Tag: ಬೌರಿಂಗ್ ಆಸ್ಪತ್ರೆ

  • ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    – ಡಿಕೆಶಿ ವಿರುದ್ಧ ಆಕ್ರೋಶ ಹೊರ ಹಾಕಿದ ದಿವ್ಯಾಂಶಿ ತಾಯಿ ಅಶ್ವಿನಿ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stadium Stampede) ಮೃತಪಟ್ಟಿದ್ದ ದಿವ್ಯಾಂಶಿ ತಾಯಿ ಅಶ್ವಿನಿ ಇಂದು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮರಣೋತ್ತರ ಪರೀಕ್ಷೆ  ವೇಳೆ ಮಗಳ ಮೃತದೇಹದಿಂದ ಕಿವಿಯೋಲೆ (Earrings) ಕಳುವಾಗಿದೆ ಎಂದು ದೂರು ನೀಡಿದ್ದಾರೆ.

    ದೂರು ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತಾಯಿ ಅಶ್ವಿನಿ, ಮರಣೋತ್ತರ ಪರೀಕ್ಷೆಯ ಬಳಿಕ ಮಗಳ ಕಿವಿಯೋಲೆ ನಾಪತ್ತೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆಯ (Bowring Hospital) ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.

    ದಿವ್ಯಾಂಶಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಓಲೆಯ ಮೇಲೆ ಆಕೆಗೆ ತುಂಬಾ ಅಟ್ಯಾಚ್ಮೆಂಟ್ ಇತ್ತು. ಹಾಗಾಗಿ ಅದು ನನಗೆ ಬೇಕು ಅಂಥ ಕೇಳಿದ್ದೇನೆ ಎಂದರು. ಇದನ್ನೂ ಓದಿ: ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? ದಿವ್ಯಾಂಶಿ ತಾಯಿ ಪ್ರಶ್ನೆ

     

    ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿ ಓಲೆ ಬಿಚ್ಚಿರಲಿಲ್ಲ. ಹಾಗಾಗಿ ಅದು ನನಗೆ ಬೇಕು ಎಂದು ಕೇಳಿದ್ದೇನೆ. ಆಸ್ಪತ್ರೆಯಿಂದ ಯಾರು ಸರಿಯಾಗಿ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

    ಡಿಕೆಶಿ ವಿರುದ್ಧ ಆಕ್ರೋಶ
    ದಿವ್ಯಾಂಶಿ ಕಿವಿಯೋಲೆ ಕಳವು ವಿಚಾರಕ್ಕೆ ದೂರು ನೀಡಿದ ನಂತರ ತಾಯಿ ಅಶ್ವಿನಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಬಳಿಕ ಶವಾಗಾರದ ಬಳಿ ದಿವ್ಯಾಂಶಿ ಅಜ್ಜಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಅಜ್ಜಿ ಜೊತೆ ಮಾತನಾಡುವ ಫೋಟೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಡಿಸಿಎಂ ತಮ್ಮ ಅಧಿಕೃತ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ಶವಾಗಾರದ ಬಳಿ ಕುಳಿತುಕೊಂಡು ಟ್ರೀಟ್ಮೆಂಟ್ ಬಗ್ಗೆ ಮಾತಾಡ್ತಾರೆ. ಶವಾಗಾರದಲ್ಲಿ ಏನ್ ಟ್ರೀಟ್ಮೆಂಟ್ ಕೊಡುತ್ತಾರೆ ಎಂದು ಪ್ರಶ್ನಿಸಿದರು.

  • ಸೂರಜ್ ರೇವಣ್ಣಗೆ ಇಂದೂ ಮೆಡಿಕಲ್ ಟೆಸ್ಟ್ – ಲಿಂಗತ್ವ ಪರೀಕ್ಷೆ ಸಾಧ್ಯತೆ!

    ಸೂರಜ್ ರೇವಣ್ಣಗೆ ಇಂದೂ ಮೆಡಿಕಲ್ ಟೆಸ್ಟ್ – ಲಿಂಗತ್ವ ಪರೀಕ್ಷೆ ಸಾಧ್ಯತೆ!

    ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಅವರನ್ನು ಮಂಗಳವಾರ ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.

    ನಗರದ ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital) ಯೂರಾಲಜಿಸ್ಟ್, ಫೊರೆನ್ಸಿಕ್ ತಜ್ಷರು ಮತ್ತು ಪಿಜಿಷಿಯನ್ ವೈದ್ಯರಿಂದ ವಿವಿಧ ಮಾದರಿಯ ವೈದ್ಯಕೀಯ ಪರೀಕ್ಷೆಗಳನ್ನು (Medical Test) ನಡೆಸಲಿದ್ದಾರೆ. ಇದೇ ವೇಳೆ ಸಂತ್ರಸ್ತನಿಗೆ ಮನೋ ವೈದ್ಯರಿಂದ ಎಗ್ಸಾಮಿನೇಷನ್ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಸೂರಜ್ ರೇವಣ್ಣಗೆ ಯಾವ ರೀತಿ ಮೆಡಿಕಲ್ ಟೆಸ್ಟ್ ಆಗಲಿದೆ ?

    • ಕೂದಲು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ
    • ಲಿಂಗತ್ವ ಪರೀಕ್ಷೆ ಸಾಧ್ಯತೆ
    • ಅಸಹಜ ಲೈಂಗಿಕ ಕ್ರಿಯೆಗೆ ಸಮರ್ಥನ ಅಥವಾ ಈ ರೀತಿಯ ಅ ಸಹಜ ಲೈಂಗಿಕ ಕ್ರಿಯೆ ಇದೇ ಮೊದಲ ಅಂತಾ ಪರೀಕ್ಷೆ ಮಾಡ್ತಾರೆ
    • ಕಿಡ್ನಿ ಮತ್ತು ವೃಷಣಗಳ ಪರೀಕ್ಷೆಯೂ ಸಾಧ್ಯತೆ
    • ಲೈಂಗಿಕ ಸಮರ್ಥತೆ ಬಗ್ಗೆ ಪರೀಕ್ಷೆ
    • ಫೊರೆನ್ಸಿಕ್‌ ಫಾರೆನ್ಸಿಕ್ ತಙ್ಞರಿಂದ ಕೂದಲು, ಬಟ್ಟೆ ಮತ್ತು ಕೆಲವೊಂದು ವಸ್ತುಗಳನ್ನ ಪರೀಕ್ಷೆಗೆ ಒಳಪಡಿಸ್ತಾರೆ
    • ಡಿಎನ್‌ಎ ಟೆಸ್ಟ್ ಕೂಡ ಮಾಡಲಿದ್ದಾರೆ
    • ಡಿಎನ್‌ಎ ಸೇರಿದಂತೆ 8 ಬಗೆಯ ಮೆಡಿಕಲ್ ಟೆಸ್ಟ್ ಮಾಡುವ ಸಾಧ್ಯತೆ

    ಸೂರಜ್ ಮೊಬೈಲ್ ಸೀಜ್:
    ಸದ್ಯ ಹೊಳೆನರಸೀಪುರ ಪೊಲೀಸರಿಂದ ಕೇಸ್ ದಾಖಲೆ ಪಡೆದು ತನಿಖೆ ಆರಂಭಿಸಿರುವ ಸಿಐಡಿ ತಂಡ ಆರೋಪಿ ಮೊಬೈಲ್ ಸೀಜ್ ಮಾಡಿದೆ. ಸೂರಜ್ ಹಾಗೂ ಸಂತ್ರಸ್ತನ ನಡುವೆ ನಡೆದಿರುವ ಚಾಟಿಂಗ್ ಹಾಗೂ ಫೋನ್ ಸಂಭಾಷಣೆ ಮಾಹಿತಿ ಕಲೆಹಾಕಿದ್ದು, ತನಿಖೆ ಮುಂದುವರಿಸಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.

  • ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಸಂತ್ರಸ್ತನಿಗಿಂದು ಬೆಂಗ್ಳೂರಲ್ಲಿ ಮೆಡಿಕಲ್‌ ಟೆಸ್ಟ್‌!

    ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಸಂತ್ರಸ್ತನಿಗಿಂದು ಬೆಂಗ್ಳೂರಲ್ಲಿ ಮೆಡಿಕಲ್‌ ಟೆಸ್ಟ್‌!

    ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ (Suraj Revanna) ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದೂರು ದಾಖಲಿಸಿರುವ ಸಂತ್ರಸ್ತ ಯುವಕನಿಗೆ ಭಾನುವಾರ (ಇಂದು) ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ (Bowring Hospital) ವೈದ್ಯಕೀಯ ಪರೀಕ್ಷೆ ನಡೆಯಲಿದೆ.

    ಶನಿವಾರ ತಡರಾತ್ರಿಯೇ ಸಂತ್ರಸ್ತನನ್ನು ಹಾಸನದಿಂದ ಬೌರಿಂಗ್‌ ಆಸ್ಪತ್ರೆಗೆ ಕರೆತಂದಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ವೈದ್ಯಕೀಯ ಪರೀಕ್ಷೆಗೆ (Medical Test) ನಿರಾಕರಿಸಿದ ಹಿನ್ನೆಲೆ ಸಂತ್ರಸ್ತನ ಮನವಿ ಮೇರೆಗೆ ಬೆಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಹೊಳೆನರಸೀಪುರ ಪೊಲೀಸರು ತಡರಾತ್ರಿ 2 ಗಂಟೆಗೆ ಸಂತ್ರಸ್ತ ಯುವಕನನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ.

    ಸದ್ಯಕ್ಕೆ ಕೌನ್ಸೆಲಿಂಗ್‌ ಮುಗಿಸಿರುವ ಕರ್ತವ್ಯ ನಿರತ ವೈದ್ಯರು, ಮುಂದಿನ ಪರೀಕ್ಷೆಗಳಿಗೆ ಹಿರಿಯ ವೈದ್ಯರ ಆಗಮನಕ್ಕೆ ಕಾಯುತ್ತಿದ್ದಾರೆ. ಭಾನುವಾರ (ಇಂದು) ಬೆಳಗ್ಗೆ 10 ಗಂಟೆ ನಂತರ ವೈದ್ಯಕೀಯ ಪರೀಕ್ಷೆಯ ಬೆಳವಣಿಗೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದ ದರ್ಶನ್‌ – ʻದಾಸʼನ ಜೈಲು ದಿನಚರಿ ಹೇಗಿದೆ?

    ಸಂತ್ರಸ್ತ ಲೈಂಗಿಕ ಕ್ರಿಯೆಗೆ ಸಮರ್ಥನಾಗಿದ್ದಾನಾ ಅನ್ನೋ ಪರೀಕ್ಷೆ ಇದಾಗಿದೆ. ಸದ್ಯ ಸಂತ್ರಸ್ತನಿಗೆ ರಕ್ತದೊತ್ತಡ, ಶುಗರ್, ಇಸಿಜಿ, ದೇಹದ ಮೇಲೆ ಕಚ್ಚಿರುವ ಕಲೆಗಳ ಬಗ್ಗೆ ತಪಾಸಣೆ ನಡೆಸಲಾಗಿದೆ. ಹಿರಿಯ ವೈದ್ಯರ ಸಮ್ಮುಖದಲ್ಲಿ ಲೈಂಗಿಕ ಕ್ರಿಯೆ ಸಾಮರ್ಥ್ಯ ಪರೀಕ್ಷೆ ನಡೆಲಿದೆ. ಹೊಳೆನರಸೀಪುರ ಪೊಲೀಸರು ಸ್ಥಳದಲ್ಲಿ ಇದ್ದಾರೆ ಎಂದು ಬೌರಿಂಗ್‌ ಆಸ್ಪತ್ರೆ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ. ಇದನ್ನೂ ಓದಿ: Breaking: ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ

    ರೇವಣ್ಣ ವಿರುದ್ಧ ಕೇಸ್‌:
    ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಕೇಸ್‌ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್‌ಪಿಗೂ ದೂರಿನ ಪ್ರತಿಯನ್ನು ಇ-ಮೇಲ್ ಮಾಡಿದ್ದ. ಮೇಲ್ ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

    ಸೂರಜ್‌ ಲಾಕ್‌ ಆಗಿದ್ದು ಹೇಗೆ?
    ಶನಿವಾರ ರಾತ್ರಿ ತನ್ನ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ ಸಂತ್ರನ ವಿರುದ್ಧ ಪ್ರತಿದೂರು ನೀಡಲು ಸಂಜೆ 6 ಗಂಟೆ ವೇಳೆಗೆ ಹಾಸನದ ಸೆನ್‌ ಪೊಲೀಸ್‌ ಠಾಣೆಗೆ ತೆರಳಿದ್ದರು. ಅಲ್ಲಿಯೇ ಅವರನ್ನು ಬಂಧಿಸಿದ್ದ ಪೊಲೀಸರು ರಾತ್ರಿ ಸುಮಾರು 11:30ರ ವರೆಗೂ ವಿಚಾರಣೆ ನಡೆಸಿದ್ದರು. ಬಳಿಕ ಸೂರಜ್‌ ಜೊತೆಗೆ ನಿಗೂಢ ಸ್ಥಳಕ್ಕೆ ತೆರಳಿದ್ದ ಪೊಲೀಸರು ತಡರಾತ್ರಿ 1:30ರ ವರೆಗೂ ವಿಚಾರಣೆ ಮುಂದುವರಿಸಿದ್ದರು. ಪ್ರಕರಣದ ತನಿಖಾಧಿಕಾರಿ ಆಗಿರುವ ಸಕಲೇಶಪುರ ಡಿವೈಎಸ್‌ಪಿ ಪ್ರಮೋದ್‌ ಕುಮಾರ್‌ ಅವರು ಸೂರಜ್‌ ರೇವಣ್ಣ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

  • ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆಗೆ ವಕ್ಫ್ ಮಹಿಳಾ ಪರಿಷತ್ತಿನಿಂದ 5 ಲಕ್ಷ ಸಹಾಯಧನ

    ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆಗೆ ವಕ್ಫ್ ಮಹಿಳಾ ಪರಿಷತ್ತಿನಿಂದ 5 ಲಕ್ಷ ಸಹಾಯಧನ

    ಬೆಂಗಳೂರು: ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಬಡ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ರಿಜಿಡ್ ನೆಪ್ರೋಸ್ಕೋಪ್ ಖರೀದಿಸಲು ಕರ್ನಾಟಕ ಸ್ಟೇಟ್ ವಕ್ಫ್ ಫೌಂಡೇಷನ್ ಫಾರ್ ವುಮೆನ್ ಡೆವಲಪ್‌ಮೆಂಟ್ ವತಿಯಿಂದ 5 ಲಕ್ಷ ರೂ. ಸಹಾಯಧನದ ಚೆಕ್ ಅನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಸ್ತಾಂತರಿಸಿದರು. ಇದನ್ನೂ ಓದಿ: ನಾಳೆ ಬೆಂಗ್ಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗಿಲ್ಲ ಅವಕಾಶ – ಯಾವೆಲ್ಲ ರಸ್ತೆಗಳು?

    ಶನಿವಾರ ವಿಕಾಸಸೌಧದಲ್ಲಿ ಚೆಕ್ ಅನ್ನು ಹಸ್ತಾಂತರಿಸಿ ಮಾತನಾಡಿದ ಸಚಿವೆ, ಕರ್ನಾಟಕ ಸ್ಟೇಟ್ ವಕ್ಫ್ ಫೌಂಡೇಷನ್ ಫಾರ್ ವುಮೆನ್ ಡೆವಲಪ್‌ಮೆಂಟ್ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಚಿಕಿತ್ಸೆಗಾಗುವ ಖರ್ಚನ್ನು ಭರಿಸಲಾಗುತ್ತಿದೆ. ಶಿವಾಜಿನಗರದಲ್ಲಿರುವ ಸರ್ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸಿಟ್ಯೂಟ್ ಸಂಸ್ಥೆಯ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಮತ್ತು ಬಡ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಈ ಸಂಸ್ಥೆಯ ಮನವಿಯಂತೆ ರಿಜಿಡ್ ನೆಪ್ರೋಸ್ಕೋಪ್(Rigid Neproscope) ಉಪಕರಣ ಖರೀದಿಸಲು 5 ಲಕ್ಷ ರೂ. ಸಹಾಯಧನವನ್ನು ನೀಡಲಾಗಿದೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ದೊರೆಯಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಸ್ಥಳ ಪರಿಶೀಲನೆ ಮಾಡಿದ ಸಿಎಂ

    ಬೌರಿಂಗ್ ಆಸ್ಪತ್ರೆಯ ವೈದ್ಯರಾದ ಡಾ. ಶ್ರೀಕಾಂತ್, ಡಾ. ಅಭಿಜಿತ್, ಡಾ. ಜಹೀರ್ ಮತ್ತು ಆಹಾರ ತಜ್ಞರಾದ ಮೇಘಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    Live Tv

  • ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

    ಟೀ ಕುಡಿಯಲು ಬರ್ತಿದ್ದರು, ಬಿಎಸ್‍ವೈ ಮೊಮ್ಮಗಳು ಅಂತ ಗೊತ್ತಿರ್ಲಿಲ್ಲ- ಸೌಂದರ್ಯ ಸಾವಿಗೆ ಸ್ಟಾಲ್ ಯುವಕ ಬೇಸರ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಆತ್ಮಹತ್ಯೆ ವಿಚಾರ ತೀವ್ರ ಆಘಾತವನ್ನುಂಟುಮಾಡಿದೆ. ಇದೀಗ ಬಾರಿಂಗ್ ಆಸ್ಪತ್ರೆ ಆವರಣದಲ್ಲಿದ್ದ ಟೀ ಸ್ಟಾಲ್ ಯುವಕ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕ ಚಂದನ್, ಸೌಂದರ್ಯ ಅವರು ತುಂಬಾ ಅನೊನ್ಯವಾಗಿದ್ದರು. ತಮ್ಮ ಸ್ನೇಹಿತರ ಜೊತೆ ಆಗಾಗ ಟೀ ಸ್ಟಾಲ್ ಗೆ ಬರುತ್ತಿದ್ದರು. ಆದರೆ ಅವರು ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಅಂತ ಗೊತ್ತಿರಲಿಲ್ಲ. ಇದೀಗ ಆತ್ಮಹತ್ಯೆ ವಿಷಯ ತಿಳಿದ ಕೂಡಲೇ ನಮ್ಮ ಅಕ್ಕನೇ ಹೋದ್ರು ಅನ್ನೋ ತರ ಶಾಕ್ ಆಯ್ತು ಎಂದು ಕಣ್ಣೀರು ಹಾಕಿದರು. ಒಟ್ಟಿನಲ್ಲಿ ಸೌಂದರ್ಯನನ್ನು ಕಳೆದುಕೊಂಡ ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ವಿಭಿನ್ನವಾಗಿ ಪ್ರೆಗ್ನೆಸ್ಸಿ ಫೋಟೋಶೂಟ್ ಮಾಡಿಸಿಕೊಂಡ ನಟಿ ದಿಶಾ..!

    ಸೌಂದರ್ಯ ಹಾಗೂ ಪತಿ ಡಾ. ನಿರಂಜನ್ ಅವರು ಧವಳಗಿರಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಆದರೆ ಶುಕ್ರವಾರ ಡಾಲರ್ಸ್ ಕಾಲೋನಿಯ ಲೆಗೆಸ್ಸಿ ಅಪಾರ್ಟ್ ಮೆಂಟ್‍ ಫ್ಲಾಟ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ 11 ಗಮಟೆಯ ಸುಮಾರಿಗೆ ಮಗುವನ್ನು ಪಕ್ಕದ ರೂಮ್‍ನಲ್ಲಿ ಮಲಗಿಸಿ ತಾನು ಬೇರೊಂದು ರೂಮ್‍ನಲ್ಲಿ ಸೌಂದರ್ಯ ಸೂಸೈಡ್ ಮಾಡಿಕೊಂಡಿದ್ದಾರೆ.

    ಬಿಎಸ್‍ವೈ ಮೊಮ್ಮಗಳು ಸೌಂದರ್ಯ ಅವರು ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ದಂಪತಿಗೆ 9 ತಿಂಗಳ ಗಂಡು ಮಗು ಇದೆ. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್‍ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಡಿಪ್ರೆಷನ್‍ಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

  • ಸೌಂದರ್ಯ ಸಾವು ನಿಜಕ್ಕೂ ಶಾಕ್ ನೀಡಿದೆ: ಸಹ ವೈದ್ಯರು

    ಸೌಂದರ್ಯ ಸಾವು ನಿಜಕ್ಕೂ ಶಾಕ್ ನೀಡಿದೆ: ಸಹ ವೈದ್ಯರು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದು, ಸೌಂದರ್ಯ ನೋಡಲು ಆಸ್ಪತ್ರೆಯ ಸಹ ವೈದ್ಯರು ಶಾಕ್ ಆಗಿದ್ದಾರೆ.

    ಬಿಎಸ್‍ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ತಮ್ಮ ಅಪಾಟ್‍ಮೆಂಟ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೌರಿಂಗ್‍ನಲ್ಲಿ ಜನರಲ್ ಸರ್ಜನ್ ಆಗಿದ್ದ ಸೌಂದರ್ಯ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಬೌರಿಂಗ್ ಆಸ್ಪತ್ರೆಯ ಸಹ ವೈದ್ಯರ ದಂಡು ಜಮಾಯಿಸುತ್ತಿದ್ದಾರೆ. ಇದನ್ನೂ ಓದಿ: ಅತ್ತಿಯಾಗಬೇಕಿದ್ದವಳ ಮೇಲೆ ಕಣ್ಣಾಕಿದ್ದ ಸಹೋದರನ ಕತ್ತು ಸೀಳಿದ ಅಣ್ಣ!

    ಈ ಕುರಿತಂತೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಸಹವೈದ್ಯರೊಬ್ಬರು, ಆಕೆ ಇಲ್ಲಿ ಕಾರ್ಯನಿರ್ವಹಿಸುವಾಗ ಯಾವುದೇ ರೀತಿಯಿಂದಲೂ ಆಕೆಗೆ ಡಿಪ್ರೆಷನ್ ಸಮಸ್ಯೆ ಇರಲಿಲ್ಲ. ಆಕೆ ಓರ್ವ ಉತ್ತಮ ವೈದ್ಯೆ. ಈ ಹಿಂದೆ ಅವರ ಅಜ್ಜ ಸಿಎಂ ಆಗಿದ್ದಾಗಲೂ ತಾನೊಬ್ಬ ಸಿಎಂ ಮೊಮ್ಮಗಳು ಎಂಬ ಅಹಂ ಎಂದೂ ಕೂಡ ಇರಲಿಲ್ಲ. ಇದಕ್ಕಿದಂತೆ ಆಕೆಗೆ ಡಿಪ್ರೆಷನ್ ಆಗಿದ್ದು ಹೇಗೋ ಏನೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

    ಡೆಲಿವರಿ ಸಮಯದಲ್ಲಿ ಕೂಡ ಸೌಂದರ್ಯ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಇದೀಗ ಆಕೆಯ ಸಾವು ನಿಜಕ್ಕೂ ಶಾಕಿಂಗ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಸೌಂದರ್ಯ ನೋಡಲು ಬೌರಿಂಗ್ ಆಸ್ಪತ್ರೆಯ ಸಹ ವೈದ್ಯರು ದೌಡು ಮಾರ್ಚರಿಯ ಬಳಿ ಆಗಮಿಸುತ್ತಿದ್ದಾರೆ.

  • ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಸತ್ಯಜಿತ್ (72) ನಿಧನರಾಗಿದ್ದಾರೆ.

    ಸಾಮಾನ್ಯ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸತ್ಯಜಿತ್ ಅವರು ಕೆಲವು ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಲನಚಿತ್ರರಂಗ ಕಂಬನಿ ಮಿಡಿದಿದೆ. ಇದನ್ನೂ ಓದಿ: ಸ್ಟಾರ್ ನಟರೆಲ್ಲ ಕೈಬಿಟ್ರು: ಚಿಕಿತ್ಸೆಗೆ ಬಾಗಲಕೋಟೆಗೆ ಬಂದು ನೋವು ತೋಡಿಕೊಂಡ ಸತ್ಯಜಿತ್

    ಹಲವು ಜನಪ್ರಿಯ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಸತ್ಯಜಿತ್ ನಟಿಸಿದ್ದಾರೆ. ಅಲ್ಲದೇ ಕೆಲ ದಿನಗಳ ಹಿಂದೆ ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ಕಳೆದುಕೊಂಡಿದ್ದರು. ಇದನ್ನೂ ಓದಿ: ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣ

    ಬಹುಬೇಡಿಕೆಯ ಪೋಷಕ ನಟರಾಗಿದ್ದ ಸತ್ಯಜಿತ್, ಇವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. 650ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಸತ್ಯಜಿತ್ ಅವರು ಒಂದು ಕಾಲದಲ್ಲಿ ಬಹುಬೇಡಿಕೆ ಪೋಷಕ ನಟರಾಗಿ ಗುರುತಿಸಿಕೊಂಡಿದ್ದರು. ನೆಗೆಟಿವ್ ಪಾತ್ರ ಕೊಟ್ಟರೂ, ಅಷ್ಟೇ ಖಡಕ್ ಆಗಿ ಅಭಿನಯಿಸಿದ್ದರು.

    ಪುಟ್ನಂಜ (1995), ಶಿವ ಮೆಚ್ಚಿದ ಕಣ್ಣಪ್ಪ (1988), ಚೈತ್ರಾದ ಪ್ರೇಮಾಂಜಲಿ ( 1992), ಆಪ್ತಮಿತ್ರ (2004) ಇವು ಸತ್ಯಜಿತ್ ಅವರು ನಟಿಸಿದ ಪ್ರಮುಖ ಚಲನ ಚಿತ್ರಗಳಾಗಿದೆ. ಅರುಣ ರಾಗ, ಅಂತಿಮ ತೀರ್ಪು, ರಣರಂಗ, ನಮ್ಮೂರ ರಾಜ, ನ್ಯಾಯಕ್ಕಾಗಿ ನಾನು, ಯುದ್ಧಕಾಂಡ, ಇಂದ್ರಜಿತ್, ನಮ್ಮೂರ ಹಮ್ಮೀರ, ಪೊಲೀಸ್ ಲಾಕಪ್, ಮನೆದೇವ್ರು, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಸರ್ಕಲ್ ಇನ್ಸ್‌ಪೆಕ್ಟರ್‌, ಪಟೇಲ, ದುರ್ಗದ ಹುಲಿ, ಅಪ್ಪು, ಧಮ್, ಅಭಿ, ಅರಸು, ಇಂದ್ರ, ಭಾಗ್ಯದ ಬಳೇಗಾರ, ಕಲ್ಪನಾ, ಗಾಡ್ ಫಾದರ್, ಲಕ್ಕಿ, ಉಪ್ಪಿ 2, ಮಾಣಿಕ್ಯ, ರನ್ನ, ರಣವಿಕ್ರಮ, ಮೈತ್ರಿ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ. ಇದನ್ನೂ ಓದಿ: ಹುಟ್ಟಿದಾಗಲೇ ಮಗಳು ಸತ್ತೋಗಿದ್ರೆ ಚೆನ್ನಾಗಿತ್ತು ಅನ್ನಿಸುತ್ತಿದೆ: ಸತ್ಯಜಿತ್

  • ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖ, ಡಿಸ್ಚಾರ್ಜ್‌

    ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖ, ಡಿಸ್ಚಾರ್ಜ್‌

    ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಆಗಸ್ಟ್ -9 ರಂದು ಆಸ್ಪತ್ರೆ ಗೆ ದಾಖಲಾಗಿದ್ದ ಸಚಿವ ಶ್ರೀರಾಮುಲು ಕೊರೋನಾದಿಂದ ಚೇತರಿಸಿಕೊಂಡಿದ್ದು ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಯಿಂದ ಡಿಸ್ಚಾರ್ಜ್‌  ಆಗಿದ್ದಾರೆ‌.

    ಸರ್ಕಾರಿ ಆಸ್ಪತ್ರೆ ಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದ ಶ್ರೀರಾಮುಲು ರಿಪೋರ್ಟ್ ನೆಗೆಟಿವ್ ಬಂದಿದ್ದು, ಎಂಟು ದಿನಗಳಲ್ಲಿ ಚೇತರಿಕೆ ಕಂಡಿದ್ದಾರೆ.

    ಟ್ವೀಟ್‌ ಮಾಡಿರುವ ಶ್ರೀರಾಮುಲು, ನಿಮ್ಮೆಲ್ಲರ ಶುಭ ಹಾರೈಕೆಯಿಂದ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಕೋವಿಡ್ ಸೋಂಕು ದೃಢಪಟ್ಟಾಗ ನಮ್ಮ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾದೆ. ಅಲ್ಲಿನ ಅತ್ಯುತ್ತಮ ಚಿಕಿತ್ಸೆಯಿಂದ ಶೀಘ್ರವಾಗಿ ಗುಣಮುಖನಾಗಿದ್ದೇನೆ ಎಂದಿದ್ದಾರೆ.

    ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳ ತಜ್ಞ ವೈದ್ಯರ ತಂಡ ಮತ್ತು ವೈದ್ಯಕೀಯ ಸಿಬ್ಬಂದಿ ನೀಡಿದ ಕಾಳಜಿಪೂರ್ಣ ಚಿಕಿತ್ಸೆ, ಪ್ರೀತಿಪೂರ್ವಕ ಆರೈಕೆಯಿಂದ ಹೃದಯ ತುಂಬಿ ಬಂದಿದೆ, ನನ್ನನ್ನು ಮೂಕನನ್ನಾಗಿಸಿದೆ. ಅವರೆಲ್ಲರಿಗೂ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಆಸ್ಪತ್ರೆಯಲ್ಲಿದ್ದಷ್ಟೂ ಕಾಲ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಬಂಧುಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಅಭಿಮಾನಿಗಳೆಲ್ಲರಿಗೂ ಕೃತಜ್ಞತೆಗಳು. ಇದೇ ಸಂದರ್ಭದಲ್ಲಿ, ತಮ್ಮ ಸಂಪೂರ್ಣ ಸಹಕಾರ ನೀಡಿದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.

  • ಕೊರೊನಾ ಶಂಕಿತರಿಗೆ ನಿರಂತರ ವೈದ್ಯಕೀಯ ಸೇವೆ- ಬೌರಿಂಗ್ ಆಸ್ಪತ್ರೆಯ ಜಯಶ್ರೀ ನಮ್ಮ ರಿಯಲ್ ಹೀರೋ

    ಕೊರೊನಾ ಶಂಕಿತರಿಗೆ ನಿರಂತರ ವೈದ್ಯಕೀಯ ಸೇವೆ- ಬೌರಿಂಗ್ ಆಸ್ಪತ್ರೆಯ ಜಯಶ್ರೀ ನಮ್ಮ ರಿಯಲ್ ಹೀರೋ

    ಬೆಂಗಳೂರು: ಕೊರೊನಾ ವೈರಸ್ ತನ್ನ ಕಬಂದ ಬಾಹುಗಳನ್ನ ಇಡೀ ವಿಶ್ವಕ್ಕೆ ಚಾಚುತ್ತಿದೆ. ಕ್ಷಣ ಕ್ಷಣಕ್ಕೂ ಈ ಮಾರಕ ವೈರಸ್ ಎಲ್ಲರನ್ನೂ ಆವರಿಸುತ್ತಿದೆ. ಇದರಿಂದ ತಮಗೂ ಅಪಾಯವಿದ್ದರೂ ಎಲ್ಲವನ್ನೂ ಮೀರಿ ವೈದ್ಯರು ಹಾಗೂ ಶುಶ್ರೂಶಕಿಯರು ಕೊರೊನಾ ವಿರುದ್ಧ ವಾರಿಯರ್ಸ್ ರೀತಿ ಫೈಟ್ ಮಾಡುತ್ತಿದ್ದಾರೆ. ಇವರುಗಳು ಇಂದಿನ ಪಬ್ಲಿಕ್ ಹೀರೋಗಳು.

    ಬೌರಿಂಗ್ ಆಸ್ಪತ್ರೆಯಲ್ಲಿರುವ ಶುಶ್ರೂಶಕಿ ಜಯಶ್ರೀ ಇವತ್ತಿನ ನಮ್ಮ ರಿಯಲ್ ಹೀರೋ. ನರ್ಸಿಂಗ್ ಸೂಪರಿಡೆಂಟ್ ಆಗಿರುವ ಜಯಶ್ರೀಯವರು ಬೌರಿಂಗ್ ಆಸ್ಪತ್ರೆಯಲ್ಲಿ ಶಂಕಿತ ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದಾರೆ. ಮಾರ್ಚ್ 5 ನೇ ತಾರೀಖು ಕೊರೊನಾ ಶಂಕಿತರು ಮೊದಲು ಬಂದಿದ್ದು, ಎರಡು ದಿನಗಳಿಂದ ಶಂಕಿತ ರೋಗಿಗಳ ಸಂಖ್ಯೆ ಹೆಚ್ಚಿದೆ. ಇದರಿಂದ ವೈದ್ಯಕೀಯ ಸಿಬ್ಬಂದಿ ಕೆಲಸದ ಸಮಯ ಹೆಚ್ಚಾಗಿದೆ. ನರ್ಸಿಂಗ್ ಸೂಪರಿಡೆಂಟ್ ಜಯಶ್ರೀಯವರು ಬೌರಿಂಗ್ ಆಸ್ಪತ್ರೆಯಲ್ಲಿ ಸತತ 36 ವರ್ಷಗಳಿಂದ ಶುಶ್ರೂಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಈ ಕೊರೊನಾ ತರಹದ ಡೇಂಜರಸ್ ಕಾಯಿಲೆ ಬಂದಿದ್ದ ಎಚ್1 ಎನ್1 ಸ್ವಲ್ಪ ಮಟ್ಟಿಗೆ ತೀವ್ರತೆ ಇತ್ತು. ಅದರೆ ಈ ಕೊರೊನಾದ ತೀವ್ರತೆ ತುಂಬಾ ಹೆಚ್ಚಾಗಿದೆ ಎಂದು ಜಯಶ್ರೀ ಅವರು ಹೇಳುತ್ತಾರೆ.

    ಕೊರೊನಾ ಬಂತು ಅಂತ ಪೇಷೆಂಟ್ ನ ಬಿಡೋಕೆ ಆಗಲ್ಲ. ನಮಗೆ ಕೊರೊನಾ ಅಂತ ನೋಡೋಕ್ಕಿಂತ ರೋಗಿ ಎಂಬ ದೃಷ್ಟಿಯಲ್ಲಿ ನೋಡುತ್ತೇವೆ. ನಮ್ಮ ಉದ್ದೇಶ ಗುಣಪಡಿಸೋದಷ್ಟೇ ಆಗಿರುತ್ತೆ. ಬೇರೆ ರೋಗಿಗಳಾದರೆ ಓಡಾಡಬಹುದು. ಅದರೆ ಈ ಕೊರೊನಾ ಶಂಕಿತರು ಒಂದೇ ಕೊಠಡಿಯಲ್ಲಿ, ಐಸೋಲೇಷನ್ ಅಲ್ಲೇ ಇರಬೇಕು. ಈ ಕೊರೊನಾ ಎಲ್ಲರಿಗೂ ಹರಡುತ್ತೆ, ನಮ್ಮ ಸುರಕ್ಷತೆಯಲ್ಲಿ ನಾವು ಇರಬೇಕು. ಜೊತೆಗೆ ನಮ್ಮ ರೋಗಿಯ ಸುರಕ್ಷತೆಯೂ ಮುಖ್ಯ ಎಂಬುವುದು ಜಯಶ್ರೀಯವರ ಮಾತು.

    ಒಟ್ಟಾರೆ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾ, ಕೊರೊನಾ ಸೋಂಕಿತರನ್ನ ಹಗಲು ರಾತ್ರಿಯೆನ್ನದೇ ರಕ್ಷಣೆಯಲ್ಲಿ ತೊಡಗಿರುವ ಶುಶ್ರೂಶಕಿ ಜಯಶ್ರೀಯವರು ಇಂದಿನ ನಮ್ಮ ರಿಯಲ್ ಹೀರೋ.

  • ಹಳೆ ನೋಟು, ಎಟಿಎಂಗಳಿಂದ ಕೊರೊನಾ ಹರಡುತ್ತೆ – ವಿಶ್ವಸಂಸ್ಥೆಯಿಂದಲೇ ಎಚ್ಚರಿಕೆ

    ಹಳೆ ನೋಟು, ಎಟಿಎಂಗಳಿಂದ ಕೊರೊನಾ ಹರಡುತ್ತೆ – ವಿಶ್ವಸಂಸ್ಥೆಯಿಂದಲೇ ಎಚ್ಚರಿಕೆ

    – ಚೀನಾದಲ್ಲಿ ಹಳೆಯ ನೋಟುಗಳಿಗೆ ಕ್ರಿಮಿನಾಶಕ ಸಿಂಪಡಣೆ

    ಬೆಂಗಳೂರು: ಹಳೆ ನೋಟು ಹಾಗೂ ಎಟಿಎಂಗಳಿಂದ ಮಾರಕ ಕೊರೊನಾ ಹರಡುತ್ತೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಚೀನಾದಲ್ಲಿ ಹಳೆಯ ನೋಟುಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ.

    ವಿಶ್ವಸಂಸ್ಥೆ ಮಾಹಿತಿ ನೀಡಿದ ಪ್ರಕಾರ, ಕೊರೊನಾ ಹಳೆಯ ನೋಟುಗಳಿಂದ, ಬ್ಯಾಂಕ್‍ನಿಂದ, ಚಿಲ್ಲರೆ ನಾಣ್ಯಗಳಿಂದ ಹಾಗೂ ಒಬ್ಬರ ಕೈಯಿಂದ ಪಡೆದರೆ ವೈರಸ್ ಬರಬಹುದು ಎಂದು ತಿಳಿಸಿದೆ. ಅಲ್ಲದೆ ಎಟಿಎಂನಿಂದ, ಎಟಿಎಂ ಹಣದಿಂದ ಹಾಗೂ ಟಿಕೆಟ್ ಮೆಷಿನ್‍ನಿಂದಲೂ ಮಾರಕ ಕಾಯಿಲೆ ಬರಬಹುದು ಎಂದು ಹೇಳಿದೆ.  ಇದನ್ನು ಓದಿ: ಈಗ ಅಧಿಕೃತ – ಭಾರತಕ್ಕೆ ಆಗಮಿಸಿದ 21 ಇಟಲಿ ಪ್ರವಾಸಿಗರ ಪೈಕಿ 15 ಮಂದಿಗೆ ಕೊರೊನಾ

    ಸೋಂಕು ಇದ್ದವರನ್ನು ಅಪ್ಪಿಕೊಂಡರೆ ಹಾಗೂ ಕೈ ಕುಲುಕಿದರೂ ಕೊರೊನಾ ಬರುವ ಸಾಧ್ಯತೆಗಳಿವೆ. ಜೊತೆಗೆ ಆಫೀಸ್‍ನಲ್ಲಿ ಡೋರ್ ಹ್ಯಾಂಡಲ್, ಕಾಫಿ ಮೆಷಿನ್, ಆಫೀಸ್ ಫೋನ್ ಹಾಗೂ ಸ್ಮಾರ್ಟ್‍ಫೋನ್‍ನಿಂದಲೂ ಕೊರೊನಾ ಹರಡುವ ಸಾಧ್ಯತೆಗಳಿವೆ. ವಿಮಾನದ ಸೀಟಿನಿಂದಲೂ ಹಾಗೂ ಸಾರ್ವಜನಿಕ ಶೌಚಾಲಯದಿಂದ ಕೂಡ ಕೊರೊನಾ ಹರಡುತ್ತದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಇದನ್ನೂ ಓದಿ: ಹೆಚ್ಚು ಜನ ಸೇರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ – ಪ್ರಧಾನಿ ಮೋದಿ ಮನವಿ

    ಇತ್ತ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ವೈದ್ಯರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕೊರೊನಾ ತಡೆಯುವುದು ಹೇಗೆ ಎಂಬುದನ್ನು ತಿಳಿಸಿದ್ದಾರೆ. ಮಕ್ಕಳಿಗೆ ಮುತ್ತು ಕೊಡುವುದು, ಅಪ್ಪಿಕೊಳ್ಳುವುದನ್ನು ನಿಲ್ಲಸಬೇಕು. ಶೇಕ್ ಹ್ಯಾಂಡ್ ಮಾಡಿದಾಗ ಕೊರೊನಾ ಹೆಚ್ಚಾಗಿ ಹರಡಲಿದೆ. ಕೊರೊನಾ ರೋಗಿ ಜೊತೆ ಹ್ಯಾಂಡ್ ಶೇಕ್ ಮಾಡಿದರೆ ಅವರಿಗೂ ಆ ರೋಗ ಬರುತ್ತದೆ. ವಿದೇಶಗಳಿಗೆ ಹೋಗಿ ಬಂದವರು ಆದಷ್ಟೂ ಮಕ್ಕಳಿಂದ ದೂರವಿದ್ದರೆ ಒಳ್ಳೆಯದು. ಇನ್ನು ಗರ್ಭಿಣಿಯರು, ಮಕ್ಕಳು, ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಆದ್ದರಿಂದ ಕೊರೊನಾ ಬೇಗ ಇವರಲ್ಲಿ ಹರಡುತ್ತದೆ ಎಂದು ಬೌರಿಂಗ್ ಆಸ್ಪತ್ರೆ ಹಿರಿಯ ವೈದ್ಯ ರಮೇಶ್ ಹೇಳಿದ್ದಾರೆ. ಇದನ್ನೂ ಓದಿ: ಒಂದೇ ದಿನ ಬೆಂಗ್ಳೂರಿನ ನಾಲ್ಕು ಮಂದಿಗೆ ಕೊರೊನಾ ಸೋಂಕು ಶಂಕೆ – ಆಸ್ಪತ್ರೆಗೆ ದಾಖಲು

    ಮೊಬೈಲ್ ಫೋನ್, ವ್ಯಾಲೆಟ್ ಹಾಗೂ ಪರ್ಸ್‍ನಿಂದಲೂ ಕೊರೊನಾ ವೈರಸ್ ಹರಡುತ್ತದೆ. ಫಸ್ಟ್ ಶಿಫ್ಟ್ ಅಲ್ಲಿ ಸೊಂಕಿತ ಕಂಪ್ಯೂಟರ್ ಮುಟ್ಟಿದರೆ, ಸೆಕೆಂಡ್ ಶಿಫ್ಟ್ ಅವರಿಗೂ ಕೊರೊನಾ ಬರುತ್ತದೆ. ಮಾರಕ ಕೊರೊನಾ ವೈರಸ್ ಸುಮಾರು 6 ಗಂಟೆಗೂ ಹೆಚ್ಚು ಹೊತ್ತು ಜೀವಂತವಿರುತ್ತದೆ. ಹ್ಯಾಂಡ್ ವಾಶ್ ಇಲ್ಲದೇ ಮುಟ್ಟಿದರೆ ಕೊರೊನಾ ಹರಡುತ್ತೆ. ಜೊತೆಗೆ ರೋಗಿಯ ಮೊಬೈಲ್, ಪರ್ಸ್ ಮುಟ್ಟುವ ಮೊದಲು ಎಚ್ಚರವಾಗಿರಿ. ಏಕೆಂದರೆ ಕ್ಷಣದಲ್ಲಿ ಕೊರೊನಾ ಹರಡುತ್ತೆ ಎಂದು ವೈದ್ಯರಾದ ಡಾ.ರಮೇಶ್ ತಿಳಿಸಿದ್ದಾರೆ.

    ಸದ್ಯ ಕೊರೊನಾ ತಡೆಗೆ ಬೌರಿಂಗ್ ಆಸ್ಪತ್ರೆ ಸಂಪೂರ್ಣ ಸಜ್ಜಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಕೊಠಡಿ ನಿರ್ಮಾಣ ಮಾಡಲಾಗಿದೆ. ಕೊರೊನಾ ಶಂಕೆ ಕಂಡುಬಂದರೆ ಹಂತ ಹಂತವಾಗಿ ತಪಾಸಣೆಗೆ ವೈದ್ಯರು ತಯಾರಾಗಿದ್ದಾರೆ. ಹೊರರಾಜ್ಯದ ಜನ ಹೆಚ್ಚಿರುವ ಕಾರಣ ಸಂಪೂರ್ಣ ಸಜ್ಜಾಗಿರುವ ಬೌರಿಂಗ್ ಸಿಬ್ಬಂದಿ ಮೊದಲಿಗೆ ಅವರು ವಿಮಾನದಲ್ಲಿ ಪ್ರಯಾಣ ಮಾಡಿದ್ದಾರಾ ಇತ್ಯಾದಿ ಅವರ ಪೂರ್ವ ಮಾಹಿತಿಗಳನ್ನು ಸಹ ಕಲೆಹಾಕುತ್ತಿದ್ದಾರೆ. ಜೊತೆಗೆ ಕೊರೊನಾ ಭೀತಿ ಹಿನ್ನೆಲೆ ಬೆಳ್ಳಂಬೆಳಗ್ಗೆ ಬೌರಿಂಗ್ ಸಿಬ್ಬಂದಿ ಜೊತೆ ಸಭೆ ನಡೆಸಿ, ಯಾವ ರೀತಿ ಕೊರೊನಾವನ್ನು ತಡೆಗಟ್ಟಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿದ್ದಾರೆ.