Tag: ಭಾರತೀಯ ರೈಲ್ವೆ

  • ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

    ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

    – ಟಿಕೆಟ್‌ಗೆ ಅನುಸಾರವಾಗಿ ಲಗೇಜ್‌ ಪ್ರಮಾಣ ನಿಗದಿ
    – ಆದಾಯ ಹೆಚ್ಚಳಕ್ಕೆ ರೈಲ್ವೆ ಇಲಾಖೆ ಪ್ಲ್ಯಾನ್‌

    ಬೆಂಗಳೂರು: ಬೇರೊಂದು ಊರಿಗೆ ಪ್ರಯಾಣ ಮಾಡಬೇಕು ಅಂದುಕೊಂಡಿರುವವರು ಹೆಚ್ಚಾಗಿ ಅಗ್ಗದ ಮತ್ತು ಆರಾಮದಾಯಕವಾದ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ಹಲವಾರು ವಸ್ತುಗಳನ್ನು, ಲಗೇಜ್‌ಗಳನ್ನು ಹೊತ್ತೊಯ್ಯಬಹುದಾಗಿತ್ತು. ಆದ್ರೆ ಈಗ ಅದಕ್ಕೆ ಭಾರತೀಯ ರೈಲ್ವೆ (Indian Railways) ಇಲಾಖೆ ಬ್ರೇಕ್‌ ನೀಡಲು ಮುಂದಾಗಿದೆ.

    ಯೆಸ್‌. ಆದಾಯ ಹೆಚ್ಚಳಕ್ಕೆ ಮುಂದಾಗಿರುವ ಭಾರತೀಯ ರೈಲ್ವೆ ಇಲಾಖೆ ಶೀಘ್ಯದಲ್ಲೇ ಹೊಸ ರೂಲ್ಸ್‌ ಜಾರಿಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದರಂತೆ ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರಿ ಮೊತ್ತವನ್ನ ಪಾವತಿಸಬೇಕಾಗುತ್ತದೆ. ವಿಮಾನಗಳ ಮಾದರಿಯಲ್ಲಿಯೇ ರೈಲಿನಲ್ಲೂ ಲಗೇಜ್‌ ಸಾಗಿಸುವಂತೆ ಮಾಡಲು ರೈಲ್ವೆ ಇಲಾಖೆ ಈ ನಿಮಯ ಜಾರಿಗೆ ತರಲು ಮುಂದಾಗಿದೆ. ಕೋಚ್‌ ಶ್ರೇಣಿಗಳ ಆಧಾರದ ಮೇಲೆ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರ ದರ ನಿಗಡಿ ಮಾಡಲಿದೆ. ಹಾಗಾದರೆ ಎಷ್ಟು ಕೆ.ಜಿ ಲಗೇಜ್‌ಗೆ ಎಷ್ಟು ಹಣ ಪಾವತಿ ಮಾಡಬೇಕು ಗೊತ್ತಾ? ಮುಂದೆ ಓದಿ…

    AI Image
    AI Image

    ಹೊಸ ನಿಯಮಗಳ ಪ್ರಕಾರ, ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಟಿಕೆಟ್‌ಗೆ ಅನುಗುಣವಾಗಿ ಲಗೇಜ್‌ಗೆ ದರ ನಿಗದಿ ಮಾಡಲಾಗುತ್ತದೆ. ನಿಯಮಿತಕ್ಕಿಂತಲೂ ಹೆಚ್ಚಿನ ತೂಕದ ಲಗೇಜ್‌ ಇದ್ದರೆ, ಉಳಿದ ಲಗೇಜ್‌ಗೆ ಹೆಚ್ಚುವರು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

    ಇದಕ್ಕಾಗಿ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ವೇಯ್ಟ್‌ ಚೆಕಿಂಗ್‌ ಮಿಷಿನ್ ಕೂಡ ಇರಿಸಲಾಗುತ್ತದೆ. ಇದರಲ್ಲಿ ಲಗೇಜ್‌ ತೂಕ ಪರಿಶೀಲಿಸಿದ ಬಳಿಕವೇ ರೈಲು ಪ್ರಯಾಣಕ್ಕೆ ಅವಕಾಶ ಇರಲಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದ್ದು, ಬಳಿಕ ದೇಶಾದ್ಯಂತ ರೈಲು ನಿಲ್ದಾಣದಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ.

  • ಏರ್‌ಪೋರ್ಟ್ ಮಾದರಿಯಲ್ಲೇ ಇನ್ಮುಂದೆ ರೈಲಿಗೂ ಲಗೇಜ್ ಪಾಲಿಸಿ

    ಏರ್‌ಪೋರ್ಟ್ ಮಾದರಿಯಲ್ಲೇ ಇನ್ಮುಂದೆ ರೈಲಿಗೂ ಲಗೇಜ್ ಪಾಲಿಸಿ

    – ಪ್ರಯಾಗರಾಜ್, ಕಾನ್ಪುರ, ಮಿರ್ಜಾಪುರ್, ಅಲೀಗಢ ರೈಲು ನಿಲ್ದಾಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ನಿರ್ಧಾರ

    ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಪಾಲಿಸುವಂತೆ ಇದೀಗ ರೈಲು ನಿಲ್ದಾಣಗಳಲ್ಲಿಯೂ ಕೂಡ ಲಗೇಜ್ ಬ್ಯಾಗ್‌ಗೆ ನಿಯಮಗಳನ್ನು ಜಾರಿಗೆ ತರಲು ಭಾರತೀಯ ರೈಲ್ವೆ ನಿರ್ಧರಿಸಿದೆ.

    ಮೂಲಗಳ ಪ್ರಕಾರ, ಪ್ರಯಾಣಿಕರು ತಮ್ಮ ಲಗೇಜ್‌ನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗೆ ತೆಗೆದುಕೊಂಡು ಹೋಗುವ ಮುನ್ನ ಎಲೆಕ್ಟಾನಿಕ್ ತೂಕ ಮಾಡುವ ಯಂತ್ರದಲ್ಲಿ ಚೆಕ್ ಮಾಡಿಸಿಕೊಂಡು ಹೋಗಬೇಕು. ರೈಲ್ವೆ ಇಲಾಖೆಯಿಂದ ನಿಗದಿಗೊಳಿಸಿದ ತೂಕದ ಮಿತಿಯಲ್ಲಿಯೇ ಲಗೇಜ್‌ಗಳನ್ನು ಕೊಂಡೊಯ್ಯಬೇಕು. ಒಂದು ವೇಳೆ ನಿಗದಿತ ತೂಕ್ಕಕಿಂತ ಹೆಚ್ಚಾದಾಗ ಅಥವಾ ಕಡಿಮೆ ತೂಕದ ದೊಡ್ಡ ಸಾಮಾನುಗಳನ್ನು ಕೊಂಡೊಯ್ಯುವುದಾದರೆ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಬಿಬಿಎಂಪಿಯ ಪಂಚ ಪಾಲಿಕೆಗೆ ಆಯುಕ್ತರ ನೇಮಕ – ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಅಂಗೀಕಾರ

    ರೈಲಿನಲ್ಲಿ ಕೊಂಡೊಯ್ಯುವ ತೂಕದ ಮಿತಿಯು ರೈಲಿನ ದರ್ಜೆಗಳ ಅನುಸಾರವಾಗಿ ಬದಲಾಗುತ್ತದೆ. ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಇನ್ನುಳಿದಂತೆ ಸಾಮಾನ್ಯ ದರ್ಜೆಯಲ್ಲಿ 35 ಕೆ.ಜಿ ಕೊಂಡೊಯ್ಯಬಹುದಾಗಿದೆ.

    ಇನ್ನೂ ಕೆಲವು ಪುನರ್ ಅಭಿವೃದ್ಧಿಗೊಂಡ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ. ಬಟ್ಟೆ, ಪಾದರಕ್ಷೆ, ಎಲೆಕ್ಟಾನಿಕ್ಸ್‌ ಉಪಕರಣಗಳು ಸೇರಿದಂತೆ ಪ್ರಯಾಣಿಕರಿಗೆ ಅನೂಕೂಲವಾಗುವಂತಹ ವಸ್ತುಗಳು ನಿಲ್ದಾಣಗಳಲ್ಲಿಯೇ ಸಿಗಬೇಕು ಹಾಗೂ ಈ ಮೂಲಕ ರೈಲ್ವೆ ಆದಾಯವೂ ಹೆಚ್ಚಾಗುತ್ತದೆ ಎಂಬ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಂಡಿದೆ. ಜೊತೆಗೆ ಇದರಿಂದ ರೈಲು ನಿರ್ಧಾರವೂ ವಿಮಾನ ನಿಲ್ದಾಣದ ಅನುಭವ ನೀಡುತ್ತದೆ.

    ಆರಂಭದಲ್ಲಿ ಪ್ರಯಾಗ್‌ರಾಜ್ ಜಂಕ್ಷನ್, ಪ್ರಯಾಗರಾಜ್ ಛೋಕಿ, ಸುಬೇದರ್‌ಗಂಜ್, ಕಾನ್ಪುರ್ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಅಲಿಗಢ್ ಜಂಕ್ಷನ್, ಗೋವಿಂದಪುರಿ ಮತ್ತು ಇಟಾವಾ ಸೇರಿದಂತೆ ಎನ್‌ಸಿಆರ್ ವಲಯದ ಅಡಿಯಲ್ಲಿ ಬರುವ ರೈಲು ನಿಲ್ದಾಣಗಳಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ತೂಕ ಮಾಡಿಸಿದ ನಂತರವೇ ಪ್ಲಾಟ್‌ಫಾರ್ಮ್‌ಗೆ ತೆರಳಲು ಅನುಮತಿಯಿರುತ್ತದೆ.

    ಇನ್ನೂ ಪ್ರಯಾಣಿಕರ ಬಳಿ ಟಿಕೆಟ್ ಇದ್ದರೆ ಮಾತ್ರ ಪ್ಲಾಟ್‌ಫಾರ್ಮ್‌ಗೆ ತೆರಳಬಹುದು, ಪ್ರಯಾಣಿಕರಲ್ಲದೇ ಇದ್ದರೆ ಪ್ಲಾಟ್‌ಫಾರ್ಮ್ ಟಿಕೆಟ್ ಇರಲೇಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದ್ದು, 2026ರ ಡಿಸೆಂಬರ್‌ನಿಂದು ಇದು ಅನ್ವಯಿಸಲಿದೆ ಎಂದು ಮಾಹಿತಿ ನೀಡಿದೆ.ಇದನ್ನೂ ಓದಿ: ಅಪ್ಪುಗೆ ಮಾಡಿದ ದ್ವಿತ್ವ ಕಥೆ ವೆಬ್ ಸಿರೀಸ್ ಆಗಲಿದೆ: ಪವನ್‌ಕುಮಾರ್

    +

  • ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 8,280 ಎಕರೆ ಭೂಸ್ವಾಧೀನ ಬಾಕಿ – ಅಶ್ವಿನಿ ವೈಷ್ಣವ್

    ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 8,280 ಎಕರೆ ಭೂಸ್ವಾಧೀನ ಬಾಕಿ – ಅಶ್ವಿನಿ ವೈಷ್ಣವ್

    ನವದೆಹಲಿ: ಕರ್ನಾಟಕದಲ್ಲಿ (Karnataka) ರೈಲ್ವೆ ಯೋಜನೆಗಳಿಗೆ 8,280 ಎಕರೆ ಭೂಸ್ವಾಧೀನ ಬಾಕಿ ಇದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದರು.

    ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು (Raichuru) ಸಂಸದ ಜಿ.ಕುಮಾರ್ ನಾಯ್ಕ್ (G.Kumar Naik) ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾಲ್ಕು ಪ್ರಮುಖ ಯೋಜನೆಗಳಿಗೆ ಒಂದೇ ಒಂದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ರಾಜ್ಯದಲ್ಲಿ 25 ರೈಲ್ವೆ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. 3,264 ಕಿ.ಮೀ. ಉದ್ದದ ಯೋಜನೆಗಳ ಪೈಕಿ ಈವರೆಗೂ 1,394 ಕಿ.ಮೀ. ಪೂರ್ಣಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಯೋಜನೆಗಳ ಅನುಷ್ಠಾನ ತಡವಾಗಿದೆ. ಶೇ.37ರಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಸ್ಪೇಸ್ ಪಾರ್ಕ್ ಸೇರಿ ಹಲವು ಯೋಜನೆಗಳಿಗೆ ವಿಶೇಷ ಪ್ರೋತ್ಸಾಹ ನೀತಿ – ಎಂ.ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ಮಾತುಕತೆ

    ಹೆಜ್ಜಾಲ-ಚಾಮರಾಜನಗರ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನ ನೀಡಬೇಕಿತ್ತು. ಆದಾಗ್ಯೂ, ಕರ್ನಾಟಕ ಸರ್ಕಾರ ಇದೀಗ ನಿಲುವು ಬದಲಿಸಿದ್ದರಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು.

    ನೈರುತ್ಯ ವಲಯದಲ್ಲಿ ರೈಲ್ವೆ ಜಾಲ ಕಡಿಮೆ:
    ದೇಶದಲ್ಲಿ 17 ರೈಲ್ವೆ ವಲಯಗಳಿವೆ. ಒಟ್ಟು ರೈಲ್ವೆ ಜಾಲ 69,181 ಕಿ.ಮೀ. ಅನ್ನು ಬೇರೆ ವಲಯಗಳಿಗೆ ಹೋಲಿಸಿದರೆ ನೈರುತ್ಯ ವಲಯದಲ್ಲಿ ರೈಲ್ವೆ ಜಾಲ ಕಡಿಮೆ. ಇಲ್ಲಿ 3,692 ಕಿ.ಮೀ. ರೈಲ್ವೆ ಜಾಲ ಇದೆ ಎಂದರು.

    ಯಾವುದೇ ಪ್ರದೇಶದಲ್ಲಿನ ರೈಲ್ವೆ ಜಾಲವು ಆ ಪ್ರದೇಶದ ಜನಸಂಖ್ಯಾ ಸಾಂದ್ರತೆ, ಭೂಪ್ರದೇಶ, ಭೌಗೋಳಿಕ ಲಕ್ಷಣಗಳು ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ರೈಲ್ವೆ ಸಾಂದ್ರತೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ರಾಜ್ಯದಲ್ಲಿ ದೀಪಾವಳಿ ಧಮಾಕ, ಕಾಂಗ್ರೆಸ್‌ನಲ್ಲಿ ಕ್ರಾಂತಿ : ವಿಜಯೇಂದ್ರ

  • PublicTV Explainer: ರೈಲಿಗೂ ಬಂತು ATM; ಇನ್ಮುಂದೆ ರೈಲಲ್ಲೇ ಹಣ ಡ್ರಾ ಸಾಧ್ಯ – ಕರ್ನಾಟಕಕ್ಕೂ ಬರುತ್ತಾ?

    PublicTV Explainer: ರೈಲಿಗೂ ಬಂತು ATM; ಇನ್ಮುಂದೆ ರೈಲಲ್ಲೇ ಹಣ ಡ್ರಾ ಸಾಧ್ಯ – ಕರ್ನಾಟಕಕ್ಕೂ ಬರುತ್ತಾ?

    ಗತ್ತಿನಲ್ಲೇ ಅತಿ ದೊಡ್ಡ ರೈಲು ಸಂಪರ್ಕ ಜಾಲವನ್ನು ಹೊಂದಿರುವ ವ್ಯವಸ್ಥೆಯೆಂದರೆ ಅದು ಭಾರತೀಯ ರೈಲ್ವೆ (Indian Railway). ಈ ವಲಯ ಹಲವು ಸುಧಾರಿತ ಕ್ರಮಗಳೊಂದಿಗೆ ಪ್ರಯಾಣಿಕ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಮನುಷ್ಯ ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕುಂತಲ್ಲಿ ಎಲ್ಲಾ ಸೌಕರ್ಯಗಳು ಕೈಗೆ ಸಿಗುವಂತಿದ್ದರೆ ಆ ಕಡೆ ಹೆಚ್ಚು ಒಲವು ತೋರುವುದುಂಟು. ಇದನ್ನರಿತು ರೈಲ್ವೆಯು ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ರೈಲಿನಲ್ಲೇ ಎಟಿಎಂ (ATM on Train) ಸ್ಥಾಪಿಸಿ ಜನರ ಕೈಗೆ ಸುಲಭವಾಗಿ ಹಣ ಸಿಗುವಂತೆ ಮಾಡಿದೆ. ರೈಲ್ವೆಯ ಹೊಸ ಕ್ರಮದಿಂದ ಪ್ರಯಾಣಿಕರು ಖುಷಿಪಟ್ಟಿದ್ದಾರೆ.

    ಭಾರತಕ್ಕೆ ರೈಲು ಬಂದಿದ್ಯಾವಾಗ?
    1853 ರಲ್ಲಿ ಭಾರತಕ್ಕೆ ಮೊದಲ ಬಾರಿಗೆ ರೈಲು ವ್ಯವಸ್ಥೆ ಬಂದಿತು. ಮುಂಬೈ (ಆಗ ಬಾಂಬೆ) ಮತ್ತು ಥಾಣೆ ನಡುವೆ ಮೊದಲ ಪ್ರಯಾಣಿಕ ರೈಲು ಓಡಾಟ ಆರಂಭಿಸಿತು. ಆರಂಭದಲ್ಲಿ, ಪ್ರಮುಖ ಬಂದರು ನಗರಗಳನ್ನು ಸಂಪರ್ಕಿಸುವುದು, ಸರಕುಗಳ ವ್ಯಾಪಾರ ಮತ್ತು ಸಾಗಣೆಯನ್ನು ಸುಗಮಗೊಳಿಸುವತ್ತ ಗಮನ ಹರಿಸಲಾಯಿತು. ವರ್ಷಗಳು ಕಳೆದಂತೆ ಈ ಜಾಲವು ವಿಸ್ತರಿಸಿತು. ವಿವಿಧ ಪ್ರದೇಶಗಳನ್ನು ಸಂಪರ್ಕಿಸಲು ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದನ್ನೂ ಓದಿ: ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!

    ದೇಶದಲ್ಲಿ ಎಷ್ಟು ರೈಲುಗಳಿವೆ?
    ಭಾರತದಲ್ಲಿ 7,349 ನಿಲ್ದಾಣಗಳು, 13,169 ಪ್ಯಾಸೆಂಜರ್ ರೈಲುಗಳು, 8,479 ಸರಕು ರೈಲುಗಳಿವೆ. 2.3 ಕೋಟಿ ಪ್ರಯಾಣಿಕರಿಗೆ ಮತ್ತು 7,349 ನಿಲ್ದಾಣಗಳಿಂದ ಪ್ರತಿದಿನ 30 ಲಕ್ಷ ಟನ್ ಸರಕು ಸಾಗಣೆಗೆ ಸೇವೆ ಸಲ್ಲಿಸುತ್ತಿವೆ. ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ರಾಜ್ಯದಲ್ಲಿ ಪಟ್ಟಿಯಲ್ಲಿ ಸೇರಿಸದ ಕೆಲವು ನಿಲ್ದಾಣಗಳಿವೆ. ಇದರಲ್ಲಿ ಸಣ್ಣ ನಿಲ್ದಾಣಗಳು ಮತ್ತು ನಿರ್ದಿಷ್ಟ ರೈಲು ಮಾರ್ಗಗಳಲ್ಲಿರುವ ನಿಲ್ದಾಣಗಳು ಸೇರಿರಬಹುದು. ಸಾಮಾನ್ಯ ನಿಲ್ದಾಣಗಳು ಮತ್ತು ಸಣ್ಣ ನಿಲ್ದಾಣಗಳು ಸೇರಿದಂತೆ ಒಟ್ಟು ನಿಲ್ದಾಣಗಳ ಸಂಖ್ಯೆ ಸುಮಾರು 262 ಎಂದು ಅಂದಾಜಿಸಲಾಗಿದೆ.

    ದೇಶದಲ್ಲೇ ಮೊದಲು
    ದೇಶದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು ರೈಲಿನೊಳಗೆ ಎಟಿಎಂ ಯಂತ್ರವನ್ನು ಸ್ಥಾಪಿಸಿದೆ. ಇನ್ಮುಂದೆ ರೈಲಿನಲ್ಲೂ ಎಟಿಎಂ ಮೂಲಕ ಹಣ ಪಡೆಯಬಹುದು. ಹೌದು, ಮುಂಬೈ-ಮನಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಯಂತ್ರ ಅಳವಡಿಸಲಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ತನ್ನ 172ನೇ ವರ್ಷಾಚರಣೆಯ ಪ್ರಯುಕ್ತ ಈ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಗಮಗೊಳಿಸಲು ಒಂದು ಹೆಜ್ಜೆ ಮುಂದಿಟ್ಟಿದೆ. ಕೇಂದ್ರ ರೈಲ್ವೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸೃಜನಶೀಲ ಕಾರ್ಯಕ್ಕೆ ಕೈಜೋಡಿಸಿವೆ. ಸಾರಿಗೆಯೊಂದಿಗೆ ಆರ್ಥಿಕ ಪ್ರವೇಶವನ್ನು ಬೆಸೆಯುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಇದನ್ನೂ ಓದಿ: Explainer| ಏನಿದು ಪಬ್ಲಿಕ್‌ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು
    ಪಂಚವಟಿ ಎಕ್ಸ್‌ಪ್ರೆಸ್‌ ಮಹಾರಾಷ್ಟ್ರದ ಮನಮಾಡ್-ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಸಂಚರಿಸುವ ದೈನಂದಿನ ಅಂತರನಗರ ಸೂಪರ್ ಫಾಸ್ಟ್ ರೈಲಾಗಿದೆ. ಬಹಳಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು ಎಂದು ಹೆಸರುವಾಸಿಯಾಗಿದೆ. ಹೀಗಾಗಿ, ಪ್ರಾಯೋಗಿಕವಾಗಿ ಈ ರೈಲಿನ ಒಂದು ಬೋಗಿಯಲ್ಲಿ ಎಟಿಎಂ ಅಳವಡಿಸಲಾಗಿದೆ. ರೈಲಿನಲ್ಲೂ ಪ್ರಯಾಣಿರಿಗೆ ಸುಲಭವಾಗಿ ಹಣಕಾಸು ಸೇವೆ ಒದಗಿಸಲು ಇದು ಸಹಕಾರಿಯಾಗಿದೆ.

    ಹೇಗೆ ಕೆಲಸ ಮಾಡುತ್ತೆ?
    ರೈಲಿನ ಎಸಿ ಕೋಚ್‌ನಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ. ನಿಲ್ದಾಣಗಳು, ನಗರಗಳಲ್ಲಿನ ಇತರೆ ಎಟಿಎಂಗಳಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ಹಣ ಡ್ರಾ, ಚೆಕ್ ಬುಕ್ ಆರ್ಡರ್, ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಬಹುದು. ನಗದು ಹಿಂಪಡೆಯಲು ಪ್ರಯಾಣಿಕರು ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಬಹುದು. ಈ ಎಟಿಎಂ ಅನ್ನು ಬೋಗಿಯ ಹಿಂಭಾಗದಲ್ಲಿರುವ ಒಂದು ಕ್ಯೂಬಿಕಲ್‌ನಲ್ಲಿ ಇರಿಸಲಾಗಿದೆ. ಈ ಪ್ರದೇಶದಲ್ಲಿ ಹಿಂದೆ ತಾತ್ಕಾಲಿಕ ಪ್ಯಾಂಟ್ರಿಯಾಗಿ ಕಾರ್ಯನಿರ್ವಹಿಸಲಾಗುತ್ತಿತ್ತು. ಭದ್ರತೆ ಕಾಪಾಡಲು ಮತ್ತು ಯಾವುದೇ ಅವಘಡಗಳನ್ನು ತಪ್ಪಿಸಲು ಆ ಜಾಗವನ್ನು ಶಟರ್‌ನಿಂದ ಲಾಕ್ ಮಾಡಲಾಗಿದೆ. 24*7 ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಎಕ್ಸ್‌ಪ್ರೆಸ್‌ನ ಎಲ್ಲಾ 22 ಕೋಚ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ, ಎಲ್ಲಾ ಪ್ರಯಾಣಿಕರು ಇದನ್ನು ಬಳಸಬಹುದು.

    ಪ್ರಾಯೋಗಿಕ ಅವಧಿಯಲ್ಲಿ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಾಂತ್ರಿಕ ತೊಂದರೆಗಳ ಸಂದರ್ಭದಲ್ಲಿ ನೆರವು ನೀಡಲು ಎಸ್‌ಬಿಐ ಪ್ರತಿನಿಧಿ ಸಹ ಮಂಡಳಿಯಲ್ಲಿರುತ್ತಾರೆ. ರೈಲಿನ ವಿದ್ಯುತ್ ವ್ಯವಸ್ಥೆಗಳನ್ನು ಯಂತ್ರಕ್ಕೆ ವಿದ್ಯುತ್ ಪೂರೈಸಲು ಹೊಂದಿಸಲಾಗಿದೆ. ಯಾವುದೇ ಅಲಭ್ಯತೆಯನ್ನು ತಡೆಗಟ್ಟಲು ಬ್ಯಾಕ್‌ಅಪ್ ಸ್ಥಳದಲ್ಲಿದೆ. ಇದನ್ನೂ ಓದಿ: PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ
    ಈ ಉಪಕ್ರಮವು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ವಿಶಾಲ ಗುರಿಗಳಿಗೆ ಅನುಗುಣವಾಗಿದೆ. ಇದು ವಿಶ್ವಾದ್ಯಂತ ಡಿಜಿಟಲ್ ಬ್ಯಾಂಕಿಂಗ್ ಪ್ರವೇಶ ಮತ್ತು ಆರ್ಥಿಕ ಸೇರ್ಪಡೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ಎಟಿಎಂಗಳಿಲ್ಲದ ಸ್ಥಳಗಳಿಗೆ ಮತ್ತು ಸೀಮಿತ ಹಣಕಾಸು ಸೇವೆಗಳಿರುವ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಸಹಕಾರಿಯಾಗಿದೆ.

    ಆನ್‌ಬೋರ್ಡ್ ಎಟಿಎಂ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವಾಗ, ನಗದು ಅಗತ್ಯವಿರುವಾಗ, ಆಗಾಗ್ಗೆ ಪ್ರಯಾಣಿಕರಿಗೆ ಅನುಕೂಲಕರವಾಗಿ ಸಹಾಯ ಮಾಡುತ್ತದೆ. ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳ ಪರಿಚಯವಿಲ್ಲದ ಹಿರಿಯ ವ್ಯಕ್ತಿಗಳು ಮತ್ತು ಪ್ರಯಾಣಿಕರು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    ಮುಂದೇನು?
    ಈ ಪ್ರಯೋಗವು ಯಶಸ್ವಿಯಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಯಂತ್ರವನ್ನು ಸ್ಥಾಪಿಸಲಾಗುವುದು. ಮುಂದೆ ರಾಜಧಾನಿ, ದುರಂತೋ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ದೀರ್ಘ ಪ್ರಯಾಣ ಮತ್ತು ಪ್ರೀಮಿಯಂ ರೈಲುಗಳಲ್ಲಿ ಹಣಕಾಸು ಸೇವೆಗಳನ್ನು ಸಂಯೋಜಿಸುವ ಬಗ್ಗೆ ಭಾರತೀಯ ರೈಲ್ವೇ ಯೋಚಿಸಿದೆ. ರೈಲು ಪ್ರಯಾಣವನ್ನು ಪ್ರಯಾಣಿಕರ ಸ್ನೇಹಿಯಾಗಿ ಮಾಡಲು ಕ್ರಮ ವಹಿಸಲಿದೆ. ಇಂತಹ ಯೋಜನೆಗಳು ಡಿಜಿಟಲ್ ಬ್ಯಾಂಕಿಂಗ್ ಸಲಹೆ ಸೇವೆಗಳು ಮತ್ತು ಸ್ಮಾರ್ಟ್ ಟಿಕೆಟಿಂಗ್ ಕಿಯೋಸ್ಕ್‌ಗಳನ್ನು ಸಹ ಅಳವಡಿಸಿಕೊಳ್ಳಬಹುದು.

  • ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಿ: ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

    ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಿ: ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

    ಬೆಂಗಳೂರು: ಕೊಂಕಣ ರೈಲ್ವೆಯನ್ನು (Konkan Railway) ಭಾರತೀಯ ರೈಲ್ವೆಯಲ್ಲಿ (Indian Railways) ವಿಲೀನಗೊಳಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ (Kota Srinivas Poojary) ನೇತೃತ್ವದ ಶಾಸಕರ ತಂಡ ಸಚಿವರಿಗೆ ಮನವಿ ಸಲ್ಲಿಸಿದೆ.

    ರಾಜ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಈ ಕುರಿತು ಕ್ರಮ ಕೈಗೊಳ್ಳಲು ಸಂಬಂಧಿತರಿಗೆ ಸೂಚಿಸಿದ್ದಾಗಿ ಪ್ರಕಟಣೆ ತಿಳಿಸಿದೆ. ಜಾರ್ಜ್ ಫರ್ನಾಂಡಿಸ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಅನುಷ್ಠಾನಕ್ಕೆ ತಂದ ಮಹತ್ವದ ಕೊಂಕಣ ರೈಲ್ವೆ ಯೋಜನೆಗೆ ಇಂದಿಗೆ ಸುಮಾರು 30 ವರ್ಷಗಳು ತುಂಬುತ್ತಿದೆ. ಏಕ ಹಳಿಯ ಪ್ರಯಾಣ ಸೌಲಭ್ಯ ಇರುವುದರಿಂದ ಹೆಚ್ಚುವರಿ ರೈಲ್ವೆ ಓಡಾಡಲು ಕಷ್ಟವಾಗುತ್ತದೆ ಮತ್ತು ಕೊಂಕಣ ರೈಲ್ವೆಯಲ್ಲಿ ಅನುದಾನದ ಕೊರತೆ ಇರುವುದರಿಂದ ನೂತನ ರೈಲ್ವೆ ನಿಲ್ದಾಣಗಳೂ ಸೇರಿದಂತೆ, ಮೂಲಭೂತ ಸೌಕರ್ಯ ವ್ಯವಸ್ಥೆಗೆ ಆರ್ಥಿಕ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡುವುದರ ಮೂಲಕ ಭಾರತ ಸರ್ಕಾರದ ಅನುದಾನದ ಪಡೆದು ಕರಾವಳಿ ಪ್ರದೇಶದಲ್ಲೂ ಕೂಡ ಮಹತ್ವದ ರೈಲ್ವೆ ಯೋಜನೆ ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ನಿಯೋಗವು ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು| ನೇಣು ಬಿಗಿದುಕೊಂಡು ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆ

    ಈ ಸಂಬಂಧ ಸಚಿವರ ಜೊತೆ ನಿಯೋಗವು ಸುದೀರ್ಘವಾಗಿ ಚರ್ಚಿಸಿತು. ಭಾರತೀಯ ರೈಲ್ವೆಯಲ್ಲಿ ವಿಲೀನಗೊಂಡರೆ, ಮುಂದಿನ ದಿನಗಳಲ್ಲಿ ಸಿಂಗಲ್ ಲೈನನ್ನು ಹೊರತುಪಡಿಸಿ, ಡಬ್ಲಿಂಗ್ ಮಾಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆ ಅನುಷ್ಠಾನನವಾಗುವ ಲಭ್ಯ ಅವಕಾಶವನ್ನು ಸಚಿವರಿಗೆ ನಿಯೋಗ ಮನವರಿಕೆ ಮಾಡಿತು. ಸುದೀರ್ಘ ಚರ್ಚೆಯ ನಂತರ ಎಂ.ಬಿ ಪಾಟೀಲ್ ಸಹಮತ ವ್ಯಕ್ತಪಡಿಸಿದರು. ಅಲ್ಲದೇ, ತಕ್ಷಣವೇ ಇಲಾಖಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳಾ ರವರಿಗೆ ದೂರವಾಣಿ ಮೂಲಕ ಸೂಚನೆ ನೀಡಿ ತಕ್ಷಣ ಕಡತ ಸಿದ್ದಪಡಿಸಿ, ಮುಂದೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಭಾರತೀಯ ರೈಲ್ವೆಯಲ್ಲಿ ವಿಲೀನವಾಗುವ ಬಗ್ಗೆ ಸಂಸದರು ಮತ್ತು ಶಾಸಕರ ನಿಯೋಗಕ್ಕೆ ಭರವಸೆ ನೀಡಿದರು. ಇದನ್ನೂ ಓದಿ: CET: ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್ 15ಕ್ಕೆ ಹಿಂದೂಡಿಕೆ – ಕೆಇಎ

    ಸಂಸದ ಕೋಟರೊಂದಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಭಾಗವಹಿಸಿದ್ದರು. ಇದನ್ನೂ ಓದಿ: ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶಾಂಪೂ ಬಳಕೆಗೆ ನಿಷೇಧ

  • ಮೋದಿ ಅವಧಿಯಲ್ಲಿ ರೈಲ್ವೆ ವಲಯ ಭಾರೀ ಅಭಿವೃದ್ಧಿ ಹೊಂದಿದೆ: ಹೆಚ್‍ಡಿಡಿ

    ಮೋದಿ ಅವಧಿಯಲ್ಲಿ ರೈಲ್ವೆ ವಲಯ ಭಾರೀ ಅಭಿವೃದ್ಧಿ ಹೊಂದಿದೆ: ಹೆಚ್‍ಡಿಡಿ

    – ರೈಲ್ವೆಗೆ ಮೈಸೂರು ಮಹಾರಾಜರ ಕೊಡುಗೆ ಸ್ಮರಣೆ

    ನವದೆಹಲಿ: ಭಾರತೀಯ ರೈಲ್ವೆ (Indian Railways) ಕ್ಷೇತ್ರದ ಅಭಿವೃದ್ಧಿಗಾಗಿ ರೈಲ್ವೆ ತಿದ್ದುಪಡಿ ಮಸೂದೆ 2024ನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (H.D Deve Gowda) ಬೆಂಬಲಿಸಿದ್ದಾರೆ.

