೆ ಬಂದು ಹೋಗುವ ಅಂಬುಲೆನ್ಸ್ ಗಳ ಒಡಾಟಕ್ಕೆ ಅಡ್ಡಿಯಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‍ಪಿ ಅಭಿನವ್ ಖರೆ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡರು. ಈ ವೇಳೆ ಅಂಬುಲೆನ್ಸ್ ಸಹ ಅದೇ ರಸ್ತೆಯಲ್ಲಿ ಬಂದ ಪರಿಣಾಮ ಪ್ರತಿಭಟನಕಾರರನ್ನ ಚದುರಿಸಿದ ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಂಡರು.

    ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ವಾಹನಗಳ ಸಂಚಾರ ಎಂದಿನಂತೆ ಸಾಗಿದ್ದು, ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೊಂದೆಡೆ ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಇದೇ ವೇಳೆ ಮಾತನಾಡಿದ ಎಸ್‍ಪಿ ಅಭಿನವ್ ಖರೆ ಅವರು, ಜಿಲ್ಲೆಯ ಎಲ್ಲಾ ಕಡೆ ಶಾಂತಿಯುತ ಪ್ರತಿಭಟನೆಗಳು ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಗುಡಿಬಂಡೆಯಲ್ಲಿ ಬಲವಂತವಾಗಿ ಟೀ ಅಂಗಡಿ ಮುಚ್ಚಿಸಿದ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಆದರೆ ಈ ಸಂಬಂಧ ಅಂಗಡಿ ಮಾಲೀಕ ದೂರು ಕೊಟ್ಟಿಲ್ಲ ಎಂದು ಪ್ರತಿಕ್ರಿಯಿಸಿದರು.

  • ಸಾರ್ವಜನಿಕರ ಆಸ್ತಿ ನಷ್ಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ: ಪ್ರತಾಪ್ ಸಿಂಹ

    ಸಾರ್ವಜನಿಕರ ಆಸ್ತಿ ನಷ್ಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ: ಪ್ರತಾಪ್ ಸಿಂಹ

    ಮೈಸೂರು: ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ವೇಳೆ ರಾಜ್ಯದ ಕೆಲವೆಡೆ ಕಲ್ಲು ತೂರಾಟ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಲು ಯಾರಿಗೂ ಅಧಿಕಾರವಿಲ್ಲ. ಈ ವಿಚಾರದಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಕ್ರಮ ಕೈಗೊಂಡಿರುವ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಬೇಕು ಎಂದರು.

    ರಾಜ್ಯದಲ್ಲಿ ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡುವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ನಷ್ಟಕ್ಕೆ ಕಾರಣರಾಗುವವರಿಗೆ ನೋಟೀಸ್ ಕಳುಹಿಸುವ ಮೂಲಕ ಆಗಿರುವ ನಷ್ಟ ಭರಿಸಿಕೊಡಲು ಸಿಎಂ ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಪ್ರಧಾನಿ ಮೋದಿ ಸರ್ಕಾರ 303 ಸ್ಥಾನ ಪಡೆದು ಮರುಸ್ಥಾಪನೆಯಾದ ನಂತರ ಹಲವು ಮಹತ್ವದ ಕಾಯ್ದೆಗಳನ್ನು ಜಾರಿಗೊಳಿಸಿದೆ. ಇತ್ತೀಚೆಗೆ ಅನ್ಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾಗಿರುವವರಿಗೆ ನ್ಯಾಯ ದೊರಕಿಸಿಕೊಡಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದಾರೆ. ಆದರೆ ಪ್ರತಿಪಕ್ಷಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಅಮಾಯಕ ಮುಸ್ಲಿಮರನ್ನು ದೇಶದಿಂದ ಓಡಿಸಲಾಗುತ್ತದೆ ಎಂದು ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ. ಮೋದಿ ಸರ್ಕಾರದ ಜನಪ್ರಿಯತೆಯನ್ನು ಸಹಿಸದವರು ಕುತಂತ್ರ ನಡೆಸುತ್ತಿದ್ದಾರೆ ಎಂದರು.

    ಮೋದಿಯವರ ಒಳ್ಳೆಯ ಕೆಲಸಕ್ಕೆ ಜನರು ಶ್ರೀರಕ್ಷೆಯಾಗಿದ್ದಾರೆ. ಪ್ರತಿಪಕ್ಷದವರ ಒಡೆದು ಆಳುವ ನೀತಿ, ಜಾತಿ ರಾಜಕಾರಣಕ್ಕೆ ಜಾಗವಿಲ್ಲ ಎಂಬ ಕಾರಣದಿಂದ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ ಎಂದು ಹೇಳಿದರು.

  • ಅಖಿಲ ಭಾರತ ಮುಷ್ಕರಕ್ಕೆ ರಾಯಚೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

    ಅಖಿಲ ಭಾರತ ಮುಷ್ಕರಕ್ಕೆ ರಾಯಚೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

    ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶಾದ್ಯಂತ ಮುಷ್ಕರಕ್ಕೆ ರಾಯಚೂರಿನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯ ಸಿಂಧನೂರು, ದೇವದುರ್ಗದ ಜಾಲಹಳ್ಳಿಯಲ್ಲಿ ಅಂಗಡಿ ಬಂದ್ ಮಾಡಿ ಹೋರಾಟಕ್ಕೆ ಜನ ಬೆಂಬಲ ಸೂಚಿಸಿದ್ದಾರೆ.

    ರಾಯಚೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ನಗರದ ರೈಲ್ವೆ ನಿಲ್ದಾಣ ವೃತ್ತದಲ್ಲಿ ರಸ್ತಾ ರೋಕೋ ನಡೆಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿತು. ವಿವಿಧ ಬ್ಯಾಂಕ್ ಗಳ ಸಿಬ್ಬಂದಿ ಬ್ಯಾಂಕ್ ಗಳ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ಅಂಬೇಡ್ಕರ್ ವೃತ್ತದಲ್ಲಿ 10 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಸಮಾವೇಶ ನಡೆಸಿದವು.

    ಉಳಿದಂತೆ ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೇ ವ್ಯಕ್ತವಾಗಿದ್ದು ಜನಜೀವನ ಎಂದಿನಂತೆ ಸಾಗಿದೆ. ಬಸ್ ಸಂಚಾರ, ಶಾಲಾ ಕಾಲೇಜು, ವ್ಯಾಪಾರ ವಹಿವಾಟು, ಆಸ್ಪತ್ರೆ, ಪೆಟ್ರೋಲ್ ಬಂಕ್ ಸೇರಿದಂತೆ ಪ್ರತಿಯೊಂದು ಕೂಡ ಎಂದಿನಂತೆ ನಡೆಯುತ್ತಿವೆ.

    ಮುಷ್ಕರದ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ನೆರೆದಿರುವ ಕಾರ್ಮಿಕ ಸಂಘಟನೆಗಳ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ. ಮುಷ್ಕರ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.