Tag: ಭಾರತೀಯ ಸೈನಿಕರು

  • ನಮ್ಮನ್ನು ನಂಬಿ ದೇಶ ಭಯವಿಲ್ಲದೆ ಮಲಗುತ್ತೆ, ತಾಪಮಾನಕ್ಕೆಲ್ಲ ನಾವು ಹೆದರಲ್ಲ: ಬಿಎಸ್‍ಎಫ್ ಯೋಧ

    ನಮ್ಮನ್ನು ನಂಬಿ ದೇಶ ಭಯವಿಲ್ಲದೆ ಮಲಗುತ್ತೆ, ತಾಪಮಾನಕ್ಕೆಲ್ಲ ನಾವು ಹೆದರಲ್ಲ: ಬಿಎಸ್‍ಎಫ್ ಯೋಧ

    ನವದೆಹಲಿ: ಗಡಿಯಲ್ಲಿ ನಾವಿದ್ದೇವೆ ಎಂದು ಜನ ಆರಾಮಾಗಿ ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ. ದೇಶದ ಕಾಯುವ ಯೋಧರು ತಾಪಮಾನಕ್ಕೆ ಹೆದರಲ್ಲ ಎಂಬ ಭಾರತೀಯ ಸೈನಿಕರೊಬ್ಬರ ಹೇಳಿಕೆಗೆ ಇಡೀ ದೇಶವೇ ಸಲಾಂ ಎನ್ನುತ್ತಿದೆ.

    ಬೇಸಿಗೆ ಧಗೆಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ಬಿಸಿಲ ಝಳ ಹೆಚ್ಚಿದೆ. ಹೀಗಾಗಿ ಅಲ್ಲಿನ ಜನರಿಗೆ ಮಾತ್ರವಲ್ಲದೇ ಅಲ್ಲಿ ಗಡಿ ಕಾಯುವ ಸೈನಿಕರೂ ಕೂಡ ಬಿಸಿಲಿನ ಧಗೆಗೆ ಹೈರಾಣಾಗಿದ್ದಾರೆ. ಆದರೂ ಪಟ್ಟು ಬಿಡದೆ ದೇಶಕ್ಕಾಗಿ ವೀರಯೋಧರು ಗಡಿ ಕಾಯುತ್ತಿದ್ದು, ಬಿಸಿಲಿನಲ್ಲಿ ಕೆಲಸ ಮಾಡುವುದು ಕಷ್ಟವಾಗಲ್ಲವಾ? ಎಂದು ಕೇಳಿದರೆ, ನಾವು ಯೋಧರು ದೇಶವನ್ನು ಕಾಯುವವರು. ನಾವು ಈ ತಾಪಮಾನಕ್ಕೆಲ್ಲಾ ಹೆದರಲ್ಲ ಎಂದು ಹೇಳಿ ಎಲ್ಲರ ಮನ ಗೆದ್ದಿದ್ದಾರೆ.

    ನಾವು ಗಡಿಯಲ್ಲಿ ಕಾಯುತ್ತಿದ್ದೇವೆ ಎಂಬ ನಂಬಿಕೆಯಿಂದ ದೇಶದ ಪ್ರಜೆಗಳು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದಾರೆ. ಆದ್ದರಿಂದ ತಾಪಮಾನ ಹೇಗೆ ಇರಲಿ ನಾವು ಅದನ್ನು ಎದುರಿಸುತ್ತೇವೆ. ಸದಾ ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಸೈನಿಕರೊಬ್ಬರು ನೀಡಿರುವ ಹೇಳಿಕೆಗೆ ಎಲ್ಲರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.

    ರಾಜಸ್ಥಾನ ಹಾಗೂ ಗುಜರಾತ್‍ನಲ್ಲಿ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ರಣ ಬಿಸಿಲಿನಲ್ಲೂ ನಮ್ಮ ಭಾರತೀಯ ಯೋಧರು ಮಾತ್ರ ತಾಪಮಾನಕ್ಕೆ ಹೆದರದೆ, ಬಿಸಿಲನ್ನು ಎದುರಿಸಿಕೊಂಡು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಸದ್ಯ ರಾಜಸ್ಥಾನದಲ್ಲಿ 46 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಅದರಲ್ಲೂ ಇಲ್ಲಿನ ಚುರು ಪ್ರದೇಶದಲ್ಲಿ ಕೆಲವು ದಿನಗಳಿಂದ 50 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.