Tag: ಭತ್ಯೆ

  • ಟೀಂ ಇಂಡಿಯಾ ಕ್ರಿಕೆಟಿಗರಿಗೆ ಡಬಲ್ ಗಿಫ್ಟ್

    ಟೀಂ ಇಂಡಿಯಾ ಕ್ರಿಕೆಟಿಗರಿಗೆ ಡಬಲ್ ಗಿಫ್ಟ್

    ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತವರು ನೆಲದಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳು ಮಾತ್ರವಲ್ಲದೇ ವಿದೇಶಿ ನೆಲದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಡಳಿತ ಮಂಡಳಿ ಆಟಗಾರರಿಗೆ ಡಬಲ್ ಬೋನಾನ್ಜಾ ನೀಡಿದ್ದು, ವಿದೇಶಿ ಟೂರ್ನಿಗೆ ತೆರಳಿದ ಸಂದರ್ಭದಲ್ಲಿ ಆಟಗಾರರಿಗೆ ನೀಡುತ್ತಿದ್ದ ದಿನದ ಭತ್ಯೆಯನ್ನು ಡಬಲ್ ಮಾಡಿದೆ.

    ಟೀಂ ಇಂಡಿಯಾ ಆಟಗಾರರು ಮಾತ್ರವಲ್ಲದೆ ತಂಡದೊಂದಿಗೆ ತೆರಳುವ ಮ್ಯಾನೇಜ್‍ಮೆಂಟ್ ತಂಡ ಸದಸ್ಯರಿಗೆ ನೀಡುತ್ತಿದ್ದ ದಿನದ ಭತ್ಯೆಯನ್ನು ಹೆಚ್ಚಿಸಿದೆ. ಇದುವರೆಗೂ ದಿನದ ಭತ್ಯೆಯಾಗಿ ಆಟಗಾರರಿಗೆ 125 ಡಾಲರ್ (ಸುಮಾರು 8 ಸಾವಿರ ರೂ.) ನೀಡಲಾಗುತ್ತಿತ್ತು. ಸದ್ಯ ಭತ್ಯೆ ಹೆಚ್ಚಳ ಮಾಡಿರುವುದರಿಂದ 250 ಡಾಲರ್ (ಸುಮಾರು 17 ಸಾವಿರ ರೂ.) ಲಭಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವರದಿಯ ಅನ್ವಯ ಕ್ರಿಕೆಟಿಗರ ದಿನದ ಭತ್ಯೆ ಮಾತ್ರವಲ್ಲದೇ ಪ್ರಯಾಣ ಭತ್ಯೆಯನ್ನು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂಬ ಮಾಹಿತಿ ಇದೆ. ಆಟಗಾರರು, ಸಿಬ್ಬಂದಿಗೆ ಇತರ ಸೌಲಭ್ಯಗಳನ್ನು ಬಿಸಿಸಿಐ ಪ್ರತ್ಯೇಕವಾಗಿ ಮಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಡಿಮ್ಯಾಂಡ್ ಮೇರೆಗೆ ಆಟಗಾರರು ಹಾಗೂ ಸಿಬ್ಬಂದಿಯ ಸಂಬಳವನ್ನು ಬಿಸಿಸಿಐ ಶೇ.200 ರಷ್ಟು ಹೆಚ್ಚಿಸಿದ್ದ ಸಂಗತಿ ಎಲ್ಲರಿಗೂ ತಿಳಿಸಿದಿದೆ. ಪ್ರತಿ ವರ್ಷ ‘ಎ’ ಪ್ಲಸ್ ಶ್ರೇಣಿಯಲ್ಲಿದ್ದ ಆಟಗಾರರು 7 ಕೋಟಿ ರೂ. ಸಂಭಾವನೆಯನ್ನು ಪಡೆದರೆ, ‘ಎ’ ಗ್ರೇಡ್ ಪಟ್ಟಿಯಲ್ಲಿನ ಆಟಗಾರರು 5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರೆ. 2018 ರಲ್ಲಿ ಮೊದಲ ಬಾರಿಗೆ ಬಿಸಿಸಿಐ ತನ್ನ ಒಪ್ಪಂದ ಪಟ್ಟಿಯಲ್ಲಿ ‘ಎ’ ಪ್ಲಸ್ ಶ್ರೇಣಿಯನ್ನು ನೀಡಿತ್ತು. ಉಳಿದಂತೆ ‘ಬಿ’ ಶ್ರೇಣಿಯ ಆಟಗಾರರು 3 ಕೋಟಿ ರೂ., ‘ಸಿ’ ಶ್ರೇಣಿಯ ಆಟಗಾರರು 1 ಕೋಟಿ ರೂ. ಪಡೆಯುತ್ತಿದ್ದಾರೆ. ಮಹಿಳಾ ಕ್ರಿಕೆಟ್ ಆಟಗಾರರಲ್ಲಿ ‘ಎ’ ಶ್ರೇಣಿಯ ಆಟಗಾರರು 50 ಲಕ್ಷ ರೂ., ‘ಬಿ’ ಶ್ರೇಣಿಯ ಆಟಗಾರರು 30 ಲಕ್ಷ ರೂ. ಹಾಗೂ ‘ಸಿ’ ಶ್ರೇಣಿಯ ಆಟಗಾರರು 10 ಲಕ್ಷ ರೂ. ಪಡೆಯುತ್ತಿದ್ದಾರೆ.

