Tag: ಬ್ಲೂವೇಲ್ ಗೇಮ್

  • ಬ್ಲೂವೇಲ್ ಗೇಮ್‍ಗಾಗಿ ಹುಡುಕಾಟ -ಇಡೀ ರಾಜ್ಯದಲ್ಲಿ ಮೈಸೂರು 1ನೇ ಸ್ಥಾನ

    ಬ್ಲೂವೇಲ್ ಗೇಮ್‍ಗಾಗಿ ಹುಡುಕಾಟ -ಇಡೀ ರಾಜ್ಯದಲ್ಲಿ ಮೈಸೂರು 1ನೇ ಸ್ಥಾನ

    ಮೈಸೂರು: ಡೆಡ್ಲಿ ಗೇಮ್ ಬ್ಲೂವೇಲ್ ಗೆ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

    ಈ ಆತಂಕಕಾರಿ ಮಾಹಿತಿ ಹೊರಬೀಳುತ್ತಿದ್ದಂತೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಇರುವ ಒಟ್ಟು 3,387 ಶಾಲೆಗಳಲ್ಲಿ ಅಪಾಯಕಾರಿ ಬ್ಲೂವೇಲ್ ಗೇಮ್ ಬಗ್ಗೆ ಜಾಗೃತಿ ಮೂಡಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಕುರಿತು ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಿ.ಕೆ.ಎಸ್ ವರ್ಧನ್ ರಿಂದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸುತ್ತೋಲೆ ರವಾನೆಯಾಗಿದೆ.

    ಇದನ್ನೂ ಓದಿ:  ಕರಾವಳಿಗೂ ಕಾಲಿಟ್ಟ ಬ್ಲೂವೇಲ್ – ತಿಮಿಂಗಿಲ ಆಕಾರದಲ್ಲಿ ಕೈ ಕುಯ್ದುಕೊಂಡ ವಿದ್ಯಾರ್ಥಿ

    ಶಾಲೆಯ ಮುಖ್ಯಸ್ಥರು ಅಪಾಯಕಾರಿ ಬ್ಲೂವೇಲ್ ಗೇಮ್ ಬಗ್ಗೆ ಮಕ್ಕಳು ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಅರಿವು ಮೂಡಿಸುವಂತೆ ಡಿ.ಡಿ.ಪಿ.ಐ ವರ್ಧನ್ ಸೂಚಿಸಿದ್ದಾರೆ. ಬ್ಲೂವೇಲ್ ಗೇಮ್ ಗಾಗಿ ಹುಡುಕಾಟ ನಡೆಸಿರುವ ದೇಶದ ಪ್ರಮುಖ ನಗರಗಳ ಪೈಕಿ ಇಡೀ ದೇಶದಲೇ 9 ನೇ ಸ್ಥಾನದಲ್ಲಿರುವ ಮೈಸೂರು, ಇಡೀ ರಾಜ್ಯದಲ್ಲಿ 1 ನೇ ಸ್ಥಾನದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ.

    ಇದನ್ನೂ ಓದಿ: ರಾಜ್ಯಕ್ಕೂ ಕಾಲಿಡ್ತು ಡೆಡ್ಲಿ ಬ್ಲೂವೇಲ್ ಗೇಮ್- ಗೇಮ್‍ಗಾಗಿ ಕೈ ಕುಯ್ದುಕೊಂಡ 11 ರ ಪೋರಿ

    ಮೈಸೂರಿನ ನಂತರ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಇಡೀ ದೇಶದಲ್ಲೇ ಬ್ಲೂವೇಲ್ ಗೇಮ್ ಹುಡುಕಾಟದಲ್ಲಿ 23ನೇ ಸ್ಥಾನದಲ್ಲಿದೆ. ಬ್ಲೂವೇಲ್ ಗೇಮ್ ಹುಡುಕಾಟದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರನ್ನೇ ಮೈಸೂರು ಹಿಂದಿಕ್ಕಿದೆ. ಇದರಿಂದ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಶಾಲಾ ಹಂತದಲ್ಲೇ ಬ್ಲೂವೇಲ್ ಗೇಮ್ ನ ಅಪಾಯದ ಬಗ್ಗೆ, ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಮುಂದಾಗಿದೆ. ಅಗತ್ಯವಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಅದರ ನೆರವು ಪಡೆಯುವಂತೆಯೂ ಸೂಚಿಸಲಾಗಿದೆ.

    ಇದನ್ನೂ ಓದಿ: ಪ್ರಾಣ ಕಂಟಕ ಬ್ಲೂವೇಲ್ ಗೇಮ್‍ನ ಎಲ್ಲಾ ಲಿಂಕ್ ತೆಗೆಯಲು ಕೇಂದ್ರ ಸೂಚನೆ

  • ರಾಜ್ಯಕ್ಕೂ ಕಾಲಿಡ್ತು ಡೆಡ್ಲಿ ಬ್ಲೂವೇಲ್ ಗೇಮ್- ಗೇಮ್‍ಗಾಗಿ ಕೈ ಕುಯ್ದುಕೊಂಡ 11 ರ ಪೋರಿ

    ರಾಜ್ಯಕ್ಕೂ ಕಾಲಿಡ್ತು ಡೆಡ್ಲಿ ಬ್ಲೂವೇಲ್ ಗೇಮ್- ಗೇಮ್‍ಗಾಗಿ ಕೈ ಕುಯ್ದುಕೊಂಡ 11 ರ ಪೋರಿ

    ಹುಬ್ಬಳ್ಳಿ: ಪೋಷಕರೇ ನಿಮ್ಮ ಮಕ್ಕಳ ಕೈಗೆ ಮೊಬೈಲ್ ನೀಡೋ ಮುನ್ನ ಎಚ್ಚರ. ರಾಜ್ಯಕ್ಕೂ ಕಾಲಿಟ್ಟಿದೆ ವಿಶ್ವಾದ್ಯಂತ ಹಲವು ಜೀವಗಳನ್ನ ಬಲಿ ಪಡೆದ ಡೆಡ್ಲಿ ಬ್ಲೂವೇಲ್ ಗೇಮ್.

    ಹೌದು. ಬ್ಲೂವೇಲ್ ಗೇಮ್ ಆಡುತ್ತಾ 11 ವರ್ಷದ ಪೋರಿ ಬೆರಳು ಕುಯ್ದುಕೊಂಡ ಘಟನೆ ಹುಬ್ಬಳ್ಳಿಯ ರಾಜನಗರದಲ್ಲಿ ನಡೆದಿದೆ. ಮನೆಯಲ್ಲಿ ಬೆರಳು ಕುಯ್ದುಕೊಂಡ ವಿದ್ಯಾರ್ಥಿನಿ ಹಾಗೆಯೇ ಶಾಲೆಗೆ ಬಂದಿದ್ದಾಳೆ. ಇದನ್ನು ಗಮನಿಸಿದ ವಿದ್ಯಾರ್ಥಿನಿಯ ಗೆಳೆಯರು ಶಾಲಾ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಆ ವಿದ್ಯಾರ್ಥಿನಿಯನ್ನು ಕರೆಸಿ ಕೌನ್ಸಿಲಿಂಗ್ ನಡೆಸಿದಾಗ, ತಾನು ಮನೆಯಲ್ಲಿ ಬ್ಲೂವೇಲ್ ಗೇಮ್ ಆಡುತ್ತಾ ಬೆರಳು ಕುಯ್ದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

    ಈ ಬಗ್ಗೆ ಹೆಚ್ಚು ಮಾತನಾಡದೇ ಆ ಬಾಲಕಿಯನ್ನು ಶಿಕ್ಷಕರು ಕಳಿಸಿಕೊಟ್ಟಿದ್ರು. ಬಳಿಕ ಪೋಷಕರನ್ನು ಕರೆಸಿ ಬ್ಲೂವೇಲ್ ಗೇಮ್ ಅವಾಂತರಗಳ ಬಗ್ಗೆ ಮಾಹಿತಿ ನೀಡಿದ ಶಿಕ್ಷಕರು, ಆ ಡೆಡ್ಲಿ ಗೇಮ್ ಆನ್ ಇನ್‍ಸ್ಟಾಲ್ ಮಾಡಿಸಿದ್ರು. ಗಣೇಶನ ಹಬ್ಬ ಮುಗಿದ ನಂತರ ಪೋಷಕರ ಸಭೆ ಕರೆಯಲು ನಿರ್ಧರಿಸಿರುವ ಶಾಲೆಯ ಪ್ರಾಂಸುಪಾಲರು, ಬ್ಲೂವೇಲ್ ಗೇಮ್ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಿದ್ದಾರೆ.

    ಏನಿದು ಬ್ಲೂವೇಲ್ ಗೇಮ್?: ರಷ್ಯಾ ಮೂಲದ ಈ ಡೆಡ್ಲಿ ಗೇಮ್ ಇತ್ತೀಚಿಗಷ್ಟೇ ದೇಶದಲ್ಲಿ ಸದ್ದು ಮಾಡ್ತಿದೆ. ಮುಂಬೈ, ಕೊಲ್ಕತ್ತಾ ಸೇರಿದಂತೆ ಹಲವೆಡೆ ಮಕ್ಕಳನ್ನ ಬಲಿ ಪಡೆದಿದೆ. ಬ್ಲೂವೇಲ್ ಆಟದಲ್ಲಿ ಆಟಗಾರನಿಗೆ ಪ್ರತಿದಿನ ಒಂದೊಂದು ಟಾಸ್ಕ್ ಗಳನ್ನು ನೀಡಲಾಗುತ್ತದೆ. ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಆತ ಅದರ ಚಿತ್ರಗಳನ್ನು ಅಪ್ಲೋಡ್ ಮಾಡಬೇಕು. 50ನೇ ದಿನ ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಇದರಿಂದ ಪ್ರಚೋದಿತರಾಗಿ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

  • ಪ್ರಾಣ ಕಂಟಕ ಬ್ಲೂವೇಲ್ ಗೇಮ್‍ನ ಎಲ್ಲಾ ಲಿಂಕ್ ತೆಗೆಯಲು ಕೇಂದ್ರ ಸೂಚನೆ

    ಪ್ರಾಣ ಕಂಟಕ ಬ್ಲೂವೇಲ್ ಗೇಮ್‍ನ ಎಲ್ಲಾ ಲಿಂಕ್ ತೆಗೆಯಲು ಕೇಂದ್ರ ಸೂಚನೆ

    ನವದೆಹಲಿ: ಮಕ್ಕಳ ಆತ್ಮಹತ್ಯೆಗೆ ಪ್ರೇರಣೆ ನೀಡುವ `ಸಾವಿನ ಗೇಮ್’ ಎಂದೇ ಕುಖ್ಯಾತಿ ಹೊಂದಿರುವ ಬ್ಲೂವೇಲ್ ಚಾಲೆಂಜ್ ಆಟದ ಎಲ್ಲಾ ಲಿಂಕ್‍ಗಳನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರ ಸಮಾಜಿಕ ಜಾಲತಾಣ ಹಾಗೂ ಸಂಪರ್ಕ ತಾಣಗಳಿಗೆ ಸೂಚನೆ ನೀಡಿದೆ.

    ಮಕ್ಕಳು ಅಂತರ್ಜಾಲದಲ್ಲಿ ಬ್ಲೂವೇಲ್ ಗೇಮ್ ಆಡುವ ಮೂಲಕ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದಿವೆ. ಹೀಗಾಗಿ ಕೂಡಲೇ ಅದರ ಲಿಂಕ್‍ಗಳನ್ನು ತೆಗೆದು ಹಾಕಬೇಕೆಂದು ಗೂಗಲ್, ಫೇಸ್‍ಬುಕ್, ವಾಟ್ಸಾಪ್, ಇನ್‍ಸ್ಟಾಗ್ರಾಂ, ಮೈಕ್ರೋಸಾಫ್ಟ್ ಮತ್ತು ಯಾಹೂ ಸಂಸ್ಥೆಗಳಿಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಆದೇಶಿಸಿದೆ.

    ಏನಿದು ಬ್ಲೂವೇಲ್ ಗೇಮ್?: ಬ್ಲೂವೇಲ್ ಆಟದಲ್ಲಿ ಆಟಗಾರನಿಗೆ ಪ್ರತಿದಿನ ಒಂದೊಂದು ಟಾಸ್ಕ್‍ಗಳನ್ನು ನೀಡಲಾಗುತ್ತದೆ. ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಆತ ಅದರ ಚಿತ್ರಗಳನ್ನು ಅಪ್ಲೋಡ್ ಮಾಡಬೇಕು. 50ನೇ ದಿನ ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಇದರಿಂದ ಪ್ರಚೋದಿತರಾಗಿ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

    ಬ್ಲೂ ವೇಲ್ ಗೇಮ್  ಹೆಸರಲ್ಲಿ ಅಥವಾ ಬೇರೆ ಹೆಸರಲ್ಲಿ ಅದೇ ರೀತಿಯಾಗಿರುವ ಗೇಮ್‍ಗಳ ಲಿಂಕ್‍ಗಳನ್ನು ತೆಗೆದುಹಾಕಲು ಸರ್ಕಾರ ಸೂಚನೆ ನೀಡಿದೆ.

    ಇದನ್ನೂ ಓದಿ: ಬ್ಲೂ ವೇಲ್‍ಗಾಗಿ ಭಾರತದಲ್ಲಿ ಮೊದಲ ಬಲಿ- ಬಾಲಕ ಪೋಸ್ಟ್ ಮಾಡಿದ ಕೊನೆಯ ಫೋಟೋ ಇದು

    ಈ ರೀತಿಯ ಗೇಮ್‍ಗಳು ಇಂಟರ್ನೆಟ್‍ನಲ್ಲಿ ಇರುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿದೆ. ಈ ಗೇಮ್‍ನ ಅಡ್ಮಿನ್ ಮಕ್ಕಳನ್ನ ಗೇಮ್ ಆಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದಿಸುತ್ತಾರೆ. ಇದರಿಂದ ಮಕ್ಕಳು ಅತ್ಯಂತ ಅಪಾಯಕಾರಿ ಘಟ್ಟವನ್ನ ತಲುಪಿ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.

    ಈ ಮಾರಣಾಂತಿಕ ಗೇಮ್‍ನ ಎಲ್ಲಾ ಲಿಂಕ್‍ಗಳನ್ನ ತೆಗೆಯಬೇಕು ಹಾಗೂ ಈ ಗೇಮ್‍ನ ಪ್ರತಿಪಾದಕರ ಬಗ್ಗೆ ಕಾನೂನು ಜಾರಿ ಸಂಸ್ಥೆಗಳಿಗೆ ತಿಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.