Tag: ಭಾರತೀಯ ಭದ್ರತಾ ಸಲಹೆಗಾರ

  • ಪುಲ್ವಾಮಾವನ್ನು ಮರೆತಿಲ್ಲ, ಮತ್ತಷ್ಟು ಕಠಿಣವಾಗಿ ಪ್ರತ್ಯುತ್ತರ ನೀಡ್ತೇವೆ: ಪಾಕಿಗೆ ದೋವಲ್ ವಾರ್ನಿಂಗ್

    ಪುಲ್ವಾಮಾವನ್ನು ಮರೆತಿಲ್ಲ, ಮತ್ತಷ್ಟು ಕಠಿಣವಾಗಿ ಪ್ರತ್ಯುತ್ತರ ನೀಡ್ತೇವೆ: ಪಾಕಿಗೆ ದೋವಲ್ ವಾರ್ನಿಂಗ್

    ನವದೆಹಲಿ: ಪುಲ್ವಾಮಾ ದಾಳಿಯನ್ನು ನಾವು ಮರೆತಿಲ್ಲ. ಉಗ್ರರು ಹಾಗೂ ಅವರಿಗೆ ಬೆಂಬಲ ನೀಡುವವರಿಗೆ ಮತ್ತೊಮ್ಮೆ ಕಠಿಣವಾಗಿಯೇ ಪ್ರತ್ಯುತ್ತರ ನೀಡುತ್ತೇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಹರ್ಯಾಣದ ಗುರುಗ್ರಾಮದಲ್ಲಿ ನಡೆದ ಸಿಆರ್‌ಪಿಎಫ್‌ 80ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಅವರು, ಎಲ್ಲಿ ಹಾಗೂ ಯಾವಾಗ ದಾಳಿ ಮಾಡಬೇಕು ಎನ್ನುವ ಕುರಿತು ನಾಯಕರು ತಿಳಿಸುತ್ತಾರೆ. ನಾವು ಉಗ್ರರು ಹಾಗೂ ಅವರಿಗೆ ಬೆಂಬಲ ನೀಡುವವರ ವಿರುದ್ಧ ಹೋರಾಡಬೇಕಿದೆ ಎಂದು ಯೋಧರನ್ನು ಹುರುದುಂಬಿಸಿದರು.

    ಉನ್ನತ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸುವಾಗ ಯಾವ ದಳವನ್ನು ನಿಯೋಜನೆ ಮಾಡಬೇಕು. ಎಷ್ಟು ಬಟಾಲಿಯನ್ ಕಳುಹಿಸಬೇಕು ಎನ್ನುವ ಮಾತು ಕೇಳಿ ಬರುತ್ತದೆ. ಆಗ ಸಿಆರ್‌ಪಿಎಫ್‌ ಯೋಧರನ್ನೇ ನಿಯೋಜನೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಏಕೆಂದರೆ ಸಿಆರ್‌ಪಿಎಫ್‌ ವಿಶ್ವಾಸಾರ್ಹ ದಳವಾಗಿದ್ದು, ನಾವು ಸಂಪೂರ್ಣ ನಂಬಿಕೆ ಹೊಂದಿದ್ದೇವೆ. ಹಲವು ವರ್ಷಗಳ ಸತತ ಸಾಧನೆಯಿಂದ ಸಿಆರ್‌ಪಿಎಫ್‌ ಈ ವಿಶ್ವಾಸಾರ್ಹವನ್ನು ಗಳಿಸಿದೆ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಪುಲ್ವಾಮಾ ದಾಳಿಯನ್ನು ನೆನೆದ ಅಜಿತ್ ದೋವಲ್ ಅವರು, ಫೆಬ್ರವರಿ 14ರಂದು ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‍ಪಿಎಫ್‍ನ 40 ಯೋಧರಿಗೆ ಗೌರವ ಸಲ್ಲಿಸಿದ್ದೇನೆ ಎಂದು ಹೇಳಿದರು.

    ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ವ್ಯಕ್ತಿಯಿದ್ದ ಕಾರು ಸಿಆರ್‌ಪಿಎಫ್‌ ಯೋಧರ ಬಸ್‍ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 40 ಯೋಧರು ಘಟನೆಯಲ್ಲಿ ಹುತಾತ್ಮರಾಗಿದ್ದರು. ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮೇಲೆ ದೇಶದ ಪ್ರಜೆಗಳು ಒತ್ತಡ ಹೇರಿದ್ದರು.

    ಭಾರತೀಯ ವಾಯು ಪಡೆ ಫೆಬ್ರವರಿ 26ರಂದು ಪಾಕಿಸ್ತಾನ ಹಾಗೂ ಉಗ್ರರರಿಗೆ ಸೂಕ್ತ ಪ್ರತ್ಯುತ್ತರ ನೀಡಿತ್ತು. ಈ ಮೂಲಕ ಉಗ್ರರ ಮೂರು ನೆಲೆಗಳ ಮೇಲೆ ಏರ್ ಸ್ಟ್ರೈಕ್ ದಾಳಿ ಮಾಡಿ, 350ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು.