Tag: ಭಾರತೀಯ ವಾಯುಪಡೆ

  • ಕೊನೇ ಹಾರಾಟ ನಡೆಸಿದ MIG-21 – ʻಹಾರುವ ಶವಪೆಟ್ಟಿಗೆʼಗೆ ಸೆ.19ರಂದು ಬೀಳ್ಕೊಡುಗೆ!

    ಕೊನೇ ಹಾರಾಟ ನಡೆಸಿದ MIG-21 – ʻಹಾರುವ ಶವಪೆಟ್ಟಿಗೆʼಗೆ ಸೆ.19ರಂದು ಬೀಳ್ಕೊಡುಗೆ!

    ಬಿಕಾನೇ‌ರ್: 62 ವರ್ಷಗಳ ಕಾಲ ಭಾರತೀಯ ವಾಯುಪಡೆಗೆ ಶಕ್ತಿಯಾಗಿ ನಿಂತಿದ್ದ, ಬಳಿಕ ಹಾರುವ ಶವ ಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿದ್ದ ಮಿಗ್-21 ಯುದ್ಧವಿಮಾನವು (MiG-21 Fighter Jet) ಸೋಮವಾರ ರಾಜಸ್ಥಾನದ (Rajastan) ಬಿಕಾನೇರ್‌ನಲ್ಲಿರುವ ನಾಲ್ ವಾಯುನೆಲೆಯಲ್ಲಿ ಕೊನೆಯ ಬಾರಿಗೆ ಹಾರಾಟ ನಡೆಸಿತು.

    ರಷ್ಯಾ (Russia) ಮೂಲದ ಈ ಯುದ್ಧವಿಮಾನವು 62 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಸೆ.19 ರಂದು ಚಂಡೀಗಢದಲ್ಲಿ ಈ ಮಿಗ್‌-21 ಯುದ್ಧವಿಮಾನಕ್ಕೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ. ಸಾಂಕೇತಿಕ ಬೀಳ್ಕೊಡುಗೆಯ ಭಾಗವಾಗಿ ಆ.18 ಮತ್ತು 19ರಂದು ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ (AP Singh) ಅವರು ಮಿಗ್-21 ವಿಮಾನದ ಹಾರಾಟ ನಡೆಸಿದರು. ಇದನ್ನೂ ಓದಿ: ಕಾಲ್ ಸೆಂಟರ್ ಮಾಡಿಕೊಂಡು ಅಮೆರಿಕದ ಪ್ರಜೆಗಳಿಗೆ 350 ಕೋಟಿ ರೂ. ವಂಚನೆ – ಮೂವರನ್ನು ಬಂಧಿಸಿದ ಸಿಬಿಐ

    ಬಳಿಕ ಮಾತನಾಡಿದ ಅವರು, ಮಿಗ್-21 ಅನ್ನು 1960ರ ದಶಕದಲ್ಲಿ ಸೇನೆಗೆ ನಿಯೋಜಿಸಲಾಗಿತ್ತು. ಸುಮಾರು 11,000 ಯುದ್ಧವಿಮಾನಗಳು 60ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಿವೆ. ಇದು ಇತಿಹಾಸದಲ್ಲಿಯೇ ಅತಿ ಹೆಚ್ಚು ಉತ್ಪಾದನೆಯಾದ ಸೂಪರ್‌ಸಾನಿಕ್ ಯುದ್ಧವಿಮಾನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆ.27ರಿಂದ ಟ್ರಂಪ್ ಸುಂಕ ಜಾರಿ – ಮಂಗಳವಾರ ಮೋದಿ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ ಸಾಧ್ಯತೆ

    ಮಿಗ್-21 ಯುದ್ಧವಿವಿಮಾನವು ವಾಯುಪಡೆಗೆ ಸಲ್ಲಿಸಿದ ಸೇವೆ ಅಗಾಧ. ಆದರೆ ಈ ಯುದ್ಧವಿಮಾನದ ತಂತ್ರಜ್ಞಾನದ ನಿರ್ವಹಣೆವು ಈಗ ಕಷ್ಟವಾಗಿದೆ. ನೂತನ ತಂತ್ರಜ್ಞಾನ ಒಳಗೊಂಡ ತೇಜಸ್, ರಪೇಲ್‌ಗಳನ್ನು ಅಳವಡಿಸಿಕೊಳ್ಳಲು ಇದು ಸರಿಯಾದ ಸಮಯ ಎಂದರು.

    ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಜೈದೀಪ್ ಸಿಂಗ್ ಮಾತನಾಡಿ, ಮಿಗ್-21 ವಿಮಾನವು 1971 ಡಿ.14ರಲ್ಲಿ ಢಾಕಾದ ಗವರ್ನರ್ ನಿವಾಸದ ಮೇಲಿನ ದಾಳಿ ನಡೆದ ಸಂದರ್ಭದಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಯುದ್ಧದ ಮರುದಿನವೇ ಗವರ್ನರ್ ರಾಜೀನಾಮೆ ಸಲ್ಲಿಸಿದರು. ಬಳಿಕ ಪಾಕಿಸ್ತಾನ ಶರಣಾಗತಿಯಾಯಿತು ಎಂದು ಮೆಲುಕು ಹಾಕಿದರು.

  • ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    – ಭಾರತೀಯ ವಾಯುಪಡೆ, ಬಿಎಸ್‌ಎಫ್‌ ಸೂಕ್ಷ್ಮ ಮಾಹಿತಿ ನೀಡಿ 40,000 ಹಣ ಪಡೆದಿದ್ದ ಆರೋಪಿ

    ಗಾಂಧೀನಗರ: ಭಾರತೀಯ ವಾಯುಪಡೆ (IAF) ಮತ್ತು ಗಡಿ ಭದ್ರತಾ ಪಡೆಗೆ (BSF) ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್‌ ಜೊತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್‌ನ (Gujarat Man) ವ್ಯಕ್ತಿಯನ್ನು ಬಂಧಿಸಲಾಗಿದೆ.

    ಕಛ್ ನಿವಾಸಿಯಾಗಿರುವ ಆರೋಪಿ ಸಹದೇವ್ ಸಿಂಗ್ ಗೋಹಿಲ್ ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿ ಕೆ. ಸಿದ್ಧಾರ್ಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ಅದಿತಿ ಭಾರದ್ವಾಜ್‌ (28) ಹೆಸರಿನ ಮಹಿಳೆ 2023ರಲ್ಲಿ ವಾಟ್ಸಪ್‌ ಮೂಲಕ ಏಜೆಂಟ್‌ ಜೊತೆ ಸಂಪರ್ಕಕ್ಕೆ ಬಂದಿದ್ದಳು. ಆರೋಪಿ ಸಹದೇವ್‌ ಆಕೆಗೆ ನಿರ್ಮಾಣ ಹಂತದಲ್ಲಿರುವ ಐಎಎಫ್‌ ಮತ್ತು ಬಿಎಸ್‌ಎಫ್‌ ತಾಣಗಳ ಫೋಟೊ, ವೀಡಿಯೋಗಳನ್ನು ಕಳುಹಿಸಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

    2025 ರ ಆರಂಭದಲ್ಲಿ ಆತ ಸಿಮ್ ಕಾರ್ಡ್ ಖರೀದಿಸಿದ್ದ. OTP ಸಹಾಯದಿಂದ ಅದಿತಿ ಭಾರದ್ವಾಜ್‌ಗಾಗಿ ಆ ಸಂಖ್ಯೆಯಲ್ಲಿ ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿದ್ದ. ಅದಾದ ಬಳಿಕ BSF ಮತ್ತು IAFಗೆ ಸಂಬಂಧಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಆ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಭಾರತಕ್ಕೆ ನುಸುಳಲು ಯತ್ನ – ಶಂಕಿತ ಪಾಕಿಸ್ತಾನಿ ಹೊಡೆದುರುಳಿಸಿದ ಬಿಎಸ್‌ಎಫ್‌

    ಗೋಹಿಲ್ ಮಾಹಿತಿ ಹಂಚಿಕೊಳ್ಳಲು ಬಳಸಿದ ಸಂಖ್ಯೆಗಳನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿತ್ತು ಎಂದು ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಗೋಹಿಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು 40,000 ರೂ. ಹಣ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ.

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು. ಪರಿಣಾಮವಾಗಿ ಎಲ್ಲೆಡೆ ತನಿಖೆ ಚುರುಕುಗೊಳಿಸಲಾಗಿದೆ. ಭಾರತದ ವಿರುದ್ಧ ಬೇಹುಗಾರಿಕೆಯ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್, ಉದ್ಯಮಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಹತ್ತುಕ್ಕೂ ಹೆಚ್ಚು ಜನರಲ್ಲಿ ಗೋಹಿಲ್ ಕೂಡ ಒಬ್ಬ. ಇದನ್ನೂ ಓದಿ: ಉಗ್ರರ ದಾಳಿಯಿಂದ 20,000 ಭಾರತೀಯರು ಸಾವು: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಭಾರತ ಕಿಡಿ

  • ಚೆನ್ನೈ ಏರ್ ಶೋ ವೇಳೆ ದುರಂತ – ಬಿಸಿಲಿನ ತಾಪಕ್ಕೆ ಐವರು ಸಾವು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಚೆನ್ನೈ ಏರ್ ಶೋ ವೇಳೆ ದುರಂತ – ಬಿಸಿಲಿನ ತಾಪಕ್ಕೆ ಐವರು ಸಾವು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಚೆನ್ನೈ: ಭಾರತೀಯ ವಾಯುಪಡೆಯ (Indian Air Force) 92 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆ ಹಿನ್ನೆಲೆ ಚೆನ್ನೈನ (Chennai) ಮರೀನಾ ಬೀಚ್‌ನಲ್ಲಿ ನಡೆದ ಏರ್ ಶೋ (ವೈಮಾನಿಕ ಪ್ರದರ್ಶನ) ವೇಳೆ ಬಿಸಿಲಿನತಾಪಕ್ಕೆ 5 ಮಂದಿ ಸಾವಾಗಿದ್ದು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

    ವಾಯುಪಡೆ ಸಂಸ್ಥಾಪನಾ ದಿನ ನಿಮಿತ್ತ ದಕ್ಷಿಣ ಭಾರತದಲ್ಲಿ ನಡೆದ ಮೊದಲ ಏರ್ ಶೋ ಇದಾಗಿತ್ತು. ಚೆನ್ನೈನ ಮರೀನಾ ಬೀಚ್‌ನಲ್ಲಿ (Marina Beach) ಏರ್ ಶೋ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ 72 ವಿಮಾನಗಳು ವಿವಿಧ ಸಾಹಸಗಳನ್ನು ಪ್ರದರ್ಶಿಸಿದ್ದವು. 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆಗೆ ಆಗಮಿಸಿದ್ದರು. ಇದನ್ನೂ ಓದಿ: ಉಡುಪಿಯಲ್ಲಿ ಮೇಘಸ್ಪೋಟ – ನಾಪತ್ತೆಯಾದ ವೃದ್ಧೆ ಶವವಾಗಿ ಪತ್ತೆ

     

    ಏರ್ ಶೋ ವೀಕ್ಷಿಸಿ ವಾಪಾಸ್ ತೆರಳುವಾಗ ಬಿಸಿಲಿನ ತಾಪಕ್ಕೆ ಜನರ ನಡುವೆ ನೂಕು ನುಗ್ಗಲು ಸಂಭವಿಸಿದೆ. ಈ ವೇಳೆ ಉಸಿರಾಡಲಾಗದೇ 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. 100 ಕ್ಕೂ ಹೆಚ್ಚು ಜನರಿಗೆ ಉಸಿರಾಟದ ಸಮಸ್ಯೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖ್ಯ ರಸ್ತೆಯಲ್ಲಿ ವಾಹನ ಸಂದಣಿ ಹಾಗೂ ಜನಸಂದಣಿ ಏರ್ಪಟ್ಟಿತ್ತು. ಅಸ್ವಸ್ಥರಾದವರನ್ನ ಆಂಬ್ಯಲೆನ್ಸ್ಗೆ ಸಾಗಿಸಿವುದಕ್ಕೆ ಪರದಾಡಬೇಕಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 91 ಹೊಸ ಡೆಂಗ್ಯೂ ಪ್ರಕರಣ ದಾಖಲು

    ಮೃತರನ್ನು ಜಾನ್ (60), ತಿರುವೊಟ್ಟಿಯೂರು ಮೂಲದ ಕಾರ್ತಿಕೇಯನ್, ದಿನೇಶ್ ಕುಮಾರ್ (37), ಪೆರುಂಗಲತ್ತೂರಿನ ಶ್ರೀನಿವಾಸನ್, ಎಂದು ಗುರುತಿಸಲಾಗಿದೆ.

    ಏರ್ ಶೋನಲ್ಲಿ 72 ವಿಮಾನಗಳು ಭಾಗಿ:
    ವಾಯುಸೇನೆಯ ಈ ಪ್ರತಿಷ್ಠಿತ ಏರ್ ಶೋನಲ್ಲಿ ರಫೇಲ್ ಸೇರಿದಂತೆ 72 ವಿಮಾನಗಳು ಪಾಲ್ಗೊಂಡಿದ್ದವು. ಸ್ವದೇಶಿ ನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ್ ಮತ್ತು ಹೆರಿಟೇಜ್ ವಿಮಾನ ಡಕೋಟಾ ಕೂಡ ಏರ್ ಶೋನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದವು. ಈ ಏರ್ ಶೋ ವಿಶೇಷ ಗರುಡ ಫೋರ್ಸ್ ಕಮಾಂಡೋಗಳ ಸಿಮ್ಯುಲೇಟೆಡ್ ರಕ್ಷಣಾ ಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರದರ್ಶನವನ್ನು ಒಳಗೊಂಡಿತ್ತು. ಇದನ್ನೂ ಓದಿ: ಮೊಯಿದ್ದೀನ್ ಬಾವ ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ

  • Bihar | ಸೇನೆಯ ಹೆಲಿಕಾಪ್ಟರ್‌ ಇಂಜಿನ್‌ ವೈಫಲ್ಯ – ಪ್ರವಾಹದ ನೀರಲ್ಲೇ ತುರ್ತು ಭೂಸ್ಪರ್ಶ

    Bihar | ಸೇನೆಯ ಹೆಲಿಕಾಪ್ಟರ್‌ ಇಂಜಿನ್‌ ವೈಫಲ್ಯ – ಪ್ರವಾಹದ ನೀರಲ್ಲೇ ತುರ್ತು ಭೂಸ್ಪರ್ಶ

    ಪಾಟ್ನಾ: ಪ್ರವಾಹ (Flood) ಪೀಡಿತ ಬಿಹಾರಕ್ಕೆ (Bihar) ಪರಿಹಾರ ಸಾಮಗ್ರಿಗಳನ್ನು ಏರ್ ಡ್ರಾಪ್ ಮಾಡುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನ್ನು (IAF Chopper) ಪ್ರವಾಹದ ನೀರಿನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

    ತುರ್ತು ಭೂಸ್ಪರ್ಶ ಮಾಡುತ್ತಿದ್ದಂತೆ ಹೆಲಿಕಾಪ್ಟರ್‌ನ ಒಂದು ಭಾಗ ಪ್ರವಾಹದಲ್ಲಿ ಮುಳುಗಿದೆ. ಹೆಲಿಕಾಪ್ಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಐಎಎಫ್ ಸಿಬ್ಬಂದಿಗಳಿದ್ದರು. ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ಮಾತನಾಡಿ, ಪೈಲಟ್‌ನ ಚಾಣಾಕ್ಷತನದಿಂದ ಭಾರೀ ಅನಾಹುತ ತಪ್ಪಿದೆ. ಇಂಜಿನ್ ವಿಫಲವಾದ ಬಳಿಕ ಪೈಲಟ್ ಹೆಲಿಕಾಪ್ಟರ್‌ನ್ನು ಪ್ರವಾಹದ ನೀರಿನಲ್ಲಿ ಇಳಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಹೆಲಿಕಾಪ್ಟರ್ ಮುಜಾಫರ್‌ಪುರದ ಔರಾಯ್ ವಿಭಾಗದ ನಯಾ ಗಾಂವ್‌ನಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ಅದು ಸೀತಾಮರ್ಹಿಯಿಂದ ಹೊರಟಿತ್ತು ಎಂದು ಐಎಎಫ್‌ ಸಿಬ್ಬಂದಿ ತಿಳಿಸಿದ್ದಾರೆ.

  • ವಿಮಾನ ಪತನಗೊಂಡ 56 ವರ್ಷಗಳ ಬಳಿಕ 4 ಮೃತದೇಹಗಳು ಪತ್ತೆ

    ವಿಮಾನ ಪತನಗೊಂಡ 56 ವರ್ಷಗಳ ಬಳಿಕ 4 ಮೃತದೇಹಗಳು ಪತ್ತೆ

    ನವದೆಹಲಿ: 56 ವರ್ಷಗಳ ಹಿಂದೆ ಸಂಭವಿಸಿದ್ದ ವಿಮಾನ ಅಪಘಾತವೊಂದರಲ್ಲಿ (Plane Crash) ನಾಪತ್ತೆಯಾಗಿದ್ದ ಮೃತದೇಹಗಳಲ್ಲಿ ನಾಲ್ಕು ಮೃತ ದೇಹಗಳು ಪತ್ತೆಯಾಗಿದೆ.

    ಇದೀಗ ಹಿಮಭರಿತ ಭೂಪ್ರದೇಶದಲ್ಲಿ ಹುದುಗಿಹೋಗಿದ್ದ ವಿಮಾನದ ಅವಶೇಷಗಳು ದೊರೆತಿದ್ದು, ಪತ್ತೆಯಾದ ಮೃತ ದೇಹಗಳಲ್ಲಿ ಮೂವರ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಸೇನೆಯ ವಿವಿಧ ವಲಯದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸೈನಿಕರು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪ್ರಜ್ವಲ್‌ ಪ್ರಕರಣಕ್ಕೆ ಭವಾನಿಯನ್ನು ಎಳೆ ತಂದಾಗ ಸರಿ ಅನ್ನಿಸಿತ್ತಾ: ಕಾಂಗ್ರೆಸ್‌ಗೆ ಟೀಕೆಗೆ ಅಶೋಕ್‌ ಪ್ರಶ್ನೆ

    ನಾಲ್ಕು ಶವಗಳ ಪೈಕಿ ಮೂರು ಮೃತದೇಹಗಳು ಮಲ್ಖಾನ್ ಸಿಂಗ್, ಸಿಪಾಯಿ ನಾರಾಯಣ್ ಸಿಂಗ್ ಮತ್ತು ಕುಶಲಕರ್ಮಿ ಥಾಮಸ್ ಚರಣ್ ಅವರದ್ದಾಗಿದೆ ಹಾಗೂ ಉಳಿದೊಂದು ಮೃತ ದೇಹದಿಂದ ವಶಪಡಿಸಿಕೊಂಡ ದಾಖಲೆಗಳು ವ್ಯಕ್ತಿಯನ್ನು ನಿರ್ಣಾಯಕವಾಗಿ ಗುರುತಿಸಿಲ್ಲ. ಆದರೆ, ಅವರ ಸಂಬಂಧಿಕರ ವಿವರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತು ಸೇನಾ ಅಧಿಕಾರಿಗಳು ಮಾತನಾಡಿ, ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತಿರಂಗಾ ಮೌಂಟೇನ್ ರೆಸ್ಕ್ಯೂ ಸಿಬ್ಬಂದಿಯನ್ನು ಒಳಗೊಂಡ ಜಂಟಿ ತಂಡವು ಕಾರ್ಯಾಚರಣೆಯನ್ನು ನಡೆಸಿದೆ. ಇದರಲ್ಲಿ 4 ಶವಗಳನ್ನು ಪತ್ತೆ ಮಾಡಿದೆ. ಸಿಬ್ಬಂದಿಗಳಿಂದ ನಡೆಸಲಾದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದ್ದಾರೆ.

    ಏನಿದರ ಹಿನ್ನೆಲೆ:
    1968ರಲ್ಲಿ 56 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ A-12 ಎಂಬ ವಿಮಾನವು ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್‌ನಲ್ಲಿ (Rohtang Pass) ಅಪಘಾತಕ್ಕೀಡಾಗಿತ್ತು. ಫೆಬ್ರವರಿ 7, 1968 ರಂದು 102 ಜನರನ್ನು ಹೊತ್ತಿದ್ದ ಅವಳಿ-ಎಂಜಿನ್ ಟರ್ಬೊಪ್ರಾಪ್ ಸಾರಿಗೆ ವಿಮಾನವು ಚಂಡೀಗಢದಿಂದ ಲೇಹ್‌ಗೆ ಹಾರುತ್ತಿದ್ದಾಗ ನಾಪತ್ತೆಯಾಗಿತ್ತು.

    ಅಪಘಾತಕ್ಕೀಡಾದ ವಿಮಾನದಲ್ಲಿ ಈ ಹಿಂದೆ 2003ರಲ್ಲಿ ಮೊದಲ ಬಾರಿಗೆ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ (Atal Bihari Vajpayee Institute of Mountaineering) ಪರ್ವತಾರೋಹಿಗಳು ಅವಶೇಷಗಳನ್ನು ಪತ್ತೆಹಚ್ಚಲಾಗಿತ್ತು. ಅದಾದ ಬಳಿಕ 2005, 2006, 2013, ಮತ್ತು 2019ರಲ್ಲಿ ಡೋಗ್ರಾ ಸ್ಕೌಟ್ಸ್ (Dogra Scouts) ವಿವಿಧ ಕಾರ್ಯಾಚರಣೆಗಳನ್ನು ನಡೆಸಿತ್ತು.

    2019ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮೃತ ದೇಹಗಳನ್ನು ಹೊರ ತೆಗೆಯಲಾಗಿತ್ತು. ಇದೀಗ ಚಂದ್ರಭಾಗ ಮೌಂಟೇನ್ ಎಕ್ಸ್ಪೆಡಿಶನ್ (Chandra Bhaga Mountain Expedition) ಇನ್ನೂ ನಾಲ್ಕು ದೇಹಗಳನ್ನು ವಶಪಡಿಸಿಕೊಂಡಿದೆ. ಇದು ಭಾರತದ ದೀರ್ಘಾವಧಿಯ ಶೋಧ ಕಾರ್ಯಾಚರಣೆಯಲ್ಲಿ ಗಮನಾರ್ಹ ಯಶಸ್ಸನ್ನು ತಂದಿದೆ.ಇದನ್ನೂ ಓದಿ: ಮುಡಾ ಸೈಟ್ ವಾಪಸ್ ನೀಡಿರುವುದು ಒಳ್ಳೆಯ ನಿರ್ಧಾರ – ಪರಮೇಶ್ವರ್

  • ಕಾಶ್ಮೀರದಲ್ಲಿ ಸೇನೆಯಿಂದ ಎನ್‍ಕೌಂಟರ್ – ಇಬ್ಬರು ಉಗ್ರರು ಬಲಿ

    ಕಾಶ್ಮೀರದಲ್ಲಿ ಸೇನೆಯಿಂದ ಎನ್‍ಕೌಂಟರ್ – ಇಬ್ಬರು ಉಗ್ರರು ಬಲಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್‍ನ ರೆಡ್ವಾನಿ ಪಯೀನ್ ಪ್ರದೇಶದಲ್ಲಿ ಭದ್ರತಾ ಪಡೆಗಳು (Security Forces) ನಡೆಸಿದ ಎನ್‍ಕೌಂಟರ್‌ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉಗ್ರರ ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ಅವರ ಗುರುತು ಇನ್ನೂ ಪ್ತತೆಯಾಗಿಲ್ಲ. ಮೃತ ಉಗ್ರರ ಗುರುತು ಪತ್ತೆಹಚ್ಚುವ ಕಾರ್ಯನಡೆಯುತ್ತಿದೆ. ಅಲ್ಲದೇ ಉಗ್ರರ ಅಡಗುದಾಣದಲ್ಲಿ ಸೇನೆ ಕಾರ್ಯಾಚರಣೆ ಮುಂದುವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೈನಿಕರ ಮೇಲೆ ದಾಳಿ – ಇಬ್ಬರು ಪಾಕ್ ಉಗ್ರರ ತಲೆಗೆ 20 ಲಕ್ಷ ಬಹುಮಾನ ಘೋಷಿಸಿದ IAF

    ಮೇ 4 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್‍ನಲ್ಲಿ ಭಾರತೀಯ ವಾಯುಪಡೆಯ (Indian Air Force) ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿ, ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಇದಾದ ಬಳಿಕ ಈ ಭಾಗಗಳಲ್ಲಿ ಸೇನೆ, ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು.

    ಎನ್‍ಕೌಂಟರ್‌ನಲ್ಲಿ ಹತರಾದ ಉಗ್ರರು, ವಾಯುಪಡೆಯ ವಾಹನದ ಮೇಲೆ ದಾಳಿ ನಡೆಸಿದವರೇ ಎಂಬ ಅಧಿಕೃತ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

  • ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

    ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

    ಶ್ರೀನಗರ: ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ (IAF) ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗಿಳಿದ ಸೇನೆ (Indian Army) ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.

    ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಸೇನೆಯು ಹೆಲಿಕಾಪ್ಟರ್ ಬಳಸಿ ದಾಳಿ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೈಮಾನಿಕ ಕಣ್ಗಾವಲು ಕೂಡ ನಡೆಸಿದೆ. ಸ್ಥಳಕ್ಕೆ ಸೇನೆಯ ಅಧಿಕಾರಿಗಳು, ಗುಪ್ತಚರ ಸಂಸ್ಥೆ ಅಧಿಕಾರಿಗಳು ಹಾಗೂ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದ ಪೂಂಚ್‌ನಲ್ಲಿ ವಾಯು ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ – ಓರ್ವ ಯೋಧ ಹುತಾತ್ಮ

    ಶಹಸಿತಾರ್ ಬಳಿ ಶನಿವಾರ ಸಂಜೆ ನಡೆದ ದಾಳಿಯಲ್ಲಿ ಐವರು ಐಎಎಫ್ ಸಿಬ್ಬಂದಿ ಗಾಯಗೊಂಡು, ಒಬ್ಬರು ಮೃತಪಟ್ಟಿದ್ದರು. ದಾಳಿ ನಡೆದ ಬಳಿಕ ಉಗ್ರರು ಸಮೀಪದ ಅರಣ್ಯಕ್ಕೆ ಪರಾರಿಯಾಗಿದ್ದರು. ದಾಳಿಗೆ ಉಗ್ರರು ಎಕೆ ಅಸಾಲ್ಟ್ ರೈಫಲ್, ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಮತ್ತು ಸ್ಟೀಲ್ ಬುಲೆಟ್‍ಗಳನ್ನು ಬಳಸಿದ್ದಾರೆ. ಉಗ್ರರಿಗಾಗಿ ಸೇನೆ ಶೋಧ ಕಾರ್ಯ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2003 ಮತ್ತು 2021ರ ನಡುವೆ ಈ ಭಾಗದಲ್ಲಿ ಯಾವುದೇ ಭಯೋತ್ಪಾದನಾ ದಾಳಿಗಳಿಲ್ಲದೆ ಶಾಂತಿ ನೆಲೆಸಿತ್ತು. ಕಳೆದ ವರ್ಷ ಇದೇ ಭಾಗದಲ್ಲಿ ಪ್ರಮುಖ ಭಯೋತ್ಪಾದಕ ದಾಳಿ ನಡೆದಿತ್ತು. ಇದನ್ನೂ ಓದಿ: ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ್ದಕ್ಕೆ ಯುವಕನ ಕೊಲೆ

  • ಮೊದಲ ಬಾರಿಗೆ ತೇಜಸ್ ಫೈಟರ್ ಜೆಟ್ ಪತನ- ಪೈಲಟ್ ಸೇಫ್

    ಜೈಪುರ್: ಭಾರತೀಯ ವಾಯುಪಡೆಯ ತೇಜಸ್ ವಿಮಾನವೊಂದು ತರಬೇತಿಯ ವೇಳೆ ರಾಜಸ್ಥಾನದ (Rajasthan) ಜೈಸಲ್ಮೇರ್‌ನಲ್ಲಿ ಪತನಗೊಂಡಿದೆ. ತೇಜಸ್ ಫೈಟರ್ ಜೆಟ್ (Tejas Aircraft) ತನ್ನ 23 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಅಪಘಾತವಾಗಿದೆ.

    ಜೈಸಲ್ಮೇರ್‌ನ ವಿದ್ಯಾರ್ಥಿನಿಯರ ಹಾಸ್ಟೆಲ್ ಮೈದಾನದಲ್ಲಿ ವಿಮಾನ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿ ಇಜೆಕ್ಟ್ ಆಗಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತೀಯ ವಾಯುಪಡೆಯ (Indian Air Force) ತೇಜಸ್ ವಿಮಾನವು ಜೈಸಲ್ಮೇರ್‍ನಲ್ಲಿ ತರಬೇತಿಯ ಸಂದರ್ಭದಲ್ಲಿ ಅಪಘಾತಕ್ಕೀಡಾಯಿತು. ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂದು ತಿಳಿಯಲು, ತನಿಖೆಗೆ ತಂಡ ರಚಿಸಲಾಗಿದೆ ಎಂದು ವಾಯುಪಡೆ ಎಕ್ಸ್‌ನಲ್ಲಿ ತಿಳಿಸಿದೆ.

    2001ರಲ್ಲಿ ತೇಜಸ್ ಫೈಟರ್ ಜೆಟ್‍ನ ಮೊದಲ ಪರೀಕ್ಷಾ ಹಾರಾಟದ ನಂತರ, 2016 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು.

  • ಗಗನಯಾನ ಸಾಹಸಿಗರಿಗೆ ಪೌಷ್ಠಿಕ ಆಹಾರ; ಇದು ಎಲ್ಲಿಂದ – ಹೇಗೆ ತಯಾರಾಗುತ್ತೆ ಗೊತ್ತಾ?

    ಗಗನಯಾನ ಸಾಹಸಿಗರಿಗೆ ಪೌಷ್ಠಿಕ ಆಹಾರ; ಇದು ಎಲ್ಲಿಂದ – ಹೇಗೆ ತಯಾರಾಗುತ್ತೆ ಗೊತ್ತಾ?

    ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯು (ISRO) ಮಹತ್ವಾಕಾಂಕ್ಷೆಯ ಗಗನಯಾನಕ್ಕೆ (Mission Gaganyaan) ಸಜ್ಜಾಗುತ್ತಿದೆ. ಈಗಾಗಲೇ ಅಂತರಿಕ್ಷಯಾನಿಗಳ ಹೆಸರು ಹಾಗೂ ವಿವರಗಳನ್ನೂ ಬಹಿರಂಗಪಡಿಸಿದೆ.

    ಗ್ರೂಪ್‌ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್ (Prashanth Nair), ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ವಿಂಗ್‌ ಕಮಾಂಡರ್‌ ಶುಭಾಂಶು ಶುಕ್ಲಾ (Shubhanshu Shukla) ಅವರು ಬಾಹ್ಯಾಕಾಶಕ್ಕೆ ಭಾರತದ ಮೊದಲ ಮಾನವ ಸಹಿತ ಗಗನಯಾನ ಮಿಷನ್‌ನಲ್ಲಿ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಗಗನಯಾತ್ರಿಗಳ ಆಯ್ಕೆಯು ಐಎಎಫ್‌ನ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನಲ್ಲಿ ಇತ್ತೀಚೆಗೆ ನಡೆಯಿತು. ಇದನ್ನೂ ಓದಿ: ಆದಿತ್ಯ ಮಿಷನ್‌ ಉಡಾವಣೆಯಾದ ದಿನವೇ ಇಸ್ರೋ ಮುಖ್ಯಸ್ಥ ಸೋಮನಾಥ್‌ಗೆ ಕ್ಯಾನ್ಸರ್‌

    ಭಾರತದ ಮೊಟ್ಟ ಮೊದಲ ಗಗನಯಾತ್ರೆಗೆ ಆಯ್ಕೆಯಾಗಿರುವ ನಾಲ್ವರು 140 ಕೋಟಿ ಭಾರತೀಯರ ಕನಸನ್ನು ನಭಕ್ಕೆ ಕೊಂಡೊಯ್ಯಲಿದ್ದಾರೆ. ಅಂದು ರಾಕೆಟ್‌ ಸೃಷ್ಟಿಸುವ ಸದ್ದಿಗೆ ಅವರ ಕಿವಿ ತಡೆದುಕೊಳ್ಳಬೇಕು, ಹೃದಯ ಬಡಿತ ಅಷ್ಟೇ ಸ್ಥಿರತೆ ಕಾಯ್ದುಕೊಳ್ಳಬೇಕು. ಇಸ್ರೋ ವಿಜ್ಞಾನಿಗಳಿಗೆ ಇದು ಕೇವಲ ಉಡಾವಣೆಯಷ್ಟೇ ಅಲ್ಲ. ಯಾತ್ರಿಕರು ಗಗನ ತಲುಪಿ ಮೂರ್ನಾಲ್ಕು ದಿನ ಅವರು ಕುಳಿತ ಕ್ಯಾಪ್ಸುಲ್‌ 300 ಕಿಮೀ ಆಚೆಗೆ ಸುತ್ತಾಡಿ, ಮರಳಿ ಭೂಮಿಗೆ ಬರುವವರೆ ಅವರ ಯೋಗಕ್ಷೇಮ ಅಷ್ಟೇ ಮುಖ್ಯ. ಅದಕ್ಕಾಗಿ ಈಗಾಗಲೇ ಇಸ್ರೋ ಸೂಕ್ತ ತರಬೇತಿಯನ್ನೂ ಕೊಡಿಸುತ್ತಿದೆ.

    ಕಳೆದ 50 ವರ್ಷಗಳಲ್ಲಿ ಹಲವಾರು ಉಪಗ್ರಹಗಳನ್ನು ಇಸ್ರೋ ಕಕ್ಷೆಗೆ ಸೇರಿಸಿದೆ. ಆದ್ರೆ ಅವುಗಳನ್ನು ಎಲೆಕ್ಟ್ರಾನಿಕ್‌ ಸಿಗ್ನಲ್‌ ಬಳಸಿ ನಿಯಂತ್ರಿಸುತ್ತಿದೆ. ಮಂಗಳನ ಕಕ್ಷೆಗೆ ನೌಕೆ ಬಿಟ್ಟಿದ್ದು, ಚಂದ್ರನ ಮೇಲೆ ರೋವರ್‌ ಇರಿಸಿದ್ದು, ಸೂರ್ಯನ ಅಧ್ಯಯನಕ್ಕೆ ನೌಕೆ ಕಳುಹಿಸಿರುವುದು ಇದೆಲ್ಲವೂ ಇಸ್ರೋನ ಹೆಮ್ಮೆ. ಆದ್ರೆ ಗಗನಯಾನ ಇದೆಲ್ಲದಕ್ಕಿಂತಲೂ ಭಿನ್ನ. ಏಕೆಂದರೆ ಭಾರತ ಈವರೆಗೆ ಗಗನಯಾನಕ್ಕೆ ಯಾವುದೇ ಜೀವಿಯನ್ನು ಕಳುಹಿಸಿಲ್ಲ. ಹಾಗಾಗಿ ಯಾವ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಭಾರತ ಗಗನಯಾನಕ್ಕೆ ವಿಜ್ಞಾನಿಗಳನ್ನ ಕಳುಹಿಸಲಿದೆ ಎಂಬುದೂ ಅಷ್ಟೇ ಕುತೂಹಲ. ಇದರೊಂದಿಗೆ ಗಗನಯಾತ್ರಿಗೆ ಹೋಗುವವರ ಆರೋಗ್ಯ ದೃಷ್ಟಿಯಿಂದ ಅವರಿಗೆ ನೀಡಬೇಕಾದ ಆಹಾರ ಕ್ರಮದ ಬಗ್ಗೆಯೂ ಕಾಳಜಿ ಇರುತ್ತದೆ. ಅಂತರಿಕ್ಷ ಯಾನ ಮುಗಿಯುವವರೆಗೆ ಅವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಏನೇನು ಆಹಾರ ಸೇವಿಸುತ್ತಾರೆ ಅನ್ನೋದು ಸಹ ಕುತೂಹಲವಿರುತ್ತದೆ.

    ಗಗನಯಾನಿಗಳ ಆಹಾರ ಕ್ರಮ ಹೇಗಿರುತ್ತೆ? ಎಲ್ಲಿಂದ ತಯಾರಾಗುತ್ತೆ?
    ಗಗನಯಾತ್ರಿಗಳಿಗೆ ಆಹಾರ ತಯಾರಿಸುವ ಹೊಣೆಯನ್ನು ಹೈದರಾಬಾದಿನ ಐಸಿಎಂಆರ್ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್ಐಎನ್) ಸಂಸ್ಥೆಯು ಹೊತ್ತಿದೆ. ಇಲ್ಲಿನ ಸಂಶೋಧಕರು ಗಗನಯಾತ್ರಿಗಳೊಡನೆ ಸಹಯೋಗ ಹೊಂದಿ, ಅವರಿಗಾಗಿ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುವ ಆಹಾರ ಕ್ರಮವನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಗನಯಾತ್ರಿಗಳು ಬಾಹ್ಯಾಕಾಶದಿಂದ ಮರಳಿದ ಬಳಿಕವೂ ಅವರ ಆಹಾರ ಕ್ರಮದೆಡೆಗೆ ವಿಶೇಷ ನಿಗಾವನ್ನು ಸಹ ವಹಿಸಲಾಗುತ್ತಿದೆ.

    ಬಾಹ್ಯಾಕಾಶ ಯಾನ ತರಬೇತಿ ಸಂದರ್ಭದಲ್ಲಿ, ಬಾಹ್ಯಾಕಾಶಯಾನ ಸಂದರ್ಭದಲ್ಲಿ ಮತ್ತು ಹಾರಾಟ ಹಂತಗಳ ಬಳಿಕವು ಅವರ ಶಕ್ತಿ ಮಟ್ಟವನ್ನು ಅಳೆಯಬೇಕಾಗುತ್ತದೆ. ಅದಕ್ಕಾಗಿಯೇ ಆಹಾರ ಕ್ರಮವು ಮುಖ್ಯವಾಗಿದೆ. ಇದು ಅವರ ಆರೋಗ್ಯ, ದೈನಂದಿನ ಚಟುವಟಿಕೆಗಳು, ಜೀವರಾಸಾಯನಿಕ ಮತ್ತು ಶಾರೀರಿಕ ಸೂಚಕಗಳ ಪರೀಕ್ಷೆಗಳನ್ನು ಒಳಗೊಂಡಿದ್ದು, ಇದರ ಮೌಲ್ಯಮಾಪನದ ಆಧಾರದಲ್ಲಿ ಆಹಾರ ಯೋಜನೆಯನ್ನು ರೂಪಿಸಲಾಗುತ್ತದೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ವಿಜ್ಞಾನಿಗಳು ಈಗಾಗಲೇ ಗಗನಯಾತ್ರಿಗಳ ಆಹಾರ ಆದ್ಯತೆಗಳ ಕುರಿತು, ರುಚಿಗಳ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಇದು ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನೂ ಒಳಗೊಂಡಿರುತ್ತದೆ. ಗಗನಯಾತ್ರಿಗಳು ತಮ್ಮ ಪ್ರಯಾಣದ ಮೊದಲ ದಿನದಂದು ತಾಜಾ ತರಕಾರಿಗಳನ್ನು ಸೇವಿಸುವ ಅವಕಾಶವಿದೆಯಾದರೂ, ಇನ್ನುಳಿದ ಪ್ರಯಾಣದ ಸಂದರ್ಭದಲ್ಲಿ ತಾವು ಕೊಂಡೊಯ್ದ ಆಹಾರವನ್ನೇ ಸೇವಿಸಬೇಕಾಗುತ್ತದೆ. ಅವರಿಗೆ ನೀಡಿರುವ ಆಹಾರ ಆಯ್ಕೆಗಳಲ್ಲಿ ಬಿರಿಯಾನಿಯೂ ಒಂದಾಗಿದೆ ಎಂದು ಆಹಾರ ಸಂಶೋಧಕರು ತಿಳಿಸಿದ್ದಾರೆ.

    ಭಾರತದ ಗಗನಯಾನಕ್ಕೆ ಆಧಾರ ಏನು?
    ಈ ಹಿಂದೆ ರಷ್ಯಾದ ದತ್ತಾಂಶಗಳನ್ನೇ ಆಧರಿಸಿ ಚೀನಾ ಬಾಹ್ಯಾಕಾಶಕ್ಕೆ ಜಿಗಿದಿತ್ತು. 20023ರ ಅಕ್ಟೋಬರ್‌ 15 ರಂದು ಶೆಂಝೌ-15 ನೌಕೆ ಮೂಲಕ ಚೀನಾದ ಗಗನ ಯಾತ್ರಿಕ ಯಾಂಗ್‌ ಲಿವೆಯಿ 21 ಗಂಟೆಗಳಲ್ಲಿ ಭೂಮಿಗೆ 14 ಸುತ್ತುಗಳನ್ನು ಪೂರ್ಣಗೊಳಿಸಿದ್ದರು. ಬಳಿಕ ಪ್ಯಾರಾಚುಟ್‌ ಮೂಲಕ ಇನ್ನರ್‌ ಮಂಗೋಲಿಯಾದ ಮರುಭೂಮಿಯಲ್ಲಿ ಯಶಸ್ವಿಯಾಗಿ ಇಳಿದು ಇತಿಹಾಸ ನಿರ್ಮಿಸಿದ್ದರು. ಲಿವೆಯಿಗೆ ರಷ್ಯಾದಲ್ಲೇ ಚೀನಾ ತರಬೇತಿ ಕೊಡಿಸಿತ್ತು. ಆದ್ರೆ ಪ್ರಸ್ತುತ ಭಾರತದ ಗಗನಯಾತ್ರಿಕರಿಗೂ ರಷ್ಯಾ ತನ್ನ ನೆಲದಲ್ಲಿಯೇ ತರಬೇತಿ ನೀಡಿದೆ. ಸೆಂಟ್ರಿಫ್ಯೂಜ್‌ ಸಿಮ್ಯೂಲೆಟರ್‌ಗಳಲ್ಲಿ ಯಾತ್ರಿಕರ ಗುರುತ್ವಬಲದ ತಾಳ್ಮೆ ಎಷ್ಟು ಎಂಬುದನ್ನು ರಷ್ಯಾ ನೆಲದಲ್ಲಿ ಪರೀಕ್ಷಿಸಿದೆ. ಅಲಲ್ದೇ ಅಲ್ಲಿನ ಕೆಲವು ಸಾಧನಗಳಲ್ಲಿ ದೇಹದ ಮೇಲೆ ಪೋಷಾಕಿನ ಭಾರವನ್ನೂ ಹೊತ್ತು ಕಡಿಮೆ ತೇವಾಂಶ, ತಾಪಮಾನ ಹಾಗೂ ಗಾಳಿಯ ಒತ್ತಡಗಳಲ್ಲಿನ ದೇಹ ನಿಯಂತ್ರಣದ ಅನುಭವವನ್ನೂ ಯಾತ್ರಿಕರಿಗೆ ನೀಡಲಾಗಿದೆ. ಮಾನವನ ದೇಹದ ಮೇಲೆ ಬಾಹ್ಯಾಕಶ ಪರಿಣಾಮಗಳ ಬಗ್ಗೆ ವಿವರವಾದ ದತ್ತಾಂಶ ಈಗಾಗಲೇ ಇಸ್ರೋ ಬಳಿ ಲಭ್ಯವಿದೆ, ಈ ದತ್ತಾಂಶವನ್ನು ಪರೀಕ್ಷಿಸಲು ಇಸ್ರೋ ರೊಬೊಟಿಕ್‌ ತಂತ್ರಜ್ಞಾನದ ಸೇವೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಿದೆ.

    ಸಾಹಸಕ್ಕೆ ಸಿದ್ಧವಾಗಿರುವವರು ಇವರೇ..
    ಗ್ರೂಪ್‌ ಕ್ಯಾಪ್ಟನ್‌ ಪ್ರಶಾಂತ್‌ ಬಾಲಕೃಷ್ಣನ್‌ ನಾಯರ್‌:
    ಪ್ರಶಾಂತ್‌ ಬಾಲಕೃಷ್ಣನ್‌ ನಾಯರ್‌ 1976ರ ಆಗಸ್ಟ್‌ 26ರಂದು ಕೇರಳದ ತಿರುವಾಳಿಯಾಡ್‌ನಲ್ಲಿ ಜನಿಸಿದರು. 1998ರ ಡಿಸೆಂಬರ್‌ 19ರಂದು ಐಎಎಫ್‌ ಫೈಟರ್‌ ಜೆಟ್‌ ಪೈಲಟ್‌ ಆಗಿ ವೃತ್ತಿ ಆರಂಭಿಸಿದರು. ʻಟೆಸ್ಟ್‌ ಪೈಲಟ್‌ ಮತ್ತು ಕ್ಯಾಟ್‌ ಎʼ ಹಾರಾಟ ತರಬೇತುರಾರರಾಗಿರುವ ಪ್ರಶಾಂತ್‌ 3,000 ಗಂಟೆಗಳ ಒಟ್ಟು ವಿಮಾನ ಚಾಲನೆಯ ಅನುಭವ ಹೊಂದಿದ್ದಾರೆ. ಏರ್ಫೋರ್ಸ್‌ ಅಕಾಡೆಮಿಯಿಂದ ʻಸ್ಕ್ವಾಡ್‌ ಆಫ್‌ ಆನರ್‌ʼ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪಾಕ್‌ ವಶದಲ್ಲಿದ್ದ ‘ಸಿಂಗಂ’ ವಿಂಗ್‌ ಕಮಾಂಡರ್‌ ತಾಯ್ನಾಡಿಗೆ ವಾಪಸ್‌ – ಭಾರತದ ಗೆಲುವಿಗೆ 5ರ ಸಂಭ್ರಮ

    ಗ್ರೂಪ್‌ ಕ್ಯಾಪ್ಟನ್‌ ಅಜಿತ್‌ ಕೃಷ್ಣನ್‌:
    ಅಜಿತ್‌ ಕೃಷ್ಣನ್‌ 1982ರ ಏಪ್ರಿಲ್‌ 19ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. 2003ರ ಜೂನ್‌ 21 ರಂದು ಐಎಎಫ್‌ ಯುದ್ಧವಿಮಾನಗಳ ಪೈಲಟ್‌ ಆಗಿ ವೃತ್ತಿ ಆರಂಭಿಸಿದ ಅಜಿತ್‌ ಸದ್ಯ ಟೆಸ್ಟ್‌ ಪೈಲಟ್‌ ಮತ್ತು ಹಾರಾಟ ತರಬೇತುದಾರರಾಗಿದ್ದಾರೆ. ಸುಮಾರು 2,900 ಗಂಟೆಗಳ ವಿಮಾನ ಚಾಲನೆ ಮಾಡಿದ ಅನುಭವ ಹೊಂದಿದ್ದಾರೆ. ರಾಷ್ಟ್ರಪತಿ ಚಿನ್ನದ ಪದಕ ಪಡೆದಿರುವುದು ಇವರ ಹೆಗ್ಗಳಿಕೆ.

    ಗ್ರೂಪ್‌ ಕ್ಯಾಪ್ಟನ್‌ ಅಂಗದ್‌ ಪ್ರತಾಪ್‌:
    ಅಂಗದ್‌ ಪ್ರತಾಪ್‌ 1982ರ ಜುಲೈ 17 ರಂದು ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ಜನಿಸಿದರು. ಸದ್ಯ ಫ್ಲೈಯಿಂಗ್‌ ತರಬೇತುದಾರರು ಮತ್ತು ಟೆಸ್ಟ್‌ ಪೈಲಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 2,000 ಸಾವಿರ ಗಂಟೆಗಳ ವಿಮಾನ ಚಾಲನೆ ಅನುಭವ ಹೊಂದಿದ್ದಾರೆ.

    ವಿಂಗ್‌ ಕಮಾಂಡರ್‌ ಶುಭಾಂಶು ಶುಕ್ಲಾ:
    1985ರ ಅಕ್ಟೋಬರ್‌ 10ರಂದು ಉತ್ತರ ಪ್ರದೇಶದ ಲಕ್ನೋನಲ್ಲಿ ಜನಿಸಿದ ಶುಕ್ಲಾ ಅವರು 2006ರ ಏಪ್ರಿಲ್‌ 17ರಂದಯು ವಾಯುಪಡೆಯ ಫೈಟರ್‌ ಜೆಟ್‌ ಪೈಲಟ್‌ ಆಗಿ ನೇಮಕಗೊಂಡರು. ಸದ್ಯ ಫೈಟರ್‌ ಕಾಂಬ್ಯಾಟ್‌ ಲೀಡರ್‌ ಮತ್ತು ಟೆಸ್ಟ್‌ ಪೈಲಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 2,000 ಗಂಟೆಗಳ ವಿಮಾನ ಚಾಲನೆ ಅನುಭವ ಹೊಂದಿದ್ದಾರೆ.

    ಮಾಹಿತಿ ಸಂಗ್ರಹ: ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

  • ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ಹೈದರಾಬಾದ್‌: ತೆಲಂಗಾಣದ ಮೇದಕ್‌ ಜಿಲ್ಲೆಯ ತೂಪ್ರಾನ್‌ನ ರಾವೆಲ್ಲಿ ಗ್ರಾಮದಲ್ಲಿ ತರಬೇತಿ ವಿಮಾನವೊಂದು (Trainer Aircraft) ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ (IAF) ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.

    ಹೈದರಾಬಾದ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ (AFA) ವಾಡಿಕೆಯ ತರಬೇತಿಗಾಗಿ Pilatus PC 7 Mk-II ವಿಮಾನ ಟೇಕಾಫ್ ಆಗಿತ್ತು. ಈ ವೇಳೆ ಅಪಘಾತ ಸಂಭವಿಸಿ ವಿಮಾನದಲ್ಲಿದ್ದ ತರಬೇತುದಾರ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವನ್ನಪ್ಪಿದ್ದಾರೆ. ಸದ್ಯ ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಲೋಕ ಸಮರದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ಸನ್ನು ಧೂಳಿಪಟ ಮಾಡ್ತೇವೆ: ವಿಜಯೇಂದ್ರ

    ಪಿಲಾಟಸ್ PC 7 Mk-II ವಿಮಾನವು ಒಂದೇ ಎಂಜಿನ್‌ ಒಳಗೊಂಡ ತರಬೇತಿ ವಿಮಾನವಾಗಿದೆ. IAF ಪೈಲಟ್‌ಗಳ ತರಬೇತಿಗಾಗಿ ಇದನ್ನು ಬಳಸಲಾಗುತ್ತದೆ. ಸ್ವಿಟ್ಜರ್‌ಲೆಂಡಿನ ಪಿಲಾಟಸ್ ಸಂಸ್ಥೆಯು ಇದನ್ನು ವಿನ್ಯಾಸಗೊಳಿಸಿ, ತಯಾರಿಸಲಿದೆ. ಈ ವಿಮಾನವನ್ನು ಏರೋಬ್ಯಾಟಿಕ್ಸ್, ಯುದ್ಧತಂತ್ರ ಮತ್ತು ರಾತ್ರಿ ಹಾರಾಟ ಸೇರಿದಂತೆ ಎಲ್ಲಾ ಮೂಲಭೂತ ತರಬೇತಿ ಕಾರ್ಯಗಳಿಗೆ ಬಳಸಲಾಗುತ್ತದೆ. ಸರಿಸುಮಾರು 1,330 ಕೆ.ಜಿ ತೂಕ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.

    ಅಪಘಾತದಲ್ಲಿ ಮೃತಪಟ್ಟ ಪೈಲಟ್‌ಗಳ ಕುಟುಂಬಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಾಂತ್ವನ ಹೇಳಿದ್ದಾರೆ. ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖವಾಗಿದೆ. ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಈ ದುರಂತ ಸಮಯದಲ್ಲಿ, ನಾವು ಅವರ ಕುಟುಂಬಗಳೊಂದಿಗೆ ಇರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 4 ರಾಜ್ಯಗಳ ವಿಚಿತ್ರ ಫಲಿತಾಂಶ ಜನರಿಗೆ ಆಘಾತವುಂಟು ಮಾಡಿದೆ: ಮಾಯಾವತಿ