Tag: ಬ್ಯಾರಿ

  • ಹಂತ ಹಂತವಾಗಿ ತುಳು, ಬ್ಯಾರಿ, ಕೊಂಕಣಿ ಭವನಗಳ ನಿರ್ಮಾಣ: ಕೋಟ

    ಹಂತ ಹಂತವಾಗಿ ತುಳು, ಬ್ಯಾರಿ, ಕೊಂಕಣಿ ಭವನಗಳ ನಿರ್ಮಾಣ: ಕೋಟ

    ಮಂಗಳೂರು: ಹಂತ ಹಂತವಾಗಿ ತುಳು, ಬ್ಯಾರಿ, ಕೊಂಕಣಿ ಸಾಂಸ್ಕೃತಿಕ ಭವನಗಳನ್ನು ನಿರ್ಮಾಣ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಹಿಂದು ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತುಳು ಬ್ಯಾರಿ, ಕೊಂಕಣಿ ಅಕಾಡೆಮಿ ಅಧ್ಯಕ್ಷರೊಂದಿಗೆ ಭವನಗಳ ನಿರ್ಮಾಣ ಕುರಿತ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ರಂಗಮಂದಿರದ ಜೊತೆಗೆ ತುಳು, ಬ್ಯಾರಿ ಹಾಗೂ ಕೊಂಕಣಿ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಆಯಾ ಅಕಾಡೆಮಿ ಭವನಗಳ ನಿರ್ಮಾಣಕ್ಕೆ ಸಂಬಂಧಿಸಿದವರು ಒಪ್ಪಿಗೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ- ಅರವಿಂದ ಲಿಂಬಾವಳಿ

    ಜಿಲ್ಲಾ ರಂಗಮಂದಿರಕ್ಕೆ ಮೊದಲ ಹಂತದಲ್ಲಿ 5 ಕೋಟಿರೂ., ತುಳು ಭವನ ನಿರ್ಮಾಣಕ್ಕೆ ಎರಡನೇ ಹಂತದಲ್ಲಿ 3.5 ಕೋಟಿ ರೂ., ಕೊಂಕಣಿ ಮತ್ತು ತುಳು ಅಕಾಡೆಮಿಯ ಭವನಕ್ಕಾಗಿ ಮೊದಲ ಹಂತದಲ್ಲಿ ತಲಾ 3 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಶಾಸಕ ಡಾ.ಭರತ್ ಶೆಟ್ಟಿ, ಉಪವಿಭಾಗಾಧಿಕಾರಿ ಮದನ್ ಮೋಹನ್, ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಡಾ.ಜಗದೀಶ್ ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ತಹಶೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆ ಶೀಘ್ರವೇ ಶಿಲಾನ್ಯಾಸ – ರಹೀಂ ಉಚ್ಚಿಲ್

    ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆ ಶೀಘ್ರವೇ ಶಿಲಾನ್ಯಾಸ – ರಹೀಂ ಉಚ್ಚಿಲ್

    ಮಂಗಳೂರು: ನೂತನ ಬ್ಯಾರಿ ಭವನಕ್ಕೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ಸ್ಟಾಂಡ್ ಬಳಿ ಅಂದಾಜು 3 ಕೋಟಿ ಮೌಲ್ಯದ 0.25 ಎಕ್ರೆ ಜಮೀನು ಸರಕಾರದಿಂದ ಅಧಿಕೃತವಾಗಿ ಬ್ಯಾರಿ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದು ಜನಪ್ರತಿನಿಧಿಗಳು ಹಾಗೂ ಬ್ಯಾರಿ ಭಾಷಿಕ ಸಮುದಾಯದ ಪ್ರಮುಖರನ್ನು ಕರೆದು ಶೀಘ್ರದಲ್ಲಿಯೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈಗಾಗಲೇ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಬ್ಯಾರಿ ಭವನಕ್ಕೆ ನೀರುಮಾರ್ಗದ ಬೈತುರ್ಲಿ ಗ್ರಾಮದಲ್ಲಿ 0.25 ಎಕರೆ ಜಾಗವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಖರೀದಿ ಮಾಡಲಾಗಿದ್ದು, ಇಲ್ಲಿ ಬ್ಯಾರಿ ಭವನಕ್ಕೆ ನೀಲನಕ್ಷೆ ತಯಾರಾಗಿತ್ತು. ಈ ನಿವೇಶನದ ಆಸುಪಾಸಿನಲ್ಲಿ ಬ್ಯಾರಿ ಭಾಷಿಕರ ಜನಸಂಖ್ಯೆ ತೀರಾ ವಿರಳವಾಗಿದ್ದು, ಭವನ ನಿರ್ಮಾಣಕ್ಕೆ ಉಪಯುಕ್ತವಾದ ನಿವೇಶನ ಅಲ್ಲ ಎಂದು ಮನಗಂಡ ಪ್ರಸಕ್ತ ಸಾಲಿನ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಕ್ಷಣ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಗಾಗಲೇ ತುಳು, ಕೊಂಕಣಿ ಸೇರಿದಂತೆ ಇತರ ಅಕಾಡೆಮಿಗಳಿಗೆ ಸರಕಾರದಿಂದ ಉಚಿತವಾಗಿ ಜಮೀನು ನೀಡಿದಂತೆ ಬ್ಯಾರಿ ಅಕಾಡೆಮಿಗೂ ನೀಡಬೇಕೆಂದು ಮನವಿ ಮಾಡಿದ್ದರು.

    ಅದರಂತೆ ಇದೀಗ ಅತೀ ಹೆಚ್ಚು ಬ್ಯಾರಿ ಭಾಷಿಕರನ್ನು ಒಳಗೊಂಡ ತೊಕ್ಕೊಟ್ಟು ಪರಿಸರದಲ್ಲಿಯೇ ನಿವೇಶವನವನ್ನು ಉಚಿತವಾಗಿ ಒದಗಿಸುವ ಮೂಲಕ ‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಎಂಬ ನೀತಿಯಂತೆ ನಡೆದುಕೊಂಡಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳು ಸೇರಿದಂತೆ ಕರ್ನಾಟಕ ಸರಕಾರಕ್ಕೆ ರಹೀಂ ಉಚ್ಚಿಲ್ ಅಭಿನಂದನೆ ಹಾಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ಈಗಾಗಲೇ ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ನಿವೇಶನವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಲಾಗುವುದು ಹಾಗೂ ಅಕಾಡೆಮಿಯಿಂದ ಮೂಡಾಕ್ಕೆ ಪಾವತಿಯಾದ ಮೊತ್ತವನ್ನು ಮೂಡಾದಿಂದ ಮರಳಿ ಪಡೆದು ಅಕಾಡೆಮಿಯ ವಿವಿಧ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಈಗಾಗಲೇ ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ. ರವಿಯವರ ಸಹಕಾರದ ಪರಿಣಾಮ ಮುಖ್ಯಮಂತ್ರಿಗಳು ಬ್ಯಾರಿ ಭವನಕ್ಕೆ ಈಗಾಗಲೇ 6 ಕೋಟಿಯನ್ನು ಮಂಜೂರು ಮಾಡಿ 3 ಕೋಟಿ ರೂ ಬಿಡುಗಡೆ ಮಾಡಿದ್ದಾರೆ.  ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು ಸುಮಾರು 6 ರಿಂದ 12 ತಿಂಗಳ ಒಳಗಾಗಿ ಬ್ಯಾರಿ ಭವನ ಅಕಾಡೆಮಿ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

    ಈ ಬ್ಯಾರಿ ಭವನ ವಿಶಾಲವಾದ ಸಭಾಂಗಣ, ಮಿನಿಹಾಲ್, ಅಕಾಡೆಮಿಯ ಕಛೇರಿ, ಸಾರ್ವಜನಿಕ ಗ್ರಂಥಾಲಯ, ವಸ್ತು ಸಂಗ್ರಹಾಲಯವನ್ನು ಹೊಂದಿರುತ್ತದೆ. ಈ ಭವನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಬರುವುದರಿಂದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.