Tag: ಬ್ಯಾಂಕ್ ಉದ್ಯೋಗಿಗಳು

  • ಕನ್ನಡ ಕಲಿಯದ ಬ್ಯಾಂಕ್ ಉದ್ಯೋಗಿಗಳ ವಿವರ ನೀಡಿ: ನಾಗಾಭರಣ

    ಕನ್ನಡ ಕಲಿಯದ ಬ್ಯಾಂಕ್ ಉದ್ಯೋಗಿಗಳ ವಿವರ ನೀಡಿ: ನಾಗಾಭರಣ

    ಬೆಂಗಳೂರು: ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಅಭಿಯಾನದ ಭಾಗವಾಗಿ ಎಟಿಎಂ ಗಳಲ್ಲಿ ಕನ್ನಡ ಬಳಕೆಯಾಯಿತು. ಆದರೆ ಕನ್ನಡ ಕಲಿಯದ ಬ್ಯಾಂಕ್ ಉದ್ಯೋಗಿಗಳ ವಿವರವನ್ನು ಆಡಳಿತಾಧಿಕಾರಿಗಳು ನೀಡುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ವಿಷಾದ ವ್ಯಕ್ತಪಡಿಸಿದರು.

    ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ಕಾಯಕದ ವರುಷದ ಸರಿಗನ್ನಡ ಬಳಕೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎರಡನೇ ಅಭಿಯಾನ ನಾಮಫಲಕಗಳಲ್ಲಿ ಶುದ್ಧ ಕನ್ನಡ ಬಳಕೆ, ಮೂರನೇಯದಾಗಿ ಶಕ್ತಿ ಕೇಂದ್ರಗಳಲ್ಲಿ ಕನ್ನಡ ಬಳಕೆ, ನಾಲ್ಕನೇಯದಾಗಿ ಸರಿಗನ್ನಡ ಬಳಕೆ ಅಭಿಯಾನ ನಡೆಸಲಾಗುತ್ತಿದೆ. ಹಿರಿಯ ಪತ್ರಕರ್ತೆ ಆರ್.ಕಲ್ಯಾಣಮ್ಮ ಅವರ ಜನ್ಮ ದಿನದ ಅಂಗವಾಗಿ ಇಂದು ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆಗೆ ಚಾಲನೆ ನೀಡಲಾಗುತ್ತಿದೆ ಎಂದು ನಾಗಾಭರಣ ತಿಳಿಸಿದರು.

    ನಂತರ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, 1980ರಲ್ಲಿ ನಾನು ಮೊದಲು ಸದಸ್ಯರಾಗಿ ಆಯ್ಕೆಯಾದೆ. ಅಂದಿನ ದಿನಗಳಲ್ಲಿ ಕಲಾವಿದರು, ಸಾಹಿತಿಗಳು ಆಯ್ಕೆಯಾಗಿ ಬರುತ್ತಿದ್ದರು. ಆದರೆ ಇಂದು ರಾಜಕಾರಣಿಗಳ ಬೆಂಬಲಿಗರು, ವಿಧಾನಸಭೆ ಚುನಾವಣೆಯಲ್ಲಿ ಸೋತವರು, ಬೇರೆ ಲಾಬಿಯಿಂದ ಅಯ್ಕೆಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

    ನಾನು ಸಭಾಪತಿಯಾದ ನಂತರ ಸದನದೊಳಗೆ ಮೊಬೈಲ್ ನಿಷೇಧಿಸಿದೆ. ಅದರೂ ಕೆಲ ಸದಸ್ಯರು ಮೊಬೈಲ್ ತರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ಚರ್ಚೆಯೇ ಆಗುತ್ತಿಲ್ಲ. ಈ ಆಧಿವೇಶನದಲ್ಲಿ ಎಷ್ಟು ಗಂಟೆ ಚರ್ಚೆಯಾಗಿದೆ, ಎಷ್ಟು ಹಣ ಖರ್ಚಾಗಿದೆ. ಒಂದು ಪ್ರಶ್ನೆಗೆ ಸುಮಾರು 14 ಲಕ್ಷ ರೂ. ಖರ್ಚಾಗಿದೆ. ಇದನ್ನೆಲ್ಲ ಮಾಧ್ಯಮದವರು ಬರೆಯುತ್ತಲೇ ಇಲ್ಲ. ಶಬ್ದಗಳ ಬಳಕೆಯಲ್ಲಿ ಕನ್ನಡ ಬಳಕೆಯನ್ನು ಹೆಚ್ಚಾಗಿ ಬಳಸಬೇಕು ಎಂದರು.

    ಈ ಕಾರ್ಯಕ್ರಮದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿಲೋಕೇಶ, ನಗರ ಜಿಲ್ಲಾ ಅಧ್ಯಕ್ಷ ಎಸ್.ಸೋಮಶೇಖರ ಗಾಂಧಿ ಉಪಸ್ಥಿತರಿದ್ದರು.

  • ಬ್ಯಾಂಕ್ ಮಹಿಳಾ ಉದ್ಯೋಗಿಗಳಿಗೆ ಕೊರೊನಾ – ಮಾಲೀಕನಿಂದ ಮನೆ ಖಾಲಿ ಮಾಡುವಂತೆ ಕಿರುಕುಳ

    ಬ್ಯಾಂಕ್ ಮಹಿಳಾ ಉದ್ಯೋಗಿಗಳಿಗೆ ಕೊರೊನಾ – ಮಾಲೀಕನಿಂದ ಮನೆ ಖಾಲಿ ಮಾಡುವಂತೆ ಕಿರುಕುಳ

    – ನಾವು ಸಾಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಸೋಂಕಿತೆ ಕಣ್ಣೀರು
    – ಸೋಂಕಿತರಿಗೆ ಔಷಧಿ ನೀಡಲು ಮನೆಗೆ ಬೀಡದ ಮಾಲೀಕನ ಪತ್ನಿ

    ಪಾಟ್ನಾ: ಬ್ಯಾಂಕ್ ಮಹಿಳಾ ಉದ್ಯೋಗಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಇದನ್ನು ತಿಳಿದ ಮನೆಯ ಮಾಲೀಕ ಮನೆ ಖಾಲಿ ಮಾಡುವಂತೆ ಕಿರುಕುಳ ನೀಡಿರುವ ಘಟನೆ ಬಿಹಾರದ ಸಿಯೋಹಾರ್ ಜಿಲ್ಲೆಯ ಭೈರ್ವಿ ನಗರದಲ್ಲಿ ನಡೆದಿದೆ.

    ಭೈರ್ವಿ ನರದಲ್ಲಿ ಇರುವ ಬ್ಯಾಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತೆಯರು ಒಟ್ಟಿಗೆ ಒಂದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಅವರು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಇಬ್ಬರಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಆಗ ಮಹಿಳೆಯರು ಹೋಗಿ ಮನೆ ಮಾಲೀಕ ಶೈಲೇಂದ್ರ ವರ್ಮಾಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರ ತಿಳಿಸಿದ್ದಾರೆ.

    ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿದಾಗ ಸುಮ್ಮನಿದ್ದ ಮಾಲೀಕ ಮತ್ತು ಆತನ ಪತ್ನಿ, ಮರುದಿನ ಮಹಿಳೆಯರಿಗೆ ಖಾಲಿ ಮಾಡುವಂತೆ ಹೇಳಿದ್ದಾರೆ. ಜೊತೆಗೆ ತಕ್ಷಣ ನೀವು ಮನೆ ಖಾಲಿ ಮಾಡಿ ಎಂದು ಕಿರುಕುಳ ನೀಡಿದ್ದಾರೆ. ಈ ವಿಚಾರದ ಬಗ್ಗೆ ನೋವಿನಿಂದ ಮಾತನಾಡಿರುವ ಸೋಂಕಿತ ಮಹಿಳೆಯೊಬ್ಬರು, ನಾವು ಜನ ಸೇವೆ ಮಾಡಲು ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತೇವೆ. ಸಾಮಾಜಕ್ಕಾಗಿ ಕೆಲಸ ಮಾಡುವ ನಮಗೆ ಈ ರೀತಿಯ ಪರಿಸ್ಥಿತಿಯಲ್ಲಿ ಜನರು ನಮ್ಮ ಬೆಂಬಲಕ್ಕೆ ಬರಬೇಕು. ಅದನ್ನು ಬಿಟ್ಟು ಈ ರೀತಿ ಕಿರುಕುಳ ನೀಡಬಾರದು ಎಂದು ಹೇಳಿದ್ದಾರೆ.

    ಮಾಲೀಕನ ವಿರುದ್ಧ ದೂರು ನೀಡಿರುವ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್ ಜಾ ಮಾತನಾಡಿ, ಕೊರೊನಾ ಪಾಸಿಟಿವ್ ಬಂದ ನಮ್ಮ ಇಬ್ಬರು ಉದ್ಯೋಗಿಗಳಿಗೆ ಅವರು ವಾಸವಿದ್ದ ಮನೆಯ ಮಾಲೀಕ ಶೈಲೇಂದ್ರ ವರ್ಮಾ ಮತ್ತು ಆತನ ಪತ್ನಿ ಮಾನಸಿಕ ಹಿಂಸೆ ನೀಡಿದ್ದಾರೆ. ಮನೆ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. ಜೊತೆಗೆ ನಮ್ಮ ಬ್ಯಾಂಕಿನ ಇತರೆ ಉದ್ಯೋಗಿಗಳು ಅವರಿಗೆ ಔಷಧಿ ಕೊಡಲು ಹೋದರೆ ಅದಕ್ಕೂ ಮಾಲೀಕ ಪತ್ನಿ ಅನುಮತಿ ನೀಡಿಲ್ಲ. ನಮ್ಮ ಉದ್ಯೋಗಿಗಳು ಹಾಲು ಮತ್ತು ನೂಡಲ್ಸ್ ತಿಂದುಕೊಂಡು ಜೀವನ ಮಾಡುತ್ತಿದ್ದಾರೆ ಎಂದಿದ್ದಾರೆ.

    ಆದರೆ ಮಹಿಳಾ ಉದ್ಯೋಗಿಗಳು ಮತ್ತು ಬ್ಯಾಂಕ್ ಮ್ಯಾನೇಜರ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಮನೆಯ ಮಾಲೀಕ, ನಾನು ಅವರಿಗೆ ಕಿರುಕುಳ ನೀಡಿಲ್ಲ. ಬದಲಿಗೆ ನಿಮ್ಮ ಊರಿಗೆ ಹೋಗಿ ಎಂದು ಮನವಿ ಮಾಡಿಕೊಂಡಿದ್ದೇನೆ. ಇಲ್ಲಿನ ಬೇರೆ ಮನೆಯವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಈ ರೀತಿ ಹೇಳಿದ್ದೇನೆ ಎಂದು ಹೇಳಿದ್ದಾರೆ.