Tag: ಬೋರ್ ವೆಲ್

  • ಕೃಷ್ಣಾ ನದಿ ಪ್ರವಾಹದ ಎಫೆಕ್ಟ್ – ಅಂತರ್ಜಲ ಹೆಚ್ಚಳದಿಂದ ಉಕ್ಕುತ್ತಿರುವ ಬೋರ್ ವೆಲ್

    ಕೃಷ್ಣಾ ನದಿ ಪ್ರವಾಹದ ಎಫೆಕ್ಟ್ – ಅಂತರ್ಜಲ ಹೆಚ್ಚಳದಿಂದ ಉಕ್ಕುತ್ತಿರುವ ಬೋರ್ ವೆಲ್

    ರಾಯಚೂರು: ಕೃಷ್ಣಾ ನದಿ ತುಂಬಿ ಹರಿಯುವುದಲ್ಲದೆ ನದಿ ಪಾತ್ರದ ಸಾವಿರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ನದಿ ಪಾತ್ರದಲ್ಲಿ ಅಂತರ್ಜಲ ಹೆಚ್ಚಾಗಿ ಬೋರ್ ವೆಲ್ ಗಳಲ್ಲಿ ತಾನಾಗೇ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಜಮೀನುಗಳ ಬೆಳೆಗಳು ಹಾಳಾಗುತ್ತಿವೆ.

    ರಾಯಚೂರು ತಾಲೂಕಿನ ಗುರ್ಜಾಪುರ, ಕಾಡ್ಲೂರು ಗ್ರಾಮದ ಜಮೀನುಗಳಿಗೆ ಹೆಚ್ಚು ಪರಿಣಾಮ ಬೀರಿದ್ದು, ಇಲ್ಲಿನ ಬೋರ್ ವೆಲ್ ಗಳಲ್ಲಿ ನಿರಂತರವಾಗಿ ನೀರು ಉಕ್ಕುತ್ತಲೇ ಇದೆ. ಬೋರ್ ವೆಲ್ ನೀರಿನಿಂದಾಗಿ ಜಮೀನುಗಳು ಜಲಾವೃತವಾಗುತ್ತಿವೆ. ಮುಖ್ಯವಾಗಿ ಲಕ್ಷಾಂತರ ರೂಪಾಯಿ ಭತ್ತದ ಬೆಳೆ ಹಾನಿಯಾಗಿದೆ.

    ನದಿಯಿಂದ ನೂರಾರು ಮೀಟರ್ ದೂರದಲ್ಲಿರುವ ಬೋರ್ ವೆಲ್‍ಗಳು ಸಹ ಉಕ್ಕುತ್ತಿರುವುದು ರೈತರನ್ನ ಆತಂಕಕ್ಕೀಡು ಮಾಡಿದೆ. ನದಿ ಪ್ರವಾಹದಿಂದ ಹಾನಿಯಾದ ಬೆಳೆಗೆ ಪರಿಹಾರ ಸಿಗಬಹುದು ಆದ್ರೆ ಅಂತರ್ಜಲ ಹೆಚ್ಚಾಗಿ ಬೋರ್ ವೆಲ್ ನೀರಿನಿಂದ ಹಾಳಾಗುತ್ತಿರುವ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡುತ್ತಾ ಅನ್ನೋ ಆತಂಕ ರೈತರನ್ನ ಕಾಡುತ್ತಿದೆ. ಇದನ್ನೂ ಓದಿ: ಕೊರೊನಾ ಕರಿನೆರಳು- ಇಂದು ಪ್ರಾರಂಭವಾಗಬೇಕಿದ್ದ ಮೀನುಗಾರಿಕೆ ಸಂಪೂರ್ಣ ಬಂದ್!

  • ಬೋರ್‌ವೆಲ್‌ ಒಳಗೆ ಬಿದ್ದಿದ್ದ ಆಡಿನ ಮರಿಯ ರಕ್ಷಣೆ

    ಬೋರ್‌ವೆಲ್‌ ಒಳಗೆ ಬಿದ್ದಿದ್ದ ಆಡಿನ ಮರಿಯ ರಕ್ಷಣೆ

    ಮೈಸೂರು: ನಿರುಪಯುಕ್ತ ಬೋರ್‌ವೆಲ್‌ ಒಳಗೆ ಬಿದಿದ್ದ ಆಡಿನ ಮರಿಯನ್ನು ಜೀವಂತವಾಗಿ ರಕ್ಷಣೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಹೆಬ್ಬಾಳ್ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಚೆಲುವರಾಜ್ ಎಂಬವರ ಜಮೀನಿನಲ್ಲಿ ನಿರುಪಯುಕ್ತವಾದ ಬೋರ್‌ವೆಲ್‌ ಇತ್ತು. ಅವರದ್ದೇ ಆಡಿನ ಮರಿ ಜಮೀನಿನಲ್ಲಿ ಮೇಯುತ್ತಿದ್ದಾಗ ಇದ್ದಕ್ಕಿದಂತೆ ನಾಪತ್ತೆಯಾಗಿದೆ. ಹೀಗಾಗಿ ಆತಂಕಗೊಂಡ ಮಾಲೀಕ ಆಡಿನ ಮರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬೋರ್‌ವೆಲ್‌ ಒಳಗಿಂದ ಶಬ್ದ ಕೇಳಿ ಬಂದಿದೆ.

    ಸುಮಾರು 25 ಅಡಿ ಅಳದ ಬೋರ್‌ವೆಲ್‌ ಒಳಗೆ ಆಡಿನ ಮರಿ ಬಿದ್ದಿತ್ತು. ಇದನ್ನು ಗಮನಿಸಿ ಚೆಲುವಚಾರ್ ತಕ್ಷಣ ಗ್ರಾಮ ಪಂಚಾಯ್ತಿಯವರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾದೇಗೌಡ ನೇತೃತ್ವದಲ್ಲಿ ಸಿಬ್ಬಂದಿ ಜೆಸಿಬಿಯಿಂದ ಮಣ್ಣು ತೆಗೆಸಿ ಮರಿಯನ್ನು ಜೀವಂತವಾಗಿ ರಕ್ಷಿಸಿದ್ದಾರೆ.

  • 109 ಗಂಟೆಗಳ ಬಳಿಕ ಪಂಜಾಬ್‍ನ ಕೊಳವೆಬಾವಿಗೆ ಬಿದ್ದಿದ್ದ ಮಗುವಿನ ರಕ್ಷಣೆ- ಸಾವು

    109 ಗಂಟೆಗಳ ಬಳಿಕ ಪಂಜಾಬ್‍ನ ಕೊಳವೆಬಾವಿಗೆ ಬಿದ್ದಿದ್ದ ಮಗುವಿನ ರಕ್ಷಣೆ- ಸಾವು

    ಚಂಡೀಗಢ: 150 ಅಡಿ ಆಳದ ಕೊಳವೆಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು ಸುಮಾರು 109 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ರಕ್ಷಿಸುವ ಪ್ರಯತ್ನ ನಡೆಸಿದರೂ ಆತ ಮೃತಪಟ್ಟ ಘಟನೆ ಇಂದು ನಡೆದಿದೆ.

    ಫಥೇವೀರ್ ಸಿಂಗ್ ಬಳಕೆ ಮಾಡದ ಕೊಳವೆ ಬಾವಿಗೆ ¸ಬಿದ್ದ ಬಾಲಕ. ಈತ ಸಂಗೂರ್ ಜಿಲ್ಲೆಯ ಭಗವಾನ್ ಪುರ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರವೇ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಆಟವಾಡುತ್ತಿದ್ದನು. ಈ ವೇಳೆ ಬಳಕೆ ಮಾಡದೇ ಇರುವ ಬೋರ್ ವೆಲ್ ಒಳಗೆ ಆಯತಪ್ಪಿ ಬಿದ್ದಿದ್ದಾನೆ.

    ಸರಿಸುಮಾರು 7 ಇಂಚು ಅಗಲವಿರುವ ಈ ಕೊಳವೆ ಬಾವಿಯನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಇದನ್ನು ಗಮನಿಸದ ಬಾಲಕ ಆಟವಾಡುತ್ತಾ ಅದರ ಒಳಗಡೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ತಾಯಿ ಬಾಲಕನನ್ನು ರಕ್ಷಿಸಲು ಮುಂದಾದ್ರೂ ವಿಫಲರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆ ಬಳಿಕ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಸುಮಾರು 5 ದಿನಗಳಿಂದ ರಕ್ಷಣಾ ಕಾರ್ಯ ನಡೆದಿದ್ದು, ಇಂದು ಬಾಲಕನನ್ನು ಬೋರ್ ವೆಲ್ ಒಳಗಡೆಯಿಂದ ರಕ್ಷಿಸಲಾಯಿತು. ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಆ ರಾಜ್ಯದಲ್ಲಿ ಚಾಪರ್ ನಿಲುಗಡೆ ಮಾಡಲು ಸಾಧ್ಯವಿಲ್ಲವಾಯಿತು. ಹೀಗಾಗಿ ಬಾಲಕನನ್ನು ರಸ್ತೆ ಮಾರ್ಗವಾಗಿ 140 ಕೀ.ಮಿ ತೆರಳಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆ ಸಂಬಂಧ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ದೇವರು ಆತನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

    ಕಳೆದ ರಾತ್ರಿ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಇದೇ ವೇಳೆ ಅಲ್ಲಿನ ಮುಖ್ಯಮಂತ್ರಿಗಳು ಕೂಡ ವಿರೋಧ ಪಕ್ಷಗಳು ಕಾರ್ಯಾಚರಣೆಯನ್ನು ತಡಮಾಡುತ್ತವೆ ಎಂದು ಆರೋಪಿಸಿದ್ದರು.

  • ಜೆಡಿಎಸ್ ಮುಖಂಡನಿಂದ ಕುಡಿಯುವ ನೀರಿನ ಸ್ವಿಚ್ಛ್ ಬೋರ್ಡ್ ಧ್ವಂಸ!

    ಜೆಡಿಎಸ್ ಮುಖಂಡನಿಂದ ಕುಡಿಯುವ ನೀರಿನ ಸ್ವಿಚ್ಛ್ ಬೋರ್ಡ್ ಧ್ವಂಸ!

    ಮಂಡ್ಯ: ಗ್ರಾಮದ ಕುಡಿಯುವ ನೀರಿನ ಬೋರ್ ವೆಲ್‍ಗೆ ಅಳವಡಿಸಿದ್ದ ಸ್ವಿಚ್ ಬೋರ್ಡ್ ಮೇಲೆ ಜೆಡಿಎಸ್ ಮುಖಂಡನೊಬ್ಬ ಕಲ್ಲು ಎತ್ತಿ ಹಾಕಿ ನಾಶ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ನಾರ್ಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸೋಮಯ್ಯ ಅವರ ಮಗ ಸೋಮೇಶ್ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿಯ ಎಲೆಕ್ಟ್ರಾನಿಕ್ ಸ್ವಿಚ್ ಬೋರ್ಡ್ ಮತ್ತು ಪೈಪ್‍ಗಳನ್ನು ಧ್ವಂಸಗೊಳಿಸಿದ್ದಾರೆ. ಸೋಮೇಶ್ ಅವರ ಜಮೀನಿನ ಪಕ್ಕದಲ್ಲೇ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿ ಇತ್ತು. ಹೀಗಾಗಿ ಕುಡಿಯುವ ನೀರಿನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೋಮೇಶ್ ಅವರ ಜಮೀನಿನ ಮೇಲಿಂದ ವೈರ್ ಎಳೆದು ತರಲಾಗಿತ್ತು. ಆದರೆ ಈ ವೈರ್ ಗಳು ತಳಮಟ್ಟದಲ್ಲಿದ್ದು, ಜಮೀನು ಉಳುಮೆ ಮಾಡಲು ಕಷ್ಟವಾಗುತ್ತಿತ್ತು.

    ಈ ಬಗ್ಗೆ ಪಿಡಿಓ ಮತ್ತು ವಾಟರ್ ಮ್ಯಾನ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಸೋಮೇಶ್, ಜಮೀನು ಉಳುವ ಸಂದರ್ಭದಲ್ಲಿ ಆಕ್ರೋಶಗೊಂಡು ಗ್ರಾಮಕ್ಕೆ ನೀರು ಪೂರೈಸುವ ಕೊಳವೆಬಾವಿಯ ಎಲೆಕ್ಟ್ರಾನಿಕ್ ಸ್ವಿಚ್ ಬೋರ್ಡ್ ಮೇಲೆ ಕಲ್ಲು ಎತ್ತಿಹಾಕಿ ಧ್ವಂಸ ಮಾಡಿ, ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

    ಸೋಮೇಶ್ ಆಕ್ರೋಶದಿಂದ ಕಲ್ಲು ಎತ್ತಿ ಹಾಕುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಸಾರ್ವಜನಿಕರಿಗಾಗಿ ಹಾಕಿದ ಬೋರ್ ಸ್ವಂತಕ್ಕೆ ಬಳಸಿಕೊಂಡ ಪಾಲಿಕೆ ಸದಸ್ಯೆ

    ಸಾರ್ವಜನಿಕರಿಗಾಗಿ ಹಾಕಿದ ಬೋರ್ ಸ್ವಂತಕ್ಕೆ ಬಳಸಿಕೊಂಡ ಪಾಲಿಕೆ ಸದಸ್ಯೆ

    – ಕಾರ್ಪೋರೇಟರ್ ವಿರುದ್ಧ ಸಾರ್ವಜನಿಕರು ಆಕ್ರೋಶ

    ಬೆಂಗಳೂರು: ಸಾರ್ವಜನಿಕರ ಬಳಕೆಗೆ ಅಂತಾ ಕಾರ್ಪೋರೇಟರೇ ಹಾಕಿಸಿದ ಬೋರ್ ನಿಂದ ಸ್ವಲ್ಪ ದಿನಾ ಏನೋ ಸಾರ್ವಜನಿಕರಿಗೆ ನೀರು ಬಿಟ್ಟರು. ಕ್ರಮೇಣ ತಮ್ಮದೇ ಒಡೆತನದ ಕಾಂಪ್ಲೆಕ್ಸ್‍ಗೆ ನೀರು ಬಿಟ್ಟುಕೊಂಡು ಅಂಧ ದರ್ಬಾರ್ ಮಾಡುತ್ತಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

    ಬೆಂಗಳೂರಿನ ರಾಮಸ್ವಾಮಿಪಾಳ್ಯ ವಾರ್ಡ್ ನ ಚಿನ್ನಪ್ಪ ಗಾರ್ಡನ್ ಮುಖ್ಯ ರಸ್ತೆಯ ಎಡಭಾಗಕ್ಕೆ ಕಾಂಪ್ಲೆಕ್ಸ್, ಮುಂದುಗಡೆ ಮುಖ್ಯ ರಸ್ತೆ ಇದೆ. ಅದರ ಮಧ್ಯದಲ್ಲಿಯೇ ಬೋರ್ ವೆಲ್ ವೊಂದಿದೆ. ಕಳೆದ ಮೂರು ತಿಂಗಳ ಹಿಂದೆ ಸ್ಥಳೀಯ ಕಾರ್ಪೋರೇಟರ್ ನೇತ್ರಾವತಿ ಕೃಷ್ಣೇಗೌಡ ಅವರು ಸಾರ್ವಜನಿಕರ ಉಪಯೋಗಕ್ಕೆ ಈ ಬೋರ್ ವೆಲ್ ಅನ್ನು ಹಾಕಿಸಿದ್ದಾರೆ. ಆದ್ರೆ ಸ್ವಲ್ಪ ದಿನಗಳ ಕಾಲ ಅಲ್ಲಿನ ಸ್ಲಂ ನಿವಾಸಿಗಳಿಗೆ ನೀರು ಬಿಟ್ಟ ಕಾರ್ಪೋರೇಟರ್, ಬಳಿಕ ತಮ್ಮ ಒಡೆತನದ ದಿವ್ಯಶ್ರೀ ಕಾಂಪ್ಲೆಕ್ಸ್‍ಗೆ ಬಳಸಿಕೊಳ್ತಿದ್ದಾರೆ. ಹೀಗಾಗಿ ಕಾರ್ಪೋರೇಟರ್ ಮಾಡ್ತಿರುವ ಅನ್ಯಾಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

    ಕಾರ್ಪೋರೇಟರ್ ಪತಿ ಕೃಷ್ಣೇಗೌಡ ಸಾರ್ವಜನಿಕರ ಆರೋಪ ತಳ್ಳಿ ಹಾಕಿದ್ದಾರೆ. ನಾವು ಸ್ವಂತ ದುಡ್ಡಿಂದ ಹಾಕಿಸಿದ ಬೋರ್‍ವೆಲ್ ನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟಿದ್ದೀವಿ. ಯಾರೋ ಸುಮ್ನೆ ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಅಂತಿದ್ದಾರೆ. ಆದ್ರೆ ಪಬ್ಲಿಕ್ ಟಿವಿ ಕ್ಯಾಮರಾದಲ್ಲಿ ಕಾಂಪ್ಲೆಕ್ಸ್ ಕಡೆ ಲೈನ್ ಕನೆಕ್ಷನ್ ಕೊಟ್ಟಿರೋ ವಿಡಿಯೋ ಇದೆ ಅಂದರೆ, ಹಾಗೇನು ಇಲ್ಲ ಸರಿಯಾಗಿ ಇದೆ. ಯಾರೋ ಆಗದೇ ಇರೋರು ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಹೇಳಿದ್ದಾರೆ.

    ಒಟ್ಟಾರೆ ಸಾರ್ವಜನಿಕರಿಗೆ ಅಂತಾ ಹಾಕಿಸಿದ ಬೋರ್‍ವೆಲ್ ಬಾರ್, ಹೋಟೆಲ್‍ಗಳಿಗೆ ಅನುಕೂಲ ಆಗ್ತಿದೆ. ಇಷ್ಟೆಲ್ಲಾ ಆದ್ರೂ ಯಾವುದೇ ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ತಿರುಗಿ ನೋಡದಿರುವುದು ವಿಪರ್ಯಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆ ಕಟ್ಟಲು ಬೋರ್ ವೆಲ್ ಕಟ್ ಮಾಡಿ ಮುಚ್ಚಿದ!

    ಮನೆ ಕಟ್ಟಲು ಬೋರ್ ವೆಲ್ ಕಟ್ ಮಾಡಿ ಮುಚ್ಚಿದ!

    ಬೆಂಗಳೂರು: ಆನೇಕಲ್‍ನಲ್ಲಿ ವ್ಯಕ್ತಿಯೊಬ್ಬ ಬೋರ್ ವೆಲ್ ಕಟ್ ಮಾಡಿ ಮುಚ್ಚಿದ್ದಾನೆ. ಇಲ್ಲಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಕಳಸಾಪುರ ಗ್ರಾಮದ ಗೋಮಾಳ ಜಾಗದಲ್ಲಿ ಹಲವು ಬಡವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.

    1999ರಲ್ಲಿ ಇಲ್ಲಿನ ನೀರಿನ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದೇ ಸರ್ಕಾರಿ ಜಾಗದಲ್ಲಿ ಬೋರ್ ವೆಲ್ ಕೊರೆಸಿ ಅದಕ್ಕೆ ಹ್ಯಾಂಡ್ ಪಂಪ್ ಹಾಕಿಸಲಾಗಿತ್ತು. ಆದ್ರೆ ಇದೇ ಜಾಗದಲ್ಲಿ ಆನಂದ್ ಎಂಬಾತ ಮನೆ ಕಟ್ಟುತ್ತಿದ್ದು ಬೋರ್ ವೆಲ್ ಕಟ್ ಮಾಡಿ ಮುಚ್ಚಿ ಹಾಕಿದ್ದಾನೆ. ಇವನಿಗೆ ಪಂಚಾಯ್ತಿಯ ಕೆಲವರ ಬೆಂಬಲವಿದ್ದು, ನ್ಯಾಯ ಕೇಳೋಕೆ ಹೋದ್ರೆ ಜನರನ್ನು ಬೆದರಿಸ್ತಿದ್ದಾನಂತೆ.

    20 ವರ್ಷಗಳಿಂದ ಈ ಜಾಗದಲ್ಲಿ ವಾಸವಿರುವ ಜನ 94 ಸಿ ಅಡಿ ಅರ್ಜಿ ಹಾಕಿಕೊಂಡಿದ್ದಾರೆ. ಆದ್ರೆ ಈತ ಯಾವುದೇ ದಾಖಲೆಯಿಲ್ಲದೆ ಮನೆ ಕಟ್ಟುತ್ತಿದ್ದು, ಜನರ ಕುಡಿಯುವ ನೀರಿಗೂ ಕಂಟಕವಾಗಿದ್ದಾನೆ. ದೂರು ನೀಡಿದ ಬಳಿಕ ಸ್ಥಳಕ್ಕೆ ಬಂದ ಪಿಡಿಓ ಗಂಗಾಧರ್ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ರು.

  • ಸರ್ಕಾರ ಉಚಿತವಾಗಿ ಬೋರ್‌ವೆಲ್‌ ಕೊರೆಸುತ್ತೆ ಅಂದುಕೊಂಡವ್ರಿಗೆ ಶಾಕಿಂಗ್ ನ್ಯೂಸ್

    ಸರ್ಕಾರ ಉಚಿತವಾಗಿ ಬೋರ್‌ವೆಲ್‌ ಕೊರೆಸುತ್ತೆ ಅಂದುಕೊಂಡವ್ರಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ಎಸ್‍ಸಿ-ಎಸ್‍ಟಿಗಳಿಗಾಗಿಯೇ ಇರುವ ಸರ್ಕಾರದ ಗಂಗಾಕಲ್ಯಾಣ ಯೋಜನೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ.

    ಎಸ್‍ಸಿ ಎಸ್‍ಟಿಗಳಿಗಾಗಿ, ಉಚಿತವಾಗಿ ಬೋರ್‌ವೆಲ್‌ ಕೊರೆದು ಕೇಸಿಂಗ್ ಪೈಪ್ ಹಾಕಿ, ಮೋಟಾರ್ ಹಾಗೂ ಕೇಬಲ್ ನೀಡುವ ಯೋಜನೆ ಇದಾಗಿದೆ. ಆದ್ರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಕಲ್ಯಾಣ ಆಗ್ತಿದೆಯೇ ಹೊರತು, ಬಡ ರೈತನದ್ದಲ್ಲ.

    ಗುತ್ತಿಗೆದಾರರು ಫಲಾನುಭವಿಗಳ ಜಮೀನಿನಲ್ಲಿ ಉಚಿತವಾಗಿ ಬೋರ್‌ವೆಲ್‌ ಕೊರೆಯುವುದಾಗಿ ಹೇಳಿ ಹಣ ಪೀಕಿದ್ದಾರೆ. ಹಣ ನೀಡದಿದ್ದರೆ ಪೂರ್ತಿ ಕೊರೆಯದೇ ಹಾಗೆ ಹೋಗ್ತೀವಿ ಅಂತ ಬೆದರಿಸಿದ್ದಾರೆ. ಹೀಗಾಗಿ ಬೇರೆ ವಿಧಿ ಇಲ್ಲದೇ ಫಲಾನುಭವಿಗಳು ತಮ್ಮ ಕಿವಿ ಓಲೆ, ಕುರಿ ಮಾರಿ ಹಣ ಕೊಟ್ಟಿರುವುದಲ್ಲದೆ, ಸಾಲ ಮಾಡಿ ದುಡ್ಡು ಕೊಟ್ಟಿದ್ದಾರೆ.

    ಮೊದಲು ಗುತ್ತಿಗೆದಾರರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡದೇ ಭೂಗರ್ಭ ಶಾಸ್ತ್ರಜ್ಞರು ನೀಡುವ `ವಾಟರ್ ಸರ್ವೇ ರಿಪೋರ್ಟ್’ ಕುಂತಲ್ಲೇ ರೆಡಿ ಮಾಡಿದ್ದಾರೆ. ದಿನವೊಂದಕ್ಕೆ ಒಬ್ಬ ಜಿಯಾಲಜಿಸ್ಟ್ 3-4 ಸರ್ವೇ ಮಾಡಿ `ವಾಟರ್ ಸರ್ವೇ ರಿಪೋರ್ಟ್’ ರೆಡಿ ಮಾಡಬಹುದು. ಆದ್ರೆ ಇಲ್ಲಿ ಒಂದೇ ದಿನದಲ್ಲಿ 20-30 ರಿಪೋರ್ಟ್ ರೆಡಿ ಮಾಡಿರೋದು ಆರ್ ಟಿಐ ಅರ್ಜಿಯಿಂದ ಬಯಲಾಗಿದೆ.

    ಒಂದು ಜಿಲ್ಲೆಯಲ್ಲಿ ಏನಿಲ್ಲವೆಂದ್ರೂ 2000 ಬೋರ್‌ವೆಲ್‌ ಕೊರೆಸಲಾಗಿದೆ. ಹಾಗಿದ್ರೆ ರಾಜ್ಯದ ಎಲ್ಲಾ ಜಿಲ್ಲೆಗಳ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಗಿರುವ ಗೋಲ್ಮಾಲ್ ಎಷ್ಟು ಅಂತ ಊಹಿಸಿಕೊಳ್ಳಿ. ಅಕ್ರಮದ ದಾಖಲೆ ಸಂಗ್ರಹಿಸಿರುವ ಸಾಮಾಜಿಕ ಕಾರ್ಯಕರ್ತ ಅನಿಲ್ ಕೊರ್ಟ್ ಮೊರೆ ಹೋಗೋದಾಗಿ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ನೂತನ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಬಂದಿದ್ದಾರೆ, ಎಸ್‍ಟಿ-ಎಸ್‍ಟಿಗಾಗಿ ಮೀಸಲಿದ್ದ ಯೋಜನೆಯಲ್ಲಿ ದುಡ್ಡು ತಿಂದಿರುವವರ ವಿರುದ್ಧ ಕ್ರಮಕೈಗೊಳ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.

  • ಕುಡಿಯುವ ನೀರಿನ ಬೋರ್ ವೆಲ್ ನಲ್ಲಿ ವಿದ್ಯುತ್ ಪ್ರವಹಿಸಿ ಯುವಕ ದುರ್ಮರಣ!

    ಕುಡಿಯುವ ನೀರಿನ ಬೋರ್ ವೆಲ್ ನಲ್ಲಿ ವಿದ್ಯುತ್ ಪ್ರವಹಿಸಿ ಯುವಕ ದುರ್ಮರಣ!

    ಹಾವೇರಿ: ಕುಡಿಯುವ ನೀರಿನ ಬೋರ್ ವೆಲ್ ನಲ್ಲಿ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದಿದೆ.

    ಸುರೇಶ ಸುಂಕದ(22) ಮೃತ ಯುವಕ. ಬೋರ್ ವೆಲ್ ಮೆಷಿನ್ ಸ್ಟಾರ್ಟ್ ಮಾಡಲು ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಯುವಕನ ಸಾವಿಗೆ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಪುರಸಭೆಯ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಂಕಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • 150 ಅಡಿ ಆಳದ ಬೋರ್ ವೆಲ್‍ ಗೆ ಬಿದ್ದು 35 ಗಂಟೆಗಳ ಬಳಿಕ ಬದುಕಿ ಬಂದ 4ರ ಬಾಲಕ – ವಿಡಿಯೋ

    150 ಅಡಿ ಆಳದ ಬೋರ್ ವೆಲ್‍ ಗೆ ಬಿದ್ದು 35 ಗಂಟೆಗಳ ಬಳಿಕ ಬದುಕಿ ಬಂದ 4ರ ಬಾಲಕ – ವಿಡಿಯೋ

    ಭೋಪಾಲ್: 40 ಅಡಿ ಆಳದ ಬೋರ್ ವೆಲ್‍ ಗೆ ಸಿಲುಕಿದ್ದ 4 ವರ್ಷದ ಹುಡುಗ 35 ಗಂಟೆಗಳ ನಂತರ ಬದುಕಿ ಬಂದಿರುವ ಘಟನೆ ಮಧ್ಯ ಪ್ರದೇಶದ ದಿವಾಸ್ ಜಿಲ್ಲೆಯಲ್ಲಿ ನಡೆದಿದೆ.

    ರೋಷನ್ ಬೋರ್ ವೆಲ್‍ ಗೆ ಬಿದ್ದು ಬದುಕಿ ಬಂದ ಬಾಲಕ. ಈತ ಶನಿವಾರ ಬೆಳಗ್ಗೆ ಜಿಲ್ಲೆಯ ಉಮಾರಿಯಾ ಗ್ರಾಮದಲ್ಲಿ ಆಟವಾಡುತ್ತಿದ್ದನು. ಈ ವೇಳೆ ಸುಮಾರು 11 ಗಂಟೆಗೆ ರೋಷನ್ ಆಕಸ್ಮಿಕವಾಗಿ ತೆರೆದ ಬೋರ್ ವೆಲ್‍ ಗೆ ಬಿದ್ದಿದ್ದಾನೆ. ತಕ್ಷಣ ಬಾಲಕ ಬೋರ್ ವೆಲ್‍ ಗೆ ಬಿದ್ದಿರುವ ಮಾಹಿತಿಯನ್ನು ಸೇನಾ ಪಡೆಗೆ ಮಾಹಿತಿ ತಿಳಿಸಲಾಗಿದೆ.

    ಮಾಹಿತಿ ತಿಳಿದ ಸೇನಾ ತಂಡ ಸ್ಥಳಕ್ಕೆ ದೌಡಾಯಿಸಿದೆ. ನಂತರ ಸಿಬ್ಬಂದಿ ರಕ್ಷಣಾ ಕಾರ್ಯಚರಣೆಯನ್ನು ಆರಂಭಿಸಿದ್ದಾರೆ. ಆ ಬೋರ್ ವೆಲ್‍  ಸುಮಾರು 150 ಅಡಿ ಆಳವಿದ್ದು, ರೋಷನ್ ಸುಮಾರು 40 ಅಡಿ ಆಳಕ್ಕೆ ಸಿಲುಕಿದ್ದ ಮಾಹಿತಿ ದೊರೆತಿದೆ. ನಂತರ ಬಾಲಕನಿಗೆ ಪೈಪ್ ಮೂಲಕ ಆಮ್ಲಜನಕ ಒದಗಿಸಲಾಗಿತ್ತು.

    ಬಾಲಕನಿಗೆ ಪೈಪ್ ಮೂಲಕವೇ ಹಾಲು ಮತ್ತು ನೀರನ್ನು ನೀಡಲಾಯಿತು. ಪೋಷಕರು ಕಾರ್ಯಚರಣೆ ಮುಗಿಯುವರೆಗೂ ಮಗನ ಜೊತೆ ಮಾತನಾಡುತ್ತಿದ್ದರು. ಬಾಲಕನು ಕೂಡ ಅವರ ಮಾತಿಗೆ ಪ್ರತಿಕ್ರಿಯೆ ನಿಡುತ್ತಿದ್ದನು.

    ರಕ್ಷಣಾ ಪಡೆ ಮೊದಲಿಗೆ ಒಂದು ಅನ್ಯ ಮಾರ್ಗ ಅಗೆದು ಆ ಸುರಂಗದ ಮೂಲಕ ಕೊಳವೆ ಬಾವಿಯನ್ನು ಸಂಪರ್ಕಿಸಿ ಬಾಲಕನನ್ನು ಮೇಲೆ ತಳ್ಳುವ ಯೋಚನೆಯನ್ನು ಮಾಡಿದ್ದರು.

    ಸುರಂಗ ಮಾರ್ಗ ಅಗೆದಿದ್ದು, ಆದರೆ ಶೀಘ್ರದಲ್ಲೇ ಬಾಲಕನನ್ನು ಪಾರು ಮಾಡಬೇಕಾಗುತ್ತದೆ. ಇಲ್ಲದ್ದಿದ್ದರೆ ಬಾಲಕನ ಜೀವಕ್ಕೆ ಅಪಾಯವಿದೆ ಎಂದು ಸೇನಾ ಪಡೆ ತಿಳಿದುಕೊಂಡು ತಕ್ಷಣ ಹಗ್ಗವನ್ನು ಕೊಳವೆಯೊಳಗೆ ಇಳಿಸಿದ್ದಾರೆ. ಬಾಲಕನಿಗೆ ತನ್ನ ತೋಳಿನ ಸುತ್ತಿಕೊಳ್ಳಲು ತಿಳಿಸಲಾಗಿದ್ದು, ಹುಡುಗ ನಾವು ಹೇಳಿದ ಸೂಚನೆಗಳನ್ನು ಅನುಸರಿಸಿ, ನಂತರ ಯಶಸ್ವಿಯಾಗಿ ಹೊರಬಂದನು ಎಂದು ಎಸ್ ಪಿ ಹೇಳಿದ್ದಾರೆ.

    ಬಾಲಕ ಬೋರ್ ವೆಲ್‍ ನಿಂದ ಹೊರ ಬಂದ ತಕ್ಷಣ ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯಕ್ಕೆ ಹುಡುಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಎಲ್ಲ ಕಾರ್ಯಚರಣೆ ನಡೆಯಲು ಸುಮಾರು 35 ಗಂಟೆಗಳ ಸಮಯವಾಗಿದ್ದು, ಭಾನುವಾರ ರಾತ್ರಿ 10.45 ರ ವೇಳೆಗೆ ಬಾಲಕನನ್ನು ರಕ್ಷಿಸಲಾಗಿದೆ ಎಂದು ದೆವಾಸ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅನ್ಸುಮನ್ ಸಿಂಗ್ ಹೇಳಿದ್ದಾರೆ.

    https://www.youtube.com/watch?v=lw3NHCkW7Bk&feature=youtu.be&a=

  • ಪಕ್ಕದಲ್ಲೇ ನದಿ ಹರಿದ್ರೂ ಹನಿ ನೀರಿಲ್ಲ- ಬೋರ್‍ವೆಲ್‍ಗಳಿಂದ ಸ್ಟೀಲ್ ಕಂಪೆನಿಗಳಿಗೆ ಅಕ್ರಮ ನೀರು

    ಪಕ್ಕದಲ್ಲೇ ನದಿ ಹರಿದ್ರೂ ಹನಿ ನೀರಿಲ್ಲ- ಬೋರ್‍ವೆಲ್‍ಗಳಿಂದ ಸ್ಟೀಲ್ ಕಂಪೆನಿಗಳಿಗೆ ಅಕ್ರಮ ನೀರು

    ಕೊಪ್ಪಳ: ಕಾರ್ಖಾನೆಯೊಂದು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೋರ್‍ವೆಲ್ ಮೂಲಕ ಅನಧಿಕೃತ ನೀರು ಕದಿಯುತ್ತಿರೋ ಸ್ಥಳಕ್ಕೆ ರೈತರು ನುಗ್ಗಿ ಕಾರ್ಖಾನೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೋರವೆಲ್ ಕೊರೆಯಿಸಿ ಕಳೆದ ನಾಲ್ಕೈದು ತಿಂಗಳಿಂದ ಕಲ್ಯಾಣಿ ಕಾರ್ಖಾನೆಯವರು ಅಂತರ್ಜಲಕ್ಕೂ ಕನ್ನಾ ಹಾಕಿ ನೀರು ಕದಿಯುತ್ತಿದ್ದಾರೆ. ನಾಲ್ಕೈದು ಬೋರ್‍ವೆಲ್ ಗಳಿಗೆ ಡೀಸೆಲ್ ಮೋಟರ್ ಅಳವಡಿಸಿ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಕದಿಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದ್ರಿಂದ ರೋಸಿಹೋದ ರೈತರು ಡಿಸೇಲ್ ಪಂಪಸೆಟ್ ಮೂಲಕ ನೀರು ಕದಿಯುತ್ತಿರೋದನ್ನ ನಿಲ್ಲಿಸುವಂತೆ ಕಾರ್ಖಾನೆಯವರಿಗೆ ತಾಕೀತು ಮಾಡಿದ್ದಾರೆ.

    ಇನ್ನು ಈ ರೀತಿ ಕಲ್ಯಾಣಿ ಸ್ಟೀಲ್ ಕಾರ್ಖಾನೆಯವರು ನಿರಂತರವಾಗಿ ನೀರು ಕದಿಯುತ್ತಿರುವುದರಿಂದ ಸುತ್ತಮುತ್ತಲು ರೈತರ ಜಮೀನಿನಲ್ಲಿ ಇರುವ ಬೋರ್‍ವೆಲ್ ನೀರು ಕಡಿಮೆ ಆಗಿ ಬೆಳೆಗೆ ನೀರು ಹಾಯಿಸಲು ಪರದಾಡ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಖಾನೆಯವರು ನೀರು ಕದಿಯೋದನ್ನ ತಡೀಬೇಕು. ಜನಜಾನುವಾರುಗಳಿಗೆ ಕುಡಿಯೋಕೆ ನೀರಿಲ್ಲ. ಇದ್ರ ಮಧ್ಯೆ ಕಾರ್ಖಾನೆಯವರು ನೀರು ಕದಿಯುತ್ತಿರೋದನ್ನ ಕಂಡು ಅಧಿಕಾರಿಗಳು ಕಣ್ಮುಚ್ಚಿ ಕುಳ್ತಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.