Tag: ಬ್ಲಾಗ್

  • ಮೊದಲ ಬಾರಿ ‘ದಾಡಿಲಿ ಡಾಲಿ’ ನೋಡಿದ ಕಥೆ ಬಿಚ್ಚಿಟ್ಟ ಹರಿಪ್ರಿಯಾ

    ಮೊದಲ ಬಾರಿ ‘ದಾಡಿಲಿ ಡಾಲಿ’ ನೋಡಿದ ಕಥೆ ಬಿಚ್ಚಿಟ್ಟ ಹರಿಪ್ರಿಯಾ

    ಬೆಂಗಳೂರು: ನಟಿ ಹರಿಪ್ರಿಯಾ ಅವರು ಮೊದಲ ಬಾರಿಗೇ ನಟ ಡಾಲಿ ಧನಂಜಯ್ ಅವರನ್ನು ಭೇಟಿಯಾದ ನೆನಪನ್ನು ತಮ್ಮ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ.

    ಹರಿಪ್ರಿಯಾ ಲಾಕ್‍ಡೌನ್ ನಡುವೆ ಮನೆಯಲ್ಲೇ ಕುಳಿತು ‘ಬೇಬ್‍ನೋಸ್’ ಎಂಬ ಬ್ಲಾಗ್ ಅನ್ನು ಬರೆಯುತ್ತಿದ್ದಾರೆ. ಇಲ್ಲಿ ಸಿನಿಮಾ ರಂಗದ ನಟ-ನಟಿಯರ ಬಗ್ಗೆ ಅವರನ್ನು ಭೇಟಿ ಮಾಡಿದ ಪ್ರಸಂಗ ಮತ್ತು ಅನುಭವಗಳನ್ನು ಬರೆಯುತ್ತಿರುತ್ತಾರೆ. ಅಂತಯೇ ಇಂದು ಡಾಲಿ ಧನಂಜಯ್ ಅವರನ್ನು ಮೊದಲ ಬಾರಿ ಭೇಟಿ ಮಾಡಿದ ಪ್ರಸಂಗದ ಬಗ್ಗೆ ಬರೆದುಕೊಂಡಿದ್ದಾರೆ.

    ತುಂಬಾ ದಿನ ಆದಮೇಲೆ ನನ್ನ ಹಳೇ ಹಾರ್ಡ್ ಡಿಸ್ಕ್ ನಲ್ಲಿ ಬ್ಲಾಗ್‍ಗಾಗಿ ಫೋಟೋಗಳು ಹುಡುಕುತ್ತಿದ್ದೆ. ಅದರಲ್ಲಿ ಫ್ರೆಂಡ್ಸ್, ಫ್ಯಾಮಿಲಿ, ಪೆಟ್ಸ್, ಟ್ರಾವೆಲ್ ಅಂತೆಲ್ಲ ಪೋಲ್ಡರ್ಸ್ ಮಾಡಿದ್ದಿನಿ. ಫ್ರೆಂಡ್ಸ್ ಫೋಲ್ಡರ್ ನೋಡುವಾಗ, ಎ ಆರ್.ರೆಹಮಾನ್ ಕನ್ಸರ್ಟ್‍ಗೆ ಹೋಗಿದ್ದ ಫೋಟೋಸ್ ಸಿಕ್ಕಿದವು. ನಮ್ ಬೆಂಗಳೂರು ಪ್ಯಾಲೇಸ್ ಗ್ರೌಂಡ್‍ನಲ್ಲಿ ನಡೆದಿತ್ತು. ನನ್ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಎಲ್ಲರೂ ಹೋಗಿದ್ದೆವು. ನನ್ ಫ್ರೆಂಡ್, ಅವರ ಫ್ರೆಂಡ್ ಜೊತೆ ಬಂದಿದ್ದರು ಎಂದು ಹರಿಪ್ರಿಯ ಬರೆದುಕೊಂಡಿದ್ದಾರೆ.

    ಯಾರ್ ಇದು ಇಷ್ಟೊಂದು ದಾಡಿ ಬಿಟ್ಟಿದ್ದಾರೆ ಎಂದುಕೊಂಡು ನಾನು ನನ್ನ ಫ್ರೆಂಡ್ ಅನ್ನು ಕೇಳಿದೆ, ಅವರು ಮೂವಿಗೋಸ್ಕರ ಬಿಟ್ಟಿದ್ದಾರೆ. ಇವರು ಥಿಯೇಟರಿಂದ ಸಿನಿಮಾಗೆ ಬಂದಿದಾರೆ. ಹಾಗೇ ತುಂಬಾ ಪ್ಯಾಷನೇಟ್ ಅಂತ ಗೊತ್ತಾಯಿತು. ಅವರು ಯಾರು ಅಂದರೆ ನಮ್ ಡಾಲಿ ಧನಂಜಯ್. ಯೆಸ್ ನಾನು ಫಸ್ಟ್ ಧನಂಜಯನ ಮೀಟ್ ಮಾಡಿದ್ದು ಅಲ್ಲೇ. ಕನ್ಸರ್ಟ್ ಅಲ್ವಾ. ಎಲ್ಲರೂ ಕೂಗ್ತಾ, ಹಾಡ್ತಾ ಇದ್ವಿ. ನಮ್ ಮಾತು ನಮಗೆ ಕೇಳಿಸುತ್ತಿರಲಿಲ್ಲ. ಸೋ ಅವತ್ತು ಮಾತಾಡಿದ್ದು ಅಷ್ಟೇ ಅನ್ಸುತ್ತೆ ಎಂದು ಹರಿಪ್ರಿಯ ತಿಳಿಸಿದ್ದಾರೆ.

    ಆಮೇಲೆ ಒಂದಿನ ಇಂಡಸ್ಟ್ರಿ ಇವೆಂಟ್‍ನಲ್ಲಿ ಸಿಕ್ಕಿದ್ದಾಗ ಗುರುತು ಹಿಡಿಯೋದು ಸ್ವಲ್ಪ ಕಷ್ಟ ಆಯ್ತು. ಯಾಕಂದ್ರೆ ಕ್ಲೀನ್ ಶೇವಲ್ಲಿದ್ದರು. ನಾವು ಯಾವುದೇ ಫುಲ್ ಸಿನಿಮಾದಲ್ಲಿ ಒಟ್ಟಿಗೆ ಆ್ಯಕ್ಟ್ ಮಾಡಿಲ್ಲ ಆದರೂ `ಲೈಫ್ ಜೊತೆ ಒಂದ್ ಸೆಲ್ಫಿ’ ಅನ್ನೋ ಸಿನಿಮಾದಲ್ಲಿ ಸ್ವಲ್ಪ ದಿನ ಒಟ್ಟಿಗೆ ಆ್ಯಕ್ಟ್ ಮಾಡಿದ್ದೇವು. ಶೂಟ್ ನಡುವೆ ಮುಂದಿನ ಸಿನಿಮಾಗಳ ಬಗ್ಗೆ, ಊರಿನ ಬಗ್ಗೆ ಮಾತಾಡುತ್ತಿದ್ದೆವು. ಮುಖ್ಯವಾಗಿ ಅವರ ಊರು ಹಾಸನದ ಅರಸೀಕೆರೆ ಅಂತ ಹೇಳಿದಾಗ ಖುಷಿ ಆಯ್ತು. ಯಾಕಂದರೆ ನಂಗೆ ಕಾಡು, ಹಳ್ಳಿ, ಪರಿಸರ ಎಲ್ಲಾ ತುಂಬಾ ಖುಷಿ ಕೊಡೋ ವಿಷಯಗಳು ಎಂದು ಡಾಲಿ ಊರಿನ ಬಗ್ಗೆ ಹರಿಪ್ರಿಯಾ ಮಾತನಾಡಿದ್ದಾರೆ.

    ಈ ಎರಡು ತಿಂಗಳು ನಾವೆಲ್ಲ ಇಲ್ಲೇ ಸಿಟಿಯಲ್ಲೇ ಕೂಡಾಕಿಕೊಂಡು ಇದ್ದೆವು. ಡಾಲಿ ಹಳ್ಳಿಗೇನಾದರೂ ಹೋಗಿದ್ದರಾ? ಅವರು ಈಗ ಆ್ಯಕ್ಟರ್, ಪ್ರೊಡ್ಯೂಸರ್ ಆ್ಯಂಡ್ ರೈಟರ್ ಎಲ್ಲ ನನ್ನ ಡಾಟರ್ ಆಫ್ ಪಾರ್ವತಮ್ಮ ಸಿನೆಮಾಗು ಸಾಂಗ್ ಲಿರಿಕ್ಸ್ ಬರೆದಿದ್ದರು. ಈ ಬಿಡುವಲ್ಲಿ ಬರೀತಿದ್ದರಾ? ಓದುತ್ತಿದ್ದರಾ? ಅಥವಾ ಏನೇನ್ ಮಾಡಿದ್ದರೂ ಎಂದು ತಿಳಿದುಕೊಳ್ಳಲು ಫೋನ್ ಮಾಡಿದ್ದೆ ಎಂದು ಬರೆದು ಫೋನ್ ಸಂಭಾಷಣೆಯನ್ನು ಬರೆದಿದ್ದಾರೆ.

    ಹೆಲೋ ಹೀರೋ.. ಹೇಗಿದೀರ ಏನ್ ಮಾಡುತ್ತಿದ್ದೀರಾ?
    ಹೆಲೋ ಹೀರೋಯಿನ್, ಚನ್ನಾಗಿದೀನಿ, ನೀವು ನಿಮ್ಮ ಬ್ಲಾಗ್ ಬರಿಯೋದರಲ್ಲಿ ಫುಲ್ ಬ್ಯುಸಿನಾ ಅಂತ ಅಂದರು
    ಹೌದು ಫುಲ್‍ಟೈಮ್ ಬರಿತಿದೀನಿ. ಬ್ಲಾಗ್‍ಗೆ ಫೋಟೋಸ್ ಹುಡುಕೋವಾಗಲೇ, ನಾವು ಹೋಗಿದ್ದ ರೆಹಮಾನ್ ಕನ್ಸರ್ಟ್ ಫೋಟೋಸ್ ಸಿಕ್ತು. ಹಾಗೆ ನೆನಪಾಗಿ ಮಾತಡೋಣ ಅಂತ ಕಾಲ್ ಮಾಡಿದೆ. ಎಲ್ಲಿದೀರಾ? ಊರಿಗೆ ಹೋಗಿದ್ರಾ? ಅಂದೆ.
    ಓಹ್ ಹೌದಾ ಫೋಟೋಸ್ ನಂಗೂ ಕಳುಹಿಸಿ. ಹು, ಪರ್ಮಿಷನ್ ಸಿಕ್ಕಿದ ಮೇಲೆ ಸ್ವಲ್ಪ ದಿನಕ್ಕೆ ಊರಿಗೆ ಹೋಗಿದ್ದೆ. ಆದರೆ ಯಾಕ್ ಸುಮ್ಮನೆ ಆರಾಮವಾಗಿ ಇರುವ ಹಳ್ಳಿಯವರಿಗೆ ತೊಂದರೆ ಕೊಡೋದು ಎಂದು ವಾಪಸ್ ಬಂದೆ ಅಂದರು.

    ಹಳ್ಳಿಯಲ್ಲಿ, ತೋಟದಲ್ಲಿ, ತಂಪಾದ ಗಾಳೀಲಿ ಸುತ್ತಾಡಿಕೊಂಡು, ಮಾವಿನ ಹಣ್ಣು, ಹಲಸಿನ ಹಣ್ಣು ಎಲ್ಲ ಚೆನ್ನಾಗಿ ತಿಂದರಂತೆ. ನಿಮಗ್ ಗೊತ್ತಾ? ಹಲಸು ಅಂದ್ರೆ ನಂಗೆ ಪ್ರಾಣ. ಹೇಳೋಕಾಗಲ್ಲ ಅಷ್ಟು ಇಷ್ಟ. ಮೊನ್ನೆ ನಮ್ಮ ಮನೇಲಿ ಕೂಡ ಅಣ್ಣ ಫುಲ್ ಹಣ್ಣು ತಂದು ಕಟ್ ಮಾಡ್ದ. ಜೇನುತುಪ್ಪ ಜೊತೆ ತಿನ್ನೋದೇ ಮಜಾ. ನಂಗೂ ಅಜ್ಜಿ, ತಾತಾ ಯಾರಾದರೂ ಹಳ್ಳಿಯಲ್ಲಿ ಇದ್ದಿದ್ದರೆ ರಜಾದಿನಗಳಲ್ಲಿ ಆದರೂ ಅಲ್ಲಿಗೆ ಹೋಗಿ ಪರಿಸರದ ಜೊತೆ ಇರಬಹುದಿತ್ತು ಅನ್ಸುತ್ತೆ. ನಮ್ ಡಾಲಿ ಥರ ಎಂದು ಹಳ್ಳಿ ಬಗ್ಗೆ ಹೇಳಿದ್ದಾರೆ.

    ಸಿಟಿಗೆ ವಾಪಸ್ ಬಂದ ಮೇಲೆ ಬರೀ ವರ್ಕೌಟ್, ನಿದ್ರೆ ಮಾಡೋದು, ಸಿನಿಮಾ ನೋಡೋದೇ ಆಗಿದೆ ಅಂತೆ. ಆದರೆ ಮನೇಲಿ ನೋಡೋಕೂ ಥಿಯೇಟರ್ ಒಳಗೆ ಸಿನಿಮಾ ನೋಡೋಕೂ ತುಂಬಾ ವ್ಯತ್ಯಾಸ ಇದೆ. ಥಿಯೇಟರ್ ಗೆ ಹೋಗೋದು ಮಿಸ್ ಮಾಡ್ಕೋತಿದೀನಿ. ಥಿಯೇಟರ್ ಓಪನ್ ಆದರೆ ಫಸ್ಟ್ ಹೋಗಿ ಸಿನಿಮಾ ನೋಡೋನು ನಾನೇ ಆಗಿರುತ್ತೇನೆ ಎಂದು ಡಾಲಿ ಹೇಳಿದರು. ನಂಗೂ ಅದೇ ಫೀಲಿಂಗ್ ಆದರೆ ಹುಷಾರು. ನಾವಿನ್ನೂ ತುಂಬಾ ಸಿನಿಮಾ ಮಾಡಬೇಕು, ಜೊತೇಲೂ ಸಿನಿಮಾ ಮಾಡಬೇಕು. ಸೇಫ್ ಆಗಿರಿ ಅಂತ ಟಾಟಾ, ಬೈ, ಬೈ, ಹೇಳಿಕೊಂಡೆವು ಎಂದು ಹರಿಪ್ರಿಯ ತಿಳಿಸಿದ್ದಾರೆ.

    ಧನಂಜಯ್ ನಂಗೆ ಗೊತ್ತಿರುವ ಹಾಗೆ ಸ್ವಲ್ಪ ಶೈ ಪರ್ಸನ್. ಆದರೆ ತೆರೆ ಮೇಲೆ ಗೊತ್ತಲ್ವಾ? ಹೀರೋ ಆದರೂ ವಿಲನ್ ಆದ್ರೂ, ಎಲ್ಲ ಪಾತ್ರಗಳಿಗೂ ನ್ಯಾಯ ಕೊಡುತ್ತಾರೆ. ಸಾಕಷ್ಟು ವಿಭಿನ್ನ ಪಾತ್ರಗಳನ್ನು ಮಾಡ್ತಾ ಸ್ಟ್ರಾಂಗ್ ಫ್ಯಾನ್‍ಬೇಸ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಅವರ ಪಾತ್ರಗಳ ಆಯ್ಕೆ ನೋಡಿದಾಗ ನಂಗೂ ತುಂಬಾ ಖುಷಿ ಆಗುತ್ತೆ. ಮುಂದಿನ ದಿನಗಳಿಗೆ ಆಲ್ ದಿ ಬೆಸ್ಟ್, ಒಳ್ಳೇಯದಾಗಲಿ ಧನು ಎಂದು ಧನಂಜಯ್ ಬಗ್ಗೆ ಬರೆದು ಬ್ಲಾಗ್ ಅನ್ನು ಕೊನೆ ಮಾಡಿದ್ದಾರೆ.

  • ಚಿರು ಯಾವತ್ತೂ ಚಿರಂಜೀವಿನೇ, ಮೇಘನಾನ ನೋಡಿ ಸಂಕಟವಾಯ್ತು: ಹರಿಪ್ರಿಯ

    ಚಿರು ಯಾವತ್ತೂ ಚಿರಂಜೀವಿನೇ, ಮೇಘನಾನ ನೋಡಿ ಸಂಕಟವಾಯ್ತು: ಹರಿಪ್ರಿಯ

    ಬೆಂಗಳೂರು: ನಟ ಚಿರು ಯಾವತ್ತೂ ಚಿರಂಜೀವಿನೇ ಎಂದು ನಟಿ ಹರಿಪ್ರಿಯ ಅವರು ಚಿರು ಸಾವಿನ ಬಗ್ಗೆ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

    ಚಿರು ಅವರ ಜೊತೆ ಕಳೆದ ಸಮಯ ಮತ್ತು ಅವರ ಸಾವಿನ ಸುದ್ದಿಯನ್ನು ಕೇಳಿದಾಗ ಆದ ಆಘಾತವನ್ನು ಹರಿಪ್ರಿಯ ಇಲಿಹಂಚಿಕೊಂಡಿದ್ದಾರೆ. ಜೊತೆಗೆ ಚಿರು ಅವರನ್ನು ನೋಡಲು ಹೋದಾಗ ಅವರಿಗಾದ ನೋವು, ಮೇಘನಾ, ಅರ್ಜುನ್ ಸರ್ಜಾ ಮತ್ತು ಧ್ರುವ ಅವರ ಬಗ್ಗೆಯೂ ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಭಾನುವಾರ ನನ್ನ ಆಪ್ತರಿಂದ ಒಂದು ಮೆಸೇಜ್ ಬಂದಿತ್ತು. ನಾನ್ ಅದನ್ನು ನಾಲ್ಕೈದು ಸಲ ಓದಿದೆ. ಯಾಕೆಂದರೆ ಆ ಮೆಸೇಜ್‍ನ ನಂಗೆ ನಂಬುವುದಕ್ಕೆ ಸಾಧ್ಯನೇ ಆಗಲಿಲ್ಲ. ನಾನೇ ಏನಾದರೂ ತಪ್ಪು ಓದುತ್ತಿದ್ದೇನಾ ಎಂದು ಮತ್ತೆ ಮತ್ತೆ ಓದಿಕೊಂಡೆ. ಅಷ್ಟರಲ್ಲಿ ಬೇರೆ ಬೇರೆ ಕಡೆಯಿಂದಲೂ ಅದೇ ಮೆಸೇಜ್ ಬರುತ್ತಿತ್ತು. ಟಿವಿಯಲ್ಲೂ ಅದೇ ಬ್ರೇಕಿಂಗ್ ನ್ಯೂಸ್. `ಚಿರು ಇನ್ನಿಲ್ಲ’ ಅನ್ನೋ ಸುದ್ದಿ ಇನ್ನೂ ಪೂರ್ತಿಯಾಗಿ ನಂಬುವುದಕ್ಕೆ ಆಗಲ್ಲ ಎಂದು ಹರಿಪ್ರಿಯ ಹೇಳಿದ್ದಾರೆ.

    ಚಿರು ಮಾತ್ರ ಅಲ್ಲ, ಅವರ ಫ್ಯಾಮಿಲಿ ಎಲ್ಲರ ಜೊತೆ ಆ್ಯಕ್ಟ್ ಮಾಡಿದ್ದೀನಿ. ನಾನು, ಚಿರು `ಸಂಹಾರ’ ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ದೆವು. ಅಲ್ಲಿ ಹೀರೋಯಿನ್ ವಿಲನ್ ರೋಲ್. ಹಾಗಾಗಿ ನನಗೂ ಚಿರುಗೂ ಒಟ್ಟಿಗೆ ಇರೋ ಸೀನ್ಸ್ ಜಾಸ್ತಿ ಇರಲಿಲ್ಲ. ಆದರೆ ಸಾಂಗ್ ಶೂಟ್‍ನಲ್ಲಿ ನಾವಿಬ್ಬರೂ ತುಂಬಾ ಮಾತಾಡಿದ್ದು, ನಕ್ಕಿದ್ದು ಇದೆ. ಅದರಲ್ಲಿ ಕೊನೆಗೆ ಒಂದು ಫೈಟ್ ಇತ್ತು. ಆಗ ಒಂದು ಪಲ್ಟಿ ಹೊಡೆಯುವಾಗ ಆಯತಪ್ಪಿ ಜೋರಾಗಿ ನೆಲಕ್ಕೆ ಬಿದ್ದು `ಅಮ್ಮಾ’ ಅಂತ ಕಿರುಚಿದ್ದೆ. ಆವಾಗಿಂದ ಶೂಟಿಂಗ್ ಮುಗಿಯುವರೆಗೂ ನಾನು ಕಿರುಚಿದ ಟೋನ್‍ನಲ್ಲೇ `ಅಮ್ಮಾ’ ಎಂದು ರೇಗಿಸುತ್ತಿದ್ದರು ಚಿರು ಎಂದು ಹರಿಪ್ರಿಯ ಬರೆದುಕೊಂಡಿದ್ದಾರೆ.

    ಚಿರು ಇಲ್ಲ ಅಂದ ತಕ್ಷಣ ಶಾಕ್ ಆಗಿತ್ತು. ಭಾನುವಾರ ಟಿವಿಲಿ ನೋಡ್ತಾ ಮನೆಯಲ್ಲೇ ತುಂಬಾ ಅತ್ತಿದ್ದೆ. ಚಿರುನ ಆ ರೀತಿಯಲ್ಲಿ ಹೇಗೆ ನೋಡೋದು ಎಂದು ಹೋಗುವುದಕ್ಕೂ ಹಿಂಜರಿದೆ. ಸೋಮವಾರ ಕೊನೆದಾಗಿ ಒಂದು ಬಾರಿ ನೋಡಬೇಕು ಎಂದು ತಕ್ಷಣ ಹೊರಟೆ. ಆದರೆ ಅಲ್ಲಿ ಮೇಘನಾನ ಕಂಡು ನನಗೆ ಇನ್ನೂ ಜಾಸ್ತಿ ದುಃಖ ಆಯ್ತು. ಏನ್ ಸಮಾಧಾನ ಹೇಳುವುದಕ್ಕೂ ಮಾತೇ ಬರಲಿಲ್ಲ.

    ಅಲ್ಲಿ ಯಾರೋ ಹೇಳುತ್ತಿದ್ದರು. ಮೇಘನಾ ಗರ್ಭಿಣಿ ಎಂಬ ವಿಷಯಾನ ಚಿರು ಸ್ವಲ್ಪದಿನದಲ್ಲೇ ಪಬ್ಲಿಕ್ ಮಾಡುತ್ತಿದ್ದರು ಎಂದು. ಆದರೆ ಅಷ್ಟರಲ್ಲಿ ಏನೇನಾಯ್ತಲ್ಲ? ಲೈಫ್ ಎಷ್ಟು ಅನ್‍ಪ್ರೆಡಿಕ್ಟೇಬಲ್ ಅಲ್ವಾ? ಒಬ್ಬರ ಸ್ಥಾನವನ್ನು ಇನ್ನೊಬ್ಬರು ಯಾವತ್ತೂ ತುಂಬಲು ಆಗಲ್ಲ ಎಂದು ಹರಿಪ್ರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅರ್ಜುನ್ ಸರ್, ಕಾಫೀನ್ ಬಾಕ್ಸ್ ಗ್ಲಾಸ್‍ಗೆ ತಲೆ ಕೊಟ್ಟು, `ಚಿರು ಮಾಮ ಬಂದಿದ್ದೀನಿ, ಎದ್ದೇಳೋ’ ಅಂದಿದನ್ನು ನೋಡಿದಾಗ ತುಂಬಾ ಸಂಕಟ ಆಗಿತ್ತು. ಬೆಳೆದು ನಿಂತಿರೋ ಮಗನನ್ನು ಕಳೆದುಕೊಂಡ ಸಂಕಟದಲ್ಲಿರೋ ಅಪ್ಪ-ಅಮ್ಮಂಗೆ ಯಾವ ಸಾಂತ್ವನ ಸಮಾಧಾನ ಹೇಳೋಕೆ ಸಾಧ್ಯ? ಚಿಕ್ಕಂದಿನಿಂದ ಒಟ್ಟಿಗೇ ಆಡಿ ಬೆಳೆದ ಧ್ರುವಂಗೆ ಆಗಿರೋ ಕಷ್ಟ ಯಾರಾದರೂ ಊಹಿಸೋಕೆ ಸಾಧ್ಯನಾ? ಈ ಲಾಕ್‍ಡೌನ್ ಟೈಮಲ್ಲಿ ಎಲ್ಲ ಮನೇಲೇ ಇದ್ದು ಎಂದಿಗಿಂತ ಜಾಸ್ತಿ ಸಮಯ ಒಟ್ಟಿಗೇ ಕಳೆದಿರುತ್ತಾರೆ. ಆದರೆ ಈ ಸಮಯದಲ್ಲೇ ಹೀಗಾದರೆ ಹೇಗೆ ಎಂದು ಹರಿಪ್ರಿಯ ಪ್ರಶ್ನೆ ಮಾಡಿದ್ದಾರೆ.

    ನಾನಲ್ಲ ಯಾರೇ ಆದರೂ ಸಾಂತ್ವನ ಹೇಳುವುದು ಬಿಟ್ಟು ಬೇರೇನೂ ಮಾಡೋಕಾಗಲ್ಲ. ಮೇಘನಾಗೆ ಅವರ ಅಮ್ಮ-ಅಪ್ಪಂಗೆ, ಅರ್ಜುನ್ ಸರ್‍ಗೆ, ಧ್ರುವಂಗೆ, ಅವರೆಲ್ಲರಿಗೂ ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡು ದೇವರೇ ಅಂತ ಪ್ರಾರ್ಥನೆ ಮಾಡೋಣ. ಹೋದವರು ಹೋದಾಗ ಆಗೋ ನೋವಿಗಿಂತ ಆಮೇಲೆ ಅವರ ನೆನಪಾಗಿ ಆಗೋ ನೋವೇ ಅದೇ ದೊಡ್ಡ ಯಾತನೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ಚಿರು ಫ್ಯಾಮಿಲಿಗೆ ದೇವರು ಕೊಡಲಿ ಎಂದು ಹರಿಪ್ರಿಯ ಬೇಡಿಕೊಂಡಿದ್ದಾರೆ.

    ಚಿರು ಸಿನಿಮಾಗಳು ರಿಲೀಸ್ ಆಗೋದಿವೆ. ಇನ್ನೂ ತುಂಬಾ ಸಿನಿಮಾ ಮಾಡೋದಿತ್ತು. ಆದರೆ ಚಿರು ಇಲ್ಲ ಅನ್ನುವುದನ್ನು ನನಗೆ ಇನ್ನೂ ನಂಬುವುದಕ್ಕೇ ಆಗುತ್ತಿಲ್ಲ. ನೋಡಲು, ಮಾತನಾಡಲು, ರೇಗಿಸಲು ಚಿರು ಇನ್ನು ಕಾಣಿಸದೇ ಇರಬಹುದು. ಆದರೆ ಎಲ್ಲರ ಮನಸ್ಸಿಲ್ಲಿ ಚಿರು ಯಾವತ್ತೂ ಚಿರಂಜೀವಿನೇ ಎಂದು ಹರಿಪ್ರಿಯ ತಿಳಿಸಿದ್ದಾರೆ.

  • ಲಾಕ್‍ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ಜಿರಳೆ ಕಥೆ ಹೇಳಿದ ಹರಿಪ್ರಿಯಾ

    ಲಾಕ್‍ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ಜಿರಳೆ ಕಥೆ ಹೇಳಿದ ಹರಿಪ್ರಿಯಾ

    – ಮಹಿಳೆಯರಿಗೆ ಸಲಹೆಯೊಂದನ್ನು ನೀಡಿದ ನಟಿ

    ಬೆಂಗಳೂರು: ಸಿನಿಮಾದಲ್ಲಿ ಬರುವ ಭಯಾನಕ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ ಎಂದು ಚಂದನವದ ನಟಿ ಹರಿಪ್ರಿಯಾ ಹೇಳಿದ್ದಾರೆ.

    ಲಾಕ್‍ಡೌನ್‍ನಿಂದ ಮನೆಯಲ್ಲೇ ಕುಳಿತಿರುವ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಅಂತೆಯೇ ನಟಿ ಹರಿಪ್ರಿಯಾ ಕೂಡ ತಮ್ಮ ಬ್ಲಾಗ್‍ನಲ್ಲಿ ಆಗಾಗ ತಮ್ಮ ಅನುಭವದ ಕಥೆಯನ್ನು ಬರೆದು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಜಿರಳೆ ಕಥೆಯೊಂದು ಬರೆದು ತಮ್ಮ ಲೇಡಿ ಫ್ಯಾನ್ಸ್ ಗೆ ಸಲಹೆಯೊಂದನ್ನು ಹೇಳಿದ್ದಾರೆ.

    ಈ ವಿಚಾರವಾಗಿ ತಮ್ಮ ಬ್ಲಾಗ್‍ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಹರಿಪ್ರಿಯಾ ಜಿರಳೆಗಳನ್ನು ಕಂಡರೆ ನನಗೇಕೆ ಅಷ್ಟು ಭಯ ಎಂದು ತಿಳಿಯುತ್ತಿಲ್ಲ. ನಮ್ಮ ಕುಟುಂಬದಲ್ಲಿ ಹೆಚ್ಚಿನವರು ಜಿರಳೆಯನ್ನು ಕಂಡರೆ ಹೆದರಿ ಓಡುತ್ತಾರೆ. ಅದರಲ್ಲಿ ನಮ್ಮ ಅಮ್ಮ, ಚಿಕ್ಕಮ್ಮ ಕೂಡ ಜಿರಳೆಯನ್ನು ಕಂಡಾಗ ಭಯಪಡುತ್ತಿದ್ದರು. ಅವರಿಂದಾಗಿ ನನಗೂ ಜಿರಳೆಯನ್ನು ಕಂಡಾಗ ಭಯ ಹುಟ್ಟಿಕೊಂಡಿದೆ. ಇದಕ್ಕೆ ಅವರೇ ಹೊಣೆ ಎಂದು ಹರಿಪ್ರಿಯಾ ತಿಳಿಸಿದ್ದಾರೆ.

    ಮಹಿಳೆಯರಿಗೆ ಎಲ್ಲವನ್ನು ಎದುರಿಸಬಲ್ಲ ಶಕ್ತಿ ಇರುತ್ತದೆ. ಆದರೆ ಕೆಲವರಿಗೆ ಜಿರಳೆಯನ್ನು ಕಂಡರೆ ಭಯವಾಗುತ್ತದೆ. ಇನ್ನು ಕೆಲವರು ಜಿರಳೆ ಹತ್ತಿರ ಬಂದರೆ ಸಾಕು ಓಡಿ ಹೋಗುತ್ತಾರೆ. ನಾನು ಕೂಡ ಅಷ್ಟೇ ಜಿರಳೆಯನ್ನು ಕಂಡರೆ ಭಯಪಡುತ್ತೇನೆ. ಜಿರಳೆಗಳು ನೋಡಲು ಚಿಕ್ಕದಾಗಿದ್ದರೂ ದೊಡ್ಡ ಮಹಿಳೆಯನ್ನು ಹೆದರಿಸಿಬಿಡುತ್ತವೆ. ಮಹಿಳೆಯರೂ ಕೂಡ ದೊಡ್ಡ ಗಾತ್ರದ ಡೈನೋಸರ್ಸ್ ಅನ್ನು ಬೇಕಾದರೂ ಪಳಗಿಸುತ್ತಾರೆ. ಆದರೆ ಜಿರಳೆಯನ್ನು ಕಂಡರೆ ಭಯಪಡುತ್ತಾರೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಹಿಳೆಯರಿಗೊಂದು ಸಣ್ಣ ಸಲಹೆ, ನೀವು ಜಿರಳೆಯನ್ನು ಕಂಡು ಭಯಪಡುತ್ತೀರಾ ಎಂಬ ವಿಚಾರವನ್ನು ಪುರುಷರೊಂದಿಗೆ ಹೇಳಿಕೊಳ್ಳಬೇಡಿ. ಅವರು ನಿಮ್ಮನ್ನು ಹೆದರಿಸಲು ಈ ತಂತ್ರವನ್ನು ಮುಂದೆ ಬಳಸಬಹುದು. ಈ ಹಿಂದೆ ಕೂಡ ನನ್ನ ಸ್ನೇಹಿತರು ಜಿರಳೆಯನ್ನು ಹಿಡಿದುಕೊಂಡು ನನಗೆ ಭಯಪಡಿಸಿದ್ದರು. ಅದರ ಕಾಲುಗಳನ್ನು ಹಿಡಿದುಕೊಂಡು ನನ್ನ ಕಣ್ಣುಗಳ ಮುಂದೆ ತಂದಿದ್ದರು. ನಾನು ಜಿರಳೆ ಕಂಡು ಜೋರಾಗಿ ಕಿರುಚಿದೆ ಎಂದು ಹರಿಪ್ರಿಯಾ ಅನುಭವವನ್ನು ಬರೆದಿದ್ದಾರೆ.

    ಜಿರಳೆ ನನ್ನ ಕಡೆಗೆ ಒಂದು ಹೆಜ್ಜೆ ಇಟ್ಟರೆ, ನಾನು ಸಾವಿರ ಹೆಜ್ಜೆ ಹಿಂದಕ್ಕೆ ಓಡುತ್ತೇನೆ. ನನ್ನ ಕೋಣೆಯಲ್ಲಿ ಜಿರಳೆ ಕಂಡರೆ ಒಂದೋ ಅದು ಸಾಯಬೇಕು. ಇಲ್ಲವೇ ಅದು ಬೇರೆ ಕಡೆ ಹೋಗಬೇಕು. ಸಿನಿಮಾದಲ್ಲಿನ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ. ಆದರೆ ಈಗ ಜಿರಳೆಯ ಭಯವನ್ನು ನಾನು ನಿವಾರಿಸಿಕೊಂಡಿದ್ದೇನೆ. ಇನ್ನು ನಿಮ್ಮ ಸರದಿ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

  • ಮನಸಿನ ಮಾತು ಹಂಚಿಕೊಳ್ಳಲು ಬ್ಲಾಗ್ ಆರಂಭಿಸಿದ ಯದುವೀರ್ ಒಡೆಯರ್

    ಮನಸಿನ ಮಾತು ಹಂಚಿಕೊಳ್ಳಲು ಬ್ಲಾಗ್ ಆರಂಭಿಸಿದ ಯದುವೀರ್ ಒಡೆಯರ್

    ಮೈಸೂರು: ತಮ್ಮ ಮನಸಿನ ಮಾತನ್ನು ಹಂಚಿಕೊಂಡು ಜನರ ಜೊತೆ ಬೆರೆಯಲು ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಭೇರುಂಡ’ ಎಂಬ ಹೆಸರಿನ ಬ್ಲಾಗ್ ಆರಂಭಿಸಿದ್ದಾರೆ.

    ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಫೋಟೋಗಳನ್ನು ಅಪ್ಲೋಡ್ ಮಾಡಿ ಜನರ ಜೊತೆ ಸಂಪರ್ಕದಲ್ಲಿದ್ದ ಮಹಾರಾಜರು ಈಗ ತಮ್ಮ ಬರವಣಿಗೆಯ ಮೂಲಕ ಜನರ ಜೊತೆ ಬೆರೆಯಲು ಮುಂದಾಗಿದ್ದು ವೆಬ್‍ಸೈಟ್‍ನಲ್ಲಿ ಬ್ಲಾಗ್ ಆರಂಭಿಸಿ ಇವತ್ತು ಮೊದಲ ಸುದ್ದಿಪತ್ರವನ್ನು ಪ್ರಕಟಿಸಿದ್ದಾರೆ.

    ದಸರಾ ವಿಶೇಷಾಂಕದ ಸುದ್ದಿಪತ್ರ ಬಿಡುಗಡೆ ಮಾಡಿದ ಮಹಾರಾಜರು, ಇದು ಉದ್ಘಾಟನೆಯ ಸುದ್ದಿ ಪತ್ರ ಎಂದು ಬ್ಲಾಗ್ ನಲ್ಲಿ ಹೇಳಿದ್ದಾರೆ. ಉದ್ಘಾಟನಾ ಪತ್ರದ ಹೆಸರಿನಲ್ಲಿ ಮೊದಲ ಪತ್ರ ಒಂದನ್ನು ಬರೆದಿದ್ದಾರೆ. ಈ ಪತ್ರ ನಿಮಗೆಲ್ಲ ನಮ್ಮ ಪ್ರಾಥಮಿಕ ಮಾಹಿತಿ ನೀಡಲಿದೆ. ರಾಜಮನೆತನದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸಲಿದೆ. ಈ ಬ್ಲಾಗ್ ಮೂಲಕ ನಮ್ಮ ಕಾರ್ಯಕ್ರಮಗಳು ನಿಮಗೆ ತಿಳಿಯಲಿದೆ ಎಂದು ಬರೆದಿದ್ದಾರೆ.

    ರಾಜಮನೆತನದ ಕಾರ್ಯಕ್ರಮಗಳಲ್ಲಿ ಈ ಸೇವೆಯು ಒಂದು ಭಾಗ. ನಾವು ನೀವು ಪರಸ್ಪರ ಅರ್ಥ ಮಾಡಿಕೊಳ್ಳಲು ಈ ಪತ್ರ ನಾಂದಿಯಾಗಲಿದೆ. ನನಗೆ ಬರವಣಿಗೆ ಇಷ್ಟವಾಗಿದ್ದರಿಂದ ನನ್ನ ಆಲೋಚನೆಗಳನ್ನು ಈ ಮೂಲಕ ಹಂಚಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಬ್ಲಾಗ್ ನೋಡಲು ಕ್ಲಿಕ್ ಮಾಡಿ: www.ykcwadiyar.in

    ಇದನ್ನೂ ಓದಿ: ಪತ್ನಿ ಹೆಸ್ರಲ್ಲಿ ಸೋಷಿಯಲ್ ಮೀಡಿಯಾ ಖಾತೆ ತೆರೆಯೋ ಮಂದಿಗೆ ಯದುವೀರ್ ಖಡಕ್ ವಾರ್ನಿಂಗ್