Tag: ಭಾರತೀಯ ರೈಲ್ವೇ ಇಲಾಖೆ

  • ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತ – ಪ್ರಧಾನಿ ಮೋದಿ ಸೇರಿ ಗಣ್ಯರ ವಿಷಾದ

    ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತ – ಪ್ರಧಾನಿ ಮೋದಿ ಸೇರಿ ಗಣ್ಯರ ವಿಷಾದ

    ನವದೆಹಲಿ: ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Delhi Railway Station Stampede) 18 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು (Narendra Modi) ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಿಂದ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಬಗ್ಗೆ ಸಂತಾಪವಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ನಟ ಚರಿತ್ ಬಾಲಪ್ಪ ವಿರುದ್ಧ ಮತ್ತೊಂದು ಕೇಸ್; ಸುಲಿಗೆ, ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು

    ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸಹ ಸಂತಾಪ ಸೂಚಿಸಿದ್ದಾರೆ. ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಮನದಾಳದಿಂದ ಸಂತಾಪ ಸೂಚಿಸುತ್ತಿದ್ದೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ ಜಗದೀಪ್ ಧನಕರ್, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಅನೇಕರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : ಡಾಲಿ ಧನಂಜಯ್ ಕಲ್ಯಾಣ ವೈಭೋಗ

    ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕುಂಭಮೇಳಕ್ಕೆ ಹೊರಟಿದ್ದ 18 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 11 ಮಹಿಳೆಯರು ಹಾಗೂ 4 ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ಎಚ್‍ಡಿಡಿ ಶಂಕುಸ್ಥಾಪನೆಗೈದಿದ್ದ ದೇಶದ ಉದ್ದದ ರೈಲು, ಸೇತುವೆ ಮುಂದಿನ ವಾರ ಲೋಕಾರ್ಪಣೆ!

    ಎಚ್‍ಡಿಡಿ ಶಂಕುಸ್ಥಾಪನೆಗೈದಿದ್ದ ದೇಶದ ಉದ್ದದ ರೈಲು, ಸೇತುವೆ ಮುಂದಿನ ವಾರ ಲೋಕಾರ್ಪಣೆ!

    – 32 ಮೀಟರ್ ಎತ್ತರದಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ನಿರ್ಮಾಣ
    – 37 ಗಂಟೆಯ ದೂರ ಇನ್ನು 3 ಗಂಟೆಯಲ್ಲಿ ಕ್ರಮಿಸಬಹುದು
    – ಏಷ್ಯಾದ 2ನೇ ಉದ್ದದ ಸೇತುವೆ

    ದಿಸ್ಪುರ: ಭಾರತದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 25 ರಂದು ಉದ್ಘಾಟಿಸಲಿದ್ದಾರೆ.

    ಅಸ್ಸಾಂನ ದಿಬ್ರೂಗಡದ ಬಳಿ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಭಾರತೀಯ ರೈಲ್ವೇ ಇಲಾಖೆ ನಿರ್ಮಿಸಿದ್ದು, ಏಷ್ಯಾದ 2ನೇ ಅತ್ಯಂತ ಉದ್ದದ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.

    ಅಸ್ಸಾಂನ ದಿಬ್ರೂಗಡದಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಒಟ್ಟು 4.94 ಕಿಮೀ ಉದ್ದವಿದೆ. ಈ ಸೇತುವೆ ನಿರ್ಮಾಣದಿಂದ ಚೀನಾ ಗಡಿಯಲ್ಲಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲ ಪಡಿಸಲು ಸಹಾಯಕವಾಗಲಿದೆ. ಅಲ್ಲದೇ ರೈಲ್ವೇ ಹಾಗೂ ರಸ್ತೆ ಸೇತುವೆ ಎರಡು ಹೊಂದಿರುವುದರಿಂದ ಪ್ರಯಾಣಿಕರ ಸಮಯವೂ ಉಳಿತಾಯವಾಗಲಿದೆ.

    ಬ್ರಹ್ಮಪುತ್ರಾ ನದಿಯ ನೀರಿನ ಮಟ್ಟದಿಂದ 32 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಸೇತುವೆಯ ಮೇಲ್ಭಾಗದಲ್ಲಿ ಮೂರು ಪಥಗಳ ರಸ್ತೆ ಹಾಗೂ ಕೆಳಭಾಗದಲ್ಲಿ ಎರಡು ಹಳಿಗಳ ರೈಲು ಮಾರ್ಗ ನಿರ್ಮಿಸಲಾಗಿದೆ.

