Tag: ಬ್ರಿಟನ್ ಕೊರೊನಾ

  • ಜನರ ಬೇಜವಾಬ್ದಾರಿಯಿಂದಾಗಿ ಕೊವಿಡ್ ಎರಡನೇ ಅಲೆ – ವೈರಾಣು ತಜ್ಞ ಡಾ. ರವಿ

    ಜನರ ಬೇಜವಾಬ್ದಾರಿಯಿಂದಾಗಿ ಕೊವಿಡ್ ಎರಡನೇ ಅಲೆ – ವೈರಾಣು ತಜ್ಞ ಡಾ. ರವಿ

    ಬೆಂಗಳೂರು: ಜನರ ಬೇಜವಾಬ್ದಾರಿಯಿಂದಾಗಿ ಭಾರತದಲ್ಲಿ ಕೊರೊನಾ ಎರಡನೇ ಅಲೆ ಹಬ್ಬುವ ಸಾಧ್ಯತೆ ಹೆಚ್ಚು ಎಂದು ನಿಮ್ಹಾನ್ಸ್‌ ನಿವೃತ್ತ ವೈರಾಣು ತಜ್ಞ ಹಾಗೂ ರಾಜ್ಯ ಕೊವಿಡ್ ತಾಂತ್ರಿಕ ಸಮಿತಿ ಸದಸ್ಯ ಡಾ. ರವಿ ಅಭಿಪ್ರಾಯಪಟ್ಟರು.

    ಪ್ರೆಸ್ ಇನ್ಫ್‌ರ್ಮೇಷನ್‌ ಬ್ಯುರೊ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘ `ಕೊವಿಡ್‍ನ ವಿಭಿನ್ನ ಆಯಾಮ’ಗಳ ಕುರಿತು ಗುರುವಾರ ಜಂಟಿಯಾಗಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

    ಯುರೋಪ್‍ನ ಹಲವು ದೇಶಗಳು ಹಾಗೂ ಅಮೆರಿಕದ ಸನ್ನಿವೇಶವನ್ನು ಗಮನಿಸಿದಾಗ ಮೊದಲ ಅಲೆ ಮುಕ್ತಾಯಗೊಂಡ ನಾಲ್ಕೈದು ತಿಂಗಳ ನಂತರ ಎರಡನೇ ಅಲೆ ಶುರುವಾಗಿದೆ. ಇಲ್ಲಿಯೂ ಹಾಗೆ ಆಗುವ ಸಂಭವವಿದೆ. ಕೊವಿಡ್ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಜನ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ, ಸಾನಿಟೈಸರ್ ಬಳಸದೇ ಇದ್ದಲ್ಲಿ ಈ ಸಾಧ್ಯತೆ ಹೆಚ್ಚು. ಮಾರುಕಟ್ಟೆಗೆ ಹೋದಾಗ, ಅಥವಾ ಸಮಾರಂಭಗಳಿಗೆ ಹೋದಾಗ ಅಂತರ ಕಾಯ್ದುಕೊಳ್ಳಬೇಕು. ಕೊವಿಡ್ ಮುಗಿಯಿತು ಎಂದು ಮದುವೆಯಂತಹ ಸಮಾರಂಭಗಳಿಗೆ ಹೆಚ್ಚು ಜನ ಸೇರುವುದು ತಪ್ಪು. ಅಲ್ಲಿ ಒಂದಿಬ್ಬರು ರೋಗಲಕ್ಷಣ ಇಲ್ಲದೇ ಕೊವಿಡ್ ಸೋಂಕಿಗೆ ಒಳಗಾಗಿರಬಹುದು. ಅಂತಹವರಿಂದ ವೈರಸ್ ಹಬ್ಬುತ್ತದೆ. ಹಾಗೆಯೇ ಹಳೆಯ ವೈರಸ್ ತನ್ನ ರೂಪ ಬದಲಿಸಿಕೊಂಡೂ ಸೋಂಕುಂಟುಮಾಡಬಹುದು ಎಂದು ಅವರು ಎಚ್ಚರಿಸಿದರು.

    ಬ್ರಿಟನ್‍ನಲ್ಲಿ ಈಗ ರೂಪ ಬದಲಿಸಿಕೊಂಡು ಹಬ್ಬುತ್ತಿರುವ ವೈರಸ್ ರಾಜ್ಯದಲ್ಲೂ ಕಾಣಿಸಿಕೊಂಡಿದೆ. ಸದ್ಯಕ್ಕೆ ಬ್ರಿಟನ್‍ನಿಂದ ಮರಳಿದವರಲ್ಲಿ ಮಾತ್ರ ಈ ವೈರಸ್ ಇರುವುದರಿಂದ ಭಯಪಡುವ ಅಗತ್ಯವಿಲ್ಲ. ಬ್ರಿಟನ್‍ನಲ್ಲಿ ಈ ಮಾರ್ಪಟ್ಟಿರುವ ವೈರಸ್ ವೇಗವಾಗಿ ಹಬ್ಬುತಿದ್ದರೂ ಅದರಿಂದ ಸಾವಿಗೀಡಾದವರ ಪ್ರಮಾಣವೂ ಕಡಿಮೆಯಿದೆ. ವೇಗವಾಗಿ ಹಬ್ಬುವ ವೈರಸ್‍ಗಳು ಕಡಿಮೆ ಅಪಾಯಕಾರಿಯಾಗಿರುತ್ತವೆ ಎಂದೂ ಅವರು ತಿಳಿಸಿದರು.

    `ಕೊವಿಡ್-19′ ಗೆ ಸಿದ್ಧಪಡಿಸಿರುವ ಲಸಿಕೆ ರೂಪಾಂತರಗೊಂಡಿರುವ ವೈರಸ್‍ಗಳ ಸೋಂಕನ್ನು ತಡೆಯಬಲ್ಲದು. ಆ ಬಗ್ಗೆ ಭಯ ಬೇಡ. ಹಾಗೆಯೇ ಇದು ಜೈವಿಕ ಅಸ್ತ್ರವಾಗಿ ಸಿದ್ಧಪಡಿಸಿರುವ ಕೃತಕ ವೈರಸ್ ಅಲ್ಲ. ಬಾವಲಿಯಿಂದ ಮನುಷ್ಯರಿಗೆ ಹಬ್ಬಿರುವ ವೈರಸ್ ಎಂದು ಡಾ. ರವಿ ಸ್ಪಷ್ಟಪಡಿಸಿದರು.

    ಪರಿಸರ ನಾಶ ಹಾಗೂ ಮಾನವನ ದುರಾಸೆಯಿಂದಾಗಿ ಪ್ರಾಣಿಜನ್ಯ ವೈರಸ್‍ಗಳು ಮನುಷ್ಯರಿಗೆ ಹಬ್ಬುತ್ತವೆ. 15 ವರ್ಷಗಳ ಹಿಂದೆ ಆಗ್ನೇಯ ಏಷ್ಯಾ ದೇಶಗಳಲ್ಲಿ ಕಾಣಿಸಿಕೊಂಡ ಸಾರ್ಸ್- ಕೊವಿಡ್ ವೈರಸ್ ಬಾವಲಿಯಿಂದ ಇರುವೆ ತಿನ್ನುವ ಒಂದು ಪ್ರಬೇಧದ ಸಸ್ತನಿಯ ಮೂಲಕ ಮನುಷ್ಯರಿಗೆ ಹಬ್ಬಿತ್ತು. ಎಂಟು ವರ್ಷಗಳ ಹಿಂದೆ ಮಧ್ಯಪ್ರಾಚ್ಯದಲ್ಲಿ ಕಾಣಿಸಿಕೊಂಡಿದ್ದ `ಮರ್ಸ್’ ವೈರಸ್ ಬಾವಲಿಯಿಂದ ಒಂಟೆಗೆ ಹಬ್ಬಿ ಆ ಮೂಲಕ ಮನುಷ್ಯರಲ್ಲಿ ಸೋಂಕುಂಟುಮಾಡಿತ್ತು. ಮುಂದೆಯೂ ಈ ಬಗೆಯ ವೈರಸ್‍ಗಳು ಮನುಷ್ಯರಲ್ಲಿ ಸೋಂಕುಂಟು ಮಾಡುತ್ತವೆ. ಕಾಡು ಪ್ರಾಣಿಗಳನ್ನು ತಿನ್ನುವ ಚೀನಾ, ಕಾಂಬೋಡಿಯಾ, ವಿಯೆಟ್ನಾಂ ದೇಶಗಳ `ವೆಟ್ ಮಾರ್ಕೆಟ್’ ಅಥವಾ ದಕ್ಷಿಣ ಅಮೆರಿಕ ಖಂಡದ ಅಮೆಜಾನ್ ಅರಣ್ಯ ಪ್ರದೇಶದ ದೇಶಗಳು ಹಾಗೂ ಆಫ್ರಿಕಾದಿಂದ ಇಂತಹ ವೈರಸ್‍ಗಳು ಹಬ್ಬುವ ಸಾಧ್ಯತೆಯಿದೆ ಎಂದು ಅವರು ವಿವರಿಸಿದರು.

    ಕೊವಿಡ್ ನಂತರದ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಿದ ಎಂ. ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಕೆ. ಸುಜನಿ, ಮಧುಮೇಹ ಹಾಗೂ ರಕ್ತದೊತ್ತಡ ಇರುವ ಗರ್ಭಿಣಿಯರಲ್ಲಿ ಕೊವಿಡ್ ಸೋಂಕು ಹೆಚ್ಚು ತೀವ್ರವಾಗಿರುತ್ತದೆ ಎಂದರು. ಸಾಮಾನ್ಯವಾಗಿ ಕೊವಿಡ್ ಸೋಂಕು 50 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಗರ್ಭಿಣಿಯರು ಈ ವಯೋಮಾನದಲ್ಲಿ ಬರದೇ ಇರುವುದರಿಂದ ತಮ್ಮ ರೋಗಿಗಳಲ್ಲಿ ಅಂತಹ ಸಂಕೀರ್ಣ ಸಮಸ್ಯೆಗಳು ಈವರೆಗೆ ಕಂಡುಬಂದಿಲ್ಲ ಎಂದು ತಿಳಿಸಿದರು.

    ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಸ್ವಾಗತಿಸಿದರು. ಪಿಐಬಿ ಅಧಿಕಾರಿ ಕೆ. ವೈ. ಜಯಂತಿ, ಪತ್ರಕರ್ತೆಯರ ಸಂಘದ ಕಾರ್ಯದರ್ಶಿ ಮಾಲತಿ ಭಟ್, ಹಿರಿಯ ಪತ್ರಕರ್ತೆಯರಾದ ಎಂ.ಪಿ. ಸುಶೀಲಾ, ಕೆ. ಎಚ್. ಸಾವಿತ್ರಿ, ಆಯೇಷಾ ಖಾನಂ, ಅಫ್ಸಾ ಯಾಸ್ಮೀನ್, ಸುನೀತಾ ರಾವ್, ವಾಣಿಶ್ರೀ ಪತ್ರಿ, ಭಾರತಿ ಸಾಮಗ, ಚಿತ್ರಾ ಫಾಲ್ಗುಣಿ ಮತ್ತಿತರರು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

  • ಬೆಂಗಳೂರಿನ ಮೂವರು ಸೇರಿ ದೇಶದ 7 ಮಂದಿಗೆ ಬ್ರಿಟನ್‌ ಸೋಂಕು

    ಬೆಂಗಳೂರಿನ ಮೂವರು ಸೇರಿ ದೇಶದ 7 ಮಂದಿಗೆ ಬ್ರಿಟನ್‌ ಸೋಂಕು

    – ದಕ್ಷಿಣ ಭಾರತದ ರಾಜ್ಯಗಳ ವ್ಯಕ್ತಿಗಳಲ್ಲಿ ಕೊರೊನಾ
    – ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಐಸೋಲೇಟ್‌
    – ಮೃತರ ಪೈಕಿ ಶೇ.70ರಷ್ಟು ಪುರುಷ ಸೋಂಕಿತರು ಬಲಿ

    ನವದೆಹಲಿ: ಹೊಸ ವರ್ಷದ ಕೊನೆಯಲ್ಲಿ ಮತ್ತೊಂದು ಕಹಿಸುದ್ದಿ. ಬ್ರಿಟನ್‍ನಲ್ಲಿ ಉದ್ಭವಿಸಿ ಇಡೀ ಜಗತ್ತನ್ನು ಕಂಗೆಡಿಸಿರುವ ಹೊಸ ಬಗೆಯ ಕೊರೊನಾ ಇದೀಗ ಭಾರತಕ್ಕೂ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ.

    ಇತ್ತೀಚಿಗೆ ಬ್ರಿಟನ್‍ನಿಂದ ಭಾರತಕ್ಕೆ ವಾಪಸ್ಸಾದ 7 ಮಂದಿಯಲ್ಲಿ ಹೊಸ ವೈರಸ್ ಕಾಣಿಸಿಕೊಂಡಿದೆ. ಇದರಲ್ಲಿ ಬೆಂಗಳೂರಿನ ಮೂವರು, ಹೈದರಾಬಾದಿನ ಇಬ್ಬರು, ಆಂಧ್ರಪ್ರದೇಶದ  ರಾಜಮಹೇಂದ್ರವರಂನ ಒಬ್ಬರು, ಹಾಗೂ ಚೆನ್ನೈನ ಒಬ್ಬರಲ್ಲಿ ಹೊಸ ವೈರಸ್ ಪತ್ತೆಯಾಗಿದೆ.

    ಎಲ್ಲಾ ಪ್ರಕರಣಗಳು ವರದಿ ಆಗಿರುವುದು ದಕ್ಷಿಣ ಭಾರತದಲ್ಲಿಯೇ ಎನ್ನುವುದು ಗಮನಿಸಬೇಕಾದ ವಿಚಾರ. ಅದರಲ್ಲೂ ಕರ್ನಾಟಕದ್ದೇ ಸಿಂಹಪಾಲು. ಎಲ್ಲರನ್ನು ಆಯಾಯಾ ರಾಜ್ಯಗಳ ಕೊರೊನಾ ಕೇರ್ ಸೆಂಟರ್‌ಗಳಲ್ಲಿ ಐಸೊಲೇಟ್ ಮಾಡಲಾಗಿದೆ. ಅವರ ಸಂಪರ್ಕದಲ್ಲಿದ್ದ ಕುಟುಂಬಸ್ಥರು, ಆಪ್ತರು, ಅಕ್ಕಪಕ್ಕದ ಮನೆಯವರನ್ನು ಟ್ರೇಸ್ ಮಾಡಿ ಪರೀಕ್ಷೆ ನಡೆಸಲಾಗುತ್ತಿದ್ದು ಕ್ವಾರಂಟೈನ್‌ ಮಾಡಲಾಗಿದೆ.

    ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆ ನೀಡಿದೆ. ಹೊಸ ತಳಿಯ ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಗುಣಮಟ್ಟದ ಚಿಕಿತ್ಸೆ ಪಡೆದಲ್ಲಿ ಮಾತ್ರ ಅಪಾಯದಿಂದ ಪಾರಾಗಲು ಸಾಧ್ಯ ಎಂದು ತಿಳಿಸಿದೆ.

    ಹೊಸ ತಳಿಯನ್ನು ಈಗಿನ ಲಸಿಕೆಯಿಂದ ನಿಯಂತ್ರಿಸಬಹುದು. ಆದರೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ನಿಯಂತ್ರಣ ಸಾಧ್ಯ ಅಂತ ಎಚ್ಚರಿಕೆ ಕೊಟ್ಟಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಿದರೆ ಸೋಂಕು ಮತ್ತಷ್ಟು ಹೆಚ್ಚಬಹುದು. ಹೀಗಾಗಿ ರಾಜ್ಯ ಸರ್ಕಾರಗಳು ರಾತ್ರಿ ಕರ್ಫ್ಯೂ ಹಾಕಿಕೊಳ್ಳಬಹುದು ಎಂದು ಕೇಂದ್ರ ಕೋವಿಡ್ ಟಾಸ್ಕ್ ಫೋರ್ಸ್ ಸೂಚನೆ ನೀಡಿದೆ.

    ನೂತನ ತಳಿಯ ವೈರಸ್ ಮೇಲೆ ಹೆಚ್ಚು ಪ್ರತಿರೋಧಕ ಶಕ್ತಿ ಹಾಕಬಾರದು. ಹೆಚ್ಚು ಒತ್ತಡ ಹಾಕಿದಂತೆಲ್ಲಾ ವೈರಸ್ ಇನ್ನಷ್ಟು ರೂಪಾಂತರ ಹೊಂದುವ ಸಾಧ್ಯತೆ ಇದೆ ಎಂದು ಐಸಿಎಂಆರ್ ತಿಳಿಸಿದೆ.

    ಡಿಸೆಂಬರ್ 9 ರಿಂದ 22 ವರೆಗೂ ವಾಪಸ್ ಆದ ಪ್ರಯಾಣಿಕರಿಗೆ ಕೊರೊನಾ ರೋಗದ ಗುಣಲಕ್ಷಣಗಳು ಕಂಡು ಬಂದಿದ್ದು, ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಕೇಂದ್ರ ಆರೋಗ್ಯ ಇಲಾಖೆಯು ಎಲ್ಲ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ವೈರಸ್‌ ವಂಶವಾಹಿ ರಚನೆ( ಜಿನೋಮ್‌)ಯ ಪರೀಕ್ಷೆ ಮಾಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

    ದೇಶಾದ್ಯಂತ ಹತ್ತು ಲ್ಯಾಬ್‍ಗಳನ್ನು ಜೀನೋಮ್ ಪರೀಕ್ಷೆಗೆಂದು ನಿಯೋಜನೆ ಮಾಡಲಾಗಿದ್ದು, ಈವರೆಗೂ 5 ಸಾವಿರ ಜನರಿಗೆ ಜೀನೋಮ್ ಪರೀಕ್ಷೆ ಮಾಡಲಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 2.7 ಲಕ್ಷಗಳಿಗಿಂತ ಕಡಿಮೆ ಇದೆ. ಕಳೆದ ವಾರ ದೇಶದಲ್ಲಿ ಧನಾತ್ಮಕ ಪ್ರಮಾಣವು ಕೇವಲ 2.25% ಇತ್ತು. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ 55% ರಷ್ಟು ಜನ ಮರಣ ಹೊಂದಿದ್ದು, 45 ರಿಂದ 60 ವಯಸ್ಸಿನವರಲ್ಲಿ 33% ಮರಣ ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಈವರೆಗೂ 70% ಪುರುಷರು ಮತ್ತು 30% ಮಹಿಳೆಯರು ಕೊರೊನಾದಿಂದ ಮರಣ ಹೊಂದಿದ್ದಾರೆ. ಮೊದಲಿಗೆ ಹೋಲಿಸಿದರೆ ಈಗ ಮರಣ ಹೊಂದುತ್ತಿರುವ ಸಂಖ್ಯೆ ಕಡಿಮೆಯಾಗಿದೆ.

    ರೂಪಾಂತರಿ ಕೊರೊನಾ ವೈರಸ್ ಬಗ್ಗೆ ಆರಂಭದಲ್ಲಿಯೇ ಎಚ್ಚೆತ್ತುಕೊಂಡರೆ ಮಾತ್ರ ಅಪಾಯದಿಂದ ಪಾರಾಗಬಹುದು. ಇಲ್ಲದಿದ್ದರೆ ರೂಪಾಂತರಿ ವೈರಸ್ ದೇಶಕ್ಕೆ ಮತ್ತೆ ಹೆಚ್ಚು ಹಾನಿ ಮಾಡಲಿದೆ. ರೂಪಾಂತರಿ ವೈರಸ್ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ತಜ್ಞರಿಂದ ಚಿಕಿತ್ಸೆ ಪಡೆಯಿರಿ. ಇಲ್ಲದಿದ್ದರೆ ಬ್ರಿಟನ್ ಗತಿ ಭಾರತಕ್ಕೂ ಬರಬಹುದು. ಈಗಾಗಲೇ ಬ್ರಿಟನ್ ನಲ್ಲಿ ಪ್ರತಿನಿತ್ಯ 40 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದೆ. ಬ್ರಿಟನ್ ಜನ ಸಂಖ್ಯೆ ಹೋಲಿಸಿದ್ರೆ 40 ಸಾವಿರ ಪ್ರಕರಣಗಳು ಅಧಿಕವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಜುಲೈ – ಆಗಸ್ಟ್‌ ವೇಳೆಗೆ ಭಾರತದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುವ ಸುಳಿವು ಸಿಕ್ಕಿದ್ದು, ವ್ಯಾಕ್ಸಿನ್ ಬರುವರೆಗೂ ಎಲ್ಲರೂ ಎಚ್ಚರಿಕೆಯಿಂದ ಇರಲೇಬೇಕು. ವೈರಸ್‍ನಿಂದ ಪಾರಾಗಲು ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಮತ್ತು ದೈಹಿಕ ಅಂತರ ಕಾಯ್ದುಕೊಳ್ಳಬೇಕು ಅಲ್ಲದೇ ನಿರಂತರವಾಗಿ ಆಗಾಗ ಕೈ ತೊಳೆದುಕೊಳ್ಳಬೇಕು. ಇದರ ಜೊತೆಯಲ್ಲಿ ಕೊರೊನಾ ಹಳೆಯ ನಿಯಮಗಳನ್ನು ಪಾಲಿಸಿ ಎಂದು ಸೂಚಿಸಿದೆ.

    ಈಗಾಗಲೇ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸೋಂಕು ವಿಜೃಂಭಿಸಿದ್ದು, ಲಂಡನ್ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಆಮ್ಲಜನಕ ಕೊರತೆ ಎದುರಾಗಿದೆ. ಇದುವರೆಗೂ ಬ್ರಿಟನ್‍ನಿಂದ ಭಾರತಕ್ಕೆ 33 ಸಾವಿರ ಮಂದಿ ಬಂದಿದ್ದಾರೆ. ಈ ಪೈಕಿ 5 ಸಾವಿರ ಮಂದಿಗೆ ಜಿನೋಮ್‌ ಪರೀಕ್ಷೆ ನಡೆಸಲಾಗಿದೆ.

  • ನಾಳೆ ʼಡಿʼ ಡೇ – ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಬ್ರಿಟನ್‌ ಸೋಂಕು ಬಂದಿದೆ?

    ನಾಳೆ ʼಡಿʼ ಡೇ – ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಬ್ರಿಟನ್‌ ಸೋಂಕು ಬಂದಿದೆ?

    ಬೆಂಗಳೂರು: ಇಡೀ ಮಾನವಕುಲಕ್ಕೆ ಸವಾಲಾಗಿರುವ ಕೊರೊನಾ ತನ್ನ ಬಣ್ಣ ಬದಲಾಯಿಸಿರೋದು ಮತ್ತಷ್ಟು ಆತಂಕ ತಂದೊಡ್ಡಿದೆ. ಭಾರತಕ್ಕೆ ಹೊಸ ರೂಪಾಂತರಿ ಕೊರೋನಾ ಕಾಲಿಟಿದ್ಯಾ ಎಂಬ ಪ್ರಶ್ನೆಗೆ ಪ್ರಶ್ನೆ, ಗೊಂದಲ, ಭಯ ಮುಂದುವರಿದಿದ್ದು ಇದಕ್ಕೆ ಇನ್ನೂ ಸಿಕ್ಕಿಲ್ಲ. ಇವತ್ತು ಕೇಂದ್ರ ಸರ್ಕಾರ ತಿಳಿಸಬಹುದು ಎನ್ನಲಾಗಿತ್ತು. ಆದರೆ ಇದು ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ.

    ಕೇಂದ್ರ ಆರೋಗ್ಯ ಇಲಾಖೆ ನಾಳೆ ಸಂಜೆ 4 ಗಂಟೆ ಸುದ್ದಿಗೋಷ್ಠಿ ನಡೆಸಲಿದ್ದು, ಹೊಸ ಬಗೆಯ ಸೋಂಕು ದೇಶದಲ್ಲಿ ಹಬ್ಬಿದ್ಯಾ ಇಲ್ವಾ ಎನ್ನುವುದನ್ನು ಬಯಲು ಮಾಡಲಿದೆ. ಈ ವಿಚಾರವನ್ನು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

    ಬ್ರಿಟನ್‍ನಿಂದ ರಾಜ್ಯಕ್ಕೆ ಆಗಮಿಸಿದ 1,217 ಮಂದಿಯಲ್ಲಿ ಒಟ್ಟು 26 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಆದರೆ ಈ ಸೋಂಕು ಬ್ರಿಟನ್ ಸೋಂಕೇ ಎಂಬ ಬಗ್ಗೆ ಇನ್ನೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸ್ಪಷ್ಟೀಕರಣ ನೀಡಿಲ್ಲ. ಎಲ್ಲಾ ರಾಜ್ಯಗಳ ಪಾಸಿಟಿವ್‌ ವರದಿಗಳು ಈಗಾಗಲೇ ಐಸಿಎಂಆರ್‌ಗೆ ಸಲ್ಲಿಕೆ ಆಗಿವೆ.

    ಬೆಂಗಳೂರಿನಲ್ಲಿ ಮಾತ್ರ, ಬ್ರಿಟನ್‍ನಿಂದ ಬಂದವರ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ ವಾರ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿದೆ. ಜೊತೆಗೆ ಮಹಾಲಕ್ಷ್ಮಿ ಲೇಔಟ್ ಸೋಂಕಿತರ ಸಂಪರ್ಕದಲ್ಲಿದ್ದ ಅವರ ತಾಯಿಗೂ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

    ಬ್ರಿಟನ್‍ನಿಂದ ಬಂದವರ ಪೈಕಿ ಭಾರತದಲ್ಲಿ 120 ಮಂದಿಗೆ ಸೋಂಕು ಬಂದಿದ್ದರೆ ಕರ್ನಾಟಕದಲ್ಲಿ 27 ಮಂದಿಗೆ ಬಂದಿದೆ. ಬೆಂಗಳೂರು 16, ಶಿವಮೊಗ್ಗ 5, ಚಿಕ್ಕಮಗಳೂರು 2, ಮೈಸೂರು 2, ಬಾಗಲಕೋಟೆಯಲ್ಲಿ ಇಬ್ಬರಿಗೆ ಬಂದಿದೆ. ಬಾಗಲಕೋಟೆಯಲ್ಲಿ ಸಂಪರ್ಕದಿಂದ ಇಬ್ಬರಿಗೆ ಬಂದಿದ್ದರೆ ಬೆಂಗಳೂರಿನಲ್ಲಿ ಒಬ್ಬರಿಗೆ ಬಂದಿದೆ.

  • ಬೆಂಗಳೂರಿನಲ್ಲಿ 2 ದಿನ ಟಫ್ ರೂಲ್ಸ್ ಜಾರಿ

    ಬೆಂಗಳೂರಿನಲ್ಲಿ 2 ದಿನ ಟಫ್ ರೂಲ್ಸ್ ಜಾರಿ

    ಬೆಂಗಳೂರು: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮಾರ್ಗಸೂಚಿ ಬರುವುದು ಫಿಕ್ಸ್ ಆಗಿದೆ. ಡಿಸೆಂಬರ್ 30 ಮತ್ತು 31ಕ್ಕೆ ಕಟ್ಟು ನಿಟ್ಟಿನ ಕ್ರಮ ಇರುತ್ತೆ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.

    ಬ್ರಿಟನ್‍ನಿಂದ ಬೆಂಗಳೂರಿಗೆ ಬಂದವರ ಪೈಕಿ 150 ಜನ ನಾಪತ್ತೆಯಾಗಿರೋದು ಒಂದುಕಡೆ ಆತಂಕ ಹೆಚ್ಚಿಸಿದೆ. ಇದರ ಮಧ್ಯೆಯೇ ಹೊಸ ವರ್ಷಕ್ಕೆ ಬೆಂಗಳೂರು ಸಜ್ಜಾಗ್ತಿದೆ. ಈಗ ಬ್ರಿಟನ್ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ಸಲುವಾಗಿ ಬೆಂಗಳೂರಿನಲ್ಲಿ 2 ದಿನ ಟಫ್ ರೂಲ್ಸ್ ಜಾರಿ ಮಾಡ್ತೇವೆ ಅಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಈಗಿನ ಕೊರೋನಾ ನಿಯಂತ್ರಣ ಒಂದು ಹಂತಕ್ಕೆ ಬರುತ್ತಿತ್ತು.  ಈ ಹೊತ್ತಲ್ಲೇ ಬ್ರಿಟನ್ ರೂಪಾಂತರ ಕೊರೊನಾ  ಆತಂಕ ಹುಟ್ಟಿಸಿದೆ. ಹೊಸ ವರ್ಷದಲ್ಲಿ ಹೆಚ್ಚು ಜನ ಸೇರುತ್ತಾರೆ. ಹೀಗಾಗಿ  ಕೆಲವು ನಿರ್ಬಂಧ ಹೇರುತ್ತೇವೆ. ಈ ಸಂಬಂಧ ಕಂದಾಯ ಸಚಿವರು, ಬಿಬಿಎಂಪಿ ಮತ್ತು ನಗರ ಪೋಲೀಸ್ ಆಯುಕ್ತರು ಕಾರ್ಯೋನ್ಮುಖರಾಗಿದ್ದಾರೆ ಅಂತ ಹೇಳಿದ್ದಾರೆ. ಇದೇ ವೇಳೆ ಯೂರೋಪ್‍ನಿಂದ ಬರುವವರ ಮೇಲೆ ಬೆಂಗಳೂರು ಹಾಗೂ ಮಂಗಳೂರು  ವಿಮಾನ ನಿಲ್ದಾಣಗಳಲ್ಲಿ ಮತ್ತಷ್ಟು ನಿಗಾ ವಹಿಸುತ್ತೇವೆ  ಎಂದಿದ್ದಾರೆ.

    ಗೃಹ ಸಚಿವ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್‍ಪಂಥ್ ಅವರು ಮಾರ್ಗಸೂಚಿ ರೆಡಿ ಮಾಡ್ತಿದ್ದಾರೆ. ಈ ಬಗ್ಗೆ ಮಾತನಾಡಿ, 30 ಮತ್ತು 31 ರಂದು ಟಫ್ ರೂಲ್ಸ್ ಇರಲಿದೆ ಎಂದು ಹೇಳಿದ್ದಾರೆ.

    ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಹಾಗೂ ಎಂಜಿ ರಸ್ತೆಯಲ್ಲಿ ಯಾವುದೇ ಹೊಸ ವರ್ಷಾಚರಣೆ ಇಲ್ಲ. ಸಾರ್ವಜನಿಕ ರಸ್ತೆಗಳಲ್ಲಿ ಸಂಭ್ರಮಾಚರಣೆ ಅವಕಾಶಗಳಿಲ್ಲ. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಡಿಸೆಂಬರ್ 17ರಂದು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯೇ ಹೆಚ್ಚುಕಮ್ಮಿ ಇರಲಿದೆ. ಏನೆಲ್ಲಾ ಕ್ರಮ ಜರುಗಿಸಬೇಕು? ಯಾವುದಕ್ಕೆ ವಿನಾಯಿತಿ ಕೊಡ್ಬೇಕು ಅಂತ ಅಧಿಕಾರಿಗಳ ಜೊತೆ ಚರ್ಚಿಸ್ತೇನೆ. ಡಿ.30ಕ್ಕೆ ಮಾರ್ಗಸೂಚಿ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದಾರೆ.