Tag: ಭಾರತೀಯ ಆರ್ಥಿಕತೆ

  • ನಿರ್ಮಲಾ ಸೀತಾರಾಮನ್, ನಿರ್ಬಲ ಆಗಿದ್ದಾರೆ- ಕಾಂಗ್ರೆಸ್ ವಾಗ್ದಾಳಿ

    ನಿರ್ಮಲಾ ಸೀತಾರಾಮನ್, ನಿರ್ಬಲ ಆಗಿದ್ದಾರೆ- ಕಾಂಗ್ರೆಸ್ ವಾಗ್ದಾಳಿ

    ನವದೆಹಲಿ: ಜಿಡಿಪಿ ಕಡಿಮೆಯಾದ ಹಿನ್ನೆಲೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಿರ್ಮಲಾ ಸೀತಾರಾಮನ್ ವಿರುದ್ಧ ಹರಿಹಾಯ್ದಿದ್ದು, ನಿರ್ಬಲ(ಬಲಹೀನ) ಸೀತಾರಾಮನ್ ಎಂದು ಕರೆಯುವ ಮೂಲಕ ಲೇವಡಿ ಮಾಡಿದ್ದಾರೆ.

    ಸೋಮವಾರ ಮಧ್ಯಾಹ್ನ ಲೋಕಸಭೆಯಲ್ಲಿ 2019ರ ತೆರಿಗೆ ಕಾನೂನು(ತಿದ್ದುಪಡಿ) ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಅಧಿರ್ ರಂಜನ್ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಹಲವು ದೂರದರ್ಶಿ ಯೋಜನೆಗಳು ಆರ್ಥಿಕತೆಯ ನಿಧಾನಗತಿಗೆ ಕಾರಣವಾಗಿವೆ. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನಿರ್ಬಲ ಸೀತಾರಾಮನ್ ಎಂದು ಕರೆಯದೇ ಬೇರೆ ದಾರಿಯಿಲ್ಲ ಎಂದು ಹರಿಹಾಯ್ದಿದ್ದಾರೆ.

    ಭಾರತದ ಆರ್ಥಿಕತೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ವಂತ ನಿರ್ಧಾರ ಕೈಗೊಳ್ಳಲು ಬಿಜೆಪಿಯವರು ಬಿಡುತ್ತಿಲ್ಲ. ನಾವು ನಿಮಗೆ ಅತೀವ ಗೌರವವನ್ನು ನೀಡುತ್ತೇವೆ. ಆಶ್ಚರ್ಯವೆಂಬಂತೆ ಕೆಲವು ಬಾರಿ ನಿಮ್ಮನ್ನು ನಿರ್ಬಲ ಸೀತಾರಾಮನ್ ಎಂದು ಕರೆಯಬೇಕಾಗುತ್ತದೆ ಎಂದರು.

    ನೀವು ಹಣಕಾಸು ಸಚಿವಾಲಯದ ಮುಖ್ಯಸ್ಥರಾಗಿದ್ದೀರಿ. ಆದರೆ ಯಾವಾಗ ನಿಮ್ಮ ಸ್ವಂತ ವಿಚಾರಗಳನ್ನಿಟ್ಟುಕೊಂಡು ನೀವು ದೇಶದ ಆರ್ಥಿಕತೆ ಬಗ್ಗೆ ಮಾತನಾಡುತ್ತೀರೋ ತಿಳಿಯುತ್ತಿಲ್ಲ ಎಂದು ಅಧಿರ್ ರಂಜನ್ ಹರಿಹಾಯ್ದಿದ್ದಾರೆ.

    ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್)ಜಿಡಿಪಿಯ ಅಂಕಿ ಸಂಖ್ಯೆಯ ಅಧಿಕೃತ ವರದಿ ಕಳೆದ ತಿಂಗಳು ಬಿಡುಗಡೆಯಾಗಿದೆ. ಇದರಲ್ಲಿ ಜಿಡಿಪಿ ಶೇ.4.5ರಷ್ಟು ಕುಸಿತ ಕಂಡಿದೆ. ಕಳೆದ ಆರು ವರ್ಷಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಜಿಡಿಪಿಯಾಗಿದೆ. ಅಲ್ಲದೆ ಆರ್ಥಿಕ ಬೆಳವಣಿಗೆಯಲ್ಲಿಯೂ ಸಹ ದೇಶ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಅಧಿರ್ ರಂಜನ್ ಅವರು ವಾಗ್ದಾಳಿ ನಡೆಸಿ ನಿರ್ಬಲ ಸೀತಾರಾಮನ್ ಎಂದು ಕರೆದಿದ್ದಾರೆ.