    ಯೋಜನೆ ಹಿನ್ನೆಲೆ:
    1997 ರಲ್ಲಿ ಆಗಿನ ಪ್ರಧಾನಿಯಾಗಿದ್ದ ಎಚ್.ಡಿ ದೇವೇಗೌಡ ಅವರು ಸೇತುವೆ ನಿರ್ಮಾಣಕ್ಕಾಗಿ ಶಿಲಾನ್ಯಾಸ ಮಾಡಿದ್ದರು. 2002 ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ 7 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಸದ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರದ ಅವಧಿಯಲ್ಲಿ ಯೋಜನೆ ಪೂರ್ಣಗೊಂಡಿದೆ.

    ಯೋಜನೆಯ ನಿರ್ಮಾಣದ ವೇಗವನ್ನು ಹೆಚ್ಚಿಸಲು 2007 ರಲ್ಲಿ ಅಂದಿನ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿತ್ತು. ಆದರೂ ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಅಂದು 2018 ಮಾರ್ಚ್ ಪೂರ್ಣಗೊಳಿಸುವ ಗಡುವು ಹಾಕಿಕೊಳ್ಳಲಾಗಿತ್ತು.

    ಅನುಕೂಲ ಹೇಗೆ?
    ಸೇತುವೆ ನಿರ್ಮಾಣದಿಂದ ಪ್ರಯಾಣದ ಈ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಸಮಯ ಉಳಿತಾಯ ಆಗಲಿದೆ. ಈ ಮೊದಲು ದಿಬ್ರೂಗಡದಿಂದ ಅರುಣಾಚಲ ಪ್ರದೇಶಕ್ಕೆ ಹೋಗಲು ಗುವಾಹಟಿ ಮೂಲಕ ಸಾಗಬೇಕಿತ್ತು. ಈ ಮಾರ್ಗದ 500 ಕಿಮೀ ಆಗಿತ್ತು. ಆದರೆ ಸೇತುವೆ ನಿರ್ಮಾಣದಿಂದ ಎರಡು ನಗರಗಳ ಪ್ರಯಾಣ ದೂರ 100 ಕಿಮೀ ಗಿಂತ ಕಡಿಮೆ ಆಗಲಿದೆ. ಅಲ್ಲದೇ ದಿಬ್ರೂಗಡದಿಂದ ದೆಹಲಿಗೆ ಪ್ರಯಾಣದ ಸಮಯ (ಗುವಾಹಟಿ ಮೂಲಕ) 37 ಗಂಟೆ. ಆದರೆ ಸೇತುವೆ ಮೂಲಕ ಕೇವಲ 3 ಗಂಟೆಯಲ್ಲಿ ಸಾಗಬಹುದಾಗಿದೆ.

    ರೈಲ್ವೇ ಇಲಾಖೆ ಸೇತುವೆ ಗುಣಮಟ್ಟ ಪರಿಶೀಲನೆ ನಡೆಸಿದ ಬಳಿಕ ಯೋಜನೆಗೆ ಅನುಮೋದನೆ ನೀಡಲಿದೆ. ಪ್ರಮುಖವಾಗಿ ಈ ಸೇತುವೆ ಈಶಾನ್ಯ ರಾಜ್ಯಗಳಲ್ಲಿ ದೇಶದ ಸೈನ್ಯಕ್ಕೆ ಹೆಚ್ಚಿನ ಬಲ ತುಂಬಲಿದೆ. ಈ ಮೊದಲು ನದಿಯನ್ನು ಬೋಟ್ ಮೂಲಕ ದಾಟಲು 1 ಗಂಟೆ ಸಮಯ ಬೇಕಾಗಿತ್ತು. ಆದರೆ ಆಗ ರಸ್ತೆ ಮಾರ್ಗದ ಮೂಲಕ ಕೇವಲ 5 ನಿಮಿಷದಲ್ಲಿ ದಾಟಬಹುದಾಗಿದೆ. ಉಳಿದಂತೆ ಆರಂಭದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಆರಂಭದಲ್ಲಿ 1,767 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಆದರೆ ಸದ್ಯ ಸೇತುವೆ ಅಂತಿಮ ಗೊಳ್ಳುವ ವೇಳೆಗೆ ಯೋಜನೆ ವೆಚ್ಚ ಸುಮಾರು 6 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv