Tag: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

  • ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50ಜನ ಸಂತರು ಸ್ಪರ್ಧಿಸಲಿದ್ದಾರೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50ಜನ ಸಂತರು ಸ್ಪರ್ಧಿಸಲಿದ್ದಾರೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    ಕಾರವಾರ: ರಾಮರಾಜ್ಯದ ಪರಿಕಲ್ಪನೆಯಲ್ಲಿ ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕುತ್ತೇವೆ. ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50 ಸಾಧು-ಸಂತರು ಸ್ಪರ್ಧಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಭಟ್ಕಳದಲ್ಲೇ ಬ್ರಹ್ಮಾನಂದರು ಈ ಪ್ರಯೋಗ ಮಾಡುತ್ತಾರೆ. ಚುನಾವಣೆ ಪ್ರಚಾರಕ್ಕೆ ನೀವ್ಯಾರು ಬೇಡ, ನನ್ನ 5 ಲಕ್ಷ ನಾಗಾಸಾಧುಗಳು ಬರುತ್ತಾರೆ ಎಂದು ನಾಮಧಾರಿ ಕುಲಗುರುಗಳಾದ, ಉಜರೆ ಶ್ರೀರಾಮ ಕ್ಷೇತ್ರದ ಮಠಾಧೀಶಾ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಘೋಷಿಸಿದರು.

    ಭಟ್ಕಳದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಸಾರದಹೊಳೆ ಹಳೆಕೋಟೆ ಹನುಮಂತ ದೇವರ 6ನೇ ದಿನದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜರುಗಳು(ಜನಪ್ರತಿನಿಧಿಗಳು) ಪ್ರಜೆಗಳನ್ನು ತಮ್ಮ ಮಕ್ಕಳಂತೆ ಕಾಣುವ ಕೆಲಸವಾಗಬೇಕು. ನಾವು ಇಡೀ ದೇಶವನ್ನು ಸುತ್ತುವ ಸಂತರು. ನಮ್ಮದು ಒಂದು ಜುನಾಕಾರವಿದೆ. ಸುಮಾರು 5 ಲಕ್ಷ ಸಾಧು-ಸಂತರುಗಳಲ್ಲಿ ನಾನೂ ಒಬ್ಬ. ನಾವು ಎರಡು-ಮೂರು ತಿಂಗಳಿಗೆ ಕುಳಿತು ಮಾತನಾಡುತ್ತೇವೆ. ಈ ರಾಜ್ಯಾಂಗದ ವ್ಯವಸ್ಥೆ ದಿಕ್ಕು ತಪ್ಪುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದರು.

    ವಿಧಾನಸಭೆ ಮಾರ್ಕೆಟ್‍ನಲ್ಲಿ ಗಲಾಟೆ ಆದಂತೆ ಆಗುತ್ತದೆ. ಎಷ್ಟೋ ಸಲ ನಮ್ಮ ವಿಧಾನಸಭಾಧ್ಯಕ್ಷರಾದವರ ಪರಿಸ್ಥಿತಿ ನೋಡಿದಾಗ ಬೇಸರವಾಗುತ್ತದೆ. ಅದನ್ನು ನೋಡಿದರೆ ಸಂವಿಧಾನ ಇದೆಯೋ, ಇಲ್ಲವೋ ಗೊತ್ತಾಗುವುದಿಲ್ಲ. ರಾಜ್ಯಾಂಗದ ಪರಿಕಲ್ಪನೆ ಇದೆಯೇ, ಇಲ್ಲವೋ ಗೊತ್ತಾಗುವುದಿಲ್ಲ. ಇದಕ್ಕೆಲ್ಲ ಸಮಗ್ರ ಬದಲಾವಣೆ ಆಗಬೇಕು. ಹೀಗಾಗಿ ನಾವು ಸನ್ಯಾಸಿಗಳು ತಯಾರಾಗಿದ್ದೇವೆ. ಇದಕ್ಕೆ ನಮಗೆ ಯುಪಿ ಸಿಎಂ ಆದಿತ್ಯನಾಥರ ಪ್ರೇರಣೆಯಿದೆ. ಉತ್ತರಾಖಂಡದಲ್ಲಿ ಈ ಬಗ್ಗೆ ಅನೇಕ ಸಭೆಗಳನ್ನೂ ನಡೆಸಿದ್ದೇವೆ ಎಂದರು. ಇದನ್ನೂ ಓದಿ: ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್

    ರಾಜ್ಯಾಂಗ, ಸಂವಿಧಾನ ಏನೆಂದು ನಮ್ಮ ನಾಯಕರುಗಳಿಗೆ ಗೊತ್ತಿಲ್ಲ. ರಾಜಕೀಯಕ್ಕೆ ಬರುವುದೇ ಸುಖಕ್ಕಾಗಿ, ಪ್ರಚಾರಕ್ಕಾಗಿ, ದುಡ್ಡಿಗಾಗಿ ಎಂಬುದು ಒಬ್ಬ ಗ್ರಾಮಪಂಚಾಯತಿ ಸದಸ್ಯನಿಂದ ಹಿಡಿದು ಎಲ್ಲರ ಪರಿಕಲ್ಪನೆಯಾಗಿದೆ. ಕಾನೂನು ಗೊತ್ತಿಲ್ಲದವರು ರಾಜ್ಯಾಂಗದೊಳಗೆ ಬಂದು ಕಾನೂನು ಮಾಡಲು ಹೇಗೆ ಸಾಧ್ಯ? ಹೀಗಾಗಿ ತಿದ್ದುಪಡಿಯೊಂದನ್ನು ಮಾಡಬೇಕು. ಯಾರೇ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಆತ ಕನಿಷ್ಠ ಪದವಿಯನ್ನಾದರೂ ಪಡದಿರಬೇಕು. ಮಂತ್ರಿಯಾಗಲು ಕಾನೂನು ವಿದ್ವಾಂಸರೇ ಆಗಿರಬೇಕು. 4ನೇ ಕ್ಲಾಸು, 10ನೇ ಕ್ಲಾಸ್ ಓದಿದವರನ್ನು ಮಂತ್ರಿ ಮಾಡಿದರೆ ರಾಜ್ಯದ ಕಾನೂನುಗಳನ್ನು ಹೇಗೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

    ನಾವು ಬೇಸತ್ತು ಹೋಗಿದ್ದೇವೆ. ನಿಮಗೆ ರಿಪೇರಿ ಮಾಡಲು ಬರುತ್ತಿಲ್ಲ. ಇದು ದುಃಖ ಆಗುತ್ತಿದೆ. ನಮಗೆ ಸಂಬಳ ಕೊಡುವುದು ಬೇಡ. ನಮಗೆ ಪಡಿತರ ಅಥವಾ ಊಟ ಕೊಟ್ಟರೆ ಸಾಕು. ನಮ್ಮ ಪರಿಕಲ್ಪನೆ ಸನಾತನ ಹಿಂದೂ ಧರ್ಮವನ್ನ ತಿದ್ದಬೇಕು. ಆದರೆ ಈಗಿರುವವರಿಗೆ ತಿದ್ದಲು ಆಗುತ್ತಿಲ್ಲ. ಪ್ರವಾಸಕ್ಕೆ ಮಂತ್ರಿಗಳನ್ನ ವಿದೇಶಕ್ಕೆ ಕಳುಹಿಸಿತ್ತೀರಿ ಎಂದು ಟೀಕಿಸಿದರು.

    1-2 ಲಕ್ಷದ ರೂಮಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಏನು ಪ್ರಯೋಜನ? ನಿದ್ದೆ ಮಾಡಲು 1-2 ಲಕ್ಷದ ರೂಂ ಯಾಕಯ್ಯ? 5- 6 ಗಂಟೆಯ ನಿದ್ರೆಯನ್ನು 500 ರೂ. ರೂಮಿನಲ್ಲೂ ಮಾಡಬಹುದು. 50-100 ರೂ. ಗೆ ಊಟ ಸಿಗುತ್ತೆ. ಆದರೆ ಬೇಕಾಬಿಟ್ಟಿಯಾಗಿ ಪ್ರಜೆಗಳ ದುಡ್ಡನ್ನ ಪೆÇೀಲು ಮಾಡಲಾಗುತ್ತಿದೆ. ಇದನ್ನು ನೋಡಿದರೆ ನಮಗೆ ಕಣ್ಣೀರು ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ತಪಸ್ಸು ಮಾಡಿದರೆ ಉದ್ಧಾರ ಮಾಡಲಾಗುವುದಿಲ್ಲ ಎಂದು ನಾವೆಲ್ಲ ತೀರ್ಮಾನಕ್ಕೆ ಬಂದಿದ್ದೇವೆ. ನನಗೆ ರಾಜಕೀಯದ ಆಸೆಯಿಲ್ಲ. ಆದರೆ ನಾನೇ ಮೊದಲು ಭಟ್ಕಳದಲ್ಲಿ ಈ ಪ್ರಯೋಗ ಮಾಡಿಸುತ್ತೇನೆ. ಸುನೀಲ್ ನಾಯ್ಕ್, ಮಂಕಾಳ ವೈದ್ಯ, ಜೆ.ಡಿ.ನಾಯ್ಕ್, ಆರ್.ಎನ್.ನಾಯ್ಕ್ ಯಾರೇ ಆಕಾಂಕ್ಷಿ ಇದ್ದರೂ ಈ ವೇಳೆ ಹಿಂದೆ ಸರಿಯುತ್ತಾರೆ ಎಂದು ಭಾವಿಸಿದ್ದೇನೆ ಎಂದರು.

    ವಿಕೇಂದ್ರೀಕರಣ ಆಗುತ್ತಿಲ್ಲ, ಕೇಂದ್ರೀಕರಣ ಆಗುತ್ತಿದೆ. ಸಂವಿಧಾನ ಪಾಲನೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಲು ಪ್ರತಿ ತಾಲೂಕಿನಲ್ಲಿ ನ್ಯಾಯಾಧೀಶರ ವೀಕ್ಷಣಾ ಮಂಡಳಿ ರಚನೆಯಾಗಬೇಕು. ಚುನಾಯಿತರಾದ ಶಾಸಕರಿಗೆ ನಿವೃತ್ತ ನ್ಯಾಯಾಧೀಶರಿಂದ ತಿಂಗಳಿಗೆ ಐದು ದಿನವಾದರೂ ತರಬೇತಿ ನೀಡಬೇಕು. ಸುಮ್ಮನೆ ಸಂವಿಧಾನ, ಸಂವಿಧಾನ ಎಂದು ಸಂವಿಧಾನದ ಬಗ್ಗೆ ಮಾತನಾಡುತ್ತೀರಿ. ಸಂವಿಧಾನದ ತಲೆಯೂ ಗೊತ್ತಿಲ್ಲ, ಬುಡವೂ ಗೊತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರೌಡಿಗಳು ಸತ್ರೆ 25 ಲಕ್ಷ ರೂ. ಪರಿಹಾರ ಕೊಡ್ತೀರಾ, ಸಂತೋಷ್ ಪಾಟೀಲ್‍ಗೆ ಯಾಕಿಲ್ಲ: ಸಿ.ಎಂ.ಇಬ್ರಾಹಿಂ ಕಿಡಿ

    ವಿಧಾನಸಭೆಯಲ್ಲಿ ಇಡೀ ದಿನ ಜಗಳ ಮಾಡುತ್ತಾರೆ. ಹೊರಗೆ ಬರುವಾಗ ಹೆಗಲ ಮೇಲೆ ಕೈ ಹಾಕಿಕೊಂಡು ಚಹಾ-ಊಟ ಸವಿಯುತ್ತಾರೆ. ಹೊರಗಡೆ ಈ ಹುಡುಗರೆಲ್ಲ ಕುಸ್ತಿ ಮಾಡುತ್ತಾರೆ. ಇದನ್ನ ನೋಡಿ ಸಂತರಿಗೆಲ್ಲ ಕಣ್ಣೀರು ಬರುತ್ತಿದೆ. ಸ್ವಾಮಿಗಳು ವೋಟಿಗೆ ನಿಲ್ಲುತ್ತಾರೆಂದು ಯಾರೂ ಹೆದರಬೇಕಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಎಲ್ಲರನ್ನೂ ಸರಿಸಮಾನವಾಗಿ ಕಾಣಲು ನಾವು ರಾಜಕೀಯಕ್ಕೆ ಸ್ಪಧಿಸುತ್ತಿದ್ದೇವೆ. ಎಲ್ಲರೂ ಸಹೋದರತ್ವ ಪಾಲಿಸಬೇಕು ಎಂದರು.

  • ಯಾವುದೇ ಕಾರಣಕ್ಕೂ ಪಂಚಮಸಾಲಿಗಳಿಗೆ ಮೀಸಲಾತಿ ನೀಡಬಾರದು – ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    ಯಾವುದೇ ಕಾರಣಕ್ಕೂ ಪಂಚಮಸಾಲಿಗಳಿಗೆ ಮೀಸಲಾತಿ ನೀಡಬಾರದು – ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    – ಭಟ್ಕಳದಲ್ಲಿ ಫೆ. 22 ರಂದು ಬೃಹತ್ ಪ್ರತಿಭಟನೆ
    – ಪಂಚಮಸಾಲಿಗಳನ್ನು 2ಎಗೆ ಸೇರಿಸಿದರೆ ನಮ್ಮನ್ನು ಎಸ್‌ಸಿ, ಎಸ್‌ಟಿಗೆ ಸೇರಿಸಿ

    ಕಾರವಾರ : ಹಿಂದುಳಿದ 2ಎ ನಲ್ಲಿ ಬರುವ ಜನಾಂಗಕ್ಕೆ ಈಗಿರುವ ಸ್ಥಿತಿಯನ್ನೇ ಮುಂದುವರಿಸಬೇಕು. ಇಲ್ಲವೇ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಲಿಂಗಾಯಿತ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗದ 2ಎಗೆ ಸೇರಿಸಬಾರದೆಂದು ಉಜಿರೆಯ ಶ್ರೀರಾಮಕ್ಷೇತ್ರ ಪೀಠ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಇಂದು ಭಟ್ಕಳದ ನಿಶ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಸಭಾ ಭವನದಲ್ಲಿ ಭಟ್ಕಳ ತಾಲೂಕು ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ಸಭೆ ನಡೆಸಿ ಮಾತನಾಡಿದ ಅವರು ಪಂಚಮಸಾಲಿ ಜನಾಂಗವನ್ನು ಹಿಂದುಳಿದ ಜನಾಂಗದ 2ಎ ಗೆ ಸೇರ್ಪಡಿಸುವುದನ್ನು ಖಂಡಿಸಿ ಇದೇ ತಿಂಗಳು 22 ರಂದು ಹಿಂದುಳಿದ ವರ್ಗಕ್ಕೆ ಸೇರಿದ ಎಲ್ಲಾ ಜನಾಂಗದ ಮುಖಂಡರು ಹಾಗೂ ಶಾಸಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

    ಇದೇ ಸಂದರ್ಭದಲ್ಲಿ ನಾಯಕ ಜನಾಂಗದ ಮುಂಖಂಡ ಕೃಷ್ಣ ನಾಯ್ಕ ಮಾತನಾಡಿ, ಪಂಚಮಸಾಲಿಗಳನ್ನು 2ಎಗೆ ಸೇರಿಸುವುದಾದರೆ ನಮ್ಮ ಜನಾಂಗವನ್ನು ಎಸ್‌ಸಿ, ಎಸ್‌ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಭೆಯಲ್ಲಿ ನಾಮದಾರಿ, ಗಾಣಿಗ, ಮಹಾಲೆ, ವೈಶ್ಯ, ದೈವಜ್ಞ, ದೇವಾಡಿಗ, ವಿಶ್ವಕರ್ಮ ಜನಾಂಗ ಪ್ರಮುಖ ಮುಖಂಡರು ಭಾಗವಹಿಸಿದ್ದರು.