Tag: ಬ್ರಹ್ಮಪುತ್ರ ನದಿ

  • ಬ್ರಹ್ಮಪುತ್ರದ ನದಿಗೆ ಬೃಹತ್ ಡ್ಯಾಮ್‌ ಕಟ್ಟಲು ಮುಂದಾದ ಚೀನಾ – ಭಾರತದ ಆತಂಕವೇನು?

    ಬ್ರಹ್ಮಪುತ್ರದ ನದಿಗೆ ಬೃಹತ್ ಡ್ಯಾಮ್‌ ಕಟ್ಟಲು ಮುಂದಾದ ಚೀನಾ – ಭಾರತದ ಆತಂಕವೇನು?

    ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತಿ ದೊಡ್ಡ ಅಣೆಕಟ್ಟು (Brahmaputra Dam) ನಿರ್ಮಾಣಕ್ಕೆ ಚೀನಾ (China) ಮುಂದಾಗಿದೆ. ಇದಕ್ಕಾಗಿ ಚೀನಾ ಸುಮಾರು 11.67 ಲಕ್ಷ ಕೋಟಿ ರೂ. ವೆಚ್ಚ ಮಾಡಲಿದೆ. ಈ ನದಿಯ ನೀರಿನಲ್ಲಿ ಭಾರತ (India) ಹಾಗೂ ಬಾಂಗ್ಲಾದೇಶ ಪಾಲು ಹೊಂದಿದ್ದು, ಈ ಎರಡೂ ದೇಶಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.

    ಈ ಅಣೆಕಟ್ಟು ಪೂರ್ಣಗೊಂಡ ನಂತರ 60,000 MW ವಿದ್ಯುತ್‌ ಉತ್ಪಾದನೆ ಆಗಲಿದೆ. ಈ ಮೂಲಕ ಯೋಜನೆಯು ವಿಶ್ವದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿ ಹೊರಹೊಮ್ಮಲಿದೆ. ಇದು ಮಧ್ಯ ಚೀನಾದಲ್ಲಿರುವ ತ್ರೀ ಗಾರ್ಜಸ್ ಅಣೆಕಟ್ಟಿಗಿಂತಲೂ ಮೂರು ಪಟ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ವರದಿಯಾಗಿದೆ.

    ಟಿಬೆಟ್‌ನಲ್ಲಿ ಈ ನದಿಯನ್ನು ಯಾರ್ಲುಂಗ್ ತ್ಸಾಂಗ್ಪೊ ಎನ್ನಲಾಗುತ್ತದೆ. ಅಲ್ಲಿಂದ ಅರುಣಾಚಲ ಪ್ರದೇಶವನ್ನು ಈ ನದಿ ಪ್ರವೇಶಿಸುತ್ತದೆ, ಅಲ್ಲಿ ಈ ನದಿಯನ್ನು ಸಿಯಾಂಗ್ ಎಂದು ಕರೆಯಲಾಗುತ್ತದೆ. ಅಸ್ಸಾಂನಲ್ಲಿ, ಇದು ದಿಬಾಂಗ್ ಮತ್ತು ಲೋಹಿತ್‌ನಂತಹ ಉಪನದಿಗಳಿಂದ ಸೇರಿಕೊಂಡು ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ. ನದಿಯು ನಂತರ ಬಾಂಗ್ಲಾದೇಶವನ್ನು ಪ್ರವೇಶಿಸುತ್ತದೆ. ಬಳಿಕ ಬಂಗಾಳ ಕೊಲ್ಲಿಗೆ ಸೇರುತ್ತದೆ. ಈಗ ಚೀನಾ ಯೋಜನೆಯಿಂದ ಈ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನರ ಹಾಗೂ ಪರಿಸರದ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳ ಕೂಡ ವ್ಯಕ್ತವಾಗುತ್ತಿದೆ.

    ಯೋಜನೆಯ ಪ್ರಮುಖ ಅಂಶಗಳೇನು?
    ಈ ಡ್ಯಾಂ ಚೀನಾದ 14ನೇ ಪಂಚವಾರ್ಷಿಕ ಯೋಜನೆಯ ಪ್ರಮುಖ ಅಂಶವಾಗಿದೆ. ವಾರ್ಷಿಕವಾಗಿ 300 ಶತಕೋಟಿ kWh ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಯೋಜನೆಗೆ 137 ಶತಕೋಟಿ ಡಾಲರ್‌ (11.67 ಲಕ್ಷ ಕೋಟಿ ರೂ) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

    ಚೀನಾಗೆ ಈ ಡ್ಯಾಂ ಯಾಕೆ ಬೇಕು?
    ಹೆಚ್ಚಿನ ವಿದ್ಯುತ್‌ ಉತ್ಪಾದನೆಯಿಂದ ಸಾಂಪ್ರದಾಯಿಕ ಇಂಧನ ಮೂಲಗಳಿಂದ ದೂರ ಸರಿಯಲು ಚೀನಾ ಯೋಜಿಸಿದೆ. ಇನ್ನೂ, 2060ರ ವೇಳೆಗೆ ಇಂಗಾಲದ ಪ್ರಮಾಣ ತಗ್ಗಿಸಲು ಈ ಅಣೆಕಟ್ಟು ಸಹಾಯ ಮಾಡುತ್ತದೆ ಎಂದು ಚೀನಾ ಹೇಳಿಕೊಂಡಿದೆ. ಅಲ್ಲದೇ ನೀರಾವರಿ, ಕೈಗಾರಿಕೆ ಬೆಳವಣಿಗೆ, ಸಾರಿಗೆ ವ್ಯವಸ್ಥೆ ಸುಧಾರಣೆ, ವ್ಯಾಪಾರ ವೃದ್ಧಿ, ಉದ್ಯೋಗ ಸೃಷ್ಟಿಯಾಗಲಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

    ಭಾರತದ ಆತಂಕವೇನು?
    ಡ್ಯಾಮ್‌ಗಳನ್ನು ಜಲ ಬಾಂಬ್‌ಗಳೆಂದೆ ಕರೆಯಲಾಗುತ್ತದೆ. ಅದೇ ಕಾರಣಕ್ಕೆ ಶತೃದೇಶಗಳ ಕೈಗೆ ಹಾಗೂ ಉಗ್ರರಿಗೆ ಡ್ಯಾಮ್‌ಗಳ ಮಾಹಿತಿ, ಗೌಪ್ಯತೆ ತಿಳಿಯದಂತೆ ಫೋಟೋ, ಚಿತ್ರೀಕರಣಕ್ಕೆ ನಿಷೇಧ ಹೇರಲಾಗುತ್ತದೆ.

    ಈಗ ಚೀನಾ ನಿರ್ಮಿಸುತ್ತಿರುವ ವಿಶ್ವದ ಅತೀ ದೊಡ್ಡ ಡ್ಯಾಮ್‌ನ್ನು ಭಾರತ ಮತ್ತು ಬಾಂಗ್ಲಾದೇಶದ ಮೇಲೆ ದಾಳಿ ನಡೆಸಲು ಚೀನಾ ಬಳಸುವ ಆತಂಕವಿದೆ. ಹೌದು! ಯಾವುದೇ ಸೂಚನೆ ನೀಡದೇ ಕುತಂತ್ರದಿಂದ ಚೀನಾ ತನ್ನ ಡ್ಯಾಮ್‌ನಿಂದ ನೀರನ್ನು ಹರಿಸಿದರೆ ಹಲವಾರು ಪ್ರದೇಶಗಳು ಕೊಚ್ಚಿ ಹೋಗುವ ಭೀತಿ ಇದೆ. ಇದರಿಂದ ಜನ, ಜಾನುವಾರು, ಮೂಲಭೂತ ಸೌಕರ್ಯಗಳು ಹಾನಿಗೊಳಗಾಗುವ ಆತಂಕ ಸಹ ಇದೆ. ಇದೀಗ ಭಾರತದ ಮೇಲೆ ದಾಳಿಯ ಉದ್ದೇಶದಿಂದಲೇ ಚೀನಾ ಈ ಡ್ಯಾಮ್‌ ನಿರ್ಮಾಣಕ್ಕೆ ಮುಂದಾಯಿತಾ ಎಂಬ ಪ್ರಶ್ನೆ ಸಹ ಉದ್ಭವಿಸಿದೆ.

    ನದಿಯಲ್ಲಿ ಹರಿಯುವ ನೀರಿನ ಮೇಲೆ ಚೀನಾ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದೆ. ಅಣೆಕಟ್ಟಿನ ಗಾತ್ರದ ಲೆಕ್ಕಾಚಾರದಂತೆ ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಸಿದರೆ, ಕೆಳಭಾಗದಲ್ಲಿ ದೊಡ್ಡ ಪ್ರಮಾಣದ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಭಾರತದ ಅರುಣಾಚಲ ಪ್ರದೇಶಕ್ಕೆ ಪ್ರವೇಶಕ್ಕೂ ಮುನ್ನ ನದಿಯು ದೊಡ್ಡದಾಗಿ ತಿರುವು ಪಡೆಯುತ್ತದೆ. ಆ ಭಾಗದಲ್ಲಿ ಹಿಮಾಲಯದ ಆಳವಾದ ಕಮರಿ ಪ್ರದೇಶದಲ್ಲಿ ಈ ಅಣೆಕಟ್ಟು ನಿರ್ಮಾಣವಾಗುತ್ತದೆ. ಇದರಿಂದಾಗಿ ಚೀನಾದಿಂದ ಭಾರತಕ್ಕೆ ನೀರಿನ ಹರಿವಿನ ಮೇಲೆ ಈ ಆಣೆಕಟ್ಟು ಪರಿಣಾಮ ಬೀರಬಹುದು. ಕೃಷಿಗೆ ಇದರಿಂದ ಸಮಸ್ಯೆಯಾಗಬಹುದು.

    ನದಿಯ ಹರಿವಿನ ಬದಲಾವಣೆಗಳು ಸ್ಥಳೀಯ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರಬಹುದು ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. ಅಲ್ಲದೇ ಈ ಪ್ರದೇಶವು ಪ್ರಪಂಚದ ಅತ್ಯಂತ ದುರ್ಬಲವಾದ ಮತ್ತು ಭೂಕಂಪ ಪೀಡಿತ ಪ್ರದೇಶವಾಗಿದೆ. 2004 ರಲ್ಲಿ ಭೂಕುಸಿತವು ಹಿಮಾಚಲ ಪ್ರದೇಶದ ಬಳಿ ಟಿಬೆಟಿಯನ್ ಹಿಮಾಲಯದಲ್ಲಿ ಗ್ಲೇಶಿಯಲ್ ಪರೇಚು ಸರೋವರವನ್ನು ಸೃಷ್ಟಿಸಿದೆ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು. ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಎರಡೂ ದೇಶಗಳ ಮಾತುಕತೆ ಅಗತ್ಯ ಎಂಬುದು ತಜ್ಞರ ಅಭಿಪ್ರಾಯ.

    ಗಾರ್ಜಸ್ ಡ್ಯಾಂನಿಂದ ಭೂಮಿ ವೇಗದ ಮೇಲೆ ಪರಿಣಾಮ!

    ಇನ್ನೂ ಚೀನಾ ಈ ಹಿಂದೆ ನಿರ್ಮಿಸಿದ್ದ ಗಾರ್ಜಸ್ ಅಣೆಕಟ್ಟಿನಿಂದ ಭೂಮಿಯ ತಿರುಗುವಿಕೆ 0.06 ಮೈಕ್ರೋಸೆಕೆಂಡ್‌ಗಳಷ್ಟು ನಿಧಾನವಾಗಿದೆ. ಅದೇ ರೀತಿ ಈಗ ನಿರ್ಮಾಣವಾಗುತ್ತಿರುವ ಆಣೆಕಟ್ಟಿನಿಂದಲೂ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ.

    ಭಾರತ ಮತ್ತು ಬಾಂಗ್ಲಾದೇಶ ದೇಶಗಳ ಮೇಲೆ ಈ ಡ್ಯಾಂ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಚೀನಾ ಹೇಳಿಕೊಂಡಿದೆ.

  • ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಬ್ರಹ್ಮಪುತ್ರ- ಅಸ್ಸಾಂನ 700 ಹಳ್ಳಿ ಜಲಾವೃತ

    ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ಬ್ರಹ್ಮಪುತ್ರ- ಅಸ್ಸಾಂನ 700 ಹಳ್ಳಿ ಜಲಾವೃತ

    ದಿಸ್ಪುರ್: ಮಳೆರಾಯನ ಆರ್ಭಟಕ್ಕೆ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಸ್ಸಾಂನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು, ಸುಮಾರು 4 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಅಸ್ಸಾಂನ ಪ್ರವಾಹಕ್ಕೆ ಲಕ್ಷಾಂತರ ಮಂದಿ ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಭಾರೀ ಭೂಕುಸಿತ ಮುಂದುವರಿದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ಹ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ ಎನ್ನಲಾಗಿದೆ.

    ನದಿ ನೀರು ನಿರ್ದಿಷ್ಠ ಮಟ್ಟವನ್ನು ತಲುಪಿದ್ದು, ಒಂದೆರಡು ದಿನಗಳಲ್ಲಿ ಅಪಾಯದ ಮಟ್ಟವನ್ನು ದಾಟಬಹುದು ಎಂದು ಒಳನಾಡಿನ ಜಲಮಾರ್ಗ ಪ್ರಾಧಿಕಾರದ ವಿಭಾಗ ಅಧಿಕಾರಿ ವಿ. ಗಾಂಧಿಯಾ ಅವರು ತಿಳಿಸಿದ್ದಾರೆ.

    ಡಿಖೋವ್, ಧನ್ಸಿರಿ, ಜಿಯಾ ಭಾರಲಿ, ಪುತಿಮರಿ ಮತ್ತು ಬೆಕಿ ನದಿಗಳು ಕೂಡ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಜೋರ್ಹತ್‍ನ ನಿಮತಿ ಘಾಟ್‍ನಲ್ಲಿ ನದಿ ಈಗಾಗಲೇ ತುಂಬಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಗುವಾಹಟಿ ಸಮೀಪದ ದೀಪರ್ ಬಿಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಎರಡು ಮನೆಗಳು ನಾಶವಾಗಿದ್ದು, ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಪ್ರವಾಹದಿಂದಾಗಿ ಜುಲೈ 10 ರಂದು ಸಂಜೆ 5 ಗಂಟೆಯ ಹೊತ್ತಿಗೆ ಒಟ್ಟು 13,267.74 ಹೆಕ್ಟೇರ್ ಬೆಳೆ ಪ್ರದೇಶ ನಾಶವಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‍ಡಿಎಂಎ) ವರದಿ ಮಾಡಿದೆ.

    ರಾಜ್ಯದಲ್ಲಿ ಮಳೆ ನಿರಂತರವಾಗಿ ಹೆಚ್ಚಾಗಲಿದ್ದು ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು 24*7 ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸುವಂತೆ ಅಸ್ಸಾಂ ಸಿಎಂ ಸೂಚಿಸಿದ್ದಾರೆ. ಜೊತೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿನ ಔಷಧಿಗಳ ದಾಸ್ತಾನು ನವೀಕರಿಸಲು ಮತ್ತು ವೈದ್ಯರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾ ಆಯುಕ್ತರಿಗೆ ಸಿಎಂ ಸೂಚಿಸಿದ್ದಾರೆ.

    ನಿರಂತರ ಮಳೆ ಮತ್ತು ಪ್ರವಾಹ ಪರಿಸ್ಥಿತಿಯು ರಾಜ್ಯಗಳಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳ ಹೆಚ್ಚಾಗುವಂತೆ ಮಾಡಿದೆ. ಈವರೆಗೆ ಈ ಕಾಯಿಲೆಗಳಿಗೆ ಕನಿಷ್ಠ 14 ಮಂದಿ ಮಕ್ಕಳು ಬಲಿಯಾಗಿದ್ದಾರೆ ಮತ್ತು 189 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ ಎಂಬ ಮಾಹಿತಿ ದೊರಕಿದೆ.

    ಪ್ರವಾಹ ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ಮೇಲೂ ಪರಿಣಾಮ ಬೀರಿದ್ದು, ಬ್ರಹ್ಮಪುತ್ರದಿಂದ ಬರುವ ಪ್ರವಾಹದ ನೀರು ಕಾಜಿರಂಗ ರಾಷ್ಟ್ರೀಯ ಉದ್ಯಾನದ ಕೆಲವು ಭಾಗಗಳನ್ನು ಪ್ರವೇಶಿಸಿದ್ದು, ಪ್ರಾಣಿಗಳು ತಮ್ಮ ಜೀವ ರಕ್ಷಣೆಗಾಗಿ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‍ಡಿಆರ್‍ಎಫ್) ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಸೂಕ್ತ ಕ್ರಮ ಕೈಗೊಂಡಿದೆ.

  • ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

    ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

    ಡಿಸ್ಪುರ್: 11 ವರ್ಷದ ಬಾಲಕ ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತನ್ನ ತಾಯಿ ಸೇರಿದಂತೆ ಮೂವರನ್ನು ರಕ್ಷಿಸಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

    11 ವರ್ಷದ ಕಮಲ್ ಕಿಶೋರ್ ದಾಸ್ ಮೂವರನ್ನು ರಕ್ಷಿಸಿ ಶೌರ್ಯ ಮೆರೆದ ಬಾಲಕ. ಬುಧವಾರ ಕಮಲ್ ಕಿಶೋರ್ ದಾಸ್ ಕುಟುಂಬ ಉತ್ತರ ಗುವಾಹಟಿಯಿಂದ ತನ್ನ ಅಜ್ಜಿಯನ್ನು ಬಿಟ್ಟು ಮನೆಗೆ ವಾಪಸ್ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಅಸ್ಸಾಂನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಮಳೆಯಿಂದಾಗಿ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ದೋಣಿ ಪಿಲ್ಲರ್ ಗೆ ಬಡಿದು ಮಗುಚಿದೆ.

    ಈ ವೇಳೆ ಕಮಲ್ ತಾಯಿ ಆತನನ್ನು ಈಜಿ ಪಿಲ್ಲರ್ ಹಿಡಿದುಕೊಳ್ಳುವಂತೆ ಹೇಳಿದ್ದಾರೆ. ಅದರಂತೆಯೇ ಕಮಲ್ ಈಜಿ ಪಿಲ್ಲರ್ ಅನ್ನು ಹಿಡಿದುಕೊಂಡಿದ್ದಾನೆ. ಬಳಿಕ ಕಮಲ್ ಹಿಂದೆ ತಿರುಗಿ ನೋಡಿದಾಗ ತನ್ನ ತಾಯಿ ಮತ್ತು ಚಿಕ್ಕಮ್ಮ ಈಜಲು ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಕಮಲ್ ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ. ಬಳಿಕ ತಾಯಿಯ ತಲೆ ಕೂದಲನ್ನು ಹಿಡಿದುಕೊಂಡು ಈಜಿ ಪಿಲ್ಲರ್ ಹಿಡಿದುಕೊಳ್ಳಲು ಸಹಾಯ ಮಾಡಿದ್ದಾನೆ. ನಂತರ ದೂರದಲ್ಲಿ ತನ್ನ ಚಿಕ್ಕಮ್ಮ ಸಹ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ಮತ್ತೆ ನೀದಿಗೆ ಹಾರಿ ಚಿಕ್ಕಮ್ಮ ನನ್ನು ರಕ್ಷಿಸಿದ್ದಾನೆ.

    “ದೋಣಿ ಪಿಲ್ಲರ್ ಗೆ ಬಡಿದಾಗ ನನ್ನ ತಾಯಿಯು ನನ್ನ ಶೂಗಳನ್ನು ತೆಗೆದುಕೊಂಡು ಈಜುವಂತೆ ಹೇಳಿದರು. ಅದರಂತೆಯೇ ನಾನು ಈಜಿ ತೀರಕ್ಕೆ ಸೇರಿದೆ. ಆದರೆ ನಾನು ತೀರಕ್ಕೆ ಬಂದಾಗ ನನ್ನ ತಾಯಿ ಮತ್ತು ಚಿಕ್ಕಮ್ಮ ಈಜುಕೊಂಡು ಬರಲು ಸಾಧ್ಯವಾಗಿಲ್ಲ. ಬಳಿಕ ನಾನು ನದಿಗೆ ಹಾರಿ ತಾಯಿಯ ಕೂದಲನ್ನು ಹಿಡಿದುಕೊಂಡು ಬಂದು ಪಿಲ್ಲರ್ ಹಿಡಿದುಕೊಳ್ಳುವಂತೆ ಮಾಡಿದೆ” ಎಂದು ಕಮಲ್ ಹೇಳಿದ್ದಾನೆ.

    ಬುರ್ಕಾ ಧರಿಸಿದ್ದ ಮಹಿಳೆ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ನದಿಯಲ್ಲಿ ತೇಲುವುದಕ್ಕೂ ಕಷ್ಟ ಪಡುತ್ತಿದ್ದರು. ಬಳಿಕ ನಾನು ಮತ್ತೆ ನದಿಗೆ ಜಿಗಿದು ಅವರನ್ನು ರಕ್ಷಿಸಿದೆ. ಆದರೆ ದುರದೃಷ್ಟವಶಾತ್ ಮಗು ತಾಯಿಯ ಕೈಯಿಂದ ಜಾರಿ ನೀರಿನೊಳಗೆ ಬಿದ್ದು ಮುಂದೆ ಹೋಯಿತು. ತಾಯಿಯೂ ಕೂಡ ಮಗುವನ್ನು ರಕ್ಷಿಸಲು ನದಿಗೆ ಜಿಗಿದರು. ಆದರೆ ಈ ವೇಳೆ ನಾನು ಏನು ಮಾಡಲು ಸಾಧ್ಯವಾಗಿಲ್ಲ ಎಂದು ಕಮಲ್ ಹೇಳಿದ್ದಾನೆ.

    ಕಮಲ್ ವಾರದಲ್ಲಿ ಎರಡು ಬಾರಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡುವುದನ್ನು ಅಭ್ಯಾಸ ಮಾಡಲು ಹೋಗುತ್ತಿದ್ದನು. ಇದರಿಂದಲೇ ಆತ ಧೈರ್ಯ ಪ್ರದರ್ಶಿಸಿ ನಮ್ಮ ಜೀವ ಉಳಿಸಲು ಸಾಧ್ಯವಾಯಿತು ಎಂದು ಕಮಲ್ ತಾಯಿ ಜಿತುಮೋನಿ ದಾಸ್ ಹೇಳಿದ್ದಾರೆ.

    ಈ ದೋಣಿಯಲ್ಲಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದು, ಜೊತೆಗೆ ಅಕ್ರಮವಾಗಿ 18 ಮೋಟಾರ್ ಬೈಕ್ ಗಳನ್ನು ಸಾಗಿಸಲಾಗುತ್ತಿತ್ತು. ಮೂವರನ್ನು ಕಮಲ್ ರಕ್ಷಿಸಿದ್ದು, 12 ಮಂದಿ ಈಜಿ ದಡ ಸೇರಿದ್ದಾರೆ. 10 ಮಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದಂತೆ 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv