Tag: ಬ್ಯಾಲೆಟ್ ಪೇಪರ್

  • ಮತಗಳ್ಳತನ ಆಗಿದ್ರೆ ರಾಜೀನಾಮೆ ನೀಡಲಿ, ಬ್ಯಾಲೆಟ್ ಪೇಪರ್‌ನಿಂದ ಚುನಾವಣೆ ನಡೆಸಿ ಅಧಿಕಾರಕ್ಕೆ ಬರಲಿ: ಕಾರಜೋಳ

    ಮತಗಳ್ಳತನ ಆಗಿದ್ರೆ ರಾಜೀನಾಮೆ ನೀಡಲಿ, ಬ್ಯಾಲೆಟ್ ಪೇಪರ್‌ನಿಂದ ಚುನಾವಣೆ ನಡೆಸಿ ಅಧಿಕಾರಕ್ಕೆ ಬರಲಿ: ಕಾರಜೋಳ

    ನವದೆಹಲಿ: ಕಾಂಗ್ರೆಸ್‌ನವರಿಗೆ (Congress) ದೇಶದ ಚುನಾವಣೆ ಆಯೋಗದ ಮೇಲೆ ನಂಬಿಕೆ ಹೊರಟು ಹೋಗಿದೆ. ಮತಗಳ್ಳತನ (Vote Theft) ಆಗಿದ್ರೆ ಕರ್ನಾಟಕದಲ್ಲಿ 136 ಸೀಟ್ ಹೇಗೆ ಬಂತು? ಅವರು ಮೊದಲು ರಾಜೀನಾಮೆ ನೀಡಲಿ. ಬ್ಯಾಲೆಟ್ ಪೇಪರ್‌ನಿಂದ (Ballot Paper) ಚುನಾವಣೆ ನಡೆಸಿ ಅಧಿಕಾರಕ್ಕೆ ಬರಲಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಗೆದ್ದಲ್ಲಿ ಚುನಾವಣಾ ಆಯೋಗ ಇವಿಎಂ (EVM) ಸರಿಯಿದೆ ಅಂತಾರೆ ಇಲ್ಲಾಂದ್ರೆ ಇಲ್ಲಾ. ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಸರು ಹಾಳು ಮಾಡುತ್ತಿದ್ದಾರೆ. ಇವಿಎಂ ಬೇಡ ಬ್ಯಾಲೆಟ್ ಬೇಕು ಅಂತಾರೆ. ಅಧಿಕಾರ ಸಿಗದಿದ್ದಕ್ಕೆ ಹತಾಶರಾಗಿ ಹೀಗೆ ಹೇಳುತ್ತಿದ್ದಾರೆ ಎಂದರು. ಇದನ್ನೂ ಓದಿ: 38 ಗಂಟೆಗಳ ಕಾಲ ನಡೆಯಿತು ಗಣೇಶ ವಿಸರ್ಜನೆ ಮೆರವಣಿಗೆ- ಬೆಳಗಾವಿಯಲ್ಲಿ ದಾಖಲೆ ನಿರ್ಮಾಣ

    ನಾಳೆ ಚುನಾವಣೆ ಇದೆ. ಭಾನುವಾರ ಹಲವು ಹೊಸ ಸದಸ್ಯರಿಗೆ ವಿವಿಧ ರಾಜ್ಯಗಳ ಆಡಳಿತ ವ್ಯವಸ್ಥೆ ಕೆಲಸ ಕಾಮಗಾರಿ ಬಗ್ಗೆ ಅನುಭವ ಹಂಚಿಕೆ ಬಗ್ಗೆ ಕಾರ್ಯಾಗಾರ ಮಾಡಲಾಗಿದೆ. ಸಭೆ ಸಮಾರಂಭಗಳಲ್ಲಿ ಭಾಗಿಯಾಗುವ ಬಗ್ಗೆ, ಸ್ಥಳೀಯ ಸಂಸ್ಥೆಗಳ ಸಮಸ್ಯೆ ಬಗ್ಗೆ ಅರಿವು ಮೂಡಿಸಿದೆ. ನಡ್ಡಾ ಮೋದಿ ಯವರು ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮತಗಳ್ಳತನ ಮೂಲಕ ನನ್ನ ಸೋಲಿಸಲು ಸಂಚು ಮಾಡಲಾಗಿತ್ತು: ಬಿ.ಆರ್.ಪಾಟೀಲ್

    ಮದ್ದೂರಿನಲ್ಲಿ ಲಾಠಿ ಚಾರ್ಜ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಅಂದರೆ ಜಾತಿ ಧರ್ಮದ ಹೆಸರಿನಲ್ಲಿ ಬಡಿದಾಡುವ ರಾಜ್ಯ ಅಲ್ಲ. ಪ್ರಾಚೀನ ಕಾಲದಿಂದಲೂ ಒಟ್ಟಾಗಿ ಬದುಕಿದ ರಾಜ್ಯ. ಶಾಂತಿ ಸೌಹಾರ್ದತೆಗೆ ಹೆಚ್ಚು ಮಹತ್ವ ನೀಡಬೇಕು. ಕರ್ನಾಟಕಕ್ಕೆ ಉತ್ತಮ ಹೆಸರು ಇದೆ. ಮುಸ್ಲಿಂ ಬಾಂಧವರು ಹಿಂದೂಗಳ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಹಿಂದೂಗಳು ಮುಸ್ಲಿಮರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಕರ್ನಾಟಕ ಸೌಹಾರ್ದತೆಯ ರಾಜ್ಯ. ಧರ್ಮದ ಹೆಸರಿನಲ್ಲಿ ಹೀಗೆ ಮಾಡೋದು ತಪ್ಪು ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ದೂರು ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತದಂತೆ ಭಾಸವಾಗುತ್ತಿದೆ – ಬಿವೈವಿ ಕಿಡಿ

    ಆಲಮಟ್ಟಿ ಭಾಗದ ರೈತರಿಗೆ ಪರಿಹಾರ ವಿಚಾರವಾಗಿ ಮಾತನಾಡಿ, ಆಲಮಟ್ಟಿ ವಿಚಾರದಲ್ಲಿ ನಾವು ಪರಿಹಾರ ನೀಡಿದ್ದೆವು. ಭೂಮಿಯ ಮಾರುಕಟ್ಟೆ ಬೆಲೆ ಹೆಚ್ಚಿದೆ. ರೈತರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು. ರೈತರಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ

  • ಮೋದಿಯಿಂದ ಮಾತ್ರ ಭಾರತ ಮುನ್ನಡೆಸಲು ಸಾಧ್ಯ ಅಂತ ಜನ ಒಪ್ಪಿದ್ದಾರೆ: ವಿಜಯೇಂದ್ರ

    ಮೋದಿಯಿಂದ ಮಾತ್ರ ಭಾರತ ಮುನ್ನಡೆಸಲು ಸಾಧ್ಯ ಅಂತ ಜನ ಒಪ್ಪಿದ್ದಾರೆ: ವಿಜಯೇಂದ್ರ

    – ರಾಹುಲ್ ಗಾಂಧಿ, ಸಿದ್ದರಾಮಯ್ಯಗೇಕೆ ಇವಿಎಂ ಮೇಲೆ ವಿಶ್ವಾಸ ಕಡಿಮೆ ಆಗಿದೆ? ಅಂತ ಪ್ರಶ್ನೆ

    ಬೆಂಗಳೂರು: ಮೋದಿಜಿ (PM Modi) ಅವರಿಂದ ಮಾತ್ರ ಭಾರತವನ್ನ ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಜನ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಹೇಳಿದರು.

    ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಜನತೆ ಕಾಂಗ್ರೆಸ್ ಪಕ್ಷದ (Congress Party) ಬಗ್ಗೆ ಏಕೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಚರ್ಚಿಸಬೇಕು ಅಥವಾ ಚಿಂತನೇ ಮಾಡಬೇಕೆ ವಿನಾಃ ಇವಿಎಂ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ಮುರ್ಖತನದ ಪರಮಾವಧಿ. ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಜೀ ಅವರಿಂದ ಮಾತ್ರ ಭಾರತವನ್ನ ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಜನ ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದೆ ಪ್ರಸ್ತುತ ಇವಿಎಂ (EVM) ಮೇಲೆ ದೂರುವುದು ಮತ್ತು ದೋಷಪೂರಿತ ಎಂದು ಕಾಂಗ್ರೆಸ್ ಹೇಳುತ್ತಿರುವುದು ಹುಚ್ಚುತನದ ಪರಮಾವಧಿ ಎಂದು ಲೇವಡಿ ಮಾಡಿದರು.

    ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರಿಗೆ ಇವಿಎಂ ಮೇಲೆ ಏಕೆ ವಿಶ್ವಾಸ ಕಡಿಮೆ ಆಗಿದೆ? ರಾಹುಲ್ ಗಾಂಧಿಯವರು ಸತತವಾಗಿ 3 ಬಾರಿ ಕೇಂದ್ರ ಲೋಕಸಭಾ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಇವಿಎಂ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮೂರ್ಖತನದ ಪರಮಾವಧಿ: ವಿಜಯೇಂದ್ರ ಟೀಕೆ

    ಬ್ಯಾಲೆಟ್ ಪೇಪರ್ (Ballot paper) ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯು ಬ್ಯಾಲೆಟ್ ಪೇಪರ್‌ಗೆ ಹೆದರುವುದಿಲ್ಲ, ನಾವು ಏಕೆ ಹೆದರಬೇಕು? ಎಂದು ಕೇಳಿದರಲ್ಲದೇ ಕೇಂದ್ರದಲ್ಲಿ ಸತತವಾಗಿ 3 ಬಾರಿ ನರೇಂದ್ರ ಮೋದಿ ಜೀ ಅವರ ಸರ್ಕಾರ ಇದೆ. ಬಿಜೆಪಿ ಬ್ಯಾಲೆಟ್ ಪೇಪರ್‌ಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಇವಿಎಂ ಬಗ್ಗೆಯೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.  ಇದನ್ನೂ ಓದಿ: ಪ್ರತಾಪ್ ಸಿಂಹನನ್ನ ಬಿಜೆಪಿ ಕಿತ್ತು ಬಿಸಾಕಿದೆ, ಬದುಕಿದ್ದೀನಿ ಅಂತ ತೋರಿಸಿಕೊಳ್ಳೋಕೆ ಪ್ರಯತ್ನ: ಡಿಕೆಶಿ ಟಾಂಗ್

    ರಾಹುಲ್ ಗಾಂಧಿಯವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಇವಿಎಂ ಬಗ್ಗೆ ಸಮಸ್ಯೆ ಇದ್ದರೆ ಕಾಂಗ್ರೆಸ್ ಪಕ್ಷ ಹಿಮಾಚಲ ಪ್ರದೇಶದಲ್ಲಿ ಹೇಗೆ ಅಧಿಕಾರಕ್ಕೆ ಬಂದಿತು? ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಅಧಿಕಾರಕ್ಕೆ ಬಂತು? ಇದೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಅಧಿಕಾರಕ್ಕೆ ಬಂತು? ಆ ಸಮಯದಲ್ಲಿ ಇವಿಎಂ ಸಮಸ್ಯೆ ಇರಲಿಲ್ಲವೇ? ಬ್ಯಾಲೆಟ್ ಪೇಪರ್ ಬೇಕು ಅನ್ನಿಸಲಿಲ್ಲವೇ? ಮಹಾರಾಷ್ಟ್ರ, ಹರಿಯಾಣ ಎಲ್ಲ ರಾಜ್ಯಗಳಲ್ಲಿ ಸತತವಾಗಿ ಸೋಲನ್ನು ಕಂಡಿರುವ ಕಾಂಗ್ರೆಸ್ ಪಕ್ಷದವರು ಇಂದು ಹತಾಶರಾಗಿ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇವಿಎಂ ದೋಷಪೂರಿತ ಎಂದು ಆರೋಪ ಮಾಡುತ್ತಾರೆ ಎಂದು ಕಿಡಿ ಕಾರಿದರು.

    ಪ್ರಧಾನಿ ನರೇಂದ್ರ ಮೋದಿ ಜೀ ಅವರ ಅಪೇಕ್ಷೆಯಂತೆ ʻಒಂದು ದೇಶ ಒಂದು ಚುನಾವಣೆʼಯಿಂದ ದೇಶಕ್ಕೆ ಸಾಕಷ್ಟು ಒಳಿತಾಗುತ್ತದೆ. ಆ ನಿಟ್ಟಿನಲ್ಲಿ ಜನಾಭಿಪ್ರಾಯ ಮೂಡಿಸಬೇಕು ಸದುದ್ದೇಶ ಇಟ್ಟುಕೊಂಡು ದೇಶಾದ್ಯಂತ ಒಂದು ದೇಶ ಒಂದು ಚುನಾವಣೆ ಕಾರ್ಯಕ್ರಮ ನಡೆಯುತ್ತಿದೆ. ಆದ್ರೆ ಕಾಂಗ್ರೆಸ್ಸಿನವರು ಎಲ್ಲದರಲ್ಲೂ ವಿರೋಧ ಮಾಡುತ್ತಿದ್ದಾರೆ. ವಕ್ಫ್‌ ಬೋರ್ಡ್ ಬಗ್ಗೆ ಹೋರಾಟ ಮಾಡಿ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿದರು, ಆರ್ಟಿಕಲ್ 370 ಬಗ್ಗೆ ವಿರೋಧ ವ್ಯಕ್ತಪಡಿಸಿದರು, ಒಂದು ದೇಶ ಒಂದು ಚುನಾವಣೆಯನ್ನೂ ವಿರೋಧ ಮಾಡಿದರು. ಅದೇ ರೀತಿ ಇಂದು ಇವಿಎಂ ಅನ್ನು ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಇದನ್ನೂ ಓದಿ: ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್: ಅಶೋಕ್ ಟೀಕೆ

  • ಇವಿಎಂ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮೂರ್ಖತನದ ಪರಮಾವಧಿ: ವಿಜಯೇಂದ್ರ ಟೀಕೆ

    ಇವಿಎಂ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮೂರ್ಖತನದ ಪರಮಾವಧಿ: ವಿಜಯೇಂದ್ರ ಟೀಕೆ

    – ಬ್ಯಾಲೆಟ್ ಪೇಪರ್ ಜಾರಿಗೆ ವಿಜಯೇಂದ್ರ ವಿರೋಧ

    ಬೆಂಗಳೂರು: ಬ್ಯಾಲೆಟ್ ಪೇಪರ್ (Ballot Paper) ಜಾರಿಗೆ ತರುತ್ತಿರೋದು ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.

    ಬ್ಯಾಲೆಟ್ ಪೇಪರ್ ಜಾರಿ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ (Congress) ಬ್ಯಾಲೆಟ್ ಪೇಪರ್ ನೆನಪಾಗಿದೆ. ಇವಿಎಂ ಮೇಲೆ ವಿಶ್ವಾಸ ಕಡಿಮೆಯಾಗಿದೆ. ಯಾಕೆ ಅಂತ ಸಿಎಂ, ಡಿಸಿಎಂ ಹೇಳಬೇಕು. ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ಜನನ ಅವರನ್ನು ತಿರಸ್ಕರಿಸಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಇವಿಎಂ (EVM) ಸರಿ ಇಲ್ಲ ಎನ್ನುತ್ತಿದ್ದಾರೆ. ನಾವು ಬ್ಯಾಲೆಟ್ ಪೇಪರ್‌ಗೆ ಹೆದರುತ್ತಿಲ್ಲ, ಅದರ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್: ಅಶೋಕ್ ಟೀಕೆ

    ಇವಿಎಂಗಳಲ್ಲಿ ದೋಷ ಇದ್ದಿದ್ದರೆ ಹಿಮಾಚಲಪ್ರದೇಶ, ತೆಲಂಗಾಣ, ಕರ್ನಾಟಕಗಳಲ್ಲಿ ಕಾಂಗ್ರೆಸ್ ಹೇಗೆ ಅಧಿಕಾರಕ್ಕೆ ಬಂತು? ಮಹಾರಾಷ್ಟ್ರ, ಹರಿಯಾಣಗಳಲ್ಲಿ ಸೋತಿರುವ ಕಾಂಗ್ರೆಸ್ ಹತಾಶೆಯಿಂದ ಬ್ಯಾಲೆಟ್ ಪೇಪರ್ ಜಾರಿಗೆ ತರುತ್ತಿದ್ದಾರೆ. ಕಾಂಗ್ರೆಸ್ ಎಲ್ಲವನ್ನೂ ವಿರೋಧ ಮಾಡುತ್ತಿದೆ. ಬ್ಯಾಲೆಟ್ ಪೇಪರ್ ವಿರುದ್ಧ ಬಿಜೆಪಿಯಿಂದ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಗ ದೋಷಮುಕ್ತನಾಗಿ ಬರುತ್ತಾನೆಂಬ ನಂಬಿಕೆ ಇದೆ: ಯೂಟ್ಯೂಬರ್ ಅಭಿಷೇಕ್ ತಾಯಿ ಮಾತು

    ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಪ್ರತಾಪ್ ಸಿಂಹ ಹೈಕೋರ್ಟ್ ಮೊರೆ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲ. ನಾನೂ ಮಾಧ್ಯಮಗಳಲ್ಲಿ ನೋಡಿದ್ದು. ಬಾನು ಮುಷ್ತಾಕ್ ಅವರನ್ನು ಕರೆದಿದ್ದಾರೆ, ಹಿಂದೂ ಮಹಿಳೆ ದೀಪಾ ಬಸ್ತಿ ಅವರನ್ನು ಯಾಕೆ ಕರೆಯಲಿಲ್ಲ? ಇದಕ್ಕೆ ಸಿದ್ದರಾಮಯ್ಯ ಅವರು ಇನ್ನೂ ಉತ್ತರ ಕೊಟ್ಟಿಲ್ಲ. ಮೊದಲು ಇದಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ಕೊಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ

  • ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್: ಅಶೋಕ್ ಟೀಕೆ

    ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್: ಅಶೋಕ್ ಟೀಕೆ

    ಬೆಂಗಳೂರು: ರಾಜ್ಯದಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ (Ballot Paper) ಬಳಕೆಗೆ ರಾಜ್ಯ ಸರ್ಕಾರದ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಬಿಜೆಪಿ (BJP) ನಾಯಕರು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ (R Ashok) ಎಕ್ಸ್‌ನಲ್ಲಿ ಕಿಡಿಕಾರಿದ್ದು, ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್ ಎಂದು ಟೀಕಿಸಿದ್ದಾರೆ.

    ಹ್ಯಾಟ್ರಿಕ್ ಝೀರೋ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಪೂರ್ಣ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಅವರನ್ನು ರಕ್ಷಿಸಲು, ಚುನಾವಣಾ ಆಯೋಗದ ಬಗ್ಗೆ, ಚುನಾವಣಾ ಪ್ರಕ್ರಿಯೆ ಬಗ್ಗೆ, ಮತಯಂತ್ರಗಳ ಬಗ್ಗೆ ಇಲ್ಲಸಲ್ಲದ ಅನುಮಾನ ಬಿತ್ತು ಊಹಾಪೋಹ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಲೇ ಬಂದಿದೆ. ಭಾರತದ ಪ್ರಜ್ಞಾವಂತ ಮತದಾರರು ಈ ಹತಾಶ ಪ್ರಯತ್ನವನ್ನ ತಿರಸ್ಕಾರ ಮಾಡುತ್ತಲೇ ಬಂದಿದ್ದಾರೆ. ಆದರೆ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ (ಸ್ಥಳೀಯ ಸಂಸ್ಥೆಗಳು) ಇವಿಎಂ ಯಂತ್ರ ಬದಲಾಗಿ ಮತಪತ್ರ (ಬ್ಯಾಲಟ್ ಪೇಪರ್) ಬಳಕೆಗೆ ನಿರ್ಧರಿಸಿರುವ ಕಾಂಗ್ರೆಸ್ ಸರ್ಕಾರದ ಸಂಪುಟದ ತೀರ್ಮಾನ ತೀರಾ ಕೆಳಮಟ್ಟದಾಗಿದ್ದು, ಒಬ್ಬ ವ್ಯಕ್ತಿ, ಒಂದು ಕುಟುಂಬದ ರಕ್ಷಣೆಗಾಗಿ, ಸಮರ್ಥನೆಗಾಗಿ ಇಡೀ ದೇಶದ ಪ್ರಜಾಪ್ರಭುವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪಾಪದ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ

    ಇನ್ನು ಕಾಂಗ್ರೆಸ್ ಗೆದ್ದ ಅವಧಿಗಳನ್ನು ಪ್ರಸ್ತಾಪಿಸಿರುವ ಅಶೋಕ್, 2004ರಲ್ಲಿ ಯುಪಿಎ-1 ಸರ್ಕಾರ ಬಂದಿದ್ದು ಇದೇ ಮತಯಂತ್ರಗಳಿಂದ, 2009ರಲ್ಲಿ ಯುಪಿಯ-2 ಸರ್ಕಾರ ಬಂದಿದ್ದು ಇದೇ ಮತಯಂತ್ರಗಳಿಂದ, 2013ರಲ್ಲಿ ತಾವು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದು ಇದೇ ಮತಯಂತ್ರಗಳಿಂದ, 2023ರಲ್ಲಿ ತಾವು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿರುವುದು ಇದೇ ಮತಯಂತ್ರಗಳಿಂದ. ಈಗ ಅದೇ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತೊಮ್ಮೆ ಓಬೀರಾಯನ ಕಾಲದ ಮತಪೆಟ್ಟಿಗೆಗೆ ಮರಳುವ ನಿರ್ಧಾರ ಮಾಡಿದ್ದೀರಲ್ಲ ಸ್ವಾಮಿ, ಯಾರನ್ನು ಮೆಚ್ಚಿಸಲು ಈ ನಿರ್ಧಾರ ಮಾಡಿದ್ದೀರಿ? ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತೇನೆ ಎನ್ನುವ ಸಂದೇಶ ನೀಡುವ ಮೂಲಕ ನಿಮ್ಮ ಘನತೆ, ವ್ಯಕ್ತಿತ್ವವನ್ನ ತಾವೇ ಯಾಕೆ ಕಡಿಮೆ ಮಾಡಿಕೊಳ್ಳುತ್ತೀರಿ? ಕನ್ನಡಿಗರ ಮುಂದೆ ಯಾಕೆ ಸಣ್ಣವರಾಗುತ್ತೀರಿ? ಗೆದ್ದಾಗ ಬೀಗುವುದು, ಸೋತಾಗ ವ್ಯವಸ್ಥೆಯನ್ನ ದೂಷಿಸುವುದು ಪ್ರಜಾಪ್ರಭುತ್ವಕ್ಕೆ, ಮತದಾರರಿಗೆ, ಜನಾದೇಶಕ್ಕೆ, ಇವೆಲ್ಲವನ್ನೂ ಕೊಟ್ಟ ಸಂವಿಧಾನಕ್ಕೆ ಮಾಡುವ ಅಪಮಾನ ಅಲ್ಲವೇ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಾಲಕನ ಕೊಲೆ ಆರೋಪ – ಹಿಗ್ಗಾಮುಗ್ಗಾ ಥಳಿಸಿ ದಂಪತಿಯ ಹತ್ಯೆ

    ಸಿದ್ದರಾಮಯ್ಯ ತಾವು ಸಂವಿಧಾನವಾದಿ, ಪ್ರಭುವಾದಿ ಎಂದು ಇತಿಹಾಸದಲ್ಲಿ ಗುರುತಿಸಿಕೊಳ್ಳಲು ಬಯಸುತ್ತೀರೋ ಅಥವಾ ಹೈಕಮಾಂಡ್ ಗುಲಾಮಗಿರಿಗಾಗಿ, ಅಧಿಕಾರಕ್ಕಾಗಿ ಆತ್ಮಸಾಕ್ಷಿಯನ್ನೇ ಮಾರಿಕೊಂಡ ಆತ್ಮವಂಚಕ ಎಂಬ ಹಣೆಪಟ್ಟಿ ಗಳಿಸಲು ಬಯಸುತ್ತೀರೋ? ಬೇರೆ ವಿಷಯಗಳಲ್ಲಿ ರಾಜಕೀಯ ಕೆಸರೆರಚಾಟ ಏನೇ ಇರಲಿ, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ಚುನಾವಣಾ ಪ್ರಕ್ರಿಯೆ ಬಗ್ಗೆಯೇ ಸಂದೇಹ ಮೂಡಿಸುವ ಪಾಪದ ಕೆಲಸ ಮಾಡಬೇಡಿ. ಇದು ನಿಮಗೆ ಖಂಡಿತ ಶೋಭೆ ತರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪನದಿಗೆ ಬಿದ್ದ ಕಾರು – ನಾಲ್ವರು ಪಾರು

  • ಚುನಾವಣೆ ಆಯೋಗ, ಇವಿಎಂ ವಿಶ್ವಾಸಾರ್ಹತೆ ಕಳೆದುಕೊಂಡಿದೆ, ಅದಕ್ಕಾಗಿ ಬ್ಯಾಲೆಟ್ ಪೇಪರ್ ಜಾರಿ: ಹೆಚ್‌ಕೆ ಪಾಟೀಲ್

    ಚುನಾವಣೆ ಆಯೋಗ, ಇವಿಎಂ ವಿಶ್ವಾಸಾರ್ಹತೆ ಕಳೆದುಕೊಂಡಿದೆ, ಅದಕ್ಕಾಗಿ ಬ್ಯಾಲೆಟ್ ಪೇಪರ್ ಜಾರಿ: ಹೆಚ್‌ಕೆ ಪಾಟೀಲ್

    ಬೆಂಗಳೂರು: ಇವಿಎಂ (EVM) ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ (Ballot Paper) ಬಳಕೆಗೆ ನಿರ್ಧಾರ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಬ್ಯಾಲೆಟ್ ಪೇಪರ್ ನಿರ್ಧಾರ ಸಮರ್ಥನೆ ಮಾಡಿಕೊಂಡಿದ್ದಾರೆ.

