Tag: ಭಾರತದ

  • ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಕೊಳ್ಳೇಗಾಲದ ಯುವತಿ

    ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಕೊಳ್ಳೇಗಾಲದ ಯುವತಿ

    ಚಾಮರಾಜನಗರ: ಕೊಳ್ಳೇಗಾಲ ಮೂಲದ ಆಶ್ರಿತಾ ವಿ ಒಲೆಟಿ ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನಿಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಆಶ್ರಿತಾ ವಿ ಒಲೆಟಿ ಅವರು ಇಡೀ ಪ್ರಪಂಚದಲ್ಲಿರುವ ಏಳು ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಪ್ರತಿಷ್ಠಿತ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‍ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. 1976ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೆ ಕೇವಲ 275 ಪದವೀದರರು ಮಾತ್ರ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದು, ಆಶ್ರಿತಾ ಒಲೆಟಿ ಅತ್ಯಂತ ಕಠಿಣ ತರಬೇತಿಗಳನ್ನು ಒಳಗೊಂಡಿರುವ ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಭಾರತೀಯ ವಾಯುದಳದ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಕ್ವಾಡ್ರಲ್ ಲೀಡರ್ ಆಗಿದ್ದಾರೆ.

    ಫ್ಲೈಟ್ ಟೆಸ್ಟ್ ಇಂಜಿನಿಯರ್‌ಗಳು ಹೊಸ ವಿಮಾನಗಳ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲಿದ್ದು, ವಿಮಾನಗಳ ಸೇವೆಗೆ ಮುಕ್ತ ಮಾಡಲು ಇವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಪದವಿ ಪ್ರಧಾನ ಸಮಾರಂಭ ಮುಗಿದಿದ್ದು, ವಾಯುಸೇನೆ ಅಧಿಕೃತವಾಗಿ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್‌ ಆಗಿದ್ದು,ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಭಾರತಕ್ಕೆ ಕೊರೊನಾದ ಎರಡನೇ ತಳಿ ಎಂಟ್ರಿಯಾಗಿದೆ: ಡಾ.ಸೂರಜ್ ರೇವಣ್ಣ

    ಭಾರತಕ್ಕೆ ಕೊರೊನಾದ ಎರಡನೇ ತಳಿ ಎಂಟ್ರಿಯಾಗಿದೆ: ಡಾ.ಸೂರಜ್ ರೇವಣ್ಣ

    ಹಾಸನ: ಹೊಸದಾಗಿ ಭಾರತಕ್ಕೆ ಆಗಮಿಸಿರುವ ಕೊರೊನಾ ಎರಡನೇ ತಳಿ ಬಗ್ಗೆ ಡಾಕ್ಟರ್ ಸೂರಜ್ ರೇವಣ್ಣ ಎಚ್ಚರಿಕೆ ನೀಡಿದ್ದು ಸುರಕ್ಷತಾ ಕ್ರಮ ಅನುಸರಿಸುವಂತೆ ತಿಳಿಸಿದ್ದಾರೆ.

    ಚನ್ನರಾಯಪಟ್ಟಣದಲ್ಲಿ ಆಟೋಚಾಲಕರು, ಸವಿತಾ ಸಮಾಜದವರು ಸೇರಿದಂತೆ ಸಾವಿರಾರು ಜನರಿಗೆ ಫುಡ್‍ಕಿಟ್ ಹಂಚಿದ ನಂತರ ಮಾತನಾಡಿದ ಅವರು, ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜನ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

    ನಾನೊಬ್ಬ ಡಾಕ್ಟರ್ ಆಗಿ ಹೇಳುತ್ತಿದ್ದೇನೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ. ಕೊರೊನಾದ ಎರಡೇ ಎರಡು ತಳಿಗಳ ಬಗ್ಗೆ ಈಗ ಯೋಚನೆ ಮಾಡಬೇಕು. ಈ ಎರಡು ತಳಿಗಳು ಮನುಷ್ಯನ ಶ್ವಾಸಕೋಶಕ್ಕೆ ಅತೀ ಹೆಚ್ಚು ಹಾನಿ ಮಾಡುತ್ತಿವೆ. ನಾವು ಈಗ ಗ್ರೀನ್ ಜೋನ್‍ನಲ್ಲಿ ಇದ್ದರೂ ಶಾಶ್ವತವಾಗಿ ಗ್ರೀನ್ ಜೋನ್ ನಲ್ಲಿ ಇರುತ್ತೇವೆ ಎಂದು ಹೇಳಲು ಆಗಲ್ಲ. ಈಗ ಎರಡನೇ ರೀತಿಯ ಕೊರೊನಾ ತಳಿ ಭಾರತಕ್ಕೆ ಎಂಟ್ರಿಯಾಗಿದೆ ಎಂದು ತಿಳಿಸಿದರು.

    ಮೊದಲು ಬಂದ ಕೊರೊನಾಕ್ಕೂ ಈಗ ಎಂಟ್ರಿಯಾಗಿರುವ ಕೊರೊನಾ ತಳಿಗೂ ವ್ಯತ್ಯಾಸವಿದೆ. ಭಾರತಕ್ಕೆ ಇಪ್ಪತ್ತು ದಿನದ ಹಿಂದೆ ಹೊಸ ಎರಡನೇ ತಳಿಯೂ ಬಂದಿದ್ದು, ಜನರು ಎಚ್ಚರಿಕೆಯಿಂದ ಇದ್ದು ಕೊರೊನಾ ವಿರುದ್ಧ ಹೋರಾಟ ಮಾಡಬೇಕು ಎಂದು ಸೂರಜ್ ರೇವಣ್ಣ ಮನವಿ ಮಾಡಿದರು.

  • ಪಾಕಿಸ್ತಾನದ ಕಂತ್ರಿ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ಮಾಜಿ ಅಧ್ಯಕ್ಷ ಮುಷರಫ್

    ಪಾಕಿಸ್ತಾನದ ಕಂತ್ರಿ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ಮಾಜಿ ಅಧ್ಯಕ್ಷ ಮುಷರಫ್

    ನವದೆಹಲಿ: ಮುಂದೆ ಶಾಂತಿ ಮಂತ್ರ, ಹಿಂದೆ ಕುತಂತ್ರ ಮಾಡುತ್ತಿರುವ ಪಾಕಿಸ್ತಾನದ ಅಸಲಿ ಬಣ್ಣವನ್ನು ಅಲ್ಲಿನ ಮಾಜಿ ಅಧ್ಯಕ್ಷರೇ ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್‍ಐ ಭಾರತದ ಮೇಲೆ ದಾಳಿ ನಡೆಸಲು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯನ್ನು ಬಳಸಿಕೊಳ್ಳುತ್ತಿತ್ತು ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನೀಡಿರುವ ಹೇಳಿಕೆ ಈಗ ಭಾರಿ ಸದ್ದು ಮಾಡುತ್ತಿದೆ.

    ಹೌದು, ಬುಧವಾರದಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ದೂರವಾಣಿ ಮೂಲಕ ಪರ್ವೇಜ್ ಮಷರಫ್ ಅವರ ಸಂದರ್ಶನ ನಡೆಸಿದ್ದರು. ಈ ವೇಳೆ ಮುಷರಫ್ ಅವರು ಪಾಕಿಸ್ತಾನದ ನಿಜ ಸ್ವರೂಪವನ್ನು ಬಯಲು ಮಾಡಿದ್ದಾರೆ. “ನನ್ನ ಅಧಿಕಾರವಧಿಯಲ್ಲಿ ಪಾಕ್‍ನ ಗುಪ್ತಚರ ಇಲಾಖೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸಹಾಯ ಪಡೆದು ಭಾರತದ ಮೇಲೆ ದಾಳಿ ನಡೆಸುತ್ತಿತ್ತು. ಈಗ ಈ ಉಗ್ರ ಸಂಘಟನೆಯ ವಿರುದ್ಧ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ” ಎಂದು ಹೇಳಿದ್ದಾರೆ.

    1999-2008ರ ಅವಧಿಯಲ್ಲಿ ನೀವು ಅಧ್ಯಕ್ಷರಾಗಿದ್ದೀರಿ. ನಿಮ್ಮ ಅಧಿಕಾರದಲ್ಲಿ ನೀವು ಯಾಕೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ ಅಂತ ಪ್ರಶ್ನಿಸಿದಕ್ಕೆ, ಆಗಿನ ಚಿತ್ರಣವೇ ಬೇರೆಯಾಗಿತ್ತು. ಆಗ ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಒಬ್ಬರ ಮೇಲೊಬ್ಬರು ರಹಸ್ಯವಾಗಿ ದಾಳಿ ನಡೆಯುತಿತ್ತು. ನಮ್ಮ ದೇಶದ ಗುಪ್ತಚರ ಇಲಾಖೆಗಳು ಕೂಡ ಭಾಗಿಯಾಗಿತ್ತು. ಆದರಿಂದ ಜೈಷ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗಲಿಲ್ಲ ಎಂದು ಉತ್ತರಿಸಿದ್ದಾರೆ.

    ಫೆ. 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಭಾರತೀಯ ಯೋಧರು ಮೃತಪಟ್ಟಿದ್ದರು. ಈ ದಾಳಿಯನ್ನು ಮೌಲಾನ ಮಸೂದ್ ಅಜಾರ್ ಮುಖ್ಯಸ್ಥನಾಗಿರು ಜೈಷ್ ಉಗ್ರ ಸಂಘಟನೆಯೇ ನಡೆಸಿರುವುದಾಗಿ ಒಪ್ಪಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv