Tag: ಭಯೋತ್ಪಾದನ ನಿಗ್ರಹ ದಳ

  • ಲಕ್ನೋಗೆ ಶಂಕಿತ ಉಗ್ರರು ಎಂಟ್ರಿ: ಎಟಿಎಸ್ ಪೊಲೀಸರಿಂದ ಉಗ್ರರ ಬೇಟೆ ಕಾರ್ಯಾಚರಣೆ

    ಲಕ್ನೋಗೆ ಶಂಕಿತ ಉಗ್ರರು ಎಂಟ್ರಿ: ಎಟಿಎಸ್ ಪೊಲೀಸರಿಂದ ಉಗ್ರರ ಬೇಟೆ ಕಾರ್ಯಾಚರಣೆ

    ಲಕ್ನೋ: ಉತ್ತರಪ್ರದೇಶದಲ್ಲಿ ಕೊನೆ ಹಂತದ ಮತದಾನಕ್ಕೆ ಒಂದು ದಿನ ಬಾಕಿಯಿರುವಾಗಲೇ ಲಕ್ನೋದಲ್ಲಿ ಭಯೋತ್ಪಾದನ ನಿಗ್ರಹ ದಳ ಹಾಗೂ ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

    ನಗರದ ಹೊರವಲಯದಲ್ಲಿರುವ ಠಾಕೂರ್‍ಗಂಜ್‍ನ ಮನೆಯೊಂದರಲ್ಲಿ ಅಡಗಿರುವ ಶಂಕಿತ ಉಗ್ರರನ್ನು ಸೆರೆಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿನ ಅಕ್ಕಪಕ್ಕದ ನಿವಾಸಿಗಳನ್ನ ಈಗಾಗಲೇ ತೆರವುಗೊಳಿಸಲಾಗಿದ್ದು 20ಕ್ಕೂ ಹೆಚ್ಚು ಕಮಾಂಡೋಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನೆಯಲ್ಲಿ ಒಬ್ಬನಿಗಿಂತ ಹೆಚ್ಚು ಶಂಕಿತ ಉಗ್ರರಿರುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

    ಇಂದು ಬೆಳಿಗ್ಗೆ ಮಧ್ಯಪ್ರದೇಶದ ಭೋಪಾಲ್ ಉಜ್ಜೈನ್ ರೈಲಿನಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಗಾಯಗೊಂಡಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ. ಶಂಕಿತ ಉಗ್ರರಿರುವ ಸ್ಥಳದ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ಉತ್ತರಪ್ರದೇಶ ಪೊಲೀಸರು ಲಕ್ನೋ ಹಾಗೂ ಕಾನ್ಪುರಕ್ಕೆ ಎರಡು ತಂಡಗಳನ್ನು ಕಳಿಸಿದ್ದು, ಕಾನ್ಪುರದಲ್ಲಿ ಈಗಾಗಲೇ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

    ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ನಾಳೆಗೆ ಅಂತ್ಯವಾಗಲಿದ್ದು, ಮಾರ್ಚ್ 11ರಂದು ಫಲಿತಾಂಶ ಹೊರಬೀಳಲಿದೆ.