Tag: ಭಾರತಿ ವಿಷ್ಣುವರ್ಧನ್

  • ಬಂಗಾರದ ಮನುಷ್ಯ ಚಿತ್ರಕ್ಕೆ 50 ವರ್ಷ : ಸಿನಿಮಾ ಆಗಿದ್ದು ಹೇಗೆ? ಕುತೂಹಲದ ಟಿಪ್ಪಣಿ

    ಬಂಗಾರದ ಮನುಷ್ಯ ಚಿತ್ರಕ್ಕೆ 50 ವರ್ಷ : ಸಿನಿಮಾ ಆಗಿದ್ದು ಹೇಗೆ? ಕುತೂಹಲದ ಟಿಪ್ಪಣಿ

    ಡಾ.ರಾಜ್ ಕುಮಾರ್ ಅಭಿನಯದ, ಸಿದ್ಧಲಿಂಗಯ್ಯ ನಿರ್ದೇಶನದ ‘ಬಂಗಾರದ ಮನುಷ್ಯ’ ಸಿನಿಮಾ ಬಿಡುಗಡೆ ಆಗಿದ್ದು 31.03. 1972ರಲ್ಲಿ. ಆ ಸಿನಿಮಾ ರಿಲೀಸ್ ಆಗಿ ಇಂದಿಗೆ 50 ವರ್ಷಗಳು ತುಂಬಿವೆ. ಈ ನೆಪದಲ್ಲಿ ಹಿರಿಯ ಪತ್ರಕರ್ತ ಮಹೇಶ್ ದೇವಶೆಟ್ಟಿ ಅವರು ಬರೆದ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಪುಸ್ತಕದ ಆಯ್ದ ಭಾಗ ಇಲ್ಲಿದೆ.

    ಕೆಲವರು ಮುಖ ಸ್ತುತಿಗೆ ಮತ್ತು ಗೌಡರನ್ನು ಓಲೈಸಲು ಎದುರಿಗೆ ಸಿನಿಮಾ ಚೆನ್ನಾಗಿದೆ ಎಂದು ಹೇಳಿದರು. ವರದಪ್ಪ ಹೆಚ್ಚು ಮಾತಾಡುತ್ತಿರಲಿಲ್ಲ. ‘ಚೆನ್ನಾಗಿದೆ…ಚೆನ್ನಾಗಿದೆ…’ ಎಂದು ಮಾತು ಮುಗಿಸಿದರು. ಆದರೆ ಯಾವಾಗ ರಾಜ್ ಕೂಡ ಇದು ಐದಾರು ವಾರದ ಸಿನಿಮಾ ಎಂದು ಹೇಳಿದರೋ ಗೌಡರಿಗೆ ನಿಜಕ್ಕೂ ಗೊಂದಲ ಮತ್ತು ಆತಂಕ ಶುರುವಾಯಿತು. ರಾಜ್ ಹಾಗೆ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಅದಕ್ಕೆ ಕಾರಣ ಇಲ್ಲಿದೆ ಕೇಳಿ. ಅಲ್ಲಿವರೆಗೆ ರಾಜ್ ನಟಿಸಿದ್ದ ಚಿತ್ರಗಳಾದರೂ ಎಂಥದ್ದೆಂದು ನೀವೇ ನೋಡಿ. ಕಿಲಾಡಿ ರಂಗ, ಭೂಪತಿ ರಂಗ, ಭಲೇ ಹುಚ್ಚ, ಭಲೇ ಜೋಡಿ, ಎಮ್ಮೆ ತಮ್ಮಣ್ಣ , ಬೀದಿ ಬಸವಣ್ಣ, ಗೋವಾದಲ್ಲಿ ಸಿಐಡಿ 999…ಇದರಲ್ಲಿ ಎಂಥಾ ಕಿಕ್ ಇದೆ ಎಂದು ನಿಮಗೇ ಗೊತ್ತಾಗುತ್ತದೆ. ಅದರಲ್ಲೂ ಆ ಚಿತ್ರಗಳಲ್ಲಿ ರಾಜ್ ಸಕತ್ತಾಗಿ ಫೈಟ್ ಮಾಡಿ ವಿಲನ್‌ಗಳನ್ನು ಉರುಳಿಸುತ್ತಿದ್ದರು. ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಚಗುಳಿ ಇಡುತ್ತಿದ್ದರು, ನಾಯಕಿಗೆ ತರಲೆ ಮಾಡುವ ಮೂಲಕ ನಗಿಸುತ್ತಿದ್ದರು, ‘ ಭೂಪತಿ ರಂಗ ನಾನು…’ ಎಂದು ಹಾಡುತ್ತಾ ಬಂದರೆ ಸಾಕು ಜನರು ಎದ್ದು ನಿಂತು ಕೇಕೆ ಹಾಕುತ್ತಿದ್ದರು. ಆದರೆ ಬಂಗಾರದ ಮನುಷ್ಯದಲ್ಲಿ ಇಂಥದ್ದು ಏನೂ ಇರಲಿಲ್ಲ. ಗಂಭೀರವಾದ ರಾಜೀವಪ್ಪನ ಪಾತ್ರದಲ್ಲಿ ಹೆಚ್ಚು ಕಾಮಿಡಿ ತುರುಕಲು ಆಗುತ್ತಿರಲಿಲ್ಲ. ನಾಯಕಿಯೊಂದಿಗಿನ ರೊಮ್ಯಾನ್ಸ್ ದೃಶ್ಯಗಳೂ ಸರಳವಾಗಿದ್ದವು. ಕಲರ್ ಫುಲ್ ಡ್ರೆಸ್‌ನಲ್ಲಿ ರಾಜ್ ಮಿಂಚುತ್ತಾರೆಂದರೆ ಅದೂ ಇಲ್ಲ. ಹೆಚ್ಚು ಕಮ್ಮಿ ಲುಂಗಿ, ಪಂಚೆ, ಅಂಗಿಯಲ್ಲಿ ಕಾಣಿಸಿಕೊಂಡಿದ್ದರು. ಇದ್ದದ್ದು ಒಂದು ಗದ್ದೆ ಫೈಟು, ಇನ್ನು ಕತೆಯ ವಿಷಯಕ್ಕೆ ಬಂದರೆ ಅದೂ ಅಲ್ಲಿವರೆಗೆ ರಾಜ್ ಮಾಡಿದ ಚಿತ್ರಗಳ ಮಾದರಿಯಲ್ಲಿ ಇರಲಿಲ್ಲ. ಅಕ್ಕನ ಮಕ್ಕಳನ್ನು ಓದಿಸಲು, ಅದೇ ಊರಿನಲ್ಲಿ ನೆಲೆ ನಿಂತು, ಸಾಲ ಮಾಡಿ ತೋಟ ಮಾಡುತ್ತಾರೆ. ಕಲ್ಲು ಬಂಡೆಗಳನ್ನು ಕೊರೆದು ಅದೇ ಮಣ್ಣಲ್ಲಿ ಹಸಿರು ಬೆಳೆಯುತ್ತಾರೆ. ದಿನದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತಾರೆ. ಅಕ್ಕನ ಮಕ್ಕಳ ಸಹಿತ ಅವರ ಗೆಳೆಯನನ್ನು ಓದಿಸುತ್ತಾರೆ. ಇನ್ನೊಂದು ಕಡೆ ಅಕ್ಕನ ಗಂಡನಿಗೆ ಇದ್ದ ಇನ್ನೊಂದು ಸಂಬಂಧವನ್ನು ಗುಟ್ಟಾಗಿ ಕಾಪಾಡಿಕೊಂಡು ಬರುತ್ತಾ, ಆರತಿ ಮತ್ತು ಆಕೆಯ ಮಗನಿಗೂ ಹಣದ ಸಹಾಯ ಮಾಡುತ್ತಾರೆ. ಮೊದಲು ಅಕ್ಕನ ಮಕ್ಕಳ ಮದುವೆಯಾಗಲಿ ಆಮೇಲೆ ನನ್ನದು ಎಂದು ಅಲ್ಲಿಯೂ ತ್ಯಾಗವನ್ನು ಮೆರೆಯುತ್ತಾರೆ. ಮದುವೆಯ ಸುಖ ಅನುಭವಿಸುವ ಮುಂಚೆಯೇ ನಾಯಕಿ ಭಾರತಿ ಅಕಸ್ಮಿಕವಾಗಿ ಬಾವಿಗೆ ಬಿದ್ದು ಸಾಯುತ್ತಾರೆ. ಅದೇ ನೋವಿನಲ್ಲಿ ಇರುವಾಗ, ವಜ್ರಮುನಿ , ರಾಜ್‌ಗೆ ಇನ್ನೊಂದು ಅನೈತಿಕ ಸಂಬಂಧ ಇದೆ ಎಂದು ಅನುಮಾನ ಪಡುತ್ತಾರೆ. ವಜ್ರಮುನಿ ಎಂಥಾ ಒಳ್ಳೆಯ ಪಾತ್ರವನ್ನು ಮಾಡಿದರೂ ಕೊನೇ ಗಳಿಗೆಯಲ್ಲಿ ವಿಲನ್ ಆಗಲೇಬೇಕಿತ್ತಲ್ಲ….!

    ‘ನಿನ್ನ ತಮ್ಮನಿಗೆ ಇನ್ನೊಂದು ಸಂಬಂಧ ಇದೆ. ಆತನ ಒಳ್ಳೆತನ ಬೆಳಗಾವಿಯಲ್ಲಿ ಹೊಳೆಯುತ್ತಿದೆ…’ ಎನ್ನುತ್ತಾನೆ. ಅಷ್ಟೇ ಅಲ್ಲ, ನಮ್ಮ ಪಾಲು ಕೊಡು ಎನ್ನುತ್ತಾನೆ. ರಾಜ್ ಕೊಡುವುದಿಲ್ಲ ಎಂದಾಗ, ತಿನ್ನೋದು ನಮ್ಮ ಅನ್ನ , ಉಡೋದು ನಮ್ಮ ಬಟ್ಟೆ…’ ಎಂದು ಹೇಳಿಯೇ ಬಿಡುತ್ತಾನೆ. ಇನ್ನೇನು ಊಟದ ತಟ್ಟೆ ಮುಂದೆ ಕೂತ ರಾಜ್ ತುತ್ತನ್ನು ಬಾಯಿಗೆ ಇಡಬೇಕೆನ್ನಷ್ಟರಲ್ಲಿ ವಜ್ರಮುನಿ ಮಾತು ಎದೆಗೆ ತಿವಿಯುತ್ತದೆ. ತಟ್ಟೆಗೆ ನಮಸ್ಕಾರ ಮಾಡಿ, ಚಪ್ಪಲಿಯನ್ನೂ ಹಾಕಿಕೊಳ್ಳದೆ ರಾಜ್ ಮನೆಯಿಂದ ಹೊರಡುತ್ತಾರೆ. ತೋಟಕ್ಕೆ ಬಂದು ಮಣ್ಣನ್ನು ಕೈಗೆತ್ತಿಕೊಂಡು, ಕಣ್ಣಿಗೆ ಒತ್ತಿಕೊಂಡು ಹೇಳುತ್ತಾರೆ. ‘ ನೀನು ನಂಬಿದವರಿಗೆ ಎಂದೆಂದೂ ಕೈ ಬಿಡುವುದಿಲ್ಲ…ನನ್ನನ್ನು ಕಾಪಾಡಿದಂತೆ, ನಮ್ಮ ಅಕ್ಕ ಮತ್ತು ಮಕ್ಕಳನ್ನು ಕಾಪಾಡು ತಾಯೇ…’ ಎಂದು ಕೈ ಮುಗಿಯುತ್ತಾರೆ. ಮೈಮೇಲಿದ್ದ ಶಾಲ್ ಅನ್ನು ಗಿಡದ ಕೆಳಗೆ ಚಳಿಯಿಂದ ಮಲಗಿದ್ದ ಮುದುಕನಿಗೆ ಹೊದ್ದಿಸಿ….ಸೂರ್ಯಾಸ್ತ ಗುಂಟ ಒಂಟಿ…ಒಂಟಿಯಾಗಿ ಬಹು ದೂರ ದೂರ… ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಉಫ್…ರಾಜ್ ಈ ಹಿಂದೆ ಮಾಡಿದ ಮಾಸ್ ಎಲಿಮೆಂಟ್‌ಗಳೇ ಇಲ್ಲದ ಈ ಚಿತ್ರವನ್ನು ಜನರು ಒಪ್ಪುತ್ತಾರಾ ? ಹೀಗಾಗಿಯೇ ಎಲ್ಲರಿಗೂ ಇದು ಅನ್ನಿಸಿತ್ತು. ಕ್ಲೈಮ್ಯಾಕ್ಸ್ ಚೇಂಜ್ ಮಾಡಿದರೆ ಜನ ನೋಡಬಹುದು. ಇದಕ್ಕೆ ಸಿದ್ದಲಿಂಗಯ್ಯ ಬಿಲ್ ಕುಲ್ ಒಪ್ಪಲಿಲ್ಲ. ಚಿತ್ರ ಕತೆ ಮಾಡಿದ್ದು ನಾನು, ಜನರಿಗೆ ಇದರ ಮೂಲಕ ಹೊಸ ಸಂದೇಶವನ್ನೂ ಕೊಟ್ಟಿದ್ದೇನೆ. ಎಲ್ಲರನ್ನೂ ಹೊಡೆದು ಮತ್ತೆ ಅದೇ ಮನೆಯಲ್ಲಿ ರಾಜ್ ಇದ್ದರೆ ಇಡೀ ಪಾತ್ರವೇ ಬಿದ್ದು ಹೋಗುತ್ತದೆ. ನಾನಂತೂ ಏನೂ ಮಾಡಲ್ಲ. ಬೇಕಾದರೆ ಇನ್ನೊಬ್ಬರಿಂದ ಕ್ಲೈಮ್ಯಾಕ್ಸ್ ಬದಲಿಸಿ…’ ಎನ್ನುತ್ತಾ ಹೊರಟು ಹೋದರು. ಮುಂದೇನು ಮಾಡಬೇಕು? ಗೌಡರು ಮತ್ತೆ ಮತ್ತೆ ಯೋಚಿಸಿದರು. ಅಷ್ಟರಲ್ಲಿ ಸುದ್ದಿ ಹೊರಬಿದ್ದಾಗಿತ್ತು.‘ ಸಿನಿಮಾ ಅಷ್ಟಕ್ಕಷ್ಟೇ ಅಂತೆ….ಗೌಡರು ಅಂಗಡಿ ಮುಚ್ಚಿಕೊಂಡು ಹೋಗುತ್ತಾರೆ…ಮೊದಲೇ ಹೇಳಿದ್ದೇವು…ಕಲರ್ ಚಿತ್ರವನ್ನು ಮಾಡಬೇಡಿ ಅಂತ…’ ತಲೆಗೊಬ್ಬರು ಮಾತಾಡಿದರು. ನಿರ್ಮಾಪಕ ಚಂದೂಲಾಲ್ ಜೈನ್ ಕೂಡ, ಭಾರ್ಗವ ಬಳಿ ಇದೇ ಮಾತನ್ನು ಕೇಳಿದರು. ಆದರೆ ಭಾರ್ಗವ ಸಿನಿಮಾದ ಬಗ್ಗೆ ಪಕ್ಕಾ ಆಗಿದ್ದರು. ‘ ನೂರು ದಿನ ಓಡುವುದರಲ್ಲಿ ಅನುಮಾನ ಇಲ್ಲ…ಪಕ್ಕಾ…’ ಎಂದರು. ಗಾಂಧಿನಗರದಲ್ಲೂ ಇದೇ ವಿಷಯದ ಬಗ್ಗೆ ಚರ್ಚೆಗಳು ಶುರುವಾದವು. ಆದರೆ ಈಗೇನೂ ಮಾಡುವಂತಿರಲಿಲ್ಲ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಕೊನೆಗೂ ಗೌಡರು ಜನರ ಮೇಲೆ ಭಾರ ಚಿತ್ರವನ್ನು ತೆರೆ ಕಾಣಿಸಲು ರೆಡಿಯಾದರು. ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ. ದುಡ್ಡನ್ನು ನೀರಿನಂತೆ ಸುರಿದಿದ್ದೇವೆ. ರಾಜ್ ನಾಮಬಲವೂ ಚಿತ್ರಕ್ಕಿದೆ, ಈಸ್ಟ್ ಮನ್ ಕಲರ್ ಚಿತ್ರ ಎನ್ನುವುದು ಜನರನ್ನು ಖಂಡಿತ ಸೆಳೆಯುತ್ತದೆ, ರಾಜ್ ಭಾರತಿ ಜೋಡಿ ಅಂದರೆ ನಿಜ ಜೀವನದಲ್ಲೂ ಗಂಡ ಹೆಂಡತಿ ಎಂಬಂತೆ ಜನರು ಭಾವಿಸಿದ್ದಾರೆ…ಇದರಲ್ಲಿ ಒಂದಲ್ಲ ಒಂದು ವಿಷಯ ಜನರಿಗೆ ಕನೆಕ್ಟ್ ಆದರೆ ಸಾಕು. ನಮ್ಮ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನ ಇಲ್ಲ….ಎಂದು ಗೌಡರು ತಮಗೇ ಹೇಳಿಕೊಂಡರು. ಆಗಿದ್ದು ಆಗೇ ಬಿಡಲಿ ಎಂದು ತಮ್ಮ ಸೋದರರಿಗೆ ಎಲ್ಲವನ್ನೂ ವಿವರಿಸಿ. ಚಿತ್ರದ ಬಿಡುಗಡೆ ತಯಾರಿ ಮಾಡಿಕೊಳ್ಳುವಂತೆ ಹೇಳಿದರು. ಅದಕ್ಕೂ ಮುನ್ನ ಸೆನ್ಸಾರ್ ಮಂಡಳಿಗೆ ಚಿತ್ರವನ್ನು ತೋರಿಸಬೇಕಿತ್ತು. ಅದಕ್ಕೂ ಒಂದು ದಿನ ನಿಗದಿಯಾಯಿತು. ಮಂಡಳಿ ಸದಸ್ಯರು ಸಿನಿಮಾ ನೋಡಿದ್ದೇ ತಡ, ಎಲ್ಲರ ಕಣ್ಣಲ್ಲಿ ಹೊಸ ಮಿಂಚು ಸುಳಿದಂತಾಯಿತು. ‘ಗೌಡರೇ…ಎಂಥಾ ಒಳ್ಳೆ ಸಿನ್ಮಾ ಮಾಡಿದೀರಿ…ನಮಗಂತೂ ಸಿಕ್ಕಾಪಟ್ಟೆ ಇಷ್ಟವಾಯಿತು. ಬರೀ ಮನರಂಜನೆ ಮಾತ್ರವಲ್ಲ…ಜನರಿಗೆ ಒಳ್ಳೆಯ ಸಂದೇಶವನ್ನೂ ಕೊಟ್ಟಿದ್ದೀರಿ. ಗ್ಯಾರಂಟಿ ಹಿಟ್ ಅಗುತ್ತೆ…ಯು ಸರ್ಟಿಫಿಕೇಟ್ ಕೊಡ್ತಿವಿ…’ ಎಂದು ಅವರ ಬಾಯಿಂದ ಮಾತು ಹೊರ ಬೀಳುತ್ತಿದ್ದಂತೆಯೇ…ಗೌಡರು ಒಮ್ಮೆ ಉಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಟ್ಟರು. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಅದರಲ್ಲಿ ಅಲ್ಲಿವರೆಗೆ ಇದ್ದ ಆತಂಕ, ನೋವು, ಅಸಹನೆ ಎಲ್ಲವೂ ಕೊಚ್ಚಿ ಹೋಯಿತು…  ಬಂಗಾರದ ಮನುಷ್ಯನಿಗೆ ಮೊಟ್ಟ ಮೊದಲ ಗೆಲುವು ಸಿಕ್ಕಿತ್ತು…

  • ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ

    13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.3 ರಿಂದ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಚಿತ್ರೋತ್ಸವವನ್ನು ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಜಿ.ಕೆ.ವಿ.ಕೆ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಎಂ.ರಾಜೀವ್ ಚಂದ್ರಶೇಖರ್ ಗೌರವಾನ್ವಿತ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್, ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ಆಹಾರ, ನಾಗರೀಕ ಸರಬರಾಜು ಸಚಿವ ಕೆ.ಗೋಪಾಲಯ್ಯ, ತೋಟಗಾರಿಕೆ ಸಚಿವ ಮುನಿರತ್ನ, ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಂ.ಕೃಷ್ಣಪ್ಪ, ಎಂ.ಸತೀಶ್ ರೆಡ್ಡಿ, ಬಿ.ಕೆ ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿದ್ದಾರೆ. ಇದನ್ನೂ ಓದಿ : ಅದ್ಧೂರಿ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್

    ನಟ ದರ್ಶನ್ ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರೆ, ವಿಶೇಷ ಅತಿಥಿಯಾಗಿ ಹಿರಿ ನಟಿ ಭಾರತಿ ವಿಷ್ಣುವರ್ಧನ್ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪ್ರಿಯದರ್ಶನ್ ಆಗಮಿಸುತ್ತಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಚಿತ್ರೋತ್ಸವದ ಕುರಿತು ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ, ನಟಿ ಪ್ರಣೀತಾ ಸುಭಾಷ್, ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್.ಜೈರಾಜ್ ಮತ್ತು ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿರಲಿದ್ದಾರೆ.

  • ಚಿತ್ರರಂಗವಷ್ಟೇ ಅಲ್ಲ ಕನ್ನಡ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿರುವುದಕ್ಕೆ ಹೆಮ್ಮೆಯಾಗ್ತಿದೆ: ಬೊಮ್ಮಾಯಿ

    ಚಿತ್ರರಂಗವಷ್ಟೇ ಅಲ್ಲ ಕನ್ನಡ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿರುವುದಕ್ಕೆ ಹೆಮ್ಮೆಯಾಗ್ತಿದೆ: ಬೊಮ್ಮಾಯಿ

    – ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಷ್ಠಾನವನ್ನು ಮುಂದುವರಿಸುತ್ತೇನೆ
    – ನಿಮ್ಮ ಫೇವರೆಟ್ ನಟಿಯಾಗಿರುವುದು ನಮ್ಮ ಭಾಗ್ಯ ಅಂದ್ರು ಭಾರತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ಕೆಲಸವನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ನಟಿ ಭಾರತಿ ವಿಷ್ಣುವರ್ಧನ್‍ರವರಿಗೆ ತಿಳಿಸಿದ್ದಾರೆ.

    ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಸವರಾಜ ಬೊಮ್ಮಾಯಿಯವರು ನನಗೆ ಕನ್ನಡದಲ್ಲಿ ಆಲ್ ಫೇವರೆಂಟ್ ನಟ ಎಂದರೆ ಡಾ. ರಾಜ್ ಕುಮಾರ್ ಮತ್ತು ಮೂವರು ನಟಿಯರೆಂದರೆ ಬಹಳ ಇಷ್ಟ. ಅದರಲ್ಲಿ ಭಾರತಿಯವರು ಕೂಡ ಒಬ್ಬರು ಎಂಬ ವಿಚಾರ ಬಹಿರಂಗಪಡಿಸಿದ್ದರು. ಅಲ್ಲದೇ ಡಾ. ರಾಜ್ ಕುಮಾರ್ ಹಾಗೂ ಭಾರತಿಯವರ ಕಾಂಬಿನೇಷನ್‍ನಲ್ಲಿ ಬಂದ ಬಂಗಾರದ ಮನುಷ್ಯ ಸಿನಿಮಾವನ್ನು ಹಲವಾರು ಬಾರಿ ವೀಕ್ಷಿಸಿರುವುದಾಗಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಮಂತ್ರಾಲಯದಿಂದ ವಾಪಸ್ಸಾಗ್ತಿದ್ದಾಗ ಕಾರು ಅಪಘಾತ- ಮದ್ವೆಯಾಗ್ಬೇಕಿದ್ದ ಜೋಡಿ ಸಾವು

    ಹೀಗಾಗಿ ಪಬ್ಲಿಕ್ ಟಿವಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಬೊಮ್ಮಾಯಿಯವರಿಗೆ ಸಪ್ರ್ರೈಸ್ ಆಗಿ ಹಿರಿಯ ನಟಿ ಭಾರತೀಯವರು ಕರೆ ಮಾಡಿ ಮಾತನಾಡಿದರು. ನೀವು ಮುಖ್ಯಮಂತ್ರಿಯಾಗಿರುವ ಬಗ್ಗೆ ನಮಗೆ ಬಹಳ ಸಂತೋಷವಿದೆ. ನಿಮ್ಮನ್ನು ಭೇಟಿಯಾಗಬೇಕೆಂದು ಬಹಳಷ್ಟು ಬಾರಿ ಪ್ರಯತ್ನಿಸಿದೆ. ಆದರೆ ಈವರೆಗೂ ಭೇಟಿಯಾಗಲು ಅವಕಾಶ ಸಿಗಲಿಲ್ಲ. ನೀವು ನಿಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೀರಾ ಎಂದು ನಾನು ಕೂಡ ತೊಂದರೆ ನೀಡಲಿಲ್ಲ ಎಂದಿದ್ದಾರೆ. ಆಗ ಬೊಮ್ಮಾಯಿಯವರು ನಾನು ಕೂಡ ನಿಮ್ಮನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಶಿಷ್ಯ ಸಂತೋಷ್ ಲಾಡ್ ಅಸಮಾಧಾನ

    ಇದೇ ಸಂದರ್ಭದಲ್ಲಿ ಸಾಹಸ ಸಿಂಹ ಡಾ. ವಿಷ್ಟುವರ್ಧನ್ ಪ್ರತಿಷ್ಠಾನಕ್ಕೆ ನೀವು ಅಧ್ಯಕ್ಷರಾಗಿದ್ದೀರಾ, ಇದರಿಂದ ನಿಮ್ಮ ಜೊತೆ ಕೆಲಸ ಮಾಡುವಂತಹ ಸೌಭಾಗ್ಯ ನಮಗೆ ಸಿಕ್ಕಿದೆ. ಇದೇ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್‍ರವರ ಹುಟ್ಟುಹಬ್ಬವಿರುವುದಾಗಿ ತಿಳಿಸಿದ ಅವರು, ವಿಷ್ಣುವರ್ಧನ್ ಅವರ ಪ್ರತಿಷ್ಠಾನದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ. ಆಗ ನಾನು ಪ್ರತಿಷ್ಠಾನದ ಕೆಲಸವನ್ನು ನಾನು ಮುಂದುವರಿಸಿ ಮಾಡಿಕೊಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸುದೀಪ್ ಒಬ್ಬ ನಟರಾಗುತ್ತಾರೆ ಅಂತ ಅಂದುಕೊಂಡಿರಲಿಲ್ಲ: ಬೊಮ್ಮಾಯಿ

    ನಿಮ್ಮ ಅಂದಿನ ಹಳೆಯ ಸಿನಿಮಾಗಳು ಇಂದಿಗೂ ಸಹ ಹಿಟ್ ಸಿನಿಮಾವಾಗಿದೆ. ನೀವೆಲ್ಲರೂ ಕನ್ನಡ ಚಿತ್ರರಂಗವಷ್ಟೇ ಅಲ್ಲದೇ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದೀರಾ. ಹೀಗಾಗಿ ನಿಮ್ಮೆಲ್ಲರ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಬೊಮ್ಮಾಯಿಯವರು ನುಡಿದಿದ್ದಾರೆ. ಕೊನೆಗೆ ನಿಮ್ಮ ಫೇವರೆಟ್ ನಟಿಯಾಗಿರುವುದು ನಮ್ಮ ಭಾಗ್ಯ. ಭಗವಂತ ನಿಮಗೆ ಉತ್ತಮ ಕೆಲಸಗಳನ್ನು ಮಾಡುವಂತ ಶಕ್ತಿ ಕೊಡಲಿ ಎಂದು ಭಾರತಿಯವರು ಶುಭ ಹಾರೈಸಿದ್ದಾರೆ.

  • ಪುತ್ಥಳಿ ಧ್ವಂಸ ಅವಮಾನವಲ್ಲ, ಆಶೀರ್ವಾದ: ಭಾರತಿ ವಿಷ್ಣುವರ್ಧನ್

    ಪುತ್ಥಳಿ ಧ್ವಂಸ ಅವಮಾನವಲ್ಲ, ಆಶೀರ್ವಾದ: ಭಾರತಿ ವಿಷ್ಣುವರ್ಧನ್

    ಬೆಂಗಳೂರು: ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡುವವರು ಇರಬೇಕು. ಹಾಗಿದ್ದಲ್ಲಿ ಮಾತ್ರ ಅವರ ಇರುವಿಕೆ ಗೊತ್ತಾಗುತ್ತೆ. ಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು. ಅದನ್ನ ಆಶೀರ್ವಾದ ಅಂದುಕೊಳ್ಳೋಣ ಎಂದು ಸಾಹಸಿಂಹ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

    ಮೈಸೂರಿನಲ್ಲಿ ವಿಷ್ಣು ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ಇಡೀ ಚಿತ್ರರಂಗ ಪ್ರತಿಕ್ರಿಯಿಸಿದೆ. ಘಟನೆಗೆ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದವನ್ನು ಹೇಳುತ್ತೇನೆ. ಎಲ್ಲರ ಮನದಲ್ಲಿಯೂ ವಿಷ್ಣು ಇದ್ದಾರೆ ಎಂದರು.

    ಯಾರೋ ಕೆಲವರು ಅವರ ಬಗ್ಗೆ ಮಾತನಾಡುತ್ತಾರೆ. ಮಾತನಾಡುವವರು ಇದ್ದಾಗಲೇ ನಮ್ಮವರು ಇದ್ದಾರೆ ಎನಿಸುತ್ತದೆ. ಪುತ್ಥಳಿ ಧ್ವಂಸವನ್ನು ಅವಮಾನ ಅಂದುಕೊಳ್ಳಬಾರದು. ಅದನ್ನು ಆಶೀರ್ವಾದ ಅಂದುಕೊಳ್ಳೋಣ. ಇಂಹತ ಕೆಲಸ ಮಾಡಿದಂತವರಿಗೆ ನಾನು ಏನೂ ಹೇಳುವುದಿಲ್ಲ. ಅಂತವರ ಬಗ್ಗೆ ಏನು ಮಾತನಾಡದೇ ಇರುವುದೇ ಉತ್ತಮ ಎಂದು ಹೇಳಿದ್ದಾರೆ. ಇದನ್ನು ಓದಿ: ಸಿಂಹ ಯಾವತ್ತಿದ್ರೂ ಸಿಂಹವೇ- ವಿಷ್ಣು ಪುತ್ಥಳಿ ಧ್ವಂಸಗೊಳಿಸಿದವ್ರ ವಿರುದ್ಧ ಪುತ್ರಿ ಕಿಡಿ

     

    ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಿರುವ ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ಸ್ಥಾಪನೆ ಮಾಡಿದ್ದ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಈ ಸಂಬಂಧ ಅಳಿಯ ಅನಿರುದ್ಧ್, ನಟರಾದ ದರ್ಶನ್, ಸುದೀಪ್ ಸೇರಿದಂತೆ ವಿಷ್ಣು ಅಭಿಮಾನಿಗಳು ಕೂಡ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದರು. ಇದೀಗ ಅದೇ ವೃತ್ತದಲ್ಲಿ ವಿಷ್ಣುದಾದಾನ ಪ್ರತಿಮೆ ಮತ್ತೆ ನಿರ್ಮಾಣವಾಗುತ್ತಿದೆ.

    </p>

  • ಸೆ.15 ರಂದು ವಿಷ್ಣುವರ್ಧನ್ ಸ್ಮಾರಕಕ್ಕೆ ಭೂಮಿ ಪೂಜೆ: ಭಾರತಿ

    ಸೆ.15 ರಂದು ವಿಷ್ಣುವರ್ಧನ್ ಸ್ಮಾರಕಕ್ಕೆ ಭೂಮಿ ಪೂಜೆ: ಭಾರತಿ

    ಬೆಂಗಳೂರು: ಇದೇ ತಿಂಗಳ 15ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಲಿದೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

    ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ಭೇಟಿ ಮಾಡಿ ವಿಷ್ಣು ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆ ನೆರೆವೇರಿಸುವಂತೆ ಮನವಿ ಮಾಡಿಕೊಂಡರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ, 11ನೇ ವರ್ಷದ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿಂಎಂ ಅವರನ್ನ ಕರೆಯಲು ಬಂದಿದ್ದೇವೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗುತ್ತಿದೆ. ಈ ತಿಂಗಳ 15ರಂದು ಸ್ಮಾರಕದ ಗುದ್ದಲಿ ಪೂಜೆ ಕಾರ್ಯಕ್ರಮವಿದೆ. ಸೂಕ್ತ ಭದ್ರತೆಗಾಗಿ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಸಿಎಂಗೆ ಮನವಿ ಮಾಡಿದ್ದೇವೆ ಎಂದರು.

    ಕೋವಿಡ್ ಇರೋ ಕಾರಣ ಸಿ.ಎಂ ಗುದ್ದಲಿಪೂಜೆಗೆ ಬರಲು ಆಗುತ್ತಿಲ್ಲ. ಹೀಗಾಗಿ ಅವರು ಆನ್ ಲೈನ್ ಮೂಲಕ ವಿಷ್ಣು ಸ್ಮಾರಕದ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

    ಇದೇ ವೇಳೆ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ ಅನಿರುದ್ಧ, ನಮಗೆ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಜಾಲದ ಬಗ್ಗೆ ಅರಿವಿಲ್ಲ. ಈ ವಿಚಾರ ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ. ಇಡೀ ಜಗತ್ತಿನಲ್ಲೇ ಈ ಮಾಫಿಯಾ ಇರಬಾರದು. ಯುವ ಪೀಳಿಗೆಯನ್ನ ಇದರಿಂದ ರಕ್ಷಿಸಬೇಕು ಎಂದು ಇದೇ ವೇಳೆ ಮನವಿ ಮಾಡಿಕೊಂಡರು.

  • ನಾವು ನಿಮ್ಮನ್ನು ಮಿಸ್ ಮಾಡೋಕೆ ಆಗಲ್ಲ – ಎಸ್‍ಪಿಬಿಗಾಗಿ ನಟಿ ಭಾರತಿ ಫ್ರಾರ್ಥನೆ

    ನಾವು ನಿಮ್ಮನ್ನು ಮಿಸ್ ಮಾಡೋಕೆ ಆಗಲ್ಲ – ಎಸ್‍ಪಿಬಿಗಾಗಿ ನಟಿ ಭಾರತಿ ಫ್ರಾರ್ಥನೆ

    ಬೆಂಗಳೂರು: ಕೊರೊನಾದಿಂದ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯ ಆರೋಗ್ಯದಲ್ಲಿ ಗಂಭೀರವಾದ ಹಿನ್ನೆಲೆಯಲ್ಲಿ ಎಸ್‍ಪಿಬಿ ಶೀಘ್ರಗುಣಮುಖರಾಗಲಿ ಅಂತ ದೇವರಲ್ಲಿ ಪ್ರಾರ್ಥಿಸೋಣ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

    ಸೋಶಿಯಲ್ ಮೀಡಿಯಾದ ಮೂಲಕ ಭಾರತಿ ವಿಷ್ಣುವರ್ಧನ್ ಅವರು ಬಾಲಸುಬ್ರಹ್ಮಣ್ಯ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು ನಟ ಅನಿರುದ್ಧ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    “ನಮ್ಮ ಬಾಲಸುಬ್ರಹ್ಮಣ್ಯ ಅವರು ಕೊರೊನಾದಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದು, ಅದರಿಂದ ನರಳುತ್ತಿದ್ದಾರೆ. ಈ ಸುದ್ದಿ ಕೇಳಿ ನನಗೆ ಬಹಳ ಬೇಸರವಾಗಿದೆ. ಅಂತಹ ಮಹಾನ್ ಗಾಯಕರು, ಮಹಾನ್ ವ್ಯಕ್ತಿ ಎಲ್ಲರಿಗೂ ಆತ್ಮೀಯವಾಗಿ ಇರುವವರು. ಆದಷ್ಟು ಬೇಗ ಅವರು ನಮ್ಮ ಮನೆಗಳಿಗೆ ಬರಲಿ. ಅವರನ್ನು ನಾವು ಮಿಸ್ ಮಾಡೋಕೆ ಆಗಲ್ಲ” ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

    ಅಲ್ಲದೇ “ಅವರನ್ನು ನೋಡಿದಾಗಲೆಲ್ಲ ನಮ್ಮ ಯಜಮಾನ್ರು ನೆನಪಾಗುತ್ತಾರೆ. ಯಾಕೆಂದರೆ ಅವರಿಬ್ಬರದ್ದು ಎರಡು ಶರೀರ ಆದ್ರೂ ಒಂದೇ ಶಾರೀರ. ಅವರನ್ನು ಎಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ” ಎಂದರು. ಬಾಲು ಅವರೇ ಧೈರ್ಯವಾಗಿರಿ, ನಿಮಗೆ ಏನು ಹಾಗಲ್ಲ. ನೀವು ಖಂಡಿತ ಆರೋಗ್ಯವಾಗಿ ವಾಪಸ್ ಬರುತ್ತೀರಿ ಎಂದು ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡುತ್ತಿವೆ.

  • ಯಾವ ಜನ್ಮದ ಪುಣ್ಯವೋ ಏನೋ ಈ ದೇವತೆ ನನಗೆ ತಾಯಿಯಾದ್ರು: ಅನಿರುದ್ಧ್

    ಯಾವ ಜನ್ಮದ ಪುಣ್ಯವೋ ಏನೋ ಈ ದೇವತೆ ನನಗೆ ತಾಯಿಯಾದ್ರು: ಅನಿರುದ್ಧ್

    ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಭಾರತಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ಅನಿರುದ್ಧ್ ಸೋಶಿಯಲ್ ಮೀಡಿಯಾದಲ್ಲಿ ಭಾರತಿ ಅವರಿಗೆ ಶುಭಾಶಯ ಕೋರಿದ್ದಾರೆ.

    ನಟ ಅನಿರುದ್ಧ್ ಫೇಸ್‍ಬುಕ್‍ನಲ್ಲಿ ಭಾರತಿ ಅಮ್ಮನವರ ಬಗ್ಗೆ ಬರೆದುಕೊಳ್ಳುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. “ಸದಾ ನನ್ನ ಜೀವನದ ದೇವತೆ ಎನ್ನುತ್ತಿದ್ದರು ಅಪ್ಪಾವ್ರು. ಯಾವ ಜನ್ಮದ ಪುಣ್ಯವೋ ಏನೋ ಆ ದೇವತೆ ನನಗೆ ತಾಯಿಯಾದರು. ಅಂದಿನಿಂದ ಇಂದಿನವರೆಗೂ ಅದೇ ಪ್ರೀತಿ, ಮಮತೆ, ವಾತ್ಸಲ್ಯ, ಮತ್ತೇನು ಹೇಳಲಿ ನಿಮ್ಮ ಬಗ್ಗೆ” ಎಂದು ಅಮ್ಮನ ಬಗ್ಗೆ ಪ್ರೀತಿಯಿಂದ ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೇ, “ನನ್ನ ಪ್ರತಿ ಪ್ರಾರ್ಥನೆಯಲ್ಲಿಯೂ ನೀವು ಸದಾ ಸಂತೋಷವಾಗಿರಲೆಂಬ ಕೋರಿಕೆ ಇದ್ದೇ ಇರುತ್ತದೆ. ನನ್ನ ಮುಂದಿನ ಜನ್ಮದಲ್ಲಿಯೂ ಈ ತಾಯಿಯ ಪ್ರೀತಿ ನನಗೆ ಸಿಗುವಂತಾಗಲಿ ಎಂದಷ್ಟೇ ಕೇಳಿಕೊಳ್ಳಬಲ್ಲೆ. ಹುಟ್ಟುಹಬ್ಬದ ಶುಭಾಶಯಗಳು ಅಮ್ಮ” ಎಂದು ಪ್ರೀತಿಯಿಂದ ಭಾರತಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

    ಅನಿರುದ್ಧ್ ಅವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ನಂತರ ಅಭಿಮಾನಿಗಳು ಕೂಡ ಕಮೆಂಟ್ ಮಾಡುವ ಮೂಲಕ ಭಾರತಿ ಅವರಿಗೆ ಶುಭ ಕೋರುತ್ತಿದ್ದಾರೆ. ನಟ ಅನಿರುದ್ಧ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಈ ಸೀರಿಯಲ್‍ನಲ್ಲಿ ಅನಿರುದ್ಧ್ ಆರ್ಯ ವರ್ಧನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

     

    ಭಾರತಿ ವಿಷ್ಣುವರ್ಧನ್ ಅವರು 1960ರಲ್ಲಿ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟಿದ್ದು, 80ರ ದಶಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರು ಮನಗೆದ್ದಿದ್ದಾರೆ. ಡಾ.ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಅನಂತ್‍ನಾಗ್ ಸೇರಿದಂತೆ ಅನೇಕ ಮೇರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸುಮಾರು 100ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದಾರೆ.

  • ವಿಷ್ಣು ಸ್ಮಾರಕ ಸ್ಥಳದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ

    ವಿಷ್ಣು ಸ್ಮಾರಕ ಸ್ಥಳದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ

    ಮೈಸೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 10ನೇ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಹೊರವಲಯದ ವಿಷ್ಣು ಸ್ಮಾರಕ ಸ್ಥಳದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು.

    ಸ್ಮಾರಕ ಸ್ಥಳದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಹತ್ತು ವರ್ಷಗಳ ನಂತರ ಒಳ್ಳೆಯದಾಗುತ್ತಿದೆ. ಇನ್ನೊಂದು ವಾರದಲ್ಲಿ ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

    ವಿಷ್ಣು ನಿಧನರಾಗಿ ಹತ್ತು ವರ್ಷಗಳಾಗಿವೆ. ಅಭಿಮಾನಿಗಳ ಪ್ರೀತಿ, ವಿಶ್ವಾಸ ಇನ್ನು ಕಡಿಮೆಯಾಗಿಲ್ಲ. ಅವರ ಘನತೆಗೆ ಯಾವುದೇ ಧಕ್ಕೆಯಾಗಿಲ್ಲ. ವಿಷ್ಣು ಇನ್ನೂ ನಮ್ಮೊಂದಿಗೆ ಇದ್ದಾರೆ. ಸ್ಮಾರಕ ವಿಷ್ಣು ಅವರ ಕನಸು. ಸ್ಮಾರಕ ಜಾಗದಲ್ಲಿ ಜನಪರ ಕೆಲಸಗಳಾಬೇಕು ಎಂಬುದು ಅವರ ಬಯಕೆಯಾಗಿತ್ತು. ಕಟ್ಟಡದ ರೂಪುರೇಷೆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದರು. ಸಿಎಂ ಯಡಿಯೂರಪ್ಪ ಅವರು ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

  • 45 ವರ್ಷದ ಹಿಂದೆ ವಿಷ್ಣುವರ್ಧನ್ ಬಳಸಿದ್ದ ಕಲ್ಲನ್ನು ಗಿಫ್ಟ್ ನೀಡಲಿದ್ದಾರೆ ಚಿಕ್ಕಮಗಳೂರಿನ ಜನ

    45 ವರ್ಷದ ಹಿಂದೆ ವಿಷ್ಣುವರ್ಧನ್ ಬಳಸಿದ್ದ ಕಲ್ಲನ್ನು ಗಿಫ್ಟ್ ನೀಡಲಿದ್ದಾರೆ ಚಿಕ್ಕಮಗಳೂರಿನ ಜನ

    ಚಿಕ್ಕಮಗಳೂರು: ಸಾಹಸಸಿಂಹ, ನಟ ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬಕ್ಕೆ ಅವರ ಕುಟುಂಬಸ್ಥರು ಹಾಗೂ ಪತ್ನಿ ಭಾರತಿ ವಿಷ್ಣುವರ್ಧನ್‍ಗೆ ಚಿಕ್ಕಮಗಳೂರಿನ ಜನ ಎಂದೂ ಮರೆಯದ ವಿಶೇಷವಾದ ಕಲ್ಲನ್ನು ಉಡುಗೊರೆಯಾಗಿ ನೀಡಲಿದ್ದಾರೆ.

    ಸ್ವತಃ ವಿಷ್ಣುವರ್ಧನ್ ಅವರೇ ಹಿಡಿದು ಚಿತ್ರಕ್ಕಾಗಿ ಬಳಸಿದ್ದ ಕಲ್ಲು. 45 ವರ್ಷಗಳಿಂದ ಆ ಸಾಧಾರಣ ಕಲ್ಲನ್ನು ರಕ್ಷಣೆ ಮಾಡಿಕೊಂಡು ಬಂದಿರುವ ಮಲೆನಾಡಿಗರು, ಈಗ ಆ ಕಲ್ಲನ್ನು ಅವರ ಕುಟುಂಬಸ್ಥರಿಗೆ ನೀಡಲು ಮುಂದಾಗಿದ್ದಾರೆ. ನೋಡೋಕೆ ಇದೊಂದು ಕಲ್ಲಷ್ಟೆ. ಆದರೆ ಈ ಕಲ್ಲನ್ನು ಹಿಡಿದು ವಿಷ್ಣುವರ್ಧನ್ ನಟಿಸಿದ್ದ ನಟನೆ, ತೋರಿದ ಭಾವ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರೋದಂತು ಸತ್ಯ. ಅಂತಹ ಕಲ್ಲನ್ನು ಭಾರತಿ ವಿಷ್ಣುವರ್ಧನ್ ಉಡುಗೊರೆಯಾಗಿ ಪಡೆಯಲಿದ್ದಾರೆ. ಇದನ್ನು ಓದಿ: ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    ಆ ಕಲ್ಲು ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ, ‘ಭೂತಯ್ಯನಮಗ ಅಯ್ಯು’ ಚಿತ್ರದಲ್ಲಿ ವಿಷ್ಣುವರ್ಧನ್ ಕತ್ತಿಯನ್ನ ಮಸೆದ ಕಲ್ಲು. ಈ ಚಿತ್ರದ ಶೇಕಡ 60ರಷ್ಟು ಭಾಗ ಚಿತ್ರೀಕರಣಗೊಂಡಿದ್ದು ಚಿಕ್ಕಮಗಳೂರು ತಾಲೂಕಿನ ಕಳಸಾಪುರದಲ್ಲಿ. ಆ ಕಲ್ಲನ್ನು ಅದೇ ಊರಿನ ಜನ 45 ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹಳೇ ಮನೆಯಲ್ಲಿದ್ದ ಕಲ್ಲನ್ನು ಹೊಸ ಮನೆಗೂ ಕೊಂಡೊಯ್ದಿದ್ದಾರೆ. ಬೇರೆ-ಬೇರೆ ಸಿನಿಮಾದವರು ಶೂಟಿಂಗ್‍ಗೆ ಬಂದಾಗ ಕೇಳಿದಾಗಲು ಕೊಟ್ಟಿಲ್ಲ. ದುಡ್ ಕೊಡುತ್ತೇವೆ ಎಂದರು ಇಲ್ಲ ಅಂದಿದ್ದಾರೆ. ಈಗ ಆ ಕಲ್ಲನ್ನು ಊರಿನ ಯುವಕರು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅವರ ಮನೆಯವರಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬದಂದು ಅವರ ಮನೆಗೆ ತೆರಳಿ ಭಾರತಿ ಅವರ ಕೈಗೆ ಅದನ್ನು ನೀಡಲು ಗ್ರಾಮದ ಯುವಕರು ನಿರ್ಧರಿಸಿದ್ದಾರೆ.

    ಊರಿನ ಜನ ಅದರಲ್ಲಿ ವಿಷ್ಣುವರ್ಧರನ್ನು ಕಾಣುತ್ತಿದ್ದು, ಅವರ ಮಾತು-ಕಥೆ, ಜನರೊಂದಿಗೆ ಬೆರೆಯುತ್ತಿದ್ದ ಅವರ ಮುಕ್ತ ಮನಸ್ಸನು ಆ ಕಲ್ಲಿನಲ್ಲಿ ಕಾಣುತ್ತಿದ್ದಾರೆ. 45 ವರ್ಷದಿಂದ ಯಾರಿಗೂ ಕೊಟ್ಟಿಲ್ಲ. 45 ವರ್ಷಗಳಿಂದ ವಿಷ್ಣು ಅವರ ವ್ಯಕ್ತಿತ್ವವನ್ನು ಕಲ್ಲಿನಲ್ಲಿ ಕಾಣುತ್ತಿದ್ದಾರೆ. ಇದು ಬದುಕಿನ ಸಾರ್ಥಕತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಭಾರತಿ ವಿಷ್ಣುವರ್ಧನ್ ಅವರ ಜೀವಮಾನದಲ್ಲಿ ಸಾವಿರಾರು, ಲಕ್ಷಾಂತರ ಉಡುಗೊರೆಗಳನ್ನ ಪಡೆದಿರಬಹುದು. ಆದರೆ ಈ ಉಡುಗೊರೆಯಂತಹಾ ಸ್ಪೆಷಲ್ ಗಿಫ್ಟ್ ಅವರಿಗೆ ಎಂದೂ ಸಿಕ್ಕಿರೋದಿಲ್ಲ ಎಂಬ ಭಾವನೆ ಯುವಕರದ್ದು.

    https://www.facebook.com/publictv/videos/2503585009931141/

  • ಭಾರತಿ ವಿಷ್ಣುವರ್ಧನ್‍ರಿಂದ ಸಂತ್ರಸ್ತರಿಗೆ ಸ್ವೆಟರ್, ಬಟ್ಟೆ ವಿತರಣೆ

    ಭಾರತಿ ವಿಷ್ಣುವರ್ಧನ್‍ರಿಂದ ಸಂತ್ರಸ್ತರಿಗೆ ಸ್ವೆಟರ್, ಬಟ್ಟೆ ವಿತರಣೆ

    ಮೈಸೂರು: ನೆರೆ ಪೀಡಿತ ಪ್ರದೇಶಗಳಿಗೆ ಕೆಲ ಸ್ಯಾಂಡಲ್‍ವುಡ್ ನಟರು ಹೋಗಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಅವರ ಅಭಿಮಾನಿಗಳು ತಮ್ಮ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಸಂತ್ರಸ್ತರ ಕೇಂದ್ರಕ್ಕೆ ಹೋಗಿ ಸಾಂತ್ವನ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಕಪಿಲಾ ಪ್ರವಾಹದಿಂದ ಮನೆ ಕಳೆದುಕೊಂಡು ಸಂತ್ರಸ್ತರು ನಂಜನಗೂಡಿನಲ್ಲಿನ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಇಂದು ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅವರ ಅಳಿಯ ನಟ ಅನಿರುದ್ಧ ಕೇಂದ್ರಕ್ಕೆ ತೆರಳಿ ಅಲ್ಲಿ ಆಶ್ರಯ ಪಡೆದಿರುವ ಮಹಿಳೆಯರು ಹಾಗೂ ಮಕ್ಕಳ ಜೊತೆ ಕುಳಿತು ಮಾತುಕತೆ ನಡೆಸಿದರು. ಅಷ್ಟೇ ಅಲ್ಲದೆ ಭಾರತೀ ವಿಷ್ಣುವರ್ಧನ್ ಸಂತ್ರಸ್ತರಿಗೆ ಸ್ವೆಟರ್, ಬಟ್ಟೆ, ಬಿಸ್ಕೆಟ್ ಮತ್ತು ಕೆಲ ಅಗತ್ಯ ವಸ್ತುಗಳನ್ನ ನೀಡಿದ್ದಾರೆ.

    ಇತ್ತೀಚೆಗೆ ಗದಗ ಜಿಲ್ಲೆಯ ಹೊಳೆ ಹೊನ್ನೂರು ಗ್ರಾಮಕ್ಕೆ ಸತೀಶ್ ಮತ್ತು ಅವರ ತಂಡ ಭೇಟಿ ನೀಡಿತ್ತು. ಗ್ರಾಮದ ಪ್ರತಿ ಮನೆಗಳಿಗೂ ತೆರಳಿದ್ದ ಸತೀಶ್ ಎಲ್ಲರ ನೋವನ್ನು ಆಲಿಸಿ, ಪ್ರವಾಹ ಪರಿಣಾಮವನ್ನು ಅರಿತರು. ಹಾಗೆಯೇ ಕೆಲ ದಿನಬಳಕೆ ವಸ್ತುಗಳನ್ನು ನೀಡಿ ನಿರಾಶ್ರಿತರಿಗೆ ಸಹಾಯ ಮಾಡಿದ್ದರು. ಪ್ರತಿ ಮನೆಗೆ ಭೇಟಿ ನೀಡಿದ ಸತೀಶ್ ತಾವು ಅದೇ ಗ್ರಾಮದ ನಿವಾಸಿ ಎಂಬಂತೆ ಗ್ರಾಮಸ್ಥರೊಂದಿಗೆ ಬೆರೆತಿದ್ದರು.