Tag: ಭದ್ರತಾ ಲೋಪ

  • BSY ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ

    BSY ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ

    ಕಲಬುರಗಿ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ಪಟ್ಟಣಕ್ಕೆ ಆಗಮಿಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಹೆಲಿಕಾಪ್ಟರ್ (Helicopter) ಲ್ಯಾಂಡಿಂಗ್ ವೇಳೆ ಭದ್ರತಾ ಲೋಪ ಎದುರಾಗಿದೆ.

    ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಲ್ಯಾಂಡಿಂಗ್ ವೇಳೆಯಲ್ಲಿ ಭಾರೀ ಗಾಳಿ ಬೀಸಿದ ಪರಿಣಾಮ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿವೆ. ಏಕೆಂದರೆ ಹೆಲಿಪ್ಯಾಡ್ ಸುತ್ತ ಜಮೀನಿನಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಾಕಲಾಗಿದ್ದು, ಲ್ಯಾಂಡಿಂಗ್ ವೇಳೆ ಅವು ಹೆಲಿಕಾಪ್ಟರ್ ಮೇಲೆ ಹಾರಿ ಬಂದಿವೆ. ತಕ್ಷಣವೇ ಎಚ್ಚೆತ್ತುಕೊಂಡ ಪೈಲಟ್, ಹೆಲಿಕಾಪ್ಟರ್ ಅನ್ನು ಬೇರೆಡೆಗೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ದಿಂಬು, ಹಾಸಿಗೆ, ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದೆ: ಬೊಮ್ಮಾಯಿ

    ಲ್ಯಾಂಡಿಂಗ್ ವೇಳೆ ಹಾರಿ ಬಂದ ಪ್ಲಾಸ್ಟಿಕ್ ಚೀಲಗಳನ್ನು ತಕ್ಷಣ ಪೋಲಿಸರು ತೆರವು ಮಾಡಿದ್ದು, ನಂತರ ಒಂದೆರಡು ಸುತ್ತು ಹಾರಾಟ ನಡೆಸಿ, ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದಾರೆ.

    ಹೆಲಿಕಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ತೂರಿ ಬಂದಿದ್ದರಿಂದ ಅಧಿಕಾರಿಗಳು ಮತ್ತು ಪೋಲಿಸರು ಕಕ್ಕಾಬಿಕ್ಕಿಯಾಗಿ ಓಡಾಡಿದ್ದರು. ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೆ ಇರುವುದರಿಂದ ಭದ್ರತಾ ಲೋಪ ಎದುರಾಗಿದೆ. ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‍ಗೆ ಮಾಡಾಳ್ ವಿರೂಪಾಕ್ಷಪ್ಪ ಅರ್ಜಿ

  • ಜೋಡೋ ಯಾತ್ರೆ ವೇಳೆ ಭದ್ರತಾ ಲೋಪ – ರಾಗಾ ಅಪ್ಪಿಕೊಳ್ಳಲು ಓಡಿದ ವ್ಯಕ್ತಿ

    ಜೋಡೋ ಯಾತ್ರೆ ವೇಳೆ ಭದ್ರತಾ ಲೋಪ – ರಾಗಾ ಅಪ್ಪಿಕೊಳ್ಳಲು ಓಡಿದ ವ್ಯಕ್ತಿ

    ಚಂಡೀಗಢ: ಕಾಂಗ್ರೆಸ್ (Congress) ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವೇಳೆ ಭದ್ರತಾ ಲೋಪವಾಗಿರುವ (Security Lapse) ಘಟನೆ ಮಂಗಳವಾರ ನಡೆದಿದೆ.

    ಪಂಜಾಬ್‌ನ (Punjab) ಹೋಶಿಯಾರ್‌ಪುರದಲ್ಲಿ (Hoshiarpur) ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು (Rahul Gandhi) ಅಪ್ಪಿಕೊಳ್ಳಲು ವ್ಯಕ್ತಿಯೊಬ್ಬ ಅವರತ್ತ ಓಡಿರುವ ಘಟನೆ ವರದಿಯಾಗಿದೆ. ಆದರೆ ತಮ್ಮ ಸುತ್ತಲೂ ಸಾಗುತ್ತಿದ್ದ ಕಾಂಗ್ರೆಸ್‌ನ ಇತರ ಕಾರ್ಯಕರ್ತರು ಆತನನ್ನು ತಕ್ಷಣವೇ ತಡೆದಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಜೋಡೋ ಪಾದಯಾತ್ರೆ ದೆಹಲಿಯಲ್ಲಿ ಸಾಗುತ್ತಿದ್ದ ಸಂದರ್ಭ ರಾಗಾ ಅವರಿಗೆ ಭದ್ರತೆ ಒದಗಿಸುವಲ್ಲಿ ದೆಹಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ರಾಹುಲ್ ಅವರೇ 2020 ರಿಂದ 113 ಬಾರಿ ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿರುವುದಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತಿರುಗೇಟು ನೀಡಿತ್ತು. ಇದನ್ನೂ ಓದಿ: ಬುದ್ಗಾಮ್ ಕೋರ್ಟ್‌ ಸಂಕೀರ್ಣದ ಬಳಿ ಎನ್‌ಕೌಂಟರ್‌ – ಇಬ್ಬರು ಉಗ್ರರ ಹತ್ಯೆ

    ಭಾರತ್ ಜೋಡೋ ಯಾತ್ರೆ ಮಂಗಳವಾರ ಬೆಳಗ್ಗೆ ಹೋಶಿಯಾರ್‌ಪುರದ ತಾಂಡಾದಿAದ ಪುನರಾರಂಭವಾಯಿತು. ಪಕ್ಷದ ಪಂಜಾಬ್ ಮುಖ್ಯಸ್ಥ ಅಮರೀಂದರ್ ಸಿಂಗ್ ರಾಜಾ ವಾರಿಂಗ್, ಹರೀಶ್ ಚೌಧರಿ, ಹಾಗೂ ರಾಜ್ ಕುಮಾರ್ ಚಬ್ಬೇವಾಲ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಬಾಲಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿಗೆ ಹಾರ ನೀಡಲು ಬಂದಿದ್ದು 10ರ ಬಾಲಕ – ಭದ್ರತೆಯಲ್ಲಿ ಲೋಪ ಆಗಿಲ್ಲ

    ಮೋದಿಗೆ ಹಾರ ನೀಡಲು ಬಂದಿದ್ದು 10ರ ಬಾಲಕ – ಭದ್ರತೆಯಲ್ಲಿ ಲೋಪ ಆಗಿಲ್ಲ

    ಹುಬ್ಬಳ್ಳಿ: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರೋಡ್ ಶೋ (Road Show) ನಡೆಸಿದ್ದು, ಈ ವೇಳೆ ಭದ್ರತಾ ಲೋಪವಾಗಿರುವ (Security Breach) ವರದಿ ಕೇಳಿಬಂದಿತ್ತು. ಪ್ರಧಾನಿಯೆಡೆಗೆ ಹೂ ಹಿಡಿದುಕೊಂಡು ಬಂದಿದ್ದು 10 ವರ್ಷದ ಬಾಲಕನಾಗಿದ್ದ (Boy). ಆದರೆ ಇಲ್ಲಿ ಯಾವುದೇ ರೀತಿಯ ಭದ್ರತಾ ಲೋಪ ಆಗಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಬ್ಯಾರಿಕೇಡ್ ಹಾರಿದ್ದ ಬಾಲಕ ಮೋದಿಯನ್ನು ನೋಡಿದ ಉತ್ಸಾಹದಲ್ಲಿ ಈ ರೀತಿ ಮಾಡಿದ್ದಾನೆ. ಈ ರೀತಿ ಲಕ್ಷಾಂತರ ಜನರು ಸೇರುವ ಸಂದರ್ಭ ಬ್ಯಾರಿಕೇಡ್ ಹಾರುವಂತಹ ಘಟನೆ ಸಾಮಾನ್ಯ. ಆತ ಸಣ್ಣ ಬಾಲಕನಾಗಿದ್ದರಿಂದ ಬಹುಶಃ ಆತನ ತಿಳುವಳಿಕೆ ತಪ್ಪಿ ಈ ರೀತಿ ಮಾಡಿದ್ದಾನೆ. ಇಲ್ಲಿ ಯಾವುದೇ ಭದ್ರತಾ ಲೋಪ ಆಗಿಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಘಟನೆಯೇನು?
    ಪ್ರಧಾನಿ ಮೋದಿ ರೋಡ್ ಶೋ ವೇಳೆ ಒಂದು ಕ್ಷಣ ಆತಂಕದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಮೋದಿ ರೋಡ್ ಶೋ ನಡೆಯುವಾಗ ಇದ್ದಕ್ಕಿದ್ದಂತೆ ಬ್ಯಾರಿಕೇಡ್ ಹಾರಿದ ಬಾಲಕನೊಬ್ಬ ಮೋದಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದ. ಆದರೆ ಇದರಿಂದ ಏನೂ ಗಾಬರಿಗೊಳ್ಳದ ಮೋದಿ, ನಗುನಗುತ್ತಲೇ ಹೂವಿನ ಹಾರವನ್ನು ತೆಗೆದುಕೊಂಡಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್‌ ಆಗಿ – ಯುವ ಜನತೆಗೆ ಮೋದಿ ಕರೆ

    ಘಟನೆ ನಡೆದ ತಕ್ಷಣವೇ ಬಾಲಕನನ್ನು ಎಸ್‌ಪಿಜಿ ಸಿಬ್ಬಂದಿ ಹುಬ್ಬಳ್ಳಿ ಪೊಲೀಸರ ಕೈಗೆ ಒಪ್ಪಿಸಿದ್ದರು. ಈ ಘಟನೆಯನ್ನು ಗೃಹ ಇಲಾಖೆ ಗಂಭಿರವಾಗಿ ಪರಿಗಣಿಸಿದೆ ಹಾಗೂ ಸಮಗ್ರ ವರದಿ ಕೇಳಿದೆ. ಇತ್ತ ಗೋಕುಲ ಠಾಣೆ ಪೊಲೀಸರು, ತೊರವಿಹಕ್ಕಲದ 10 ವರ್ಷದ ಬಾಲಕ ಕುನಾಲ್ ಸುರೇಶ್‌ನನ್ನು ಅವರ ಪೋಷಕರ ಸಮ್ಮುಖದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಯುವಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಬಾಲಕ

    ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಬಾಲಕ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹುಬ್ಬಳ್ಳಿಯಲ್ಲಿ (Hubballi) ರೋಡ್ ಶೋ (Road Show) ವೇಳೆ ಭದ್ರತಾ ಲೋಪ (Security Breach) ನಡೆದಿದೆ.

    ಹುಬ್ಬಳ್ಳಿಯಲ್ಲಿ ಮೋದಿ ರೋಡ್ ಶೋ ನಡೆಸುತ್ತಿದ್ದ ವೇಳೆ ಬಾಲಕನೊಬ್ಬ ಬ್ಯಾರಿಕೇಡ್ ಹಾರಿ ಮೋದಿ ಕಾರಿನತ್ತ ನುಗ್ಗಿದ್ದಾನೆ. ಮೋದಿ ಭದ್ರತೆಗೆಂದು ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ಹಾರಿದ ಬಾಲಕ ಹೂವಿನ ಹಾರವನ್ನು ಹಿಡಿದುಕೊಂಡು ಮೋದಿಯತ್ತ ಓಡಿದ್ದಾನೆ. ಇದನ್ನೂ ಓದಿ: ವೇದಿಕೆಯಲ್ಲಿ ಒಂದೇ ಹಣ್ಣು ಹಂಚಿಕೊಂಡು ತಿಂದ ಸಿದ್ದರಾಮಯ್ಯ, ಹೆಚ್.ವಿಶ್ವನಾಥ್

    ತನ್ನ ಕೈಯಾರೇ ಹಾರವನ್ನು ಮೋದಿಗೆ ಕೊಡಲು ಆತ ಪ್ರಯತ್ನಿಸಿದ್ದು, ತಕ್ಷಣವೇ ಪೊಲೀಸರು ಆತನನ್ನು ತಡೆದಿದ್ದಾರೆ. ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಬಾಲಕ ಹೂವಿನ ಹಾರವನ್ನು ಮೋದಿ ಕಾರಿನ ಬಾನೆಟ್ ಮೇಲೆ ಇರಿಸಲು ಪ್ರಯತ್ನಿಸಿದ್ದಾನೆ. ಆದರೆ ತಕ್ಷಣವೇ ಭದ್ರತಾ ತಂಡ ಆತನನ್ನು ತಡೆದಿದೆ. ಇದನ್ನೂ ಓದಿ: ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮಿತ್ ಶಾ ಭೇಟಿ ವೇಳೆ TRS ನಾಯಕನ ಕಾರು ಅಡ್ಡ- ಕಾರಿನ ಗಾಜು ಒಡೆದ ಭದ್ರತಾ ಸಿಬ್ಬಂದಿ

    ಅಮಿತ್ ಶಾ ಭೇಟಿ ವೇಳೆ TRS ನಾಯಕನ ಕಾರು ಅಡ್ಡ- ಕಾರಿನ ಗಾಜು ಒಡೆದ ಭದ್ರತಾ ಸಿಬ್ಬಂದಿ

    ಹೈದರಾಬಾದ್: ಕೇಂದ್ರ ಸಚಿವ ಅಮಿತ್ ಶಾ(Amit Shah) ಹೈದರಾಬಾದ್(Hyderabad) ಪ್ರವಾಸ ವೇಳೆ ಭದ್ರತಾ ಲೋಪ ಉಂಟಾಗಿದೆ. ಗೃಹ ಸಚಿವರು ತೆರಳುವಾಗ ಬೆಂಗಾವಲು ಪಡೆಗೆ ಟಿಆರ್‌ಎಸ್ ನಾಯಕನ ಕಾರು ಅಡ್ಡ ಬಂದಿದೆ.

    ಹೈದರಾಬಾದ್ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಶ್ವದಳದ ಮುಂದೆ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಮುಖಂಡ ಗೋಸುಲ ಶ್ರೀನಿವಾಸ್ ಕಾರನ್ನು ನಿಲ್ಲಿಸಿದರು. ಹಾರನ್ ಹೊಡೆದ್ರೂ ಆತ ಕಾರನ್ನು ಪಕ್ಕಕ್ಕೆ ತೆಗೆಯದ ಹಿನ್ನೆಲೆಯಲ್ಲಿ, ಅಮಿತ್ ಷಾ ಭದ್ರತಾ ಸಿಬ್ಬಂದಿ ಹೋಗಿ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಟಿಆರ್‌ಎಸ್ ನಾಯಕನ ವರ್ತನೆಗೆ ಬಿಜೆಪಿ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿದೆ.

    ಈ ಬಗ್ಗೆ ಟಿಆರ್‌ಎಸ್(TRS) ಮುಖಂಡ ಮಾತನಾಡಿ, ಕಾರು(Car) ಹಾಗೆಯೇ ನಿಂತಿತು. ನಾನು ಟೆನ್ಷನ್‍ನಲ್ಲಿದ್ದೆ. ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ. ಆದರೆ ಅವರು ನಾನು ಹೋಗುತ್ತೇನೆ ಎಂದರೂ ಕಾರನ್ನು ಧ್ವಂಸಗೊಳಿಸಿದರು ಎಂದು ಹೇಳಿದರು. ಇದನ್ನೂ ಓದಿ: 8 ಚೀತಾಗಳು ಬಂದವು , ಆದ್ರೆ 16 ಕೋಟಿ ಉದ್ಯೋಗ ಬರಲಿಲ್ಲ – ರಾಹುಲ್‌ ಗಾಂಧಿ ಟೀಕೆ

    ತೆಲಂಗಾಣದಲ್ಲಿ ವಿಮೋಚನಾ ದಿನಾಚರಣೆ ರಾಜಕೀಯ ಜೋರಾಗಿದೆ. 2014ರಿಂದ ಇಲ್ಲಿಯವರೆಗೆ ಸುಮ್ಮನೆ ಇದ್ದ ಕೆಸಿಆರ್, ಇದೇ ಮೊದಲ ಬಾರಿಗೆ ವಿಮೋಚನಾ ದಿನವನ್ನು ಆಚರಿಸಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇದೇ ವಿಚಾರ ಇಟ್ಕೊಂಡು, ಬಿಜೆಪಿ ಜನರ ಮುಂದೆ ಹೋಗ್ತಿದೆ. ಇವತ್ತು ಅಮಿತ್ ಷಾ ಹೈದ್ರಾಬಾದ್‍ಗೆ ಬಂದು ಬೃಹತ್ ಸಭೆ ನಡೆಸಿದ್ದಾರೆ. ಹೀಗಾಗಿಯೇ ಬಿಜೆಪಿಗೆ ಕೌಂಟರ್ ಕೊಡಲು ಟಿಆರ್‍ಎಸ್ ಕೂಡ ಅನಿವಾರ್ಯವಾಗಿ ವಿಮೋಚನಾ ದಿನೋತ್ಸವ ಆಚರಿಸಿದೆ. ಕೋಮು ಶಕ್ತಿಗಳು ತೆಲಂಗಾಣದಲ್ಲಿ ಅಶಾಂತಿ ಸೃಷ್ಟಿಗೆ ಯತ್ನಿಸ್ತಿವೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಕೊಲೆ ಮಾಡಿದ್ದ ಪತಿ 10 ದಿನಗಳ ಬಳಿಕ ಶವವಾಗಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಮೋದಿ ಭದ್ರತೆಯಲ್ಲಿ ಲೋಪ – ಹೆಲಿಕಾಪ್ಟರ್ ಪಕ್ಕವೇ ಕಪ್ಪು ಬಲೂನ್‍ಗಳ ಹಾರಾಟ

    ಮೋದಿ ಭದ್ರತೆಯಲ್ಲಿ ಲೋಪ – ಹೆಲಿಕಾಪ್ಟರ್ ಪಕ್ಕವೇ ಕಪ್ಪು ಬಲೂನ್‍ಗಳ ಹಾರಾಟ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬ್‍ನಲ್ಲಿ ಭದ್ರತಾ ಲೋಪದ ಬಳಿಕ ಇದೀಗ ಮತ್ತೊಮ್ಮೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಇದೇ ರೀತಿ ಘಟನೆ ನಡೆದಿದೆ.

    ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನದಂದು ಪ್ರಧಾನಿ ಮೋದಿ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೋದಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ಕಪ್ಪು ಬಲೂನ್‍ಗಳನ್ನು ಹಾರಿ ಬಿಡಲಾಗಿತ್ತು. ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಈ ಬಲೂನ್‍ಗಳನ್ನು ಹಾರಿ ಬಿಡಲಾಗಿದೆ. ಹಾರಿಬಿಟ್ಟ ದೊಡ್ಡ ಗಾತ್ರದ ಬಲೂನ್‍ಗಳು ಆಗಸದಲ್ಲಿ ತೇಲಾಡಿದೆ. ಕಾರ್ಯಕ್ರಮದ ಮುಗಿಸಿ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿದ್ದಂತೆ ಪ್ರತಿಭಟನಾಕಾರರು ಹಾರಿಬಿಟ್ಟ ಬಲೂನ್ ಅಡ್ಡಬಂದಿದೆ. ಆದರೆ ಪೈಲೆಟ್ ಸಮಯಪ್ರಜ್ಞೆಯಿಂದ ಬಹುದೊಡ್ಡ ಅಪಾಯ ತಪ್ಪಿದೆ. ಇದು ಪ್ರಧಾನಿ ಮೋದಿ ಭದ್ರತಾ ವಿಚಾರದಲ್ಲಿ ನಡೆದ ಅತೀ ದೊಡ್ಡ ಲೋಪ ಎಂದು ಆಕ್ರೋಶ ಕೇಳಿಬರುತ್ತಿದೆ. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಹಾಗೂ ಮೋದಿ ಹೆಲಿಕಾಪ್ಟರ್ ಮೂಲಕ ತೆರಳುವ ಮಾರ್ಗದಲ್ಲಿ ಪ್ರತಿಭಟನೆ ವೇಳೆ ಬಲೂನ್ ಹಾರಿಬಿಟ್ಟು ಭದ್ರತಾ ಲೋಪವೆಸಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಇದೀಗ ಒಂದು ವರ್ಷದಲ್ಲಿ ಎರಡನೇ ಬಾರಿಗೆ ಲೋಪವಾದಂತಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಫೇಕ್ ವೀಡಿಯೋ ವೈರಲ್ – ಬಿಜೆಪಿ ಶಾಸಕರ ವಿರುದ್ಧ ಎಫ್‍ಐಆರ್

    ಈ ಹಿಂದೆ 2022ರ ಜನವರಿ ತಿಂಗಳಿನಲ್ಲಿ ಬಟಿಂಡಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಪಂಜಾಬ್‍ಗೆ ತೆರಳಿದ್ದರು. ಮಧ್ಯಾಹ್ನ ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಸ್ಥಳಕ್ಕೆ ತೆರಳಲು ಹೋಗುತ್ತಿದ್ದಾಗ ಭದ್ರತಾ ಲೋಪವಾಗಿತ್ತು. ಕಾರ್ಯಕ್ರಮಕ್ಕೆ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಫ್ಲೈಓವರ್‌ನಲ್ಲಿ ತೆರಳುತ್ತಿದ್ದಾಗ ರೈತರು ಪ್ರತಿಭಟನೆ ಮಾಡುತ್ತಿರುವುದು ಗೊತ್ತಾಗಿತ್ತು. ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಫ್ಲೈಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?

    ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?

    ಪಂಜಾಬ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಫ್ಲೈಓವರ್ ಬಳಿ ಪ್ರಧಾನಿ ಮೋದಿ ಅವರ ಕಾರು ಸಿಲುಕಿದ ವಿಚಾರ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇದು ಬಹುದೊಡ್ಡ ಭದ್ರತಾ ಲೋಪ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ವಿಚಾರವಾಗಿ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಅಷ್ಟಕ್ಕೂ ಪ್ರಧಾನಿಗಳ ಭದ್ರತೆಯ ಪೂರ್ವ ಸಿದ್ಧತೆ ಹೇಗಿರುತ್ತೆ, ಅದರ ಹೊಣೆಗಾರಿಕೆ ಯಾರದು, ಪಂಜಾಬ್‍ನಲ್ಲಿ ನಡೆದದ್ದಾದರೂ ಏನು ಎಂಬ ನಾನಾ ಪ್ರಶ್ನೆಗಳು ಮೂಡುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

    ಪ್ರಧಾನಿಗಳ ಭದ್ರತೆಯ ಪ್ಲಾನ್ ಹೇಗಿರುತ್ತೆ?
    ಬ್ಲೂ ಬುಕ್: ಇದು ಗಣ್ಯರ ಭದ್ರತೆ ಕುರಿತ ಮಾರ್ಗಸೂಚಿಗಳ ಸಂಗ್ರಹವಾಗಿದೆ. ಪ್ರಧಾನಿಗಳ ಭದ್ರತೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಯಮಗಳನ್ನು ‘ಬ್ಲೂ ಬುಕ್’ನಲ್ಲಿ ನಮೂದಿಸಲಾಗುತ್ತದೆ. ಈ ಯೋಜನೆಯು ಕೇಂದ್ರೀಯ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳನ್ನೂ ಒಳಗೊಂಡಿರುತ್ತದೆ. ಭದ್ರತೆಯ ಒಟ್ಟು ಜವಾಬ್ದಾರಿಯನ್ನು ವಿಶೇಷ ಭದ್ರತಾ ದಳ (ಎಸ್‍ಪಿಜಿ) ಹೊತ್ತಿರುತ್ತದೆ. ಇದನ್ನೂ ಓದಿ: ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್‌

    ಪ್ರಧಾನಿಯು ಸಭೆಯಲ್ಲಿ ಭಾಗವಹಿಸಿದರೆ, ರಸ್ತೆ-ವಿಮಾನದಲ್ಲಿ ಪ್ರಯಾಣಿಸಿದರೆ ಏನೇನು ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ಎಷ್ಟು ಸಿಬ್ಬಂದಿ ನಿಯೋಜಿಸಬೇಕು ಹಾಗೂ ಯಾವ ವಾಹನಗಳನ್ನು ಬಳಸಬೇಕು ಎಂಬುದನ್ನು ಮುಂಚಿತವಾಗಿಯೇ ಪ್ರತ್ಯೇಕ ಮಾರ್ಗಸೂಚಿಗಳನ್ನು ರಚಿಸಿಕೊಳ್ಳಲಾಗುತ್ತದೆ. ಅದರನ್ವಯ ಎಸ್‍ಪಿಜಿ ಹಾಗೂ ರಾಜ್ಯ ಪೊಲೀಸ್ ಪಡೆಗಳು ನಿಯಮಗಳನ್ನು ಪಾಲಿಸಬೇಕಿರುತ್ತದೆ.

    ಭದ್ರತೆಗಾಗಿ ಸಭೆ
    ಪ್ರಧಾನಿಯವರಿಗೆ ಪ್ರಯಾಣ ಸಂದರ್ಭದಲ್ಲಿ ಭದ್ರತೆ ಒದಗಿಸುವ ಸಂಬಂಧ ಸಭೆ ನಡೆಸಿ ಚರ್ಚಿಸಿ ಕ್ರಮವಹಿಸಲಾಗುತ್ತದೆ. ಪ್ರಧಾನಿ ಅವರು ಹೇಗೆ (ವಾಯು, ರಸ್ತೆ) ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡುತ್ತಾರೆ ಕಾರು ಅಥವಾ ಹೆಲಿಕಾಪ್ಟರ್‍ನಿಂದ ಇಳಿದು ಕಾರ್ಯಕ್ರಮ ಸ್ಥಳಕ್ಕೆ ಹೇಗೆ ತಲುಪುತ್ತಾರೆ ಎಂಬುದನ್ನೂ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದನ್ನು ಯೋಜಿಸುವಾಗ ಕೇಂದ್ರೀಯ ಏಜೆನ್ಸಿಗಳು ಮತ್ತು ಸ್ಥಳೀಯ ಗುಪ್ತಚರ ಘಟಕದ ಮಾಹಿತಿಗಳನ್ನೂ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರಧಾನಿ ಪ್ರಯಾಣದ ಮೂರು ದಿನಗಳ ಮುನ್ನವೇ ಈ ಎಲ್ಲಾ ಯೋಜನೆಯನ್ನು ಮಾಡಿಕೊಳ್ಳಲಾಗುತ್ತದೆ.

    ಕಾರ್ಯಕ್ರಮ ಸ್ಥಳದ ಭದ್ರತೆ
    ಕಾರ್ಯಕ್ರಮ ಸ್ಥಳದಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರ ವ್ಯವಸ್ಥೆ ಮಾಡಲಾಗುತ್ತದೆ. ಬರುವವರನ್ನು ಪರೀಕ್ಷಿಸಲಾಗುವುದು. ವೇದಿಕೆಯ ರಚನಾತ್ಮಕ ಸ್ಥಿರತೆಯನ್ನು ಸಹ ಪರಿಶೀಲಿಸಲಾಗುವುದು. ಸ್ಥಳದಲ್ಲಿ ಅಗ್ನಿ ಸುರಕ್ಷತೆ ಬಗ್ಗೆಯೂ ಪರಿಶೋಧನೆ ಮಾಡಲಾಗುವುದು. ಹವಾಮಾನ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ, ನಾಳೆ ಮಹತ್ವದ ವಿಚಾರಣೆ

    ಕಾರ್ಯಕ್ರಮ ದಿಢೀರ್ ಬದಲಾವಣೆಯಾದರೆ?
    ಇದಕ್ಕೂ ಸಹ ಮುಂಚಿತವಾಗಿ ಸೂಕ್ತ ತಯಾರಿ ಮಾಡಲಾಗುತ್ತದೆ. ಪ್ರಧಾನಿಗಳು ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ಸ್ಥಳ ತಲುಪಲು ಹವಾಮಾನ ಅಡ್ಡಿಯಾದರೆ, ಮುಂಚಿತವಾಗಿಯೇ ರಸ್ತೆ ಮಾರ್ಗವನ್ನು ಆಯ್ಕೆ ಮಾಡಲಾಗಿರುತ್ತದೆ. ರಸ್ತೆ ಮಾರ್ಗ ಸುರಕ್ಷಿತ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಮಾರ್ಗದಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ.

    ಹೆಲಿಕಾಪ್ಟರ್ ಮಾರ್ಗ ಏಕೆ ಬದಲಾಗುತ್ತೆ?
    ಹೆಲಿಕಾಪ್ಟರ್ ಹಾರಾಡುವಾಗ 1,000 ಮೀಟರ್ ದೂರದ ದಾರಿಯು ಪೈಲಟ್‍ಗೆ ಕಾಣುವಂತಿರಬೇಕು. ಚಳಿಗಾಲದಲ್ಲಿ ಅಥವಾ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಗೊತ್ತುಪಡಿಸಿದ ಮಾರ್ಗಗಳಲ್ಲಿ ತೊಂದರೆ ಇದೆ ಎಂದಾಗ ಪ್ರವಾಸ ರದ್ದುಗೊಳಿಸಿ ಮಾರ್ಗ ಬದಲಿಸಲಾಗುತ್ತದೆ. ತಕ್ಷಣ ಅಗತ್ಯ ಸಿದ್ಧತೆಗಳೊಂದಿಗೆ ಪರ್ಯಾಯವಾಗಿ ರಸ್ತೆ ಮಾರ್ಗದಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಲಾಗುತ್ತದೆ. ಚಳಿಗಾಲ ಅಥವಾ ಮಳೆಗಾದಲ್ಲಿ ಹಲವು ಬಾರಿ ಹೆಲಿಕಾಪ್ಟರ್ ಪ್ರಯಾಣ ರದ್ದಾಗುವುದು ಸಾಮಾನ್ಯ. ಹೀಗಾಗಿ ಮೊದಲೇ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ಆಗಿರುತ್ತದೆ

    ರಸ್ತೆ ಮಾರ್ಗದಲ್ಲಿ ಭದ್ರತೆ ಹೇಗಿರುತ್ತೆ?
    ಇಂತಹ ವೇಳೆ ರಾಜ್ಯ ಪೊಲೀಸರು ಸ್ಥಳೀಯವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಪೊಲೀಸರು ಒಪ್ಪಿಗೆ ನೀಡುವವರೆಗೂ ಪ್ರಧಾನಿ ಸಂಚಾರಕ್ಕೆ ಎಸ್‍ಪಿಜಿ ಅನುಮತಿ ನೀಡುವುದಿಲ್ಲ. ಪ್ರಧಾನಿ ವಾಹನ ಹಾಗೂ ಬೆಂಗಾವಲು ಪಡೆಯನ್ನು ರಾಜ್ಯ ಪೊಲೀಸರ ವಾಹನವು ಮುನ್ನಡೆಸಬೇಕು. ಆಯಾ ಜಿಲ್ಲೆಯ ಎಸ್‍ಪಿ ದರ್ಜೆಯ ಸಮವಸ್ತ್ರ ಇಲ್ಲದ ಅಧಿಕಾರಿ ಜೊತೆಗಿರಬೇಕು. ಪ್ರಧಾನಿಯು ಶಿಷ್ಟಾಚಾರ ಬದಿಗೊತ್ತಿ ಜನರ ಹತ್ತಿರ ಹೋಗಲು ಬಯಸಿದಾಗ, ಭದ್ರತೆಯ ಅಪಾಯವಿದ್ದಲ್ಲಿ ಎಸ್‍ಪಿಜಿ ಪ್ರಧಾನಿ ಅವರನ್ನು ತಡೆಯಬಹುದು. ರ‍್ಯಾಲಿ, ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರಧಾನಿಯನ್ನು ಜನರು ಸುತ್ತುವರಿಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಎಚ್ಚರವಹಿಸಬೇಕು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ

    ಭದ್ರತೆಯಲ್ಲಿ ಯಾರಿರುತ್ತಾರೆ?
    ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳಲ್ಲಿರುವ ಉತ್ಕೃಷ್ಟ ಸಾಮಥ್ರ್ಯದ ಯೋಧರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಕಠಿಣ ತರಬೇತಿ ನೀಡಲಾಗಿರುತ್ತದೆ. ಪ್ರಧಾನಿಗೆ ಭದ್ರತೆ ವೇಳೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತಿರಬೇಕು. ಎಸ್‍ಪಿಜಿ ಅನುಮತಿ ಇಲ್ಲದೇ ಅವರು ಕರ್ತವ್ಯದಿಂದ ಬಿಡುಗಡೆ ಪಡೆಯುವಂತಿಲ್ಲ.

    ಪ್ರಧಾನಿ ಓಡಾಟಕ್ಕೆ ವ್ಯವಸ್ಥಿತ ‘ಕಾರ್‌ಕೇಡ್‌’
    ಇದನ್ನು ಗೃಹ ಸಚಿವಾಲಯ ವ್ಯವಸ್ಥೆ ಮಾಡುತ್ತದೆ. ಪ್ರಧಾನಿ ಒಬ್ಬರೇ ಭೇಟಿ ನೀಡುವಾಗ ವಾಹನಗಳ ಸಂಖ್ಯೆ 8 ಮೀರಬಾರದು. ಪ್ರಧಾನಿ ಜೊತೆಗೆ ಸಂಗಾತಿ, ಗಣ್ಯರಿದ್ದರೆ ವಾಹನಗಳ ಸಂಖ್ಯೆ ಹೆಚ್ಚಿಸಬಹುದು. ಪೈಲಟ್ ಕಾರ್ (ಕಾರ್‍ಕೇಡ್ ಮುಂಭಾಗ ಇರುತ್ತೆ), ಟೆಕ್ನಿಕಲ್ ಕಾರ್ (ನೆಟ್‍ವರ್ಕ್ ಜಾಮರ್ ಮತ್ತಿತರ ತಾಂತ್ರಿಕ ಉಪಕರಣ ಹೊಂದಿರುತ್ತದೆ), ರೈಡರ್ಸ್ (ಪ್ರಧಾನಿ ಕಾರು ಚಲಿಸುವ ನಾಲ್ಕು ದಿಕ್ಕುಗಳಿಗೂ ಒಂದೊಂದು ಕಾರು), ಫ್ಲ್ಯಾಗ್ ಕಾರ್ (ಪ್ರಧಾನಿ ಸಾಗುವ ಕಾರು), ಅಂಬುಲೆನ್ಸ್ (ಪ್ರಧಾನಿಗೆ ಅಗತ್ಯ ಚಿಕಿತ್ಸೆಗೆ), ಟೇಲ್ ಕಾರ್ (ಕಾರ್‍ಕೇಡ್ ವ್ಯವಸ್ಥೆಯ ಕೊನೆಯ ಕಾರು). ಹೀಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಇದು ಪ್ರಧಾನಿ ಅವರ ಎಲ್ಲ ರಾಜ್ಯಗಳ ಪ್ರವಾಸಕ್ಕೂ ಅನ್ವಯಿಸುತ್ತದೆ.

  • ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ

    ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ

    – ಪ್ರಧಾನಿ ಭದ್ರತೆ ರಾಷ್ಟ್ರೀಯ ಭದ್ರತೆಯ ವಿಚಾರ
    – ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾದ ವಿಶೇಷ ಪ್ರಕರಣ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಪ್ರಯಾಣ ಮಾಹಿತಿಯನ್ನು ಸಂರಕ್ಷಿಸಿಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟರ್ ಜನರಲ್‍ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮೋದಿ ಪ್ರಯಾಣದ ವೇಳೆಯಲ್ಲಾದ ಭದ್ರತಾ ವೈಫಲ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆಗ್ರಹಿಸಿ ಲಾಯರ್ಸ್ ವಾಯ್ಸ್ ಅಸೊಶಿಯೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಈ ಸೂಚನೆ ನೀಡಿದೆ.

    ಇಂದು ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಮಣಿಂದರ್ ಸಿಂಗ್, ಎಸ್‍ಪಿಜಿ ನಿಯಮಗಳ ಪ್ರಕಾರ ಪಿಎಂ ಭದ್ರತೆ ನಿರಾಕರಿಸುವಂತಿಲ್ಲ, ಪ್ರಧಾನಿ ಭದ್ರತೆ ಎನ್ನುವುದು ಕೇಂದ್ರ ಅಥವಾ ರಾಜ್ಯದ ವಿಚಾರವಲ್ಲ, ಇದು ರಾಷ್ಟ್ರೀಯ ಭದ್ರತೆಯ ವಿಚಾರ ಇದು ಸಂಸದೀಯ ವ್ಯಾಪ್ತಿಗೆ ಬರಲಿದೆ. ಪಿಎಂ ಕಾನ್ವೆ ನಡು ದಾರಿಯಲ್ಲಿ ನಿಂತಿದ್ದು ರಾಜ್ಯವೊಂದರ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ, ಇದು ಬಹುದೊಡ್ಡ ಭದ್ರತಾ ವೈಫಲ್ಯವಾಗಿದೆ. ಈ ವೈಫಲ್ಯವನ್ನು ವೃತ್ತಿಪರವಾಗಿ ತನಿಖೆ ನಡೆಸಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಈ ತನಿಖೆ ಸಾಧ್ಯವಿಲ್ಲ ಅಲ್ಲದೇ ಇದನ್ನು ತನಿಖೆ ನಡೆಸಲು ರಾಜ್ಯಕ್ಕೆ ಯಾವುದೇ ವಿಶೇಷ ಅಧಿಕಾರವಿಲ್ಲ ಎಂದರು. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ದಲಿತ ಎಂಬ ಕಾರಣಕ್ಕೆ ಬಿಜೆಪಿ ಟಾರ್ಗೆಟ್ ಮಾಡ್ತಿದೆ: ಅಶೋಕ್ ಗೆಹ್ಲೋಟ್

    ರಾಜ್ಯ ಸರ್ಕಾರ ಈಗಾಗಲೇ ಸಮಿತಿಯೊಂದನ್ನು ರಚಿಸಿದೆ. ಸರ್ಕಾರದಿಂದ ಸಮಿತಿಗೆ ನೇಮಕಗೊಂಡ ಸಮಿತಿಯ ಅಧ್ಯಕ್ಷರು ಈ ಹಿಂದೆ ಭಾರಿ ಸೇವಾ ಸಂಬಂಧಿತ ಹಗರಣದ ಭಾಗವಾಗಿದ್ದರು. ಈ ನ್ಯಾಯಾಧೀಶರ ನಡತೆಯ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದರು. ಹೀಗಾಗಿ ಇವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಈ ಸಮಿತಿಯ ತನಿಖೆ ಬದಲು ಪ್ರಕರಣವನ್ನು ಭಟಿಂಡಾ ಜಿಲ್ಲಾ ನ್ಯಾಯಾಧೀಶರು ಮತ್ತು ಎನ್‍ಐಎ ಅಧಿಕಾರಿಗಳು ಪರಿಶೀಲಿಸಬಹುದು ಮತ್ತು ಪ್ರಧಾನಿ ಪ್ರಯಾಣದ ಸಾಕ್ಷ್ಯಗಳನ್ನು ಎನ್‍ಐಎ ಸಂರಕ್ಷಿಸಿ ಇಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಮಣಿಂದರ್ ಸಿಂಗ್ ಬಳಿಕ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾದ ವಿಶೇಷ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದಕ್ಕೆ ಸುಪ್ರೀಂಕೋರ್ಟ್ ಧನ್ಯವಾದ ಹೇಳಿದರು. ಪ್ರಧಾನ ಮಂತ್ರಿ ರಸ್ತೆ ಮಾರ್ಗವಾಗಿ ತೆರಳಲು ಸಂಬಂಧಿಸಿದ ರಾಜ್ಯದ ಡಿಜಿ ಅನುಮತಿ ನೀಡಬೇಕು. ಈ ಪ್ರಕರಣದಲ್ಲಿ ಡಿಜಿ ಅನುಮತಿ ನೀಡಿದ್ದಾರೆ, ಅನುಮತಿ ನೀಡದ ಬಳಿಕವಷ್ಟೆ ಪ್ರಧಾನಿ ರಸ್ತೆ ಮೂಲಕ ಹೊರಟಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ 

    ಪ್ರತಿಭಟನೆ ನಡೆಯುತ್ತಿದ್ದ ಪ್ರದೇಶದಲ್ಲಿ ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾಕಾರರ ಜೊತೆಗೆ ಚಹಾ ಹೀರುತ್ತಿದ್ದರು. ಭದ್ರತಾ ಸಮಸ್ಯೆ ಬಗ್ಗೆ ಪಿಎಂ ಸೆಕ್ಯುರಿಟಿ ಅಲರ್ಟ್ ವಾಹನಕ್ಕೆ ಕನಿಷ್ಠ ಮಾಹಿತಿಯನ್ನು ನೀಡಿಲ್ಲ. ಪಿಎಂ ಕಾನ್ವೆ ಪ್ಲೈವೋರ್ ಮೇಲಿದ್ದಾಗ ಪ್ರತಿಭಟನಾಕಾರರು ಹಿಂದೆ ದೊಡ್ಡ ಪ್ರಮಾಣದಲ್ಲಿ ಘೋಷಣೆ ಕೂಗುತ್ತಿದ್ದರು. ಪರಿಸ್ಥಿತಿ ಏನಾಗಬಹುದಿತ್ತು ಯೋಚಿಸಿ ಎಂದು ಆತಂಕ ವ್ಯಕ್ತಪಡಿಸಿದರು. ಇದಲ್ಲದೇ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಜನರು XYZ (ವಿವಾದಿತ ಪದಗಳನ್ನು ಬಳಸದೇ) ಕೆಲಸವನ್ನು ಮಾಡಲು ಕರೆ ನೀಡಿದ್ದರು. ಇದು ಗಡಿಯಾಚೆಗಿನ ಭಯೋತ್ಪಾದನೆಯ ಸಮಸ್ಯೆಯಾಗಿರಬಹುದು. ಆದ್ದರಿಂದ ಈ ಪ್ರಕರಣ ಜಿಲ್ಲಾ ನ್ಯಾಯಾಧೀಶರು ಮತ್ತು NIA ಅಧಿಕಾರಿಗಳ ಬಳಿ ಇರಲಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ

    ಬಳಿಕ ಪಂಜಾಬ್ ಸರ್ಕಾರದ ಪರ ವಾದ ಮಂಡಿಸಿದ ಅಡಿಷನಲ್ ಜನರಲ್, ಪಂಜಾಬ್ ಸರ್ಕಾರ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಜನವರಿ 5 ರಂದು ಘಟನೆ ಸಂಭವಿಸಿದಾಗ ಅದೇ ದಿನ ಸಮಿತಿಯನ್ನು ರಚಿಸಲಾಯಿತು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ನೇಮಿಸಲಾಗಿದೆ, ನಿನ್ನೆ ಎಫ್‍ಐಆರ್ ಕೂಡ ದಾಖಲಿಸಿದ್ದೇವೆ. ಕೇಂದ್ರವು ಈ ವಿಷಯವನ್ನು ತನಿಖೆ ಮಾಡಲು ಸಮಿತಿಯನ್ನು ಸಹ ರಚಿಸಿದೆ. ಪ್ರಕರಣದ ತನಿಖೆಗೆ ಯಾವುದೇ ವ್ಯಕ್ತಿಯನ್ನು ನೇಮಿಸಬಹುದು ಒಂದು ವೇಳೆ ಲೋಪವಿದ್ದರೆ ತನಿಖೆಯ ಅಗತ್ಯವಿದೆ. ಮೋದಿ ನಮ್ಮ ಪ್ರಧಾನಿ ಎಂದು ಪಂಜಾಬ್ ಸಿಎಂ ಹೇಳಿದ್ದಾರೆ. ನಾವು ಪ್ರಕರಣವನ್ನು ರಾಜಕೀಯಗೊಳಿಸಿಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ವಾದ ಮಂಡನೆಯ ಬಳಿಕ ತುಷಾರ್ ಮೆಹ್ತಾರನ್ನು ಪ್ರಶ್ನಿಸಿದ ಸಿಜೆಐ ಎನ್‍ವಿ ರಮಣ, ನೀವೂ ಸ್ವತಂತ್ರ ತನಿಖೆಯನ್ನು ಬಯಸುತ್ತಿದ್ದಿರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ದಾಖಲೆಗಳ ಸಂಗ್ರಹದೊಂದಿಗೆ ನಾಳೆ ನಮ್ಮ ವೈಯಕ್ತಿಕ ಕನಿಮ್ಮ ಮುಂದೆ ಇಡಲಿದ್ದೇವೆ. ಅದನ್ನು ಪರಿಶೀಲಿಸಿ ತಿರ್ಮಾನ ತೆಗೆದುಕೊಳ್ಳಿ ಎಂದು ಎಂದರು. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ಬಳಿಕ ಮಧ್ಯಂತರ ಆದೇಶ ನೀಡಿದ ನ್ಯಾ.ಎನ್.ವಿ ರಮಣ, ದೇಶದ ಪ್ರಧಾನಿಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಯ ದೃಷ್ಟಿಯಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಸಾಕ್ಷ್ಯಗಳನ್ನು (PM ಪ್ರಯಾಣ ದಾಖಲೆಗಳು) ಸುರಕ್ಷಿತವಾಗಿರಿಸಲು ಮತ್ತು ಸಂರಕ್ಷಿಸಲು ನಿರ್ದೇಶಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ತಕ್ಷಣವೇ ಪಂಜಾಬ್ ಪೊಲೀಸ್ ಅಧಿಕಾರಿಗಳು ಮತ್ತು ಎಸ್‍ಪಿಜಿ ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಗೆ ಸಹಕರಿಸಲು ಮತ್ತು ರಿಜಿಸ್ಟ್ರಾರ್ ಜನರಲ್‍ಗೆ ಅಗತ್ಯ ನೆರವು ನೀಡಲು ನಿರ್ದೇಶಿಸುತ್ತೇವೆ. ಎಲ್ಲಾ ದಾಖಲೆಗಳನ್ನು ಅವರ ಸುರಕ್ಷಿತ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ನಾವು ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸುತ್ತೇವೆ ಎಂದು ಮೌಕಿಕವಾಗಿ ಹೇಳಿದರು. ಅಲ್ಲದೇ ಸೋಮವಾರದವರೆಗೂ ಕೇಂದ್ರ ಮತ್ತು ರಾಜ್ಯದಿಂದ ರಚನೆಯಾದ ಸಮಿತಿಗಳು ತನಿಖೆ ನಡೆಸದಂತೆ ಸೂಚನೆ ನೀಡಿದರು. ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆಯಾಗಿದ್ದು ಸೋಮವಾರ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಸಮಿತಿ ರಚನೆ ಮಾಡುವ ಸಾಧ್ಯತೆಗಳಿದೆ.

  • ಚರಣ್‍ಜಿತ್ ಸಿಂಗ್ ಚನ್ನಿ ದಲಿತ ಎಂಬ ಕಾರಣಕ್ಕೆ ಬಿಜೆಪಿ ಟಾರ್ಗೆಟ್ ಮಾಡ್ತಿದೆ: ಅಶೋಕ್ ಗೆಹ್ಲೋಟ್

    ಚರಣ್‍ಜಿತ್ ಸಿಂಗ್ ಚನ್ನಿ ದಲಿತ ಎಂಬ ಕಾರಣಕ್ಕೆ ಬಿಜೆಪಿ ಟಾರ್ಗೆಟ್ ಮಾಡ್ತಿದೆ: ಅಶೋಕ್ ಗೆಹ್ಲೋಟ್

    ಜೈಪುರ: ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರು ದಲಿತ ಎಂಬ ಕಾರಣಕ್ಕೆ ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಭದ್ರತಾ ಲೋಪವಾಗಿರುವುದಾಗಿ ಆರೋಪಿಸಿದ್ದಾರೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಭಾರತದಲ್ಲಿ ಪಂಜಾಬ್ ಇತಿಹಾಸದಲ್ಲಿ ಮೊದಲ ಬಾರಿಗೆ ದಲಿತ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ ಮತ್ತು ಅವರನ್ನು ಇಡೀ ರಾಷ್ಟ್ರವು ಸ್ವಾಗತಿಸಿದೆ. ಆದರೆ ಪಂಜಾಬ್‍ನಿಂದ ನಾನು ಜೀವಂತವಾಗಿ ಬಂದಿದ್ದೇನೆ ಎಂಬ ಹೇಳಿಕೆಯನ್ನು ಮೋದಿ ಅವರು ನೀಡಬಾರದಿತ್ತು. ಕೆಲವರು ರಾಜಕೀಯ ಲಾಭ ಪಡೆಯಲು ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಭದ್ರತಾ ಲೋಪವಾಗಿದೆ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್‍ನೆ ಮಾನಹಾನಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ಕಾಂಗ್ರೆಸ್ ನಾಯಕರು ಮತ್ತು ಪ್ರಧಾನಿಗಳು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಹಿಂಸೆಯನ್ನು ತನ್ನ ಸಿದ್ಧಾಂತವಾಗಿ ಅನುಸರಿಸುತ್ತದೆ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅವರ ಮನಸ್ಸಿನಲ್ಲಿ ಹಿಂಸಾಚಾರವಿದೆ. ಅವರು ಹೇಗೆ ನಮಗೆ ಅಹಿಂಸೆಯನ್ನು ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

    ಬುಧವಾರ ಬಟಿಂಡಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಪಂಜಾಬ್‍ಗೆ ಆಗಮಿಸಿದ್ದರು. ಮಧ್ಯಾಹ್ನ ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಸ್ಥಳಕ್ಕೆ ತೆರಳಲು ಹೋಗುತ್ತಿದ್ದಾಗ ಭದ್ರತಾ ಲೋಪವಾಗಿದೆ. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

    ಕಾರ್ಯಕ್ರಮಕ್ಕೆ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಫ್ಲೈ  ಫ್ಲೈ ಓವರ್‌ನಲ್ಲಿ ತೆರಳುತ್ತಿದ್ದಾಗ ರೈತರು ಪ್ರತಿಭಟನೆ ಮಾಡುತ್ತಿರುವುದು ಗೊತ್ತಾಗಿದೆ. ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಫ್ಲೈ ಓವರ್‍ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಬಳಿಕ ಬಟಿಂಡಾಕ್ಕೆ ಮರಳಿದ್ದಾರೆ.