Tag: ಭಾರತೀಯ ನೌಕಾದಳ

  • ಭಾರತದಲ್ಲಿ ಫಸ್ಟ್ ಟೈಂ- ಯುದ್ಧನೌಕೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಮಹಿಳೆಯರು

    ಭಾರತದಲ್ಲಿ ಫಸ್ಟ್ ಟೈಂ- ಯುದ್ಧನೌಕೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಮಹಿಳೆಯರು

    ನವದೆಹಲಿ: ಭಾರತೀಯ ನೌಕಾದಳದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳು ಯುದ್ಧನೌಕೆಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆದಿದ್ದಾರೆ. ಈ ಮೂಲಕ ನೌಕಾದಳದಲ್ಲಿಯೂ ಮಹಿಳೆಯರು ತಮ್ಮದೇ ಛಾಪು ಮೂಡಿಸಲು ಆರಂಭಿಸಿದ್ದಾರೆ.

    ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರು ಹೆಲಿಕಾಪ್ಟರ್ ವಿಭಾಗದಲ್ಲಿ ವೀಕ್ಷಕರು ಅಥವಾ ವಾಯುಗಾಮಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಇಬ್ಬರು ಛಲಗಾರ್ತಿಯರು ಭಾರತೀಯ ನೌಕಾಪಡೆಯ ಯುದ್ಧ ಹೆಲಿಕಾಪ್ಟರ್‍ಗಳನ್ನು ಆನ್‍ಬೋರ್ಡ್ ಯುದ್ಧನೌಕೆಗಳ ಮೂಲಕ ನಿರ್ವಹಿಸಲಿದ್ದಾರೆ.

    ಇವರು ಹಡಗಿನ ಸಿಬ್ಬಂದಿ ಭಾಗವಾಗಿ ನೌಕಾಪಡೆಯ ಯುದ್ಧನೌಕೆಗಳಲ್ಲಿ ನಿಯೋಜಿಸಲಾಗಿರುವ ಮೊದಲ ಮಹಿಳಾ ಅಧಿಕಾರಿಗಳಾಗಲಿದ್ದಾರೆ. ಈ ಹಿಂದೆ ಮಹಿಳೆಯರನ್ನು ಫಿಕ್ಸೆಡ್ -ವಿಂಗ್ ಏರ್‍ಕ್ರಾಫ್ಟ್ ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯುದ್ಧನೌಕೆಗಳ ಮೂಲಕ ಹೆಲಿಕಾಪ್ಟರ್ ಗಳ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿದೆ.


    ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಭಾರತೀಯ ಸೇನೆಯ 17 ಅಧಿಕಾರಿಗಳ ಗುಂಪಿನ ಸದಸ್ಯೆಯರಾಗಿದ್ದಾರೆ. ಇದರಲ್ಲಿ ಕೊಚ್ಚಿಯ ಐಎನ್‍ಎಸ್ ಗರುಡಾದಲ್ಲಿ ಸೋಮವಾರ ಭಾರತೀಯ ನೌಕಾಪಡೆಯ ಅಬ್ಸರ್ವರ್ ಕೋರ್ಸ್‍ನಿಂದ ಪಾಸ್ ಔಟ್ ಆಗಿರುವ ಇಂಡಿಯನ್ ಕೋಸ್ಟ್ ಗಾರ್ಡ್‍ನ ನಾಲ್ವರು ಮಹಿಳಾ ಹಾಗೂ ಮೂವರು ಪುರುಷ ಅಧಿಕಾರಿಗಳು ಸಹ ಇದ್ದಾರೆ.

    ಎನ್‍ಎಂ, ವಿಎಸ್‍ಎಂ, ತರಬೇತಿಯ ಮುಖ್ಯ ಅಧಿಕಾರಿ ರಿಯರ್ ಅಡ್ಮಿರಲ್ ಆಂಟೋನಿ ಜಾರ್ಜ್ ಅವರು ಪದವಿಯನ್ನು ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಆಂಟೋನಿ ಜಾರ್ಜ್, ಹೆಲಿಕಾಪ್ಟರ್ ಕಾರ್ಯಾಚರಣೆಗಳಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ತರಬೇತಿ ನೀಡಿರುವುದು ಗಮನಾರ್ಹ ವಿಚಾರ. ಈ ಮೂಲಕ ಅಂತಿಮವಾಗಿ ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆಗಳಲ್ಲಿ ಮಹಿಳೆಯರನ್ನು ನಿಯೋಜಿಸಲು ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.