Tag: ಬ್ಲೂವೇಲ್ ಚಾಲೆಂಜ್

  • ಬ್ಲೂವೇಲ್ ಚಾಲೆಂಜ್‍ನಿಂದ ರಕ್ಷಿಸಲ್ಪಟ್ಟಿದ್ದ 17ರ ಯುವತಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ಳು

    ಬ್ಲೂವೇಲ್ ಚಾಲೆಂಜ್‍ನಿಂದ ರಕ್ಷಿಸಲ್ಪಟ್ಟಿದ್ದ 17ರ ಯುವತಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ಳು

    ಜೋಧ್‍ಪುರ್: ಬ್ಲೂ ವೇಲ್ ಚಾಲೆಂಜ್‍ನ ಭಾಗವಾಗಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷದ ಯುವತಿಯನ್ನು ರಕ್ಷಣೆ ಮಾಡಲಾಗಿದ್ದು, ಆಕೆ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಯುವತಿ ತನ್ನ ಮನೆಯಲ್ಲಿದ್ದ ಕೆಲವು ಮಾತ್ರೆಗಳನ್ನ ನುಂಗಿ ಎರಡನೇ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ಕೂಡಲೇ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ಇದನ್ನೂ ಓದಿ:   ಕರಾವಳಿಗೂ ಕಾಲಿಟ್ಟ ಬ್ಲೂವೇಲ್ – ತಿಮಿಂಗಿಲ ಆಕಾರದಲ್ಲಿ ಕೈ ಕುಯ್ದುಕೊಂಡ ವಿದ್ಯಾರ್ಥಿ

    ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಮಾಲೀಕ ಡಾ. ಕೆಆರ್ ದೌಕಿಯಾ ಹೇಳಿದ್ದಾರೆ. ವೈದ್ಯರ ಪ್ರಕಾರ ಯುವತಿ ಖಿನ್ನತೆಗೊಳಗಾಗಿದ್ದು, ಶೀಘ್ರವೇ ಕೌನ್ಸೆಲಿಂಗ್ ಆರಂಭಿಸುವುದಾಗಿ ಹೇಳಿದ್ದಾರೆ.

    ಯುವತಿಯನ್ನ ಇಲ್ಲಿಗೆ ಕರೆತಂದಾಗ ಖಿನ್ನತೆಯಲ್ಲಿದ್ದಳು. ಆದ್ರೆ ಚಿಕಿತ್ಸೆಯ ನಂತರ ಮಾತಾಡಿದ್ದು, ಹೇಗೆ ಬ್ಲೂವೇಲ್ ಚಾಲೆಂಜ್‍ನಲ್ಲಿ ಸಿಲುಕಿಕೊಂಡೆ ಎಂಬುದನ್ನ ಹೇಳಿಕೊಂಡಿದ್ದಾಳೆಂದು ವೈದ್ಯರು ಹೇಳಿದ್ದಾರೆ.

    ಸೋಮವಾರದಂದು ಮಧ್ಯರಾತ್ರಿ ವೇಳೆ ಜೋಧ್‍ಪುರ್‍ನಲ್ಲಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಯುವತಿಯನ್ನ ರಕ್ಷಣೆ ಮಾಡಲಾಗಿತ್ತು. ನಾನು ನನ್ನ ಟಾಸ್ಕ್ ಮುಗಿಸದಿದ್ದರೆ ನನ್ನ ತಾಯಿ ಸಾಯುತ್ತಾರೆ ಎಂದು ಯುವತಿ ರಕ್ಷಣೆ ಮಾಡಿದ ಪೊಲೀಸರಿಗೆ ಹೇಳಿದ್ದಳು. ಇಲ್ಲಿನ ಕೈಲಾನಾ ನದಿಗೆ ಹಾರುವ ಮುನ್ನ ಯುವತಿ ತನ್ನ ಮೊಬೈಲ್ ಫೋನ್ ಎಸೆದಿದ್ದಳು. ತನ್ನ ಸ್ಕೂಟರ್ ಮೇಲೆಯೇ ನದಿಯಲ್ಲಿ ಒದ್ದಾಡುತ್ತಿದ್ದ ಯುವತಿಯನ್ನ ಪೊಲೀಸರು ಹಾಗೂ ಈಜುತಜ್ಞರು ಕಾಪಾಡಿ ಪೋಷಕರಿಗೆ ಒಪ್ಪಿಸಿದ್ದರು.

    ರಷ್ಯಾ ಮೂಲದ ಈ ಮಾರಣಾಂತಿಕ ಬ್ಲೂವೇಲ್ ಚಾಲೆಂಜ್‍ನಿಂದ ಈವರೆಗೆ ಸಾಕಷ್ಟು ಮಕ್ಕಳು ಹಾಗೂ ಯುವಕ ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ.