Tag: ಬ್ರಿಸ್ಬೇನ್

  • 32 ವರ್ಷದ ಬಳಿಕ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾಗೆ ಮೊದಲ ಸೋಲು!

    32 ವರ್ಷದ ಬಳಿಕ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾಗೆ ಮೊದಲ ಸೋಲು!

    – ಆಸೀಸ್‌ ನೆಲದಲ್ಲಿ ಟೀಂ ಇಂಡಿಯಾ ಬಿಗ್‌ ಚೇಸ್‌ ಗೆಲುವು

    ಬ್ರಿಸ್ಬೇನ್:‌ ಪದೇ ಪದೇ ಕೆಣಕುತ್ತಿದ್ದ ಆಸೀಸ್‌ ತಂಡಕ್ಕೆ ಟೀಂ ಇಂಡಿಯಾ ತಕ್ಕ ಶಾಸ್ತಿ ಮಾಡಿದೆ. ಟೆಸ್ಟ್‌ ಸರಣಿಯ ಅಂತಿಮ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ಗೆಲುವು ಸಾಧಿಸಿ ಟೀಂ ಇಂಡಿಯಾ ಹೊಸ ಇತಿಹಾಸ ರಚಿಸಿದೆ.

    ಅಲ್ಲದೆ ಆಸ್ಟ್ರೇಲಿಯಾದಲ್ಲಿ 328 ರನ್‌ ಟಾರ್ಗೆಟ್‌ ಚೇಸ್‌ ಮಾಡಿ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ. ಈ ಮೂಲಕ ಈ ಟೆಸ್ಟ್‌ ಸರಣಿಯನ್ನು 2-1 ಅಂತರದಿಂದ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ 2003ರಲ್ಲಿ ಆಡಿಲೇಡ್‌ ಟೆಸ್ಟ್‌ನಲ್ಲಿ 233 ರನ್‌ ಚೇಸ್‌ ಮಾಡಿದ್ದೇ ಇದುವರೆಗಿನ ದಾಖಲೆಯಾಗಿತ್ತು.

    ಗಾಬಾದಲ್ಲಿ ಟೀಂ ಇಂಡಿಯಾ ಮೊದಲ ಗೆಲುವು: ಭಾರತ ತಂಡ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಇದೇ ಮೊದಲ ಬಾರಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಆಡಿದ್ದ 6 ಪಂದ್ಯಗಳಲ್ಲಿ 5ನ್ನು ಸೋತಿದ್ದರೆ, 1 ಪಂದ್ಯ ಡ್ರಾ ಆಗಿತ್ತು.

    ರಿಷಭ್ ಪಂತ್‌ ಮ್ಯಾನ್‌ ಆಫ್‌ ದಿ ಮ್ಯಾಚ್:‌ 2ನೇ ಇನ್ನಿಂಗ್ಸ್‌ನಲ್ಲಿ ಅಜೇಯ 89 ರನ್‌ ಗಳಿಸಿದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಮೊದಲ ಇನ್ನಿಂಗ್ಸ್‌ನಲ್ಲೂ ಕೂಡಾ ಪಂತ್‌ 23 ರನ್‌ ಗಳಿಸಿದ್ದರು. ‌

    ಗಾಬಾದಲ್ಲಿ ಮೊದಲ 300 ಪ್ಲಸ್‌ ಚೇಸ್:‌ ಇದೇ ಮೊದಲ ಬಾರಿಗೆ ಗಾಬಾ ಕ್ರೀಡಾಂಗಣದಲ್ಲಿ 300ಕ್ಕೂ ಹೆಚ್ಚು ರನ್‌ ಚೇಸ್‌ ಮಾಡಿ ಗೆದ್ದ ಮೊದಲ ತಂಡ ಎಂಬ ಕೀರ್ತಿಗೆ ಟೀಂ ಇಂಡಿಯಾ ಪಾತ್ರವಾಗಿದೆ. ಇದಕ್ಕೂ ಮುನ್ನ 1951ರಲ್ಲಿ ಆಸ್ಟ್ರೇಲಿಯಾ ಇದೇ ಕ್ರೀಡಾಂಗಣದಲ್ಲಿ 236 ರನ್‌ ಟಾರ್ಗೆಟ್‌ ರೀಚ್‌ ಮಾಡಿದ್ದೇ ಇದುವರೆಗಿನ ದಾಖಲೆಯಾಗಿತ್ತು.

    3 ದಶಕದ ಬಳಿಕ ಆಸೀಸ್‌ಗೆ ಸೋಲಿನ ಕಹಿ!: ಆತಿಥೇಯ ಆಸ್ಟ್ರೇಲಿಯಾ 32 ವರ್ಷಗಳ ಬಳಿಕ ಬ್ರಿಸ್ಬೇನ್‌ನಲ್ಲಿ ಮೊದಲ ಕಹಿ ಉಂಡಿದೆ. 1988ರಲ್ಲಿ ವೆಸ್ಟ್‌ ಇಂಡೀಸ್‌ ತಂಡ ಬ್ರಿಸ್ಬೇನ್‌ನಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳಿಂದ ಪರಾಭವಗೊಳಿಸಿತ್ತು. 1988ರ ಬಳಿಕ ಆಸ್ಟ್ರೇಲಿಯಾ 31 ಪಂದ್ಯಗಳನ್ನು ಆಡಿತ್ತು. ಇದರಲ್ಲಿ 24 ಪಂದ್ಯಗಳನ್ನು ಗೆದ್ದು, 7 ಪಂದ್ಯಗಳನ್ನು ಡ್ರಾಗೊಳಿಸಿತ್ತು.

    16ರಲ್ಲಿ 10 ಬಾರಿ ಭಾರತದ ಮೇಲುಗೈ: 1996ರ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್‌ ಸರಣಿ ನಡೆಯುತ್ತಿದೆ. ಒಟ್ಟು 16 ಬಾರಿ ನಡೆದ ಸರಣಿಯಲ್ಲಿ ಭಾರತ ಇದುವರೆಗೆ 10 ಬಾರಿ ಗೆದ್ದಿದೆ ಅಥವಾ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಆದರೆ ಆಸ್ಟ್ರೇಲಿಯಾ ಕೇವಲ 5 ಬಾರಿ ಮಾತ್ರ ಟ್ರೋಫಿ ತನ್ನದಾಗಿಸಿಕೊಂಡಿದೆ.

    ಈ ಪಂದ್ಯದಲ್ಲಿ ಏನಾಯ್ತು?: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸೀಸ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರ ನೀಡಿದ ಟೀಂ ಇಂಡಿಯಾ 336 ರನ್‌ಗಳಿಗೆ ಆಲೌಟ್‌ ಆಗಿ ಮೊದಲ ಇನ್ನಿಂಗ್ಸ್‌ ಅಂತ್ಯಗೊಳಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ 294 ರನ್‌ ಗಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ ತಂಡಕ್ಕೆ 33 ರನ್‌ಗಳ ಮುನ್ನಡೆ ಸಿಕ್ಕಿತ್ತು. ಈ ಮೂಲಕ ಭಾರತಕ್ಕೆ 328 ರನ್‌ ಟಾರ್ಗೆಟ್‌ ನೀಡಿತು. ಚೇಸ್‌ ಆರಂಭಿಸಿದ ಟೀಂ ಇಂಡಿಯಾ 7 ವಿಕೆಟ್‌ ನಷ್ಟಕ್ಕೆ 329 ರನ್‌ ಗಳಿಸಿ ಗೆಲುವು ಸಾಧಿಸಿತು.

    18 ರನ್‌ಗೆ ಮೊದಲ ವಿಕೆಟ್‌ ಬಿತ್ತು!: 5ನೇ ದಿನ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಎಂಬಲ್ಲಿಂದ ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಗೆ 9ನೇ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್‌ ಮೊದಲ ಆಘಾತ ನೀಡಿದರು. ಆಗ ತಂಡದ ಮೊತ್ತ 18. 7 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ವಿಕೆಟ್‌ ಕೀಪರ್‌ ಟಿಮ್‌ ಪೇನ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

    ಇದಾದ ಬಳಿಕ ಶುಭ್‌ಮನ್‌ ಗಿಲ್‌ ಹಾಗೂ ಚೇತೇಶ್ವರ್‌ ಪೂಜಾರ 2ನೇ ವಿಕೆಟ್‌ಗೆ 114 ರನ್‌ಗಳ ಜೊತೆಯಾಟ ನೀಡಿದರು. 146 ಎಸೆತಗಳಲ್ಲಿ 91 ರನ್‌ ಗಳಿಸಿದ್ದ ಗಿಲ್‌ ಶತಕ ವಂಚಿತರಾದರು. ಇದು ಗಿಲ್‌ ಟೆಸ್ಟ್‌ ಜೀವನದ ಬೆಸ್ಟ್‌ ಸ್ಕೋರ್‌ ಹಾಗೂ 2ನೇ ಅರ್ಧ ಶತಕವಾಗಿತ್ತು.

  • ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ಜಯ

    ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಸರಣಿ ಜಯ

    ಬ್ರಿಸ್ಬೇನ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ರಿಷಬ್ ಪಂತ್, ಚೇತೇಶ್ವರ್ ಪೂಜಾರ, ಶುಬ್‍ಮಾನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಮೋಘ ಆಟದಿಂದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ನಲ್ಲಿ ನೀಡಿದ್ದ 336 ರನ್ ಗುರಿಯನ್ನು 7 ವಿಕೆಟ್ ಕಳೆದುಕೊಂಡು ಭಾರತ ಗೆಲುವಿನ ನಗೆ ಬೀರಿತು.

    ಶುಬ್‍ಮಾನ್ ಗಿಲ್ 91, ರಿಷಬ್ ಪಂತ್ ಅಜೇಯ 89, ಚೇತೇಶ್ವರ್ ಪೂಜಾರ 56 ಮತ್ತು ವಾಷಿಂಗ್ಟನ್ ಸುಂದರ್ ಅಜೇಯ 22 ರನ್ ಗಳಿಸಿ ಭಾರತಕ್ಕೆ ಗೆಲುವಿನ ಕಾಣಿಕೆ ನೀಡಿದರು.

    ಬ್ರಿಸ್ಬೇನ್‍ನಲ್ಲಿ ಅತ್ಯಧಿಕ ಟಾರ್ಗೆಟ್ ಚೇಸ್ ಮಾಡಿ ಗೆಲುವು ಸಾಧಿಸಿದ ಕೀರ್ತಿಯೂ ಭಾರತದ ಪಾಲಾಯಿತು.

  • 5 ವಿಕೆಟ್ ಪಡೆದು ಮಿಂಚಿದ ಸಿರಾಜ್- ಭಾರತಕ್ಕೆ 328 ರನ್‍ಗಳ ಗುರಿ

    5 ವಿಕೆಟ್ ಪಡೆದು ಮಿಂಚಿದ ಸಿರಾಜ್- ಭಾರತಕ್ಕೆ 328 ರನ್‍ಗಳ ಗುರಿ

    ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯಾಟದ ಎರಡನೇ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಕಿತ್ತು ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹಾಕಿದ್ದು, ಭಾರತಕ್ಕೆ 328 ರನ್‍ಗಳ ಗುರಿಯನ್ನು ಆಸೀಸ್ ನೀಡಿದೆ.

    ಭಾರತದ ಪರ ತನ್ನ ಮೊದಲ ಸರಣಿಯನ್ನು ಆಡಲು ಆಸ್ಟ್ರೇಲಿಯಾಗೆ ಬಂದಿದ್ದ ಸಿರಾಜ್‍ಗೆ ಆಸ್ಟ್ರೇಲಿಯಾ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿ ಅವಮಾನಿಸಿದ್ದರು. ಆದರೆ ಅದನ್ನೆಲ್ಲ ಬದಿಗೊತ್ತಿ ತನ್ನ ಆಟದ ಮೂಲಕ ಇದೀಗ ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಮತ್ತು ಅಲ್ಲಿನ ಪ್ರೇಕ್ಷಕರಿಗೆ ದಿಟ್ಟ ಉತ್ತರ ನೀಡಿದ್ದಾರೆ.

    ಕೊನೆಯ ಟೆಸ್ಟ್ ಪಂದ್ಯದ 4ನೇ ದಿನ ಬ್ಯಾಟಿಂಗ್ ಮುಂದುವರೆಸಿದ ಆಸ್ಟ್ರೇಲಿಯಾ ಭಾರತದ ನಿಖರ ದಾಳಿಯ ಎದುರು 75.5 ಓವರ್‍ಗಳಲ್ಲಿ 294 ರನ್‍ಗಳಿಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಸಿರಾಜ್ 73ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಸಿರಾಜ್ ತನ್ನ ಜೀವನ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದಾರೆ. ಇವರಿಗೆ ಉತ್ತಮ ಸಾತ್ ನೀಡಿದ ಶಾರ್ದೂಲ್ ಠಾಕೂರ್ 61ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಇನ್ನೊಂದು ವಿಕೆಟ್ ಡೆಬ್ಯು ಪ್ಲೇಯರ್ ವಾಷಿಂಗ್ಟನ್ ಸುಂದರ್ ಪಾಲಾಯಿತು.

    ಗೆಲ್ಲಲು 328 ರನ್‍ಗಳ ಗುರಿ ಪಡದ ಭಾರತ ಬ್ಯಾಟಿಂಗ್ ಆರಂಭಿಸಿದಾಗ ಮಳೆ ಅಡ್ಡಿ ಪಡಿಸಿದೆ. ದಿನದಾಟದ ಮುಕ್ತಾಯದ ವೇಳೆಗೆ ಭಾರತದ ಪರ ರೋಹಿತ್ ಶರ್ಮಾ 4ರನ್ (6 ಎಸೆತ) ಮತ್ತು ಶುಭಮನ್ ಗಿಲ್ 5 ಎಸೆತ ಎದುರಿಸಿ ಯಾವುದೇ ರನ್‍ಗಳಿಸದೆ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೂ ಭಾರತಕ್ಕೆ ಗೆಲ್ಲಲು 324 ರನ್‍ಗಳ ಅವಶ್ಯಕತೆ ಇದ್ದು ಐದನೇ ದಿನದಾಟದಲ್ಲೂ ಮಳೆಯ ಅಡಚಣೆಯ ಭೀತಿ ಕಾಡುತ್ತಿದೆ.

  • ಶಾರ್ದೂಲ್, ಸುಂದರ್ ದಾಖಲೆಯ ಆಟಕ್ಕೆ ಆಸ್ಟ್ರೇಲಿಯಾ ಸುಸ್ತು

    ಶಾರ್ದೂಲ್, ಸುಂದರ್ ದಾಖಲೆಯ ಆಟಕ್ಕೆ ಆಸ್ಟ್ರೇಲಿಯಾ ಸುಸ್ತು

    – 7ನೇ ವಿಕೆಟ್‍ಗೆ 123 ರನ್‍ಗಳ ಜೊತೆಯಾಟ
    – 54 ರನ್‍ಗಳ ಮುನ್ನಡೆಯಲ್ಲಿ ಆಸ್ಟ್ರೇಲಿಯಾ

    ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಅಂತಿಮ ಟೆಸ್ಟ್ ಪಂದ್ಯಾಟದಲ್ಲಿ ಭಾರತದ ಬಾಲಂಗೊಚಿಗಳ ಉತ್ತಮ ಬ್ಯಾಟಿಂಗ್‍ನಿಂದಾಗಿ ಆಸ್ಟ್ರೇಲಿಯಾದ ವಿರುದ್ಧ ದಿಟ್ಟ ಹೋರಾಟ ನಡೆಸಿದೆ. ಭಾರತದ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಏಳನೇ ವಿಕೆಟ್‍ಗೆ 123 ರನ್‍ಗಳ ಜೊತೆಯಾಟವಾಡಿ ನೂತನ ದಾಖಲೆಯೊಂದನ್ನು ಬರೆದು ತಂಡವನ್ನು ಪಾರು ಮಾಡಿದ್ದಾರೆ.

    ಮೊದಲ ಪಂದ್ಯವಾಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಸಲ ಬ್ಯಾಟಿಂಗ್ ಅವಕಾಶ ಪಡೆದಿರುವ ಶಾರ್ದೂಲ್ ಭಾರತದ ಬ್ಯಾಟಿಂಗ್ ಕುಸಿತ ಕಂಡಾಗ ತಂಡಕ್ಕೆ ಆಸರೆಯಾಗಿದ್ದಾರೆ. 186 ರನ್‍ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಶತಕದ ಜೊತೆಯಾಟವಾಡಿದ ಈ ಜೋಡಿ ಚೇತರಿಕೆ ನೀಡಿತು. ಈ ಇಬ್ಬರು ಯುವ ಆಟಗಾರರು ಚೊಚ್ಚಲ ಅರ್ಧಶತಕ ಬಾರಿಸಿ ಸಂಭ್ರಮಿಸಿದ್ದಾರೆ.

    1991ರಲ್ಲಿ ಭಾರತದ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಏಳನೇ ವಿಕೆಟ್‍ಗೆ 58 ರನ್ ಜೊತೆಯಾಟವಾಡಿದ್ದರು. ಈಗ ಶಾರ್ದೂಲ್, ಸುಂದರ್ 217 ಎಸೆತಗಳಲ್ಲಿ 123 ರನ್‍ಗಳ ಜೊತೆಯಾಟವಾಡಿ 30 ವರ್ಷಗಳ ನಂತರ ಹೊಸ ದಾಖಲೆ ನಿರ್ಮಿಸಿದ್ದಾರೆ.

    ಮೂರನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ 62 ರನ್ (144 ಎಸೆತ 7 ಬೌಂಡರಿ ಮತ್ತು 1 ಸಿಕ್ಸರ್) ಸಿಡಿಸಿದರೆ, ಶಾರ್ದೂಲ್ ಠಾಕೂರ್ 67 ರನ್ (115 ಎಸೆತ 9 ಬೌಂಡರಿ ಮತ್ತು 2 ಸಿಕ್ಸರ್) ಬಾರಿಸಿ ತಂಡದ ಮೊತ್ತ 300ರ ಗಡಿ ದಾಟುವಂತೆ ಮಾಡಿದರು.

    2ನೇ ದಿನದಾಟದ ಅಂತ್ಯಕ್ಕೆ 62 ರನ್‍ಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ಮೂರನೇ ದಿನದಾಟದಲ್ಲಿ 111.4 ಓವರ್‍ಗಳಲ್ಲಿ 336 ರನ್‍ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‍ನಲ್ಲಿ 33ರನ್ ಹಿನ್ನಡೆ ಅನುಭವಿಸಿದೆ.

    33 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್‍ಗಳಿಸಿದೆ. ಇದರೊಂದಿಗೆ ಮುನ್ನಡೆಯನ್ನು 54ರನ್‍ಗಳಿಗೆ ಏರಿಸಿದೆ 20 ರನ್(22 ಎಸೆತ 4 ಬೌಂಡರಿ) ಬಾರಿಸಿರುವ ಡೇವಿಡ್ ವಾರ್ನರ್ ಮತ್ತು 1 ರನ್ (14 ಎಸೆತ) ಗಳಿಸಿರುವ ಮಾರ್ನಸ್ ಹ್ಯಾರಿಸ್ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.