Tag: ಬ್ಯಾಟ್ಸ್ ಮ್ಯಾನ್

  • 7 ರನ್‍ಗೆ ಆಲೌಟ್ – 754 ರನ್‍ಗಳ ಭರ್ಜರಿ ಜಯ ಸಾಧಿಸಿ ದಾಖಲೆ

    7 ರನ್‍ಗೆ ಆಲೌಟ್ – 754 ರನ್‍ಗಳ ಭರ್ಜರಿ ಜಯ ಸಾಧಿಸಿ ದಾಖಲೆ

    – ಎಲ್ಲ ಆಟಗಾರರು ಶೂನ್ಯಕ್ಕೆ ಔಟ್
    – 7 ರನ್ ಬಂದಿದ್ದು ಇತರೇ ರನ್‍ಗಳಿಂದ

    ಮುಂಬೈ: ಅಂತರ್ ಶಾಲಾ ಕ್ರಿಕೆಟ್ ಟೂರ್ನಿಯೊಂದರಲ್ಲಿ ತಂಡವೊಂದು ಏಳು ರನ್‍ಗೆ ಆಲೌಟ್ ಆಗಿ ಎದುರಾಳಿ ತಂಡ 754 ರನ್‍ಗಳ ಭರ್ಜರಿ ಜಯ ಸಾಧಿಸಿ ದಾಖಲೆ ಬರೆದಿರುವ ಘಟನೆ ಅಧೇರಿ ಪ್ರದೇಶದಲ್ಲಿ ನಡೆದಿದೆ.

    ಅಂಧೇರಿ ಮೂಲದ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಮತ್ತು ಬೊರಿವಲಿಯಲ್ಲಿ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ (ಎಸ್‍ವಿಐಎಸ್) ನಡುವೆ ಈ ಪಂದ್ಯ ನಡೆದಿದ್ದು, ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಏಳು ರನ್‍ಗೆ ಆಲೌಟ್ ಆಗಿದೆ. ಪಂದ್ಯದ ಇನ್ನೊಂದು ವಿಶೇಷವೆಂದರೆ ಎದುರಾಳಿ ತಂಡದ ಬೌಲರ್ ನ ಎಡವಟ್ಟಿನಿಂದ ಈ ಏಳು ರನ್ ಬಂದಿದೆ.

    ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ಮೀತ್ ಮಯೇಕರ್ ಅಜೇಯ ತ್ರಿಶತಕದ 338 ರನ್ ನೆರವಿನಿಂದ 39 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 761 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು. ಇದರಲ್ಲಿ ಕೇವಲ 134 ಎಸೆತಗಳನ್ನು ಎದುರಿಸಿದ ಮಯೇಕರ್ 56 ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್ ಗಳೊಂದಿಗೆ 338 ರನ್ ಸಿಡಿಸಿದರು.

    ನಿಗದಿತ ಮೂರು ಗಂಟೆಯ ಒಳಗಡೆ 45 ಓವರ್ ಬೌಲಿಂಗ್ ಮಾಡಬೇಕಿತ್ತು. ಆದರೆ ಮೂರು ಗಂಟೆಯಲ್ಲಿ 39 ಓವರ್ ಮಾತ್ರ ಎಸೆದಿದ್ದಕ್ಕೆ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಗೆ ಟೂರ್ನಿ ಆಯೋಜಕರು 156 ರನ್ ಪೆನಾಲ್ಟಿಯನ್ನು ಹಾಕಿದ್ದರು. ಮಯೇಕರ್ ತ್ರಿಶತಕದ ಹೊರತಾಗಿ ಕೃಷ್ಣ ಪಾರ್ಟೆ 95 ರನ್ ಹಾಗೂ ಇಶಾನ್ ರಾಯ್ 67 ರನ್ ಹೊಡೆದು ಬ್ಯಾಟಿಂಗ್‍ನಲ್ಲಿ ಮಿಂಚಿದರು.

    761 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ಬಂದ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಬ್ಯಾಟ್ಸ್ ಮ್ಯಾನ್‍ಗಳು ಎದುರಾಳಿ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋದರು. 6 ಓವರ್ ಗಳಲ್ಲಿ ಎಲ್ಲಾ ಆಟಗಾರರನ್ನು ಡಕ್ ಔಟ್ ಮಾಡಿದ ಎಸ್‍ವಿಐಎಸ್ ಶಾಲೆ ಬೌಲರ್ ಗಳು ಎದುರಾಳಿ ತಂಡದ ಬ್ಯಾಟ್ಸ್ ಮ್ಯಾನ್ ಗಳನ್ನು ಪೆವಿಲಿಯನ್ ಪರೆಡ್ ಮಾಡಿಸಿದರು. ಇದರ ಎಸ್‍ವಿಐಎಸ್ ಸ್ಕೂಲ್ ತಂಡದ ವೇಗಿ ಅಲೋಕ್ ಪಾಲ್ ಮೂರು ಓವರಿನಲ್ಲಿ ಮೂರು ಇತರೇ ರನ್ ನೀಡಿ ಆರು ವಿಕೆಟ್ ಪಡೆದರು. ಇದಕ್ಕೆ ಸಾಥ್ ನೀಡಿದ ನಾಯಕ ವರೋದ್ ವೇಜ್ ಮೂರು ಓವರ್ ಎಸೆದು ಎರಡು ವಿಕೆಟ್ ಕಿತ್ತರು. ಇಬ್ಬರು ಆಟಗಾರರು ರನೌಟ್ ಆಗಿದ್ದಾರೆ.

    ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಒಂದು ರನ್ ಕೂಡ ಬ್ಯಾಟಿನಿಂದ ಬರಲಿಲ್ಲ. ತಂಡ ಗಳಿಸಿದ 7 ರನ್ ಕೂಡ ಎದುರಾಳಿ ತಂಡ ನೀಡಿದ ಗಿಫ್ಟ್ ಆಗಿತ್ತು. ಇದರಲ್ಲಿ ಅಲೋಕ್ ಪಾಲ್ ಮೂರು ವೈಡ್ ಎಸೆದರೆ ವರೋದ್ ಮೂರು ವೈಡ್ ಬಾಲ್ ಮಾಡಿದ್ದರು. ಇನ್ನೊಂದು ರನ್ ಬೈ ಮೂಲಕ ಬಂದಿದೆ. ಈ ಮೂಲಕ ಎಸ್‍ವಿಐಎಸ್ ತಂಡ 754 ರನ್‍ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ದಾಖಲೆ ಬರೆದಿದೆ.

  • 151 ಎಸೆತಕ್ಕೆ 490 ರನ್, 27 ಬೌಂಡರಿ, 57 ಸಿಕ್ಸರ್ ಸಿಡಿಸಿ ದಾಖಲೆ ಬರೆದ ಬ್ಯಾಟ್ಸ್ ಮನ್

    151 ಎಸೆತಕ್ಕೆ 490 ರನ್, 27 ಬೌಂಡರಿ, 57 ಸಿಕ್ಸರ್ ಸಿಡಿಸಿ ದಾಖಲೆ ಬರೆದ ಬ್ಯಾಟ್ಸ್ ಮನ್

    ಕೇಪ್‍ಟೌನ್: ದಕ್ಷಿಣ ಆಫ್ರಿಕಾದ ಯುವ ಕ್ರಿಕೆಟ್ ಪಟು ಏಕದಿನ ಕ್ರಿಕೆಟ್ ನಲ್ಲಿ 151 ಎಸೆತಗಳಲ್ಲಿ ಬರೋಬ್ಬರಿ 490 ರನ್ ಗಳಿಸುವ ಮೂಲಕ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದಿದ್ದಾರೆ.

    ದಕ್ಷಿಣ ಆಫ್ರಿಕಾದ 20 ವರ್ಷದ ಬ್ಯಾಟ್ಸ್ ಮನ್ ಶೇನ್ ಡ್ಯಾಡ್ಸ್ ವೆಲ್ 151 ಎಸೆತಗಳಲ್ಲಿ 490 ರನ್ ಚಚ್ಚಿದ್ದಾರೆ. ಕ್ಲಬ್ ಕ್ರಿಕೆಟ್ ನಲ್ಲಿ ಎನ್‍ಡಬ್ಲ್ಯೂಯು ಪುಕ್ಕೆ ತಂಡ ಪರ ಆಡಿದ ಶೇನ್ ಎದುರಾಳಿ ಪೋಚ್ ಡ್ರಾಪ್ ವಿರುದ್ಧ ಈ ವಿಶೇಷ ಸಾಧನೆ ಮಾಡಿದ್ದಾರೆ.

    ಶೇನ್ ಅಮೋಘ ಇನ್ನಿಂಗ್ಸ್ ನಲ್ಲಿ 27 ಬೌಂಡರಿ, 57 ಸಿಕ್ಸರ್ ಸಿಡಿಸಿದ್ದರು. ಶೇನ್ ಜೊತೆಯಾಗಿ ಆಡಿದ ರವೂನ್ ಹ್ಯಾಸ್‍ಬ್ರೋಕ್ 104 ರನ್(54 ಎಸೆತ, 6 ಸಿಕ್ಸ್, 12 ಬೌಂಡರಿ)ಗಳಿಸುವ ತಂಡದ ಮೊತ್ತ ಹೆಚ್ಚಿಸಲು ಕಾರಣರಾದರು.

    ಪುಕ್ಕೆ ತಂಡದ ಬ್ಯಾಟ್ಸ್ ಮನ್ ಗಳ ಬ್ಯಾಟಿಂಗ್ ಆರ್ಭಟ ಹೇಗಿತ್ತು ಎಂದರೆ 63 ಸಿಕ್ಸ್, 48 ಬೌಂಡರಿಗಳು ಸಿಡಿಯಲ್ಪಟ್ಟಿತ್ತು. ಪರಿಣಾಮ ಎನ್‍ಡಬ್ಲ್ಯೂಯು ಪುಕ್ಕೆ ನಿಗದಿತ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ದಾಖಲೆಯ 677 ರನ್ ಗಳ ಮೊತ್ತವನ್ನು ಕಲೆ ಹಾಕಿತು. ಭಾರೀ ಮೊತ್ತವನ್ನು ಬೆನ್ನಟ್ಟಿದ್ದ ಪೋಚ್ ಡ್ರಾಪ್ 9 ವಿಕೆಟ್ ಕಳೆದುಕೊಂಡು 290 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಬೌಲಿಂಗ್‍ನಲ್ಲಿಯೂ ಕಮಾಲ್: 490 ರನ್ ಹೊಡೆದಿದ್ದ ಶೇನ್ ಬಾಲಿಂಗ್ ನಲ್ಲಿ ತಮ್ಮ ಮೋಡಿ ಮಾಡಿದ್ದು, 7 ಓವರ್ ಗಳಲ್ಲಿ 32 ರನ್ ನೀಡಿ 2 ವಿಕೆಟ್ ಕಬಳಿಸಿದರು. ಅಷ್ಟೇ ಅಲ್ಲದೇ ಒಂದು ಮೇಡನ್ ಓವರ್ ಮಾಡಿದ್ದರು. ಪುಕ್ಕೆ ತಂಡದ ಬ್ಯಾಟ್ ಮನ್‍ಗಳು ಮೊದಲ ಮೂರು ವಿಕೆಟ್‍ಗೆ ಅನುಕ್ರಮವಾಗಿ 194, 204 ಮತ್ತು 220 ಜೊತೆಯಾಟವಾಡಿದ್ದರು. ಶೇನ್ ಅವರು ತಮ್ಮ 20ನೇ ಹುಟ್ಟುಹಬ್ಬದ ದಿನದಂದೇ ಈ ಸಾಧನೆ ಮಾಡಿರುವುದು ವಿಶೇಷ.