Tag: ಭಾರತೀಯ ವಾಯುಸೇನೆ

  • Kolara | ತಾಂತ್ರಿಕ ದೋಷ – ಸೇನಾ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ತಪ್ಪಿದ ದುರಂತ

    Kolara | ತಾಂತ್ರಿಕ ದೋಷ – ಸೇನಾ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ತಪ್ಪಿದ ದುರಂತ

    ಕೋಲಾರ: ಭಾರತೀಯ ವಾಯಸೇನೆಗೆ (Indian Air Force) ಸೇರಿದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ (Technical Fault) ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊಲಾರದಲ್ಲಿ ತುರ್ತು ಭೂಸ್ಪರ್ಶವಾಗಿದೆ.

    ಕೋಲಾರ (Kolara) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿಯ ಕೆರೆಯಲ್ಲಿ ತುರ್ತು ಭೂಸ್ಪರ್ಶವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂವರು ವಾಯುಸೇನೆಯ ಪೈಲಟ್‌ಗಳು ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಒರ್ವ ಮಹಿಳಾ ಪೈಲಟ್ ಸೇರಿದಂತೆ ಮೂವರು ಸೇಫ್‌ ಆಗಿದ್ದಾರೆ. ಇದನ್ನೂ ಓದಿ: ತೆಲಂಗಾಣ| 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಸಂತ್ರಸ್ತೆ ಕುಟುಂಬಸ್ಥರಿಂದ ಆರೋಪಿ ಮನೆ, ಕಾರಿಗೆ ಬೆಂಕಿ

    ಕರಪನಹಳ್ಳಿ ಗ್ರಾಮದ ಬಳಿ ಇರುವ ಕೆರೆ ಅಂಗಳದಲ್ಲಿ ಸುರಕ್ಷಿತವಾಗಿ ಇಳಿದ ಹೆಲಿಕಾಪ್ಟರ್ ನೋಡಲು ಜನರು ನಾ ಮುಂದು ತಾ ಮುಂದು ಎಂದು ಮುಂದಾಗಿದ್ದು, ಸ್ಥಳದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಂಗಾರಪೇಟೆ ಪೊಲೀಸರ ಜಮಾವಣೆಯಾಗಿದ್ದಾರೆ. ಸದ್ಯ ವಾಯು ಪಡೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಸಂಪುಟ ಪುನರ್‌ರಚನೆ – ಮತ್ತೆ ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಪ್ರಮಾಣವಚನ ಸ್ವೀಕಾರ

    ಬೆಂಗಳೂರಿನ ಯಲಹಂಕ ಏರ್‌ ಇಂಡಿಯಾಗೆ ಸೇರಿದ ಈ ಹೆಲಿಕಾಪ್ಟರ್‌ ತರಬೇತಿ ನಿಮಿತ್ತ ಕೋಲಾರದ ಕೆಜಿಎಫ್ ಹಾಗೂ ಬಂಗಾರಪೇಟೆ ಸುತ್ತಮುತ್ತ ಹಾರಾಟ ನಡೆಸುತಿತ್ತು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ತಂತ್ರಜ್ಞರ ತಂಡ ಬಂದ ಬಳಿಕ ತಾಂತ್ರಿಕ ದೋಷ ಸರಿಪಡಿಸಲಿದ್ದಾರೆ. ಬಳಿಕ ಇಲ್ಲಿಂದ ಹೆಲಿಕಾಪ್ಟರ್ ವಾಪಸ್ ಆಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್‌

    ಇನ್ನೂ ಸ್ಥಳದಲ್ಲಿ ಹೆಲಿಕಾಪ್ಟರ್ ನೋಡಲು ನೂರಾರು ಸಂಖ್ಯೆಯ ಜನರು ಜಮಾಯಿಸಿದ್ದು, ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸೇನಾ ಹೆಲಿಕಾಪ್ಟರ್ ಆಗಿರುವುದರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

  • MIG-21 ಫೈಟರ್‌ ಜೆಟ್‌ ಹಾರಾಟ ಬಂದ್ – IAF ಮಹತ್ವದ ನಿರ್ಧಾರ

    MIG-21 ಫೈಟರ್‌ ಜೆಟ್‌ ಹಾರಾಟ ಬಂದ್ – IAF ಮಹತ್ವದ ನಿರ್ಧಾರ

    ನವದೆಹಲಿ: ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿರುವ ಮಿಗ್ ವಿಮಾನಗಳನ್ನು ಬಳಸದೇ ಇರಲು ವಾಯುಸೇನೆ (IAF) ನಿರ್ಧರಿಸಿದೆ.

    ರಾಜಸ್ಥಾನದಲ್ಲಿ ನಡೆದ ಯುದ್ಧವಿಮಾನಗಳ ಪತನದ ಬಳಿಕ ಎಚ್ಚೆತ್ತ ಭಾರತೀಯ ವಾಯುಪಡೆ ಎಲ್ಲಾ ಮಿಗ್‌-21 ಯುದ್ಧ ವಿಮಾನಗಳನ್ನು (MiG-21Bison Aircraft) ತಪಾಸಣೆ ನಡೆಸುವವರೆಗೆ ಹಾರಾಟ ನಡೆಸದಿರಲು ತೀರ್ಮಾನಿಸಿದೆ. ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

    ಇದೇ ತಿಂಗಳ ಮೇ 8ರಂದು ರಾಜಸ್ಥಾನದ ಸೂರತ್‌ಗಢದ ವಾಯುನೆಲೆಯ ಮಿಗ್‌-21 ಬೈಸನ್‌ ಯುದ್ಧವಿಮಾನವು ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಈ ಸಂಬಂಧ ತನಿಖೆ ನಡೆಸುತ್ತಿದ್ದು ಅಪಘಾತಕ್ಕೆ ನಿಖರ ಕಾರಣ ತಿಳಿಯುವವರೆಗೆ MiG-21 ಬೈಸನ್‌ ಎಲ್ಲಾ ಯುದ್ಧ ವಿಮಾನಗಳನ್ನು ಹಾರಾಟ ನಡೆಸದಂತೆ ಹಿರಿಯ ರಕ್ಷಣಾಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಮಿಗ್‌-21 ಬೈಸನ್‌ ರೂಪಾಂತರವನ್ನು ಒಳಗೊಂಡಂತೆ 31 ಯುದ್ಧ ವಿಮಾನ ಸ್ಕ್ವಾಡ್ರನ್‌ಗಳನ್ನು ಒಳಗೊಂಡಿದೆ. 1960ರಲ್ಲಿ ಮಿಗ್‌-21 ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾದವು. ಇವುಗಳ ಕಾರ್ಯಕ್ಷಮತೆ ಕಡಿಮೆ ಆಗುತ್ತಿದ್ದು 2025ರ ವೇಳೆಗೆ ಎಲ್ಲಾ ಮಿಗ್‌-21 ವಿಮಾನಗಳನ್ನ ಸೇನೆಯಿಂದ ಹಂತ-ಹಂತವಾಗಿ ತೆಗೆದುಹಾಕಲು ಯೋಜಿಸಿದೆ. ಅಂತಿಮವಾಗಿ 2025ರ ವೇಳೆ ಎಲ್ಲಾ ಮಿಗ್‌-21 ವಿಮಾನಗಳನ್ನು ಸೇನೆಯಿಂದ ಕೈಬಿಡಲು ನಿರ್ಧಾರ ಮಾಡಲಾಗಿದೆ‌.

    ಹಾರುವ ಶವಪೆಟ್ಟಿಗೆ ಅನ್ನೋದೇಕೆ?
    ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿಯ ಒಟ್ಟು 874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಸದ್ಯ ಭಾರತದಲ್ಲಿ 100ಕ್ಕೂ ಅಧಿಕ ಮಿಗ್ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ.

    2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು. ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ, F16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನದಿಂದಲೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನೂ ಉರುಳಿಸುವ ಮೂಲಕ ಸಾಧನೆ ಮಾಡಿದ್ದರು.

  • ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್

    ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್

    ನವದೆಹಲಿ: ಚೀಫ್ ಆಫ್ ಡಿಫೆನ್ಸ್ ಸ್ಟಾಫ್ಸ್ (ಸಿಡಿಎಸ್) ಬಿಪಿನ್ ರಾವತ್ ಅವರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಊಹಾಪೋಹಗಳನ್ನು ನಿಲ್ಲಿಸಿ. ಮೃತರ ಘನತೆಯನ್ನು ಕಾಪಾಡುವಂತೆ ಭಾರತೀಯ ವಾಯುಸೇನೆ ಮನವಿ ಮಾಡಿದೆ.

    ಟ್ವೀಟ್‍ನಲ್ಲಿ ಏನಿದೆ?: ಡಿಸೆಂಬರ್ 8ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದ ಕಾರಣದ ತನಿಖೆಗಾಗಿ ಭಾರತೀಯ ವಾಯುಪಡೆಯು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ರಚಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ದುರಂತಕ್ಕೆ ಕಾರಣವಾದ ಸತ್ಯವನ್ನೂ ಹೊರತರಲಾಗುತ್ತದೆ. ಮಡಿದವರ ಘನತೆಯನ್ನು ಕಾಪಾಡಲು, ಮಾಹಿತಿ ಇಲ್ಲದ ಊಹಾಪೋಹಗಳನ್ನು ತಡೆಯಬೇಕು ಎಂದು ವಾಯುಪಡೆಯ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿದೆ. ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ

    ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್ ಪತನಗೊಂಡ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸಲಿದೆ. ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ ವೀಡಿಯೋ ಅಸಲಿಯತ್ತಿನ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

  • ಭಾರತೀಯ ವಾಯುಸೇನೆಯ ಮಿಗ್-21 ಪತನ – ಪೈಲಟ್ ದುರ್ಮರಣ

    ಭಾರತೀಯ ವಾಯುಸೇನೆಯ ಮಿಗ್-21 ಪತನ – ಪೈಲಟ್ ದುರ್ಮರಣ

    ನವದೆಹಲಿ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನವು ಪಂಜಾಬ್ ಮೊಗಾ ಬಳಿ ಪತನಗೊಂಡಿದ್ದು, ಪೈಲಟ್ ದುರ್ಮರಣಕ್ಕೀಡಾಗಿದ್ದಾರೆ ಎಂದು ವಾಯುಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಅವಘಡ ಮೊಗಾದ ಬಘುಪುರಾನಾ ವ್ಯಾಪ್ತಿಯಲ್ಲಿ ಬರು ಲ್ಯಾಂಗಿಯಾನಾ ಖುರ್ದ್ ಗ್ರಾಮದಲ್ಲಿ ನಸುಕಿನ ಜಾವ 1 ಗಂಟೆಯ ಸುಮಾರಿಗೆ ಜರುಗಿದೆ. ಎಂದಿನಂತೆ ತರಬೇತಿಯಲ್ಲಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಾಶ್ಚಿಮಾತ್ಯ ವಲಯದಲ್ಲಿ ಐಎಎಫ್ ವಿಮಾನ ಪತನಗೊಂಡಿದೆ. ಪೈಲಟ್ ಅಭಿನವ್ ಚೌಧರಿ ಅವರಿಗೆ ಮಾರಣಾಂತಿಕ ಗಾಯಗಳಾಗಿದ್ದು, ಮೃತಪಟ್ಟಿದ್ದಾರೆ. ಅಭಿನವ್ ದುರಂತ ಸಾವಿನಿಂದ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಇಂಡಿಯನ್ ಏರ್ ಫೋರ್ಸ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದೆ.

    ಈ ವರ್ಷದಲ್ಲಿ ಇದು ಮೂರನೇಯ ಘಟನೆಯಾಗಿದ್ದು, ಈ ಅವಘಡಕ್ಕೆ ನಿಖರ ಕಾರಣ ಏನು ಎಂಬುದು ತನಿಖೆಯ ಬಳಿಕಷ್ಟೇ ತಿಳಿದುಬರಬೇಕಿದೆ.

  • ಬೋಯಿಂಗ್ ನಿರ್ಮಿತ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳು ವಾಯುಸೇನೆಗೆ ಸೇರ್ಪಡೆ – ವಿಶೇಷತೆ ಏನು?

    ಬೋಯಿಂಗ್ ನಿರ್ಮಿತ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳು ವಾಯುಸೇನೆಗೆ ಸೇರ್ಪಡೆ – ವಿಶೇಷತೆ ಏನು?

    ಪಠಾಣ್‍ಕೋಟ್: ಅಮೆರಿಕದ ಬೋಯಿಂಗ್ ಕಂಪನಿ ನಿರ್ಮಿಸಿದ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿವೆ.

    ಪಂಜಾಬಿನ ಪಠಾಣ್‍ಕೋಟ್ ವಾಯುನೆಲೆಯಲ್ಲಿ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಉಪಸ್ಥಿತಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ 8 ಅಪಾಚೆ ಎಚ್-64ಇ ಹೆಲಿಕಾಪ್ಟರ್‌ಗಳು ವಾಯುಸೇನೆಗೆ ಸೇರ್ಪಡೆಗೊಂಡಿತು.

    ವಾಯು ಸೇನೆ ಮುಖ್ಯಸ್ಥ ಧನೋವಾ ಮಾತನಾಡಿ, ಭಾರತದ ಬೇಡಿಕೆಗೆ ಅನುಗುಣವಾಗಿ ಅಪಾಚೆ ಹೆಲಿಕಾಪ್ಟರ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನಿಗದಿತ ಸಮಯದ ಒಳಗಡೆಯೇ ಅಪಾಚೆ ಹೆಲಿಕಾಪ್ಟರ್‌ಗಳು ಸೇರ್ಪಡೆಯಾಗಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದರು.

    2015ರಲ್ಲಿ ಭಾರತ ಸರ್ಕಾರ 13,952 ಕೋಟಿ ರೂ. ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್‌ಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2017ರಲ್ಲಿ ರಕ್ಷಣಾ ಇಲಾಖೆ 6 ಅಪಾಚೆ ಹೆಲಿಕಾಪ್ಟರ್‌ಗಳನ್ನು ಶಸ್ತ್ರಾಸ್ತ್ರ ಸಮೇತ ಖರೀದಿ ಮಾಡಲು 4,168 ಕೋಟಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. 2020ರ ಮಾರ್ಚ್ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್‌ಗಳು  ಸೇರ್ಪಡೆ ಆಗಲಿದೆ.

    22ರ ಪೈಕಿ ಮೊದಲ 4 ಹೆಲಿಕಾಪ್ಟರ್‌ಗಳು ಜುಲೈನಲ್ಲಿ ಉತ್ತರ ಪ್ರದೇಶದಲ್ಲಿರುವ ಹಿಂಡನ್ ವಾಯುನೆಲೆಗೆ ಸೇರ್ಪಡೆಯಾಗಿತ್ತು. ಈ ಮೂಲಕ ಅಪಾಚೆ ಹೆಲಿಕಾಪ್ಟರ್  ಖರೀದಿಸಿದ 14ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

    ಭಾರತದ ವಾಯುಸೇನೆಯಲ್ಲಿ ದಾಳಿ ನಡೆಸಬಲ್ಲ ಹೆಲಿಕಾಪ್ಟರ್‌ಗಳಿವೆ. ಆದರೆ ಅವುಗಳು ಯಾವುದು ಎಚ್- 64ರಷ್ಟು ಬಲಶಾಲಿಯಾಗಿಲ್ಲ. ರಾತ್ರಿ ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ಕೂಡ ಅಪಾಚೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೆಲಿಕಾಪ್ಟರ್‌ಗಳು ಸೇನೆಯಲ್ಲಿ ಭೂ ದಾಳಿಗಳನ್ನು ಎದುರಿಸುವ, ಭೂ ಸೇನೆಯ ಜೊತೆ ಹೊಂದಿಕೊಂಡು ಕೆಲಸ ಮಾಡಲು ಸಮರ್ಥವಾಗಿದೆ.

    ಆಧುನಿಕ ಕ್ಯಾಮೆರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರಗಳ ಗುರುತು ಪತ್ತೆ, ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚೆ ಶೀಘ್ರವಾಗಿ ರವಾನಿಸುತ್ತವೆ. ಅಲ್ಲದೇ ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ತಾಂತ್ರಿಕತೆ ಹೊಂದಿವೆ. ಅಲ್ಲದೇ ಸ್ಟಿಂಗರ್ ಏರ್ ಟು ಏರ್ ಕ್ಷಿಪಣಿಗಳು, ಗನ್‍ಗಳು ಮತ್ತು ರಾಕೆಟ್‍ಗಳನ್ನು ಹೊಂದಿವೆ. ವಿಶೇಷವಾಗಿ ಪರ್ವತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿವೆ.

    ಅಮೆರಿಕ ಈಗಾಗಲೇ ಈ ಹೆಲಿಕಾಪ್ಟರ್‌ಗಳನ್ನು ತನ್ನ ಸೇನೆಗೆ ಸೇರ್ಪಡೆ ಮಾಡಿಕೊಂಡಿದ್ದು, ಭಾರತ ಪೈಲಟ್‍ಗಳಿಗೂ ಅಮೆರಿಕದ ಸೇನಾ ನೆಲೆಯಲ್ಲಿ ತರಬೇತಿ ಸಿಕ್ಕಿದೆ. ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯದ ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಯನ್ನ ಇದು ಪಡೆದಿರುವುದು ವಿಶೇಷ.

    ಎಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳು ವಿಶ್ವದ ಅತ್ಯಾಧುನಿಕ ಬಹು ಪಾತ್ರದಲ್ಲಿ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿದ್ದು, ಭಾರತೀಯ ವಾಯು ಸೇನೆ ಈ ಬಹು ಶತಕೋಟಿ ಡಾಲರ್ ಗುತ್ತಿಗೆಗೆ ಅಮೆರಿಕ ಸರ್ಕಾರ ಹಾಗೂ ಬೋಯಿಂಗ್ ಲಿ. ಜೊತೆಗೆ ಸೆಪ್ಟೆಂಬರ್ 2015ರಲ್ಲಿ 22 ಹೆಲಿಕಾಪ್ಟರ್ ಗಳಿಗೆ ಸಹಿ ಹಾಕಲಾಗಿತ್ತು.

    ಬೋಯಿಂಗ್ ಸಂಸ್ಥೆಯು ಈವರೆಗೆ 2,200 ಅಪಾಚೆ ಹೆಲಿಕಾಪ್ಟರ್ ಗಳನ್ನು ವಿವಿಧ ದೇಶಗಳಿಗೆ ಹಸ್ತಾಂತರಿಸಿದೆ. ಜುಲೈ 2018ರಂದು ಭಾರತೀಯ ವಾಯು ಸೇನೆಗಾಗಿ ಮೊದಲ ಅಪಾಚೆ ಹೆಲಿಕಾಪ್ಟರ್ ನ್ನು ಪೂರ್ಣಗೊಳಿಸಿತ್ತು. 2018ರಲ್ಲಿ ಅಮೆರಿಕದಲ್ಲಿ ಅಪಾಚೆ ಹಾರಾಟ ಸಂಬಂಧ ಭಾರತೀಯ ವಾಯುಪಡೆಯ ಮೊದಲ ಬ್ಯಾಚಿನ ತರಬೇತಿ ಆರಂಭಗೊಂಡಿತ್ತು.

  • ಎಎನ್-32 ವಿಮಾನ ದುರಂತ – ಸಿಬ್ಬಂದಿ ಸಾವಿನ ಕುರಿತು ವಾಯುಸೇನೆ ಸ್ಪಷ್ಟನೆ

    ಎಎನ್-32 ವಿಮಾನ ದುರಂತ – ಸಿಬ್ಬಂದಿ ಸಾವಿನ ಕುರಿತು ವಾಯುಸೇನೆ ಸ್ಪಷ್ಟನೆ

    ನವದೆಹಲಿ: ಜೂ. 11 ರಂದು ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿದ್ದ ಸ್ಥಳಕ್ಕೆ ಭಾರತೀಯ ವಾಯುಸೇನೆಯ ಸಿಬ್ಬಂದಿ ತೆರಳಿದ್ದು, ವಿಮಾನಲ್ಲಿದ್ದವರು ಯಾರು ಬದುಕುಳಿದಿಲ್ಲ ಎಂದು ಸ್ಪಷ್ಟನೆ ನೀಡಿದೆ.

    ಅರುಣಾಚಲ ಪ್ರದೇಶದ ಉತ್ತರ ಲಿಪೋ ಪ್ರದೇಶದಲ್ಲಿ ದಟ್ಟ ಅರಣ್ಯದ ನಡುವೆ ವಿಮಾನ ಪತನವಾಗಿತ್ತು. ಒಂದು ವಾರಗಳ ಕಾಲ ವಿಮಾನವನ್ನು ಹುಡುಕಾಟ ನಡೆಸಿದ ವಾಯುಸೇನೆ ಸಿಬ್ಬಂದಿ ಜೂ.11 ರಂದು ದುರಂತ ನಡೆದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಆದರೆ ಈ ವೇಳೆ ಸ್ಥಳಕ್ಕೆ ತೆರಳಲು ಹವಾಮಾನ ವೈಪರಿತ್ಯ ಹಾಗೂ ದಟ್ಟ ಅರಣ್ಯ ನಡುವೆ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದು ಕಷ್ಟ ಸಾಧ್ಯವಾದ್ದರಿಂದ ಭೂಮಾರ್ಗದ ಮೂಲಕವೇ ಸ್ಥಳವನ್ನು ತಲುಪುವ ಕಾರ್ಯ ಮಾಡಲಾಗಿತ್ತು. ಆ ಬಳಿಕ ಘಟನಾ ಸ್ಥಳಕ್ಕೆ ಹತ್ತಿರ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ಅಲ್ಲಿಂದ ಸ್ಥಳಕ್ಕೆ ತೆರಳಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ವಾಯಸೇನೆ, ಘಟನೆಯಲ್ಲಿ ಯಾರು ಬದುಕುಳಿದಿಲ್ಲ. ದುರಂತದಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಕುಟುಂಬದೊಂದಿಗೆ ವಾಯಸೇನೆ ಇರಲಿದೆ ಎಂದು ತಿಳಿಸಿ ಶ್ರದ್ಧಾಂಜಲಿ ಸಲ್ಲಿಸಿದೆ.

    ಇಂದು ಬೆಳಗ್ಗೆ 8 ಸದಸ್ಯರ ವಾಯುಸೇನೆಯ ತಂಡ ಸ್ಥಳವನ್ನು ತಲುಪಿ ಪರಿಶೀಲನೆ ನಡೆಸಿತ್ತು. ಜೂನ್ 3 ರಂದು ಎಎನ್ -32 ವಿಮಾನ ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿ ಅರುಣಾಚಲ ಪ್ರದೇಶದ ಮೆನಸುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದಂತೆ ಸಂಪರ್ಕ ಕಳೆದುಕೊಂಡಿತ್ತು. ಈ ವೇಳೆ ಎಂಟು ಸಿಬ್ಬಂದಿ, ಐವರು ಪ್ರಯಾಣಿಕರು ವಿಮಾನದಲ್ಲಿದ್ದರು.

    ಮೃತರನ್ನ ವಿಂಗ್ ಕಮಾಂಡ್ ಜಿಎಂ ಚಾಲ್ರ್ಸ್, ಸ್ಕ್ವಾಡ್ರನ್ ಲೀಡರ್ ಎಚ್ ವಿನೋದ್, ಫ್ಲೇಟ್ ಲೆಫ್ಟನೆಂಟ್ ಗಳಾಗಿದ್ದ ಆರ್ ಥಾಪಾ ಹಾಗೂ ಎ ತನ್ವರ್, ಎಸ್ ಮೊಹಾಂತಿ, ಎಂಕೆ ಗರ್ಗ್, ವಾರಂಟ್ ಆಫೀಸರ್ ಕೆಕೆ ಮಿಶ್ರಾ, ಸರ್ಗೆಂಟ್ ಅನೂಪ್ ಕುಮಾರ್, ಕಾರ್ಪೋರಲ್ ಶೆರಿನ್, ಲೀಡ್ ಏರ್ ಕ್ರಾಫ್ಟ್ ಮನ್ ಎಸ್ ಕೆ ಸಿಂಗ್ ಹಾಗೂ ಮನ್ ಪಂಕಜ್, ಪುತಲಿ, ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ.

    ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. 2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಷಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

  • ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ 170 ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

    ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ 170 ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

    ನವದೆಹಲಿ: ಬಾಲಾಕೋಟ್ ಜೈಶ್ ಉಗ್ರರ ಕ್ಯಾಂಪ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ಸತ್ಯ, ಈ ದಾಳಿಯಲ್ಲಿ 135-170 ಉಗ್ರರು ಬಲಿಯಾಗಿದ್ದಾರೆ. ಜೊತೆಗೆ 11 ಮಂದಿ ಬಾಂಬ್ ನಿಪುಣರು ಸಾವನ್ನಪ್ಪಿದ್ದಾರೆ ಎಂದು ಇಟಲಿಯ ಪತ್ರಕರ್ತೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಕ್ಕೆ ಸಂದರ್ಶನ ನೀಡಿದ ವರದಿಗಾರ್ತಿ ಫ್ರಾನ್ಸೆಸ್ಕಾ ಮರೀನೊ ಅಂದು ಅಲ್ಲಿ ಏನಾಯ್ತು? ಬಳಿಕ ಪಾಕಿಸ್ತಾನ ಸೇನೆ ಏನು ಮಾಡಿತ್ತು ಎನ್ನುವುದನ್ನು ತಿಳಿಸಿದ್ದಾರೆ. ಈ ಮೂಲಕ ಭಾರತ ನಡೆಸಿದ್ದ ಏರ್ ಸ್ಟ್ರೈಕ್‍ನಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ನಷ್ಟವಾಗಿಲ್ಲ ಎಂದು ಸಾರಿದ್ದ ಪಾಕ್ ಮುಖವಾಡ ಈಗ ಮತ್ತೊಮ್ಮೆ ಕಳಚಿದೆ.

    ಭಾರತ ದಾಳಿ ನಡೆಸಿದ 2 ತಾಸು ಬಳಿಕ ಪಾಕ್ ಸೇನೆ ಆಗಮಿಸಿತ್ತು. ಈ ಘಟನೆಯನ್ನು ಮರೆಮಾಚಲು ಕುನ್ಹಾರ್ ನದಿಗೆ ಉಗ್ರರ ಮೃತದೇಹಗಳನ್ನು ಎಸೆಯಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅವರು ತಿಳಿಸಿದ್ದಾರೆ.

    ಫೆಬ್ರವರಿ 26ರ ಮುಂಜಾನೆ 3:30ಕ್ಕೆ ಭಾರತೀಯ ವಾಯುಸೇನೆ ಬಾಲಕೋಟ್‍ನ ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಬೆಳಗ್ಗೆ 6 ಗಂಟೆ ಹೊತ್ತಿಗೆ ಘಟನಾ ಸ್ಥಳಕ್ಕೆ ಪಾಕ್ ಸೇನೆಯ ತುಕಡಿ ಭೇಟಿ ನೀಡಿತ್ತು. ಬಾಲಾಕೋಟ್‍ನಿಂದ 20 ಕಿ.ಮೀ. ದೂರದ ಶಿಂಕಿಯಾರಿ ಶಿಬಿರದಿಂದ ಪಾಕ್ ಸೇನೆ ಘಟನಾ ಸ್ಥಳಕ್ಕೆ ಭೇಟಿ ನೀಡಿತ್ತು. ಶಿಂಕಿಯಾರಿ, ಪಾಕಿಸ್ತಾನದ ಸೇನೆಯ ಬೇಸ್ ಕ್ಯಾಂಪ್ ಆಗಿದ್ದು, ಇಲ್ಲಿ ಜೂನಿಯರ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಸೇನಾ ಶಿಬಿರಕ್ಕೆ ಗಾಯಗೊಂಡಿದ್ದ ಹರ್ಕತ್ ಉಲ್ ಮುಜಾಹಿದೀನ್ (ಎಚ್‍ಯುಎಂ – ಜೈಶ್ ಸಂಘಟನೆಯ ಶಾಖೆ) ಉಗ್ರನನ್ನು ರವಾನಿಸಲಾಗಿತ್ತು. ಅಲ್ಲಿ ಸೇನಾ ವೈದ್ಯರಿಂದ ಎಚ್‍ಯುಎಂ ಉಗ್ರರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮರೀನೊ ಅವರು ವರದಿಯಲ್ಲಿ ಉಲ್ಲೆಖಿಸಿದ್ದಾರೆ.

    ಏರ್ ಸ್ಟ್ರೈಕ್‍ನಿಂದ ಕನಿಷ್ಟ 135ರಿಂದ 170 ಜೈಶ್ ಉಗ್ರರು ಸಾವನ್ನಪ್ಪಿದ್ದಾರೆ. ಇದರಲ್ಲಿ 20 ಉಗ್ರರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರೆ, 45 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಚೇತರಿಕೆ ಕಂಡಿರುವ ಉಗ್ರರನ್ನು ಎಚ್‍ಯುಎಂ ಶಿಬಿರದಿಂದ ಪಾಕ್ ಸೇನೆ ಹೊರ ಬಿಡುತ್ತಿಲ್ಲ. ಏರ್ ಸ್ಟ್ರೈಕ್‍ನಲ್ಲಿ ಸತ್ತವರ ಪೈಕಿ 11 ಜನ ಬಾಂಬ್ ತಯಾರಿಕ ನಿಪುಣರುರಾಗಿದ್ದು, ಇವರಲ್ಲಿ ಇಬ್ಬರು ಅಫ್ಘಾನಿಸ್ತಾನದವರಾಗಿದ್ದಾರೆ. ಅಲ್ಲದೆ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರ ಭೇಟಿಯನ್ನು ಸಹ ನಿಷೇಧಲಾಗಿದೆ. ಮಾಹಿತಿ ಹಾಗೂ ತನಿಖೆಗೆ ಪಾಕ್ ಸೇನೆ ನಿರ್ಬಂಧಿಸಿತ್ತು ಎಂದು ವರದಿಯಲ್ಲಿ ತಿಳಿಸಿದ್ದಾರೆ.

    ದಾಳಿ ನಡೆದ ಮರುರಾತ್ರಿ ಕುನ್ಹಾರ್ ನದಿ ತಟದಲ್ಲಿ ಪಾಕ್ ಸೇನೆಯ ವಾಹನಗಳು ಓಡಾಡಿದ್ದವು. ಹಾಗೆಯೇ ಭಾರತದ ಮೇಲೆ ಪ್ರತೀಕಾರಕ್ಕಾಗಿ ಜೈಶ್ ಉಗ್ರ ಸಂಘಟನೆ ಕಾದು ಕುಳಿತಿದೆ ಎಂದು ಸ್ಥಳೀಯರು ತಿಳಿಸಿದ್ದಾಗಿ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

    ಮೃತ ಉಗ್ರರ ಕುಟುಂಬದ ಸದಸ್ಯರನ್ನು ಜೈಶ್ ಉಗ್ರರು ಭೇಟಿ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ ಹಣಕಾಸಿನ ನೆರವು ನೀಡಿ ಈ ಮಾಹಿತಿಯನ್ನು ಬಹಿರಂಗ ಪಡಿಸದಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಫ್ರಾನ್ಸೆಸ್ಕಾ ಮರೀನೊ ವರದಿ ಮಾಡಿದ್ದಾರೆ.

    https://www.youtube.com/watch?v=pQdLGFl7IEI

  • ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ಶ್ರೀನಗರ: ಪಾಕಿಸ್ತಾನದಿಂದ ಬಿಡುಗಡೆಯಾದ ಬಳಿಕ ಟೈಗರ್ ಅಭಿನಂದನ್ ಹೇಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ ಇದುವರೆಗೆ ಅವರ ಒಂದೇ ಒಂದು ವೀಡಿಯೋ ರಿಲೀಸ್ ಆಗಿರಲಿಲ್ಲ. ಈಗ ಅಭಿನಂದನ್ ಅವರ ಮೊದಲ ವೀಡಿಯೋ ರಿಲೀಸ್ ಆಗಿದೆ.

    ಎಫ್ 16 ವಿಮಾನವನ್ನು ಹೊಡೆದು ಹಾಕಿ ಪಾಕ್ ಕಸ್ಟಡಿಯಲ್ಲಿದ್ದ ಅಭಿನಂದನ್ ಶ್ರೀನಗರದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ವಾಯು ಸೇನೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ಸಹೋದ್ಯೋಗಿಗಳು ಅಭಿನಂದನ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

    ಈ ವೇಳೆ ಅಭಿನಂದನ್, ನನ್ನ ಬಿಡುಗಡೆಗಾಗಿ ಪ್ರಾರ್ಥನೆ ಮಾಡಿದ ನಿಮಗೆ ಮತ್ತು ನಿಮ್ಮ ಕುಟುಂಬಸ್ಥರಿಗೆ ನನ್ನ ಧನ್ಯವಾದ, ನಾನು ನಿಮ್ಮ ಕುಟುಂಬಕ್ಕಾಗಿ ಪೋಸ್ ಕೊಡುತ್ತಿದ್ದೇನೆ ಎಂದು ಪ್ರೀತಿಯಿಂದ ಹೇಳಿದ್ದಾರೆ. ಏಪ್ರಿಲ್ ಕೊನೆಯ ವಾರದಲ್ಲಿ ಅಭಿನಂದನ್ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಈಗ ವಿಡಿಯೋ ವೈರಲ್ ಆಗಿದೆ.

    ಅಭಿನಂದನ್ ವರ್ಧಮಾನ್ ಅವರು ಶ್ರೀನಗರದಲ್ಲಿರುವ ವಾಯುನೆಲೆಯಲ್ಲಿ ಕರ್ತವ್ಯದಲ್ಲಿದ್ದರು. ಆದರೆ ಅವರಿಗೆ ಜೈಶ್ ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀನಗರದಿಂದ ಈಗ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

    ಫೆ.27 ರಂದು ಮಿಗ್ 21 ವಿಮಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕ ಬಿದ್ದಿದ್ದ ಅಭಿನಂದನ್ 58 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದರು. ಡಿ ಬ್ರೀಫಿಂಗ್ ಆದ ಬಳಿಕ ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ ಮನೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಚೆನ್ನೈನಲ್ಲಿರುವ ಮನೆಗೆ ತೆರಳದೇ ಶ್ರೀನಗರದ ವಾಯುನೆಲೆಗೆ ಮರಳಿದ್ದರು. ಭಾರತಕ್ಕೆ ಮರಳಿದ ನಂತರ ವೈದ್ಯಕೀಯ ಚಿಕಿತ್ಸೆ, ವಾಯು ಸೇನೆಯ ವಿಚಾರಣೆಯ ನಂತರ ರಜೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಮನೆಗೆ ತೆರಳದೇ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್ 16 ವಿಮಾನವನ್ನು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು.

    ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.