Tag: ಭಾನುವಾರ

  • ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್

    ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್

    ಭಾನುವಾರ ವಾರದ ಕಥೆ ಕಿಚ್ಚ ಸುದೀಪ್ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್‍ರವರು ವೈಷ್ಣವಿ ತರ ದೊಡ್ಮನೆಯಲ್ಲಿ ಯಾರೂ ಮಾತನಾಡಲು ಸಾಧ್ಯವಿಲ್ಲ ಎಂದು ವೈಷ್ಣವಿಯವರನ್ನು ಹೊಗಳುವ ಮೂಲಕ ಕಾಲೆಳೆದಿದ್ದಾರೆ.

    ಪ್ರತಿವಾರದಂತೆ ಈ ವಾರ ಕೂಡ ಎಲಿಮಿನೇಷನ್ ಟೆನ್ಷನ್‍ನಲ್ಲಿ ಮನೆ ಮಂದಿ ಬ್ಯುಸಿಯಾಗಿದ್ದರು. ಸುದೀಪ್‍ರವರು ಬ್ರೇಕ್ ಮುಗಿಸಿಕೊಂಡು ಬಂದ ನಂತರ ಮನೆಯಲ್ಲಿ ಏನೋ ಕಾಮಿಡಿ ನಡೀತಿದೆ ಏನು ಎಂದು ಚಕ್ರವರ್ತಿಯವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಚಕ್ರವರ್ತಿಯವರು ಮಳೆ ಬರುತ್ತಿದೆ ಎಂದರೆ ಯಾರೋ ಮಹಾನ್ ವ್ಯಕ್ತಿ, ಪುಣ್ಯ ಪುರುಷರೇ ಬಿಗ್‍ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಅನಿಸುತ್ತಿದೆ ಎಂದು ರಘುರವರ ಜೊತೆ ಮಾತನಾಡುತ್ತಿದ್ದೆ ಹೇಳುತ್ತಿದೆ.

    ನಾನು ಬ್ರೇಕ್ ಹೋಗುವ ಮುನ್ನ ದಿವ್ಯಾ ಸುರೇಶ್, ವೈಷ್ಣವಿ, ಪ್ರಿಯಾಂಕ ಇವರಲ್ಲಿ ಒಬ್ಬರನ್ನು ಸೇವ್ ಮಾಡುವುದಾಗಿ ಹೇಳಿದ್ದೆ. ಈ ಮೂವರಲ್ಲಿ ನೀವು ಹೇಳುತ್ತಿರುವ ವ್ಯಕ್ತಿ ಇದ್ದಾರಾ ಎಂದು ಸುದೀಪ್ ಕೇಳುತ್ತಾರೆ. ಆಗ ಚಕ್ರವರ್ತಿಯವರು ಸುಮ್ಮನೆ ಒಂದು ಊಹೆ ಅಷ್ಟೇ ಸರ್ ಎಂದಾಗ ಸುದೀಪ್‍ರವರು ನಿಮ್ಮ ಆಸೆಯನ್ನು ಈಡೇರಿಸುತ್ತೇವೆ ಎನ್ನುತ್ತಾರೆ. ಬಳಿಕ ಮಹಿಳೆ ಎಂದರೆ ತಪ್ಪಾಗುತ್ತದೆ ಸರ್, ಪಕ್ಕದಲ್ಲಿ ವೈಷ್ಣವಿಯವರು ಕುಳಿತಿದ್ದಾರೆ. ಅವರಿಂದ ಸ್ವಲ್ಪ ವಿದ್ಯೆ ಬಂದಿದೆ. ಇನ್ಮುಂದೆ ವೈಷ್ಣವಿ ರೀತಿ ಮಾತನಾಡಬೇಕು ಎಂದು ಡಿಸೈಡ್ ಮಾಡಿದ್ದೇನೆ. ಅವರನ್ನು ಗುರುವಾಗಿ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

    ಇದಕ್ಕೆ ಸುದೀಪ್, ವೈಷ್ಣವಿ ತರ ಇನ್ನೊಬ್ಬರು ಈ ಮನೆಯಲ್ಲಿ ಮಾತನಾಡುವುದಕ್ಕೆ ಸಾಧ್ಯವಿಲ್ಲ, ಸಾಧ್ಯವಿಲ್ಲ, ಸಾಧ್ಯವಿಲ್ಲ ಎಂದು ಹೇಳುತ್ತಾ ನಗುತ್ತಾರೆ. ಈ ವೇಳೆ ವೈಷ್ಣವಿ ಯಾಕೆ ಸರ್ ಎಂದು ಕೇಳಿದಾಗ, ಅಂದರೆ ನಾನು ನಿಮಗೆ ಕಾಂಪ್ಲಿಮೆಂಟ್ ನೀಡುತ್ತಿದ್ದೇನೆ. ನೀವು ಹೇಳುವುದು ನನಗೆ ಅರ್ಥವಾಗುವುದಕ್ಕೆ ಅಷ್ಟು ವಾರ ಬೇಕಾಯಿತು. ಚಕ್ರವರ್ತಿಯವರಿಗೆ ಯಾಕೆ ನಿಮ್ಮ ರೀತಿ ಮಾತನಾಡಲು ಆಗುವುದಿಲ್ಲ ಎಂದರೆ ಅವರು ಬಳಸುವ ಪದ ಸೂಕ್ಷ್ಮವಾಗಿ ಇರುವುದಿಲ್ಲ ಅದೇ ನಿಜವನ್ನು ಹೇಳಿ ಬಿಡುತ್ತದೆ. ಆದರೆ ನೀವು ಏನು ಹೇಳುವುದಿಲ್ಲ. ಬರೀ ಅಣ್ಣಾ ನಿಮಗೆ ಒಂದು ಮೆಡಲ್ ಹಾಕಬೇಕು ಎಂದು ಹೇಳುತ್ತೀರಾ ಅಷ್ಟೇ. ಅದನ್ನು ಕೇಳಿ ಎದುರುಗಡೆಯವರು ದಡ್ಡರಾಗಿದ್ದಾರೆ ನನ್ನ ಹೊಗಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡಿರುತ್ತಾರೆ. ಆದರೆ ನಿಮಗೆ ಹಾಗೂ ನಿಮ್ಮನ್ನು ಅರ್ಥ ಮಾಡಿಕೊಂಡವರಿಗೆ ಸತ್ಯಾಂಶ ಗೊತ್ತಿರುತ್ತದೆ ಎಂದು ಹೇಳುತ್ತಾ ಹಾಸ್ಯ ಮಾಡಿದ್ದಾರೆ.

    ಕೊನೆಗೆ ಚಕ್ರವರ್ತಿಯವರ ಕೈಯಲ್ಲಿ ನಿಮ್ಮ ರೀತಿ ಇರಲು ಆಗುತ್ತಾ ಎಂದು ಸುದೀಪ್ ಕೇಳಿದಾಗ ಚಕ್ರವರ್ತಿಯವರೇ ಚಾನ್ಸೇ ಇಲ್ಲ ಎಂದು ಹೇಳುತ್ತಾ ನಗುತ್ತಾರೆ. ಇದನ್ನೂ ಓದಿ:ಬಿಗ್‍ಬಾಸ್ ಮನೆಯಿಂದ ರಘು ಔಟ್

  • ಭಾನುವಾರ ರಾಜ್ಯದಲ್ಲಿ ಕರ್ಫ್ಯೂ – ಸಂಡೇ ಬಂದ್ ಹಿಂದಿನ ಕಥೆ ಇಲ್ಲಿದೆ

    ಭಾನುವಾರ ರಾಜ್ಯದಲ್ಲಿ ಕರ್ಫ್ಯೂ – ಸಂಡೇ ಬಂದ್ ಹಿಂದಿನ ಕಥೆ ಇಲ್ಲಿದೆ

    ಬೆಂಗಳೂರು: ಡೆಡ್ಲಿ `ಮಹಾ’ ವೈರಸ್ ಅನ್ನು ಸ್ವಲ್ಪಮಟ್ಟಿಗಾದ್ರೂ ನಿಯಂತ್ರಿಸಲು ಬಿಎಸ್‍ವೈ ಸರ್ಕಾರ ಸಂಡೇ ಬಂದ್ ಎಂಬ ಅಸ್ತ್ರವನ್ನು ಪ್ರಯೋಗಿಸಿದೆ. ಕೊರೊನಾ ಆರ್ಭಟ ಹೀಗೆ ಮುಂದುವರಿದರೆ ರಾಜ್ಯದಲ್ಲಿ ಕೋವಿಡ್ 19 ಮುಗಿಯುವವರೆಗೂ ಕೊರೋನಾಗಾಗಿ ಸಂಡೇ ಕರ್ಫ್ಯೂ ಹೇರುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಿದೆ.

    ಲಾಕ್‍ಡೌನ್ ಸಡಿಲವಾದ ಬೆನ್ನಲ್ಲೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಇದನ್ನು ಸ್ವಲ್ಪ ಮಟ್ಟಿಗಾದರೂ  ತಡೆಯಬೇಕಾದರೆ ಮುಂದಿನ ಭಾನುವಾರಗಳಂದು ಲಾಕ್‍ಡೌನ್ ಹೇರಬೇಕು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ವರದಿ ನೋಡಿದ ಸಿಎಂ ಯಡಿಯೂರಪ್ಪ ಮೇ 31ರ ಬಳಿಕವೂ ಪ್ರತಿ ಭಾನುವಾರ ಲಾಕ್‍ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    ಲಾಕ್‍ಡೌನ್ ಹೇರಿದ್ದು ಯಾಕೆ?
    ಪ್ರಧಾನಿ ಮೋದಿ ದೇಶಾದ್ಯಂತ ಕರೆ ನೀಡಿದ ಮೊದಲ ಲಾಕ್‍ಡೌನ್ ವೇಳೆ ಕೊರೊನಾ ಸೋಂಕು ನಿಯಂತ್ರಣದಲ್ಲಿತ್ತು. ಲಾಕ್‍ಡೌನ್ 4.0ನಲ್ಲಿ ಕೊರೊನಾ ಔಟ್ ಆಫ್ ಕಂಟ್ರೋಲ್ ಆಗುತ್ತಿದೆ. ಭಾನುವಾರ ಬಹುತೇಕ ಎಲ್ಲರಿಗೂ ರಜೆ ಇರುವ ಕಾರಣ ಜನ ಸಂಚಾರ ಜಾಸ್ತಿ ಇರುತ್ತದೆ. ಈ ವೇಳೆ ವೈರಸ್ ಹಬ್ಬುವ ಪ್ರಮಾಣ ಜಾಸ್ತಿ. ಲಾಕ್‍ಡೌನ್ ಬಿಗಿ ಅವಧಿಯಲ್ಲಿ ವೈರಸ್ ಹಬ್ಬುವುದು ಕಡಿಮೆ. ಜನತಾ ಕರ್ಫ್ಯೂ ರೀತಿಯಲ್ಲೇ ಸಂಡೇ ಕರ್ಫ್ಯೂನಲ್ಲಿ ಬಿಗಿ ಕ್ರಮ. ವಾರದಲ್ಲಿ 1 ದಿನವಾದ್ರೂ ಲಾಕ್‍ಡೌನ್ ಆದ್ರೆ ಸೋಂಕು ಕಡಿಮೆ ಆಗಬಹುದು. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಯಬಹುದು. ಹೀಗಾಗಿ ಪ್ರತಿ ಭಾನುವಾರವೂ ಲಾಕ್‍ಡೌನ್ ಮಾಡುವಂತೆ ತಜ್ಞರು ಶಿಫಾರಸು ನೀಡಿದ್ದರು.

    ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
    ಮಾರ್ಚ್ 24ಕ್ಕೆ ಮೊದಲ ಲಾಕ್‍ಡೌನ್ ಆರಂಭಗೊಂಡಿದ್ದಾಗ ಕರ್ನಾಟಕದಲ್ಲಿ 41 ಪ್ರಕರಣಗಳಿದ್ದರೆ ಬೆಂಗಳೂರಿನಲ್ಲಿ 24 ಪ್ರಕರಗಳಿತ್ತು. ಮೊದಲ ಲಾಕ್‍ಡೌನ್ ಅಂತ್ಯಗೊಂಡಿದ್ದು ಏಪ್ರಿಲ್ 14ರಂದು. ಈ 21 ದಿನಗಳ ಲಾಕ್‍ಡೌನ್ ಅಂತ್ಯದ ವೇಳೆ ಕರ್ನಾಟಕದಲ್ಲಿ 260 ಪ್ರಕರಣಗಳಿದ್ದರೆ ಬೆಂಗಳೂರಿನಲ್ಲಿ 69 ಪ್ರಕರಣಗಳಿತ್ತು. 2ನೇ ಲಾಕ್‍ಡೌನ್ ಅಂತ್ಯಗೊಂಡಿದ್ದು ಮೇ 3ಕ್ಕೆ. ಈ ವೇಳೆ ರಾಜ್ಯದಲ್ಲಿ 614 ಮಂದಿಗೆ ಸೋಂಕು ಬಂದಿದ್ದರೆ, ಬೆಂಗಳೂರಿನಲ್ಲಿ 149 ಮಂದಿಗೆ ಸೋಂಕು ಬಂದಿತ್ತು.

    3ನೇ ಲಾಕ್‍ಡೌನ್ ಮೇ 17ಕ್ಕೆ ಅಂತ್ಯಗೊಂಡಿದ್ದು, ಕರ್ನಾಟಕದಲ್ಲಿ 1,147 ಮಂದಿಗೆ ಸೋಂಕು ಬಂದಿದ್ದರೆ ಬೆಂಗಳೂರಿನಲ್ಲಿ 216 ಮಂದಿಗೆ ಸೋಂಕು ತಗಲಿತ್ತು. 4ನೇ ಲಾಕ್‍ಡೌನ್ ಆರಂಭಗೊಂಡಿದ್ದು ಮೇ 18ಕ್ಕೆ. ಈ ವೇಳೆ ರಾಜ್ಯದಲ್ಲಿ ಒಟ್ಟು 1,246 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೆ ಬೆಂಗಳೂರಿನಲ್ಲಿ 240 ಮಂದಿಗೆ ಸೋಂಕು ಬಂದಿತ್ತು. ಯಾವಾಗ ಅಂತರ್ ರಾಜ್ಯ ಸಂಚಾರ ಆರಂಭಗೊಂಡಿತೋ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗತೊಡಗಿದೆ. 4ನೇ ಲಾಕ್‍ಡೌನ್ 5ನೇ ದಿನವಾದ ಮೇ 23 ರಂದು ಕರ್ನಾಟಕದಲ್ಲಿ ಒಟ್ಟು 1,959 ಮಂದಿಗೆ ಸೋಂಕು ಬಂದಿದ್ದರೆ ಬೆಂಗಳೂರಿನಲ್ಲಿ 265 ಮಂದಿಗೆ ಸೋಕು ಬಂದಿದೆ. ಒಟ್ಟು ಕರ್ನಾಟಕದಲ್ಲಿ 42 ಮಂದಿ ಕೋವಿಡ್ 19ಗೆ ಮೃತಪಟ್ಟಿದ್ದಾರೆ.

  • ವರುಣನ ಆರ್ಭಟಕ್ಕೆ ಮುಂಬೈ ತತ್ತರ – ರೈಲು ಸಂಚಾರ ಸ್ಥಗಿತ

    ವರುಣನ ಆರ್ಭಟಕ್ಕೆ ಮುಂಬೈ ತತ್ತರ – ರೈಲು ಸಂಚಾರ ಸ್ಥಗಿತ

    ಮುಂಬೈ: ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕನಸಿನ ನಗರಿ ತತ್ತರಿಸಿ ಹೋಗಿದ್ದು, ಬಹುತೇಕ ರಸ್ತೆಯೆಲ್ಲಾ ಜಲಾವೃತವಾಗಿ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

    ಮುಂಬೈ ನಗರದ ಅಂಧೇರಿ, ಕುರ್ಲಾ, ಬಾಂದ್ರಾ, ಚಾರ್ನಿ ರಸ್ತೆ, ಸಾಂತಾ ಕ್ರೂಸ್, ಬಿಕೆಸಿ, ಥಾಣೆ, ರಾಯ್ಗಡ್ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ರಸ್ತೆ ಮತ್ತು ರೈಲ್ವೇ ಹಳಿಗಳು ಜಲಾವೃತಗೊಂಡಿದ್ದು, ರೈಲು ಸಂಚಾರ ಸ್ಥಗಿತಗೊಂದಿದೆ. ಇದೇ ರೀತಿ ಇನ್ನೂ ಕೆಲವು ದಿನಗಳು ಮಳೆ ಮುಂದುವರಿಯಲಿದ್ದು, ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಭಾನುವಾರ ರಾತ್ರಿ ಮುಂಬೈನಲ್ಲಿ 360 ಮಿಲಿ ಮೀಟರ್ ನಷ್ಟು ಧಾರಾಕಾರ ಮಳೆ ಆಗಿದೆ. ಅಲ್ಲದೆ ಇಂದು ಬೆಳಗಿನ ಜಾವ ಮುಂಬೈಯ ಪಲ್ಗರ್ ಪ್ರದೇಶದಲ್ಲಿ 4 ಗಂಟೆಯಿಂದ 5 ಗಂಟೆಯವರೆಗೆ ಅಂದರೆ 1 ಗಂಟೆಯಲ್ಲಿ 100 ಮಿಲಿ ಮೀಟರ್ ನಷ್ಟು ಮಳೆ ಸುರಿದಿರುವುದು ದಾಖಲಾಗಿದೆ.

    “ಪಶ್ಚಿಮ ರೈಲ್ವೇ ವಿಭಾಗದ 13 ರೈಲುಗಳ ಸಂಚಾರವನ್ನು ಇಂದು ಮಳೆಯ ಕಾರಣದಿಂದ ರದ್ದುಪಡಿಸಲಾಗಿದೆ” ಎಂದು ಎಎನ್‍ಐ ವರದಿ ಮಾಡಿದೆ.

    ಪಾಲ್ಗಾಟ್ ಪ್ರದೇಶದ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದರಿಂದ ಮುಂಬೈ-ವಲ್ಸಾಡ್-ಸೂರತ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಎರಡು ದಿನದಲ್ಲಿ ಬರೋಬ್ಬರಿ 500 ಮಿ.ಮಿ ಗಿಂತ ಹೆಚ್ಚು ಮಳೆಯಾಗಿದ್ದು, ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ಟ್ರಾಫಿಕ್ ನಿಯಂತ್ರಿಸಲು 500ಕ್ಕೂ ಅಧಿಕ ಸಂಚಾರಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ರೈಲ್ವೇ ಹಳಿಗಳ ಮೇಲೂ ನೀರು ನಿಂತಿರುವುದರಿಂದ ಪಲ್ಗರ್ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಗಂಟೆಗೆ 30 ಕಿ.ಮಿ ವೇಗದಲ್ಲಿ ಮಾತ್ರ ಚಲಿಸಬೇಕು ಎಂದು ರೈಲ್ವೇ ಇಲಾಖೆ ಸೂಚಿಸಿದೆ.

    ಖಾಸಗಿ ಹವಾಮಾನ ವರದಿ ಪ್ರಕಾರ, ಜುಲೈ 3ರ ರಾತ್ರಿಯಿಂದ ಮಳೆ ಹೆಚ್ಚಾಗಲಿದ್ದು, ಬಂಗಾಳ ಕೊಲ್ಲಿಯಿಂದ ಆರಂಭಗೊಂಡು ಪಶ್ಚಿಮ ಘಟ್ಟದತ್ತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.