Tag: ಭಾರತೀಯ ಆಟಗಾರ

  • ವಿಶ್ವ ಅಥ್ಲೆಟಿಕ್ ಚ್ಯಾಂಪಿಯನ್‍ಶಿಪ್: ಹೊಸ ಇತಿಹಾಸ ಬರೆದ ಭಾರತದ ದವಿಂದರ್ ಸಿಂಗ್

    ವಿಶ್ವ ಅಥ್ಲೆಟಿಕ್ ಚ್ಯಾಂಪಿಯನ್‍ಶಿಪ್: ಹೊಸ ಇತಿಹಾಸ ಬರೆದ ಭಾರತದ ದವಿಂದರ್ ಸಿಂಗ್

    ಲಂಡನ್: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜಾವಲಿನ್ ಥ್ರೋ ವಿಭಾಗದಲ್ಲಿ ಭಾರತೀಯ ಆಟಗಾರ ದವಿಂದರ್ ಸಿಂಗ್ ಕಾಂಗ್ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಜಾವಲಿನ್ ಸ್ಪರ್ಧಿ ಎಂಬ ಹೆಗ್ಗಳಿಕಿಗೆ ಪಾತ್ರರಾಗಿದ್ದಾರೆ.

    ಗುರುವಾರದಂದು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ ಕಾಂಗ್ ಅವರಿಗೆ ಭುಜದ ಗಾಯವಿತ್ತು. ಆದರೂ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಈ ಸುತ್ತಿನಲ್ಲಿ ಆಯ್ಕೆಯಾಗಲು ಕಬ್ಬಿಣದ ಈಟಿಯನ್ನ 83 ಮೀಟರ್ ದೂರ ಎಸೆಯಬೇಕಿತ್ತು. ಕಾಂಗ್ ಅವರು ಮೂರನೇ ಎಸೆತದಲ್ಲಿ 84.22 ಮೀಟರ್ ದೂರಕ್ಕೆ ಈಟಿಯನ್ನ ಎಸೆಯುವ ಮೂಲಕ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಮೊದಲ ಎಸೆತದಲ್ಲಿ ಅವರು 82.22 ಮೀ. ದೂರಕ್ಕೆ ಎಸೆದಿದ್ದರು ಹಾಗೂ ಎರಡನೇ ಪ್ರಯತ್ನದಲ್ಲಿ 82.14 ದೂರಕ್ಕೆ ಈಟಿಯನ್ನ ಎಸೆದಿದ್ದರು.

    ಪಂಜಾಬ್ ಮೂಲದವರಾದ 26 ವರ್ಷದ ದವಿಂದರ್ ಸಿಂಗ್ ಕಾಂಗ್, ಕೊನೆಯ ಎಸೆತದಲ್ಲಿ 83 ಮೀ. ದೂರಕ್ಕೆ ಈಟಿಯನ್ನು ಎಸೆಯಲು ಒತ್ತಡದಲ್ಲಿದ್ರು. ಆದ್ರೆ ಅವರು ತಮ್ಮದೇ ಶೈಲಿಯಲ್ಲಿ ಈಟಿಯನ್ನ ಎಸೆದಿದ್ದು ಅರ್ಹತೆಗೆ ಬೇಕಾಗಿದ್ದ ಮಾರ್ಕ್‍ಗಿಂತ ದೂರಕ್ಕೆ ಎಸೆದು ಭಾರತೀಯ ಕ್ಯಾಂಪ್‍ಗೆ ಸಂತಸ ತಂದ್ರು.

    ಈ ಸುತ್ತಿನಲ್ಲಿ ಗ್ರೂಪ್-ಎ ನಿಂದ ಐವರು ಹಾಗೂ ಗ್ರೂಪ್-ಬಿ ನಿಂದ ಏಳು ಮಂದಿ ಆಯ್ಕೆಯಾಗಿದ್ದು, ಎಲ್ಲರೂ ಆಗಸ್ಟ್ 12ರಂದು ನಡೆಯಲಿರುವ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.

    ಅಂತಿಮ ಸುತ್ತಿಗೆ ಆಯ್ಕೆಯಾದವರಲ್ಲಿ 84.22 ಮೀ ದೂರದ ಎಸೆತದಿಂದ ದವಿಂದರ್ ಸಿಂಗ್ 7ನೇ ಸ್ಥಾನದಲ್ಲಿದ್ದಾರೆ. ಈವರೆಗೆ ಯಾವುದೇ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಪುರುಷರ ವಿಭಾಗದ ಜಾವ್ಲಿನ್ ಥ್ರೋನಲ್ಲಿ ಭಾರತೀಯ ಆಟಗಾರರು ಆಯ್ಕೆಯಾಗಿರಲಿಲ್ಲ.

    ಮತ್ತೊಬ್ಬ ಭಾರತೀಯ ಆಟಗಾರ ನೀರಜ್ ಚೋಪ್ರಾ ಅಂತಿಮ ಸುತ್ತಿಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ನೀರಜ್ ಅಂತಿಮ ಸುತ್ತಿಗೆ ಆಯ್ಕೆಯಾಗಿಲ್ಲ ಎಂದು ತಿಳಿದ ನಂತರ ನಾನು ಅಂತಿಮ ಸುತ್ತಿಗೆ ಹೋಗಲೇಬೇಕು ಎಂದುಕೊಂಡೆ. ದೇಶಕ್ಕಾಗಿ ನಾನು ಏನಾದರೂ ಮಾಡ್ಬೇಕು ಅನ್ನಿಸ್ತು. ಈವರೆಗೆ ಯಾವುದೇ ಭಾರತೀಯ ಮಾಡಿರದ ಕೆಲಸವನ್ನ ನಾನು ನನ್ನ ದೇಶಕ್ಕಾಗಿ ಮಾಡಬಯಸಿದೆ. ದೇವರ ದಯದಿಂದ ನಾನದನ್ನು ಮಾಡಿದ್ದೇನೆ ಅಂತ ಕಾಂಗ್ ಹೇಳಿದ್ದಾರೆ.