Tag: ಬ್ರೆಡ್ ಉಪ್ಮಾ

  • ಸಂಜೆಯ ಸ್ನ್ಯಾಕ್ಸ್‌ಗೆ ಟ್ರೈ ಮಾಡಿ ಬ್ರೆಡ್ ಉಪ್ಮಾ

    ಸಂಜೆಯ ಸ್ನ್ಯಾಕ್ಸ್‌ಗೆ ಟ್ರೈ ಮಾಡಿ ಬ್ರೆಡ್ ಉಪ್ಮಾ

    ಪ್ರಸ್ತುತ ರಾಜ್ಯದಲ್ಲಿ ಆಗಾಗ ಮಳೆಯಾಗುತ್ತಿರುವುದರಿಂದ ಚಳಿಗೆ ಏನಾದರೂ ಬಿಸಿ ಬಿಸಿ ತಿನ್ನಬೇಕು ಎಂದೆನಿಸುವುದು ಸಹಜ. ಸಂಜೆಯ ಚಹಾದೊಂದಿಗೆ ಏನಾದರೂ ತಿಂದರೆ ಹಸಿವನ್ನು ನೀಗಿಸುವುದರ ಜೊತೆಗೆ ಚಳಿಯನ್ನೂ ದೂರ ಮಾಡಿ ಮನಸ್ಸಿಗೆ ಮುದವನ್ನು ನೀಡುತ್ತದೆ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಬ್ರೆಡ್ ಉಪ್ಮಾ ಮಾಡುವ ರೆಸಿಪಿಯನ್ನು ನಾವು ಇವತ್ತು ನಿಮಗೆ ತಿಳಿಸಿಕೊಡಲಿದ್ದೇವೆ. ಹಾಗಿದ್ದರೆ ಅತ್ಯಂತ ಸುಲಭವಾಗಿ ಬ್ರೆಡ್ ಉಪ್ಮಾ ಹೇಗೆ ಮಾಡುವುದು ಎಂಬುವುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ನಾಲ್ಕೇ ಪದಾರ್ಥ ಸಾಕು – ಹೆಲ್ತಿ ಅಂಜೂರದ ಐಸ್‌ಕ್ರೀಮ್ ಮಾಡಿ ನೋಡಿ

    ಬೇಕಾಗುವ ಸಾಮಾಗ್ರಿಗಳು:
    ಬ್ರೆಡ್ – 2 ರಿಂದ 3
    ಎಣ್ಣೆ – 1 ಚಮಚ
    ಸಾಸಿವೆ – ಅರ್ಧ ಚಮಚ
    ಉದ್ದಿನ ಬೇಳೆ – ಅರ್ಧ ಚಮಚ
    ಕರಿ ಬೇವು – 5 ರಿಂದ 6 ಎಲೆ
    ಶುಂಠಿ ಪೇಸ್ಟ್ – ಮುಕ್ಕಾಲು ಚಮಚ
    ಹೆಚ್ಚಿದ ಹಸಿಮೆಣಸು – 1
    ಗೋಡಂಬಿ – 8 ರಿಂದ 10
    ಹೆಚ್ಚಿದ ಈರುಳ್ಳಿ- ಕಾಲು ಕಪ್
    ಹೆಚ್ಚಿದ ಟೊಮೆಟೊ – ಅರ್ಧ ಕಪ್
    ಉಪ್ಪು – ಅಗತ್ಯಕ್ಕೆ ತಕ್ಕಷ್ಟು
    ಅರಶಿನ ಪುಡಿ – ಅರ್ಧ ಚಮಚ
    ಅಚ್ಚಖಾರದ ಪುಡಿ – ಅರ್ಧ ಚಮಚ
    ಸಕ್ಕರೆ – ಅರ್ಧ ಚಮಚ
    ನೀರು – 3 ರಿಂದ 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟುಕೊಂಡು ಬ್ರೆಡ್ ಅನ್ನು ರೋಸ್ಟ್ ಮಾಡಿಕೊಳ್ಳಿ. ಬಳಿಕ ಅದನ್ನು ಕ್ಯೂಬ್ಸ್ ರೀತಿಯಲ್ಲಿ ತುಂಡು ಮಾಡಿಕೊಂಡು ಒಂದು ಬೌಲ್‌ನಲ್ಲಿ ಹಾಕಿ ಪಕ್ಕಕ್ಕಿಡಿ.
    * ಬಳಿಕ ಅದೇ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಗೋಡಂಬಿ ಹಾಕಿಕೊಂಡು ಗೋಲ್ಡನ್ ಬಣ್ಣ ಬರುವವರೆಗೆ ಕರಿದುಕೊಳ್ಳಿ. ಬಳಿಕ ಇದನ್ನು ಬದಿಗಿಟ್ಟುಕೊಂಡು ಪ್ಯಾನ್‌ಗೆ ಸ್ವಲ್ಪ ಸಾಸಿವೆ, ಉದ್ದಿನ ಬೇಳೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ನಂತರ ಇದಕ್ಕೆ ಹಸಿಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿಕೊಂಡು ಫ್ರೈ ಮಾಡಿದ ಬಳಿಕ ಸ್ವಲ್ಪ ಇಂಗು ಮತ್ತು ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಳ್ಳಿ. ಈರುಳ್ಳಿ ಫ್ರೈ ಆದ ನಂತರ ಅದಕ್ಕೆ ಶುಂಠಿ ಪೇಸ್ಟ್ ಅನ್ನು ಹಾಕಿಕೊಂಡು 30 ಸೆಕೆಂಡುಗಳ ಕಾಲ ಅದರ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ.
    * ಈಗ ಇದಕ್ಕೆ ಹೆಚ್ಚಿದ ಟೊಮೆಟೊ, ಉಪ್ಪು ಮತ್ತು ಅರಶಿನ ಪುಡಿ ಹಾಕಿಕೊಂಡು ಟೊಮೆಟೊ ಮೆತ್ತಗಾಗುವವರೆಗೂ ತಿರುವಿಕೊಳ್ಳಿ. ಬಳಿಕ ಅಚ್ಚಖಾರದ ಪುಡಿ ಮತ್ತು ಸಕ್ಕರೆ ಹಾಕಿಕೊಂಡು 1 ರಿಂದ 2 ನಿಮಿಷ ಫ್ರೈ ಮಾಡಿಕೊಳ್ಳಬೇಕು.
    * ಈಗ ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಸೇರಿಸಿಕೊಂಡು ಮಿಶ್ರಣ ಹದವಾಗಿ ದಪ್ಪ ಆಗುವವರೆಗೂ ತಿರುವಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಉಪ್ಪು ಹಾಕಿಕೊಂಡು ಬಳಿಕ ಬ್ರೆಡ್ ಕ್ಯೂಬ್ಸ್‌ಗಳನ್ನು ಸೇರಿಸಿಕೊಳ್ಳಿ. ಬಳಿಕ ಹುರಿದ ಗೋಡಂಬಿಯನ್ನೂ ಸೇರಿಸಿಕೊಂಡು ಬ್ರೆಡ್ ಮಿಶ್ರಣಕ್ಕೆ ಸರಿಯಾಗಿ ಹೊಂದಿಕೊಳ್ಳುವಂತೆ ತಿರುವಿಕೊಳ್ಳಿ.
    * ಈಗ ಬ್ರೆಡ್ ಉಪ್ಮಾ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ಚಹಾದೊಂದಿಗೆ ತಿಂದು ಆನಂದಿಸಿ. ಇದನ್ನೂ ಓದಿ: ಚಪಾತಿ, ರೋಟಿ ಜೊತೆ ಸವಿಯಿರಿ ಪಂಜಾಬಿ ಸ್ಟೈಲ್ ಮಟರ್ ಪನೀರ್