Tag: ಭಾರತೀಯ ಭದ್ರತಾ ಪಡೆ

  • ಪಾಕಿನ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಯೋಧರು

    ಪಾಕಿನ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಯೋಧರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಹಾರಿಸಿದ್ದ 9 ಜೀವಂತ ಮಾರ್ಟರ್ ಶೆಲ್‍ಗಳನ್ನು ಭಾರತೀಯ ಭದ್ರತಾ ಪಡೆ ನಿಷ್ಕ್ರಿಯಗೊಳಿಸಿದೆ.

    ಪಾಕಿಸ್ತಾನ ಸೇನೆಯು ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಸಾರ್ವಜನಿಕರನ್ನು ಗುರಿ ಮಾಡಿಕೊಂಡು ದಾಳಿ ನಡೆಸುತ್ತಿದೆ. ಆದ್ದರಿಂದ ಗಡಿ ನಿಯಂತ್ರಣ ರೇಖೆ ಬಳಿ ಹಾಗೂ ಫಾರ್ವರ್ಡ್ ಪೋಸ್ಟ್‌ಗಳ ಬಳಿ ಸಣ್ಣ ಶಸ್ತ್ರಾಸ್ತ್ರ ಮತ್ತು ಮಾರ್ಟರ್ ಶೆಲ್‍ಗಳನ್ನು ಪಾಕ್ ಹಾರಿಸಿತ್ತು. ಇದನ್ನೂ ಓದಿ:ಶರಣಾದ ಪಾಕ್ – ಶ್ವೇತ ಬಾವುಟ ತೋರಿಸಿ ಮೃತದೇಹ ಹೊತ್ತೊಯ್ದ ಇಮ್ರಾನ್ ಸೇನೆ

    ಬುಧವಾರ ಮೆಂಧರ್ ವಲಯದ ಬಾಲಕೋಟೆ, ಸ್ಯಾಂಡೋಟೆ ಮತ್ತು ಬಾಸೋನಿ ಪ್ರದೇಶಗಳಲ್ಲಿ 120 ಎಂಎಂ ಮತ್ತು 81 ಎಂಎಂನ 9 ಮಾರ್ಟರ್ ಶೆಲ್‍ಗಳನ್ನು ಭದ್ರತಾ ಪಡೆ ಯೋಧರು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದ್ದಾರೆ. ಈ ಕೆಲವು ಮಾರ್ಟರ್ ಶೆಲ್‍ಗಳು ವಲಯದ ಗ್ರಾಮ ಪ್ರದೇಶಗಳಲ್ಲಿ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಪಾಕ್ ಸ್ಫೋಟಕ ನಾಶಗೊಳಿಸಿದ ಭಾರತೀಯ ಯೋಧರು – ವಿಡಿಯೋಗೆ ಭಾರೀ ಮೆಚ್ಚುಗೆ

    ಈ ಹಿಂದೆ ಭಾನುವಾರ ಮೇಂದಾರ್ ಸೆಕ್ಟರ್ ನ ಬಾಲಕೋಟ್ ಪ್ರದೇಶದ ಮನೆಯೊಂದರ ಬಳಿ ಸ್ಫೋಟಕದ ಶೆಲ್ ಬಿದ್ದಿತ್ತು. ಇದನ್ನು ಕೆಲ ಗ್ರಾಮಸ್ಥರು ಗಮನಿಸಿದ್ದು, ಈ ಬಗ್ಗೆ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷವೇ ಸೇನೆಯಲ್ಲಿನ ತಜ್ಞರು ಸ್ಥಳಕ್ಕೆ ಬಂದು ಸ್ಫೋಟಿಸದ ಮಾರ್ಟರ್ ಶೆಲ್ ಅನ್ನು ಸುರಕ್ಷಿತವಾಗಿ ನಾಶಗೊಳಿಸಿದ್ದರು.

  • ಪುಲ್ವಾಮಾದಲ್ಲಿ ಎನ್‍ಕೌಂಟರ್- ಇಬ್ಬರು ಉಗ್ರರನ್ನು ಸದೆಬಡಿದ ಭದ್ರತಾ ಪಡೆ!

    ಪುಲ್ವಾಮಾದಲ್ಲಿ ಎನ್‍ಕೌಂಟರ್- ಇಬ್ಬರು ಉಗ್ರರನ್ನು ಸದೆಬಡಿದ ಭದ್ರತಾ ಪಡೆ!

    ಪುಲ್ವಾಮಾ: ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದ ಪಂಜ್ಗಾಮ್ ಗ್ರಾಮದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಅವಂತಿಪುರದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ದಾಳಿ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ನೆಲಸಮ ಮಾಡಿದೆ.

    ಸಿಆರ್​ಪಿಎಫ್​ ನ 130ನೇ ಬೆಟಾಲಿನ್‍ನ 55 ರಾಷ್ಟ್ರೀಯ ರೈಫಲ್(ಆರ್‍ಆರ್) ಹಾಗೂ ವಿಶೇಷ ಕಾರ್ಯಾಚರಣೆ ಗುಂಪಿನ(ಎಸ್‍ಓಜಿ) ಜಂಟಿ ತಂಡ ಮತ್ತು ಉಗ್ರರ ನಡುವೆ ಬೆಳಗ್ಗಿನ ಜಾವ 2.10ರ ಹೊತ್ತಿಗೆ ಗುಂಡಿನ ಚಕಮಕಿ ಶುರುವಾಗಿತ್ತು. ಈ ದಾಳಿಯಲ್ಲಿ ಒಟ್ಟು ಮೂವರು ಉಗ್ರರು ಗಂಭೀರ ಗಾಯಗೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಈವರೆಗೆ ಕೇವಲ ಇಬ್ಬರು ಉಗ್ರರ ಮೃತದೇಹ ಮಾತ್ರ ಸ್ಥಳದಲ್ಲಿ ಪತ್ತೆಯಾಗಿದೆ.

    ಮೃತ ಉಗ್ರರಲ್ಲಿ ಒಬ್ಬನನ್ನು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ ಶೌಖತ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ಇದೇ ಗುರುವಾರದಂದು ಪುಲ್ವಾಮದಲ್ಲಿ ಮೂವರು ಉಗ್ರರನ್ನು ಸೇನೆ ಎನ್‍ಕೌಂಟರ್ ಮಾಡಿ ಹತ್ಯೆಗೈದಿತ್ತು. ಈ ವೇಳೆ ಓರ್ವ ಯೋಧರು ಹಾಗೂ ಓರ್ವ ಸಾರ್ವಜನಿಕ ಕೂಡ ಗುಂಡೇಟಿಗೆ ಹುತಾತ್ಮರಾಗಿದ್ದರು.

  • ಜೈಶ್ ಉಗ್ರರ ಬಳಿ ಪತ್ತೆಯಾಯ್ತು ಪಾಕ್ ಸೇನೆಯ ರೈಫಲ್

    ಜೈಶ್ ಉಗ್ರರ ಬಳಿ ಪತ್ತೆಯಾಯ್ತು ಪಾಕ್ ಸೇನೆಯ ರೈಫಲ್

    -ಭಯೋತ್ಪಾದನೆಗೆ ಪಾಕ್ ಸಹಕಾರ

    ಶ್ರೀನಗರ: ಭಾರತ ಗಡಿಯಲ್ಲಿ ಉಗ್ರರು ನಡೆಸುತ್ತಿರುವ ದಾಳಿಗೆ ಪಾಕ್ ಸೇನೆ ನೆರವನ್ನು ನೀಡುತ್ತಿದೆ ಎಂಬುವುದಕ್ಕೆ ಪುರಾವೆ ದೊರೆತಿದೆ. ಉಗ್ರರು ಸದೆಬಡಿರುವ ಸೇನೆ ಅವರ ಬಳಿಕ ಪಾಕ್ ಸೇನೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

    ಶುಕ್ರವಾರ ಬದ್ಗಾಮ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಭದ್ರತಾಪಡೆ ಜೈಶ್-ಎ- ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಒರ್ವನನ್ನು ಬಂಧಿಸಿದೆ. ಈ ವೇಳೆ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ತಾನ ಸೇನೆಯ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ರೈಫಲ್ ಕೂಡಾ ಪತ್ತೆಯಾಗಿದೆ. ಇದರಿಂದ ಪಾಕ್ ಸೈನ್ಯವೇ ನೇರವಾಗಿ ಈ ರೈಫಲ್‍ಗಳನ್ನು ಉಗ್ರರಿಗೆ ನೀಡಿರುವುದಕ್ಕೆ ಇದು ಸಾಕ್ಷಿಯಾಗಿದೆ.

    ಪಾಕ್ ಯೋಧರು ಬಳಸುವ ರೈಫಲ್ ಉಗ್ರರ ಬಳಿ ಪತ್ತೆಯಾಗುತ್ತಿರುವುದು ಇದು 3ನೇ ಬಾರಿಯಾಗಿದ್ದು, ಈ ಹಿಂದೆ 2017ರ ಅಕ್ಟೋಬರ್‍ನಲ್ಲಿ ಮಸೂದ್ ಅಜರ್‍ನ ಅಳಿಯ ತಲ್ಹಾ ರಶೀದ್‍ನ ಎನ್‍ಕೌಂಟರ್ ನಡೆದಾಗ ಇದೇ ಶಸ್ತ್ರ ದೊರಕಿತ್ತು. ಅಲ್ಲದೆ 2018ರ ಅಕ್ಟೋಬರ್ 31ರಂದು ಪುಲ್ವಾಮಾ ಜಿಲ್ಲೆಯ ಟ್ರಾನ್‍ನಲ್ಲಿ ಜೈಷ್‍ಟ ಉಗ್ರರ ಮೇಲೆ ದಾಳಿ ನಡೆಸಿದಾಗಲೂ ಸ್ಥಳದಲ್ಲೂ ಎಂ4 ರೈಫಲ್ ಪತ್ತೆಯಾಗಿತ್ತು.

    ಏನಿದು ಎಂ4 ರೈಫಲ್?
    ಎಂ4 ಕಾರ್ಬೈನ್ ರೈಫಲ್‍ಗಳು ಅರೆಸ್ವಯಂಚಾಲಿತ ಶಸ್ತ್ರವಾಗಿದ್ದು, ಇದರಿಂದ ಮೂರು ಸುತ್ತು ಗುಂಡು ಹಾರಿಸಬಹುದಾಗಿದೆ. ಅಮೆರಿಕ ಯೋಧರು ಇದನ್ನು ಪ್ರಧಾನವಾಗಿ ಬಳಸುತ್ತಾರೆ. ಹಲವಾರು ಯುದ್ಧಗಳಲ್ಲಿ ಅಮೆರಿಕಾ ಎಂ4 ರೈಫಲ್‍ಗಳನ್ನು ಬಳಸಿದೆ. ಹಾಗೆಯೇ ಈ ಶಸ್ತ್ರಗಳನ್ನು ಪಾಕಿಸ್ತಾನಕ್ಕೂ ಮಾರಾಟ ಮಾಡಿದೆ.

    ಪುಲ್ವಾಮಾ ದಾಳಿ ಬಳಿಕ ಗಡಿಭಾಗದಲ್ಲಿ ಗುಂಡಿನ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಅಲ್ಲದೆ ಈ ದಾಳಿ ಬಳಿಕ ಭಾರತೀಯ ಭದ್ರತಾ ಪಡೆ ಕಣಿವೆಯಲ್ಲಿ ಉಗ್ರರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದು, ಈವರೆಗೆ ಸುಮಾರು ಜೈಶ್ ಸಂಘಟನೆಗೆ ಸೇರಿರುವ 30 ಉಗ್ರರನ್ನು ಸದೆಬಡಿಯಲಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ ಸುಮಾರು 6 ಮಂದಿ ಉಗ್ರರನ್ನು ಭದ್ರತಾಪಡೆ ಹತ್ಯೆಗೈದಿದೆ. ಗುರುವಾರ ಶೋಪಿಯಾನ್ ಬಳಿ ನಡೆಸಿದ ಎನ್‍ಕೌಂಟರ್‍ನಲ್ಲಿ ನಾಲ್ವರು ಉಗ್ರರು ಹಾಗೂ ಶುಕ್ರವಾರದಂದು ಬದ್ಗಾಮ್‍ನಲ್ಲಿ ಇಬ್ಬರು ಜೈಷ್ ಉಗ್ರರು ಹತರಾಗಿದ್ದಾರೆ.