Tag: ಬೋನ್

  • ಒಂದು ತಿಂಗಳಲ್ಲಿ 3 ಕರು, 2 ಮೇಕೆ ತಿಂದಿದ್ದ ಚಿರತೆ ಕೊನೆಗೂ ಸೆರೆ

    ಒಂದು ತಿಂಗಳಲ್ಲಿ 3 ಕರು, 2 ಮೇಕೆ ತಿಂದಿದ್ದ ಚಿರತೆ ಕೊನೆಗೂ ಸೆರೆ

    – ಇನ್ನೂ ನಾಲ್ಕು ಚಿರತೆಗಳಿವೆ ಎಂದ ಗ್ರಾಮಸ್ಥರು

    ಹಾಸನ: ಕೇವಲ ಒಂದು ತಿಂಗಳಲ್ಲಿ ಕರು, ಮೇಕೆ, ನಾಯಿಯನ್ನು ತಿಂದು ಭೀತಿ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ.

    ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ, ದಿಂಡಗೂರು ಗ್ರಾಮದ ಹೊರವಲಯದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಚಿಕ್ಕೇನಹಳ್ಳಿ ಗ್ರಾಮದ ರೈತ ಪ್ರಭು ಅವರ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಮೂರು ಕರು, ಎರಡು ಮೇಕೆ, ಒಂದು ನಾಯಿಯನ್ನು ತಿಂದು ಚಿರತೆ ಭೀತಿ ಮೂಡಿಸಿತ್ತು. ಐದು ದಿನಗಳ ಹಿಂದೆ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು. ಸೋಮವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ.

    ಚಿರತೆಯನ್ನು ವಶಕ್ಕೆ ಪಡೆಯಲು ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ಇನ್ನೂ ನಾಲ್ಕು ಚಿರತೆಗಳು ಓಡಾಡಿಕೊಂಡು ಭೀತಿ ಮೂಡಿಸಿವೆ. ಅವುಗಳನ್ನೂ ಹಿಡಿದು ನಂತರ ಈ ಚಿರತೆ ಕೊಂಡೊಯ್ಯಿರಿ ಎಂದು ಆಕ್ರೋಶಗೊಂಡರು. ಬಳಿಕ ಎಲ್ಲ ಚಿರತೆ ಹಿಡಿಯುವ ಭರವಸೆ ನೀಡಿ, ಅರಣ್ಯಾಧಿಕಾರಿಗಳು ಚಿರತೆ ತೆಗೆದುಕೊಂಡು ಹೋದರು.

  • ಕೆಆರ್‌ಎಸ್‌ನಲ್ಲಿ ಕೊನೆಗೂ ಬೋನಿಗೆ ಬಿತ್ತು ಚಿರತೆ

    ಕೆಆರ್‌ಎಸ್‌ನಲ್ಲಿ ಕೊನೆಗೂ ಬೋನಿಗೆ ಬಿತ್ತು ಚಿರತೆ

    ಮಂಡ್ಯ: ಕೆಆರ್‌ಎಸ್‌ನ ಸ್ಥಳೀಯರು, ಪ್ರವಾಸಿಗರು ಹಾಗೂ ಅಧಿಕಾರಿಗಳ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು, ಸ್ಥಳೀಯರ ಆತಂಕ ದೂರವಾಗಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯ ಮುಖ್ಯದ್ವಾರದಲ್ಲಿ ಹಾಗೂ ಬೃಂದಾವನ ಗಾರ್ಡನ್‍ನಲ್ಲಿ ಕಳೆದ ಹಲವು ದಿನಗಳಿಂದ ಚಿರತೆಯೊಂದು ಪದೇ ಪದೇ ಕಾಣಿಸಿಕೊಂಡಿತ್ತು.

    ಕಳೆದ ಶುಕ್ರವಾರ ಚಿರತೆ ಓಡಾಡುವ ದೃಶ್ಯ ಇಲ್ಲಿನ ಸಿಸಿ ಟಿವಿಯಲ್ಲಿ ಸಹ ಸೆರೆಯಾಗಿತ್ತು. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯ ಸೆರೆಗೆ ಕೆಆರ್‌ಎಸ್‌ ಅಣೆಕಟ್ಟೆನ ಮುಖ್ಯದ್ವಾರದ ಬಳಿ ಬೋನ್ ಇರಿಸಿದ್ದರು.

    ಬೋನ್ ಇರಿಸಿದ ಐದು ದಿನಗಳ ಬಳಿಕ ಇಂದು ಚಿರತೆ ಬೋನ್‍ಗೆ ಬಿದ್ದಿದೆ. ಚಿರತೆ ಬೋನ್‍ಗೆ ಬಿದ್ದಿರುವುದರಿಂದ ಜನರಲ್ಲಿ ಇದ್ದ ಆತಂಕ ದೂರವಾಗಿದೆ. ಸದ್ಯ ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.

  • ಬಾಲಕನನ್ನ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಕೊನೆಗೂ ಬೋನಿಗೆ ಬಿತ್ತು

    ಬಾಲಕನನ್ನ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಕೊನೆಗೂ ಬೋನಿಗೆ ಬಿತ್ತು

    ಬಳ್ಳಾರಿ: ಕಳೆದ ಒಂದು ವಾರದ ಹಿಂದೆ ಸಂಡೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮೂರು ವರ್ಷದ ಮಗುವನ್ನ ಹೊತ್ತೊಯ್ದಿದ್ದ ಚಿರತೆ ಬೋನಿಗೆ ಬಿದ್ದಿದ್ದೆ.

    ಕಳೆದ ಒಂದು ವಾರದಿಂದ ಚಿರತೆ ಸೆರೆಗೆ ಮುಂದಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಯಶ್ವಸಿಯಾಗಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿದು ಇದೀಗ ಬೇರೆಡೆ ಸಾಗಿಸಿದ್ದಾರೆ. ಹೀಗಾಗಿ ಪ್ರತಿನಿತ್ಯ ಕೈಯಲ್ಲೇ ಜೀವ ಹಿಡಿದು ಓಡಾಡುತ್ತಿದ್ದ ಸಂಡೂರು ತಾಲೂಕಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

    ಏನಿದು ಪ್ರಕರಣ?
    ಡಿಸೆಂಬರ್ 12 ರಂದು ಸಂಜೆ ಆಟವಾಡುವಾಗ ಮನೆಯವರು ನೋಡ ನೋಡುತ್ತಿದ್ದಂತೆಯೇ ಚಿರತೆ ಬಾಲಕನನ್ನು ಎಳೆದೊಯ್ದಿದೆ. ಬಳಿಕ ಆತನ ಪೋಷಕರು ಹಾಗೂ ಗ್ರಾಮಸ್ಥರು ಬಾಲಕನನ್ನ ಹುಡುಕಾಡಿದ್ದಾರೆ. ಗ್ರಾಮದ ಹೊರವಲಯದಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದನು. ಬೆಳೆದು ನಿಂತ ಕುಡಿಯನ್ನು ಶವವಾಗಿ ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಚಿರತೆಯನ್ನು ಹಿಡಿಯುವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಅಂತ ಸೋಮಲಾಪುರ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶಿತರಾಗಿದ್ದರು. ಚಿರತೆ ಮಗುವನ್ನು ಹೊತ್ತೊಯ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆಗೆ ಮುಂದಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯರು ಕಂಡ್ರೆ ಸಾಕು ಸೀರೆ ಎಳೆದು ದಾಂಧಲೆ – ರೋಸಿಹೋದ ಯುವಕರಿಂದ ಮಂಗಗಳ ಬಂಧನ

    ಮಹಿಳೆಯರು ಕಂಡ್ರೆ ಸಾಕು ಸೀರೆ ಎಳೆದು ದಾಂಧಲೆ – ರೋಸಿಹೋದ ಯುವಕರಿಂದ ಮಂಗಗಳ ಬಂಧನ

    ಗದಗ: ಮಂಗಗಳನ ಹಾವಳಿಯಿಂದ ಮಧ್ಯರಾತ್ರಿಯಿರಲಿ, ಹಾಡಹಗಲೇ ಮಹಿಳೆಯರು ಓಡಾಡೋಕೆ ಹೆದರುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

    ಗದಗ ಜಿಲ್ಲೆಯ ಕದಾಂಪುರ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಈ ಗ್ರಾಮವು ಕಪ್ಪತಗುಡ್ಡದ ಸೆರಗಲ್ಲಿ ಇರುವುದರಿಂದ ದಿನ ಬೆಳಗಾದರೆ ಸಾಕು ಗ್ರಾಮದಲ್ಲಿ ವಾನರ ಸೈನ್ಯ ಬಂದು ದಾಂಗುಡಿ ಇಡುತ್ತವೆ. ಮನೆಗಳಿಗೆ ನುಗ್ಗೋ ಈ ಕೆಂಪು ಕೋತಿಗಳು, ಮನೆಯೊಳಗಿರುವ ದವಸ ಧಾನ್ಯಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾವೆ.

    ಈ ಮಂಗಗಳಿಗೆ ಮಹಿಳೆಯರನ್ನು ಕಂಡರೆ ಸಾಕು, ಅವರ ಸೀರೆ ಎಳೆದು ದಾಂಧಲೆ ಮಾಡುತ್ತವೆ. ಇನ್ನೂ ಚಿಕ್ಕ ಮಕ್ಕಳ ಕೈಲಿರುವ ತಿಂಡಿ ತಿನಿಸುಗಳನ್ನು ಕಸಿದುಕೊಂಡು ಹೋಗುತ್ತವೆ. ಮನೆಯೊಳಗೆ ಒಂದು ಕ್ಷಣ ಮೈಮರೆತು ಕೂರುವಾಗಿಲ್ಲ. ಒಂದು ವೇಳೆ ಮೈಮರೆತರೆ ಸಾಕು ಆ ಮನೆಗೆ ಕೋತಿಗಳ ಎಂಟ್ರಿ ಗ್ಯಾರೆಂಟಿ ಎಂದು ಗ್ರಾಮದ ಮಹಿಳೆಯರು ಹೇಳುತ್ತಿದ್ದಾರೆ.

    ಕಾಟ ಕೊಡುವ ಕೋತಿಗಳನ್ನು ಹಿಡಿದು ಅವುಗಳ ಕಾಟ ತಪ್ಪಿಸಿ ಅಂತ ಹಲವಾರು ಬಾರಿ ಕದಾಂಪುರ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಆದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಕೋತಿ ಹಿಡಿಯೋದಿರಲಿ, ಕನಿಷ್ಠ ಕದಾಂಪುರಕ್ಕೆ ಬಂದು ಪರಿಸ್ಥಿತಿಯನ್ನೂ ಸಹ ನೋಡಿಲ್ಲ. ಇದರಿಂದ ರೋಸಿಹೋದ ಗ್ರಾಮದ ಯುವಕರು, ಹಿರಿಯರ ಸಲಹೆ ಪಡೆದು ತಾವೇ ಕೋತಿ ಹಿಡಿಯೋಕೆ ಬೋನನ್ನು ತಂದಿಟ್ಟು, ಹಲವಾರು ಕೋತಿಗಳನ್ನು ಹಿಡಿದು ಹಾಕಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಗ್ರಾಮದಲ್ಲೆಲ್ಲಾ ಬಡಿಗೆ ಹಿಡಿದು ಓಡಾಡೋ ಯುವಕರ ತಂಡ ಕೋತಿಗಳನ್ನು ಬೋನಿನ ಕಡೆ ಓಡಿಸುತ್ತಾರೆ. ಹಾಗೆ ಬರುವ ಕೋತಿಗಳು ಬೋನಿನಲ್ಲಿ ಇಟ್ಟಿರುವ ತಿನಿಸುಗಳ ಆಸೆಯಿಂದ ಒಳಹೋಗುತ್ತವೆ. ಈ ವೇಳೆ ದೂರದಲ್ಲಿರುವ ಯುವಕರು ಬೋನಿಗೆ ಕಟ್ಟಿದ ದಾರ ಬಿಡುವ ಮೂಲಕ ಅವುಗಳನ್ನು ಕೂಡಿ ಹಾಕುತ್ತಾರೆ ಎಂದು ಗ್ರಾಮಸ್ಥ ನಿಂಗಪ್ಪ ತಿಳಿಸಿದ್ದಾರೆ.

    ಗ್ರಾಮಸ್ಥರು ಹಿಡಿದಿರುವ ಕೋತಿಗಳಲ್ಲಿ ಹಲವು ಕೋತಿಗಳು ಒಂದಕ್ಕೊಂದು ಜಗಳವಾಡಿಕೊಂಡು ಮೈಯೆಲ್ಲಾ ರಕ್ತ ಮಾಡಿಕೊಂಡಿವೆ. ಹಿಡಿದಿರುವ ಕೋತಿಗಳನ್ನು ಗ್ರಾಮದ ಹತ್ತಿರದಲ್ಲಿಯೇ ಇರುವ ಕಪ್ಪತಗುಡ್ಡಕ್ಕೆ ಹೋಗಿ ಬಿಟ್ಟು ಬರಲಾಗುತ್ತಿದೆ. ಈಗಾದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳದೆ ಗ್ರಾಮಸ್ಥರಿಗೆ ತೊಂದರೆ ಕೊಡುವ ಕೋತಿಗಳನ್ನು ಹಿಡಿಯಬೇಕಾಗಿದೆ ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗ್ರಾಮಸ್ಥರಿಗೆ ಭಯ ಹುಟ್ಟಿಸುತ್ತಿದ್ದ ದೊಡ್ಡ ಚಿರತೆ ಕೊನೆಗೂ ಬೋನಿಗೆ ಬಿತ್ತು!

    ಗ್ರಾಮಸ್ಥರಿಗೆ ಭಯ ಹುಟ್ಟಿಸುತ್ತಿದ್ದ ದೊಡ್ಡ ಚಿರತೆ ಕೊನೆಗೂ ಬೋನಿಗೆ ಬಿತ್ತು!

    ಉಡುಪಿ: ಕಳೆದ ಒಂದು ವರ್ಷದಿಂದ ಉಡುಪಿಯ ಕಾಪು ತಾಲೂಕಿನ ಗ್ರಾಮಸ್ಥರಿಗೆ ಜೀವಭಯ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಕಾಪು ತಾಲೂಕಿನ ಪಾಂಬೂರು ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರು ಜಂಟಿ ಕಾರ್ಯಾಚರಣೆ ಮಾಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. 8 ವರ್ಷದ ದೊಡ್ಡ ಗಂಡು ಚಿರತೆ ಶಿರ್ವ, ಪಾಂಬೂರು ಮತ್ತು ಕಾಪು ವ್ಯಾಪ್ತಿಯಲ್ಲಿ ಜನರಿಗೆ ನಡುಕ ಹುಟ್ಟಿಸಿತ್ತು. ಮನೆಯ ಅಂಗಳಕ್ಕೆ ಬಂದು ನಾಯಿಯನ್ನು ಹೊತ್ತೊಯ್ಯುತ್ತಿತ್ತು. ಹಟ್ಟಿಯಲ್ಲಿದ್ದ ಹಸುವಿನ ಮೇಲೆ ಕೂಡಾ ದಾಳಿ ಮಾಡಿತ್ತು. ಈಗ ಹಲವಾರು ತಿಂಗಳಿಂದ ಸ್ಥಳೀಯ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಬೋನಿನೊಳಗೆ ಹಾಕುವಲ್ಲಿ ಈಗ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಅರಣ್ಯ ಇಲಾಖೆಗೆ ಸ್ಥಳೀಯರಿಂದ ನೂರಾರು ದೂರು ಬಂದಿತ್ತು. ಆದ್ದರಿಂದ ಅರಣ್ಯಾಧಿಕಾರಿಗಳು ಬೋನುಗಳನ್ನು ಇಟ್ಟಿದ್ದರು. ಹಲವೆಡೆ ಬೋನು ಇಟ್ಟರೂ ಚಿರತೆ ಬಿದ್ದಿರಲಿಲ್ಲ. ಪಾಂಬೂರಿನಲ್ಲಿ ಎರಡು ದಿನದ ಹಿಂದೆ ಇಟ್ಟ ಬೋನಿನೊಳಗೆ ನಾಯಿಯನ್ನು ತಿನ್ನಲು ಚಿರತೆ ಬಂದಿದೆ. ಆಗ ಬೋನ್ ಲಾಕ್ ಆಗಿದೆ. ಬೆಳಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಸೆರೆ ಸಿಕ್ಕ ಸುದ್ದಿ ತಿಳಿದು ಜನರು, ಮಕ್ಕಳು ಚಿರತೆಯನ್ನು ನೋಡಲು ಮುಗಿಬಿದ್ದಿದ್ದರು.

    ಆಹಾರ ಅರಸುತ್ತಾ ನಾಡಿಗೆ ಬರುವ ಚಿರತೆಗಳ ಸಂಖ್ಯೆ ಜಾಸ್ತಿಯಾಗಿದೆ. ಜನರ ನೆಮ್ಮದಿ ಕಾಪಾಡುವ ಜೊತೆಗೆ ಕಾಡು ಪ್ರಾಣಿಗಳ ರಕ್ಷಣೆ ಕೂಡಾ ನಮ್ಮ ಜವಾಬ್ದಾರಿ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಗಾತ್ರದ ಚಿರತೆ ಸೆರೆ ಸಿಕ್ಕಿಲ್ಲ. ಚಿರತೆಯನ್ನು ಪಶ್ಚಿಮ ಘಟ್ಟಕ್ಕೆ ಬಿಡಲಾಗುತ್ತದೆ ಎಂದು ಅರಣ್ಯಾಧಿಕಾರಿ ಕ್ಲಿಫರ್ಡ್ ತಿಳಿಸಿದ್ದಾರೆ.

    ವಲಯ ಅರಣ್ಯಾಧಿಕಾರಿ ಗಣಪತಿ ನಾಯ್ಕ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು, ಸ್ಥಳೀಯರು ಸಹಕಾರ ನೀಡಿದ್ದಾರೆ.

  • ನಾಯಿ ತಿನ್ನುವ ಆಸೆಯಿಂದ ಚನ್ನರಾಯಪಟ್ಟಣದಲ್ಲಿ ಬೋನಿಗೆ ಬಿತ್ತು ಭಾರೀ ಗಾತ್ರದ ಚಿರತೆ

    ನಾಯಿ ತಿನ್ನುವ ಆಸೆಯಿಂದ ಚನ್ನರಾಯಪಟ್ಟಣದಲ್ಲಿ ಬೋನಿಗೆ ಬಿತ್ತು ಭಾರೀ ಗಾತ್ರದ ಚಿರತೆ

    ಹಾಸನ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಭಾರೀ ಗಾತ್ರದ ಚಿರತೆಯೊಂದು ಸೆರೆಯಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

    ಕೆಲ ದಿನಗಳಿಂದ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿತ್ತು. ಗ್ರಾಮದ ಎರಡು ಕುರಿಗಳನ್ನು ಚಿರತೆ ತಿಂದು ಹಾಕಿ ಹಸುವಿನ ಮೇಲೆ ದಾಳಿ ಮಾಡಿತ್ತು. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕದಲ್ಲಿ ಇದ್ದರು. ನಂತರ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಬಳಿ ಮನವಿ ಮಾಡಿಕೊಂಡಿದ್ದರು.

    ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಚಿರತೆ ಹಿಡಿಯಲು ಬೋನನ್ನು ಇಟ್ಟಿದ್ದರು. ಆದರೆ 2-3 ದಿನಗಳಾದರೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ನಂತರ ಅರಣ್ಯ ಇಲಾಖೆ ಉಪಾಯದಿಂದ ಸೆರೆ ಹಿಡಿಯಬೇಕೆಂದು ಒಂದು ನಾಯಿಯನ್ನು 2 ದಿನಗಳ ಹಿಂದೆ ಬೋನಿನಲ್ಲಿ ಹಾಕಿದ್ದಾರೆ. ಬಳಿಕ ಇಂದು ಬೆಳಿಗ್ಗೆ ನಾಯಿ ತಿನ್ನುವ ಆಸೆಯಿಂದ ಭಾರಿ ಗಾತ್ರದ ಗಂಡು ಚಿರತೆಯೊಂದು ಬೋನಿಗೆ ಬಂದು ಸೆರೆಯಾಗಿದೆ.

    ಸದ್ಯಕ್ಕೆ ಅರಣ್ಯ ಇಲಾಖೆ ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿ ದಟ್ಟ ಕಾಡು ಪ್ರದೇಶಕ್ಕೆ ತಲುಪಿಸಲು ಮುಂದಾಗಿದ್ದು, ಚಿರತೆ ಸೆರೆಯಿಂದಾಗಿ ಸ್ಥಳೀಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

  • ಮರಿಗಳನ್ನು ಹುಡುಕಿಕೊಂಡು ಬಂದು ಬೋನಿಗೆ ಬಿದ್ದ ತಾಯಿಚಿರತೆ

    ಮರಿಗಳನ್ನು ಹುಡುಕಿಕೊಂಡು ಬಂದು ಬೋನಿಗೆ ಬಿದ್ದ ತಾಯಿಚಿರತೆ

    ಮಂಡ್ಯ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ತಾಯಿ ಚಿರತೆಯೊಂದು ಸೆರೆಯಾದ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ಕೆಆರ್ ಪೇಟೆಯ ಕಳ್ಳನಕೆರೆ ಗ್ರಾಮದ ದೇವರಾಜು ಎಂಬವರ ಜಮೀನಿನಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಬಳಿಕ ಚಿರತೆ ಮರಿಗಳನ್ನು ರಕ್ಷಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಲಾಗಿತ್ತು.

    ಮರಿಗಳು ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಚಿರತೆ ಇರುವ ಬಗ್ಗೆ ಖಚಿತಗೊಂಡ ಹಿನ್ನಲೆ ಅರಣ್ಯ ಇಲಾಖೆ ಸಿಬ್ಬಂದಿ ಮರಿಗಳು ಸಿಕ್ಕ ಜಾಗದಲ್ಲಿ ಒಂದು ಬೋನು ಇರಿಸಿದ್ದರು. ಇದ್ರಿಂದ ತನ್ನ ಮೂರು ಮರಿಗಳನ್ನ ಹುಡುಕಿಕೊಂಡು ಬಂದ ತಾಯಿ ಚಿರತೆ ಇಂದು ಬೋನಿಗೆ ಬಿದ್ದಿದೆ.

    ಸದ್ಯ ಚಿರತೆ ಆತಂಕದಿಂದ ಕಂಗಾಲಾಗಿದ್ದ ಗ್ರಾಮಸ್ಥರು, ಚಿರತೆ ಸೆರೆಯಾದ ಹಿನ್ನಲೆ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಸೆರೆಯಾದ ಚಿರತೆ ನೋಡಲು ಸ್ಥಳಕ್ಕೆ ಜನರ ದಂಡೆ ಹರಿದು ಬಂದಿದೆ. ಆದ್ರೆ ವಿಚಾರ ತಿಳಿಸಿದ್ರೂ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಬಾರದೇ ಇದ್ದಿದ್ದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.