Tag: ಬೌರಿಂಗ್ ಆಸ್ಪತ್ರೆ

  • ಗೋಡೆಗಳಲ್ಲಿ ಬಿರುಕು, ಪೈಪ್ ಸೋರಿಕೆ – ಬೌರಿಂಗ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಜೀವಭಯ

    ಗೋಡೆಗಳಲ್ಲಿ ಬಿರುಕು, ಪೈಪ್ ಸೋರಿಕೆ – ಬೌರಿಂಗ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಜೀವಭಯ

    ಬೆಂಗಳೂರು: ಮಂತ್ರಿ ಮಾಲ್ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಈ ಅವಘಡದ ನೆನಪು ಮಾಸುವ ಮುನ್ನವೇ ಪ್ರತಿಷ್ಠಿತ ಬೌರಿಂಗ್ ಆಸ್ಪತ್ರೆ ಕುಸಿಯಲು ತಯಾರಾಗಿ ನಿಂತಂತಿದೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಒದಗಿಸೋ ಬೌರಿಂಗ್ ಆಸ್ಪತ್ರೆ ಈಗ ಜನರ ಪ್ರಾಣ ನುಂಗಲು ರೆಡಿಯಾಗಿದೆ.

    2006ರಲ್ಲಿ ಉದ್ಘಾಟನೆಗೊಂಡ ಬೌರಿಂಗ್ ಆಸ್ಪತ್ರೆಗೆ ದಿನನಿತ್ಯ ನೂರಾರು ಜನ ಚಿಕಿತ್ಸೆಗಾಗಿ ಹೋಗ್ತಾರೆ. ಯಾವುದೇ ಅಪಘಾತಗಳಾದ್ರೂ ಕೂಡ ಇದೇ ಆಸ್ಪತ್ರೆಗೆ ಮೊದಲು ಕರೆತರಲಾಗುತ್ತೆ. ಆದ್ರೆ ಇದೀಗ ರೋಗಿಗಳು ಬೌರಿಂಗ್ ಆಸ್ಪತ್ರೆಗೆ ಬರಲು ಭಯಬೀಳುವಂತಾಗಿದೆ. ಇದಕ್ಕೆ ಕಾರಣ ಆಸ್ಪತ್ರೆ ಪೂರ್ತಿ ಬಿರುಕು ಬಿಟ್ಟಿರೋದು.

    ಸಿಲಿಕಾನ್ ಸಿಟಿ ಮಾತ್ರವಲ್ಲ ಬೇರೆ ಊರುಗಳಿಂದ ಕೂಡ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರ್ತಾರೆ. ಆದ್ರೆ ಆಸ್ಪತ್ರೆ ಗೋಡೆಗಳು ಮಾತ್ರ ಪೂರ್ತಿ ಬಿರುಕು ಬಿಟ್ಟಿದ್ದು ಜೀವ ಭಯದಿಂದ ಓಡಾಡುವಂತಾಗಿದೆ. ಅದ್ರಲ್ಲೂ ತುರ್ತು ಚಿಕಿತ್ಸೆ ಹಾಗೂ ಮಕ್ಕಳ ವಾರ್ಡ್ ಇದಾಗಿದ್ದು, ರೋಗಿಗಳು ಇನ್ನೂ ಭಯ ಬೀಳುವಂತಾಗಿದೆ. ಬಡರೋಗಿಗಳ ಆಸ್ಪತ್ರೆಗೆ ಫಿಲ್ಟರ್ ಮರಳು ಬಳಸಲಾಗಿದೆ. ಹೀಗಾಗಿ ಗೋಡೆಗಳಿ ಬಿರುಕು ಬಿಟ್ಟಿದೆ ಎಂದು ಸ್ಥಳೀಯರಾದ ಬಸವರಾಜ್ ಆರೋಪಿಸಿದ್ದಾರೆ.

    ಒಂದೆಡೆ ಗೋಡೆ ಬಿರುಕು ಬಿಟ್ಟಿದ್ರೆ, ಇನ್ನೊಂದೆಡೆ ನೀರಿನ ಪೂರೈಕೆಗೆ ಅಳವಡಿಸಿರುವ ಪೈಪ್ ಸೋರಿಕೆಯಾಗ್ತಿದೆ. ಹೀಗಾಗಿ ಮೇಲಿನ ಅಂತಸ್ತಿಂದ ಕೆಳ ಮಹಡಿವರೆಗೂ ನೀರಿನ ಸೋರಿಕೆಯಾಗ್ತಿದ್ದು, ಗೋಡೆ ಇನ್ನಷ್ಟು ಬಿರುಕು ಬಿಡ್ತಿದೆ. ಈ ಬಗ್ಗೆ ಆಸ್ಪತ್ರೆಯ ಡಿನ್ ಡಾ. ಮಂಜುನಾಥ್‍ನ ಕೇಳಿದ್ರೆ, ಆ ರೀತಿ ಏನು ಇಲ್ಲ. ನನ್ನ ಗಮನಕ್ಕೆ ಅದು ಬಂದಿಲ್ಲ. ಅಲ್ಲಿ ನೀರಿನ ಪೈಪ್‍ಗಳು ಒಡೆದಿದೆ. ಅದನ್ನ ಸರಿ ಪಡಿಸೋ ಕೆಲಸ ಮಾಡ್ತಿದ್ದೇವೆ. ಅದ್ರಿಂದ ಗೋಡೆ ಬಿರುಕು ಬಿಟ್ಟಿರಬಹುದು. ಎಲ್ಲವನ್ನ ಸರಿಮಾಡ್ತಿವಿ ಅಂತ ಪ್ರತಿಕ್ರಿಯಿಸಿದ್ದಾರೆ.

  • 5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

    5 ವರ್ಷದ ಹಸುಳೆ ಮೇಲೆ ಕಾಮುಕರ ಅಟ್ಟಹಾಸ – ಐಸಿಯೂನಲ್ಲಿ ಕಂದಮ್ಮನಿಗೆ ಚಿಕಿತ್ಸೆ

    ಬೆಂಗಳೂರು: ನಗರದಲ್ಲಿ ಕಾಮುಕರ ಅಟ್ಟಹಾಸ ಮೀತಿಮೀರಿದೆ. ಮೂವರು ಕಾಮುಕರು ಶುಕ್ರವಾರ ಮಧ್ಯರಾತ್ರಿ ಐದು ವರ್ಷದ ಪುಟ್ಟ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಗ್ಯಾಂಗ್ ರೇಪ್ ಎಸಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

    ಬೆಂಗಳೂರಿನ ಕೆಜಿ ಹಳ್ಳಿಯ ವೈಯಾಲಿಕಾವಲ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಮಗುವಿನ ಪೋಷಕರು ಮೂಲತಃ ಚಿತ್ರದುರ್ಗದವರಾಗಿದ್ದು, ಕೆಲಸದ ನಿಮಿತ್ತ ಬೆಂಗಲೂರಿನಲ್ಲಿ 3 ವರ್ಷಗಳಿಂದ ವಾಸವಿದ್ದಾರೆ.

    ನಡೆದಿದ್ದೇನು?: ಎಂದಿನಂತೆ ತಾಯಿಯ ಜೊತೆ ಮಲಗಿದ್ದ ಬಾಲಕಿ ರಾತ್ರಿ ಬಹಿರ್ದೆಸೆಗೆಂದು ಹೊರಗೆ ಬಂದಿದೆ. ಆದ್ರೆ ಈ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ. ಬಾಲಕಿ ಹೊರಗೆ ಬಂದಿದ್ದ ವೇಳೆ ಕಾಮುಕರು ಆಕೆಯನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಮನೆಯ ಬಳಿ ಬಾಲಕಿಯನ್ನು ಬಿಸಾಕಿ ಹೋಗಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕಂಡು ಪೋಷಕರು ಕಂಗಾಲಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಮಾತನಾಡುವ ಪರಿಸ್ಥಿತಿಗೆ ಬಂದ ಬಳಿಕ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಅಂತಾ ಡಿಸಿಪಿ ಅಜಯ್ ಹಿಲೋರಿ ಹೇಳಿದ್ದಾರೆ.

    ನಿನ್ನೆ ಮೂರು ಗಂಟೆ ಸುಮಾರಿಗೆ ಆಸ್ಪತ್ರೆಗೆ ಮಗು ದಾಖಲಾಗಿದೆ. ಮಗು ಶಾಕ್‍ಗೆ ಒಳಗಾಗಿದೆ. ಆಸ್ಪತ್ರೆಗೆ ದಾಖಲಾದಾಗ ಅರೆಪ್ರಜ್ಞಾವಸ್ಥೆಯಲ್ಲಿ ಇತ್ತು. ಮಗುವಿನ ಕೈ ಬೆರಳು ಕಟ್ಟಾಗಿದೆ. ಸದ್ಯ ಬಾಲಕಿಗೆ ಐಸಿಯೂವಿನಲ್ಲಿ ಚಿಕಿತ್ಸೆ ಮುಂದುವರೆದಿದೆ ಅಂತಾ ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಮಂಜುನಾಥ್ ಹೇಳಿದ್ದಾರೆ.

    ಜಾರ್ಜ್ ಭೇಟಿ: ಪ್ರಕರಣ ಸಂಬಂಧ ಸಚಿವ ಕೆ ಜೆ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಬಾಲಕಿಯ ಪೋಷಕರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸಿರಿಯಸ್ ಕ್ರೈಂ. ಪ್ರಕರಣದಲ್ಲಿ ಯಾರೆ ತಪ್ಪು ಮಾಡಿದ್ರು ಕಠಿಣ ಶಿಕ್ಷೆ ಆಗಬೇಕು ಅಂತ ಹೇಳಿದ್ದಾರೆ.

    ಘಟನೆಯಿಂದ ಮಗು ತಲೆಗೆ ಏಟಾಗಿದೆ. ಅದಕ್ಕೆ ಮೊದಲ ಆದ್ಯತೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಪೊಲೀಸ್ರು ಪ್ರಕರಣವನ್ನು ಪಡೆದುಕೊಂಡು ತನಿಖೆ ಮಾಡುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಸೀರಿಯಸ್ ಆಗಿ ಮಾಡಿ ಕೋರ್ಟ್‍ಗೆ ನೀಡ್ತಾರೆ. ಪೊಲೀಸ್ರಿಗೆ ಸಹಕಾರ ನೀಡಬೇಕು. ಸಮಾಜ ಇಂತಹವರ ವಿರುದ್ಧ ಒಟ್ಟಾಗಿ ಶಿಕ್ಷೆ ನೀಡಬೇಕು. ಇದು ಸಮಾಜ ಸಹಿಸಲಾಗದ ಪ್ರಕರಣವಾಗಿದೆ. ಇಂತಹ ಕೃತ್ಯವೆಸಗಿದ್ದಾರೆ ಅವರಿಗೆ ಶಿಕ್ಷೆ ನೀಡಬೇಕಿದೆ. ಈ ಬಗ್ಗೆ ಕಮಿಷನರ್ ಮತ್ತು ಡಿಸಿಪಿ ಜತೆ ಮಾತನಾಡಿದ್ದೇನೆ ಅಂತಾ ಜಾರ್ಜ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಕೆಜಿ ಹಳ್ಳಿ ಪೊಲೀಸರು ಕಾಮುಕರಿಗಾಗಿ ಬಲೆ ಬೀಸಿದ್ದಾರೆ.