Tag: ಭಾಯೋತ್ಪಾದನೆ

  • ಭಾರತಕ್ಕೆ ನುಸುಳಲು ತುದಿಗಾಲಲ್ಲಿ ನಿಂತಿದ್ದಾರೆ 50ಕ್ಕೂ ಹೆಚ್ಚು ಉಗ್ರರು

    ಭಾರತಕ್ಕೆ ನುಸುಳಲು ತುದಿಗಾಲಲ್ಲಿ ನಿಂತಿದ್ದಾರೆ 50ಕ್ಕೂ ಹೆಚ್ಚು ಉಗ್ರರು

    – ಇಬ್ಬರು ಉಗ್ರರಿಂದ ಭಯಾನಕ ಮಾಹಿತಿ ಬಹಿರಂಗ

    ನವದೆಹಲಿ: ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸಲು ಪಾಕಿಸ್ತಾನ ಭಾರೀ ಸಂಚು ರೂಪಿಸಿದ್ದು, ಪಾಕಿಸ್ತಾನಿ ಸೈನಿಕರ ಸಹಾಯದಿಂದ 50ಕ್ಕೂ ಹೆಚ್ಚು ಲಷ್ಕರ್-ಇ-ತೋಯ್ಬಾ(ಎಲ್‍ಇಟಿ) ಉಗ್ರರು ದೇಶ ಪ್ರವೇಶಿಸಲು ಕಾಯುತ್ತಿದ್ದಾರೆ ಎಂಬ ಭಯಾನಕ ಮಾಹಿತಿ ಪ್ರಕಟವಾಗಿದೆ.

    ಎಲ್‍ಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಪಾಕ್ ನಾಗರಿಕರು ಕಾಶ್ಮೀರದ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಇವರ ವಿಚಾರಣೆ ವೇಳೆ 50 ಉಗ್ರರು ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ, ಪಾಕಿಸ್ತಾನಿ ಸೈನಿಕರು ಹಾಗೂ ಆಂತರಿಕ ಗುಪ್ತಚರ ದಳದ ಸಹಾಯದಿಂದ ಭಾರತ ಪ್ರವೇಶಿಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಈ ಇಬ್ಬರು ಹೊರ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಾಕಿಸ್ತಾನದ ಪ್ರಜೆಗಳಾದ ಖಲೀಲ್ ಅಹ್ಮದ್ ಮತ್ತು ಮೊಜಾಮ್ ಖೋಕರ್ ಇಬ್ಬರೂ ವಿಚಾರಣೆ ವೇಳೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸೈನಿಕರು ಕಚಾರ್ಬನ್ ಪೋಸ್ಟ್ ಮೂಲಕ ಭಯೋತ್ಪಾದಕರನ್ನು ಭಾರತಕ್ಕೆ ನುಸುಳಲು ಸಹಾಯ ಮಾಡುತ್ತಿದ್ದಾರೆ. ಇದಕ್ಕಾಗಿ ಪಾಕಿಸ್ತಾನ ಸೇನೆ ಮತ್ತು ಐಎಸ್‍ಐ ಗಡಿ ನಿಯಂತ್ರಣ ರೇಖೆಯಾದ್ಯಂತ(ಎಲ್‍ಓಸಿ) ಒಂದು ಡಜನ್‍ಗೂ ಹೆಚ್ಚು ಲಾಂಚಿಂಗ್ ಪ್ಯಾಡ್(ಉಗ್ರರಿಗೆ ಎಲ್ಲ ರೀತಿಯ ತರಬೇತಿ ನೀಡಿ ಅವರನ್ನು ಸಂಪೂರ್ಣವಾಗಿ ಸಿದ್ಧಗೊಳಿಸಿ ಶಸ್ತ್ರಾಸ್ತ್ರಗಳನ್ನು ನೀಡಿ ದೇಶದ ಒಳಗಡೆ ಕಳುಹಿಸಲು ಸ್ಥಾಪಿಸಲಾದ ಕೇಂದ್ರ) ಗಳನ್ನು ಸಕ್ರಿಯಗೊಳಿಸಿವೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ)ದ ಮೂರು ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರಿದ್ದು, ಪಾಕ್ ಸೇನೆ ಪಿಓಕೆಯ ಮೂರು ಲಾಂಚ್ ಪ್ಯಾಡ್‍ಗಳಲ್ಲಿ ಐಎಸ್‍ಐ ಭಯೋತ್ಪಾದಕರಿಗೆ ಆಶ್ರಯ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪಿಓಕೆಯ ಲಿಪಾ ಕಣಿವೆಯ ಲಾಂಚ್ ಪ್ಯಾಡ್‍ನಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ತಂಗಿದ್ದಾರೆ ಎಂದು ಶಂಕಿಸಲಾಗಿದೆ.

    ಲಾಂಚ್ ಪ್ಯಾಡ್‍ಗಳಲ್ಲಿನ ಭಯೋತ್ಪಾದಕರು ಜೈಷ್-ಎ-ಮೊಹಮ್ಮದ್ ಹಾಗೂ ಅಲ್-ಬದ್ರ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಲಿಪಾ ಲಾಂಚ್ ಪ್ಯಾಡ್ ಜಮ್ಮು ಕಾಶ್ಮೀರದ ತಂಗ್‍ಧಾರ್ ಹಾಗೂ ಉರಿ ವಲಯದಲ್ಲಿದೆ. ಪಿಓಕೆಯ ಲ್ಯಾಂಜೋಟೆ ಮತ್ತು ಕಲು ಲಾಂಚ್‍ಪ್ಯಾಡ್‍ಗಳಲ್ಲಿ 60ರಿಂದ 70 ಭಯೋತ್ಪಾದಕರಿದ್ದಾರೆ. ಈ ಕಲು ಲಾಂಚ್ ಪ್ಯಾಡ್ ಮೂಲಕ ಸಹ ಜಮ್ಮು ಕಾಶ್ಮೀರವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇಬ್ಬರು ಪಾಕಿಸ್ತಾನಿ ಪ್ರಜೆಗಳು ಕಾಶ್ಮೀರವನ್ನು ಪ್ರವೇಶಿಸಲು ಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಉನ್ನತ ಭದ್ರತಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

    ಕಣಿವೆಯಲ್ಲಿ ಶಾಂತಿ ಭಂಗಗೊಳಿಸಲು ಭಯೋತ್ಪಾದಕರನ್ನು ಒಳನುಸುಳಿಸುವಲ್ಲಿ ವಿಫಲವಾದ್ದರಿಂದ ಪಾಕಿಸ್ತಾನ ಹತಾಶವಾಗಿದೆ ಎಂದು ಸೇನೆಯ 15 ಕಾಪ್ರ್ಸ್‍ನ ಜನರಲ್ ಆಫೀಸರ್ ಕಮಾಂಡಿಂಗ್(ಜಿಓಸಿ) ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್ ಅವರು ಕಾಶ್ಮೀರದ ಎಡಿಜಿಪಿ ಮುನಿರ್ ಖಾನ್ ಅವರಿಂದೊಗೆ ನಡೆದ ಜಂಟಿ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ.

    ಎಲ್‍ಇಟಿಗೆ ಸಂಬಂಧಿಸಿದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಆಗಸ್ಟ್ 21ರಂದು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಬಂಧಿತ ಪಾಕಿಸ್ತಾನಿಗಳು ಒಳನುಸುಳುವಿಕೆಯನ್ನು ಒಪ್ಪಿಕೊಂಡಿರುವ ವಿಡಿಯೋವನ್ನು ಸಹ ಸುದ್ದಿಗೋಷ್ಠಿಯಲ್ಲಿ ತೋರಿಸಿದ್ದಾರೆ.

    ಈ ಎರಡು ವಿಡಿಯೋಗಳು ಪಾಕಿಸ್ತಾನಿ ಸೇನೆ ನಾಗರಿಕರನ್ನು ಕಾಶ್ಮೀರಕ್ಕೆ ಹೇಗೆ ತಳ್ಳುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿಶೇಷವಾಗಿ ಆಗಸ್ಟ್ 5ರಿಂದ ಕಾಶ್ಮೀರದಲ್ಲಿ ನೆಲೆಸಿರುವ ಶಾಂತಿಯನ್ನು ಭಂಗಗೊಳಿಸಲು ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ ಎಂದು ಧಿಲ್ಲಾನ್ ತಿಳಿಸಿದ್ದಾರೆ.

    ಒಳನುಸುಳುವಿಕೆ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಭಾರತೀಯ ಸೇನೆ ಈ ವರೆಗೆ ಇಂತಹ ಅನೇಕ ಪ್ರಯತ್ನಗಳನ್ನು ವಿಫಲಗೊಳಿಸಿದೆ ಎಂದು ಮುನೀರ್ ಖಾನ್ ತಿಳಿಸಿದ್ದಾರೆ.