    ರಾಜ್ಯಸಭೆಯಲ್ಲಿ ಈ ಬಗ್ಗೆ ಅವರು ಮಾತನಾಡಿದರು. ಈ ವೇಳೆ, ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿಯವರ (Narendra Modi) ಸರ್ಕಾರದಲ್ಲಿ ರೈಲ್ವೇ ವಲಯದಲ್ಲಿ ಕ್ರಾಂತಿಕಾರಕ ಅಭಿವೃದ್ಧಿ ಮಾಡಲಾಗಿದೆ ಎಂದು ಶ್ಲಾಘಿಸಿದರು.

    ಕರ್ನಾಟಕದಲ್ಲಿ ಮೈಸೂರು ಮಹಾರಾಜರ ಆಳ್ವಿಕೆ ವೇಳೆ ಮೈಸೂರು – ಹರಿಹರದವರೆಗೂ ಮೀಟರ್ ಗೇಜ್ ರೇಲು ಮಾರ್ಗ ನಿರ್ಮಿಸಿದ್ದನ್ನು ಸ್ಮರಿಸಿದರು. ಆಗಿನ ತಮ್ಮ ರೈಲು ಪ್ರಯಾಣದ ಅನುಭವವನ್ನು ನೆನಪಿಸಿಕೊಂಡರು.

    ಈಗ ಬಾಂಬೆ – ಚೆನ್ನೈ ರೈಲು ಮಾರ್ಗವೂ ಹರಿಹರ – ದಾವಣಗೆರೆ – ಶೃಂಗೇರಿ – ಬೇಲೂರು ಮೂಲಕ ಚನ್ನೈಗೆ ಹಾದು ಹೋಗುತ್ತಿದ್ದು ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ನಿರೀಕ್ಷೆಗೂ ಮೀರಿ ರೈಲ್ವೆ ಜಾಲ ಮತ್ತು ಮಾರ್ಗಗಳು ಸಾಕಷ್ಟು ಪ್ರಗತಿ ಸಾಧಿಸಿದೆ. ಈ ವಿಚಾರವಾಗಿ ಮೋದಿ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಅಭಿನಂದಿಸುವುದಾಗಿ ಅವರು ಹೇಳಿದ್ದಾರೆ.

    ಅಶ್ವಿನಿ ವೈಷ್ಣವ್ (Ashwini Vaishnaw) ಅತ್ಯಂತ ಪ್ರಾಮಾಣಿಕ ರೈಲ್ವೇ ಸಚಿವರು, ಅವರನ್ನು ಅಭಿನಂದಿಸಿದರೆ ಕೆಲವರು ತಪ್ಪು ತಿಳಿದುಕೊಳ್ಳಬಾರದು. ನಾನು ಪ್ರಧಾನಿ ಆಗಿದ್ದಾಗ ಈ ಕ್ಷೇತ್ರದಲ್ಲಿ ಏನು ಮಾಡಿದ್ದೇನೆ, ನರೇಂದ್ರ ಮೋದಿ ಅವರು ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

    ರೇಲ್ವೆ ತಿದ್ದುಪಡಿ ಮಸೂದೆಯು ಅತ್ಯಂತ ಮಹತ್ವದ ಮಸೂದೆ. ಇದಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ.

  • ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಹಣ ಇಲ್ಲದಿದ್ರೂ ಟಿಕೆಟ್‌ ಬುಕ್‌ ಮಾಡಬಹುದು!

    ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಹಣ ಇಲ್ಲದಿದ್ರೂ ಟಿಕೆಟ್‌ ಬುಕ್‌ ಮಾಡಬಹುದು!

    – ʻಈಗ ಟಿಕೆಟ್‌ ಬುಕ್ ಮಾಡಿ, ನಂತರ ಪಾವತಿಸಿʼ!

    ನವದೆಹಲಿ: ನೀವು ಟ್ರೈನ್‌ನಲ್ಲಿ ಹೋಗ್ಬೇಕಾ? ನಿಮ್ಮ ಬಳಿ ಹಣ ಇಲ್ವಾ? ಡೋಂಟ್‌ವರಿ ಈಗ ಟಿಕೆಟ್‌ ಬುಕ್‌  ಮಾಡಿ ನಂತರ ಪಾವತಿಸಿ.

    ಏನಿದು ಅಚ್ಚರಿ ಅಂತೀರಾ… ಹೌದು. ಭಾರತೀಯ ರೈಲ್ವೆ (Indian Railway) ಇಲಾಖೆಯು ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನ ಕೊಟ್ಟಿದೆ. ಟಿಕೆಟ್‌ ಬುಕಿಂಗ್‌ನಲ್ಲಿ (Ticket Booking) ಹೊಸ ಸೌಲಭ್ಯ ಜಾರಿಗೆ ತಂದಿದೆ. ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ

    ಒಂದು ವೇಳೆ ನೀವು ಪ್ರವಾಸಕ್ಕೆ ಪ್ಲ್ಯಾನ್‌ ಮಾಡುತ್ತಿದ್ದು, ತಕ್ಷಣವೇ ನಿಮ್ಮ ಬಳಿ ರೈಲು ಟಿಕೆಟ್‌ ಖರೀದಿಸಲು ಚಿಂತಿಸಬೇಕಿಲ್ಲ. ಅದಕ್ಕಾಗಿಯೇ ಭಾರತೀಯ ರೈಲ್ವೆ ಇಲಾಖೆ ʻಈಗಲೇ ಬುಕ್ ಮಾಡಿ, ನಂತರ ಪಾವತಿಸಿʼ ಆಯ್ಕೆಯನ್ನು ಪರಿಚಯಿಸಿದೆ, ಇದು ಯಾವುದೇ ಮುಂಗಡ ಪಾವತಿಯಿಲ್ಲದೆ ನಿಮ್ಮ ಟಿಕೆಟ್ ಅನ್ನು ಸುರಕ್ಷಿತವಾಗಿರಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಸಂಪೂರ್ಣ ಬುಕಿಂಗ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು ಮತ್ತು ಅನುಸರಿಸಲು ಕೆಲವು ಪ್ರಮುಖ ಷರತ್ತುಗಳಿವೆ.

    ಬುಕ್ಕಿಂಗ್‌ ಹೇಗೆ?
    1. ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿ.
    2. ‘ಬುಕ್ ನೌ’ ಆಯ್ಕೆಯನ್ನು ಕ್ಲಿಕ್‌ ಮಾಡಿ.
    3. ಪ್ರಯಾಣಿಕರ ವಿವರಗಳು ಮತ್ತು ಕ್ಯಾಪ್ಚಾ ಕೋಡ್ ಕೇಳುವ ಹೊಸ ಪುಟವು ಕಾಣಿಸಿಕೊಳ್ಳುತ್ತದೆ. ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸು (Submit) ಆಯ್ಕೆಯನ್ನು ಕ್ಲಿಕ್ ಮಾಡಿ.
    4. ನಿಮ್ಮನ್ನು ಪಾವತಿ ಪೇಜ್‌ಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಕ್ರೆಡಿಟ್/ಡೆಬಿಟ್ ಕಾರ್ಡ್, BHIM ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಆಯ್ಕೆ ಮಾಡಬಹುದು.
    5. ಪೇ ಲೇಟರ್ ಆಯ್ಕೆಯನ್ನು ಬಳಸಲು, ಮೊದಲು (www.epaylater.in) ಗೆ ಭೇಟಿ ನೀಡುವ ಮೂಲಕ ನೋಂದಾಯಿಸಬೇಕು.
    6. ನೋಂದಣಿ ನಂತರ, ಪೇ ಲೇಟರ್ ಆಯ್ಕೆಯು ಲಭ್ಯವಾಗುತ್ತದೆ. ಅದನ್ನು ಆಯ್ಕೆ ಮಾಡಿ ಮತ್ತು ಯಾವುದೇ ಮುಂಗಡ ಪಾವತಿಯಿಲ್ಲದೇ ನೀವು ದೃಢೀಕೃತ ಟಿಕೆಟ್ ಅನ್ನು ಪಡೆಯುತ್ತೀರಿ.

    14 ದಿನದಲ್ಲಿ ಪಾವತಿಸಿ:
    ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿದ 14 ದಿನಗಳಲ್ಲಿ ನೀವು ಪಾವತಿಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ 14 ದಿನಗಳಲ್ಲಿ ಹಣ ಪಾವತಿ ಮಾಡಲು ವಿಫಲವಾದ್ರೆ 3.5% ಸೇವಾ ಶುಲ್ಕ ವಿಧಿಸಲಾಗುತ್ತದೆ. ಆ ನಂತರವೂ ಪಾವತಿಯನ್ನ ಮತ್ತಷ್ಟು ವಿಳಂಬ ಮಾಡಿದ್ರೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪು ನೋಡ್ಕೊಂಡು ದರ್ಶನ್ ಕೇಸ್‌ನಲ್ಲಿ ಮುಂದಿನ ಕ್ರಮ – ಪರಮೇಶ್ವರ್

  • ಕರ್ನಾಟಕಕ್ಕೆ ಯೋಧರನ್ನು ಹೊತ್ತುಕೊಂಡು ಬರುತ್ತಿದ್ದ ರೈಲು ಸ್ಫೋಟಕ್ಕೆ ಸಂಚು, ಸಿಬ್ಬಂದಿ ವಶ

    ಕರ್ನಾಟಕಕ್ಕೆ ಯೋಧರನ್ನು ಹೊತ್ತುಕೊಂಡು ಬರುತ್ತಿದ್ದ ರೈಲು ಸ್ಫೋಟಕ್ಕೆ ಸಂಚು, ಸಿಬ್ಬಂದಿ ವಶ

    ಭೋಪಾಲ್: ಜಮ್ಮು ಮತ್ತು ಕಾಶ್ಮೀರದಿಂದ (Jammu And Kashmir) ಕರ್ನಾಟಕಕ್ಕೆ (Karnataka) ಯೋಧರನ್ನು ಕರೆದೊಯ್ಯುತ್ತಿದ್ದ ರೈಲನ್ನು ಸ್ಫೋಟಿಸಲು ಯತ್ನಿಸಲಾಗಿತ್ತು. ಇದೀಗ ಡಿಟೋನೇಟರ್‌ಗಳು ಕದ್ದಿದ್ದಕ್ಕಾಗಿ ಓರ್ವ ರೈಲ್ವೆ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ.

    ರೈಲ್ವೆ ಸಿಬ್ಬಂದಿ ಶಬೀರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

    ಮಧ್ಯಪ್ರದೇಶದ (Madhyapradesh) ಬುರ್ಹಾನ್‌ಪುರ (Burhanpur) ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿತ್ತು. ಡಿಟೋನೇಟರ್‌ಗಳು ಕದ್ದಿದ್ದಕ್ಕಾಗಿ ಓರ್ವ ರೈಲ್ವೆ ಸಿಬ್ಬಂದಿಯನ್ನು ರೈಲ್ವೆ ರಕ್ಷಣಾ ಪಡೆ (Railway Protection Force) ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ

    ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದ್ದವು. ವಶಕ್ಕೆ ಪಡೆದ ಶಬೀರ್ ವಿರುದ್ಧ ರೈಲಿನ ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಕದ್ದಿದ್ದಕ್ಕಾಗಿ ಕೇಸ್ ದಾಖಲಿಸಲಾಗಿದೆ.

    ಏನಿದು ಘಟನೆ?
    ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿತ್ತು. ಸೇನೆಯ ವಿಶೇಷ ರೈಲು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳುತ್ತಿದ್ದಾಗ ಸಗ್ಫಾಟ ರೈಲು ನಿಲ್ದಾಣದ ಬಳಿ ಸ್ಫೋಟಕ್ಕೆ ಯತ್ನ ನಡೆದಿತ್ತು.

    ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.

    ರೈಲು ಡಿಟೋನೇಟರ್‌ಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಫೋಟದಿಂದ ಲೋಕೋ ಪೈಲಟ್ ರೈಲನ್ನು ತಕ್ಷಣವೇ ನಿಲ್ಲಿಸಿದ್ದರು. ನಂತರ ಠಾಣಾಧಿಕಾರಿಗೆ ಮಾಹಿತಿ ನೀಡಿದರು. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

  • ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ವಿಶೇಷ ರೈಲನ್ನು ಸ್ಫೋಟಿಸಲು ಯತ್ನ

    ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ವಿಶೇಷ ರೈಲನ್ನು ಸ್ಫೋಟಿಸಲು ಯತ್ನ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಬುರ್ಹಾನ್‍ಪುರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿದೆ. ಸೇನೆಯ (Indian Army) ವಿಶೇಷ ರೈಲು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳುತ್ತಿದ್ದಾಗ ಸಗ್ಫಾಟ ರೈಲು ನಿಲ್ದಾಣದ ಬಳಿ ಸ್ಫೋಟಕ್ಕೆ ಯತ್ನ ನಡೆದಿದೆ.

    ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿವೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು ಪ್ರಕರಣ; ಕಾರ್ಮಿಕ ಸಚಿವಾಲದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

    ರೈಲು ಡಿಟೋನೇಟರ್‍ಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಫೋಟದಿಂದ ಲೋಕೋ ಪೈಲಟ್ ರೈಲನ್ನು ತಕ್ಷಣವೇ ನಿಲ್ಲಿಸಿದ್ದಾರೆ. ನಂತರ ಠಾಣಾಧಿಕಾರಿಗೆ ಮಾಹಿತಿ ನೀಡಿದರು. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

    ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಇನ್ನೂ, ಉತ್ತರ ಪ್ರದೇಶದ ಕಾನ್ಪುರದ ಪ್ರೇಂಪುರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಭಾನುವಾರ ಖಾಲಿ ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿವೆ. ಗೂಡ್ಸ್ ರೈಲು ಲೋಕೋ ಪೈಲಟ್ ರೈಲು ನಿಲ್ಲಿಸಲು ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ.

    ರೈಲು ಕಾನ್ಪುರದಿಂದ ಪ್ರಯಾಗ್‍ರಾಜ್‍ಗೆ ತೆರಳುತ್ತಿದ್ದಾಗ ಬೆಳಗ್ಗೆ 8:10ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ. ಸೆಪ್ಟೆಂಬರ್ 8 ರಂದು, ಪ್ರಯಾಗರಾಜ್‍ನಿಂದ ಭಿವಾನಿ ಕಡೆಗೆ ಹೋಗುತ್ತಿದ್ದ ಕಾಳಿಂದಿ ಎಕ್ಸ್‍ಪ್ರೆಸ್‍ನ್ನು ಹಳಿಗಳ ಮೇಲೆ ಎಲ್‍ಪಿಜಿ ಸಿಲಿಂಡರ್ ಇರಿಸುವ ಮೂಲಕ ಹಳಿತಪ್ಪಿಸಲು ಪ್ರಯತ್ನಿಸಲಾಗಿತ್ತು. ಇದನ್ನೂ ಓದಿ: ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ

  • ವಿನೇಶ್ ಫೋಗಟ್, ಬಜರಂಗ್ ರಾಜೀನಾಮೆ ಅಂಗೀಕರಿಸಿದ ರೈಲ್ವೇ

    ವಿನೇಶ್ ಫೋಗಟ್, ಬಜರಂಗ್ ರಾಜೀನಾಮೆ ಅಂಗೀಕರಿಸಿದ ರೈಲ್ವೇ

    ನವದೆಹಲಿ: ಒಲಿಂಪಿಕ್ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat) ಹಾಗೂ ಬಜರಂಗ್ ಪುನಿಯಾ (Bajrang Punia) ಅವರ ರಾಜೀನಾಮೆಯನ್ನು ಭಾರತೀಯ ರೈಲ್ವೇ ಅಂಗೀಕರಿಸಿದೆ.

    ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಭಾರತೀಯ ರೈಲ್ವೆಯಲ್ಲಿನ (Indian Railways) ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ರಾಜೀನಾಮೆ ಅಂಗೀಕಾರಗೊಂಡಿದೆ.ಇದನ್ನೂ ಓದಿ: ‘ಭೂತ್ ಬಂಗ್ಲಾ’ ಕಥೆ ಹೇಳಲು ಸಜ್ಜಾದ ಅಕ್ಷಯ್ ಕುಮಾರ್

    ಇತ್ತೀಚಿಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ನಂತರ ಅವರ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ವ್ಯಕ್ತವಾಗಿದ್ದವು. ಅದಾದ ಬಳಿಕ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಸೇರ್ಪಡೆಯಾದ ಬಳಿಕ ಕುಸ್ತಿಪಟು ವಿನೇಶ್ ಫೋಗಟ್‌ಗೆ ಹರಿಯಾಣ ಚುನಾವಣೆಯಲ್ಲಿ (Hariyana) ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿತ್ತು.

    ಪಕ್ಷ ಸೇರ್ಪಡೆಗೂ ಮುನ್ನ ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಭಾರತೀಯ ರೈಲ್ವೆಯಲ್ಲಿರುವ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಭಾರತೀಯ ರೈಲ್ವೆಗೆ ಸೇವೆ ಸಲ್ಲಿಸುವುದು ನನ್ನ ಜೀವನದ ಸ್ಮರಣೀಯ ಮತ್ತು ಹೆಮ್ಮೆಯ ಸಮಯ. ನನ್ನ ಜೀವನದ ಈ ಹಂತದಲ್ಲಿ ನಾನು ರೈಲ್ವೆ ಸೇವೆಯಿಂದ ಹೊರಬರಲು ನಿರ್ಧರಿಸಿದೆ. ನನ್ನ ರಾಜೀನಾಮೆಯನ್ನು ಭಾರತೀಯ ರೈಲ್ವೆಯ ಸಮರ್ಥ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ರಾಷ್ಟ್ರದ ಸೇವೆಯಲ್ಲಿ ರೈಲ್ವೆ ನನಗೆ ನೀಡಿದ ಈ ಅವಕಾಶಕ್ಕಾಗಿ ನಾನು ಭಾರತೀಯ ರೈಲ್ವೆ ಕುಟುಂಬಕ್ಕೆ ಯಾವಾಗಲೂ ಕೃತಜ್ಞಳಾಗಿದ್ದೇನೆ ಎಂದು ಎಕ್ಸ್‌ನಲ್ಲಿ ಫೋಗಟ್ ಪೋಸ್ಟ್ ಹಾಕಿದ್ದರು.ಇದನ್ನೂ ಓದಿ: ಚಾರ್ಜ್‌ಶೀಟ್‌ನಲ್ಲಿ ಗೌಪ್ಯ ಮಾಹಿತಿ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ: ಕೋರ್ಟ್‌ ಮೊರೆ ಹೋದ ದರ್ಶನ್‌

    ಹರಿಯಾಣದ ಜುಲಾನಾ (Julana) ಕ್ಷೇತ್ರದಿಂದ ವಿನೇಶ್ ಫೋಗಟ್ ಕಣಕ್ಕಿಳಿಯಲಿದ್ದಾರೆ. ಬಜರಂಗ್ ಪುನಿಯಾ ಅವರನ್ನು ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ (Indian Kisan Congress) ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.