– ಅಭಿನಂದನ್ ತಂದೆಗೆ ಧೈರ್ಯ ತುಂಬಿದ್ದ ಮಾಜಿ ವಾಯು ಸೇನಾ ಮುಖ್ಯಸ್ಥ
– ನಮ್ಮ ಶಕ್ತಿಯ ಅರಿವು ಪಾಕಿಗೆ ತಿಳಿದಿತ್ತು
ನವದೆಹಲಿ: ಭಾರತೀಯ ವಾಯು ಸೇನೆಯ ಪೈಲಟ್ ಅಭಿನಂದನ್ ವಿಚಾರದಲ್ಲಿ ಪಾಕಿಸ್ತಾನಕ್ಕೆ ಢವ ಢವ ಶುರುವಾಗಿತ್ತು. ಸೇನಾ ಮುಖ್ಯಸ್ಥರ ಕೈ, ಕಾಲು ನಡುಗುತ್ತಿತ್ತು ಎಂಬ ವಿಚಾರವನ್ನು ಸ್ವತಃ ಪಾಕ್ ಸಂಸದ ಸಂಸತ್‍ನಲ್ಲಿ ಬಿಚ್ಚಿಟಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ವಾಯು ಸೇನೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ ಈ ಕುರಿತು ಮಾತನಾಡಿದ್ದು, ಒಂದು ವೇಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದಲ್ಲಿ ಪಾಕಿಸ್ತಾನದ ಬ್ರಿಗೇಡ್‍ಗಳನ್ನೇ ಧ್ವಂಸ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ.

ಪಾಕಿಸ್ತಾನ ಸಂಸದರ ಹೇಳಿಕೆ ಬೆನ್ನಲ್ಲೇ ಮಾತನಾಡಿರುವ ಧನೋವಾ, ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆಯಾದಾಗ ನಾನು ಅವರ ತಂದೆಗೆ ಧೈರ್ಯ ತುಂಬಿದ್ದೆ. ಖಂಡಿತವಾಗಿಯೂ ನಾವು ಅಭಿನಂದನ್ ಅವರನ್ನು ಮರಳಿ ಕರೆ ತರುತ್ತೇವೆ ಎಂದು ಹೇಳಿದ್ದೆ ಎಂದು ಅವರು ತಿಳಿಸಿದ್ದಾರೆ.
ಇದೀಗ ಪಾಕಿಸ್ತಾನ ಸಂಸದರ ಹೇಳಿಕೆಯನ್ನು ಗಮನಿಸಿದರೆ ನಮ್ಮ ಸೇನೆ ಎಷ್ಟು ಆಕ್ರಮಣಕಾರಿಯಾಗಿದೆ ಎಂಬುದನ್ನು ತಿಳಿಯಬಹುದು. ಪಾಕಿಸ್ತಾನದ ಫಾರ್ವರ್ಡ್ ಬ್ರಿಗೇಡ್‍ಗಳನ್ನು ಧ್ವಂಸ ಮಾಡಲು ನಾವು ಆಗಲೇ ಸಿದ್ಧತೆ ನಡೆಸಿದ್ದೆವು. ನಮ್ಮ ಸಾಮರ್ಥ್ಯ ಏನೆಂದು ಅವರಿಗೆ ತಿಳಿದಿದೆ ಎಂದು ಧನೋವಾ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಹ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ. ನಮ್ಮ ಭಾರತೀಯ ಸೇನೆ ಶಕ್ತಿ ಕುರಿತು ವಿರೋಧ ಪಕ್ಷಗಳಿಗೆ ಅರಿವಿಲ್ಲ. ಕಾಂಗ್ರೆಸ್ ಪಕ್ಷ ನಮ್ಮ ಸಶಸ್ತ್ರ ಪಡೆಗಳನ್ನು ದುರ್ಬಲವಾಗಿಸುವ ಅಭಿಯಾನ ನಡೆಸಿದೆ. ನಮ್ಮ ಸಶಸ್ತ್ರ ಪಡೆಗಳ ಕುರಿತು ಅಪಹಾಸ್ಯ ಮಾಡಿದ್ದಾರೆ. ಅವರ ಶೌರ್ಯವನ್ನು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ರಫೇಲ್ ಯುದ್ಧ ವಿಮಾನ ಖರೀದಿಯನ್ನು ತಡೆಯಲು ಸಹ ಪ್ರತಿಯೊಂದು ತಂತ್ರವನ್ನು ಮಾಡಿದರು. ಆದರೆ ಜನ ಅಂತಹ ರಾಜಕೀಯವನ್ನು ತಿರಸ್ಕರಿಸಿ ಕಾಂಗ್ರೆಸ್‍ನ್ನು ಶಿಕ್ಷಿಸಿದರು ಎಂದು ಹರಿಹಯ್ದಿದ್ದಾರೆ.
ಕಾಂಗ್ರೆಸ್ ಭಾರತದ ರಾಜತಾಂತ್ರಿಕತೆಯನ್ನು ನಂಬುವುದಿಲ್ಲ. ಅದು ಸೈನ್ಯವಾಗಲಿ, ನಮ್ಮ ಸರ್ಕಾರವನ್ನಾಗಲೀ, ನಮ್ಮ ಜನರನ್ನೇ ಆಗಲಿ ಯಾವುದನ್ನೂ ನಂಬುವುದಿಲ್ಲ. ಪಾಕಿಸ್ತಾನ ಅವರ ‘ಅತ್ಯಂತ ವಿಶ್ವಾಸಾರ್ಹ ರಾಷ್ಟ್ರವಾಗಿದೆ’. ಆಶಾದಾಯಕ ಬೆಳವಣಿಗೆ ಎಂಬಂತೆ ಅವರು ಈಗ ಬೆಳಕು ನೋಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಅಭಿನಂದನ್‍ಗೆ ಮಾರ್ಗದರ್ಶನ ನೀಡಿದ್ದ ಐಎಎಫ್ ಮಹಿಳಾ ನಿಯಂತ್ರಕಿಗೆ ಯುಧ್ ಸೇವಾ ಪದಕ
ಪಾಕ್ ಸಂಸದ ಹೇಳಿದ್ದೇನು?
ಬುಧವಾರ ಸಂಸತ್ತಿನಲ್ಲಿ ಮಾತನಾಡಿರುವ ಪಾಕಿಸ್ತಾನ ಮುಸ್ಲಿಂ ಲೀಗ್ ಎನ್ ಪಕ್ಷದ ಮುಖ್ಯಸ್ಥ, ಸಂಸದ ಅಯಾಜ್ ಸಾದಿಕ್, ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಆ ರಾತ್ರಿ 9 ಗಂಟೆ ವೇಳೆಗೆ ಭಾರತ ಪಾಕಿಸ್ತಾನ ಮೇಲೆ ದಾಳಿ ಮಾಡುತ್ತದೆ ಎಂದು ವಿದೇಶಾಂಗ ಸಚಿವ ಖುರೇಷಿ ಬಂದು ಬೇಡಿಕೊಂಡಿದ್ದರು ಎಂದು ಮಾತನಾಡಿರುವ ಬಗ್ಗೆ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಪ್ರಮುಖ ಸಭೆಯಲ್ಲಿದ್ದ ಸೇನಾ ಮುಖ್ಯಸ್ಥ ಜನಲರ್ ಬಾಜ್ವಾ, ವಿರೋಧ ಪಕ್ಷ ನಾಯಕರು, ಸಂಸತ್ ಸದಸ್ಯರು ಸೇರಿದಂತೆ ಎಲ್ಲರೂ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಹೇಳಿದ್ದರು. ಸಭೆಯಲ್ಲಿ ಭಾಗಿಯಾಗಲು ಇಮ್ರಾನ್ ಖಾನ್ ನಿರಾಕರಿಸಿದ್ದರು. ಈ ವೇಳೆ ಸೇನಾ ಮುಖ್ಯಸ್ಥ ಜನಲರ್ ಬಾಜ್ವಾ ಕೋಣೆಗೆ ಬಂದರು. ಅವರ ಕಾಲುಗಳು ನಡುಗುತ್ತಿದ್ದವು, ಅವರು ಬೆವರುತ್ತಿದ್ದರು. ವಿದೇಶಾಂಗ ಸಚಿವರು ದೇವರ ಸಲುವಾಗಿ ಅವರನ್ನು ಬಿಡಲಿ, ಭಾರತ ರಾತ್ರಿ 9 ಗಂಟೆಗೆ ದಾಳಿ ಮಾಡಲಿದೆ ಎಂದಿದ್ದರು ಎಂದು ಸಾದಿಕ್ ಅಂದಿನ ಘಟನೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಮೊದಲು ಅಭಿನಂದನ್ ಸೇರಿದಂತೆ ಎಲ್ಲ ವಿಷಯಗಳಲ್ಲಿ ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದಿದ್ದ ಪ್ರತಿಪಕ್ಷಗಳು ಮತ್ತೆ ಬೆಂಬಲಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಅಭಿನಂದನ್ ಸೆರೆಯಾಗಿದ್ದು ಹೇಗೆ?
2019ರ ಫೆ. 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರಿದ್ದ ಬಸ್ಸಿನ ಮೇಲೆ ಜೈಷ್ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದ. ಈ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಜೈಷ್ ಉಗ್ರರ ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆಸಿ ಉಗ್ರರನ್ನು ಸದೆಬಡೆದಿತ್ತು.

ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಫೆ.27 ರಂದು ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು. ಆಗ ಸುಮಾರು 58 ಗಂಟೆಗಳ ಕಾಲ ಅಭಿನಂದನ್ ಪಾಕಿಸ್ತಾನದ ಕಸ್ಟಡಿಯಲ್ಲೇ ಇದ್ದರು. ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.