Tag: ಭರವಸೆ

  • ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

    ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

    ಹೈದರಾಬಾದ್: ತೆಲಂಗಾಣದ (Telangana) ನೂತನ ಮುಖ್ಯಮಂತ್ರಿಯಾಗಿ (CM) ಅಧಿಕಾರ ವಹಿಸಿಕೊಂಡಿರುವ ರೇವಂತ್ ರೆಡ್ಡಿ (Revanth Reddy), ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಚಾರದ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಈಡೇರಿಸಿದ್ದಾರೆ.

    ಹೌದು, ರೇವಂತ್ ರೆಡ್ಡಿ ಅವರು ತಮ್ಮ ಅಧಿಕೃತ ನಿವಾಸದ ಮುಂಭಾಗವಿರುವ ಕಬ್ಬಿಣದ ಬ್ಯಾರಿಕೇಡ್ ಅನ್ನು ತೆಗೆಸಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿಯುವುದಕ್ಕೂ ಮೊದಲೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ. ಹಲವಾರು ಬುಲ್ಡೋಜರ್‌ಗಳು, ಟ್ರ್ಯಾಕ್ಟರ್‌ಗಳು ಹಾಗೂ ಕಟ್ಟಡ ಕಾರ್ಮಿಕರು ಈ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕುವುದು ಕಂಡುಬಂದಿದೆ.

    ಈ ಬ್ಯಾರಿಕೇಡ್ ಹಿಂದೆ ಪಾದಚಾರಿಗಳ ಪ್ರವೇಶವನ್ನು ನಿರ್ಬಂಧಿಸುತ್ತಿತ್ತು. ಹಲವು ವರ್ಷಗಳಿಂದ ಈ ಬ್ಯಾರಿಕೇಡ್‌ನಿಂದಾಗಿ ಚಲಿಸುವ ವಾಹನಗಳ ದಟ್ಟಣೆಯೂ ಉಂಟಾಗುತ್ತಿತ್ತು. ಈ ಹಿನ್ನೆಲೆ ರೇವಂತ್ ರೆಡ್ಡಿ ತಮ್ಮ ಚುನಾವಣಾ ಪ್ರಚಾರದ ವೇಳೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಬ್ಯಾರಿಕೇಡ್ ಅನ್ನು ತೆಗೆಸುವುದಾಗಿ ಭರವಸೆ ನೀಡಿದ್ದರು. ಇದೀಗ ಪ್ರಮಾಣವಚನ ಸ್ವೀಕರಿಸುತ್ತಲೇ ಅವರು ತಮ್ಮ ಮೊದಲ ಭರವಸೆಯನ್ನು ಪೂರೈಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇವಂತ್‌ ರೆಡ್ಡಿ

    ಕಳೆದ ತಿಂಗಳು ನಡೆದ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಂದು ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ. ರೇವಂತ್ ರೆಡ್ಡಿ ಸಿಎಂ ಆಗಿ, ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಮಲ್ಲು ಭಟ್ಟಿ ವಿಕ್ರಮಾರ್ಕ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ರೇವಂತ್ ರೆಡ್ಡಿಗೆ ಶುಭಕೋರಿ ಬೆಂಬಲದ ಭರವಸೆ ಕೊಟ್ಟ ಪ್ರಧಾನಿ ಮೋದಿ

  • ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಾಧಿಕಾ ಪಂಡಿತ್

    ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಾಧಿಕಾ ಪಂಡಿತ್

    ಬೆಂಗಳೂರು: ಕೊರೊನಾ ವೈರಸ್ ಮತ್ತು ಲಾಕ್‍ಡೌನ್‍ನಿಂದ ಉಂಟಾಗಿರುವ ಕಷ್ಟದ ಪರಿಸ್ಥಿತಿಯಲ್ಲಿ ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ಧೈರ್ಯ ತುಂಬಲು ಇನ್‍ಸ್ಟಾಗ್ರಾಮ್‍ನಲ್ಲಿ ಹೊಸ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಕೆಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ.

    ಕೊರೊನಾ ವೈರಸ್ ಹಾವಳಿಯಿಂದ ಅನೇಕರ ಬದುಕು ತತ್ತರಿಸಿ ಹೋಗಿದೆ. ಈ ಕಠಿಣ ಸಂದರ್ಭದಲ್ಲಿ ಅನೇಕ ನಟ, ನಟಿಯರು ಸಹಾಯ ಮಾಡಿದ್ದಾರೆ. ನಟ ಯಶ್ ಇತ್ತೀಚೆಗಷ್ಟೇ ಅವರು 1.5 ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ಸಿನಿಮಾರಂಗದ ಕಾರ್ಮಿಕರಿಗೆ, ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ಹಂಚಿದ್ದಾರೆ. ಅದರ ಬೆನ್ನಲ್ಲೇ ನಟಿ ರಾಧಿಕಾ ಪಂಡಿತ್ ಅವರು ಭರವಸೆಯ ಮಾತುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಇದು ಕಷ್ಟದ ಸಮಯ. ನಾವೆಲ್ಲರೂ ತುಂಬ ನೋವು ಅನುಭವಿಸಿದ್ದೇವೆ. ಆತ್ಮೀಯರನ್ನು ಕಳೆದುಕೊಂಡಿದ್ದೇವೆ. ನಮ್ಮೆಲ್ಲರಿಗೂ ಭಯ, ಹತಾಶೆ ಕಾಡುತ್ತಿದೆ. ನಾಳೆ ಏನಾಗುತ್ತದೋ ಎಂಬ ಆತಂಕ ಇದೆ ಎಂಬುದು ನನಗೆ ತಿಳಿದಿದೆ. ಆದರೆ ದಯವಿಟ್ಟು ಒಂದು ಮಾತನ್ನು ಪ್ರತಿ ದಿನ ನಿಮಗೆ ನೀವೇ ಹೇಳಿಕೊಳ್ಳಿ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಾವು ಭರವಸೆ ಇಡುತ್ತೇವೆ, ನಂಬಿಕೆ ಇಡುತ್ತೇವೆ, ಜೊತೆಯಾಗಿ ಹೋರಾಡುತ್ತೇವೆ. ಎಲ್ಲರೂ ಜೊತೆಯಾಗಿ ನಿಂತು ಈ ಕಷ್ಟದಿಂದ ಹೊರಬರುತ್ತೇವೆ ಎಂದು ಬರೆದುಕೊಂಡು ಮಕ್ಕಳ ಜೊತೆಗೆ ಸಮುದ್ರ ತಟದಲ್ಲಿ ಕುಳಿತು ಕ್ಲೀಕ್ಕಿಸಿರುವ ಫೋಟೋವನ್ನು ಹಂಚಿಕೊಂಡು ಧರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

    ನನ್ನೆಲ್ಲ ಪ್ರೀತಿಯ ಹಿತೈಷಿಗಳು ಮತ್ತು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ನಿಮ್ಮಲ್ಲಿ ನಗು ಮೂಡಿಸಲು ಇನ್ಮುಂದೆ ಖುಷಿಯಾದ ಪಾಸಿಟಿವ್ ಪೋಸ್ಟ್​ಗಳನ್ನು ಹಾಕುತ್ತೇನೆ ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಿದ್ದ ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಪೋಸ್ಟ್​ಗಳನ್ನು ಪ್ರಕಟಿಸುತ್ತಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳಿದ್ದರು. ಅದಕ್ಕಾಗಿ ಅವರು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

  • ಪ್ರಚಾರ ವೇಳೆ ಬಟ್ಟೆ, ಪಾತ್ರೆ ತೊಳೆದು ಕೊಟ್ಟ ಅಭ್ಯರ್ಥಿ

    ಪ್ರಚಾರ ವೇಳೆ ಬಟ್ಟೆ, ಪಾತ್ರೆ ತೊಳೆದು ಕೊಟ್ಟ ಅಭ್ಯರ್ಥಿ

    ವಾಷಿಂಗ್ ಮಷೀನ್ ಕೊಡುವುದಾಗಿ ಭರವಸೆ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಎಐಎಡಿಎಂಕೆ ಅಭ್ಯರ್ಥಿಯೊಬ್ಬರು ಮಹಿಳೆಯ ಬಟ್ಟೆ ಒಗೆದುಕೊಟ್ಟಿದ್ದಾರೆ. ಹಾಗೇ ಚುನಾವಣೆಯಲ್ಲಿ ಗೆದ್ದರೆ ವಾಷಿಂಗ್ ಮಷೀನ್ ಕೊಡುವ ಭರವಸೆಯನ್ನು ನೀಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಕಾತಿರವನ್(50) ನಾಗಪಟ್ಟಿಣಂ ಟೌನ್ ಕಾರ್ಯದರ್ಶಿಯಾಗಿದ್ದಾರೆ. ಅವರು ಪಕ್ಷಕ್ಕಾಗಿ ಮಾಡಿದ ಕಾರ್ಯವನ್ನು ಗುರುತಿಸಿ ಟಿಕೆಟ್ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

    ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ತಂಗಾ ಕಾತಿರವನ್ ನಾಗೋರ್ ಬಳಿ ಪ್ರಚಾರ ಮಾಡಿದ್ದಾರೆ. ಇಲ್ಲಿ ವಂದಿ ಪೆಟ್ಟೈ ಏರಿಯಾದಲ್ಲಿ ಮನೆಮನೆಗೆ ಹೋಗಿ ಮತಯಾಚನೆ ಮಾಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ತಮ್ಮ ಕುಟುಂಬಸ್ಥರ ಬಟ್ಟೆಗಳನ್ನು ತೊಳೆಯುತ್ತಿದ್ದರು. ಇದನ್ನು ಗಮನಿಸಿದ ಕಾತಿರವನ್ ಮಹಿಳೆ ಬಳಿ ಹೋಗಿ ನಾನು ಬಟ್ಟೆ ತೊಳೆದು ಕೊಡುತ್ತೇನೆ ಎಂದು ಹೇಳಿ ರಸ್ತೆಯಲ್ಲಿ ಕುಳಿತು ಬಟ್ಟೆಗಳನ್ನು ಒಗೆದಿದ್ದಾರೆ. ಹಾಗೆ ಪಕ್ಕದಲ್ಲಿಯೇ ಇದ್ದ ಕೆಲ ಪಾತ್ರೆಗಳನ್ನು ತೊಳೆದಿದ್ದಾರೆ.

    ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ವಾಷಿಂಗ್ ಮಷೀನ್ ವಿತರಿಸುವ ಭರವಸೆ ನೀಡಿರುವುದರಿಂದ ಅದನ್ನು ಸೂಚಿಸಲು ಬಟ್ಟೆ ತೊಳೆದಿದ್ದೇನೆ. ನಮ್ಮ ಅಮ್ಮಾ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಕೊಟ್ಟ ಮಾತಿನಂತೆ ವಾಷಿಂಗ್ ಮಷೀನ್ ನೀಡಿತ್ತೇವೆ. ಸರ್ಕಾರ ಇದನ್ನು ನೋಡಿಕೊಳ್ಳುತ್ತದೆ ಎಂದು ಕಾತಿರವನ್ ಹೇಳಿದ್ದಾರೆ.

  • ಅಧಿಕಾರಿಗಳ ಗ್ರಾಮ ವಾಸ್ತವ್ಯ: ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಅಧಿಕಾರಿಗಳ ಗ್ರಾಮ ವಾಸ್ತವ್ಯ: ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ರಾಯಚೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಹಿನ್ನೆಲೆ ಲಿಂಗಸುಗೂರು ತಾಲೂಕಿನ ಕಳ್ಳಿಲಿಂಗಸುಗೂರಿನಲ್ಲಿ ಇಂದು ಅಪರ ಜಿಲ್ಲಾಧಿಕಾರಿಯಾದ ದುರುಗೇಶ್ ಗ್ರಾಮ ವಾಸ್ತವ್ಯ ಮಾಡುತ್ತಿರುವುದರಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

    ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕುಂಭ, ಕಳಸ, ಡೊಳ್ಳು ಸಹಿತ ಮೆರವಣಿಗೆ ಮೂಲಕ ಅಧಿಕಾರಿಗಳನ್ನು ಗ್ರಾಮಕ್ಕೆ ಬರಮಾಡಿಕೊಂಡಿದ್ದಾರೆ. ಸಾರ್ವಜನಿಕರಿಂದ ಎಡಿಸಿ ದುರಗೇಶ್ ಅಹವಾಲು ಸ್ವೀಕರಿಸುತ್ತಿದ್ದಾರೆ. ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಸಿಗುವ ಭರವಸೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನ ಅಧಿಕಾರಿಗಳ ಮುಂದೆ ತೋಡಿಕೊಳ್ಳುತ್ತಿದ್ದಾರೆ.

    ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಕಳ್ಳಿಲಿಂಗಸೂಗೂರಿನ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದೆ. ಅಪರ ಜಿಲ್ಲಾಧಿಕಾರಿ ದುರುಗೇಶ್ ಜೊತೆಯಲ್ಲಿ ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಹವಾಲು ಸ್ವೀಕರಿಸುವ ಜೊತೆ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಸದ್ಬಳಕೆ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರಿಗೆ ಅರಿವು ಮೂಡಿಸಲಿದ್ದಾರೆ.

  • ಅಕಾಲಿಕ ಮಳೆಯಿಂದ ಬೆಳೆಹಾನಿ – ರಾಯಚೂರಿಗೆ ಲಕ್ಷ್ಮಣ ಸವದಿ ಭೇಟಿ

    ಅಕಾಲಿಕ ಮಳೆಯಿಂದ ಬೆಳೆಹಾನಿ – ರಾಯಚೂರಿಗೆ ಲಕ್ಷ್ಮಣ ಸವದಿ ಭೇಟಿ

    – ಶೀಘ್ರದಲ್ಲೇ ಪರಿಹಾರ ಕೊಡಿಸುವಂತೆ ಭರವಸೆ

    ರಾಯಚೂರು: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಜಿಲ್ಲೆಯ ಮಳೆಹಾನಿ ಪ್ರದೇಶಗಳ ವೀಕ್ಷಣೆ ನಡೆಸಿದ್ದಾರೆ. ಜಿಲ್ಲೆಯ ಸಿರವಾರಕ್ಕೆ ಭೇಟಿ ನೀಡಿ ಹಾನಿಯಾದ ಬೆಳೆಗಳನ್ನ ವೀಕ್ಷಣೆ ಮಾಡಿದರು.

    ಇದೇ ವೇಳೆ ಬೆಳೆ ಹಾನಿಗೆ ಸರ್ಕಾರದಿಂದ ಬರುವ ಪರಿಹಾರವನ್ನ ಶೀಘ್ರದಲ್ಲೇ ರೈತರಿಗೆ ತಲುಪುವಂತೆ ಮಾಡುತ್ತೇವೆ ಅಂತ ಹೇಳಿದರು. ಬೆಳೆಹಾನಿಯಾದ ರೈತರೊಂದಿಗೆ ಚರ್ಚೆ ಮಾಡಿ ಧೈರ್ಯಗೆಡದಂತೆ ಸಮಾಧಾನ ಹೇಳಿದರು. ಏಪ್ರಿಲ್ 20ರಂದು ಅಕಾಲಿಕ ಮಳೆಯಿಂದಾಗಿ ಭತ್ತ ಸೇರಿದಂತೆ ಜಿಲ್ಲೆಯ ವಿವಿಧ ಬೆಳೆಗಳು ಹಾನಿಯಾಗಿವೆ ಎಂದು ಹೇಳಿದರು.

    ಲಿಂಗಸುಗೂರು, ಮಾನ್ವಿ, ಸಿರವಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಕಟಾವಿಗೆ ಬಂದಿದ್ದ ಸುಮಾರು 8 ಸಾವಿರ ಹೆಕ್ಟರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕೋಟ್ಯಂತರ ರೂಪಾಯಿ ಭತ್ತ ಹಾನಿಯಾಗಿದೆ. ಪಪ್ಪಾಯ, ಅಂಜೂರ ಸೇರಿದಂತೆ ಸುಮಾರು 50 ಹೆಕ್ಟರ್ ನಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳು ಸಹ ಹಾಳಾಗಿವೆ. ಈ ಹಿನ್ನೆಲೆ ಬೆಳೆಹಾನಿ ಪ್ರದೇಶ ವೀಕ್ಷಣೆ ನಡೆಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರೈತರಿಗೆ ಪರಿಹಾರದ ಭರವಸೆ ನೀಡಿದ್ದಾರೆ.

    ಬೆಳೆಹಾನಿ ಪ್ರದೇಶ ವೀಕ್ಷಣೆ ಬಳಿಕ ರಾಯಚೂರಿನ ಜಿಪಂ ಸಭಾಂಗಣದಲ್ಲಿ ಕೊರೊನಾ ಹಿನ್ನೆಲೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಲಕ್ಷ್ಮಣ ಸವದಿ ಎರಡನೇ ಬಾರಿಗೆ ಕೊರೊನಾ ಹಿನ್ನೆಲೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಕೋವಿಡ್-19 ಪರೀಕ್ಷಿಸುವ ಮೊಬೈಲ್ ಫೀವರ್ ಕ್ಲಿನಿಕ್ ವಾಹನಕ್ಕೆ ಉಪ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

  • ನಮೋ 2.0ಗೆ 100 ದಿನ- ನಮ್ಮ ಸರ್ಕಾರ ಭರವಸೆಯ ಸಂಕೇತ ಎಂದ ಅಮಿತ್ ಶಾ

    ನಮೋ 2.0ಗೆ 100 ದಿನ- ನಮ್ಮ ಸರ್ಕಾರ ಭರವಸೆಯ ಸಂಕೇತ ಎಂದ ಅಮಿತ್ ಶಾ

    ನವದೆಹಲಿ: ಪ್ರಧಾನಿ ಮೋದಿ ಅವರ ಸತತ ಎರಡನೇ ಬಾರಿ ಅಧಿಕಾರ ವಹಿಸಿಕೊಂಡು ಇಂದಿಗೆ ನೂರು ದಿನ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಸರ್ಕಾರ ದೇಶದ ಎಲ್ಲಾ ಜನರಿಗೂ ಭರವಸೆಯ ಸಂಕೇತ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ನರೇಂದ್ರ ಮೋದಿ ಸರ್ಕಾರವು ಬಡವರ ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಮಾನಾರ್ಥಕವಾಗಿದೆ ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ “ಭರವಸೆಯ ಸಂಕೇತ” ವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಮೋದಿ ಸರ್ಕಾರದ 100 ದಿನಗಳ ಪೂರ್ಣಗೊಂಡ ನಂತರ ಸರಣಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಧಿ ಅಡಿಯಲ್ಲಿ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದು ಸೇರಿದಂತೆ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಮೂಲಕ ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕೆ ಸಮಾನಾರ್ಥಕವಾಗಿದೆ ಎಂದು ಅವರು ಸರಣಿ ಟ್ವೀಟ್‍ಗಳಲ್ಲಿ ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370, ಆರ್ಟಿಕಲ್ 35 ಎ ಅನ್ನು ತೆಗೆದುಹಾಕುವುದು. ಮುಸ್ಲಿಂ ಮಹಿಳೆಯರನ್ನು ತ್ರಿಪಲ್ ತಲಾಖ್ ಶಾಪದಿಂದ ಮುಕ್ತಗೊಳಿಸುವ ನಿರ್ಧಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರಾಷ್ಟ್ರದ ಭದ್ರತಾ ವಿಚಾರವನ್ನು ಬಲಪಡಿಸುವ ನಿರ್ಧಾರಗಳು ಮೋದಿಯವರ ನಿರ್ಣಾಯಕ ನಾಯಕತ್ವದ ಫಲಿತಾಂಶವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

    # MODIfied100 ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು. ಮೋದಿ ಅವರ ಸರ್ಕಾರ ಎರಡನೇ ಅವಧಿಯಲ್ಲಿ 100 ದಿನವನ್ನು ಪೂರ್ಣಗೊಳಿಸಿದ್ದಕ್ಕೆ ಪಿಎಂ ಮೋದಿ ಮತ್ತು ನನ್ನ ಎಲ್ಲಾ ಮಂತ್ರಿ ಸಹದ್ಯೋಗಿಗಳಿಗೆ ಅಭಿನಂದಿಸುತ್ತೇನೆ. ನಮ್ಮ ರಾಷ್ಟ್ರದ ಅಭಿವೃದ್ಧಿ ಮತ್ತು ರಕ್ಷಣೆ ಯಾವುದೇ ತೊಂದರೆ ಬಾರದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ನಾನು ನಮ್ಮ ಎಲ್ಲ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

     

  • ನಾನು ಕಾಂಗ್ರೆಸ್ ಶಾಸಕ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ – ಬಿ.ಸಿ ಪಾಟೀಲ್

    ನಾನು ಕಾಂಗ್ರೆಸ್ ಶಾಸಕ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ – ಬಿ.ಸಿ ಪಾಟೀಲ್

    ಹಾವೇರಿ: ನಾನು ಕಾಂಗ್ರೆಸ್ ಶಾಸಕ ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ. ಆದರ ಬಗ್ಗೆ ಬಿಜೆಪಿಯವರನ್ನು ಕೇಳಿ ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಜಿಲ್ಲೆಯ ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಈ ಬಾರಿ ನಡೆಯೋ ಮಂತ್ರಿ ಮಂಡಲದ ವಿಸ್ತರಣೆಯ ವೇಳೆ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಮನ್ವಯ ಸಮಿತಿ ಅಧ್ಯಕ್ಷರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಸಿಎಂ ಪರಮೇಶ್ವರ್ ಈ ಬಗ್ಗೆ ಸಂಪೂರ್ಣ ಭರವಸೆ ನೀಡಿದ್ದಾರೆ. ಮಂತ್ರಿ ಸ್ಥಾನ ಸಿಗದೆ ಇರುವ ಅಸಮಾಧಾನಕ್ಕೆ ಯಾವಾಗ ತೆರೆ ಬೀಳುತ್ತೆ ಅನ್ನೋದನ್ನು ಕಾದು ನೋಡಿ. ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ ಎಂದರು.

    ಇದೇ ವೇಳೆ ಸಿ.ಎಲ್.ಪಿ ಮೀಟಿಂಗ್ ವೇಳೆ ಅರ್ಧಕ್ಕೆ ಎದ್ದು ಬಂದಿದ್ದರ ಬಗ್ಗೆ ಕೇಳಿದಾಗ, ನನಗೆ ಖಾಸಗಿ ಕಾರ್ಯಕ್ರಮ ಇದ್ದರಿಂದ ಬೇಗ ಹೋದೆ. ಅದಕ್ಕೆ ಬೇರೆ ಯಾವುದೇ ಅರ್ಥ ಬೇಡ. ನಾನು ಸಿ.ಎಲ್.ಪಿ ಮೀಟಿಂಗ್ ನಲ್ಲಿ ಮಂತ್ರಿ ಸ್ಥಾನಕ್ಕೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿಎಂ ಕುಮಾರಸ್ವಾಮಿಗೆ ಸ್ಪೀಕರ್ ರಮೇಶ ಕುಮಾರ್ ಪತ್ರ ಬರೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅಭಿಪ್ರಾಯ. ಕುಮಾರಸ್ವಾಮಿ ಆಡಳಿತ ತೃಪ್ತಿ ತಂದಿದೆ ಚೆನ್ನಾಗಿ ಆಡಳಿತ ನಡೆಸಿದ್ದಾರೆ. ಇದರ ಮಧ್ಯದಲ್ಲಿ ಲೋಕಸಭಾ ಚುನಾವಣೆ, ಬರಗಾಲ ಹಾಗೂ ಸ್ವಲ್ಪ ಸಮಸ್ಯೆ ಬಂದಿದೆ ಎಲ್ಲವನ್ನು ನಿಭಾಸಿಕೊಂಡು ಹೋಗುತ್ತಿದ್ದಾರೆ. ನನಗೆ ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸುತ್ತದೆ ಅನ್ನೋ ಭರವಸೆಯವನ್ನು ವ್ಯಕ್ತಪಡಿಸಿದರು.

  • ‘ಭರವಸೆ’ಯಲ್ಲಿ ಪ್ರೀತಿಯ ಹುಡುಕಾಟ

    ‘ಭರವಸೆ’ಯಲ್ಲಿ ಪ್ರೀತಿಯ ಹುಡುಕಾಟ

    ಬೆಂಗಳೂರು: ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸ ಕಾರ್ಯಗಳ ಮೇಲೆ ಅಪಾರ ಭರವಸೆ ಇರುತ್ತದೆ. ಅದೇ ರೀತಿ ತನ್ನ ಪ್ರೀತಿಯ ಮೇಲೆ ಅಪಾರ ಭರವಸೆ ಇಟ್ಟುಕೊಂಡಿರುವ ನಾಯಕನಿಗೆ ಆತನ ಪ್ರೀತಿ, ಸಿಗುತ್ತಾ, ಇಲ್ವಾ ಎಂಬ ಕಥೆಯನ್ನಿಟ್ಟುಕೊಂಡು ತಯಾರಾಗಿರುವ ಚಿತ್ರ ‘ಭರವಸೆ’. ಒಬ್ಬ ಕಲಾವಿದನಾಗಬೇಕೆಂದು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಭರವಸೆ ಚಿತ್ರದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದೆ.

    ಶಿವಮೊಗ್ಗ, ಬೆಂಗಳೂರು, ಸಕಲೇಶಪುರ, ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಪ್ರತಿಯೊಬ್ಬರ ಜೀವನದಲ್ಲಿ ಏನಾದರೊಂದು ಭರವಸೆ ಇಟ್ಟುಕೊಂಡಿರುತ್ತಾರೆ. ಅಂತದೇ ಒಂದು ವಿಶೇಷ ಕಥೆ ಈ ಚಿತ್ರದಲ್ಲಿರುತ್ತದೆ.

    ಆರ್.ಆರ್. ಮೂವಿ ಮೇಕರ್ಸ್ ಲಾಂಛನದಲ್ಲಿ ನಾಗರಾಜು ಬಿ.ಸಿ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಛಾಯಾಗ್ರಹಣ, ಹರ್ಷ ಕೋಗೋಡು ಸಂಗೀತ, ಶ್ರೀತೇಜ, ಅಭಿಜಿತ್ ತೀರ್ಥಹಳ್ಳಿ, ಭೈರೇಶ್ ಸಾಹಿತ್ಯ, ಸ್ಟಂಟ್ ಸಿದ್ದು ಸಾಹಸ, ಕುಮಾರ್ ಸಿ.ಹೆಚ್. ಸಂಕಲನ, ಅರುಣ್, ಬಾಲು, ಕರಿಯನಂದ ನೃತ್ಯ ನಿರ್ದೇಶನ, ಪಲ್ಲವಿ ಗೋಪಾಲ್ ಸಹ ನಿರ್ಮಾಪಕರಾಗಿದ್ದು ವಿನಯರಾಜ್, ಅಹಲ್ಯಾ ಸುರೇಶ್, ಅಮೃತಾ, ನಾಗರಾಜು, ಶಾಮ್ ಯು. ಪೈ, ಸಂತೋಷ್, ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಕಿಲ್ಲರ್ ವೆಂಕಟೇಶ್, ಕೆಂಪೇಗೌಡ, ಇನ್ನೂ ಮುಂತಾದವರ ತಾರಾಬಳಗವಿದೆ.

  • ಕುಮಾರಣ್ಣ ನನ್ನ ಜೀವ ಉಳಿಸಿ, ಕೊಟ್ಟ ಭರವಸೆ ನೆರವೇರಿಸಿ- ಸಿಎಂ ಎಚ್‍ಡಿಕೆಗೆ ಬಾಲಕ ಮನವಿ

    ಕುಮಾರಣ್ಣ ನನ್ನ ಜೀವ ಉಳಿಸಿ, ಕೊಟ್ಟ ಭರವಸೆ ನೆರವೇರಿಸಿ- ಸಿಎಂ ಎಚ್‍ಡಿಕೆಗೆ ಬಾಲಕ ಮನವಿ

    ಬೆಂಗಳೂರು: ಜೀವ ಉಳಿಸಿಕೊಡುತ್ತೇನೆಂದು ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಬಾಲಕನೋರ್ವ ತಮ್ಮ ಪೋಷಕರೊಂದಿಗೆ ಸಿಎಂ ಕುಮಾರಸ್ವಾಮಿಗೆ ಅಂಗಲಾಚಿಕೊಳ್ಳುತ್ತಿದ್ದಾನೆ.

    ಮನೋಜ್ ಕುಮಾರ್ ಜೀವ ಉಳಿಸಿಕೊಳ್ಳಲು ಅಂಗಲಾಚುತ್ತಿರುವ ಬಾಲಕ. ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಲಕ್ಕರಸನಪಾಳ್ಯದ ಮಹದೇವಪ್ಪ ಹಾಗೂ ಜ್ಯೋತಿ ದಂಪತಿಯ ಒಬ್ಬನೇ ಮಗನಾಗಿದ್ದು, ಎಲ್ಲರಂತೆ ಚೆನ್ನಾಗಿ ಆಟವಾಡಿಕೊಂಡು ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಭೀಕರ ಕಾಯಿಲೆಯಿಂದಾಗಿ ಆಸ್ಪತ್ರೆಯ ಬೆಡ್ ಮೇಲೆಯೇ ಮಲಗುವ ಸ್ಥಿತಿಯಲ್ಲಿದ್ದಾನೆ.

