Tag: ಭಾನು ವೆಡ್ಸ್ ಭೂಮಿ

  • ಭಾನು ವೆಡ್ಸ್ ಭೂಮಿ: ನವಿರು ಪ್ರೇಮಕಥೆಗೆ ಪ್ರೇಕ್ಷಕರು ಫಿದಾ!

    ಭಾನು ವೆಡ್ಸ್ ಭೂಮಿ: ನವಿರು ಪ್ರೇಮಕಥೆಗೆ ಪ್ರೇಕ್ಷಕರು ಫಿದಾ!

    ಬೆಂಗಳೂರು: ಜೆಕೆ ಆದಿ ನಿರ್ದೇಶನದ ಭಾನು ವೆಡ್ಸ್ ಭೂಮಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ತುಂಬಾನೇ ಕಷ್ಟಪಟ್ಟು ಮಾಡಿದ್ದರೂ ದೊಡ್ಡ ಬಜೆಟ್ಟಿನ, ಸ್ಟಾರ್ ಚಿತ್ರಗಳ ಅಬ್ಬರದ ನಡುವೆ ಸಣ್ಣಪುಟ್ಟ ಚಿತ್ರಗಳು ನೆಲೆಯೂರಿ ನಿಲ್ಲೋದು ಸಾಮಾನ್ಯ ಸಂಗತಿಯಲ್ಲ. ಅಂಥ ಹಲವಾರು ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಮುಂದುವರೆಯುತ್ತಿರೋ ಈ ಚಿತ್ರದ ಬಗ್ಗೆ ಎಲ್ಲೆಡೆ ಪಾಸಿಟಿವ್ ಮಾತುಗಳೇ ಕೇಳಿ ಬರುತ್ತಿವೆ. ಹೀಗೆ ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ದಾಟಿಕೊಳ್ಳುತ್ತಿರೋ ಒಳ್ಳೆ ಮಾತುಗಳೇ ಭಾನು ಭೂಮಿಯ ಪ್ರಣಯದತ್ತ ಪ್ರೇಕ್ಷಕರು ಆಕರ್ಷಿತರಾಗುತ್ತಿದ್ದಾರೆ.

    ಕಂಟೆಂಟು ಗಟ್ಟಿಯಾಗಿದ್ದರೆ, ಒಂದಷ್ಟು ಕುತೂಹಲಕರವಾದ ಕಥನವಿದ್ದರೆ ಅಂಥಾ ಚಿತ್ರವನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈಬಿಟ್ಟ ಉದಾಹರಣೆಗಳಿಲ್ಲ. ಈ ಮಾತಿಗೆ ತಕ್ಕುದಾಗಿಯೇ ಭಾನು ವೆಡ್ಸ್ ಭೂಮಿ ಚಿತ್ರದತ್ತಲೂ ಕನ್ನಡಿಗರು ಕೈಚಾಚಿ ಬರಲಾರಂಭಿಸಿದ್ದಾರೆ. ಈ ಮೂಲಕವೇ ನಿರ್ದೇಶಕ ಜೆಕೆ ಆದಿಯವರೊಳಗೂ ಖುಷಿ ಮನೆ ಮಾಡಿದೆ. ಈ ಸಿನಿಮಾಕ್ಕಾಗಿ ಶ್ರಮವಹಿಸಿದ್ದ ಇಡೀ ತಂಡದ ಮುಖದಲ್ಲಿ ನಿರಾಳ ಭಾವ ಮೂಡಿಕೊಂಡಿದೆ.

    ಹಳ್ಳಿ ಹಿನ್ನೆಲೆಯಲ್ಲಿ ತೆರೆದುಕೊಳ್ಳೋ ಕಥೆ, ಆ ಹಳ್ಳಿಯ ಮುಗ್ಧತೆಯನ್ನೇ ಕಣ್ಣುಗಳಲ್ಲಿ, ವ್ಯಕ್ತಿತ್ವದಲ್ಲಿ ತುಂಬಿಕೊಂಡಿರೋ ಹುಡುಗಿಯೊಬ್ಬಳು ಪ್ರೀತಿ ಅರಸಿ ಹೊರಡುವ ಪರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹೊಸ ಥರದ ನಿರೂಪಣೆ, ಗೊತ್ತೇ ಆಗದಂತೆ ಎದುರಾಗೋ ಟ್ವಿಸ್ಟುಗಳು ಮತ್ತು ಎಲ್ಲಿಯೂ ಬಿಗುವು ಕಳೆದುಕೊಳ್ಳದ ನಿರೂಪಣೆಗಳಿಂದ ಭಾನು ವೆಡ್ಸ್ ಭೂಮಿಯ ಕಥನ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹೀಗೆ ಬಾಯಿಂದ ಬಾಯಿಗೆ ಹರಡಿಕೊಳ್ಳುತ್ತಿರೋ ಒಳ್ಳೆ ಮಾತುಗಳೇ ಮೆಲ್ಲಗೆ ಥೇಟರು ತುಂಬಿ ತುಳುಕುವಂತೆ ಮಾಡುತ್ತಿವೆ. ಹೀಗೆ ಬಿಡುಗಡೆಯಾಗಿ ಎರಡು ದಿನದೊಳಗೆ ಭರ್ಜರಿ ಪ್ರದರ್ಶನ ಕಾಣುತ್ತಿರೋ ಈ ಚಿತ್ರವನ್ನು ನೀವಿನ್ನೂ ನೋಡಿಲ್ಲವಾದರೆ ಖಂಡಿತಾ ಬಿಡುವು ಮಾಡಿಕೊಳ್ಳಿ. ಕುಟುಂಬ ಸಮೇತರಾಗಿ ನೋಡಿ.

  • ಪ್ರೀತಿಯ ಸುತ್ತಾ ಸುತ್ತೋ ಭೂಮಿಯ ಪ್ರೇಮಕಥೆ!

    ಪ್ರೀತಿಯ ಸುತ್ತಾ ಸುತ್ತೋ ಭೂಮಿಯ ಪ್ರೇಮಕಥೆ!

    ಬೆಂಗಳೂರು: ನವಿರಾದ ಹಾಡುಗಳಿಂದ, ಅದಕ್ಕೆ ತಕ್ಕುದಾದ ಪ್ರೇಮಕಥೆಯ ಸುಳಿವಿನಿಂದ ಒಂದಷ್ಟು ಸದ್ದು ಮಾಡಿದ್ದ ಚಿತ್ರ ಭಾನು ವೆಡ್ಸ್ ಭೂಮಿ. ಕಡೆಯ ಘಳಿಗೆಯಲ್ಲಿ ಮತ್ತೊಂದಷ್ಟು ದಿಕ್ಕಿನಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ಈ ಚಿತ್ರವೀಗ ಬಿಡುಗಡೆಯಾಗಿದೆ. ಚಿಕ್ಕಮಗಳೂರು ಸೀಮೆಯ ಹುಡುಗಿಯೊಬ್ಬಳು ಪ್ರೀತಿಗಾಗಿ ಅರಸಿ ಪಟ್ಟಣ ಸೇರುವ, ಅದರ ಆಚೀಚೆಗೆ ಒಂದಷ್ಟು ಅನಿರೀಕ್ಷಿತ ಘಟನಾವಳಿಗಳ ಸುತ್ತಾ ಹೆಣೆಯಲ್ಪಟ್ಟಿರುವ ಈ ಕಥೆ ಪ್ರೇಕ್ಷಕರನ್ನು ತಲುಪಿಕೊಂಡಿದೆ.

    ಆಕೆ ಭೂಮಿ. ಚಿಕ್ಕಮಗಳೂರು ಸೀಮೆಯ ಹಳ್ಳಿಯೊಂದರಲ್ಲಿ ಬೆಳೆದ ಭೂಮಿಯ ಪಾಲಿಗೆ ಆ ಊರೇ ಜಗತ್ತು. ಮನೆಮಂದಿಯ ಆರೈಕೆ, ಊರ ಮಂದಿಯ ಒಡನಾಟದೊಂದಿಗೆ ಮುದ್ದಾಗಿ ಬೆಳೆದ ಆಕೆ ಮೃಧುಭಾಷಿ. ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಬೆಳೆದ ಭೂಮಿ ತನ್ನ ಹೆಸರಿಗೆ ತಕ್ಕಂಥಾ ಗುಣಗಳಿಂದಲೇ ಎಲ್ಲರ ಪ್ರೀತಿ ಪಾತ್ರಳಾದ ಹುಡುಗಿ. ಈಕೆಗೆ ಪ್ರಭು ಎಂಬಾತನ ಮೇಲೆ ಪ್ರೀತಿ. ಆದರೆ ಒಂದು ದಿನ ಆತ ಹೇಳದೆ ಕೇಳದೆ ನಾಪತ್ತೆಯಾಗಿ ಬಿಡುತ್ತಾನೆ. ಆತ ಎಲ್ಲಿ ಹೋಗಿದ್ದಾನೆಂಬ ಸುಳಿವು ಇಡೀ ಊರಲ್ಲಿ ಯಾರಿಗೂ ಇರೋದಿಲ್ಲ.

    ಈ ಹುಡುಗಿಗೆ ಅದು ಹೇಗೋ ಪ್ರಭು ಮೈಸೂರಲ್ಲಿದ್ದಾನೆಂಬ ಏಕೈಕ ವಿಚಾರ ಗೊತ್ತಾಗಿ ಬಿಡುತ್ತದೆ. ಮೋಹಕ್ಕೆ ಬಿದ್ದು ಮೈಸೂರಿಗೆ ಬಂದಿಳಿಯೋ ಭೂಮಿ ಪಾಲಿಗೆ ಅಲ್ಲೆದುರಾಗೋದು ಭರಿಸಿಕೊಳ್ಳಲಾಗದ ವಿಚಿತ್ರ ಜಗತ್ತು. ಅಷ್ಟು ದೊಡ್ಡ ಊರಲ್ಲಿ ಪ್ರೇಮಿಯನ್ನು ಹುಡುಕೋ ಹರಸಾಹಸ ಮಾಡೋ ಭೂಮಿ ಪುಂಡರ ಪಟಾಲಮ್ಮಿಗೆ ಬಲಿಯಾಗಬಹುದಾದ ಆಘಾತಕಾರಿ ಘಟನೆಯೂ ನಡೆಯುತ್ತದೆ. ಆಗ ಸ್ಥಳೀಯ ಹುಡುಗ ಭಾನು ಬಂದು ಕಾಪಾಡ್ತಾನೆ. ಆತನ ಬೆಂಬಲದೊಂದಿಗೆ ಕಡೆಗೂ ಪ್ರಭುವನ್ನು ಪತ್ತೆಹಚ್ಚಿದಾಗ ಅಲ್ಲೊಂದು ಆಘಾತ ಭೂಮಿಗೆದುರಾಗುತ್ತೆ.

    ಅಲ್ಲಿಂದಾಚೆಗೆ ಹಲವಾರು ತಿರುವುಗಳ ಮೂಲಕ ಕಥೆ ಸಾಗಿ ಹೋಗುತ್ತದೆ. ಕಡೆಗೂ ಭೂಮಿ ತನ್ನ ಪ್ರೀತಿಯನ್ನು ದಕ್ಕಿಸಿಕೊಳ್ಳುತ್ತಾಳಾ? ಆ ಹಾದಿಯಲ್ಲಿ ಎಂತೆಂಥಾ ಚಹರೆಗಳು ಬದಲಾಗುತ್ತವೆ ಅನ್ನೋದನ್ನು ನಿರ್ದೇಶಕ ಜೆಕೆ ಆದಿ ಒಂದಷ್ಟು ರೋಚಕ ಎಲಿಮೆಂಟುಗಳೊಂದಿಗೆ ಹೇಳಿದ್ದಾರೆ. ಹಳ್ಳಿ ವಾತಾವರಣ ಮತ್ತು ಪೇಟೆಯ ಸಂಗಮದಂತಿರೋ ದೃಶ್ಯಾವಳಿಗಳು ಮುದ ನೀಡುತ್ತವೆ. ನಾಯಕ ಸೂರ್ಯಪ್ರಭ್ ಮತ್ತು ನಾಯಕಿ ರಿಷಿತಾ ಮಲ್ನಾಡ್ ಕೂಡಾ ಚೆಂದಗೆ ನಟಿಸಿದ್ದಾರೆ. ಮಿಕ್ಕುಳಿದ ಕಲಾವಿದರೂ ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ತುಂಬಾ ಪಾತ್ರಗಳು, ವಿಶಿಷ್ಟವಾದ ತಿರುವುಗಳೊಂದಿಗೆ, ಸೂಕ್ಷ್ಮವಾದ ಪ್ರೇಮತೀವ್ರತೆಯೊಂದಿಗೆ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವಂತಿದೆ.

    ರೇಟಿಂಗ್: 3.5/5

  • ಭಾನು ವೆಡ್ಸ್ ಭೂಮಿ: ಪ್ರೇಮ ಕಥೆಗುಂಟು ಮಾಸ್ ನಂಟು!

    ಭಾನು ವೆಡ್ಸ್ ಭೂಮಿ: ಪ್ರೇಮ ಕಥೆಗುಂಟು ಮಾಸ್ ನಂಟು!

    ಬೆಂಗಳೂರು: ಜೆಕೆ ಆದಿ ಚೊಚ್ಚಲ ನಿರ್ದೇಶನದ ಭಾನು ವೆಡ್ಸ್ ಭೂಮಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಶೀರ್ಷಿಕೆಯೇ ರೊಮ್ಯಾಂಟಿಕ್ ಲವ್ ಸ್ಟೋರಿಯ ಛಾಯೆ ಹೊಂದಿದೆ. ಅದಕ್ಕೆ ತಕ್ಕುದಾದ ಪ್ರೇಮ ವೃತ್ತಾಂತವನ್ನೇ ಈ ಸಿನಿಮಾ ಒಳಗೊಂಡಿದೆ ಎಂಬುದೂ ಸತ್ಯ. ಆದರೆ ಇಲ್ಲಿರೋ ಕಥೆ ಪ್ರೀತಿ ಪ್ರೇಮಗಳಿಗೆ ಮಾತ್ರವೇ ಸೀಮಿತವೇ ಎಂಬ ಪ್ರಶ್ನೆಗೆ ಚಿತ್ರತಂಡದ ಕಡೆಯಿಂದ ಭಾನು ವೆಡ್ಸ್ ಭೂಮಿಯ ಬಗ್ಗೆ ಮತ್ತೊಂದಷ್ಟು ವಿಚಾರಗಳೂ ಹೊರ ಬರುತ್ತವೆ.

    ಪ್ರೀತಿಗಾಗಿ ಯುದ್ಧ ನಡೆದದ್ದೂ ಇದೆ. ಆಧುನಿಕ ಕಾಲಮಾನದಲ್ಲಿ ಅದಕ್ಕಾಗಿ ಹೊಡೆದಾಟ ಬಡಿದಾಟಗಳೂ ಸಂಭವಿಸುತ್ತಿವೆ. ಅದೇ ರೀತಿ ಬಾನು ವೆಡ್ಸ್ ಭೂಮಿ ಚಿತ್ರದಲ್ಲಿಯೂ ಪಕ್ಕಾ ಮಾಸ್, ಆಕ್ಷನ್ ದೃಶ್ಯಾವಳಿಗಳೂ ಇವೆ. ಹಾಗಂತ ಅವುಗಳೇನು ಕಮರ್ಶಿಯಲ್ ಟಚ್ ಕೊಡುವುದಕ್ಕೆ ಬೇಕೆಂದೇ ಪೋಣಿಸಿದಂಥವುಗಳಲ್ಲ. ಇಲ್ಲಿ ಮಾಸ್ ಮತ್ತು ಆಕ್ಷನ್ ಸನ್ನಿವೇಶಗಳು ಕಥೆಯ ಓಘಕ್ಕೆ ಪೂರಕವಾಗಿವೆಯಂತೆ. ಈ ಆಕ್ಷನ್ ಸೀನುಗಳನ್ನೂ ಕೂಡಾ ಅಷ್ಟೇ ತಾಜಾತನದಿಂದ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

    ಇಂಥಾ ಆಕ್ಷನ್ ದೃಶ್ಯಾವಳಿಗಳಲ್ಲಿ ನವ ನಾಯಕ ಸೂರ್ಯಪ್ರಭ್ ಪಳಗಿದ ನಟನಂತೆಯೇ ನಟಿಸಿದ್ದಾರಂತೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯ ಗುಂಗು ಹತ್ತಿಸಿಕೊಂಡಿದ್ದ ಇವರು ಉತ್ತರಕರ್ನಾಟಕದ ನವಲಗುಂದದ ಹುಡುಗ. ಆದರೆ, ಓದು, ಬದುಕಿನ ಅನಿವಾರ್ಯತೆಗಳು ಸೂರ್ಯನನ್ನು ಬೇರೆಯದ್ದೇ ಟ್ರ್ಯಾಕಿಗಿಳಿಸಿತ್ತು. ಇನ್ಫೋಸಿಸ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೈ ತುಂಬಾ ಸಂಬಳ ಪಡೆಯುತ್ತಿದ್ದರೂ ಕಲೆಯ ಸೆಳೆತವೆಂಬುದು ಅವರನ್ನು ನಾಯಕ ನಟನಾಗಿ ಪಾದಾರ್ಪಣೆ ಮಾಡಲು ಪ್ರೇರೇಪಿಸಿದೆ.

    ಈ ಚಿತ್ರದ ನಾಯಕನಿಗಾಗಿ ಆಡಿಷನ್ ನಡೆಸಿದ್ದ ನಿರ್ದೇಶಕ ಜೆಕೆ ಆದಿ ಕಥೆಗೆ ಸೂಟ್ ಆಗುವಂತಿದ್ದಾರೆಂಬ ಕಾರಣದಿಂದಲೇ ಸೂರ್ಯಪ್ರಭ್ ಅವರನ್ನು ಆಯ್ಕೆ ಮಾಡಿದ್ದರಂತೆ. ಆ ನಂತರದಲ್ಲಿ ಶ್ರದ್ಧೆಯಿಂದ ಫೈಟಿಂಗ್, ಡ್ಯಾನ್ಸ್ ಸೇರಿದಂತೆ ಎಲ್ಲವನ್ನೂ ಕಲಿತುಕೊಂಡ ಸೂರ್ಯ ಒಳ್ಳೆಯ ಅಭಿನಯ ನೀಡಿದ್ದಾರಂತೆ. ಈ ಚಿತ್ರದಲ್ಲಿ ನಾಯಕ ಸೂರ್ಯ ಹೊಸಬರಾದರೂ ನಾಯಕಿಯಾಗಿರೋ ಮಲೆನಾಡ ಹುಡುಗಿ ರಿತಿಷಾ ಮಲ್ನಾಡ್ ಪಾಲಿಗಿದು ಆರನೇ ಚಿತ್ರವಂತೆ.

  • ಭಾನು ಮತ್ತು ಭೂಮಿಗಾಗಿ ಗಾಯಕನಾದರು ರಂಗಾಯಣ ರಘು!

    ಭಾನು ಮತ್ತು ಭೂಮಿಗಾಗಿ ಗಾಯಕನಾದರು ರಂಗಾಯಣ ರಘು!

    ಬೆಂಗಳೂರು: ಜೆಕೆ ಆದಿ ನಿರ್ದೇಶನದ ಚೊಚ್ಚಲ ಚಿತ್ರ ಭಾನು ವೆಡ್ಸ್ ಭೂಮಿ. ಪೂರ್ವಿ ಕ್ರಿಯೇಷನ್ಸ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡಿರೋ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತನ್ನ ಪಾಡಿಗೆ ತಾನು ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಸಿನಿಮಾ ಸದ್ದು ಮಾಡುತ್ತಿರೋದೇ ಹಾಡುಗಳ ಮೂಲಕ. ಎಲ್ಲ ಹಾಡುಗಳೂ ಕೂಡಾ ಕಥೆಯ ನವಿರುತನವನ್ನೇ ಹೊದ್ದುಕೊಂಡಂತೆ ಮೂಡಿ ಬಂದ ಕೇಳುಗರಿಗೆಲ್ಲ ಖುಷಿ ನೀಡಿದೆ. ಈ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದ ಜೊತೆಗೇ ಗಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

    ಭಾನು ವೆಡ್ಸ್ ಭೂಮಿ ಎಂಬ ಹೆಸರೇ ಮುದ್ದಾದೊಂದು ಲವ್ ಸ್ಟೋರಿಯ ಘಮವನ್ನಿಟ್ಟಿಕೊಂಡಿದೆ. ಇದರಲ್ಲಿ ವಿಶೇಷವಾದ ಒಂದು ಹಾಡನ್ನು ರಂಗಾಯಣ ರಘು ಹಾಡಿದ್ದಾರೆ. ಅಂದಹಾಗೆ ನಟನೆ ಬಿಟ್ಟು ಬೇರೆ ಯಾವುದರತ್ತಲೂ ಗಮನ ಹರಿಸದ ರಘು ಹಾಡಲು ಮನಸು ಮಾಡಿದ್ದು ತಮ್ಮ ಗೆಳೆಯನಿಗೋಸ್ಕರ. ಈ ಚಿತ್ರದಲ್ಲಿ ಶೋಭರಾಜ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರೇ ಖುದ್ದಾಗಿ ಒತ್ತಾಯ ಮಾಡಿದ ಪರಿಣಾಮವಾಗಿಯೇ ರಂಗಾಯಣ ರಘು ಹಾಡಿದ್ದಾರೆ. ಆ ಹಾಡೂ ಕೂಡಾ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ.

    ರಂಗಾಯಣ ಹಾಡಿರೋ ಈ ಹಾಡಿಗೆ ಶೋಭರಾಜ್ ನೃತ್ಯ ಮಾಡಿರೋದು ಮತ್ತೊಂದು ವಿಶೇಷ. ಹೀಗೆ ನಿರ್ದೇಶಕ ಜೆಕೆ ಆದಿ ಭಾನು ವೆಡ್ಸ್ ಭೂಮಿಯನ್ನು ಪ್ರತಿಯೊಂದರಲ್ಲಿಯೂ ವಿಶೇಷತೆಗಳನ್ನು ಪೋಣಿಸಿಯೇ ನಿರ್ದೇಶನ ಮಾಡಿದ್ದಾರೆ. ಈವರೆಗೂ ಹದಿಮೂರು ವರ್ಷಕ್ಕೂ ಹೆಚ್ಚು ಕಾಲದಿಂದ, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಿರೋ ಆದಿ ಅವರ ಮೊದಲ ಕನಸಿನಂಥಾ ಚಿತ್ರವಿದು. ಈ ಮೂಲಕವೇ ಸೂರ್ಯಪ್ರಭ್ ಮತ್ತು ರಿಷಿತಾ ಮಲ್ನಾಡ್ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಡುಗಳ ಕ್ವಾಲಿಟಿಯೇ ಈ ಸಿನಿಮಾಕ್ಕಾಗಿ ಜನ ಕಾತರದಿಂದ ಕಾಯುವಂತೆ ಮಾಡಿದೆ.

  • ‘ಭಾನು ವೆಡ್ಸ್ ಭೂಮಿ’ ಯು/ಎ ಸರ್ಟಿಫಿಕೇಟ್

    ‘ಭಾನು ವೆಡ್ಸ್ ಭೂಮಿ’ ಯು/ಎ ಸರ್ಟಿಫಿಕೇಟ್

    ಬೆಂಗಳೂರು: ಪೂರ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ‘ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಚಿತ್ರದ ಯಾವುದೇ ಭಾಗದ ಕತ್ತರಿ ಪ್ರಯೋಗವಿಲ್ಲದೆ ಯು/ಎ ಸರ್ಟಿಫಿಕೇಟ್ ನೀಡಿದೆ.

    ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಛಾಯಾಗ್ರಹಣ – ಗಣೇಶ್ ಹೆಗ್ಡೆ, ಸಂಗೀತ- ಎ.ಎಂ. ನೀಲ್, ಸಂಕಲನ- ಶ್ರೀನಿವಾಸ್ ಪಿ ಬಾಬು, ನಿರ್ವಹಣೆ – ಗಂಡಸಿ ರಾಜು, ತಾರಾಗಣದಲ್ಲಿ – ಸೂರ್ಯಪ್ರಭ್, ರಕ್ಷತಾ ಮಲ್ನಾಡ್. ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು, ಹಾಗೂ ವಿಶೇಷ ಪಾತ್ರದಲ್ಲಿ ರಂಗಾಯಣ ರಘು ಅಭಿನಯಿಸುತ್ತಿದ್ದಾರೆ.

    ಈ ಚಿತ್ರದ ಕಥೆಯು ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ. ತುಂಬಾ ತಿರುವುಗಳಿಲ್ಲದಿದ್ದರೂ, ನೈಜತೆಯಿಂದ ಕೂಡಿದ ಕಥೆ ‘ಭಾನು ಮತ್ತು ಭೂಮಿ’ ಒಬ್ಬರನ್ನೊಬ್ಬರು ನೋಡುತ್ತಾ ಸನಿಹ ಸೇರಲೆಂದು ಹಪಹಪಿಸುತ್ತಿದ್ದರೂ ಸಾಧ್ಯವಾಗದೇ ತಮ್ಮಲ್ಲೇ ಇರುವ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆಂಬುದೇ ವಿಷಯ.