Tag: ಬ್ರಹ್ಮಕಲಶೋತ್ಸವ

  • ಕುಪ್ಪೆಪದವು ದುರ್ಗೇಶ್ವರೀ ದೇವಿಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮ

    ಕುಪ್ಪೆಪದವು ದುರ್ಗೇಶ್ವರೀ ದೇವಿಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮ

    ಮಂಗಳೂರು: ದೈವ ದೇವಾಲಯಗಳ ತವರು ಕರಾವಳಿಯಲ್ಲಿ ಹಲವು ದೈವ ದೇವಸ್ಥಾನಗಳು‌ ಜೀರ್ಣೋದ್ಧಾರಗೊಳ್ಳುತ್ತಿವೆ. ಇವುಗಳ ಪೈಕಿ ಮಂಗಳೂರು ತಾಲೂಕಿನ ಅಂಚಿನಲ್ಲಿರುವ, ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳ ನಡುವೆ ಹರಿಯುವ ಪವಿತ್ರವಾದ ಪಲ್ಗುಣಿ ನದಿಯಿಂದ ಕೆಲವು ಮೀಟರ್ ದೂರದಲ್ಲಿರುವ ಕುಪ್ಪೆಪದವು ಪೇಟೆಯ ಹೃದಯಭಾಗದಲ್ಲಿ ನೆಲೆಸಿರುವ, ನಂಬಿ ಶರಣಾಗಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ವಾತ್ಸಲ್ಯಮಯಿ ಶ್ರೀದುರ್ಗೇಶ್ವರೀ ದೇವಿಯ ಕ್ಷೇತ್ರವೂ ಒಂದು.

    ಕ್ಷೇತ್ರದ ಆರಾಧ್ಯ ಮಂಗಳ ಮೂರ್ತಿಗೆ ಫೆಬ್ರವರಿ 12ರ ಭಾನುವಾರ ಮುಂಜಾನೆ ಪವಿತ್ರ ಬ್ರಹ್ಮಕಲಶೋತ್ಸವ ನೆರವೇರಲಿದೆ. ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಿಯ ಸಾನಿಧ್ಯ ಇರುವ ಸ್ಥಳದಲ್ಲಿ ಮುರಾತನ ಕಾಲದಿಂದ ರಾಮಾಯಣ, ಮಹಾಭಾರತ ಅಲ್ಲದೇ 7 ದಿನಗಳ ಸಂಪೂರ್ಣ ದೇವಿ ಮಹಾತ್ಮೆ ಸಹಿತ ಇತರ ಪೌರಾಣಿಕ ಯಕ್ಷಗಾನ ಬಯಲಾಟಗಳು ಪ್ರದರ್ಶನಗೊಂಡ ರಂಗಸ್ಥಳದಲ್ಲಿ ಶ್ರೀದುರ್ಗೇಶ್ವರೀಯ ದಿವ್ಯ ಸಾನಿಧ್ಯ ಇರುವ ಬಗ್ಗೆ ದೈವಜ್ಞರ ಚಿಂತನಾ ಪ್ರಶ್ನೆಯಲ್ಲಿ ಕಂಡುಬ೦ದ ಹಿನ್ನಲೆಯಲ್ಲಿ, ಪೇಜಾವರ ಮಠಾಧೀಶ ದಿ| ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರಿಂದ ಶಿಲಾನ್ಯಾಸ ನೆರವೇರಿತ್ತು. ನಂತರ ದೇವಸ್ಥಾನ ನಿರ್ಮಾಣವಾಗಿ 1973-74 ರಲ್ಲಿ ಶ್ರೀದುರ್ಗೇಶ್ವರಿ ದೇವಿಯ ಪ್ರತಿಷ್ಠೆ ನಡೆದು ಬ್ರಹ್ಮಕಲಶೋತ್ಸವ ನಡೆದಿತ್ತು. ಇದನ್ನೂ ಓದಿ: ವಿವಾದಾತ್ಮಕ ಭಾಷಣ – ಶರಣ್ ಪಂಪ್‌ವೆಲ್‌ ವಿರುದ್ಧ FIR ದಾಖಲು

    ಅಂದು ನಿರ್ಮಾಣವಾಗಿದ್ದ ದೇವಾಲಯ ಜೀರ್ಣಾವಸ್ಥೆ ತಲುಪಿದ್ದ ಹಿನ್ನಲೆಯಲ್ಲಿ ದೈವಜ್ಞ ವೇದಮೂರ್ತಿ ಪಂಜ ಭಾಸ್ಕರ ಭಟ್ ಅವರ ಸೂಚನೆಯನ್ವಯ, ಸೋಲೂರು ಆರ್ಯ-ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ದಾರ ಸಮಿತಿ ರಚಿಸಿ, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತರು ತೀರ್ಮಾಣಿಸಿದಂತೆ ತೀರ್ಥ ಮಂಟಪ ಮತ್ತು ನೂತನ ಶಿಲಾಮಯ ಗರ್ಭಗೃಹ, ಗಣಪತಿ ಗುಡಿ, ಕೊಡಮಣಿತ್ತಾಯ ದೈವಸ್ಥಾನ,ಮತ್ತು ನಾಗಸನ್ನಿಧಿಯ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಸುಂದರವಾದ ದೇವಳದಲ್ಲಿ ಮಾತೆ ದುರ್ಗೆಯ ಪುನಃ ಪ್ರತಿಷ್ಠೆಗೆ ದಿನಗಣನೆ ಪ್ರಾರಂಭವಾಗಿದೆ. ಶ್ರೀದುರ್ಗೇಶ್ವರಿಯ ಇಚ್ಛೆಯಂತೆ, ಭಕ್ತರ ಸಹಕಾರದಿಂದ ಸುಂದರವಾದ ಶಿಲಾಮಯ ನೂತನ ದೇವಾಲಯ ನಿರ್ಮಾಣವಾಗಿದೆ. ಇದನ್ನೂ ಓದಿ: ಮೊಬೈಲ್ ನೋಡಲು ಬಿಡಲಿಲ್ಲವೆಂದು ಮನೆಯಲ್ಲೇ ನೇಣು ಬಿಗಿದು ಬಾಲಕ ಆತ್ಮಹತ್ಯೆ

    ಕ್ಷೇತ್ರದ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಫೆಬ್ರವರಿ 7ರ ಮಂಗಳವಾರದಿಂದ ಪ್ರಾರಂಭಗೊಂಡು 12ರ ಭಾನುವಾರದವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂಧರ್ಭದಲ್ಲಿ ಆಗಮಿಸುವ ಭಕ್ತರನ್ನು ಸ್ವಾಗತಿಸಲು ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಸರ್ವರೀತಿಯ ಸಿದ್ಧತೆಗಳು ನಡೆಯುತ್ತಿವೆ. ಸುಸಜ್ಜಿತ ಪಾಕಶಾಲೆ, ಉಗ್ರಾಣ, ಸಭಾ ವೇದಿಕೆ, ಅನ್ನಛತ್ರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬ್ರಹ್ಮಕಲಶೋತ್ಸವದಂದು ಸುಮಾರು 5 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಮೂಲಕ ಮತ್ತೊಂದು ಕ್ಷೇತ್ರವು ಲೋಕಮುಖಕ್ಕೆ ಪರಿಚಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ನೆರವು ಸಂಗ್ರಹಿಸಿದ ವಿಚಿತ್ರ ಜೀವಿ

    ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ನೆರವು ಸಂಗ್ರಹಿಸಿದ ವಿಚಿತ್ರ ಜೀವಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಯುವಕನೊಬ್ಬ ವಿಶೇಷ ವೇಷ ಧರಿಸಿ ಅನಾರೋಗ್ಯ ಪೀಡಿತ 5 ವರ್ಷದ ಪುಟ್ಟ ಮಗುವಿನ ಚಿಕಿತ್ಸೆಗೆ ನೆರವಾಗುತ್ತಿದ್ದಾನೆ.

    5 ವರ್ಷದ ನಿಹಾರಿಕಾ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆ ವೆಚ್ಚಕ್ಕೆ 10 ಲಕ್ಷ ರೂಪಾಯಿ ಬೇಕಾಗುತ್ತದೆ. ಆದರೆ ನಿಹಾರಿಕಾಳ ತಂದೆ ತಾಯಿ ಬಡ ಕುಟುಂಬವರಾಗಿದ್ದು, ದಾನಿಗಳ ಸಹಾಯಕ್ಕೆ ಕೈ ಚಾಚಿದ್ದಾರೆ.

    ಹೀಗಾಗಿ ಕಟೀಲು ಬ್ರಹ್ಮಕಲಶದ ಪುಣ್ಯ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ಮೂಡಬಿದಿರೆ ಇಲ್ಲಿನ ತಂಡದ ಸದಸ್ಯರು ಸೇರಿ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ತಂಡದ ಸದಸ್ಯ ವಿಕ್ಕಿ ಶೆಟ್ಟಿ ವಿಶೇಷ ವೇಷ ಹಾಕಿಸಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಬ್ರಹ್ಮಕಲಶೋತ್ಸವಕ್ಕೆ ಬಂದ ಲಕ್ಷಾಂತರ ಭಕ್ತರಲ್ಲಿ ಹೆಚ್ಚಿನವರು ಹಣ ನೀಡಿ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

  • ಸಂಭ್ರಮದಿಂದ ನಡೆದ ಕಟೀಲು ಬ್ರಹ್ಮಕಲಶೋತ್ಸವ

    ಸಂಭ್ರಮದಿಂದ ನಡೆದ ಕಟೀಲು ಬ್ರಹ್ಮಕಲಶೋತ್ಸವ

    ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ತುಳುನಾಡಿನ ಪುರಾಣ ಪ್ರಸಿದ್ಧ ಸ್ಥಳವಾಗಿದ್ದು, ಈ ಪವಿತ್ರ ಸ್ಥಳದಲ್ಲಿ ಈಗ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯುತ್ತಿದೆ. ಲಕ್ಷಾಂತರ ಭಕ್ತರ ದಂಡು ಕಟೀಲಿನತ್ತ ಹರಿದುಬರುತ್ತಿದೆ.

    ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವ ಸಂಭ್ರಮ ಈಗ ನಡೆಯುತ್ತಿದೆ. ರಾಜ್ಯದ, ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರ ಸಮಾಗಮ ಕಟೀಲಿನಲ್ಲಿ ನಡೆದಿದೆ. ದುರ್ಗಾಪರಮೇಶ್ವರಿಗೆ ವೈಭವದ ಬ್ರಹ್ಮಕಲಶೋತ್ಸವ ನಡೆದಿದ್ದು, ಜನರು ತಾಯಿಯ ಆಶೀರ್ವಾದ ಪಡೆದು ಧನ್ಯರಾಗಿದ್ದಾರೆ.

    20 ಸಾವಿರ ಸ್ವಯಂಸೇವಕರು ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದು, ಭಕ್ತರು ತಮ್ಮ ಶಕ್ತಿಯನುಸಾರ ಸೇವೆ ಸಲ್ಲಿಸಿದ್ದಾರೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಹೀಗಾಗಿ ಜನರು ಅಕ್ಕಿ, ತರಕಾರಿ, ಅಡುಗೆ ಸಾಮಾನು ಸೇರಿದಂತೆ ಪಾತ್ರೆ-ಪಗಡೆಗಳನ್ನು ಭಕ್ತಿಯಿಂದ ಕ್ಷೇತ್ರಕ್ಕೆ ನೀಡುತ್ತಿದ್ದಾರೆ.

    ನಾನಾ ಕಾರಣಗಳಿಂದ ಕ್ಷೇತ್ರದಲ್ಲಿ ಶಕ್ತಿ, ಸಾನಿಧ್ಯವನ್ನು ಪುನಃ ಕ್ರೂಢೀಕರಿಸಿ, ಆ ಮೂಲಕ ದೇವರ ಸಾನಿಧ್ಯವನ್ನು ಅತ್ಯಂತ ಜಾಗೃತಗೊಳಿಸೋದು ಬ್ರಹ್ಮಕಲಶೋತ್ಸವದ ಉದ್ದೇಶವಾಗಿದೆ.

    ಬ್ರಹ್ಮಕಲಶ ಮಂಡಲದಲ್ಲಿ 984 ಚಿಕ್ಕ ಕಲಶಗಳನ್ನಿಟ್ಟು, ಮಂಡಲದ ಮಧ್ಯದಲ್ಲಿ ಬ್ರಹ್ಮಕಲಶವನ್ನಿಟ್ಟು ಎಲ್ಲಾ ದೇವಾಧಿದೇವತೆಗಳನ್ನು ಪೂಜಿಸಿ ಪವಿತ್ರ ದ್ರವ್ಯದಿಂದ ದೇವಿಗೆ ಕಲಶಾಭಿಷೇಕ ಮಾಡಲಾಗಿದೆ. ಪ್ರತಿದಿನ ಲಕ್ಷಾಂತರ ಮಂದಿ ದೇವಸ್ಥಾನಕ್ಕೆ ಬಂದರೂ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಲಾಗಿದೆ.

    ಜನವರಿ 22 ರಂದು ಆರಂಭವಾದ ಬ್ರಹ್ಮಕಲಶೋತ್ಸವ ಸಂಭ್ರಮ ಫೆಬ್ರವರಿ 3ರವರೆಗೆ ನಡೆಯಲಿದೆ. ನಾಗಮಂಡಲ, ಕೋಟಿ ಜಪಯಜ್ಞ, ಸಹಸ್ರ ಚಂಡಿಕಾಯಾಗವೂ ನಡೆಯಲಿದೆ. ಈ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ಕಟೀಲು ದುರ್ಗಾಪರಮೇಶ್ವರಿಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸಂಭ್ರಮದ ಕ್ಷಣದಲ್ಲಿ ಭಾಗಿಯಾಗಿದ್ದಾರೆ.

    ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಪ್ರಮುಖ ಗಣ್ಯರೂ ದೇವಸ್ಥಾನಕ್ಕೆ ಭೇಟಿ ನೀಡಿ ದುರ್ಗಾಪರಮೇಶ್ವರಿಯ ಆಶೀರ್ವಾದ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಜೋರಾಗಿ ನಡೆಯುತ್ತಿದೆ. ಕಾರಣಿಕ ಶಕ್ತಿಯಾಗಿ ಮೆರೆಯುತ್ತಿರುವ ಮಂದಸ್ಮಿತ ದುರ್ಗಾಪರಮೇಶ್ವರಿಯನ್ನು ಕಂಡು ಜನ ಸಂಪ್ರೀತರಾಗಿದ್ದಾರೆ.

  • ಕಟೀಲಮ್ಮನ ಕ್ಷೇತ್ರದಲ್ಲಿ ಶಿಲ್ಪಾ ಶೆಟ್ಟಿ- ತನ್ನೂರಿನ ಬ್ರಹ್ಮಕಲಶೋತ್ಸವದಲ್ಲಿ ಭಾಗಿ

    ಕಟೀಲಮ್ಮನ ಕ್ಷೇತ್ರದಲ್ಲಿ ಶಿಲ್ಪಾ ಶೆಟ್ಟಿ- ತನ್ನೂರಿನ ಬ್ರಹ್ಮಕಲಶೋತ್ಸವದಲ್ಲಿ ಭಾಗಿ

    ಮಂಗಳೂರು: ಖ್ಯಾತ ಬಾಲಿವುಡ್ ನಟಿ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿ ಕಟೀಲು ಶ್ರೀ ದೇವಿಯ ದರ್ಶನ ಪಡೆದರು.

    ಈ ವೇಳೆ ಮಾತನಾಡಿದ ಅವರು, ಕ್ಷೇತ್ರಕ್ಕೆ ಬರಬೇಕು ಎಂದು ತುಂಬಾ ಆಸೆ ಇತ್ತು. ಕಟೀಲು ದೇವರ ಅನುಗ್ರಹದಿಂದ ನಾನು ಇಷ್ಟೇಲ್ಲ ಸಾಧನೆ ಮಾಡಲು ಸಾಧ್ಯವಾಯಿತು. ಹಾಗಾಗಿ ಬ್ರಹ್ಮಕಲಶದ ಈ ಸಂದರ್ಭದಲ್ಲಿ ದೇವಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದು ಮಾತೃ ಭಾಷೆ ತುಳುವಿನಲ್ಲಿ ಮಾತನಾಡಿದರು.

    ಕಟೀಲು ಕ್ಷೇತ್ರದ ವತಿಯಿಂದ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲೇ ತನ್ನ ಮನೆಯಿರುವ ಶಿಲ್ಪಾ ಶೆಟ್ಟಿ ಅವರು ಕಟೀಲು ದುರ್ಗಾಪರಮೇಶ್ವರಿ ದೇವಿಯ ಪರಮ ಭಕ್ತೆಯಾಗಿದ್ದಾರೆ. ತನ್ನ ಹುಟ್ಟೂರಿಗೆ ಹಾಗೂ ಮಂಗಳೂರಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರುವಾಗ, ತಪ್ಪದೇ ಕಟೀಲು ಶ್ರೀ ದೇವಿಯ ದರ್ಶನ ಪಡೆಯುತ್ತಾರೆ.

  • ಕಟೀಲು ದುರ್ಗೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

    ಕಟೀಲು ದುರ್ಗೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

    ಮಂಗಳೂರು: ಪುಣ್ಯಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು.

    ಮನದ ಇಷ್ಟಾರ್ಥ ನೆರವೇರಿಸುವ ಭ್ರಮರಾಂಭಿಕೆ ಬ್ರಹ್ಮಕಲಶೋತ್ಸವ ಅಂಗವಾಗಿ ಜನವರಿ 22ರಿಂದ ಕಟೀಲು ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆದವು. ಇಂದು ಬೆಳಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಂಡು ಬೆಳಗ್ಗೆ 9:37ಕ್ಕೆ ಮೀನ ಲಗ್ನದಲ್ಲಿ ಶ್ರೀ ದೇವಿಗೆ ಬಹ್ಮಕಲಶಾಭಿಷೇಕ ನೆರವೇರಿತು. ಈ ದೃಶ್ಯವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಬಳಿಕ ಅವಸ್ರುತಬಲಿ ಮಹಾಪೂಜೆ, ಪಲ್ಲಪೂಜೆ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

    ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ವಿಶೇಷ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಭಕ್ತರು ದೇವರ ಪ್ರಸಾದ ಸ್ವೀಕರಿಸಿದ್ದರು. ಅಷ್ಟೇ ಅಲ್ಲದೆ ಭಕ್ತರ ಬಾಯಾರಿಕೆ ನೀಗಿಸಲು ಪಾನಕ, ಕಲ್ಲಂಗಡಿ ಹಣ್ಣುಗಳನ್ನು ನೀಡಲಾಗುತ್ತಿದೆ.

    ವಿವಿಧ ಭಾಗದಿಂದ ಬರುವ ಭಕ್ತರ ವಾಹನಗಳ ಪಾರ್ಕಿಂಗ್‍ಗೆ 35 ಎಕರೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. 600ಕ್ಕೂ ಮೀರಿ ಸ್ವಯಂಸೇವಕರು ಪಾರ್ಕಿಂಗ್‍ನಲ್ಲಿ ಹಾಗೂ ಇತರ ಕಡೆ ಸಾವಿರಕ್ಕೂ ಅಧಿಕ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರಹ್ಮಕಲಶೋತ್ಸವದ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆಬ್ರವರಿ 3ರವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ನಾಗಮಂಡಲ, ಫೆಬ್ರವರಿ 2ರಂದು ಕೋಟಿಜಪ ಯಜ್ಞ ಹಾಗೂ ಫೆಬ್ರವರಿ 3ರಂದು ಸಹಸ್ರ ಚಂಡಿಕಾಯಾಗ ನಡೆಯಲಿದೆ.

  • ಕಟೀಲು ಕ್ಷೇತ್ರದಲ್ಲಿ ಕೋಟಿ ಜಪ ಯಜ್ಞಕ್ಕೆ ಸಂಕಲ್ಪ – ಹರಿದು ಬಂದ ಜನ ಸಾಗರ

    ಕಟೀಲು ಕ್ಷೇತ್ರದಲ್ಲಿ ಕೋಟಿ ಜಪ ಯಜ್ಞಕ್ಕೆ ಸಂಕಲ್ಪ – ಹರಿದು ಬಂದ ಜನ ಸಾಗರ

    ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 2020ರ ಜನವರಿ 22 ರಿಂದ ಫೆಬ್ರವರಿ 3 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಆಯೋಜನೆಗೊಂಡ ಕೋಟಿ ಜಪದ ಸಂಕಲ್ಪಕ್ಕೆ ಚಾಲನೆ ನೀಡಲಾಯಿತು.

    ಸುಮಾರು ಆರು ಸಾವಿರ ಮಂದಿಗೆ ಒಂದು ಕೋಟಿ ಜಪ ಯಜ್ಞದ ಮಂತ್ರ ದೀಕ್ಷೆ ಸಂಕಲ್ಪ ಮಾಡಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಹರಿ ನಾರಾಯಣ ದಾಸ ಆಸ್ರಣ್ಣ ಪ್ರಸ್ತಾವನೆಗೈದು ದೇವಿಯ ಸಪ್ತತಿ ಪಾರಾಯಣದಲ್ಲಿ ಬರುವ 700 ಶ್ಲೋಕದಲ್ಲಿ ಈ ಮಂತ್ರ ದೀಕ್ಷೆಯ ಶ್ಲೋಕವು ವಿಶಿಷ್ಟವಾಗಿದ್ದು ಬಹು ಪ್ರಾಮುಖ್ಯ ಪಡೆದಿದ್ದು ಇದನ್ನು ಪಠಿಸಿದರೆ ಫಲ ಪ್ರಾಪ್ತಿ ಜಾಸ್ತಿ ಇದೆ ಎಂದರು.

    ವೃತಧಾರಿಗಳು ಫೆಬ್ರವರಿ 2 ರಂದು ಕ್ಷೇತ್ರದಲ್ಲಿ ನಡೆಯುವ ಕೋಟಿ ಜಪಯಾಗದಲ್ಲಿ ಭಾಗವಹಿಸಬೇಕೆಂದು ವಿವರಣೆ ನೀಡಿದರು. ಕಡಂದಲೆ ಸ್ಕಂದಪ್ರಸಾದ ಭಟ್ ಮಂತ್ರ ದೀಕ್ಷೆಯ ವಿಧಿವಿಧಾನ ತಿಳಿಸಿ ಎರಡು ಸಲ 108 ಬಾರಿ ಮಂತ್ರ ಬೋಧಿಸಿದರು. ವೃತಧಾರಿಗಳಿಗೆ ದಾರ, ಮಂತ್ರಾಕ್ಷತೆ ಹಾಗೂ ಜಪದ ಲೆಕ್ಕ ಇಡುವ ಪತ್ರಕ ನೀಡಲಾಯಿತು. ಈಗಾಗಲೇ ಜಪ ಪಠಣ ವೃತಧಾರಿಗಳಾಗಿ ಇಪ್ಪತ್ತು ಸಾವಿರದಷ್ಟು ಮಂದಿ ತಮ್ಮ ಹೆಸರು ನೋಂದಾಯಿಸಿದ್ದಾರೆ.

    ಪಾದಯಾತ್ರೆಯಲ್ಲಿ ಆಗಮನ: ಕೋಟಿ ಜಪದ ಸಂಕಲ್ಪ ಯಜ್ಞದಲ್ಲಿ ಭಾಗಿಯಾಗಲು ಕಟೀಲು ಆಸುಪಾಸಿನ ಊರುಗಳಾದ ಎಕ್ಕಾರು ಹಾಗೂ ಕಿನ್ನಿಗೋಳಿಯ ಮೂರು ಕಾವೇರಿಯಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲೇ ಕಟೀಲು ಕ್ಷೇತ್ರಕ್ಕಾಗಮಿಸಿದರು.

    ತಾಯಿಗೆ ಶರಣಾಗುವ: ಜಪದಿಂದ, ಪಾದಯಾತ್ರೆಯಿಂದ ಕಟೀಲಮ್ಮನಿಗೆ ಶರಣಾಗುವ ಮೂಲಕ ಧನ್ಯರಾಗೋಣ ಎಂದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು. ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ದೇಗುಲದ ಆಡಳಿತ ಸಮಿತಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಮೊಬೈಲಿಗೆ ಚಾರ್ಜ್ ಮಾಡಿದಂತೆ ನಮ್ಮ ಬದುಕಿಗೆ ಶಕ್ತಿ ತುಂಬಲು ದೇವರ ಉಪಾಸನೆ ಮುಖ್ಯ. ತಾಯಿ ದುರ್ಗೆಯ ಕುರಿತಾದ ಜಪದಿಂದ ನಮ್ಮ ಬದುಕು ಚೈತನ್ಯದಾಯಕವಾಗಲಿ ಎಂದು ಕಾಸರಗೋಡಿನ ಉಪ್ಪಳದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. ಅವರು ಮೂರು ಕಾವೇರಿಯಿಂದ ಹೊರಟ ಪಾದಯಾತ್ರೆಗೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.

    ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ, ಮೂಲ್ಕಿ ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಕೆ.ಭುವನಾಭಿರಾಮ ಉಡುಪ, ಪ್ರಥ್ವಿರಾಜ ಆಚಾರ್ಯ, ಡಾ. ಗಣೇಶ್ ಅಮೀನ್ ಸಂಕಮಾರ್, ಕೃಷ್ಣ ಮಾರ್ಲ, ರಘುವೀರ ಕಾಮತ್, ಉಮೇಶ್ ಪಂಜ, ಪಾರ್ಥಸಾರಥಿ ಮತ್ತಿತರರು ಉಪಸ್ಥಿತರಿದ್ದರು.