    ಇನ್ನೂ ಒಂದು ತಿಂಗಳಲ್ಲಿ ಬಾಲಕ ಮನೋಜ್‍ಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡದೇ ಹೋದರೆ, ಒಂದು ತಿಂಗಳು ಮಾತ್ರ ಬದುಕಿರುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಗೆ ಸುಮಾರು 13 ಲಕ್ಷ ರೂಪಾಯಿ ಹಣ ಬೇಕಾಗಿರುವುದರಿಂದ, ಹಣ ಭರಿಸಲು ಶಕ್ತವಿಲ್ಲದ ಕುಟುಂಬ ಸಿಎಂ ಕುಮಾರಸ್ವಾಮಿಯವರ ಮೊರೆ ಹೋಗಿದ್ದಾರೆ. ಇದನ್ನೂ ಓದಿ:  ದತ್ತು ಪಡೆದ ಬಾಲಕನನ್ನ ನಡುನೀರಿನಲ್ಲಿ ಕೈ ಬಿಟ್ಟ ಬಿಎಸ್‍ವೈ!

    ಪೋಷಕರು ಈ ಮೊದಲು ಕೊಳ್ಳೇಗಾಲದಲ್ಲಿ ನಡೆದ ವಿಕಾಸ ಪರ್ವದ ವೇಳೆ ಮನೋಜ್‍ನ ಅನಾರೋಗ್ಯದ ಕುರಿತು ಕುಮಾರಸ್ವಾಮಿಯವರಿಗೆ ಮನವಿ ಮಾಡಿಕೊಂಡಿದ್ದರು. ಆಗ ಬಾಲಕನನ್ನು ಉಳಿಸಿಕೊಡುವುದು ನನ್ನ ಜವಬ್ದಾರಿ ಎಂದು ಕುಮಾರಸ್ವಾಮಿ ಮಾತು ಕೊಟ್ಟಿದ್ದರು. ಇದಾದ ಬಳಿಕ ಪುನಃ ಶಿರಾ ಹಾಗೂ ಹಾಸನದ ವಿಕಾಸ ಪರ್ವದ ಸಮಯದಲ್ಲಿ ಪ್ರಸ್ತಾಪಿಸಿದಾಗ, ಚಿಕಿತ್ಸೆ ನೀಡುವ ಕುರಿತು ಮಾತನಾಡಿದ್ದರು. ಅಲ್ಲದೇ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜನತಾ ದರ್ಶನದಲ್ಲೂ ಪಾಲ್ಗೊಂಡು ಮಗನನ್ನು ಉಳಿಸಿಕೊಡುವಂತೆ ಅಂಗಲಾಚಿದ್ದರು. ಆದರೆ ಬರೀ ಭರವಸೆಗಳನ್ನೇ ನೀಡುತ್ತಿದ್ದರೆ, ನಮ್ಮ ಮಗ ನಮ್ಮಿಂದ ದೂರವಾಗುತ್ತಾನೆ. ಕೂಡಲೇ ಅವನಿಗೆ ಚಿಕಿತ್ಸೆಗೆ ನೆರವು ನೀಡಿ ಎಂಬುದು ಪೋಷಕರ ಮನವಿಯಾಗಿದೆ.

    ಈಗಾಗಲೇ ಬಾಲಕನ ಜೀವ ಇಂಚಿಂಚಾಗಿ ಅಳಿದು ಹೋಗುತ್ತಿದ್ದು, ದೇಹದಲ್ಲಿ ರಕ್ತ ಕೂಡ ಉತ್ಪತ್ತಿಯಾಗುತ್ತಿಲ್ಲ. ಬಾಲಕನಿಗೆ ಮೂರು ದಿನಗಳಿಗೊಮ್ಮೆ ಕಡ್ಡಾಯವಾಗಿ ರಕ್ತ ಕೊಡಿಸಲೇಬೇಕು. ಸದ್ಯ ಎರಡು ಹೊಟ್ಟೆ ಆಪರೇಷನ್ ಮಾಡಿದ್ದು, ಅದರಲ್ಲಿ ಸಣ್ಣ ಕರುಳನ್ನ 23 ಸೆಂ.ಮೀ ಕತ್ತರಿಸಿದ್ದಾರೆ. ಇದರಿಂದಾಗಿ ರಾತ್ರಿ ನೋವಿನಲ್ಲೇ ನರಳಾಡಿ ಒದ್ದಾಡುತ್ತಿದ್ದಾನೆ. ಈಗಲಾದರೂ ನಮ್ಮ ಮಗನನ್ನು ಸಿಎಂ ಕುಮಾರಸ್ವಾಮಿಯವರು ಉಳಿಸಿ ಕೋಡುತ್ತಾರೆಯೇ ಎನ್ನುವ ನಿರೀಕ್ಷೆಯಲ್ಲಿ ಪೋಷಕರು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv