Tag: ಬ್ಯಾಕ್ ಬೆಂಚರ್ಸ್

  • ಬ್ಯಾಕ್‌ ಬೆಂಚಿನ ಕಥೆ ಹೇಳಲು ನಟಿ ಮಾನ್ಯ ರೆಡಿ

    ಬ್ಯಾಕ್‌ ಬೆಂಚಿನ ಕಥೆ ಹೇಳಲು ನಟಿ ಮಾನ್ಯ ರೆಡಿ

    ರಾಜಶೇಖರ್ ನಿರ್ಮಿಸಿ, ನಿರ್ದೇಶಿಸಿರುವ ‘ಬ್ಯಾಕ್‍ ಬೆಂಚರ್ಸ್’ (Back Benchers Film) ಚಿತ್ರವು ಇದೇ ಜುಲೈ 19 ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಮೂಲಕ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಕುಂಕುಮ್‍, ಅನುಷಾ ಸುರೇಶ್, ವಿಯೋಮಿ ವನಿತಾ ಸೇರಿದಂತೆ ಹಲವು ಯುವ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪರಿಚಯವಾಗುತ್ತಿದ್ದಾರೆ. ಈ ಪೈಕಿ ಮಾನ್ಯ ಗೌಡ (Maanya Gowda) ಸಹ ಒಬ್ಬರು.

    ಇಂಜಿನಿಯರಿಂಗ್‍ ಮುಗಿಸಿರುವ ಮಾನ್ಯ, ‘ಬ್ಯಾಕ್‍ ಬೆಂಚರ್ಸ್’ ಚಿತ್ರದ ನಾಯಕಿಯರಲ್ಲೊಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಮಾಯ ಎಂಬ ಪಾತ್ರವನ್ನು ನಿರ್ವಹಿಸಿರುವ ಅವರು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

    ‘ಬ್ಯಾಂಕ್‍ ಬೆಂಚರ್ಸ್’ ಚಿತ್ರದ ಕುರಿತು ಮಾತನಾಡುವ ಅವರು, ‘ಮೂರು ವರ್ಷಗಳ ಹಿಂದೆ ನಾನು ಇಂಜಿನಿಯರಿಂಗ್‍ ಮುಗಿಸಿದೆ. ನನಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತು. ಶಾಸ್ತ್ರೀಯ ನೃತ್ಯ ಕಲಿತಿದ್ದೇನೆ. ರಂಗಭೂಮಿಯಲ್ಲಿ ಸಕ್ರಿಯವಾಗಿದ್ದೆ. ಹೀಗಿರುವಾಗಲೇ ‘ಬ್ಯಾಕ್‍ ಬೆಂಚರ್ಸ್’ ಚಿತ್ರಕ್ಕೆ ಆಡಿಷನ್‍ ಆಗುತ್ತಿರುವ ವಿಷಯ ಗೊತ್ತಾಯಿತು. ಆ ಆಡಿಷನ್‍ನಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಸುಮಾರು 700 ಯುವಕ-ಯುವತಿಯರು ಭಾಗವಹಿಸಿದ್ದರು. ನಿರ್ದೇಶಕರು ಕೊಟ್ಟ ಕೆಲವು ದೃಶ್ಯಗಳನ್ನು ನಾನು ನನ್ನದೇ ರೀತಿಯಲ್ಲಿ ಅಭಿನಯಿಸಿ ತೋರಿಸಿದೆ. ಅಷ್ಟೊಂದು ಜನರ ಮಧ್ಯೆ ನಾನು ಆಯ್ಕೆಯಾಗುತ್ತೀನೋ ಇಲ್ಲವೋ ಎಂಬ ಅನುಮಾನ ಇತ್ತು. ಆದರೆ, ಅಂತಿಮವಾಗಿ ಚಿತ್ರತಂಡಕ್ಕ ಆಯ್ಕೆಯಾದ 30 ಜನರಲ್ಲಿ ನಾನು ಒಬ್ಬಳಾಗಿದ್ದೆ’ ಎನ್ನುತ್ತಾರೆ ಮಾನ್ಯ.

    ಆಡಿಷನ್‍ ಮುಗಿದ ಮೇಲೆ ನಟ-ನಿರ್ದೇಶಕ ಸುಚೇಂದ್ರ ಪ್ರಸಾದ್‍, ಆಯ್ಕೆಯಾದ 30 ಜನರಿಗಾಗಿ ಒಂದು ಕಾರ್ಯಾಗಾರ ಮಾಡಿದ್ದಾರೆ. ಅದರಲ್ಲಿ ಚಿತ್ರ ನಟನೆ ಕುರಿತು ಹಲವು ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಆ ನಂತರ ಆರು ತಿಂಗಳ ಕಾಲ ಸಾಕಷ್ಟು ರಿಹರ್ಸಲ್‍ ಮಾಡಿ, ನಂತರ ಚಿತ್ರತಂಡವು ಚಿತ್ರೀಕರಣಕ್ಕೆ ಹೊರಟಿದೆ.

    ಚಿತ್ರೀಕರಣದ ಅನುಭವ ಮರೆಯಲಾಗದ್ದು ಎನ್ನುವ ಮಾನ್ಯ, ‘ನಾನು ಹೊಸಬಳು. ಹಾಗಾಗಿ ಸಹಜವಾಗಿಯೇ ನರ್ವಸ್‍ ಆಗಿದ್ದೆ. ಆದರೆ, ನಮ್ಮ ನಿರ್ದೇಶಕರಾದ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ನನಗೂ ಸೇರಿದಂತೆ ಎಲ್ಲರಿಗೂ ಬಹಳ ಚೆನ್ನಾಗಿ ಗೈಡ್‍ ಮಾಡಿದ್ದಾರೆ. ನನಗೆ ತುಂಬಾ ಚೆನ್ನಾಗಿ ಹೇಳಿಕೊಟ್ಟಿರುವುದಷ್ಟೇ ಅಲ್ಲ, ನನ್ನನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತೋರಿಸಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ಚಿತ್ರದ ಪೋಸ್ಟ್ ಪ್ರೊಡಕ್ಷನ್‍ ಮತ್ತು ಮಾರ್ಕೆಟಿಂಗ್‍ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಒಟ್ಟಾರೆ ಈ ಚಿತ್ರದ ಮೂಲಕ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಅವರಿಗೆ ನಾನು ಸದಾ ಋಣಿ’ ಎನ್ನುತ್ತಾರೆ.

    ತಮ್ಮ ಪಾತ್ರದ ಬಗ್ಗೆ ಮಾತನಾಡುವ ಮಾನ್ಯ. ‘ಚಿತ್ರದಲ್ಲಿ ನಾಲ್ಕು ಪ್ರಮುಖ ನಾಯಕಿಯರ ಪಾತ್ರ ಇದೆ. ರಿಹರ್ಸಲ್‍ ಸಮಯದಲ್ಲಿ ಈ ನಾಲ್ಕೂ ಪಾತ್ರಗಳನ್ನು ಮಾಡಿದ್ದೆ. ಅದರಲ್ಲಿ ನನಗೆ ಮಾಯ ಪಾತ್ರ ಬಹಳ ಇಷ್ಟವಾದ ಪಾತ್ರ. ಈ ಪಾತ್ರ ನನಗೆ ಸೂಟ್‍ ಆಗುತ್ತದೆ, ನಾನಿದನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆಯಿಂದ ಈ ಪಾತ್ರ ಕೊಟ್ಟಿದ್ದಾರೆ. ನಾನಿಲ್ಲಿ ಬಜಾರಿಯಾಗಿ ಕಾಣಿಸಿಕೊಂಡಿದ್ದೇನೆ. ಬಹಳ ಬೋಲ್ಡ್ ಆದ ಪಾತ್ರ ಇದು. ನನಗಿಷ್ಟವಾದ ಪಾತ್ರ ಸಿಕ್ಕ ಖುಷಿ ಇದೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಮಾನ್ಯ.

    ‘ಬ್ಯಾಕ್‍ ಬೆಂಚರ್ಸ್’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಮಾನ್ಯ, ಅದರ ಬಿಡುಗಡೆಗೆ ಕಾದಿದ್ದಾರೆ. ಈ ಮಧ್ಯೆ, ‘ಮಾನ್ಸೂನ್ ರಾಗ’ ಮತ್ತು ‘ವೀರಂ’ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ತೆಲುಗಿನಲ್ಲಿ ‘ಮಿಸಸ್ ಕರ್ನಲ್‍’ ಎಂಬ ಚಿತ್ರದಲ್ಲಿ ನಟಿಸಿದ್ದಾರಂತೆ. ಈ ಮಧ್ಯೆ, ಒಂದಿಷ್ಟು ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದು, ‘ಬ್ಯಾಕ್‍ ಬೆಂಚರ್ಸ್‍’ ಬಿಡುಗಡೆಯಾದ ಮೇಲೆ ನೋಡಿಕೊಂಡು ತೀರ್ಮಾನಿಸುವುದಾಗಿ ಮಾನ್ಯ ಹೇಳುತ್ತಾರೆ.

  • ವೀಡಿಯೋ ಸಾಂಗ್ ಮೂಲಕ ಮಿಂಚಿದ ಬ್ಯಾಕ್ ಬೆಂಚರ್ಸ್

    ವೀಡಿಯೋ ಸಾಂಗ್ ಮೂಲಕ ಮಿಂಚಿದ ಬ್ಯಾಕ್ ಬೆಂಚರ್ಸ್

    ಬಿ.ಆರ್ ರಾಜಶೇಖರ್ (BR Rajashekhar) ನಿರ್ದೇಶನದ `ಬ್ಯಾಕ್ ಬೆಂಚರ್ಸ್’ (Back Benchers) ಚಿತ್ರವೀಗ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಟೀಸರ್ ಬಿಡುಗಡೆಗೊಂಡಿತ್ತು. ಆ ಮೂಲಕ ಬ್ಯಾಕ್ ಬೆಂಚರ್ಸ್ ಬಗ್ಗೆ ದೊಡ್ಡ ಮಟ್ಟದಲ್ಲೊಂದು ಕ್ರೇಜ್ ಮೂಡಿಕೊಂಡಿದೆ. ಅದರಲ್ಲಿದ್ದ ನವಿರಾದ ಹಾಸ್ಯ, ಕಾಲೇಜು ಲೈಫಿನ ಲವಲವಿಕೆಯ ಕಥಾನಕದ ಮುನ್ಸೂಚನೆಗಳೆಲ್ಲ ಫಲ ಕೊಟ್ಟಿದ್ದವು. ಈವರೆಗೆ ಬಂದಿರುವ ಕಾಲೇಜು ಕೇಂದ್ರಿತ ಕಥೆಗಳಲ್ಲಿ ಈ ಸಿನಿಮಾ ಭಿನ್ನವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದಿದೆ. ಸದರಿ ಟೀಸರಿನಲ್ಲಿ ಅದಕ್ಕೆ ಸ್ಪಷ್ಟ ಪುರಾವೆಗಳು ಸಿಕ್ಕಿದ್ದವು. ಹಾಗೆ ಬ್ಯಾಕ್ ಬೆಂಚರ್ಸ್ ಕಡೆಗೆ ಆಕರ್ಷಿತರಾಗಿದ್ದ ಪ್ರೇಕ್ಷಕರಿಗೆಲ್ಲ ಈಗ ಮತ್ತೊಂದು ಖುಷಿ ಎದುರಾಗಿದೆ. ಮತ್ತದೇ ಲವಲವಿಕೆ ಹೊದ್ದ 4ಕೆ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ.

    ಎಲ್ಲೊ ಎಲ್ಲೊ ಎಲ್ಲೋ ಸಾಗುವಾಗ ನಿಲ್ಲೊ ನಿಲ್ಲೊ ನಿಲ್ಲೋ ಚಿಂತೆ ಏಕೆ ಅಂತ ಶುರುವಾಗೋ ಈ ಹಾಡು ಒಂದಿಡೀ ಚಿತ್ರದ ಆತ್ಮವನ್ನು ಧರಿಸಿಕೊಂಡಂತೆ ಮೂಡಿ ಬಂದಿದೆ. ಸಾಮಾನ್ಯವಾಗಿ ಕಾಲೇಜು ದಿನಮಾನದಲ್ಲಿ ಬದುಕಲ್ಲೆದುರಾಗೋ ಸಮಸ್ಯೆಗಳನ್ನು ಎದುರುಗೊಳ್ಳುವ ರೀತಿಯೇ ಬೇರೆಯದ್ದಿರುತ್ತದೆ. ಎಂಥಾದ್ದೇ ಸಮಸ್ಯೆ ಬಂದು ಎದೆಗೊದ್ದಾಗಲೂ ಪುಟಿದೆದ್ದು ನಿಲ್ಲೋ ಟೀನೇಜಿನ ಹುರುಪಿದೆಯಲ್ಲಾ? ಅದೆಲ್ಲವನ್ನು ಅರೆದು ತಯಾರಿಸಿದಂತಿರೋ ಈ ಹಾಡಿಗೀಗ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆಗಳು ಮೂಡಿಕೊಳ್ಳುತ್ತಿವೆ. ಧನಂಜಯ್ ರಂಜನ್ ಮತ್ತು ನಿಶ್ಚಲ್ ದಂಬೆಕೋಡಿ ಸಾಹಿತ್ಯವಿರುವ ಈ ಹಾಡಿಗೆನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಖುದ್ದು ನಕುಲ್ ಈ ಹಾಡನ್ನು ಹಾಡಿದ್ದಾರೆ.


    ಪಿಪಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಸಂಪೂರ್ಣವಾಗಿ ಹೊಸಬರ ತಂಡವನ್ನಿಟ್ಟುಕೊಂಡು ರಾಜಶೇಖರ್ ಬ್ಯಾಕ್ ಬೆಂಚರ್ಸ್ ಚಿತ್ರವನ್ನು ರೂಪಿಸಿದ್ದಾರೆ. ಸಿದ್ಧಸೂತ್ರಗಳನ್ನು ಮೀರಿಕೊಂಡು ಹೊಸತೇನನ್ನೋ ಸೃಷ್ಟಿಸುವ ಹಂಬಲವೇ ಈ ಚಿತ್ರವನ್ನು ಭಿನ್ನವಾಗಿಸಿದೆ ಎಂಬುದು ನಿರ್ದೇಶಕರ ಮಾತು. ಇದುವೆರೆಗೂ ಕನ್ನಡದಲ್ಲಿ ಒಂದಷ್ಟು ಕಾಲೇಜು ಕಥೆಗಳು ದೃಷ್ಯರೂಪ ಧರಿಸಿವೆ. ಅದರಲ್ಲೊಂದಿಷ್ಟು ಗೆಲುವು ಕಂಡಿವೆ. ಆದರೆ, ಬ್ಯಾಕ್ ಬೆಂಚರ್ಸ್ ಅದ್ಯಾವುದರ ನೆರಳೂ ಇಲ್ಲದೆ, ಯಾವ ಕಲ್ಪನೆಗೂ ನಿಲುಕದಂತೆ ಮೂಡಿ ಬಂದಿದೆಯೆಂಬುದು ಚಿತ್ರತಂಡದ ಭರವಸೆ. ಹಾಡುಗಳು ಮತ್ತು ಟೀಸರ್ ನೋಡಿದವರಿಗೆಲ್ಲ ಅದು ನಿಜವೆನ್ನಿಸುವಂತಿದೆ.

     

    ಪಿಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ಖುದ್ದು ರಾಜಶೇಖರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.

  • ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯ ಅವರು ನಿರ್ಮಿಸಿರುವ, ಬಿ.ಆರ್ ರಾಜಶೇಖರ್ (Rajashekhar) ನಿರ್ದೇಶನದಲ್ಲಿ ನೂತನ ಪ್ರತಿಭೆಗಳ ನಟಿಸಿರುವ ‘ಬ್ಯಾಕ್ ಬೆಂಚರ್ಸ್’ (Back Benchers) ಚಿತ್ರದಿಂದ ಹೋಳಿ ಹಬ್ಬಕ್ಕಾಗಿ ಸುಮಧುರ ಹಾಡೊಂದು (Song) ಬಿಡುಗಡೆಯಾಗಿದೆ. ಹೃದಯಶಿವ ಅವರು ಬರೆದಿರುವ ಈ ಹಾಡನ್ನು ಭಾರತದ ಹೆಸರಾಂತ ಗಾಯಕ ಶಂಕರ್ ಮಹದೇವನ್ ಹಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಹೋಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಬ್ಯಾಕ್ ಬೆಂಚರ್ಸ್ ಚಿತ್ರ ನಮ್ಮ ಕಾಲೇಜು ದಿನಗಳನ್ನು ನೆನಪಿಸುತ್ತದೆ. ಈ ಚಿತ್ರದಲ್ಲಿ ಬಹುತೇಕ ಹೊಸಪ್ರತಿಭೆಗಳು ಅಭಿನಯಿಸಿದ್ದಾರೆ.‌ ಆಡಿಷನ್ ಮೂಲಕ ಆಯ್ಕೆಯಾದ ಈ ಕಲಾವಿದರಿಗೆ ಸುಮಾರು ಒಂದು ವರ್ಷಗಳ ಕಾಲ ವರ್ಕ್ ಶಾಪ್ ನಡೆಸಿ ಆನಂತರ ಚಿತ್ರೀಕರಣ ಮಾಡಲಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಬಿ.ಆರ್ ರಾಜಶೇಖರ್ ತಿಳಿಸಿದ್ದಾರೆ.

    ಮನೊಹರ್ ಜೋಶಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ರಂಜನ್ ನರಸಿಂಹಮೂರ್ತಿ, ಜಿತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳಿಕರ್, ಮಾನ್ಯ ಗೌಡ, ಕುಂಕುಮ್, ಅನುಷ ಸುರೇಶ್ ಮುಂತಾದವರಿದ್ದಾರೆ.