Tag: ಬ್ರೀಸ್ಬೆನ್

  • 1 ಎಸೆತ ಎಸೆದು ಓವರ್ ಕೊನೆಗೊಳಿಸಿದ ರೋಹಿತ್ ಶರ್ಮಾ

    1 ಎಸೆತ ಎಸೆದು ಓವರ್ ಕೊನೆಗೊಳಿಸಿದ ರೋಹಿತ್ ಶರ್ಮಾ

    ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಗಾಬ್ಬಾ ಅಂಗಳದಲ್ಲಿ ಪ್ರಾರಂಭಗೊಂಡಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮಧ್ಯಮ ವೇಗದಲ್ಲಿ ಒಂದು ಎಸೆತವನ್ನು ಎಸೆದು ಎಲ್ಲರ ಗಮನಸೆಳೆದಿದ್ದಾರೆ.

    ಗಾಯದ ಸಮಸ್ಯೆಯ ನಡುವೆ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕೆ ಇಳಿದ ಭಾರತ ಮತ್ತೆ ನಾಲ್ಕನೇ ಟೆಸ್ಟ್‍ನಲ್ಲೂ ಗಾಯದ ಹೊರೆ ಹೊರುವಂತಾಗಿದೆ. ಈಗಾಗಲೇ ಮೂರನೇ ಟೆಸ್ಟ್‍ನ ವೇಳೆ ಗಾಯಕ್ಕೆ ತುತ್ತಾಗಿದ್ದ ಆರ್ ಆಶ್ವಿನ್, ಜಡೇಜಾ, ವಿಹಾರಿ ಮತ್ತು ಬುಮ್ರಾ ಹೊರಗುಳಿದಿದ್ದು ಇವರ ಬದಲು ಮಯಾಂಕ್ ಅಗರ್ವಾಲ್ ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಮತ್ತು ಟಿ. ನಟರಾಜನ್ ಅವಕಾಶ ಪಡೆದಿದ್ದಾರೆ.

    ಭಾರತ ಕೊನೆಯ ಟೆಸ್ಟ್ ಪಂದ್ಯಾಟವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಕಣಕ್ಕೆ ಇಳಿದು ಹೊರಾಟ ನಡೆಸುತ್ತಿರುವಾಗಲೇ ಇನ್ನೊಬ್ಬ ವೇಗದ ಬೌಲರ್‍ಗೆ ಗಾಯದ ಸಮಸ್ಯೆ ಕಾಡಿದೆ. ಇದರಿಂದ ಮೊದಲ ದಿನದ ಆಟದಲ್ಲೇ ಭಾರತ ಸ್ವಲ್ಪ ಮಂಕಾಗಿದೆ. ಇದನ್ನೂ ಓದಿ: ಭಾರತದ ಪರ ವಿಶೇಷ ದಾಖಲೆ ನಿರ್ಮಿಸಿದ ನಟರಾಜನ್‌

    ತನ್ನ 8ನೇ ಓವರ್ ಬೌಲಿಂಗ್ ಮಾಡುತ್ತಿದ್ದ ನವ್‍ದೀಪ್ ಸೈನಿ ತನ್ನ ಓವರಿನ ಕೋಟಾ ಮುಗಿಸಲು ಒಂದು ಬೌಲ್ ಬಾಕಿ ಇರುವಾಗಲೇ ತೊಡೆ ನೋವಿಗೆ ತುತ್ತಾಗಿ ಮೈದಾನ ತೊರೆದರು. ಈ ವೇಳೆ ಒಂದು ಬೌಲ್ ಹಾಕಲು ತಂಡದ ನಾಯಕ ಅಜಿಂಕ್ಯ ರಹಾನೆ ಬೌಲನ್ನು ರೋಹಿತ್ ಶರ್ಮಾ ಕೈಗೆ ನೀಡಿದರು.

    ಈ ಹಿಂದೆ ಆಫ್ ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಇಂದು ಮಧ್ಯಮ ವೇಗದ ಬೌಲಿಂಗ್ ಮಾಡಿ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದರು. ಒಂದು ಬಾಲ್ ಬೌಲಿಂಗ್ ಮಾಡಿದ ರೋಹಿತ್‍ನ ಆಫ್ ಟ್ರ್ಯಾಕರ್ ಎಸೆತವನ್ನು ಮಾರ್ನಸ್ ಲಬುಶೇನ್ ಆಫ್ ಸೈಡ್‍ಗೆ ತಳ್ಳಿ ಒಂದು ರನ್ ಪಡೆದರು ಇದರೊಂದಿಗೆ ಸೈನಿ ಓವರ್ ಮುಕ್ತಾಯವಾಯಿತು.

    ಈ ಹಿಂದೆ ನಡೆದ ಐಪಿಎಲ್ ಪಂದ್ಯಾಟದಲ್ಲಿ ರೋಹಿತ್ ಶರ್ಮಾ ಬೌಲಿಂಗ್ ಮಾಡುತ್ತಿದ್ದರು. 2009ರಲ್ಲಿ ನಡೆದ ಐಪಿಎಲ್ ಪಂದ್ಯಾಟ ಒಂದರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ರೋಹಿತ್ ಡೆಕ್ಕನ್ ಚಾರ್ಜ್‍ರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಹಲವು ಬಾರಿ ಬೌಲಿಂಗ್ ಮಾಡಿದ್ದಾರೆ. ಆದರೆ ಅಂತರಾಷ್ಟ್ರೀಯ ಪಂದ್ಯಾಟಗಳಲ್ಲಿ ಹೆಚ್ಚು ಬೌಲಿಂಗ್ ಮಾಡದೆ ಇರುವ ರೋಹಿತ್‍ಗೆ ಆಸ್ಟ್ರೇಲಿಯಾದಲ್ಲಿ ಒಂದು ಎಸೆತ ಎಸೆಯುವ ಭಾಗ್ಯ ಸಿಕ್ಕಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 87 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ. ಮಾರ್ನಸ್ ಲಬುಶೇನ್ 108 ರನ್(204 ಎಸೆತ, 9 ಬೌಂಡರಿ), ಮ್ಯಾಥ್ಯು ವೇಡ್ 45 ರನ್(87 ಎಸೆತ, 6 ಬೌಂಡರಿ) ಹೊಡೆದು ಔಟಾಗಿದ್ದಾರೆ. ಕ್ಯಾಮರೂನ್ ಗ್ರೀನ್ 28 ರನ್, ನಾಯಕ ಟೀಮ್ ಪೈನೆ 38 ರನ್ ಗಳಿಸಿದ್ದು ನಾಳೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ ಭಾರತದ ಪರ ಸಿರಾಜ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.