    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಕ್ಯಾಬಿನೆಟ್ ನಿರ್ಧಾರ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವಿಎಂ ಬಗ್ಗೆ ಕರ್ನಾಟಕ ಮಾತ್ರವಲ್ಲ ದೇಶದ ಅನೇಕ ರಾಜ್ಯಗಳು ಇವಿಎಂ ಅಕ್ರಮ ಆಗುತ್ತಿದೆ ಎಂದು ಅನುಮಾನ ಇದೆ. ಹ್ಯಾಕ್ ಮಾಡುತ್ತಾರೆ ಎಂಬುದರ ಬಗ್ಗೆ ಅನುಮಾನ ಇದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಕೊನೆಯ 1 ಗಂಟೆಯಲ್ಲಿ 5 ಗಂಟೆಯಷ್ಟು ಹಾಕಲಾಗದ ಮತ ಹಾಕುವ ವ್ಯವಸ್ಥೆ ಕೊನೆ ಘಳಿಗೆಯಲ್ಲಿ ಆಗಿದೆ. ಇವಿಎಂ ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿದೆ. 2018ರಲ್ಲಿ ನಮ್ಮ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಇವಿಎಂ ವಿರುದ್ಧ ಮಾಡಿತ್ತು. ಅವತ್ತು ನಾನು ಬಳಿಕ ಮಾಹಿತಿ ಪುರಾವೆ ಸಲ್ಲಿಕೆ ಮಾಡಿದ್ದೇನೆ. ಅಂದಿನ ಸಭಾಪತಿಗಳಾಗಿದ್ದವರು ಕಾಗೇರಿ ಅವರು. ಚರ್ಚೆ ಆದ ಮೇಲೆ ಚುನಾವಣೆ ಆಯೋಗಕ್ಕೆ ಸ್ಪೀಕರ್ ಕಾಗೇರಿ ಪತ್ರ ಬರೆದರು. ಆಗ ಚುನಾವಣೆ ಆಯೋಗ ನಮ್ಮ ಬಗ್ಗೆ ಸದನದಲ್ಲಿ ಚರ್ಚೆ ಮಾಡಬಾರದು ಅಂತ ವಾಪಸ್ ಬರೆದರು. ಆದರೆ ಇವಿಎಂ ಅನುಮಾನದ ಬಗ್ಗೆ ಆಯೋಗ ವಿವರಣೆ ಕೊಡಲಿಲ್ಲ. ಪ್ರಜಾಪ್ರಭುತ್ವದಲ್ಲಿ ಒಂದು ಸಂಸ್ಥೆಯಲ್ಲಿ ಆ ಕಾರ್ಯದಲ್ಲಿ ಅನುಮಾನ ಬಂದಾಗ ಪಾರದರ್ಶಕವಾಗಿ ಪರಿಹಾರ ಮಾಡಬೇಕು. ಆದರೆ ನಮಗೆ ರಕ್ಷಣೆ ಇದೆ ಅಂತ ಆಯೋಗ ಮಾತಾಡೋದು ಸರಿಯಲ್ಲ ಎಂದು ಚುನಾವಣೆ ಆಯೋಗದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

    ಇವಿಎಂ ಪರಿಣಾಮದ ಬಗ್ಗೆ ಹಿಂದೆಯೇ ಹೇಳಿದ್ದೆವು. ಕರ್ನಾಟಕದಲ್ಲಿ ಇವಿಎಂ ಬಗ್ಗೆ ಅನುಮಾನ ಇದೆ. ಹೀಗಾಗಿ ನಮ್ಮ ಸರ್ಕಾರಕ್ಕೆ ಇರುವ ಅಧಿಕಾರದಲ್ಲಿ ಬ್ಯಾಲೆಟ್ ಪೇಪರ್ ಚುನಾವಣೆ ಆಗೋ ನಿರ್ಧಾರ ಮಾಡಿದ್ದೇವೆ. ಚುನಾವಣೆ ಆಯೋಗದ ಮ್ಯಾನುಯಲ್‌ನಲ್ಲಿ 15 ವರ್ಷ ಆದ ಮೇಲೆ ಇವಿಎಂ ನಿರ್ಣಾಮ ಮಾಡಬೇಕು. ಹೇಗೆ ಮಾಡಬೇಕು ಅಂತ ಪದ್ದತಿ ಇದೆ. ಆದರೆ ಆಯೋಗ ಇದನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅನೇಕ ರಾಜ್ಯದಲ್ಲಿ ಟ್ರಕ್ ಗಟ್ಟಲೆ ಇವಿಎಂ ಹೋಗೋದು ನೋಡಿದ್ದೇವೆ. ಅನೇಕ ಪ್ರದೇಶದಲ್ಲಿ ಇವಿಎಂ ಮಿಷನ್ ಬಿದ್ದಿರೋದು ನೋಡಿದ್ದೇವೆ. ಚುನಾವಣೆ ಆಯೋಗ ನಿಯಮ ಗಾಳಿಗೆ ತೂರಿ ಕೆಲಸ ಮಾಡುತ್ತಿದೆ. ಚುನಾವಣೆ ಆಯೋಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ಅನುಮಾನ ಹೋಗಲಾಡಿಸಲು ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡಿದೆ ಎಂದರು. ಇದನ್ನೂ ಓದಿ: ಪಾಕಿಸ್ತಾನ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ: ಭಾರತೀಯ ಸೇನಾ ಮುಖ್ಯಸ್ಥ

    ಬ್ಯಾಲೆಟ್ ಪೇಪರ್ ಜಾರಿ ಮಾಡಲು ಅಗತ್ಯ ಇರೋ ಕಾನೂನು ತಿದ್ದುಪಡಿ ಬೇಕಾದರೆ ಮಾಡುತ್ತೇವೆ. ನಿಯಮ ಬದಲಾವಣೆ ಇದ್ದರೆ ನಿಯಮ ಬದಲಾವಣೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್;‌ ಕೇರಳ ಕಮ್ಯುನಿಸ್ಟ್‌ ಪಕ್ಷದ ಸಂಸದನ ಮುಂದೆ ಬುರುಡೆ ಇಟ್ಟಿದ್ದ ಗ್ಯಾಂಗ್‌

    ಇವಿಎಂ ಮೇಲೆ ಅನುಮಾನ ಇದ್ದರೆ ಕರ್ನಾಟಕದಲ್ಲಿ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆ ಎದುರಿಸಲಿ ಎಂಬ ಬಿಜೆಪಿ ಆಗ್ರಹಕ್ಕೆ ತಿರುಗೇಟು ಕೊಟ್ಟ ಅವರು, ಎಂಪಿ, ವಿಧಾನಸಭೆ ಚುನಾವಣೆ ಬ್ಯಾಲೆಟ್ ಪೇಪರ್ ಮಾಡೋಣ ಅಂತ ಬಿಜೆಪಿ ಹೇಳಲಿ. ಕೇಂದ್ರ ಸರ್ಕಾರ ಬ್ಯಾಲೆಟ್ ಪೇಪರ್ ವ್ಯವಸ್ಥೆ ಘೋಷಣೆ ಮಾಡಲಿ. ಆಮೇಲೆ ಕರ್ನಾಟಕದಲ್ಲಿ ನಾವು ಚುನಾವಣೆ ಮತ್ತೆ ಎದುರಿಸುತ್ತೇವೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಬುರುಡೆ ಕೇಸಲ್ಲಿ ಸೆಂಥಿಲ್ ಹೆಸರು – ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು

    ಬಸವರಾಜ್ ಬೊಮ್ಮಾಯಿ ಅವರ ಮೇಲೆ ವಿಶೇಷ ಅಭಿಪ್ರಾಯ ಇದೆ. ಅವರ ಜೊತೆ ಚುನಾವಣೆ ರಿಫಾರ್ಮ್ಸ್ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ಹ್ಯಾಕಥಾನ್ ಮಾಡಿ ಅಂತ ಚುನಾವಣೆ ಆಯೋಗಕ್ಕೆ ಹೇಳಿದ್ದೆವು. ಆದರೆ ಆಯೋಗ ಮಾಡಲಿಲ್ಲ. ಚುನಾವಣೆ ಆಯೋಗ ಯಾವುದೇ ಪರೀಕ್ಷೆಗೆ ಒಪ್ಪಲಿಲ್ಲ. ಬಿಜೆಪಿ ರಾಜಕೀಯವಾಗಿ ಈಗ ಹೇಳುತ್ತಿದೆ. ಅಧಿವೇಶನದಲ್ಲಿ ಸರ್ವಾನುಮತದಿಂದ ಇದರ ಬಗ್ಗೆ ನಿರ್ಣಯ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್‌ ಹೊಡೆದ ಟ್ರಂಪ್‌

    ಮಹಾರಾಷ್ಟ್ರ ಚುನಾವಣೆಯಲ್ಲಿ ಕೊನೆ ಘಳಿಗೆಯಲ್ಲಿ ಅಕ್ರಮದ ವೋಟಿಂಗ್ ಆಯಿತು. ಇಂತಹ ಅಕ್ರಮ 10% ಕೂಡಾ ಹಿಂದಿನ ಬ್ಯಾಲೆಟ್ ಪೇಪರ್ ವ್ಯವಸ್ಥೆ ಇದ್ದಾಗ ಆಗಿರಲಿಲ್ಲ. ಬ್ಯಾಲೆಟ್ ಪೇಪರ್ ತರಲು ಕಾನೂನು ತಿದ್ದುಪಡಿ ಮಾಡುತ್ತೇನೆ. ರಾಜ್ಯಪಾಲರು ಕಾನೂನಿನ ಪರ ಇರಬೇಕು, ಸಂವಿಧಾನದ ಪರ ಇರಬೇಕು. ಸಂವಿಧಾನ ಪರ ಮಾಡೋ ಕೆಲಸ ಯಾರು ತಡೆಯೋಕೆ ಆಗಲ್ಲ. ರಾಜ್ಯಪಾಲ ಬಿಲ್ ಪಾಸ್ ಮಾಡಬೇಕಾಗುತ್ತದೆ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಉತ್ತರ ಭಾರತದಲ್ಲಿ ನಿರಂತರ ಮಳೆಯಿಂದ ಭಾರೀ ಹಾನಿ – ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ 45 ಮಂದಿ ಸಾವು

  • ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು – ಮಹಾಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಬೇಡಿಕೆ

    ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು – ಮಹಾಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಬೇಡಿಕೆ

    ನವದೆಹಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ(Maharashtra) ಬಿಜೆಪಿಗೆ ದಕ್ಕಿದ ಪ್ರಚಂಡ ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ (Congress) ಇದೀಗ ಇವಿಎಂ (EVM) ವಿರುದ್ಧವೇ ಚಳವಳಿಗೆ ಪ್ಲಾನ್ ಮಾಡುತ್ತಿದೆ.

    ಚುನಾವಣೆಗೆ (Election) ಮತಯಂತ್ರ ಬೇಡ. ಬ್ಯಾಲೆಟ್ ಪೇಪರ್ (Ballot Paper) ಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಇರಿಸಿದೆ. ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ್ ರಕ್ಷಕ್ ಅಭಿಯಾನದಲ್ಲಿ ಮಾತಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಚುನಾವಣೆಯಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಪದ್ದತಿ ಮರು ಜಾರಿಗಾಗಿ ಮತ್ತೆ ಭಾರತ್ ಜೋಡೋ (Bharat Jodo) ಯಾತ್ರೆ ಮಾದರಿಯ ಚಳವಳಿಗೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

    ಎಸ್‌ಸಿ, ಎಸ್‌ಟಿ, ಒಬಿಸಿ ಬಡ ಸಮುದಾಯಗಳ ಜನರ ಮತಗಳು ವ್ಯರ್ಥವಾಗುತ್ತಿವೆ. ಇವಿಎಂಗಳನ್ನು ಪಕ್ಕಕ್ಕೆ ಇರಿಸಿ. ನಮಗೆ ಇವಿಎಂ ಬೇಡ, ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ಬೇಕು. ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರ ಮನೆಯಲ್ಲಿ ಇವಿಎಂ ಯಂತ್ರವನ್ನು ಇಡಲಿ. ಅಹಮದಾಬಾದ್‌ನಲ್ಲಿ ಸಾಕಷ್ಟು ಗೋದಾಮುಗಳಿದ್ದರೆ ಅವರು ಅಲ್ಲಿ ಯಂತ್ರಗಳನ್ನು ಇಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

    ನಮ್ಮ ಪಕ್ಷವು ಇತರ ಎಲ್ಲ ಪಕ್ಷಗಳು ಸೇರಿದಂತೆ ಎಲ್ಲರಿಗೂ ಪ್ರಚಾರವನ್ನು ಪ್ರಾರಂಭಿಸಬೇಕು. ರಾಹುಲ್ ಗಾಂಧಿಯವರ (Rahul Gandhi) ನೇತೃತ್ವದಲ್ಲಿ ಬ್ಯಾಲೆಟ್ ಪೇಪರ್ ಪದ್ದತಿ ಮರು ಜಾರಿಗಾಗಿ ನಾವು ಭಾರತ್ ಜೋಡೋ ಯಾತ್ರೆಯಂತಹ ಚಳುವಳಿಯನ್ನು ಪ್ರಾರಂಭಿಸಬೇಕು ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆಯವರ ಈ ಮಾತು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

     

  • ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ – ಕಾಯ್ದೆ ತರಲು ಮುಂದಾದ ಮಹಾರಾಷ್ಟ್ರ

    ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ – ಕಾಯ್ದೆ ತರಲು ಮುಂದಾದ ಮಹಾರಾಷ್ಟ್ರ

    ಮುಂಬೈ: ಮಹಾರಾಷ್ಟ್ರ ಸರ್ಕಾರ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಲು ಚಿಂತನೆ ಮಾಡಿದೆ. ಇವಿಎಂ ಜೊತೆಯಲ್ಲೇ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ಆಯೋಜಿಸಲು ಈಗ ಕಾನೂನು ತರಲು ಮುಂದಾಗಿದೆ.

    ವಿಧಾನಸಭೆ ಸ್ಪೀಕರ್‌ ನಾನಾ ಪಟೋಲೆ ಅವರು ಇವಿಎಂ ಸೇರಿದಂತೆ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಲು ಸಾಧ್ಯವೇ ಪರಿಶೀಲಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಸಂಬಂಧ ಮಸೂದೆ ರಚಿಸುವಂತೆ ಮಹಾ ವಿಕಾಸ್‌ ಆಘಾಡಿ ಸರ್ಕಾರಕ್ಕೆ ಸೂಚಿಸಿದ್ದಾರೆ.

     

    ಒಂದು ವೇಳೆ ಕರಡು ಸಿದ್ಧವಾಗಿದ್ದರೆ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಬಹುದು ಎಂದು ಪಟೋಲೆ ಪ್ರತಿಕ್ರಿಯಿಸಿದ್ದಾರೆ.  ಸಂವಿಧಾನದ ಅನುಚ್ಛೇದ 328ರ ಅಡಿ ರಾಜ್ಯದಲ್ಲಿ ಚುನಾವಣೆಗಳನ್ನು ನಡೆಸಲು ಕಾನೂನು ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಈ ಸಂಬಂಧ ಹಲವರ ಜೊತೆಗೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ ಎಂದು ಸ್ಪೀಕರ್‌ ನಾನಾ ಪಟೋಲೆ ಸೂಚನೆ ನೀಡಿದ್ದಕ್ಕೆ ಸಮರ್ಥನೆ ನೀಡಿದ್ದಾರೆ.

    ಮಹಾರಾಷ್ಟ್ರದಲ್ಲಿ 2024ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿಂದಿನಿಂದಲೂ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಪಕ್ಷಗಳು ಇವಿಎಂನಿಂದ ದುರುಪಯೋಗ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದವು. ಆದರೆ ಕೇಂದ್ರ ಚುನಾವಣಾ ಆಯೋಗ ಈ ಆರೋಪಗಳನ್ನು ತಿರಸ್ಕರಿಸಿತ್ತು.

    ಒಂದು ವೇಳೆ ಕಾಯ್ದೆ ತಂದರೆ ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಡುವೆ ತಿಕ್ಕಾಟ ನಡೆಯುವ ಸಾಧ್ಯತೆಯಿದೆ. ರಾಜ್ಯಪಾಲರು ಸಹಿ ಹಾಕುವುದು ಅನುಮಾನ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕಾನೂನು ಸಮರ ನಡೆಯುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತದೆ.

  • ಕೊಪ್ಪಳದಲ್ಲಿ ಮತವನ್ನ ಸ್ಕೇಲ್‍ನಿಂದ ಅಳೆದ ಸಿಬ್ಬಂದಿ

    ಕೊಪ್ಪಳದಲ್ಲಿ ಮತವನ್ನ ಸ್ಕೇಲ್‍ನಿಂದ ಅಳೆದ ಸಿಬ್ಬಂದಿ

    ಕೊಪ್ಪಳ: ಬ್ಯಾಲೆಟ್ ಪೇಪರ್ ನ್ನು ಚುನಾವಣಾ ಸಿಬ್ಬಂದಿ ಸ್ಕೇಲ್ ನಿಂದ ಅಳೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಅಭ್ಯರ್ಥಿಗಳ ಚಿಹ್ನೆ ನಡುವೆ ಮತದಾರರ ಮತ ಚಲಾಯಿಸಿದ್ದರು.

    ಗೊಂಡಬಾಳ ಗ್ರಾಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆ ನಡೆದಿತ್ತು. ಟಿವಿ ಚಿನ್ಹೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿನ್ಹೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದ. ಈ ಮತ ಎಣಿಕೆಯಿಂದ ಹೊರ ಗಿಟ್ಟು ಮತ ಎಣಿಕೆ ಮಾಡಲಾಗಿತ್ತು.

    ಕೊನೆಗೆ ಚುನಾವಣಾ ಅಧಿಕಾರಿ ಬ್ಯಾಲೆಟ್ ಪೇಪರ್ ಸ್ಕೇಲ್ ನಿಂದ ಅಳತೆ ಮಾಡಲಾಯ್ತು. ಟಿವಿ ಚಿನ್ಹೆಗೆ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆ ಗಾಳೆಪ್ಪ ಪೂಜಾರ ಅವರಿಗೆ ಮತ ಎಂದು ಘೋಷಣೆ ಮಾಡಲಾಯ್ತು.

     

  • ನಿಜಾಮಾಬಾದ್ ಕ್ಷೇತ್ರದಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಮೊರೆ ಹೋದ ಆಯೋಗ

    ನಿಜಾಮಾಬಾದ್ ಕ್ಷೇತ್ರದಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಮೊರೆ ಹೋದ ಆಯೋಗ

    ಹೈದರಾಬಾದ್: ಇಡೀ ದೇಶವೇ ಇವಿಎಂ ಎಲೆಕ್ಷನ್‍ಗೆ ಸಜ್ಜಾಗುತ್ತಿದ್ದರೆ, ತೆಲಂಗಾಣದ ನಿಜಾಮಾಬಾದ್‍ನಲ್ಲಿ ಮಾತ್ರ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ನಲ್ಲಿ ಸ್ಪರ್ಧೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

    ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಸ್ಪರ್ಧಿಸುತ್ತಿರುವ ನಿಜಾಮಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 185 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ 170 ಮಂದಿ ರೈತರೇ ಇದ್ದಾರೆ. ಹೀಗಾಗಿ, ಇವಿಎಂನಲ್ಲಿ ಚುನಾವಣೆ ನಡೆಸುವುದು ಅಸಾಧ್ಯ ಎಂದು ಆಯೋಗ ಹೇಳಿದೆ.

    ತೆಲಂಗಾಣ ರಾಜ್ಯದಲ್ಲಿ ಒಟ್ಟು 545 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ನಿಜಾಮಾಬಾದ್‍ನಲ್ಲಿ ಮಾತ್ರ 185 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪರಿಣಾಮ ಇವಿಎಂ ಯಂತ್ರದಲ್ಲಿ ನೋಟಾ ಸೇರಿದಂತೆ 64 ಅಭ್ಯರ್ಥಿಗಳಿಗೆ ಮಾತ್ರ ಸ್ಥಾನ ಕಲ್ಪಿಸಲು ಅವಕಾಶ ಇದೆ. ಪರಿಣಾಮ ಚುನಾವಣಾ ಆಯೋಗ ಬ್ಯಾಲೆಟ್ ಪೇಪರಿನಲ್ಲೇ ಸ್ಪರ್ಧೆ ನಡೆಸಲು ಸಿದ್ಧತೆ ನಡೆಸಿದೆ.

    ಕಾರಣವೇನು:
    ಜೋಳ ಹಾಗೂ ಅರಿಶಿನ ಬೆಲೆಗೆ ಕನಿಷ್ಠ ಬೆಂಬಲ ಬೆಲೆ, ಅರಿಶಿನ ಮಂಡಳಿ ರಚಿಸುವುದರಲ್ಲಿ ತೆಲಂಗಾಣ ಪಾರ್ಟಿ (ಟಿಆರ್‍ಎಸ್) ವಿಫಲವಾಗಿದೆ ಎಂದು ಪ್ರತಿಭಟನಾರ್ಥ 170 ರೈತರು ನಾಮಪತ್ರ ಸಲ್ಲಿಸಿದ್ದಾರೆ.

    ಇದೇ ಮೊದಲಲ್ಲ: ಸಮೂಹಿಕವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅಂದರೆ 1996 ರಲ್ಲಿ ಆಂಧ್ರಪ್ರದೇಶದ ನಾಲ್ಗೊಂಡ ಕ್ಷೇತ್ರದಲ್ಲಿ 480 ಮಂದಿ ಸ್ಪರ್ಧೆ ನಡೆಸಿದ್ದರು. ಆ ವೇಳೆ ಬ್ಯಾಲೆಟ್ ಪೇಪರನ್ನೇ ಒಂದು ಬುಕ್ ಲೆಟ್ ಮಾದರಿಯಲ್ಲಿ ಚುನಾವಣಾ ಆಯೋಗ ಮುದ್ರಣ ಮಾಡಿತ್ತು.

    ಸದ್ಯ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಕ್ಷೇತ್ರದ ಚುನಾವಣಾ ದಿನಾಂಕವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ನಿಗದಿಯಂತೆ ಆಯೋಗ ತೆಲಂಗಾಣ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮಾತದಾನ ನಡೆಸಲು ನಿರ್ಧಾರ ಮಾಡಿ ಏಪ್ರಿಲ್ 11 ಮತದಾಣ ನಿಗದಿ ಮಾಡಿತ್ತು. ಜಿಲ್ಲಾ ಚುನಾವಣಾ ಅಧಿಕಾರಿಗಳು ಕೂಡ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

    ಇತ್ತ ತಮಿಳುನಾಡಿನ ಸೇಲಂನ ವೈದ್ಯ ಡಾ.ಪದ್ಮರಾಜನ್ 170 ಬಾರಿ ಸೋತರೂ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 1988ರಿಂದ ಸತತವಾಗಿ ಸ್ಪರ್ಧಿಸುತ್ತಿರುವ 60 ವರ್ಷದ ಪದ್ಮರಾಜನ್ ಲಿಮ್ಕಾ ಪುಸ್ತಕದಲ್ಲಿ ದಾಖಲೆ ಬರೆದಿದ್ದಾರೆ.

  • ಇವಿಎಂ ಬದಲು ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗೆ ಆಗ್ರಹಿಸಿದ್ದ ಪ್ರತಿಪಕ್ಷಗಳಿಗೆ ಮುಖಭಂಗ

    ಇವಿಎಂ ಬದಲು ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗೆ ಆಗ್ರಹಿಸಿದ್ದ ಪ್ರತಿಪಕ್ಷಗಳಿಗೆ ಮುಖಭಂಗ

    ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಬಾಕ್ಸ್ ಬಳಸಲು ಆದೇಶ ನೀಡಬೇಕೆಂದು ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್) ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಟಿಎಂಸಿ ನಾಯಕಿ ಮಹಿಯಾ ಮೈತ್ರ ಅವರು ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ನಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಪಿಐಎಲ್ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು.

    ಈ ಅರ್ಜಿಯ ವಿಚಾರಣೆ ವೇಳೆ, ಎಲ್ಲ ವ್ಯವಸ್ಥೆ ಮತ್ತು ಯಂತ್ರಗಳಲ್ಲಿ ಲೋಪ ದೋಷಗಳು ಇರುತ್ತದೆ. ಇವಿಎಂ ಅನ್ನು ಯಾರು ಬಳಸುತ್ತಾರೋ ಎನ್ನುವುದರ ಆಧಾರದ ಮೇಲೆ ಅದರ ಬಳಕೆ ಮತ್ತು ದುರ್ಬಳಕೆ ನಿರ್ಧರಿಸಬೇಕಾಗುತ್ತದೆ ಎಂದು ಮುಖ್ಯ ನ್ಯಾ. ರಂಜನ್ ಗಗೋಯಿ ನೇತೃತ್ವದ ಪೀಠ ಹೇಳಿತು.

    ನೀವು ಇವಿಎಂ ಅನ್ನು ತಪ್ಪು ತಿಳಿದುಕೊಂಡಿದ್ದೀರಿ. ಈಗಿನ ವ್ಯವಸ್ಥೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ಪೀಠ ವಜಾಗೊಳಿಸಿತು.

    ಆಧಾರ್ ಬಳಸಿಕೊಂಡು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ಜನರ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಈ ಆರೋಪಕ್ಕೆ ಸಾಕ್ಷಿ ನೀಡುವಂತೆ ಅರ್ಜಿದಾರರಿಗೆ ಕೋರ್ಟ್ 2 ವಾರಗಳ ಸಮಯವಕಾಶ ನೀಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv