Tag: ಬೋನು

  • ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಹಳ್ಳಿಗರು

    ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಹಳ್ಳಿಗರು

    ಚಿಕ್ಕಮಗಳೂರು: ಒಂದೇ ವಾರದಲ್ಲಿ ಮೂರು ಕಡೆ ಇಟ್ಟಿದ್ದ ಬೋನಿಗೆ ಬೀಳದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಟಕ್ಕರ್ ಕೊಟ್ಟುಕೊಂಡು ಓಡಾಡುತ್ತಿತ್ತು. ಆದರೆ ನಾಲ್ಕನೇ ಜಾಗದಲ್ಲಿ ಇಟ್ಟ ಬೋನಿನಲ್ಲಿ ಚಿರತೆ ಸೆರೆಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ನಡೆದಿದೆ.

    ಬೀರೂರಿನ ಸುತ್ತಮುತ್ತಲಿನ ಬ್ಯಾಗಡೇಹಳ್ಳಿ, ಹುಲ್ಲೇಹಳ್ಳಿ, ಜೋಗಿಹಟ್ಟಿ, ಸೀಗೆಹಡ್ಲು, ದಾಸರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಜನರಿಗೆ ಈ ಚಿರತೆ ತಲೆನೋವು ತರಿಸಿತ್ತು. ಕಳೆದೊಂದು ತಿಂಗಳಿಂದ ಊರಿನ ಜನರ ಕಣ್ಣಿಗೆ ಬಿದ್ದು ಮಾಯವಾಗುತ್ತಿತ್ತು. ಇದರಿಂದ ಹಳ್ಳಿಯ ಜನ ಹೊಲಗದ್ದೆಗಳಿಗೆ ತೋಟಕ್ಕೆ ಹೋಗಲು ಭಯ ಪಡುತ್ತಿದ್ದರು. ಹಳ್ಳಿಯಲ್ಲಿ ನಾಯಿ-ಕುರಿಗಳನ್ನ ಹೊತ್ತೊಯ್ದು ಒಂದೆರಡು ದಿನ ಕಾಣಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಅಲ್ಲಲ್ಲೇ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಕೆಲ ಹಳ್ಳಿಗಳಲ್ಲಿ ಜಾನುವಾರುಗಳನ್ನೂ ಬೇಟೆಯಾಡಿತ್ತು. ಇದರಿಂದ ಭಯಗೊಂಡು ಹಳ್ಳಿಗರು ಅರಣ್ಯ ಇಲಾಖೆಗೆ ಚಿರತೆಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.

    ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ವಾರದಲ್ಲಿ ಮೂರು ಕಡೆ ಬೋನಿಟ್ಟರು ಕೂಡ ಚಿರತೆ ಸೆರೆಯಾಗಿರಲಿಲ್ಲ. ಕಡೆಯದಾಗಿ ಬೀರೂರಿನ ಕಾವಲು ಚೌಡೇಶ್ವರಿ ದೇವಾಲಯದ ಬಳಿ ಅರಣ್ಯ ಇಲಾಖೆ ನಾಲ್ಕನೇ ಬಾರಿ ಇಟ್ಟ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು 12-14 ವರ್ಷದ ಚಿರತೆ ಪ್ರಾಯದ ಚಿರತೆಯಾಗಿದೆ. ಸೆರೆ ಹಿಡಿದ ಚಿರತೆಯನ್ನ ಬನ್ನೇರುಘಟ್ಟಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ಸಂತೋಷ್ ಕುಮಾರ್ ಹಾಗೂ ಹರೀಶ್ ಪಾಲ್ಗೊಂಡಿದ್ದರು. ಕಳೆದೊಂದು ತಿಂಗಳಿಂದ ಹತ್ತಾರು ಹಳ್ಳಿಗರಿಗೆ ಭಯ ಹುಟ್ಟಿಸಿದ ಚಿರತೆ ಸೆರೆಯಾಗಿದ್ದರಿಂದ ಹಳ್ಳಿಗರು ನಿಟ್ಟುಸಿರು ಬಿಟ್ಟಿದ್ದಾರೆ.

  • ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಉಡುಪಿ: ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿರುವುದು ಜಾಸ್ತಿಯಾಗುತ್ತಿದೆ.

    ಜಿಲ್ಲೆಯ ಕಾಪು ತಾಲೂಕಿನಲ್ಲಿ ಹಲವಾರು ದಿನಗಳಿಂದ ಆತಂಕ ಹುಟ್ಟಿಸಿದ ಚಿರತೆಯೊಂದು ಬೋನಿಗೆ ಬಿದ್ದಿದೆ. ಕಾಪು ತಾಲೂಕಿನಲ್ಲಿ ಜನವಸತಿ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸುತ್ತಿದ್ದ ಚಿರತೆಯೊಂದು ಭಾನುವಾರ ತಡರಾತ್ರಿ ಬೋನಿಗೆ ಬಿದ್ದಿದೆ.

    ಕಾಪು ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಕುರಾಲು ಬಳಿ ಚಿರತೆ ಜನರಿಗೆ ಕಾಟ ನೀಡುತ್ತಿತ್ತು. ಕುರಾಲ್ ರೆನ್ನಿ ಕುಂದರ್ ಎಂಬವರ ಮನೆ ಬಳಿ ಚಿರತೆಯ ಓಡಾಟದ ಬಗ್ಗೆ ಮಾಹಿತಿ ಪಡೆದು ಅರಣ್ಯ ಇಲಾಖೆ ಬೋನನ್ನು ಇರಿಸಿತ್ತು.

    ಕಳೆದ ರಾತ್ರಿ ನಾಲ್ಕು ವರ್ಷದ ಗಂಡು ಚಿರತೆ ಬೋನಿಗೆ ಬೀಳುವ ಮೂಲಕ ಜನರು ನಿಟ್ಟುಸಿರುವ ಬಿಡುವಂತಾಗಿದೆ. ಕಾರ್ಯಾಚರಣೆಯಲ್ಲಿ ಆರ್.ಎಫ್.ಒ ಜೀವನ್ ದಾಸ್ ಶೆಟ್ಟಿ, ಆರ್.ಎಫ್.ಒ ಗುರುಪ್ರಸಾದ್, ಫಾರೆಸ್ಟ್ ಗಾರ್ಡ್ ಎಚ್ ಜಯರಾಮ್ ಶೆಟ್ಟಿ ಮತ್ತಿತರು ಭಾಗಿಯಾಗಿದ್ದರು. ಹಲವಾರು ಭಾಗಗಳಲ್ಲಿ ಬೋನ್ ಗಳನ್ನು ಇಡಲಾಗಿತ್ತು.

  • ರೈತರ ನಿದ್ದೆಗೆಡಿಸಿದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

    ರೈತರ ನಿದ್ದೆಗೆಡಿಸಿದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

    ಹಾವೇರಿ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅರಳೀಕಟ್ಟಿ ಗ್ರಾಮದ ಬಳಿ ಇರುವ ಗುಡ್ಡದಲ್ಲಿ ನಡೆದಿದೆ.

    ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿ ಚಿರತೆ ಓಡಾಡಿಕೊಂಡಿತ್ತು. ಇದರಿಂದ ರೈತರು ಹಾಗೂ ಗ್ರಾಮದ ಜನರು ಸಂಜೆಯಾಗುತ್ತಿದ್ದಂತೆ ಮನೆ ಸೇರಿಕೊಳ್ಳುತ್ತಿದ್ದರು.

    ಇಂದು ಅರಣ್ಯ ಇಲಾಖೆಯು ಇರಿಸಿದ ಬೋನಿಗೆ ಎರಡು ವರ್ಷದ ಗಂಡು ಚಿರತೆ ಬಿದ್ದಿದೆ. ಚಿರತೆ ಬೋನಿಗೆ ಬಿದ್ದಿದ್ದರಿಂದ ಅರಳೀಕಟ್ಟಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಯನ್ನ ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯಕ್ಕೆ ಬಿಡಲು ತೆಗೆದುಕೊಂಡು ಹೋಗಿದ್ದಾರೆ.

  • ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ 8 ವರ್ಷದ ಚಿರತೆ ಸೆರೆ

    ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ 8 ವರ್ಷದ ಚಿರತೆ ಸೆರೆ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಇಂದು ಬೋನಿಗೆ ಬಿದ್ದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಬಳಿಯ ಸೀಗೆಪಾಳ್ಯ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಅನೇಕ ದಿನಗಳಿಂದ ಉಪಟಳ ನೀಡುತ್ತಿದ್ದ ಸುಮಾರು 8 ವರ್ಷದ ಗಂಡು ಚಿರತೆಯನ್ನು ಅರಣ್ಯ ಅಧಿಕಾರಿಗಳು ಬೋನ್ ಇಟ್ಟು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಈ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಚಿರತೆ ಸೆರೆಯಾದ ಸ್ಥಳಕ್ಕೆ ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಈ ವೇಳೆ ಸ್ಥಳೀಯ ಸಿದ್ಧರಾಜು ಮಾತನಾಡಿ, ಶಿವಗಂಗೆ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಕಾಡುಪ್ರಾಣಿಗಳು ಗ್ರಾಮದತ್ತ ಬರುತ್ತಿವೆ. ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳ ಸಂತತಿ ಉಳಿಸುವ ನಿಟ್ಟಿನಲ್ಲಿ ನಾಡಿನತ್ತ ಬರುತ್ತಿರುವ ಪ್ರಾಣಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೆ ಈ ಚಿರತೆ ಕಳೆದ ಒಂದು ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟುಮಾಡಿತ್ತು. ಸದ್ಯ ಕಳೆದ ರಾತ್ರಿ ಆಹಾರ ಹರಸಿ ಬಂದ ಚಿರತೆ ಅರಣ್ಯಾಧಿಕಾರಿಗಳು ಅಳವಡಿಸಿದ್ದ ಬೋನಿನಲ್ಲಿ ಸೆರೆಯಾಗಿದೆ ಎಂದು ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

  • ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ನೆಲಮಂಗಲ: ಒಂದು ವಾರದಲ್ಲಿ ಇಬ್ಬರು ಮಾನವರನ್ನು ತಿಂದು ಮುಗಿಸಿದ ನರಭಕ್ಷಕ ಚಿರತೆಗಳ ಹಾವಳಿ ನೆಲಮಂಗಲದ ಹೊರವಲಯದಲ್ಲಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 11 ಬೋನ್ ಇಟ್ಟಿದ್ದರು. ಇಂದು ಬೆಳ್ಳಂಬೆಳಗ್ಗೆ ಎರಡು ಚಿರತೆ ಮತ್ತು ಮರಿಗಳು ಬೋನಿಗೆ ಬಿದ್ದಿವೆ.

    ತಡರಾತ್ರಿ ಎರಡು ಮರಿ ಹಾಗೂ ಇಂದು ಬೆಳಗ್ಗೆ ಎರಡು ಚಿರತೆ ಬೋನಿಗೆ ಬಿದ್ದಿರುವ ಮಾಹಿತಿಯನ್ನು ಮಾಗಡಿ ಅರಣ್ಯಾಧಿಕಾರಿಗಳು ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಲೂರು ಮತ್ತು ಮಾಗಡಿ ತಾಲೂಕಿನ ಗಡಿ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿವೆ.

    ಒಂದು ಚಿರತೆ ಬೋಡಗನಪಾಳ್ಯ ಹಾಗೂ ಮತ್ತೊಂದು ಚಿರತೆ ಶಿರಗನಹಳ್ಳಿಯಲ್ಲಿ ಬೋನಿಗೆ ಬಿದ್ದಿದೆ. ಚಿರತೆ ಮರಿ ದಾಸೇಗೌಡನ ಪಾಳ್ಯದಲ್ಲಿ ಪ್ರತ್ಯೇಕವಾಗಿ ಕಂಡಿದೆ. ಒಂದೇ ವಾರದಲ್ಲಿ ಮೂರು ವರ್ಷದ ಮಗು, 68 ವರ್ಷದ ವೃದ್ಧೆಯನ್ನು ಬಲಿಪಡೆದ ಚಿರತೆಗಳ ಚಲನ ವಲನದ ಮೇಲೆ ಅರಣ್ಯಧಿಕಾರಿಗಳು ಕಣ್ಣಿಟ್ಟಿದ್ದರು. ದೊಡ್ಡ ಚಿರತೆ ಹಿಡಿಯಲು ಮರಿ ಚಿರತೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

    ಇದೀಗ ಮಾಗಡಿ ವಲಯ ಅರಣ್ಯಾಧಿಕಾರಿಗಳ ಕಾರ್ಯಚರಣೆಗೆ ಅಲ್ಪ ಯಶಸ್ಸು ಸಿಕ್ಕಿದೆ. ಸೆರೆಯಾಗಿರುವ ಚಿರತೆ ನಿನ್ನೆ ವೃದ್ಧೆಯನ್ನು ಬಲಿ ಪಡೆದ ಚಿರತೆಯೋ ಅಥವಾ ಬೇರೆ ಚಿರತೆಯೋ ಎಂಬ ಗೊಂದಲದಲ್ಲಿ ಗ್ರಾಮಸ್ಥರು ಇದ್ದಾರೆ. ಚಿರತೆಯನ್ನು ನೋಡಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಆತಂಕ ವ್ಯಕ್ತವಾಗಿದೆ.

  • ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ದೈತ್ಯ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ

    ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ದೈತ್ಯ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ

    ನೆಲಮಂಗಲ: ಕಳೆದ ಇಪ್ಪತ್ತು ದಿನಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ದೈತ್ಯ ಚಿರತೆಯೊಂದು ಬೋನಿಗೆ ಬಿದ್ದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಬರಗೂರು ಗ್ರಾಮದ ಬಳಿಯಲ್ಲಿ ಚಿರತೆ ಸೆರೆ ಸಿಕ್ಕಿದೆ.

    ಗ್ರಾಮಸ್ಥರ ಒತ್ತಾಯದಿಂದ ಕಳೆದ ಒಂದು ವಾರದ ಹಿಂದೆ ನೆಲಮಂಗಲ ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಬೋನ್‍ನ್ನು ಇರಿಸಿದ್ದರು. ಈ ದೈತ್ಯ ಚಿರತೆ ಪ್ರತಿದಿನ ಗ್ರಾಮದಲ್ಲಿ ಭಾರಿ ಆರ್ಭಟ ಮಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.

    ಈ ಕಾರಣದಿಂದ ನೆಲಮಂಗಲ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹಲವಾರು ದಿನಗಳಿಂದ ನಾಗರಿಕರಿಗೆ ನಿದ್ದೆಗೆಡಿಸಿದ್ದ ಚಿರತೆ ಹಿಡಿಯಲು ಬೋನ್ ಹಾಕಿದ್ದರು. ಇಂದು ಗ್ರಾಮದ ದಿಣ್ಣೆ ಹೊಲ ಎಂಬಲ್ಲಿ ಆಹಾರ ಅರಸಿ ಬಂದು ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟದ್ದಾರೆ.

  • ಬೋನಿನಲ್ಲಿದ್ದ ಚಿರತೆ ಜೊತೆ ಚೇಷ್ಟೆ ಮಾಡಲು ಹೋಗಿ ಆಸ್ಪತ್ರೆ ಸೇರಿದ!

    ಬೋನಿನಲ್ಲಿದ್ದ ಚಿರತೆ ಜೊತೆ ಚೇಷ್ಟೆ ಮಾಡಲು ಹೋಗಿ ಆಸ್ಪತ್ರೆ ಸೇರಿದ!

    ತುಮಕೂರು: ಬೋನಿಗೆ ಬಿದ್ದ ಚಿರತೆ ಜೊತೆ ಚೇಷ್ಟೆ ಮಾಡಲು ಹೋಗಿ ವ್ಯಕ್ತಿಯೋರ್ವ ಮುಖ ಕೈ ಪರಚಿಸಿಕೊಂಡ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ.

    ಚಿರತೆ ಸಹವಾಸಕ್ಕೆ ಹೋಗಿ ಆಸ್ಪತ್ರೆ ಸೇರಿದ ವ್ಯಕ್ತಿಯನ್ನು ದಾಸನಕಟ್ಟೆ ಗ್ರಾಮದ ನಿವಾಸಿ ರಮೇಶ್ (45) ಎಂದು ಗುರುತಿಸಲಾಗಿದೆ. ಆಹಾರವನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಹಾಕಿದ್ದು, ಈ ಬೋನಿಗೆ ಬಿದ್ದಿದ್ದ ಚಿರತೆಯ ಜೊತೆ ಚೇಷ್ಟೆ ಮಾಡಲು ಹೋಗಿ ಮುಖ ಕೈಗಳನ್ನು ಗಾಯ ಮಾಡಿಕೊಂಡು ರಮೇಶ್ ಆಸ್ಪತ್ರೆ ಸೇರಿದ್ದಾನೆ.

    ಬೋನಿನ ಒಳಗೆ ಇದ್ದ ಚಿರತೆಯ ಮೇಲೆ ಹೊರಗಡೆಯಿಂದ ಕಡ್ಡಿಯಿಂದ ತಿವಿದು ರಮೇಶ್ ಚೇಷ್ಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಚಿರತೆ ಕಡ್ಡಿ ಸಮೇತ ರಮೇಶ್‍ನನ್ನು ಬೋನಿನ ಬಳಿ ಎಳೆದುಕೊಂಡು ಕೈ ಮುಖವನ್ನು ಪರಚಿ ಹಾಕಿದೆ. ಆಗ ಅಲ್ಲೇ ಇದ್ದ ಸ್ಥಳೀಯರು ರಮೇಶ್‍ನನ್ನು ಚಿರತೆಯಿಂದ ರಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ರಮೇಶ್ ಗೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

  • ಬೋನಿಗೆ ಬಿದ್ದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ

    ಬೋನಿಗೆ ಬಿದ್ದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ

    ಕೊಪ್ಪಳ: ಜಿಲ್ಲೆಯ ಸುತ್ತಮುತ್ತ ಹಳ್ಳಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಇಂದು ಅರಣ್ಯ ಇಲಾಖೆ ಹಾಕಿದ್ದ ಬೋನಿಗೆ ಬಿದ್ದಿದೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ 17 ವರ್ಷದ ಕರಡಿ ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಹನುಮನಹಳ್ಳಿ, ಚಿಕ್ಕರಾಂಪೂರ, ಪಂಪಾ ಸರೋವರ, ಜಂಗ್ಲಿ ಮತ್ತು ವಿರೂಪಾಪೂರಗಡ್ಡಿ ಗ್ರಾಮಗಳ ಸುತ್ತ ತಿರುಗಾಡಿ ಕರಡಿ ಜನರಲ್ಲಿ ಭಯ ಹುಟ್ಟಿಸಿತ್ತು.

    ಆನೆಗೊಂದಿ ಸುತ್ತಲು ಬಾಳೆ ಬೆಳೆ ಬೆಳೆಯುವುದರಿಂದ ಇಲ್ಲಿ ಕರಡಿಗಳು ಹೆಚ್ಚಿವೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. ಈ ಸಂಬಂಧ ಅರಣ್ಯ ಇಲಾಖೆ ಹಾಕಿದ್ದ ಬೋನಿಗೆ ಇಂದು ಬೆಳಗ್ಗೆ ಕರಡಿ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

    ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

    ಹಾಸನ: ಹಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಸೋಮವಾರ ರಾತ್ರಿ ಬೋನಿಗೆ ಬಿದ್ದಿದೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ಬನವಾಸೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆ ಭಯ ಹುಟ್ಟಿಸಿತ್ತು.

    ಬಸವಾಸೆ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆಯೊಂದರ ಹಾವಳಿ ಹೆಚ್ಚಾಗಿತ್ತು. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಚಿರತೆ ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರು ಸಾಕಿದ್ದ ಕರು, ಕುರಿಮರಿಗಳನ್ನು ತಿಂದು ಪರಾರಿಯಾಗುತ್ತಿತ್ತು. ಆದರಿಂದ ಈ ಭಾಗದ ಜನರು ಚಿರತೆ ಯಾವಾಗ ಬಂದು ಇನ್ನೇನು ಮಾಡುತ್ತೋ ಅಂತ ಭಯದಿಂದ ಜೀವನ ಮಾಡುತ್ತಿದ್ದರು. ಚಿರತೆ ಕಾಟಕ್ಕೆ ಜನರು ಮನೆಗಳಿಂದ ಹೊರಬರಲು ಹೆದರುತ್ತಿದ್ದರು.

    ಚಿರತೆನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನನ್ನು ಇಟ್ಟಿದ್ದರು. ಆಹಾರ ಅರಸಿ ರಾತ್ರಿ ಮತ್ತೆ ಗ್ರಾಮಕ್ಕೆ ಬಂದ ಚಿರತೆ ಬೋನಿಗೆ ಬಿದ್ದಿದೆ. ಇದನ್ನು ಕಂಡು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೋನಿಗೆ ಬಿತ್ತು ಜನರ ನಿದ್ದೆಗೆಡಿಸಿದ್ದ ಚಿರತೆ!

    ಬೋನಿಗೆ ಬಿತ್ತು ಜನರ ನಿದ್ದೆಗೆಡಿಸಿದ್ದ ಚಿರತೆ!

    ಕೋಲಾರ: ಹಲವು ದಿನಗಳಿಂದ ಜನರ ನಿದ್ದೆಗೆಡಿಸಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದಿದೆ.

    ಹೌದು. ಉಳ್ಳೇರಹಲ್ಲಿ ಗ್ರಾಮದಲ್ಲಿ ಹಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಅವರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದ ಸಮೀಪವಿರುವ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಹಲವು ತಿಂಗಳಿಂದ ಚಿರತೆ ಈ ಭಾಗದ ಜನರ ನಿದ್ದೆಗೆಡಿಸಿತ್ತು. ಅಲ್ಲದೆ ಕಳೆದ ಎರಡು ದಿನಗಳ ಹಿಂದೆ ಎರಡು ಕುರಿಗಳನ್ನು ಚಿರತೆ ಕೊಂದು ಹಾಕಿತ್ತು.

    ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿಯಲು ಮುಂದಾಗಿದ್ದರು. ಸದ್ಯ ಇಂದು ಚಿರತೆ ಬೋನಿಗೆ ಬಿದ್ದಿದ್ದು, ಬೆಟ್ಟದಲ್ಲಿ ಇನ್ನೂ ಎರಡು ಚಿರತೆಗಳಿವೆ ಎಂದು ಶಂಕಿಸಲಾಗಿದೆ. ಆದ್ದರಿಂದ ಇನ್ನೆರಡೂ ಚಿರತೆಗಳನ್ನು ಹಿಡಿದು ಬೇರೆಡೆಗೆ ಬಿಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟುಬರಲು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv