Tag: ಬ್ರಾಹ್ಮಣ ಸಮಾಜ

  • ಪೇಜಾವರ ಶ್ರೀ ಬಗ್ಗೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ – ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜ ಆಕ್ರೋಶ

    ಪೇಜಾವರ ಶ್ರೀ ಬಗ್ಗೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ – ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜ ಆಕ್ರೋಶ

    ಬಾಗಲಕೋಟೆ: ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Udupi Pejawar Vishwa Prasanna Teertha Swamiji) ಕುರಿತಾಗಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ (BK Hariprasad) ನೀಡಿರುವ ಹೇಳಿಕೆ ಖಂಡಿಸಿ ಇಂದು ಬಾಗಲಕೋಟೆಯ (Bagalkot) ಬ್ರಾಹ್ಮಣ ತರುಣ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾಡಳಿತ ಸಭಾಭವನದ ಎದುರು ಜಮಾಯಿಸಿದ ಬ್ರಾಹ್ಮಣ ಸಮಾಜದವರು (Brahmin Community Members) ಬಿ.ಕೆ.ಹರಿಪ್ರಸಾದ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಅವರು ಮಾತನಾಡಿ, ರಾಮಮಂದಿರ (Ram Mandir) ನಿರ್ಮಾಣ ಹೋರಾಟದಲ್ಲಿ ಪೇಜಾವರ ಮಠದ ಹಿರಿಯ ಶ್ರೀಗಳು ನೇತೃತ್ವ ವಹಿಸಿದ್ದರೆ, ಮೂರ್ತಿ ಪ್ರತಿಷ್ಠಾಪನೆಯನ್ನು ಈಗಿನ ವಿಶ್ವಪ್ರಸನ್ನತೀರ್ಥರು ನೆರವೇರಿಸಿದ್ದರು. ಶ್ರೀಮಠಕ್ಕೆ ಭವ್ಯ ಪರಂಪರೆಯಿದ್ದು ಅವರ ಕುರಿತಾಗಿ ಮಾತನಾಡುವಾಗ ಎಚ್ಚರವಹಿಸಬೇಕು ಎಂದು ಆಕ್ರೋಶ ಹೊರ ಹಾಕಿದರು.

    ಬ್ರಾಹ್ಮಣ ಸಮಾಜದ ತ್ರಿಮಸ್ಥ ಸ್ವಾಮೀಜಿ ಹಾಗೂ ಮುಖಂಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಇನ್ನು ಸಮಾಜ ಸಹಿಸುವುದಿಲ್ಲ. ಸಮಾಜದ ಯುವಕರು ಪ್ರತಿಭಟಿಸಲು ಸಜ್ಜಾಗಿದ್ದು, ಮತದಾನದ ಮೂಲಕ ಉತ್ತರ ನೀಡುವುದು ಸಹ ಸಮಾಜಕ್ಕೆ ತಿಳಿದಿದೆ ಎಂದು ಎಚ್ಚರಿಕೆ ನೀಡಿದರು.

    ಪಂಡಿತ್ ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ ಅವರು ಮಾತನಾಡಿ, ಪೇಜಾವರ ಶ್ರೀಗಳು ಎಲ್ಲ ಸಮಾಜದೊಡನೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಗೋಶಾಲೆ, ದೀನದಲಿತರ ಏಳಿಗೆಗೆ ಶ್ರಮಿಸಿದ್ದಾರೆ. ಅಂಥವರ ಬಗ್ಗೆ ರಾಜಕಾರಣಿಗಳು ಮಾತನಾಡುವಾಗ ಎಚ್ಚರದಿಂದ ಇರಬೇಕೆಂದು ಹೇಳಿದರು. ಇದನ್ನೂ ಓದಿ: ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ? – ವಿಶ್ವಪ್ರಸನ್ನ ತೀರ್ಥ ಶ್ರೀ

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ‌ ಮಾತನಾಡಿ, ಬ್ರಾಹ್ಮಣರ ಸಂಖ್ಯೆ ಕಡಿಮೆ ಎನ್ನುವ ಮನೋಭಾವದಲ್ಲಿ ಸಮಾಜದ ಕುರಿತಾಗಿ ಲಘುವಾಗಿ ಮಾತನಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಸಮಾಜ ಪರಿವರ್ತನೆಯ ತಾಕತ್ತು ನಮಗಿದೆ. ಸಂದರ್ಭ ಬಂದಾಗ ಉತ್ತರಿಸುತ್ತೇವೆ ಎಂದರು.

    ಬಿ. ಕೆ. ಹರಿಪ್ರಸಾದ್ ತಮ್ಮ ಮಾತನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ‌ ನೀಡಿದರು.

    ಹರಿಪ್ರಸಾದ್‌ ಹೇಳಿದ್ದೇನು?
    ಜಾತಿಗಣತಿ ವಿಚಾರದ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದ ಪೇಜಾವರ ಶ್ರೀ, ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ (Caste Census) ಮಾಡಿ ಮುಚ್ಚಿಟ್ಟಿದೆ. ಜಾತ್ಯಾತೀತವಾಗಿರುವ (Secular) ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಬೇಕು ಎಂದು ಪ್ರಶ್ನಿಸಿದ್ದರು. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿಗಣತಿ ಎನ್ನುತ್ತೀರಿ. ಈ ಜಾತಿ ಗಣತಿ ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎಂದಿದ್ದರು.

    ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್‌, ಪೇಜಾವರ ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದರು.

     

  • ಮಂಗಳೂರಿನ ಕಾರ್ ಸ್ಟ್ರೀಟ್ ವೆಂಕಟರಮಣನ ಕಲರ್‌ಫುಲ್ ಓಕುಳಿ

    ಮಂಗಳೂರಿನ ಕಾರ್ ಸ್ಟ್ರೀಟ್ ವೆಂಕಟರಮಣನ ಕಲರ್‌ಫುಲ್ ಓಕುಳಿ

    ಮಂಗಳೂರು: ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ವಂಕಟರಮಣ ದೇವರ ಉತ್ಸವದಲ್ಲಿ ಭಾನುವಾರ ಕಲರ್ ಫುಲ್ ವಾತಾವರಣ ಸೃಷ್ಟಿಯಾಗಿತ್ತು. ಭಾನುವಾರ ಮಂಗಳೂರಿನ ರಥಬೀದಿಯಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಮನೆ ಮಾಡಿತ್ತು.

    ಗೌಡ ಸಾರಸತ್ವ ಬ್ರಾಹ್ಮಣ ಸಮಾಜಕ್ಕೆ ಸೇರಿರುವ ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ನಡೆದಿದ್ದ ರಥೋತ್ಸವಕ್ಕೆ ನಡೆದ ಓಕುಳಿ ಆಟ ಇದಾಗಿತ್ತು. ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ವೆಂಕಟರಮಣ ದೇವರನ್ನು ರಥದಲ್ಲಿ ಕೂರಿಸಿ ರಥೋತ್ಸವ ಸೇವೆ ನೀಡಿದ್ದರು. ಭಾನುವಾರ ಈ ದೇವರ ಅವಭೃತ ಸ್ನಾನ ನಡೆದು ಆ ಬಳಿಕ ದೇವರು ಗರ್ಭಗುಡಿಯನ್ನು ಸೇರಲಿದ್ದಾರೆ. ಹೀಗಾಗಿ ದೇವರ ಈ ಸ್ನಾನವನ್ನು ಬಣ್ಣದ ಹಬ್ಬವನ್ನಾಗಿ ಆಚರಿಸುವ ಮೂಲಕ ಮುಂಜಾನೆಯಿಂದ ಸಂಜೆಯವರೆಗೂ ಎಲ್ಲಾ ಭಕ್ತರೂ ಈ ರೀತಿ ಬಣ್ಣದ ಆಟದಲ್ಲೇ ಮುಳುಗಿ ಫುಲ್ ಎಂಜಾಯ್ ಮಾಡುತ್ತಾರೆ. ಚಂಡೆ ವಾದ್ಯಕ್ಕೆ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸಿದ್ದರು. ಹೆಣ್ಮಕ್ಕಳು, ಯುವಕರು ಸೇರಿದಂತೆ ಹಿರಿಯರು ಕೂಡ ಓಕುಲಿ ಆಟದಲ್ಲಿ ಮಿಂದೆದ್ದು ಸಖತ್ ಎಂಜಾಯ್ ಮಾಡಿದರು.

    ವೆಂಕಟರಮಣ ದೇವರ ರಥೋತ್ಸವ ಎಂದರೆ ಅದು ಪರವೂರಲ್ಲಿ ಇದ್ದ ಸಮಾಜ ಬಾಂಧವರು ಕೂಡ ಆಗಮಿಸಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ವರ್ಷಕ್ಕೊಮ್ಮೆ ತಮ್ಮ ಆತ್ಮೀಯರನ್ನು ಭೇಟಿಯಾಗುವ ಒಂದು ಸದಾವಕಾಶವೂ ಸಿಕ್ಕಂತಾಗುತ್ತೆ. ಇದೇ ವೇಳೆ ನಡೆಯುವ ಈ ಓಕುಳಿ ಹಬ್ಬ ವರ್ಷಕ್ಕೊಮ್ಮೆ ಆತ್ಮೀಯರು ಹಾಗೂ ತಮ್ಮ ಕುಟುಂಬ ಸದಸ್ಯರೊಂದಿಗೆ ಎಂಜಾಯ್ ಮಾಡುವುದಕ್ಕೂ ಒಂದು ಅವಕಾಶ. ಹೀಗಾಗಿ ರಥೋತ್ಸವನ್ನು ಮಿಸ್ ಮಾಡಿಕೊಂಡರೂ ಈ ಓಕುಳಿ ಹಬ್ಬವನ್ನು ಹಲವರು ಮಿಸ್ ಮಾಡಿಕೊಳ್ಳುವುದಿಲ್ಲ. ಮುಂಜಾನೆಯಿಂದ ಸಂಜೆ ದೇವರ ಅವಭೃತ ಸ್ನಾನ ನಡೆಯುವವರೆಗೂ ಈ ರೀತಿ ಬಣ್ಣದ ಎರಚಾಟ, ಹಾಡು, ಕುಣಿತ ನಿರಂತರವಾಗಿ ಸಾಗುತ್ತೆ. ಯಾವುದೇ ಬೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವ ಈ ಓಕುಳಿ ಹಬ್ಬ ಒಗ್ಗಟ್ಟಿನ ಸಂಕೇತ ಕೂಡ ಆಗಿದೆ.

    ದೇವರನ್ನು ಸಂತೋಷ ಪಡಿಸಬೇಕು ಎನ್ನುವ ಕಾರಣಕ್ಕೆ ಎಲ್ಲರೂ ಸಂತೋಷದಿಂದ ಬಣ್ಣ ಎರಚಾಡಿ ಖುಷಿ ಪಡುವ ಈ ಓಕುಳಿ ಇತ್ತೀಚಿನ ದಿನಗಳಲ್ಲಿ ಬಾರಿ ಫೇಮಸ್. ಹೀಗಾಗಿ ಪರವೂರಿನ ಜನರೂ ಕೂಡ ಈ ಹಬ್ಬದಲ್ಲಿ ಪಾಲ್ಗೊಳ್ಳೊದಿಕ್ಕೆ ಅಂತಾನೆ ಆಗಮಿಸ್ತಾರೆ. ಅದರಲ್ಲೂ ಹೆಣ್ಮಕ್ಕಳು ಹುಡುಗರ ಜೊತೆ ಸೇರಿಕೊಂಡು ಒಂದೇ ಮನೆಯ ಮಕ್ಕಳಂತೆ ರಥಬೀದಿಯ ಗಲ್ಲಿಗಲ್ಲಿಗಳಲ್ಲೂ ಸಂಭ್ರಮಿಸುವುದನ್ನು ಕಣ್ತುಂಬಿಕೊಳ್ಳುವುದೇ ಚೆಂದ.

    ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸಮಾಜದ ರಥೋತ್ಸವ ಎಂದರೆ ಅದು ಅದ್ಧೂರಿ ಹಾಗೂ ಆಡಂಭರದಿಂದ ಕೂಡಿರುತ್ತೆ. ಅದೇ ರೀತಿ ಈ ಓಕುಳಿ ಕೂಡ ಬಹಳಷ್ಟು ಕಲರ್ ಫುಲ್ ಆಗಿದ್ದು, ನೋಡುಗರಿಗೆ ಕೂಡ ಬಹಳಷ್ಟು ಖುಷಿ ನೀಡುತ್ತೆ. ಅಸಲಿಗೆ ಈ ಓಕಳಿಯಲ್ಲಿ ಗುಲಾಬಿ ಬಣ್ಣ ಮಾತ್ರ ಬಳಸಬೇಕು ಎನ್ನುವ ನಿಯಮ ಇದ್ರೂ ಈಗ ಹಲವು ಬಣ್ಣಗಳು ಬಳಕೆಯಾಗುತ್ತಿದೆ. ಕಳೆದ ವರ್ಷದಿಂದ ಬ್ಯಾಂಡ್ ಡಿಜೆಗೆ ಬ್ರೇಕ್ ಹಾಕಲಾಗಿತ್ತು. ಆದರಿಂದ ಪಡ್ಡೆಗಳಿಗೆ ಸ್ವಲ್ಪ ಬೇಸರ ಮೂಡಿಸಿದರು ಎಲ್ಲರು ಎಂಜಾಯ್ ಮಾಡಿದ್ದಾರೆ.