  • ನಾನು ಮತ್ತೆ ಭತ್ಯೆ ವಾಪಸ್ ನೀಡುವಂತೆ ಕೇಳಿದ್ದು ಯಾಕೆ: ಕಾರಣ ತಿಳಿಸಿದ ಬಸವರಾಜ ರಾಯರೆಡ್ಡಿ

    ನಾನು ಮತ್ತೆ ಭತ್ಯೆ ವಾಪಸ್ ನೀಡುವಂತೆ ಕೇಳಿದ್ದು ಯಾಕೆ: ಕಾರಣ ತಿಳಿಸಿದ ಬಸವರಾಜ ರಾಯರೆಡ್ಡಿ

    ಬೆಂಗಳೂರು: ನನಗೆ ಈಗ ಆರ್ಥಿಕ ಸಮಸ್ಯೆ ಇರುವುದರಿಂದ ಈ ಹಿಂದೆ ಬೇಡ ಎಂದಿದ್ದ ಸಚಿವ ಸ್ಥಾನದ ಭತ್ಯೆಯನ್ನು ವಾಪಸ್ ನೀಡಲು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾಗಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

    ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಸಕನಾಗಿ, ಸಚಿವನಾಗಿ ಯಾವುದೇ ಭತ್ಯೆ ಪಡೆದಿಲ್ಲ. ಅಲ್ಲದೆ ವಸತಿ ಸಚಿವನಾಗಿದ್ದಾಗಲೂ ಯಾವುದೇ ಭತ್ಯೆ ಪಡೆದಿಲ್ಲ. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಹೆಚ್ಚಿನ ನೋವುಂಟಾಗಿದೆ. ಸದ್ಯ ನನ್ನ ವೈಯಕ್ತಿಕ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವ ಕಾರಣ 23 ತಿಂಗಳ ಅವಧಿಯ ಸಚಿವ ಸ್ಥಾನದ ಭತ್ಯೆಯನ್ನು ಮಾತ್ರ ವಾಪಸ್ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದೇನೆ. ಆದರೆ ಈ ಹಣ ನೀಡಲು ಕಾನೂನು ಸಮಸ್ಯೆ ಎದುರಾಗಿದೆ ಎಂಬ ಮಾಹಿತಿ ಇದ್ದು, ಏನಾಗಲಿದೆ ಎಂಬುವುದನ್ನು ಕಾದು ನೋಡುತ್ತೇನೆ ಎಂದರು.

    ಹಲವು ವರ್ಷಗಳಿಂದ ಈ ಆದರ್ಶವನ್ನು ಪಾಲಿಸಿಕೊಂಡು ಬರುತ್ತಿದ್ದೆ. ಆದರೆ ಆರ್ಥಿಕ ಸಂಕಷ್ಟದಿಂದ ಮನಸ್ಸಿಗೆ ಸ್ವಲ್ಪ ನೋವಾಗಿದೆ. ಅಲ್ಲದೇ ಈ ಹಿಂದೆ ಚುನಾವಣೆಯಗಳಲ್ಲಿ ಹಣ ವೆಚ್ಚ ಮಾಡುವ ಅಗತ್ಯವಿರಲಿಲ್ಲ. ಆದರೆ ಈ ಬಾರಿ ಚುನಾವಣೆಯಲ್ಲಿ ಸಾಕಷ್ಟು ಹಣವೂ ವೆಚ್ಚವಾಗಿದೆ. ಆದರೆ ಆದರ್ಶಗಳನ್ನು ಪಾಲಿಸುವುದರಿಂದ ಹೀಗೆ ಆಗುತ್ತದೆ ಎಂದು ಹೇಳುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

    ಎಷ್ಟು ಬಾಕಿಯಿದೆ?
    ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ 23 ತಿಂಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಸರ್ಕಾರದಿಂದ ಬರುವ ಮನೆ ಬಾಡಿಗೆ, ಟಿಎ, ಡಿಎ ಯಾವುದನ್ನು ಪಡೆದಿರಲಿಲ್ಲ. ಅಲ್ಲದೇ ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆಯೂ ನೀಡುವ ಹೆಚ್ಚುವರಿ ಮೊತ್ತದ ಭತ್ಯೆಯನ್ನು ಪಡೆದಿರಲಿಲ್ಲ. ಸರ್ಕಾರ ನೀಡುವ ನಿವಾಸವನ್ನು ತೆಗೆದುಕೊಳ್ಳದೆ ಮಾಜಿ ಸಚಿವರು ಸ್ವತಃ ಹಣದಲ್ಲಿ ಕಾರ್ಯನಿರ್ವಹಿಸಿದ್ದರು. ರೆಡ್ಡಿಯವರ ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಅವರೇ ಹೇಳಿರುವಂತೆ 23 ತಿಂಗಳ ಮೊತ್ತ ಸುಮಾರು 46 ಲಕ್ಷ ರೂ.ಗಿಂತಲೂ ಹೆಚ್ಚಾಗಿದೆ.

    ಕಾನೂನು ಸಮಸ್ಯೆ: ಸದ್ಯ ಮಾಜಿ ಸಚಿವರು ಸದನದ ಸ್ಪೀಕರ್ ಅವರಿಗೆ ಬರೆದಿರುವ ಪತ್ರವನ್ನು ಹಣಕಾಸು ಇಲಾಖೆಗೆ ವರ್ಗಾಯಿಸಲಾಗಿದೆ. ಆದರೆ ಸದನದ ನಿಯಮಗಳ ಪ್ರಕಾರ ಯಾವುದೇ ಸಚಿವರು ಭತ್ಯೆ ಬೇಡ ಎಂದು ನಿರಾಕರಿಸಿದ ಬಳಿಕ ಮತ್ತೊಮ್ಮೆ ಭತ್ಯೆಯ ಹಣ ಪಡೆಯಲು ಆಡಳಿತ ಸರ್ಕಾರದ ಅವಧಿಯ ವೇಳೆವರೆಗೂ ಮಾತ್ರ ಸಾಧ್ಯವಿದೆ. ಈ ಅಂಶವನ್ನು ಸ್ಪೀಕರ್ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದು, ಹೊಸ ವಿಧಾನಸಭೆ ರಚನೆಯಾದ ಕಾರಣ ಭತ್ಯೆ ವಾಪಸ್ ನೀಡಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆಗೆ ತಿಳಿಸಿದೆ. ಹೀಗಾಗಿ ರಾಯರೆಡ್ಡಿ ಅವರಿಗೆ ಹಣ ಸಿಗುತ್ತಾ ಸಿಗುವುದಿಲ್ಲವೇ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

    ಕೊಪ್ಪಳದ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದ ಬಸವರಾಜರಾಯ ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಹಾಲಪ್ಪ ಆಚಾರ್ ವಿರುದ್ಧ ಸೋತಿದ್ದರು.

  • ಕೇಂದ್ರ ಸರ್ಕಾರಿ ನೌಕರರಿಗೆ ಗಿಫ್ಟ್: ಯಾವ ಭತ್ಯೆ ಎಷ್ಟು ಹೆಚ್ಚಳ?

    ಕೇಂದ್ರ ಸರ್ಕಾರಿ ನೌಕರರಿಗೆ ಗಿಫ್ಟ್: ಯಾವ ಭತ್ಯೆ ಎಷ್ಟು ಹೆಚ್ಚಳ?

    ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಪ್ರಧಾನಿ ಮೋದಿ ಸರ್ಕಾರ ಬಿಗ್ ಗಿಫ್ಟ್ ಕೊಟ್ಟಿದೆ. 7ನೇ ವೇತನ ಆಯೋಗದ ಶಿಫಾರಸಿಗೆ ಒಪ್ಪಿಗೆ ಕೊಟ್ಟಿದೆ. ಕೇಂದ್ರದ ಈ ನಿರ್ಧಾರದಿಂದ 50 ಲಕ್ಷ ನೌಕರರಿಗೆ ಬಂಪರ್ ಹೊಡೆದಿದೆ.

    ಜುಲೈ 1ರಿಂದ 7ನೇ ಆಯೋಗದ ಶಿಫಾರಸಿನಂತೆ 34 ಲಕ್ಷ ಉದ್ಯೋಗಿಗಳಿಗೆ ಮತ್ತು ಸೈನ್ಯದಲ್ಲಿರುವ 14 ಲಕ್ಷ ಮಂದಿಗೆ ಭತ್ಯೆ ಸಿಗಲಿದೆ. ಸೈನಿಕರಿಗಾಗಿ ಸಿಯಾಚಿನ್ ಭತ್ಯೆ ಕೂಡ ಘೋಷಣೆ ಮಾಡಿದೆ. ಸಮಿತಿ ಶಿಫಾರಸಿನಂತೆ ಮನೆ ಬಾಡಿಗೆ, ಭತ್ಯೆ ಹೆಚ್ಚಳವಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಏರ್ ಇಂಡಿಯಾವನ್ನು ಖಾಸಗೀಕರಣರ ಮಾಡಲು ಒಪ್ಪಿಗೆ ನೀಡಿದೆ.

    ಎಷ್ಟು ಹೆಚ್ಚಳವಾಗಿದೆ?
    – 3 ಹಂತಗಳಲ್ಲಿ 5,400, 3,600, 1,800 ಮನೆ ಬಾಡಿಗೆ, ಭತ್ಯೆ ಹೆಚ್ಚಳ
    – ಪಿಂಚಣಿದಾರರ ಮಾಸಿಕ ವೈದ್ಯಕೀಯ ಭತ್ಯೆ 500 ರಿಂದ 1 ಸಾವಿರಕ್ಕೆ ಏರಿಕೆ
    – ನಿರಂತರ ಹಾಜರಾತಿ ಭತ್ಯೆ 4,500 ರಿಂದ 6,750 ರೂಗೆ ಏರಿಕೆ
    – ಮಾಸಿಕ ನರ್ಸಿಂಗ್ ಭತ್ಯೆ 4,800 ರಿಂದ 7,200ಕ್ಕೆ ಹೆಚ್ಚಳ
    – ಆಪರೇಷನ್ ಥಿಯೇಟರ್ ಭತ್ಯೆ 360 ರಿಂದ 540ಕ್ಕೆ ಏರಿಕೆ
    – ಹಾಸ್ಪಿಟಲ್ ಪೇಷೆಂಟ್ ಕೇರ್ ಭತ್ಯೆ 2,070 ರಿಂದ 4,100ಕ್ಕೆ ಏರಿಕೆ
    – ಸೈನಿಕರಿಗೆ ಸಿಯಾಚಿನ್ ಭತ್ಯೆ 14 ಸಾವಿರದಿಂದ 30 ಸಾವಿರಕ್ಕೆ ಏರಿಕೆ
    – ಸೇನಾಧಿಕಾರಿಗಳಿಗೆ 21 ಸಾವಿರದಿಂದ 42 ಸಾವಿರಕ್ಕೆ ಸಿಯಾಚಿನ್ ಭತ್ಯೆ ಹೆಚ್ಚಳ

    ಇದನ್ನೂ ಓದಿ: ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

  • ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?

    ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?

    ಕಂಪೆನಿಗಳಲ್ಲಿ ಹೇಗೆ ಸಿಬ್ಬಂದಿಗೆ ಸಂಬಳವನ್ನು ಹೆಚ್ಚಳ ಮಾಡಲಾಗುತ್ತದೋ ಅದೇ ರೀತಿಯಾಗಿ ಸಂಸದರ ವೇತನವೂ ಕೂಡ ಕಾಲ ಕಾಲಕ್ಕೆ ಪರಿಷ್ಕರಣೆ ಆಗುತ್ತದೆ. ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರ ಇರುವ ಜಂಟಿ ಸಮಿತಿ ಅಧ್ಯಯನ ನಡೆಸಿ ಸಂಸದರ ಸಂಬಳವನ್ನು ಪರಿಷ್ಕರಿಸುತ್ತದೆ. ಹೀಗಾಗಿ ಇಲ್ಲಿ 2010ರಲ್ಲಿ ವೇತನ ಪರಿಷ್ಕರಣೆಯಂತೆ ಪ್ರಸ್ತುತ ಲೋಕಸಭಾ ಸದಸ್ಯರು ಪಡೆಯುತ್ತಿರುವ ಸಂಬಳ ಮತ್ತು ಭತ್ಯೆಯ ವಿವರಗಳನ್ನು ನೀಡಲಾಗಿದೆ.

    ಸಂಬಳ ಮತ್ತು ಭತ್ಯೆ
    #ತಿಂಗಳ ಸಂಬಳ: ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಪ್ರಸ್ತುತ ಒಂದು ತಿಂಗಳಿಗೆ 50 ಸಾವಿರ ರೂ. ಸಂಬಳ ಸಿಗುತ್ತದೆ. ದಿನ ಭತ್ಯೆ ಯಾಗಿ 2 ಸಾವಿರ ರೂ. ಸಿಕ್ಕಿದರೆ, ಕ್ಷೇತ್ರ ಭತ್ಯೆಯಾಗಿ ತಿಂಗಳಿಗೆ 45 ಸಾವಿರ ರೂ. ಸಿಗುತ್ತದೆ.

    #ಕಚೇರಿ ಭತ್ಯೆ: ಪ್ರತಿ ತಿಂಗಳು 45 ಸಾವಿರ ರೂ. ಸಿಗುತ್ತದೆ. ಇದರಲ್ಲಿ 15 ಸಾವಿರ ರೂ. ಸಭೆ, ಪೋಸ್ಟ್ ಖರ್ಚುಗಳನ್ನು ಮಾಡಬಹುದು.

    ಪ್ರವಾಸ ಭತ್ಯೆ:
    ಕ್ಷೇತ್ರ ಮತ್ತು ಸಂಸತ್ ಕಲಾಪದಲ್ಲಿ ಭಾಗವಹಿಸಲು ಮನೆಯಿಂದ ಪ್ರಯಾಣಿಸಿದರೆ ಅವರಿಗೆ ರೈಲ್ವೇ ಮತ್ತು ವಿಮಾನದಲ್ಲಿ ರಿಯಾಯಿಯಿತಿ ಇದೆ.

    #ರೈಲು: ಸಂಸದರಿಗೆ ರೈಲು ಪ್ರಯಾಣಕ್ಕೆ ಉಚಿತ ಪಾಸ್ ನೀಡಲಾಗುತ್ತದೆ. ಈ ಪಾಸನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಹವಾನಿಯಂತ್ರಿತ ಬೋಗಿ ಅಥವಾ ಎಕ್ಸ್‍ಕ್ಯುಟಿವ್ ದರ್ಜೆಯಲ್ಲಿ ಉಚಿತವಾಗಿ ಯಾವ ಸಮಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು. ಸಂಸದರ ಜೊತೆ ಅವರ ಪತಿ/ಪತ್ನಿಯರಿಗೂ ಉಚಿತ ಪ್ರಯಾಣಿಸಲು ಪಾಸ್ ನೀಡಲಾಗುತ್ತದೆ.

    #ವಿಮಾನ ಪ್ರಯಾಣ: ಒಂದು ವರ್ಷದಲ್ಲಿ ಗರಿಷ್ಟ 34 ಬಾರಿ ಸಿಂಗಲ್ ಟಿಕೆಟ್ ಮೂಲಕ ವಿಮಾನ ಪ್ರಯಾಣಿಸಬಹುದು. 8 ಬಾರಿ ಪತಿ/ ಪತ್ನಿ ಜೊತೆಯಾಗಿ ಪ್ರಯಾಣ ಬೆಳೆಸಬಹುದು. ಈ ಗರಿಷ್ಟ ಮಿತಿಯನ್ನು ಬಳಸದೇ ಇದ್ದರೆ ಉಳಿಕೆಯಾಗಿರುವ ಪ್ರಯಾಣದ ಟಿಕೆಟ್ ಮುಂದಿನ ವರ್ಷಕ್ಕೆ ವರ್ಗವಾಗುತ್ತದೆ.

    #ರಸ್ತೆ: 1 ಕಿ.ಮಿ.ಗೆ 16 ರೂ. ನೀಡಲಾಗುತ್ತದೆ.

    ವಸತಿ:
    ಹೊಸದಾಗಿ ಆಯ್ಕೆಯಾಗಿರುವ ಸಂಸದ್ ಸದಸ್ಯರಿಗೆ ಆರಂಭದಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಆಯಾ ರಾಜ್ಯಗಳು ಹೋಟೆಲ್, ಗೆಸ್ಟ್ ಹೌಸ್‍ಗಳನ್ನು ನೀಡಬೇಕಾಗುತ್ತದೆ. ಶಾಶ್ವತವಾಗಿ ನೆಲೆ ಕಲ್ಪಿಸುವವರೆಗೂ ಅವರು ಈ ಜಾಗದಲ್ಲಿ ತಂಗಬಹುದು.

    ಅವಧಿ ಪೂರ್ಣ ಆಗುವವರೆಗೂ ಸಂಸತ್ ಸದಸ್ಯರಿಗೆ ಉಚಿತ ಮನೆಯನ್ನು ನೀಡಲಾಗುತ್ತದೆ. ಒಂದು ವೇಳೆ ರಾಜೀನಾಮೆ ನೀಡಿದರೆ ಅಥವಾ ಉಚ್ಚಾಟನೆ ಮಾಡಿದರೆ ಗರಿಷ್ಟ ಒಂದು ತಿಂಗಳವರೆಗೆ ಆ ಮನೆಯಲ್ಲಿ ಉಳಿದುಕೊಳ್ಳಬಹುದು. ಒಂದು ವೇಳೆ ಸಂಸತ್ ಸದಸ್ಯರು ಅಕಾಲಿಕವಾಗಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರು 6 ತಿಂಗಳ ಕಾಲ ಆ ಮನೆಯಲ್ಲಿ ಉಳಿದುಕೊಳ್ಳಬಹುದು.

    ಇತರೆ:ಸೋಫಾ ಕವರ್, ಕರ್ಟನ್ ಗಳನ್ನು ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಅದಕ್ಕೆ ತಗಲುವ ವೆಚ್ಚ, ವರ್ಷಕ್ಕೆ 60 ಸಾವಿರ ರೂ. ಮೌಲ್ಯದ ಪೀಠೋಪಕರಣ ಖರೀದಿ ಮಾಡಬಹುದು.

    ದೂರವಾಣಿ:
    ಮೂರು ದೂರವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಒಂದು ದೂರವಾಣಿ ಸಂಖ್ಯೆ ಸಂಸದರ ನಿವಾಸ ಅಥವಾ ದೆಹಲಿಯಲ್ಲಿರುವ ಕಚೇರಿಯಲ್ಲಿ ಇನ್‍ಸ್ಟಾಲ್ ಮಾಡಬೇಕು. ಎರಡನೇಯದು ತನ್ನ ಕ್ಷೇತ್ರ ಅಥವಾ ರಾಜ್ಯದಲ್ಲಿರುವ ನಿವಾಸದಲ್ಲಿ ಇರಬೇಕು, ಮೂರನೇ ಸಂಖ್ಯೆಯನ್ನು ಎಲ್ಲಿ ಹಾಕಬೇಕು ಎನ್ನುವುದನ್ನು ಸಂಸದರ ವಿವೇಚನೆಗೆ ಬಿಡಲಾಗಿದೆ.

    # 50 ಸಾವಿರ ಸ್ಥಳೀಯ ಕರೆಗಳು ವರ್ಷದಲ್ಲಿ ಉಚಿತವಾಗಿ ಸಿಗಲಿದೆ. ಮೂರು ದೂರವಾಣಿಗಳಿಂದ ವರ್ಷಕ್ಕೆ 1.50 ಲಕ್ಷ ಸ್ಥಳೀಯ ಕರೆಗಳು ಮಾಡಬಹುದಾಗಿದೆ.

    #ಪ್ರತಿಯೊಬ್ಬ ಸಂಸದನಿಗೆ ಎಂಟಿಎನ್‍ಎಲ್ ಮೊಬೈಲ್ ಸಂಪರ್ಕ ನೀಡಲಾಗುತ್ತದೆ. ಇದರ ಜೊತೆ ಬಿಎಸ್‍ಎನ್‍ಎಲ್ ಅಥವಾ ಖಾಸಗಿ ಟೆಲಿಕಾಂ ಕಂಪೆನಿಗಳ ಮೊಬೈಲ್ ಸಂಪರ್ಕ ಸಿಗುತ್ತದೆ. ಈ ಮೊಬೈಲ್ ಮತ್ತು ಮೂರು ದೂರವಾಣಿಗಳ ಮೂಲಕ ವರ್ಷಕ್ಕೆ 1.50 ಲಕ್ಷ ಕರೆಗಳನ್ನು ಮಾಡಬಹುದು.

    ವಿದ್ಯುತ್: 50 ಸಾವಿರ ಯೂನಿಟ್ ವಿದ್ಯುತ್ ವಾರ್ಷಿಕವಾಗಿ ಬಳಸಬಹುದು.

    ವೈದ್ಯಕೀಯ: ಪ್ರಸ್ತುತ ನಾಗರಿಕ ಸೇವೆಯಲ್ಲಿರುವ ಕ್ಲಾಸ್ -1 ಅಧಿಕಾರಿಗಳಿಗೆ ಸಿಗುವ ಎಲ್ಲ ವೈದ್ಯಕೀಯ ಭತ್ಯೆಗಳು ಸಂಸದರಿಗೆ ಸಿಗುತ್ತದೆ.

    ಆದಾಯ ತೆರಿಗೆ: ಪ್ರಸ್ತುತ ಸರ್ಕಾರ ನೀಡುವ ಸಂಬಳ, ದಿನ ಭತ್ಯೆ, ಕ್ಷೇತ್ರ ಭತ್ಯೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

    ಇತರೆ ಲಾಭ: ಸಂಬಳ ಮತ್ತು ಭತ್ಯೆ ಹೊರತು ಪಡಿಸಿ ಸದಸ್ಯನಿಗೆ ಕಂಪ್ಯೂರ್ ಖರೀದಿಗೆ ಹಣ ಸಿಗುತ್ತದೆ. ಗರಿಷ್ಟ 1.50 ಲಕ್ಷ ರೂ. ಒಳಗಿನ ಡೆಸ್ಕ್ ಟಾಪ್, ಲ್ಯಾಪ್‍ಟಾಪ್, ಪ್ರಿಂಟರ್, ಸ್ಕ್ಯಾನರ್ ಖರೀದಿ ಮಾಡಬಹುದು.

    ಯೋಗಿ ಶಿಫಾರಸ್ಸಿನಲ್ಲಿ ಏನಿತ್ತು?
    ಪ್ರಸ್ತುತ ಉತ್ತರಪ್ರದೇಶದ ಸಿಎಂ ಆಗಿರುವ, ಬಿಜೆಪಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ ನೇತೃತ್ವದ ಸಂಸದರ ವೇತನ ಮತ್ತು ಭತ್ಯೆಗಳ ಜಂಟಿ ಸಮಿತಿ ಈಗ ತಿಂಗಳಿಗೆ 50 ಸಾವಿರ ರೂ. ಇರುವ ಮೂಲ ವೇತನವನ್ನು 1 ಲಕ್ಷಕ್ಕೆ ರೂ.ಗಳಿಗೆ ಏರಿಸಬೇಕೆಂದು 2016ರಲ್ಲಿ ಶಿಫಾರಸು ಮಾಡಿತ್ತು.

    ಸಂಸದರ ಕ್ಷೇತ್ರ ಭತ್ಯೆಯು 45 ಸಾವಿರ ರೂ.ನಿಂದ 90 ಸಾವಿರ ರೂ.ಗೆ. ಸಹಾಯಕರು ಮತ್ತು ಕಚೇರಿ ಭತ್ಯೆಯು 45 ಸಾವಿರ ರೂ.ನಿಂದ 90 ಸಾವಿರ ರೂ.ಗಳಿಗೆ ಹೆಚ್ಚಳ ಮಾಡುಬೇಕು. ಮಾಜಿ ಸಂಸದರ ಮಾಸಿಕ ಪಿಂಚಣಿ 20 ಸಾವಿರ ರೂ. ನಿಂದ 35 ಸಾವಿರ ರೂ.ಗಳಿಗೆ ಏರಿಸುವಂತೆ ಸಮಿತಿ ಶಿಫಾರಸು ಮಾಡಿತ್ತು.