Tag: ಭಕ್ತಾದಿಗಳು

  • ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ವಿಳಂಬ- ಭಕ್ತಾದಿಗಳಿಂದ ಆಕ್ರೋಶ

    ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ವಿಳಂಬ- ಭಕ್ತಾದಿಗಳಿಂದ ಆಕ್ರೋಶ

    ತುಮಕೂರು: ಕಳೆದ ಎರಡು ವರ್ಷಗಳಿಂದ ಸಿದ್ದಗಂಗಾ ಮಠಕ್ಕೆ ಆಗಮಿಸುವ ಭಕ್ತಾದಿಗಳು ನಿತ್ಯಕಿರಿಕಿರಿ ಅನುಭವಿಸುತ್ತಿದ್ದಾರೆ. ಕ್ಯಾತಸಂದ್ರ ಸರ್ಕಲ್ ನಿಂದ ಮಠ ಕೇವಲ 200 ಮೀಟರ್ ದೂರದಲ್ಲಿದ್ದರೂ ಸುಮಾರು 2 ಕಿಮಿ ದೂರ ಸುತ್ತಿಬಳಸಿ ಬರುವ ಅನಿವಾರ್ಯತೆ ಇದೆ. ಇಷ್ಟೆಲ್ಲಾ ಸಮಸ್ಯೆಗೆ ಮೂಲ ಕಾರಣ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಅರ್ಧಕ್ಕೆ ನಿಂತಿರೋದು.

    ಕ್ಯಾತಸಂದ್ರ ಸರ್ಕಲ್ ನಿಂದ ಸಿದ್ದಗಂಗಾ ಮಠಕ್ಕೆ ಕೇವಲ 200 ಮೀಟರ್ ದೂರ ಅಷ್ಟೇ. ರೈಲ್ವೆಗೇಟ್ ಮೂಲಕ ಇಷ್ಟು ದಿನ ಭಕ್ತಾದಿಗಳು ಶ್ರೀಮಠಕ್ಕೆ ಹೋಗುತ್ತಿದ್ದರು. ಆಗಾಗ ರೈಲ್ವೆಗೇಟ್ ಹಾಕೊದ್ರಿಂದ ಸಂಚಾರಕ್ಕೆ ಅಡ್ಡಿಯಾಗುತಿತ್ತು. ಮಠದ ಭಕ್ತಾದಿಗಳಿಗೆ ಈ ಕಿರಿಕಿರಿ ತಪ್ಪಿಸಲು ರೈಲ್ವೆ ಅಂಡರ್ ಪಾಸ್ ನಿರ್ಮಿಸಿ ಕೊಡಲು ರೇಲ್ವೆ ಇಲಾಖೆ ಒಪ್ಪಿಕೊಂಡಿತ್ತು.

    2019 ನವೆಂಬರ್ ತಿಂಗಳಿಂದ ಕಾಮಗಾರಿಯನ್ನೂ ಆರಂಭಿಸಿತ್ತು. ರೈಲ್ವೆ ಇಲಾಖೆ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸಿದರೂ ಅಂಡರ್ ಪಾಸ್ ನಂತರದ ರಸ್ತೆ ನಿರ್ಮಾಣ ಕೆಲಸ ನೆನೆಗುದಿಗೆ ಬಿದ್ದಿದೆ. ಈ ರಸ್ತೆ ನಿರ್ಮಾಣ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದು. ರಸ್ತೆ ನಿರ್ಮಾಣಕ್ಕೆ ಬೇಕಾದ ಭೂಮಿ ಸ್ವಾಧೀನಪಡಿಸಿಕೊಂಡು ಬೇಗ ಕಾಮಗಾರಿ ಆರಂಭ ಮಾಡಬೇಕಿದ್ದ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಮೌನವಹಿಸಿದ್ದಾರೆ. ಪರಿಣಾಮ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ.  ಇದನ್ನೂ ಓದಿ: ಸರ್ಕಾರದಿಂದ್ಲೇ ಹುಚ್ಚಗಣಿ ದೇವಸ್ಥಾನ ಪುನರ್ ನಿರ್ಮಾಣ- ಸಂಪುಟ ಸಭೆಯಲ್ಲಿ ತೀರ್ಮಾನ ನಿರೀಕ್ಷೆ

    ರಸ್ತೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾಗುವ ಭೂಮಿಗೆ ನೀಡುವ ಪರಿಹಾರದಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಮೂರ್ನಾಲ್ಕು ಜನರು ಜಾಗ ನೀಡಲು ಒಪ್ಪುತ್ತಿಲ್ಲ. ವಾಣಿಜ್ಯ ಉದ್ದೇಶದಿಂದ ಪರಿವರ್ತನೆಯಾದ ಒಂದು ಅಡಿ ಜಾಗಕ್ಕೆ 3700 ರೂ ಪರಿಹಾರ ನಿಗದಿ ಮಾಡಿದರೆ, ಕಂದಾಯ ಭೂಮಿಗೆ ಅಡಿಯೊಂದಕ್ಕೆ 700 ರೂ. ಪರಿಹಾರ ನಿಗದಿ ಮಾಡಿದ್ದಾರೆ. ಇದರಿಂದ ಕಂದಾಯ ಭೂಮಿ ಹೊಂದಿರುವ ನಾಲ್ಕು ಜನರು ರಸ್ತೆಗೆ ಜಾಗಬಿಟ್ಟುಕೊಡಲು ಒಪ್ಪುತಿಲ್ಲ. ತಮಗೂ ವಾಣಿಜ್ಯ ಭೂಮಿಗೆ ಕೊಟ್ಟ ದರವೇ ನಿಗದಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಕಾರಣದಿಂದಾಗಿ ರಸ್ತೆ ಕಾಮಗಾರಿ ಆರಂಭವಾಗಿಲ್ಲ.

    ಇನ್ನು ಅಂಡರ್ ಪಾಸ್ ಕಾಮಗಾರಿ ಆರಂಭವಾದ ದಿನದಿಂದ ರೈಲ್ವೆಗೇಟ್ ಮುಚ್ಚಲಾಗಿದೆ. ಪರಿಣಾಮ ಭಕ್ತಾದಿಗಳು ಬಟವಾಡಿ ಮೂಲಕ ಹಾದು ಎಚ್ ಎಮ್ ಟಿ ಮೂಲಕ ಮಠಕ್ಕೆ ಸುತ್ತಿಬಳಸಿ ಬರಬೇಕು. ಅತ್ತ ಸ್ವಾಮಿಜಿಗಳು, ಮಠದ ವಿದ್ಯಾರ್ಥಿಗಳೂ 2-3 ಕಿಮಿ ದೂರ ಸುತ್ತಿಬಳಸಿ ಓಡಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಭೂಮಿ ಮಾಲೀಕರು- ಲೊಕೋಪಯೋಗಿ ಇಲಾಖೆ ನಡುವಿನ ನಾ…ಕೊಡೆ, ನೀ..ಬಿಡೆ ಧೋರಣೆಯಿಂದಾಗಿ ಭಕ್ತಾಧಿಗಳು, ಮಠದ ವಿದ್ಯಾರ್ಥಿಗಳು ನಿತ್ಯಕಿರಿಕಿರಿ ಅನುಭವಿಸುವಂತಾಗಿದೆ.

  • ಘಾಟಿ ದೇವಾಲಯ ಓಪನ್ – ಸುಬ್ರಹ್ಮಣ್ಯೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ದಂಡು

    ಘಾಟಿ ದೇವಾಲಯ ಓಪನ್ – ಸುಬ್ರಹ್ಮಣ್ಯೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ದಂಡು

    ಚಿಕ್ಕಬಳ್ಳಾಪುರ: ಕೊರೊನಾ ಲಾಕ್ ಡೌನ್‍ನಿಂದಾಗಿ ದೇವಾಲಯಗಳಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದ ಸರ್ಕಾರ ಇದೀಗ ಅನ್‍ಲಾಕ್ ಗೊಳಿಸಿ ಸೋಮವಾರದಿಂದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪುರಾತನಾ ನಾಗಾರಾಧನಾ ಕ್ಷೇತ್ರವಾದ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯದ ಬಾಗಿಲು ತೆರೆಯಲಾಗಿದೆ.

    ಬೆಳ್ಳಂಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯ ಜರುಗಿಸಿ ಅರ್ಚಕರು ಪುರೋಹಿತರು ದೇವಾಲಯದ ಬಾಗಿಲು ತೆರೆಯಲಾಗಿದ್ದು, ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ದೇವಾಯಯಕ್ಕೆ ಬರುವ ಭಕ್ತರಿಗೆ ಪ್ರಮುಖ ದ್ವಾರದ ಆರಂಭದಲ್ಲೇ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಸ್ಯಾನಿಟೈಸರ್ ಹಾಗೂ ಥರ್ಮಲ್ ಚೆಕ್ ಆಪ್ ಮಾಡಲಾಗುತ್ತಿದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬಹುದಾಗಿದೆ.

    ದೇವಾಲಯದಲ್ಲಿ ಯಾವುದೇ ರೀತಿ ತೀರ್ಥ ಪ್ರಸಾದ ವಿತರಣೆ ಇಲ್ಲ. ಸೋಮವಾರವಾದ ಇಂದು ಭಕ್ತರ ಸಂಖ್ಯೆ ಕಡಿಮೆ ಇದೆ. ಸಹಜವಾಗಿ ಮಂಗಳವಾರ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸದ್ಯ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರ ಮನ ತಣಿಸುವಂತಿದೆ. ದೇವಾಲಯಕ್ಕೆ ಬಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

    ಇನ್ಮುಂದೆ ದೇವರ ದರ್ಶನ ಪಡೆಯಲಷ್ಟೇ ಭಕ್ತರಿಗೆ ಅವಕಾಶ ನೀಡಲಾಗಿದ್ದು, ನಾಗಾರಾಧನೆ ಪ್ರತಿಷ್ಠಾಪನೆ, ಅಭಿಷೇಕ, ಅರ್ಚನೆ ಸಹ ಮಾಡುವುದಿಲ್ಲ. ಭಕ್ತರು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ದೇವರ ದರ್ಶನ ಪಡೆಯಬೇಕು ಎಂದು ದೇವಾಲಯದ ಆಡಳಿತಾಧಿಕಾರಿ ಎನ್ ಕೃಷ್ಣಪ್ಪ ತಿಳಿಸಿದ್ದಾರೆ. ಇದನ್ನೂ ಓದಿ:ಅನಂತೇಶ್ವರ, ಕೊಲ್ಲೂರಿನಲ್ಲಿ ಭಕ್ತರ ದಂಡು – ಕಠಿಣ ನಿಯಮ ಜಾರಿಗೊಳಿಸಿರುವ ದೇವಸ್ಥಾನಗಳು

  • ಕೊರೊನಾ ಭೀತಿ – ಮಾದಪ್ಪನ ಯುಗಾದಿ ಜಾತ್ರೆ ಸಂಭ್ರಮ ಸರಳ

    ಕೊರೊನಾ ಭೀತಿ – ಮಾದಪ್ಪನ ಯುಗಾದಿ ಜಾತ್ರೆ ಸಂಭ್ರಮ ಸರಳ

    ಚಾಮರಾಜನಗರ: ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಗೂ ಅದರ ಬಿಸಿ ತಟ್ಟಿದೆ.

    ಕೊರೊನಾ ವೈರಸ್ ಭೀತಿಯಿಂದ ಮಾದಪ್ಪನ ಯುಗಾದಿ ಜಾತ್ರೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇದೇ ತಿಂಗಳ 21ರಿಂದ 25ರವರೆಗೆ ನಡೆಯುವ ಮಾದಪ್ಪನ ಯುಗಾದಿ ಜಾತ್ರೆಯು, ಈ ವರ್ಷ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಸರಳವಾಗಿ ಆಚರಿಸಲು ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ನಿಶ್ಚಯಿಸಿದೆ. ಈ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ಅವರು ತಿಳಿಸಿದ್ದಾರೆ.

    ಕೊಠಡಿಗಳು, ವಸತಿಗೃಹಗಳನ್ನು ಬರುವ ಭಕ್ತಾದಿಗಳಿಗೆ ಕೊಡದಿರಲು ಪ್ರಾಧಿಕಾರ ತೀರ್ಮಾನಿಸಿದ್ದು, ರಂಗಮಂದಿರ ಸಮೀಪ ಸಾವಿರಾರು ಮಂದಿ ಟೆಂಟ್ ಹಾಕುವುದಕ್ಕೂ ಬ್ರೇಕ್ ಹಾಕಲಾಗಿದೆ. ರಸ್ತೆಬದಿಯಲ್ಲಿ, ಮಾದಪ್ಪನ ಬೆಟ್ಟದ ಸಮೀಪದ ಸ್ಥಳಗಳಲ್ಲಿ ಸಹಸ್ರಾರು ಮಂದಿ ತಂಗಲು-ವಾಸ್ತವ್ಯ ಹೂಡಲು ಪ್ರಾಧಿಕಾರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಲಕ್ಷಾಂತರ ಮಂದಿ ಸೇರುತ್ತಿದ್ದ ಯುಗಾದಿ ಜಾತ್ರೆಗೆ ಈ ಬಾರಿ ಕೊರೊನಾ ಕರಿಛಾಯೆ ಆವರಿಸಿದ್ದು, ಪ್ರಾಧಿಕಾರದ ಆದಾಯಕ್ಕೂ ಕತ್ತರಿ ಬೀಳಲಿದೆ.

  • 1 ಲಕ್ಷ 96 ಸಾವಿರ ಜನ ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗಿ- ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    1 ಲಕ್ಷ 96 ಸಾವಿರ ಜನ ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗಿ- ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    ರಾಯಚೂರು: ದೇವದುರ್ಗ ತಾಲೂಕಿನ ವೀರಗೋಟದ ಆದಿ ಮೌನಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದ್ದಾರೆ.

    ಆದಿ ಮೌನಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 1 ಲಕ್ಷ 96 ಸಾವಿರ ಜನ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. 12ನೇ ಶತಮಾನದಲ್ಲಿ ನಡೆದಿದ್ದ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಈಗ ಪುನಃ ನಡೆಯುತ್ತಿದೆ. 1969ರಲ್ಲಿ ವಿಜಯಪುರ ಜಿಲ್ಲೆಯ ಲಚ್ಯಾಣದಲ್ಲಿ ಎರಡನೇ ಬಾರಿ ನಡೆದಿತ್ತು. ಈಗ 50 ವರ್ಷ ನಂತರ ವೀರಗೋಟದಲ್ಲಿ ಬೃಹತ್ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಯುತ್ತಿದೆ.

    ವೀರಗೋಟದ ಅಡವಿಲಿಂಗ ಮಹಾರಾಜರು ಲೋಕ ಕಲ್ಯಾಣಾರ್ಥವಾಗಿ ಈ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ನೂರಾರು ಜನ ಯತಿವಟುಗಳು, ವಿವಿಧ ಮಠಗಳ ಸುಮಾರು 800 ಸ್ವಾಮಿಜಿಗಳು ಪಾಲ್ಗೊಂಡಿದ್ದಾರೆ. ಇಂದು ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಮಹಾಪೂಜೆಯಲ್ಲಿ ಪಾಲ್ಗೊಂಡು ಲಿಂಗಪೂಜೆ ನೆರವೇರಿಸಿದರು.

    ಈ ಇಷ್ಟಲಿಂಗ ಮಹಾಪೂಜೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದು, ಈ ಅದ್ಭುತ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv